Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗೌರಿಬಿದನೂರು: ಶಿವಶಂಕರ್‌ರೆಡ್ಡಿಯವರ ಸತತ 6ನೇ ಗೆಲುವಿಗೆ ಪುಟ್ಟಸ್ವಾಮಿಗೌಡರ ಅಡ್ಡಿ?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗೌರಿಬಿದನೂರು: ಶಿವಶಂಕರ್‌ರೆಡ್ಡಿಯವರ ಸತತ 6ನೇ ಗೆಲುವಿಗೆ ಪುಟ್ಟಸ್ವಾಮಿಗೌಡರ ಅಡ್ಡಿ?

- Advertisement -
- Advertisement -

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಗೆ ಹೊಂದಿಕೊಂಡಿರುವ ಗೌರಿಬಿದನೂರು ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟದಲ್ಲಿ ಗಮನ ಸೆಳೆದ ಪ್ರದೇಶ. ಆನಂತರ ದಲಿತ ಚಳವಳಿ ಬೇರುಬಿಟ್ಟಿದ ಊರುಗಳಲ್ಲಿ ಇದು ಸಹ ಒಂದು. 1985ರಲ್ಲಿ ತಾಲ್ಲೂಕಿನ ನಾಗಸಂದ್ರ ಭೂ ಹೋರಾಟ ಪ್ರಮುಖವಾದ ಚಳವಳಿ. ’ಹೆಂಡ ಬೇಡ, ಭೂಮಿ ಬೇಕು’ ಎಂಬ ಘೋಷಣೆಯಡಿ ನಡೆದ ಈ ಹೋರಾಟದ ಪರಿಣಾಮ ನೂರಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ತಲಾ ಎರಡು ಎಕರೆ ಭೂಮಿ ಮತ್ತು ಮನೆ ನೀಡಲಾಗಿತ್ತು. ಆ ರೀತಿಯಾಗಿ ಹೊಸದಾಗಿ ನಿರ್ಮಾಣವಾದ ಗ್ರಾಮಕ್ಕೆ ಶಂಭೂಕನಗರ ಎಂದು ಹೆಸರಿಡಲಾಗಿದೆ. ಅಂತಹ ಹೋರಾಟದ ನೆಲೆಯಲ್ಲೀಗ ಹಣದವರ ಕಾರುಬಾರು ಜೋರಾಗಿದೆ.

ಅಚ್ಚರಿಯ ಕ್ಷೇತ್ರ

ಗೌರಿಬಿದನೂರಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಮತದಾರರಿದ್ದರೂ ಜೈನರು, ರೆಡ್ಡಿಗಳು, ಬ್ರಾಹ್ಮಣರು, ಸಾದರು ಮತ್ತು ಗೊಲ್ಲ ಸಮುದಾಯದವರು ಶಾಸಕರಾಗಿದ್ದಾರೆ. ಅಂದರೆ 5 ಸಮುದಾಯಕ್ಕೆ ಸೇರಿದವರು ಶಾಸಕರಾಗುವ ಮೂಲಕ ವೈವಿಧ್ಯತೆಯನ್ನು ಮೆರೆದ ಕ್ಷೇತ್ರ ಇದಾಗಿದೆ. ಆದರೆ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಒಬ್ಬ ದಲಿತರೂ ಶಾಸಕರಾಗಲು ಸಾಧ್ಯವಾಗಿಲ್ಲ. ಏಕೆಂದರೆ ಇದು ಸಾಮಾನ್ಯ ಕ್ಷೇತ್ರವಾಗದೆ. ಆರು ಬಾರಿ ಸ್ವತಂತ್ರ ಅಭ್ಯರ್ಥಿಗಳು ಮತ್ತು ಆರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವ ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಚಂದ್ರುರವರು 1985ರಲ್ಲಿ ಜನತಾಪಕ್ಷದಿಂದ ಆಯ್ಕೆಯಾಗಿದ್ದರು.

ಚುನಾವಣಾ ಇತಿಹಾಸ

1957ರ ಚುನಾವಣೆಯಲ್ಲಿ ರೆಡ್ಡಿ ಸಮುದಾಯದ ಕೆ.ಎಚ್ ವೆಂಕಟರೆಡ್ಡಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಪಕ್ಷದ ಅದೇ ರೆಡ್ಡಿ ಸಮುದಾಯದವರಾದ ಎನ್.ಸಿ ನಾಗಯ್ಯರೆಡ್ಡಿಯವರ ವಿರುದ್ಧ 13,272 ಮತಗಳ ಅಂತರದಿಂದ ಗೆದ್ದು ಶಾಸಕರಾದರು. 1962ರ ಚುನಾವಣೆ ವೇಳೆಗೆ ಕೆ.ಎಚ್ ವೆಂಕಟರೆಡ್ಡಿ ಕಾಂಗ್ರೆಸ್ ಪಕ್ಷ ಸೇರಿ ಕಣಕ್ಕಿಳಿದರು. ಅವರ ದೌರ್ಜನ್ಯದಿಂದ ಬೇಸತ್ತಿದ್ದ ಜನ ಪ್ರತಿಸ್ಪರ್ಧಿ ಜೈನ ಸಮುದಾಯಕ್ಕೆ ಸೇರಿದ ಸ್ವತಂತ್ರ ಅಭ್ಯರ್ಥಿ ಆರ್.ಎನ್ ಲಕ್ಷ್ಮೀಪತಿಯವರನ್ನು ಆರಿಸಿದರು ಎಂದು ಕ್ಷೇತ್ರದ ಹಿರಿಯರು ಹೇಳುತ್ತಾರೆ. 1967ರಲ್ಲಿಯೂ ಕಾಂಗ್ರೆಸ್‌ನ ವೆಂಕಟರೆಡ್ಡಿ ವಿರುದ್ಧ ಸ್ವತಂತ್ರ ಅಭ್ಯರ್ಥಿ ಲಕ್ಷ್ಮೀಪತಿಯವರು ಗೆದ್ದು ಸತತ ಎರಡನೇ ಬಾರಿಗೆ ಶಾಸಕರಾದರು.

ಮುಖ್ಯಮಂತ್ರಿ ಚಂದ್ರು

1972ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಗೌರಿಬಿದನೂರಿನಲ್ಲಿ ಗೆಲುವು ಸಾಧಿಸುತ್ತದೆ. ಪಕ್ಷದಿಂದ ಕಣಕ್ಕಿಳಿದ ಬ್ರಾಹ್ಮಣ ಸಮುದಾಯದ ಅಭ್ಯರ್ಥಿ ವಿ.ಕೃಷ್ಣರಾವ್‌ರವರು ಸಂಸ್ಥಾ ಕಾಂಗ್ರೆಸ್ ಸೇರಿದ್ದ ಆರ್.ಎನ್ ಲಕ್ಷ್ಮೀಪತಿಯವರನ್ನು 10,913 ಮತಗಳ ಅಂತರದಿಂದ ಸೋಲಿಸಿ ಶಾಸಕರಾದರು. ಆದರೆ ನಂತರದ 1978ರ ಚುನಾವಣೆಯಲ್ಲಿ ಗೊಲ್ಲ ಸಮುದಾಯದ ಬಿ.ಎನ್.ಕೆ ಪಾಪಯ್ಯನವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಆರ್.ಎನ್ ಲಕ್ಷ್ಮೀಪತಿಯವರನ್ನು 3,824 ಮತಗಳ ಅಂತರದಿಂದ ಸೋಲಿಸಿ ಶಾಸಕರಾದರು.

ಆರ್.ಎನ್ ಲಕ್ಷ್ಮೀಪತಿಯವರು 1983ರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಅಂದಿನ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್‌ನ ವಿ.ಕೃಷ್ಣರಾವ್‌ರವರು ತುರುಸಿನ ಪೈಪೋಟಿ ನೀಡಿದರು ಸಹ ಗೆಲ್ಲಲಾಗಲಿಲ್ಲ. 3,834 ಮತಗಳ ಅಂತರದಿಂದ ಗೆದ್ದ ಆರ್.ಎನ್ ಲಕ್ಷ್ಮೀಪತಿಯವರು ಮೂರನೇ ಬಾರಿಗೆ ಶಾಸಕರಾದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಳಬಾಗಿಲು: ಪಕ್ಷೇತರ ಅಭ್ಯರ್ಥಿಗಳ ಪಾರುಪತ್ಯಕ್ಕೆ ಈ ಬಾರಿ ಬ್ರೇಕ್…

ಮುಖ್ಯಮಂತ್ರಿ ಚಂದ್ರು ಗೆಲುವು

ರಂಗಭೂಮಿ ಕಲಾವಿದ ಮತ್ತು ಚಿತ್ರನಟ ಚಂದ್ರಶೇಖರ್ (ಮುಖ್ಯಮಂತ್ರಿ ಚಂದ್ರು) 1985ರಲ್ಲಿ ರಾಮಕೃಷ್ಣ ಹೆಗಡೆಯವ ಒತ್ತಾಯದ ಮೇರೆಗೆ ಜನತಾ ಪಕ್ಷದಿಂದ ಗೌರಿ ಬಿದನೂರಿನಲ್ಲಿ ಸ್ಪರ್ಧಿಸಿದರು. ಆ ಸಂದರ್ಭದಲ್ಲಿ ಬಿ.ಎನ್.ಕೆ ಪಾಪಯ್ಯನವರು ಕಾಂಗ್ರೆಸ್ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಮೊದಲ ಯತ್ನದಲ್ಲಿಯೇ ಸಾದರು ಸಮುದಾಯದ ಮುಖ್ಯಮಂತ್ರಿ ಚಂದ್ರುರವರು 6,631 ಮತಗಳ ಅಂತರದಿಂದ ಜಯ ಕಂಡರು.

ಮತ್ತೆ ರೆಡ್ಡಿ ಸಮುದಾಯದ ಹಿಡಿತಕ್ಕೆ ಗೌರಿಬಿದನೂರು

1957ರ ಚುನಾವಣೆಯಲ್ಲಿ ರೆಡ್ಡಿ ಸಮುದಾಯದ ಕೆ.ಎಚ್ ವೆಂಕಟರೆಡ್ಡಿಯವರು ಗೆದ್ದಿದ್ದು ಬಿಟ್ಟರೆ ಆನಂತರದ 6 ಚುನಾವಣೆಗಳಲ್ಲಿ ರೆಡ್ಡಿಯೇತರರು (ಜೈನ, ಗೊಲ್ಲ, ಬ್ರಾಹ್ಮಣ, ಸಾದರು) ಕ್ಷೇತ್ರದ ಶಾಸಕರಾಗಿದ್ದರು. ಆದರೆ 1989ರ ಚುನಾವಣೆಯಿಂದ 2018ರ ಚುನಾವಣೆವರೆಗೂ ರೆಡ್ಡಿ ಸಮುದಾಯದವರೆ ಸತತವಾಗಿ ಗೌರಿಬಿದನೂರಿನ ಶಾಸಕರಾಗಿದ್ದಾರೆ.

1989ರಲ್ಲಿ ಅಶ್ವಥನಾರಾಯಣ ರೆಡ್ಡಿಯವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ. ಅವರ ವಿರುದ್ದ ಜನತಾದಳದಿಂದ ಜ್ಯೋತಿರೆಡ್ಡಿಯವರು ಕಣಕ್ಕಿಳಿಯುತ್ತಾರೆ. ಇಬ್ಬರ ನಡುವಿನ ಕಾಳಗದಲ್ಲಿ 10,891 ಮತಗಳ ಅಂತರದಿಂದ ಅಶ್ವಥನಾರಾಯಣ ರೆಡ್ಡಿಯವರು ಜಯ ಸಾಧಿಸುತ್ತಾರೆ. ಆ ಮೂಲಕ ಕ್ಷೇತ್ರದಲ್ಲಿ ಎರಡನೇ ಬಾರಿ ಗೆದ್ದ ಕಾಂಗ್ರೆಸ್ ಶಾಸಕರೆನಿಸಿಕೊಳ್ಳುತ್ತಾರೆ. ಆದರ ಮುಂದಿನ 1994 ಚುನಾವಣೆಯಲ್ಲಿ ಇವರಿಬ್ಬರ ನಡುವೆಯೇ ಕಾಳಗ ನಡೆಯುತ್ತದೆ. ಈ ಬಾರಿ ಸ್ವತಂತ್ರ ಅಭ್ಯರ್ಥಿ ಅಶ್ವಥನಾರಾಯಣ ರೆಡ್ಡಿಯವರ ವಿರುದ್ಧ ಜನತಾದಳದ ಜ್ಯೋತಿರೆಡ್ಡಿಯವರು 7,885 ಮತಗಳಿಂದ ಗೆದ್ದು ವಿಧಾನಸಭೆ ಪ್ರವೇಶಿಸುತ್ತಾರೆ.

ಎನ್.ಎಚ್ ಶಿವಶಂಕರರೆಡ್ಡಿ ಆಗಮನ

1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಎನ್.ಎಚ್ ಶಿವಶಂಕರರೆಡ್ಡಿಯವರು ಕಾಂಗ್ರೆಸ್‌ನಲ್ಲಿದ್ದ ಅಶ್ವಥನಾರಾಯಣ ರೆಡ್ಡಿಯವರ ವಿರುದ್ಧ ಕೇವಲ 862 ಮತಗಳ ಅಂತರದಿಂದ ಗೆದ್ದು ಕ್ಷೇತ್ರದ 6ನೇ ಸ್ವತಂತ್ರ ಶಾಸಕರೆನಿಸಿಕೊಳ್ಳುತ್ತಾರೆ. ಆನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಅವರು ಹಿಂತಿರುಗಿ ನೋಡಿದ್ದೆ ಇಲ್ಲ. ಸತತ 5 ಚುನಾವಣೆಗಳಲ್ಲಿ ಗೆದ್ದು 25 ವರ್ಷ ಶಾಸಕರಾಗಿ ಮರೆದಿದ್ದಾರೆ.

2004ರ ಚುನಾವಣೆಯಲ್ಲಿ ಶಿವಶಂಕರರೆಡ್ಡಿಯವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಪಕ್ಷವು ಮಾಜಿ ಶಾಸಕ ಜ್ಯೋತಿರೆಡ್ಡಿಯವರಿಗೆ ಟಿಕೆಟ್ ನೀಡುತ್ತದೆ. 8,025 ಮತಗಳ ಅಂತರದಿಂದ ಗೆದ್ದ ಶಿವಶಂಕರರೆಡ್ಡಿಯವರು ಸತತ ಎರಡನೇ ಬಾರಿಗೆ ಶಾಸಕರಾಗುತ್ತಾರೆ.

2008ರಲ್ಲಿ ಶಿವಶಂಕರರೆಡ್ಡಿಯವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೂರನೇ ಬಾರಿಗೆ ಗೆಲುವು ದಾಖಲಿಸಿತ್ತಾರೆ. ಆ ಚುನಾವಣೆಯಲ್ಲಿ ಅವರು 39,127 ಮತ ಪಡೆದರೆ ಬಿಜೆಪಿ ಅಭ್ಯರ್ಥಿ ರವಿನಾರಾಯಣರೆಡ್ಡಿಯವರು 27,959 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆ. ಜೆಡಿಎಸ್‌ನ ಜ್ಯೋತಿ ರೆಡ್ಡಿಯವರು 27,480 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿಯುತ್ತಾರೆ.

ಸಿ.ಆರ್ ನರಸಿಂಹಮೂರ್ತಿ

2013ರ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಜೊತೆಗೆ ಪಕ್ಷೇತರ ಅಭ್ಯರ್ಥಿ ಜೈಪಾಲ್ ರೆಡ್ಡಿ ಸಹ ಕಣಕ್ಕಿಳಿಯುತ್ತಾರೆ. ಈ ತುರುಸಿನ ಕಾಳಗದಲ್ಲಿ ಕಾಂಗ್ರೆಸ್‌ನ ಶಿವಶಂಕರ ರೆಡ್ಡಿಯವರು, 50,131 ಮತಗಳನ್ನು ಪಡೆದರೆ, ಸ್ವತಂತ್ರ ಅಭ್ಯರ್ಥಿ ಕೆ ಜೈಪಾಲ್ ರೆಡ್ಡಿಯವರು 44,056 ಮತಗಳನ್ನು ಪಡೆದು ಪ್ರಬಲ ಪೈಪೋಟಿ ನೀಡುತ್ತಾರೆ. ಬಿಜೆಪಿಯ ರವಿನಾರಾಯಣ ರೆಡ್ಡಿಯವರು 31,೮೪೦ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದರೆ ಜೆಡಿಎಸ್‌ನ ಅಶ್ವಥನಾರಾಯಣ ರೆಡ್ಡಿಯವರು ಕೇವಲ 10,957 ಮತಗಳನ್ನು ಪಡೆದು ಮೂರನೇ ಸೋಲು ಕಂಡು ನೇಪಥ್ಯಕ್ಕೆ ಸರಿಯುತ್ತಾರೆ. ಅಂತಿಮವಾಗಿ ಶಿವಶಂಕರ ರೆಡ್ಡಿ 6,075 ಮತಗಳ ಅಂತರದಲ್ಲಿ ಜಯ ಸಾಧಿಸುತ್ತಾರೆ. ಅವರು ಕರ್ನಾಟಕ ವಿಧಾನಸಭೆಯ ಉಪ ಸ್ಪೀಕರ್ ಆಗಿ 5 ವರ್ಷ ಕಾರ್ಯ ನಿರ್ವಹಿಸುತ್ತಾರೆ.

2018ರ ಚುನಾವಣೆ

2013ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಬಲ ಸೆಣಸಾಟ ನಡೆಸಿದ್ದ ಕೆ. ಜೈಪಾಲ್ ರೆಡ್ಡಿಯವರು ಬಿಜೆಪಿ ಟಿಕೆಟ್‌ನಡಿ ಸ್ಪರ್ಧಿಸುತ್ತಾರೆ. ಜೆಡಿಎಸ್‌ನಿಂದ ಸಾದರು ಸಮುದಾಯದ ಮಾಜಿ ಜಿ.ಪಂ ಸದಸ್ಯ ಸಿ.ಆರ್ ನರಸಿಂಹಮೂರ್ತಿ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿಯವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಆ ಚುನಾವಣೆಯಲ್ಲಿ ಅವರು 9,168 ಮತಗಳ ಅಂತರದಿಂದ ಸುಲಭವಾಗಿ ಗೆದ್ದು 5ನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸುತ್ತಾರೆ. ಜೆಡಿಎಸ್‌ನ ಸಿ.ಆರ್ ನರಸಿಂಹಮೂರ್ತಿ 59,832 ಮತ ಪಡೆದು ಎರಡನೇ ಸ್ಥಾನ ಪಡೆದರೆ, ಬಿಜೆಪಿಯ ಜೈಪಾಲ್ ರೆಡ್ಡಿ 34,759 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿಯುತ್ತಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆಜಿಎಫ್: ಪರ್ಯಾಯ ಪಕ್ಷಗಳ ನೆಲೆಯಲ್ಲೀಗ ಕಾಂಗ್ರೆಸ್ ಮುಂಚೂಣಿ

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿವಶಂಕರರೆಡ್ಡಿಯವರು ಒಂದು ವರ್ಷದ ಅವಧಿಗೆ ಕೃಷಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.

ಕ್ಷೇತ್ರದ ಸಮಸ್ಯೆಗಳು

ಹೂವು, ಹಣ್ಣು, ತರಕಾರಿ ಹೆಚ್ಚು ಬೆಳೆಯುವ ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಉಪ ಉತ್ಪನ್ನಗಳ ತಯಾರಿಕೆ ಇಲ್ಲ. ಬೆಳೆಗಳನ್ನು ಸಂಗ್ರಹಿಸಿಡಲು ವ್ಯವಸ್ಥೆಯಿಲ್ಲ. ಎತ್ತಿನಹೊಳೆ ನೀರು ತರುತ್ತೇವೆ ಎಂದು ಎಲ್ಲಾ ಪಕ್ಷಗಳು ಹೇಳುತ್ತಿವೆಯೇ ಹೊರತು ನೀರು ಬಂದಿಲ್ಲ. ರಸ್ತೆಗಳು ಸಮರ್ಪಕವಾಗಿಲ್ಲ, ಸರ್ಕಾರಿ ಶಾಲೆಗಳು-ಆಸ್ಪತ್ರೆಗಳ ಬಗ್ಗೆ ಆಳುವವರಿಗೆ ಕಾಳಜಿಯಿಲ್ಲ. ಉದ್ಯೋಗ ಸೃಷ್ಟಿಯಾಗದ ಕಾರಣ ವಲಸೆ ನಿಂತಿಲ್ಲ.

ಕ್ಷೇತ್ರದ ಜಾತಿವಾರು ಅಂದಾಜು ಮತಗಳು

ಗೌರಿಬಿದನೂರಿನಲ್ಲಿ ಒಟ್ಟು 2.10 ಲಕ್ಷದಷ್ಟು ಮತಗಳಿವೆ ಎನ್ನಲಾಗಿದೆ. ಪರಿಶಿಷ್ಟ ಜಾತಿ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು 40-45 ಸಾವಿರ ಮತಗಳಿವೆ. ಪ.ಪಂಗಡದ ಮತಗಳು 35-40 ಸಾವಿರ, ಕುರುಬ ಸಮುದಾಯದ ಮತಗಳು 25-30 ಸಾವಿರ, ಮುಸ್ಲಿಮರ ಮತಗಳು 20 ಸಾವಿರದಷ್ಟಿವೆ. ಒಕ್ಕಲಿಗರು ಮತ್ತು ರೆಡ್ಡಿಗಳು 20-25 ಸಾವಿರವಿದ್ದರೆ, ಸಾದರು 18,000ದಷ್ಟಿದ್ದಾರೆ. ಇತರ ಹಿಂದುಳಿದ ವರ್ಗದ ಸುಮಾರು 50 ಸಾವಿರದಷ್ಟು ಮತಗಳಿದ್ದರೆ, 5 ಸಾವಿರದಷ್ಟು ಇತರೆ ಸಮುದಾದಯ ಮತಗಳಿವೆ ಎನ್ನಲಾಗಿದೆ.

ಸಾದರು ಎಂಬ ಒಬಿಸಿ ಅಡಿಯಲ್ಲಿ ಬರುವ ಜಾತಿಯ ಮತಗಳು ಗೌರಿಬಿದನೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.

ಇನ್ನು ರೆಡ್ಡಿಗಳಲ್ಲಿ ತೆಲುಗು ಮಾತೃಭಾಷೆಯ ಸಜ್ಜನ ರೆಡ್ಡಿ, ಕೊಡತ ರೆಡ್ಡಿ ಮತ್ತು ಕನ್ನಡ ಮಾತನಾಡುವ ರದ್ದಗಾರ್ ಒಕ್ಕಲಿಗರು ಎಂಬ ಉಪಜಾತಿಗಳಿವೆ. ಇತ್ತೀಚೆಗೆ ರೆಡ್ಡಿಗಳು ಮತ್ತು ಒಕ್ಕಲಿಗರು ಒಂದೇ ಜಾತಿಯಂತಾಗಿದ್ದು, ಕಳೆದೊಂದು ದಶಕದಿಂದ ಎರಡು ಸಮುದಾಯಗಳ ನಡುವೆ ಕೊಡು-ಕೊಳ್ಳುವಿಕೆ ನಡೆಯುತ್ತಿದೆ.

ಹಾಲಿ ಪರಿಸ್ಥಿತಿ

5 ಬಾರಿ ಶಾಸಕರಾಗಿರುವ ಶಿವಶಂಕರರೆಡ್ಡಿಯವರು ರಸ್ತೆಗಳು, ಕಟ್ಟಡಗಳು, ಇಂಡಸ್ಟ್ರಿಯಲ್ ಏರಿಯಾ ಮೂಲಕ ಒಂದಷ್ಟು ಕೆಲಸ ಮಾಡಿದ್ದಾರೆ. ಆದರೆ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿದೆ. ತಾಲ್ಲೂಕಿನ ಶಿಶುಮರಣ ದರ, ಅಪೌಷ್ಟಿಕತೆ ಹೆಚ್ಚಿದೆ. ಅಪ್ರಾಪ್ತ ಬಾಲಕಿಯರ ಮದುವೆ ನಿಂತಿಲ್ಲ ಎನ್ನುವ ಆರೋಪಗಳು ಜೊತೆಗೆ ಕೇಳಿಬರುತ್ತವೆ.

ಪುಟ್ಟಸ್ವಾಮಿಗೌಡ

ಇವರ ಆಡಳಿತದಲ್ಲಿ ಎಲ್ಲಾ ಕಾಮಗಾರಿಗಳ ಗುತ್ತಿಗೆಯನ್ನು ಸಂಬಂಧಿಕರಿಗೆ ನೀಡಲಾಗುತ್ತಿದೆ; ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸ್ವಜಾತಿಯವರೆ ತುಂಬಿಕೊಂಡಿದ್ದಾರೆ. ಆದರೂ ಶಿವಶಂಕರರೆಡ್ಡಿಯವರು ಯಾವುದೇ ಸಮುದಾಯದ ವಿರೋಧ ಕಟ್ಟಿಕೊಳ್ಳದೆ ಇವೆಲ್ಲವನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ ಎಂಬುದು ಕ್ಷೇತ್ರದ ಆಳ ಅಗಲ ಬಲ್ಲವರ ಅಭಿಪ್ರಾಯ.

5 ಬಾರಿ ಗೆದ್ದರೂ ಆಡಳಿತ ವಿರೋಧಿ ಅಲೆ ತಟ್ಟದಂತೆ ನೋಡಿಕೊಂಡಿರುವ ಕಾರಣ 2023ರ ಚುನಾವಣೆಯಲ್ಲಿ ಇವರಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ಸಾಧ್ಯತೆ ಹೆಚ್ಚಿದೆ.

ಜೆಡಿಎಸ್

ಗೌರಿಬಿದನೂರಿನಲ್ಲಿ ಜನತಾದಳ ಪಕ್ಷದಿಂದ ಜ್ಯೋತಿರೆಡ್ಡಿಯವರು 1994ರಲ್ಲಿ ಗೆದ್ದಿರುವುದು ಬಿಟ್ಟರೆ ಜೆಡಿಎಸ್ ಇಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಕಳೆದ ಚುನಾವಣೆಯಲ್ಲಿ 59,832 ಮತ ಪಡೆದು ಸೋಲು ಕಂಡಿದ್ದ ಸಾದರು ಸಮುದಾಯದ ಸಿ.ಆರ್ ನರಸಿಂಹಮೂರ್ತಿಯವರೆ ಈ ಬಾರಿಯ ಜೆಡಿಎಸ್‌ನ ಅಭ್ಯರ್ಥಿಯಾಗಿದ್ದಾರೆ.

ಬಿಜೆಪಿ

ಗೌರಿಬಿದನೂರಿನಲ್ಲಿ ಒಮ್ಮೆಯೂ ಗೆಲುವು ಕಾಣಲಾಗದ ಬಿಜೆಪಿ ಈ ಬಾರಿ ಹೇಗಾದರೂ ಮಾಡಿ ಖಾತೆ ತೆರೆಯಲು ಯತ್ನಿಸುತ್ತಿದೆ. ರಾಷ್ಟ್ರಮಟ್ಟದ ಕೀರ್ತಿ ಪಡೆದ ತಾಲ್ಲೂಕಿನ ವಿದುರಾಶ್ವತ್ಥ ಸ್ಮಾರಕ ಗ್ಯಾಲರಿಗೆ ಕೋಮುವಾದಿಗಳು ನುಗ್ಗಿ ಅದನ್ನು ಹೊಡೆದುಹಾಕುವ ಬೆದರಿಕೆಯೊಡ್ಡಿದ್ದರು. ಅದಕ್ಕೆ ಮುಖ್ಯ ಕಾರಣ ಸಾರ್ವಕರ್‌ರನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿಗೆ ಸೇರಿಸಬೇಕೆಂಬುದಾಗಿತ್ತು. ಆದರೆ ಇತ್ತೀಚೆಗೆ ನಿಧನರಾದ ಜಿಲ್ಲೆಯ ಹೋರಾಟಗಾರ ಪ್ರೊ.ಬಿ ಗಂಗಾಧರ ಮೂರ್ತಿಯವರು ಅದಕ್ಕೆ ಆಸ್ಪದ ಕೊಟ್ಟಿರಲಿಲ್ಲ.

ಗೌರಿಬಿದನೂರಿನಲ್ಲಿ ಕಮಲ ಅರಳಿಸಲು ಜಿಲ್ಲೆಯ ಏಕೈಕ ಶಾಸಕ, ಸಚಿವ ಸುಧಾಕರ್ ಭಾರೀ ಆಸಕ್ತಿಯಿಂದ ಓಡಾಡುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಯಾರೆಂಬುದು ಇನ್ನೂ ಫೈನಲ್ ಆಗಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಜೈಪಾಲ್ ರೆಡ್ಡಿ ಸೋತ ನಂತರ ಕಾಣೆಯಾಗಿದ್ದರು. ಆದರೆ ಇದೀಗ ಕ್ಷೇತ್ರದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಅವರು ಬಿಜೆಪಿಯಿಂದ ಕಣಕ್ಕಿಳಿಯುತ್ತಾರ ಅಥವಾ ಪಕ್ಷೇತರ ಅಭ್ಯರ್ಥಿಯಾಗುತ್ತಾರ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀನಿವಾಸಪುರ: ರಮೇಶ್ ಕುಮಾರ್‌ರವರಿಗೆ ಒಲಿಯುವುದೇ ಹ್ಯಾಟ್ರಿಕ್ ಗೆಲುವು?

ಇನ್ನು ಮಾನಸ ಸಮೂಹ ಆಸ್ಪತ್ರೆಗಳ ಅಧ್ಯಕ್ಷ, ಬ್ರಾಹ್ಮಣ ಸಮುದಾಯದ ಡಾ.ಶಶಿಧರ್ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಅವರಿಗೆ ದ್ರಾಕ್ಷಿ ಮತ್ತು ವೈನ್ ಮಂಡಳಿ ಅಧ್ಯಕ್ಷರಾಗಿರುವ, 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದ ರವಿನಾರಾಯಣ ರೆಡ್ಡಿಯವರ ಬೆಂಬಲವಿದೆ ಎನ್ನಲಾಗುತ್ತಿದೆ. ಆದರೆ ಡಾ.ಶಶಿಧರ್ ಮತ್ತು ಡಾ.ಕೆ ಸುಧಾಕರ್‌ರವರಿಗೂ ಹೊಂದಾಣಿಕೆ ಸರಿಯಿಲ್ಲದ ಕಾರಣ ಟಿಕೆಟ್ ಸಿಗುವುದು ಸುಲಭವಿಲ್ಲ. ಜೊತೆಗೆ ಮಾಜಿ ಜಿ.ಪಂ ಸದಸ್ಯ, ಕುರುಬ ಸಮುದಾಯದ ಕೆಂಪರಾಜುರವರು ಸಹ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

ಪಕ್ಷೇತರ

ಇನ್ನು ದೊಡ್ಡ ಕಾಂಟ್ರಾಕ್ಟರ್ ಆಗಿರುವ, ಒಕ್ಕಲಿಗ ಸಮುದಾಯದ ಕೆ.ಎಚ್ ಪುಟ್ಟಸ್ವಾಮಿಗೌಡರವರು ಕಳೆದ ನಾಲ್ಕು ವರ್ಷದಿಂದಲೇ ಕ್ಷೇತ್ರದಲ್ಲಿ ಬೇರುಬಿಟ್ಟಿದ್ದಾರೆ. ತಮ್ಮ ಕೆ.ಎಚ್.ಪಿ ಫೌಂಡೇಶನ್ ಮೂಲಕ ಕುಡಿಯುವ ನೀರು, ಆಂಬುಲೆನ್ಸ್, ಸಾಮೂಹಿಕ ವಿವಾಹ, ಕೊರೊನಾ ಕಿಟ್ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿಗೆ ಸೋಲಾರ್ ಪ್ಲಾಂಟ್ ಹಾಕಲು ಬಂದ ಅವರು ಅಲ್ಲಿಯೇ ನೆಲೆಸಿದ್ದು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಕಲ ತಯಾರಿ ನಡೆಸಿದ್ದಾರೆ.

2023ರ ಸಾಧ್ಯತೆ

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವಿನ ಪೈಪೋಟಿ ಈ ಬಾರಿಯೂ ಕಂಡುಬರಲಿದೆ. ಆದರೂ ಸಹ ಸದ್ಯಕ್ಕೆ ಹಾಲಿ ಶಾಸಕ ಶಿವಶಂಕರ ರೆಡ್ಡಿ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ಎಚ್ ಪುಟ್ಟಸ್ವಾಮಿಗೌಡರ ನಡುವೆಯೇ ನೇರ ಹಣಾಹಣಿ ನಡೆಯಲಿದೆ ಎನ್ನಲಾಗುತ್ತಿದೆ. ಇಲ್ಲಿ ಜಾತಿಗಿಂತ ಹಣಬಲದವರು ಮೇಲುಗೈ ಸಾಧಿಸುತ್ತಾರೆ ಎಂಬುದು ಸ್ಥಳೀಯರ ಅಭಿಪ್ರಾಯ. 25 ವರ್ಷ ಶಾಸಕರಾಗಿರುವ ಶಿವಶಂಕರರೆಡ್ಡಿಯವರನ್ನು ಎದುರಿಸಲು ಪುಟ್ಟಸ್ವಾಮಿಗೌಡರೆಂಬ ಮತ್ತೊಬ್ಬ ಹಣದ ಕುಳ ಸಿದ್ದರಾಗಿದ್ದಾರೆ. ಜನ ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...