Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಮಂಡ್ಯ: ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ - ಬಂಡಾಯದ ಬಿಸಿ

ಮಂಡ್ಯ: ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ – ಬಂಡಾಯದ ಬಿಸಿ

- Advertisement -
- Advertisement -

ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷವು ಹಾಲಿ ಶಾಸಕ ಎಂ.ಶ್ರೀನಿವಾಸ್‌ರವರಿಗೆ ಟಿಕೆಟ್ ಘೋಷಿಸಿದ್ದನ್ನು ಹಿಂಪಡೆದು ಮನ್‌ಮುಲ್ ಅಧ್ಯಕ್ಷರಾಗಿರುವ ಬಿ.ಆರ್ ರಾಮಚಂದ್ರರವರಿಗೆ ಬಿ ಫಾರಂ ನೀಡಿದೆ. ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜುರವರ ಬೆಂಬಲದೊಂದಿಗೆ ಅವರು ಕಣಕ್ಕಿಳಿದಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷವು ಪಿ.ಗಣಿಗ ರವಿ ಕುಮಾರ್‌ರವರಿಗೆ ಟಿಕೆಟ್ ಘೋಷಿಸಿದೆ. ಕಳೆದ ಬಾರಿ ಉತ್ತಮ ಪೈಪೋಟಿ ನೀಡಿ ಸೋಲು ಕಂಡಿದ್ದ ಅವರು ಈ ಬಾರಿ ಶತಾಯ ಗತಾಯ ಗೆಲ್ಲಲು ಕಸರತ್ತು ನಡೆಸಿದ್ದಾರೆ. ಮಂಡ್ಯದ ಸ್ಥಿತಿಗತಿ ಹೀಗಿದೆ.

ರಾಜಕೀಯ ಇತಿಹಾಸ

ಒಂದು ಉಪ ಚುನಾವಣೆ ಸೇರಿ ಒಟ್ಟು 16 ಚುನಾವಣೆಗಳು ಮಂಡ್ಯದಲ್ಲಿ ನಡೆದಿದ್ದು ಆರು ಬಾರಿ ಕಾಂಗ್ರೆಸ್ ಪಕ್ಷ ಗೆಲುವನ್ನು ಸಾಧಿಸಿದೆ. ಜೆಡಿಎಸ್ 3 ಬಾರಿ, ಜನತಾದಳ ಒಮ್ಮೆ, ಜನತಾಪಕ್ಷ 3 ಬಾರಿ, ಸ್ವತಂತ್ರ ಅಭ್ಯರ್ಥಿಗಳು 2 ಬಾರಿ ಮತ್ತು ಎಜಿಪಿ ಪಕ್ಷ ಒಮ್ಮೆ ಇಲ್ಲಿ ಗೆಲುವು ಸಾಧಿಸಿದ್ದಾರೆ. ಬಹುತೇಕ ಒಕ್ಕಲಿಗ ಸಮುದಾಯದವರೆ ಇಲ್ಲಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2004ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ.ಎಸ್. ಆತ್ಮಾನಂದರವರು ಕಣಕ್ಕಿಳಿಯುತ್ತಾರೆ. ಎಂ.ಶ್ರೀನಿವಾಸ್ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗುತ್ತಾರೆ. ಎಂ.ಶ್ರೀನಿವಾಸ್ ಅವರು 14,880 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಾರೆ.

2008ರ ವೇಳೆಗೆ ಕ್ಷೇತ್ರ ಪುನರ್‌ವಿಂಗಡಣೆಯಾಗುತ್ತದೆ. ಕೆರಗೋಡು ಕ್ಷೇತ್ರವನ್ನು ಮಂಡ್ಯ ಮತ್ತು ಮೇಲುಕೋಟೆ ಕ್ಷೇತ್ರಗಳಿಗೆ ಸೇರಿಸಲಾಗುತ್ತದೆ. ಅಲ್ಲಿ ಶಾಸಕರಾಗಿದ್ದ ಎಚ್.ಬಿ ರಾಮುರವರು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ. ಜೆಡಿಎಸ್‌ನಿಂದ ಹಾಲಿ ಶಾಸಕ ಎಂ.ಶ್ರೀನಿವಾಸ್ ಕಣಕ್ಕಿಳಿಯುತ್ತಾರೆ. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಎಚ್.ಪಿ. ನಾಗೇಂದ್ರರವರ ಹತ್ಯೆಯಾಗಿರುತ್ತದೆ. ಅವರ ಪತ್ನಿ ವಿದ್ಯಾ ನಾಗೇಂದ್ರರವರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದುದರಿಂದ ಅವರು ಬಿಜೆಪಿ ಅಭ್ಯರ್ಥಿಯಾಗುತ್ತಾರೆ. ಮೂರು ಜನರ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಜೆಡಿಎಸ್ ಪಕ್ಷದ ಎಂ.ಶ್ರೀನಿವಾಸ್ ಅವರು 10,529 ಮತಗಳ ಅಂತರದಿಂದ ಸತತ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಎಂ.ಶ್ರೀನಿವಾಸ್ 47,265 ಮತ ಪಡೆದರೆ, ವಿದ್ಯಾ ನಾಗೇಂದ್ರ 36,736 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆಯುತ್ತಾರೆ. ಎಚ್.ಬಿ. ರಾಮು, 31,407 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿಯುತ್ತಾರೆ.

2013ರ ಚುನಾವಣೆ ವೇಳೆಗೆ ಹಾಲಿ ಶಾಸಕ ಎಂ.ಶ್ರೀನಿವಾಸ್ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಟಿಕೆಟ್ ಸಿಗದಿದ್ದರಿಂದ ಎಸ್.ಡಿ ಜಯರಾಂರವರ ಪುತ್ರ ಅಶೋಕ್ ಜಯರಾಂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. 2008ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಮತ್ತು 2009ರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋಲುಂಡಿದ್ದ ಚಿತ್ರನಟ ಅಂಬರೀಶ್ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುತ್ತಾರೆ. ಕೊನೆ ಕ್ಷಣದಲ್ಲಿ ಜೆಡಿಎಸ್ ಪಕ್ಷವು ಎಸ್.ಡಿ ಜಯರಾಂರವರನ್ನು ಸಮಾಧಾನ ಪಡಿಸಿ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸುವಂತೆ ಮಾಡುತ್ತದೆ. ಆದರೂ ರೆಬೆಲ್ ಸ್ಟಾರ್ ಅಂಬರೀಷ್‌ರವರ ಗೆಲುವು ತಡೆಯಲು ಸಾಧ್ಯವಾಗುವುದಿಲ್ಲ. ಅವರು 42,937 ಮತಗಳ ಭಾರೀ ಅಂತರದ ಭರ್ಜರಿ ಜಯ ದಾಖಲಿಸುತ್ತಾರೆ.

ಅಂಬರೀಶ್‌ಅಂಬರೀಶ್‌ರವರು 90,329 ಮತ ಪಡೆದರೆ, ಎಂ. ಶ್ರೀನಿವಾಸ್ 47,392 ಮತಗಳಿಗೆ ಕುಸಿಯುತ್ತಾರೆ. ಬಿಜೆಪಿಯ ಟಿ.ಎಲ್. ರವಿಶಂಕರ್ ಕೇವಲ 3,094 ಮತಗಳಿಗೆ ಸೀಮಿತರಾಗುತ್ತಾರೆ. ಚುನಾವಣೆಯಿಂದ ಹಿಂದೆ ಸರಿದರೂ ಮತಪತ್ರದಲ್ಲಿ ಹೆಸರಿದ್ದ ಬಂಡಾಯ ಅಭ್ಯರ್ಥಿ ಅಶೋಕ್ ಜಯರಾಂರವರಿಗೆ 524 ಮತಗಳು ಬಿದ್ದಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅಂಬರೀಶ್ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಎಂ.ಶ್ರೀನಿವಾಸ್‌ರವರಿಗೆ ಟಿಕೆಟ್ ನೀಡುತ್ತದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆರಗೋಡಿನ ಮಾಜಿ ಶಾಸಕ ಚಂದಗಾಲು ಎನ್.ತಮ್ಮಣ್ಣನವರ ಸಹೋದರ ಎನ್.ಶಿವಣ್ಣ ಬಿಜೆಪಿ ಸೇರಿ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಹಾಲಿ ಶಾಸಕ ಅಂಬರೀಶ್ ಹಿಂದೇಟು ಹಾಕುತ್ತಾರೆ. ಹಾಗಾಗಿ ಕೊನೆ ಕ್ಷಣದಲ್ಲಿ ಪಿ.ಗಣಿಗ ರವಿಕುಮಾರ್‌ರವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸುತ್ತದೆ. 5 ರೂಪಾಯಿ ವೈದ್ಯರೆನಿಸಿಕೊಂಡಿದ್ದ ಡಾ.ಶಂಕರೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುತ್ತಾರೆ. ನಾಲ್ಕು ಜನರ ನಡುವಿನ ಕಾಳಗದಲ್ಲಿ ಜೆಡಿಎಸ್ ಪಕ್ಷದ ಎಂ.ಶ್ರೀನಿವಾಸ್‌ರವರಿಗೆ ಗೆಲುವು ಲಭಿಸುತ್ತದೆ. ಅವರು 69,421 ಮತಗಳನ್ನು ಪಡೆದರೆ, ಗಣಿಗ ರವಿಕುಮಾರ್ 47,813 ಮತಗಳನ್ನು ಪಡೆಯುತ್ತಾರೆ. ಬಿಜೆಪಿಯ ಶಿವಣ್ಣ 32,064 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡರು. ಪಕ್ಷೇತರ ಅಭ್ಯರ್ಥಿ ಡಾ.ಶಂಕರೇಗೌಡ 10,564 ಮತಗಳಿಗೆ ತೃಪ್ತಿಪಟ್ಟುಕೊಂಡರು.

ಅಂದಾಜು ಜಾತಿವಾರು ಮತಗಳು

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 2,35,000 ಮತದಾರರಿದ್ದಾರೆ. ಅದರಲ್ಲಿ ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಮಾರು 95,000 ಮತಗಳಿವೆ ಎನ್ನಲಾಗಿದೆ. ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತಗಳಿದ್ದು ಸುಮಾರು 33,000 ಮತಗಳಿವೆ. ಉಳಿದಂತೆ ಮುಸ್ಲಿಂ 23,000, ಲಿಂಗಾಯಿತ 13,000, ಕುರುಬ 13,000, ಎಸ್‌ಟಿ 8,000 ಮತಗಳಿವೆ. ಇತರೆ ಸಮುದಾಯದ ಸುಮಾರು 50,000 ಮತಗಳಿವೆ ಎನ್ನಲಾಗಿದೆ.

ಹಾಲಿ ಪರಿಸ್ಥಿತಿ

ಮೂರನೇ ಬಾರಿ ಶಾಸಕರಾಗಿರುವ ಎಂ ಶ್ರೀನಿವಾಸ್‌ರವರಿಗೆ ಅನಾರೋಗ್ಯ ಕಾಡುತ್ತಿದೆ. ಅವರಿಗೆ ಮಾತು ಆಡಲೂ ಕಷ್ಟದ ಪರಿಸ್ಥಿತಿಯಿದೆ ಎನ್ನಲಾಗುತ್ತಿತ್ತು. ಕೆಲವು ತಿಂಗಳುಗಳ ಹಿಂದೆಯಷ್ಟೇ ಅವರು ಐಟಿಐ ಕಾಲೇಜು ಪ್ರಿನ್ಸಿಪಾಲ್ ಕಪಾಳಕ್ಕೆ ಹೊಡೆದಿದ್ದ ವಿಡಿಯೋ ಹರಿದಾಡಿತ್ತು. ಯಾವುದಾದರೂ ಸಮಸ್ಯೆ ಹೇಳಿಕೊಂಡು ಹೋದರೆ ’ನಾನೀಗ ಝೀರೊ’ ಎಂದು ಶಾಸಕರು ಹೇಳುತ್ತಾರೆ ಎಂಬ ಆರೋಪಗಳಿವೆ. ಆರಂಭದಲ್ಲಿ ಶಾಸಕರಾದಾಗ ಜನರಿಗೆ ಸುಲಭವಾಗಿ ಸಿಗುತ್ತಿದ್ದ, ಒಂದಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದ ಅವರು ಸದ್ಯ ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದಾರೆ. ಆಡಳಿತ ವಿರೋಧಿ ಅಲೆ ಅವರನ್ನು ಕಾಡುತ್ತಿದೆ. ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ತಪ್ಪಿಸಿ ಮನ್ಮುಲ್ ಅಧ್ಯಕ್ಷರಾದ ಬಿ.ಆರ್ ರಾಮಚಂದ್ರುರವರಿಗೆ ಜೆಡಿಎಸ್ ಟಿಕೆಟ್ ದೊರೆತಿದೆ.

 

ಹಾಲಿ ಶಾಸಕ ಎಂ ಶ್ರೀನಿವಾಸ್‌ರವರು ತಮ್ಮ ಅಳಿಯ, ಜಿ.ಪಂ ಮಾಜಿ ಸದಸ್ಯ ಯೋಗೇಶ್‌ರವರಿಗೆ ಟಿಕೆಟ್ ನೀಡಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಜೊತೆಗೆ ಕೆ.ವಿ ಶಂಕರೇಗೌಡರ ಮೊಮ್ಮಗ, ಸಚ್ಚಿದಾನಂದರವರ ಪುತ್ರ ಕೆ.ಎಸ್ ವಿಜಯಾನಂದ ಸಹ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಬ್ಬರಿಗೂ ಟಿಕೆಟ್ ಸಿಗಲಿಲ್ಲ. ಹಾಗಾಗಿ ಹಲವರು ಜೆಡಿಎಸ್‌ನಲ್ಲಿ ಬಂಡಾಯವೆದ್ದಿದ್ದು ಸ್ವಾಭಿಮಾನಿ ಜೆಡಿಎಸ್ ಹೆಸರಿನಲ್ಲಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.

ಇಂದು ಶಾಸಕ ಎಂ.ಶ್ರೀನಿವಾಸ್, ಅವರ ಅಳಿಯ ಯೋಗೇಶ್, ವಿಜಯಾನಂದ, ಮಹಾಲಿಂಗಪ್ಪ ಮುದ್ದನಘಟ್ಟರವರು ನಾಮಪತ್ರ ಸಲ್ಲಿಸುತ್ತಿದ್ದಾರೆ. ಕೊನೆಗೆ ಅವರೆಲ್ಲರೂ ಒಂದಾಗಿ ಒಬ್ಬ ಅಭ್ಯರ್ಥಿಯನ್ನು ಕಣದಲ್ಲುಳಿಸಿ ಉಳಿದವರು ಅವರನ್ನು ಬೆಂಬಲಿಸುವ ತೀರ್ಮಾನ ಮಾಡಿದ್ದಾರೆ.

 

ಡಾ.ಎಚ್ ಕೃಷ್ಣ ಮತ್ತು ರಾಧಾಕೃಷ್ಣ ಕೀಲಾರರವರು ಜೆಡಿಎಸ್ ಟಿಕೆಟ್ ಸಿಗುವುದಿಲ್ಲ ಎಂಬುದು ದೃಢವಾಗುತ್ತಲೇ ಪಕ್ಷ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್

ಕಳೆದ ಚುನಾವಣೆಯಲ್ಲಿ ತಡವಾಗಿ ಟಿಕೆಟ್ ಘೋಷಿಸಿದ ಕಾಂಗ್ರೆಸ್ ಪಕ್ಷ, ಸ್ವಯಂಕೃತ ಅಪರಾಧದಿಂದಾಗಿ ಮಂಡ್ಯ ಕ್ಷೇತ್ರವನ್ನು ಕಳೆದುಕೊಂಡಿತ್ತು. ಈ ಬಾರಿ ಮಂಡ್ಯದ ಕಾಂಗ್ರೆಸ್ ಟಿಕೆಟ್‌ಗಾಗಿ ಬರೋಬ್ಬರಿ 16 ಮಂದಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕಳೆದ ಬಾರಿ ಸೋತರೂ ಕ್ಷೇತ್ರಕ್ಕೆ ಬೆನ್ನು ಹಾಕದೆ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರಿಗೆ ನೆರವಾಗಿದ್ದು, ಶತಾಯ ಗತಾಯ ಗೆಲ್ಲಲು ಕೆಲಸ ಮಾಡುತ್ತಿದ್ದಾರೆ.

ಪಿ.ಗಣಿಗ ರವಿಕುಮಾರ್‌

ಕಾರ್ಯಕರ್ತರನ್ನು ಮರೆತ ಬಿಜೆಪಿ

ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುತ್ತೇವೆ ಎಂದು ಬಿಜೆಪಿ ಘೋಷಿಸಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ವಂಚಿತರಾದ ಚಂದಗಾಲು ಶಿವಣ್ಣನವರಿಗೆ ಟಿಕೆಟ್ ನೀಡಿತು. ಈ ಬಾರಿಯೂ ಜೆಡಿಎಸ್‌ನಿಂದ ವಲಸೆ ಬಂದಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂರವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಸರ್ವೋದಯ ಕರ್ನಾಟಕ ಪಕ್ಷದಿಂದ ಮಧುಚಂದನ್ ಎಸ್.ಸಿ ಕಣಕ್ಕೆ

ವಿದೇಶದಲ್ಲಿನ ಉದ್ಯೋಗ ತೊರೆದು ಆರ್ಗಾನಿಕ್ ಮಂಡ್ಯ ಸಂಸ್ಥೆಯ ಮೂಲಕ ಗುರುತಿಸಿಕೊಂಡಿದ್ದ ಮಧುಚಂದನ್ ರೈತ ಸಂಘ ಕಟ್ಟುವಲ್ಲಿ ಸಕ್ರಿಯರಾಗಿದ್ದಾರೆ. ಕೀರೆಮಡಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿರುವ ಅವರು ಜನರು ಸರ್ಕಾರಿ ಕಚೇರಿಗಳ ಕೆಲಸಗಳನ್ನು ಸುಲಲಿತವಾಗಿ ಮಾಡಿಸಿಕೊಳ್ಳಲು ಅನುವಾಗುವಂತೆ ಸಹಾಯ ಮಾಡಿ ಕಾರ್ಯೋನ್ಮುಖರಾಗಿದ್ದಾರೆ. ಪೇಸಿಎಂ ಗದ್ದಲದಲ್ಲಿ ಅವರು ಪೇ ಫಾರ್ಮರ್ ಎಂಬ ಪ್ರಚಾರ ಮಾಡಿ ಗಮನ ಸೆಳೆದಿದ್ದರು. ಮೈಷುಗರ್ ಪುನಶ್ಚೇತನಕ್ಕಾಗಿ, ಕಬ್ಬು ಮತ್ತು ಭತ್ತದ ಬೆಳೆಗೆ ವೈಜ್ಞಾನಿಕ ಬೆಲೆಗಾಗಿ ಅವರು ಹಲವಾರು ಹೋರಾಟಗಳನ್ನು ಮುನ್ನಡೆಸಿದ್ದಾರೆ. ಕಳೆದ 75 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುವ ಮೂಲಕ ರೈತರ ವಿಷಯವನ್ನು ಚುನಾವಣೆಯ ವಿಷಯವನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಅವರು ರೈತ ಸಂಘವನ್ನು ಕ್ಷೇತ್ರದಾದ್ಯಂತ ವಿಸ್ತರಿಸುತ್ತ ಪರ್ಯಾಯ ಚುನಾವಣಾ ತಯಾರಿ ನಡೆಸಿದ್ದಾರೆ. ಅವರಿಗೆ ಸರ್ವೋದಯ ಕರ್ನಾಟಕ ಪಕ್ಷ ಟಿಕೆಟ್ ಘೋಷಿಸಿದೆ.

ಮಧುಚಂದನ್

ಸಾಧ್ಯತೆಗಳೇನು?

ಜೆಡಿಎಸ್ ಪಕ್ಷವು ಒಕ್ಕಲಿಗ ಮತಗಳು ತಮ್ಮ ಕೈಹಿಡಿಯುತ್ತವೆ ಎಂದು ನಂಬಿಕೊಂಡಿದೆ. ಆದರೆ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ ಆಗಿರುವುದರಿಂದ ಟಿಕೆಟ್ ವಂಚಿತರು ಯಾವ ರೀತಿ ಒಳೇಟು ನೀಡುತ್ತಾರೆ ಎಂಬುದನ್ನು ಊಹಿಸಲು ಕಷ್ಟ. ಇನ್ನು ಕಳೆದ ಲೋಕಸಭಾ ಚುನಾವಣೆಗೆ ದೇವೇಗೌಡರ ಕುಟುಂಬದ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ ಸೋತಿದ್ದು, ಅವರು ನಂತರ ರಾಮನಗರದ ಕಡೆ ಮುಖ ಮಾಡಿದ್ದು ಕಾರ್ಯಕರ್ತರ ಬಲ ಕುಗ್ಗುವಂತೆ ಮಾಡಿದೆ.

ಇನ್ನು ಕಾಂಗ್ರೆಸ್ ಪಕ್ಷವು, ಹಾಲಿ ಶಾಸಕರ ಮೇಲಿನ ಆಡಳಿತ ವಿರೋಧಿ ಅಲೆ ಮತ್ತು ಇತ್ತೀಚಿನ ವಿಧಾನ ಪರಿಷತ್ ಚುನಾವಣೆಗಳ ಜಯದ ಅಲೆ ಪಕ್ಷವನ್ನು ಗೆಲುವಿನ ದಡ ಸೇರಿಸುತ್ತದೆ ಎಂಬ ವಿಶ್ವಾಸದಲ್ಲಿದೆ. ಗಣಿಗ ರವಿಕುಮಾರ್ ಕಳೆದ ಚುನಾವಣೆಯ ಸೋಲಿನ ಅನುಕಂಪದಲ್ಲಿ ಈ ಬಾರಿ ಗೆಲ್ಲಬಹುದು ಎಂದು ಯೋಚಿಸಿದ್ದಾರೆ. ಇನ್ನು ಮಂಡ್ಯದಲ್ಲಿ ಜನ ಅಭ್ಯರ್ಥಿ ನೋಡಿ ಮತ ಹಾಕಿದ್ದಾರೆಯೇ ಹೊರತು ಬಿಜೆಪಿಗಾಗಿ ಮತ ಹಾಕಿದ ಇತಿಹಾಸವಿಲ್ಲ. ಇನ್ನು ಮಧುಚಂದನ್‌ರವರ ಬೆನ್ನಿಗೆ ರೈತಸಂಘವಿದೆ. ಚತುಷ್ಕೋನ ಸ್ಪರ್ಧೆ ಏರ್ಪಡುವ ಸಂಭವವಿದ್ದು, ಮುಖ್ಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಾನೇರ ಕದನ ನಡೆಯುವ ಸೂಚನೆ ಕಂಡುಬರುತ್ತಿದೆ. ಒಂದು ವೇಳೆ ಜೆಡಿಎಸ್‌ನಿಂದ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದರೆ ಅದು ಕಾಂಗ್ರೆಸ್‌ಗೆ ವರವಾಗುವ ಸಾಧ್ಯತೆಯಿದೆ. ಏಕೆಂದರೆ ಕಾಂಗ್ರೆಸ್‌ನಲ್ಲಿ ಬಂಡಾಯವಿಲ್ಲದೆ ಅಭ್ಯರ್ಥಿಯ ಪರವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‌ನಲ್ಲಿನ ಒಡಕು ಶಮನವಾಗುವುದೇ ಅಥವಾ ಮುಂದುವರೆಯುವುದೇ ಎಂಬುದರ ಮೇಲೆ ಕ್ಷೇತ್ರದ ಫಲಿತಾಂಶ ನಿಂತಿದೆ.

ಇದನ್ನೂ ಓದಿ: ಬಿಜೆಪಿ ಸೇರಿದ ಎಲ್.ಆರ್ ಶಿವರಾಮೇಗೌಡ: ನಾಗಮಂಗಲ ಕ್ಷೇತ್ರದ ಸ್ಥಿತಿಗತಿ ಹೀಗಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...