Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಬಾಗೇಪಲ್ಲಿ ಸಮೀಕ್ಷೆ: ಜನಪರ ವೈದ್ಯ, ಸಿಪಿಎಂ ಅಭ್ಯರ್ಥಿ ಡಾ.ಅನಿಲ್ ಕುಮಾರ್‌ರವರಿಗೆ ಜೆಡಿಎಸ್ ಬೆಂಬಲ - ಗೆಲ್ಲುವ...

ಬಾಗೇಪಲ್ಲಿ ಸಮೀಕ್ಷೆ: ಜನಪರ ವೈದ್ಯ, ಸಿಪಿಎಂ ಅಭ್ಯರ್ಥಿ ಡಾ.ಅನಿಲ್ ಕುಮಾರ್‌ರವರಿಗೆ ಜೆಡಿಎಸ್ ಬೆಂಬಲ – ಗೆಲ್ಲುವ ಸಾಧ್ಯತೆ

- Advertisement -
- Advertisement -

ಆಂಧ್ರ ಪ್ರದೇಶದ ಗಡಿಗೆ ಅಂಟಿಕೊಂಡಿರುವ ಗುಡ್ಡಗಾಡು ಮತ್ತು ಬಯಲು ಪ್ರದೇಶಗಳಿಂದ ಕೂಡಿದ ಬಾಗೇಪಲ್ಲಿ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದು. ಸತತ ಬರ ಅಪ್ಪಳಿಸಿದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಹಿಂದುಳಿದ ತಾಲ್ಲೂಕುಗಳೆನಿಸಿದ ಬಾಗೇಪಲ್ಲಿ, ಗುಡಿಬಂಡೆ ಮತ್ತು ಹೊಸದಾಗಿ ರಚನೆಯಾದ ಚೇಳೂರುಗಳನ್ನು ಸೇರಿಸಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ರಚನೆಯಾಗಿದೆ. ಇಲ್ಲಿನ ಬಡ ಕೂಲಿಕಾರರನ್ನು ಸಂಘಟಿಸಿ ಹೋರಾಟ ರೂಪಿಸಿದ್ದ ಸಿಪಿಎಂ ಪಕ್ಷದ ನೆಲೆ ಇದಾಗಿದೆ. ಮೂರು ಬಾರಿ ಸಿಪಿಎಂ ಪಕ್ಷ ಇಲ್ಲಿ ಜಯಗಳಿಸಿತ್ತು. ಹಾಗಾಗಿಯೇ ಇತ್ತೀಚೆಗೆ ಸಿಪಿಎಂ ಪಕ್ಷದ ರಾಜ್ಯ ಸಮ್ಮೇಳನವನ್ನು ಬಾಗೇಪಲ್ಲಿಯಲ್ಲಿ ನಡೆಸಿ, ಕೇರಳ ಸಿಎಂ ಪಿಣರಾಯಿ ವಿಜಯನ್‌ರವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ದಿವಂಗತ ಜಿ.ವಿ ಶ್ರೀರಾಮರೆಡ್ಡಿಯವರು ಬಾಗೇಪಲ್ಲಿಯಲ್ಲಿ ನೂರಾರು ಹೋರಾಟಗಳನ್ನು ಮುನ್ನಡೆಸಿದ್ದ ಖ್ಯಾತಿ ಹೊಂದಿದ್ದಾರೆ. ಆ ಹೋರಾಟಗಳ ಫಲವಾಗಿ ಅಲ್ಲಿನ ಜನರು ಅವರನ್ನು ಎರಡು ಬಾರಿ ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಟ್ಟಿದ್ದರು. ವಿಧಾನಸಭೆಯಲ್ಲಿ ಶ್ರೀರಾಮರೆಡ್ಡಿಯವರು ನಾಡಿನ ಶೋಷಿತರ ಪರ ದನಿಯೆತ್ತಿದ್ದರು. 8 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅವರು 6 ಬಾರಿ ಸೋತರೂ ಸಹ ಕ್ಷೇತ್ರದಿಂದ ವಿಮುಖರಾಗಲಿಲ್ಲ. ಜನರೊಟ್ಟಿಗೆ ಇದ್ದು ಹೋರಾಟಗಳಲ್ಲಿ ನಿರತರಾದರು. ಈಗಲೂ ಅವರು ಮಾಡಿದ ಕೆಲಸಗಳು ಅವರನ್ನು ಕ್ಷೇತ್ರದಲ್ಲಿ ಜೀವಂತವಾಗಿರಿಸಿವೆ. ಜಿ.ವಿ ಶ್ರೀರಾಮರೆಡ್ಡಿಯವರ ಹೆಸರಿಗೆ ಈಗಲೂ ಬಾಗೇಪಲ್ಲಿಯಲ್ಲಿ ಗೌರವವಿದೆ.

ಅತಿಹೆಚ್ಚು ತೆಲುಗು ಭಾಷೆ ಮಾತನಾಡುವ ಇಲ್ಲಿನ ಜನ ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ. ಸಮರ್ಪಕ ನೀರಾವರಿ ಸೌಲಭ್ಯ ಇಲ್ಲದೆ ತತ್ತರಿಸಿದ್ದಾರೆ. ಇಲ್ಲಿಂದ ಗೆದ್ದವರು ಬೆಂಗಳೂರಿನಲ್ಲಿ ನೆಲೆಸುತ್ತಾರೆ, ಕ್ಷೇತ್ರದ ಜನರ ಕಷ್ಟನಷ್ಟಗಳಿಗೆ ಬೆನ್ನುತಿರುಗಿಸುತ್ತಿದ್ದಾರೆ ಎಂಬ ಅಳಲು ಕಂಡುಬರುತ್ತಿದೆ. ಇಲ್ಲಿ ನಡೆದಿರುವ ಒಟ್ಟು 13 ಚುನಾವಣೆಗಳಲ್ಲಿ ಕಾಂಗ್ರೆಸ್ 8 ಬಾರಿ ಜಯ ಕಂಡರೆ, ಸಿಪಿಎಂ 3 ಬಾರಿ ಗೆಲುವು ಸಾಧಿಸಿದೆ. ಎರಡು ಬಾರಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇಲ್ಲಿ ಹಸ್ತ ಮತ್ತು ಸುತ್ತಿಗೆ-ಕುಡುಗೋಲು ಗುರುತುಗಳು ಹಿರಿಯರಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿವೆ. ಹಾಗಾಗಿ ಈ ಎರಡು ಪಕ್ಷಗಳ ನಡುವೆಯೇ ನೇರ ಹಣಾಹಣಿ ಇರುತ್ತದೆ. ಹಾಗಾಗಿ ಪಕ್ಷೇತರ ಅಭ್ಯರ್ಥಿಗಳನ್ನು ಹೊರತುಪಡಿಸಿ ಜೆಡಿಎಸ್, ಬಿಜೆಪಿ ಒಮ್ಮೆಯೂ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇಂತಹ ಸ್ಥಿತಿಯಲ್ಲಿ ಈ ಬಾರಿ ಜೆಡಿಎಸ್ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸಿಪಿಎಂ ಅಭ್ಯರ್ಥಿ ಡಾ.ಅನಿಲ್ ಕುಮಾರ್‌ರವರಿಗೆ ಬೆಂಬಲ ಸೂಚಿಸಿದೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಸ್ಥಿತಿಗತಿ ಹೀಗಿದೆ.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜೊತೆ ಡಾ. ಅನಿಲ್ ಕುಮಾರ್

ಚುನಾವಣಾ ಇತಿಹಾಸ

1962ರಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಗಿತ್ತು. 1978ರವರೆಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಅದು ತದನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಗಿದೆ. 1978ರವರೆಗೆ ಮೀಸಲು ಕ್ಷೇತ್ರವಾಗಿದ್ದರಿಂದ ಪ.ಜಾ ಶಾಸಕರಿದ್ದರು. ಆನಂತರ ಒಕ್ಕಲಿಗ ಮತ್ತು ಬಲಿಜ ಸಮುದಾಯದವರೆ ಕ್ಷೇತ್ರದ ಶಾಸಕರಾಗುತ್ತಾ ಬಂದಿದ್ದಾರೆ. ಇಂದಿಗೂ ಕ್ಷೇತ್ರದಲ್ಲಿ ಈ ಎರಡು ಸಮುದಾಯಗಳೇ ಪ್ರಾಬಲ್ಯ ಮೆರೆಯುತ್ತಿವೆ.

1962ರಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಗಿತ್ತು. 1978ರವರೆಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಅದು ತದನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಗಿದೆ. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಸುಬ್ಬರಾಯಪ್ಪನವರು ಸ್ವತಂತ್ರ ಅಭ್ಯರ್ಥಿ ಕೆ.ಎಂ ಮುನಿಯಪ್ಪನವರನ್ನು ಕೇವಲ 393 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 1967ರ ಚುನಾವಣೆಯಲ್ಲಿ ಎ. ಮುನಿಯಪ್ಪನವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸಿಪಿಎಂ ಪಕ್ಷದ ಆದಿನಾರಾಯಣರವರನ್ನು 7,109 ಮತಗಳಿಂದ ಸೋಲಿಸಿ ಶಾಸಕರಾದರು. 1972ರಲ್ಲಿ ರೇಣುಕಾ ರಾಜೇಂದ್ರನ್‌ರವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಟಿಕೆಟ್ ವಂಚಿತ ಎ.ಮುನಿಯಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಗೆಲ್ಲಲಾಗಲಿಲ್ಲ. ರೇಣುಕಾ ರಾಜೇಂದ್ರನ್‌ರವರು 12,571 ಮತಗಳಿಂದ ಗೆಲುವು ಸಾಧಿಸಿದರು.

ಸಾಮಾನ್ಯ ಕ್ಷೇತ್ರ

1978ರ ಚುನಾವಣೆಯಲ್ಲಿ ಬಾಗೇಪಲ್ಲಿ ಪ.ಜಾ ಮೀಸಲು ರದ್ದಾಗಿ ಸಾಮಾನ್ಯ ಕ್ಷೇತ್ರವಾಯಿತು. ಆಗ ಇಂದಿರಾ ಕಾಂಗ್ರೆಸ್ ಪಕ್ಷದ ಎಸ್ ಮುನಿರಾಜುರವರು, ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಬ್ರಾಹ್ಮಣ ಸಮುದಾಯದ ವಿ.ಕೃಷ್ಣರಾವ್‌ರವರನ್ನು 16,715 ಮತಗಳಿಂದ ಮಣಿಸಿ ಶಾಸಕರಾದರು.

ಖಾತೆ ತೆರೆದ ಸಿಪಿಎಂ

ಕೂಲಿ ಕಾರ್ಮಿಕರ ಪರವಾಗಿ ಹೋರಾಟ ನಡೆಸಿದ್ದ ಸಿಪಿಎಂ ಪಕ್ಷ 1983ರ ಚುನಾವಣೆಯಲ್ಲಿ ಬಾಗೇಪಲ್ಲಿಯಲ್ಲಿ ಜಯ ಗಳಿಸಿತು. ಪಕ್ಷದ ರೆಡ್ಡಿ ಸಮುದಾಯದ ಎ.ವಿ ಅಪ್ಪಸ್ವಾಮಿರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿ ಎಸ್ ಮುನಿರಾಜುರವರನ್ನು 11,542 ಮತಗಳಿಂದ ಸೋಲಿಸಿದರು. ಆ ಮೂಲಕ ಮೊದಲ ಬಾರಿಗೆ ಕಾಂಗ್ರೆಸ್ಸೇತರ ವ್ಯಕ್ತಿ ಕ್ಷೇತ್ರದ ಶಾಸಕರೆನಿಸಿಕೊಂಡರು.

1985ರ ಚುನಾವಣೆಯಲ್ಲಿ ಸಿಪಿಎಂ ಪಕ್ಷದಿಂದ ರೆಡ್ಡಿ ಸಮುದಾಯದ ಜಿ.ವಿ ಶ್ರೀರಾಮರೆಡ್ಡಿಯವರು ಕಣಕ್ಕಿಳಿದರು. ಕಾಂಗ್ರೆಸ್ ಪಕ್ಷ ಬಿ.ನಾರಾಯಣಸ್ವಾಮಿಯವರಿಗೆ ಟಿಕೆಟ್ ನೀಡಿತು. ಇವರಿಬ್ಬರ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ನಾರಾಯಣಸ್ವಾಮಿ 2,010 ಮತಗಳ ಅಂತರದಿಂದ ಗೆದ್ದುಬಂದರು. 1989ರ ಚುನಾವಣೆಯಲ್ಲಿ ಸಿಪಿಎಂನ ಜಿ.ವಿ ಶ್ರೀರಾಮರೆಡ್ಡಿ ಮತ್ತು ಕಾಂಗ್ರೆಸ್‌ನ ಬಲಿಜ ಸಮುದಾಯದ ಸಿ.ವಿ ವೆಂಕರಾಯಪ್ಪನವರ ನಡುವೆ ಪೈಪೋಟಿ ನಡೆಯಿತು. ಇಲ್ಲಿಯೂ ಸಹ ಶ್ರೀರಾಮರೆಡ್ಡಿಯವರು ಕೇವಲ 1,626 ಮತಗಳಿಂದ ಸೋತು ನಿರಾಸೆ ಅನುಭವಿಸಿದರು.

1994ರ ಚುನಾವಣೆಯಲ್ಲಿ ತಮ್ಮ ಮೂರನೇ ಪ್ರಯತ್ನದಲ್ಲಿ ಜಿ.ವಿ ಶ್ರೀರಾಮರೆಡ್ಡಿಯವರು ಯಶಕಂಡರು. ಆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಪಿ.ಎನ್ ಪದ್ಮನಾಭರಾವ್‌ರವರನ್ನು 6,446 ಮತಗಳಿಂದ ಮಣಿಸಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. ತಮ್ಮ ಬೀದಿಹೋರಾಟವನ್ನು ವಿಧಾನಸೌಧದಲ್ಲಿಯೂ ಮೊಳಗಿಸಿದರು.

1999ರಲ್ಲಿ ಬಾಗೇಪಲ್ಲಿಗೆ ಬಲಿಜ ಸಮುದಾಯದ ಎನ್.ಸಂಪಂಗಿ ಆಗಮಿಸಿದರು. ಹೊರಗಿನವರಾದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಿ.ವಿ ಶ್ರೀರಾಮರೆಡ್ಡಿಯವರ ವಿರುದ್ಧ 3,298 ಮತಗಳ ಅಂತರದಿಂದ ಗೆದ್ದು ಶಾಸಕರಾದರು. ಆದರೆ 2004ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರೂ ಸಹ ಜಿ.ವಿ ಶ್ರೀರಾಮರೆಡ್ಡಿಯವರ ಎದುರು 11,135 ಮತಗಳ ಅಂತರದಿಂದ ಸೋಲು ಕಂಡರು. ಶ್ರಿರಾಮರೆಡ್ಡಿಯವರು ಎರಡನೇ ಬಾರಿಗೆ ಶಾಸಕರಾದರು.

ಚಿತ್ರನಟ ಸಾಯಿಕುಮಾರ್ ಕಣಕ್ಕೆ

ಪಟ್ಟು ಬಿಡದ ಸಂಪಂಗಿ 2008ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಕಣಕ್ಕಿಳಿದರು. ಸಿಪಿಎಂನಿಂದ ಜಿ.ವಿ ಶ್ರೀರಾಮರೆಡ್ಡಿ ಸ್ಪರ್ಧಿಸಿದರು. ಕನ್ನಡ ಚಿತ್ರನಟ ಸಾಯಿಕುಮಾರ್ ಬಿಜೆಪಿ ಅಭ್ಯರ್ಥಿಯಾದರು. ಜೆಡಿಎಸ್ ಪಕ್ಷವು ನಾಗರಾಜರೆಡ್ಡಿಯವರನ್ನು ಕಣಕ್ಕಿಳಿಸಿತು. ನಾಲ್ಕು ಜನರ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್ ಸಂಪಂಗಿ ಕೇವಲ 938 ಮತಗಳ ಅಂತರದಿಂದ ಗೆದ್ದು ಎರಡನೇ ಬಾರಿಗೆ ಶಾಸಕರಾದರು. ಅವರು 32,244 ಮತಗಳನ್ನು ಪಡೆದರೆ, ಜಿ.ವಿ ಶ್ರೀರಾಮರೆಡ್ಡಿಯವರು 31,306 ಮತಗಳನ್ನು ಪಡೆದರು. ಜೆಡಿಎಸ್‌ನ ನಾಗರಾಜರೆಡ್ಡಿಯವರು 27,926 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರೆ, ಬಿಜೆಪಿಯ ಸಾಯಿಕುಮಾರ್ 26,070 ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಚಿನ್ನಕಾಯಲಪಲ್ಲಿ ಎಸ್.ಎನ್ ಸುಬ್ಬಾರೆಡ್ಡಿಯವರು 2013ರ ಚುನಾವಣೆಗೆ ಧುಮುಕಿದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು, ಸಮೀಪದ ಪ್ರತಿಸ್ಪರ್ಧಿ ಜಿ.ವಿ ಶ್ರೀರಾಮರೆಡ್ಡಿಯವರನ್ನು 30,755 ಮತಗಳ ಬೃಹತ್ ಅಂತರದಿಂದ ಸೋಲಿಸಿ ಶಾಸಕರಾದರು. ಆ ಚುನಾವಣೆಯಲ್ಲಿ ಅವರು 66,227 ಮತಗಳನ್ನು ಪಡೆದರೆ ಜಿ.ವಿ ಶ್ರೀರಾಮರೆಡ್ಡಿಯವರು 35,472 ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿ ಹರಿನಾಥ್‌ರೆಡ್ಡಿ 16,779 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಎನ್.ಸಂಪಂಗಿ ಕೇವಲ 15,491 ಮತಗಳಿಗೆ ಸೀಮಿತಗೊಂಡರು. ಈ ಚುನಾವಣೆಯಲ್ಲಿ ಗೆದ್ದ ಸುಬ್ಬಾರೆಡ್ಡಿಯವರನ್ನು ಹೊರತುಪಡಿಸಿ ಸುಬ್ಬಾರೆಡ್ಡಿ ಹೆಸರಿನ ಇತರ ನಾಲ್ವರು ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರೂ ಸಹ ಎಸ್.ಎನ್ ಸುಬ್ಬಾರೆಡ್ಡಿಯವರ ಗೆಲುವು ತಡೆಯಲಾಗಲಿಲ್ಲ!

2018ರ ಚುನಾವಣೆ ಹೊತ್ತಿಗೆ ಸ್ವತಂತ್ರ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರು ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡರು. ಟಿಕೆಟ್ ವಂಚಿತ ಮಾಜಿ ಶಾಸಕ ಸಂಪಂಗಿ ಕಣ್ಣೀರು ಸುರಿಸಿದರು. ವೀರಪ್ಪ ಮೊಯ್ಲಿ ವಿರುದ್ಧ ಕಿಡಿಕಾರಿದರು. ಅವರನ್ನು ಕಾಂಗ್ರೆಸ್ ಸಮಾಧಾನಪಡಿಸಿತು. ಆ ಚುನಾವಣೆಯಲ್ಲಿ ಎಸ್.ಎನ್ ಸುಬ್ಬಾರೆಡ್ಡಿಯವರು ಗೆಲುವು ಸಾಧಿಸಿ ಬಾಗೇಪಲ್ಲಿಯಲ್ಲಿ ಸತತ ಎರಡನೇ ಬಾರಿಗೆ ಗೆದ್ದ ಮೊದಲ ಶಾಸಕರೆನಿಸಿಕೊಂಡರು. ಅವರು 65,710 ಮತಗಳನ್ನು ಪಡೆದರೆ ಸಿಪಿಎಂನ ಜಿ.ವಿ ಶ್ರೀರಾಮರೆಡ್ಡಿಯವರು 51,697 ಮತಗಳನ್ನು ಪಡೆದು ಸತತ ಮೂರನೇ ಸೋಲು ಕಂಡರು. ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಡಾ.ಸಿ.ಆರ್ ಮನೋಹರ್‌ರವರು 38,302 ಮತ ಪಡೆದರು. ಬಿಜೆಪಿ ಟಿಕೆಟ್‌ನಡಿ ನಾಮಕಾವಸ್ಥೆಗೆ ಸ್ಪರ್ಧಿಸಿದ್ದ ಚಿತ್ರನಟ ಸಾಯಿಕುಮಾರ್ ಕೇವಲ 4,140 ಮತ ಪಡೆದರು.

ಜಾತಿವಾರು ಅಂದಾಜು ಮತಗಳು

ಸುಮಾರು 60,000ದಷ್ಟಿರುವ ಒಕ್ಕಲಿಗ ಮತಗಳು ಇಲ್ಲಿದ್ದು, 50,000ದಷ್ಟು ದಲಿತ ಸಮುದಾಯದ ಮತಗಳಿವೆ. 25,000ದಷ್ಟು ಕುರುಬ ಸಮುದಾಯದ ಮತಗಳಿದ್ದರೆ, 23,000ದಷ್ಟು ಬಲಿಜ ಜನಾಂಗದ ಮತಗಳಿವೆ. 20,000ದಷ್ಟು ಮುಸ್ಲಿಂ ಮತಗಳಿದ್ದರೆ, ಸುಮಾರು 30,000ದಷ್ಟು ಇತರ ಸಮುದಾಯದ ಮತಗಳಿವೆ ಎನ್ನಲಾಗಿದೆ.

ಹಾಲಿ ಪರಿಸ್ಥಿತಿ

ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಯವರು ಸತತ ಎರಡು ಬಾರಿ ಶಾಸಕರಾದರೂ ಕ್ಷೇತ್ರವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ವಿಫಲರಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ ಮತ್ತು ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎಂದು ಜನ ದೂರುತ್ತಾರೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್‌ ಲಭಿಸಿದೆ.

ಸಿಪಿಎಂ

ಮೂರು ಬಾರಿ ಜಯ ಕಂಡಿರುವ ಸಿಪಿಎಂ ಪಕ್ಷ ಇತ್ತೀಚೆಗೆ ಇಲ್ಲಿಯೇ ರಾಜ್ಯ ಸಮ್ಮೇಳನ ನಡೆಸಿ ಬಲ ಪ್ರದರ್ಶನ ಮಾಡಿದೆ. ಕೊರೊನಾ ಸಮಯದಲ್ಲಿ ಎನ್‌ಜಿಓ ಜೊತೆ ಸೇರಿ ಬಹಳಷ್ಟು ಕೆಲಸ ಮಾಡಿರುವ ಡಾ.ಅನಿಲ್ ಕುಮಾರ್ ಅವರು ಜನಮನ್ನಣೆ ಗಳಿಸಿದ ವೈದ್ಯರೆನಿಸಿಕೊಂಡಿದ್ದಾರೆ. ಬಾಗೇಪಲ್ಲಿಯಲ್ಲಿಯೇ ಪೀಪಲ್ಸ್ ಆಸ್ಪತ್ರೆ ತೆರೆದು ನೆಲೆಸಿರುವ ಇವರಿಗೆ ಸಿಪಿಎಂ ಪಕ್ಷ ಟಿಕೆಟ್ ಘೋಷಿಸಿದೆ.

ಜೆಡಿಎಸ್

ಜೆಡಿಎಸ್ ಪಕ್ಷವು ಈ ಹಿಂದೆ ಚುನಾವಣೆಗೆ ನಿಂತು ಸೋತಿದ್ದ ಡಿ.ಜೆ ನಾಗರಾಜ ರೆಡ್ಡಿಯವರಿಗೆ ಟಿಕೆಟ್ ಘೋಷಿಸಿತ್ತು. ಆದರೆ ಇತ್ತೀಚೆಗೆ ಅಭ್ಯರ್ಥಿ ಹಾಕುವುದಿಲ್ಲ ಎಂದು ಘೋಷಿಸಿ ಸಿಪಿಎಂ ಪಕ್ಷದ ಅನಿಲ್ ಕುಮಾರ್‌ರವರಿಗೆ ಬೆಂಬಲ ಘೋಷಿಸಿದೆ.

ಬಿಜೆಪಿ

ಬಾಗೇಪಲ್ಲಿಯಲ್ಲಿ ಜೆಡಿಎಸ್‌ನಂತೆಯೆ ಬಿಜೆಪಿಗೆ ಕೂಡ ಒಮ್ಮೆಯೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಆದರೂ ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ನೆರೆದಿದೆ. ಬಲಿಜ ಜನಾಂಗದ ಮುಖಂಡರು, ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸಿ ಮುನಿರಾಜು ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಪಕ್ಷೇತರರಾಗಿ ಮಿಥುನ್ ರೆಡ್ಡಿ ಕಣಕ್ಕೆ

ಜಿ.ವಿ ಶ್ರೀರಾಮರೆಡ್ಡಿಯವರು ಪಕ್ಷದ ತತ್ವಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಸಿಪಿಎಂ ಜಿಲ್ಲಾ ಸಮಿತಿಯು ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಆನಂತರ ಅವರು 2020ರಲ್ಲಿ ಪ್ರಜಾ ಸಂಘರ್ಷ ಸಮಿತಿ (ಪಿಎಸ್‌ಎಸ್) ಎಂಬ ಪಕ್ಷ ಕಟ್ಟಿದರು. ಆದರೆ ಅವರು 2022ರ ಏಪ್ರಿಲ್‌ನಲ್ಲಿ ಹೃದಯಾಘಾತದಿಂದ ಕಾಲವಾದರು. ಈಗ ಈ ಪಕ್ಷದಿಂದಲೂ ಸಹ ಚುನಾವಣೆಯ ಕಣಕ್ಕಿಳಿಯಲು ಕೆಲವರು ತಯಾರಿ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ, ಈ ಹಿಂದೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಮಿಥುನ್ ರೆಡ್ಡಿಗೆ ಬೆಂಬಲಿಸಿಲು ಪಿಎಸ್‌ಎಸ್‌ ನಿರ್ಧರಿಸಿದೆ. ಮಿಥುನ್ ರೆಡ್ಡಿಯವರು ಶ್ರೀರಾಮ ರೆಡ್ಡಿಯವರ ಹಾದಿಯಲ್ಲಿ ನಡೆಯುವುದಾಗಿ ಭರವಸೆ ನೀಡಿದ ನಂತರ ಪ್ರಜಾ ಸಂಘರ್ಷ ಸಮಿತಿ ಅವರಿಗೆ ಬೆಂಬಲ ನೀಡಲು ಮುಂದಾಗಿದೆ ಎನ್ನಲಾಗಿದೆ.

ಆಪ್

ಸಿಪಿಎಂನಿಂದ ಟಿಕೆಟ್ ಬಯಸಿದ್ದ, ನಂತರ ಸ್ವಾಭಿಮಾನಿ ಪಿಎಸ್‌ಎಸ್ ಕಟ್ಟಿ ಈ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದ ಡಾ.ಮಧು ಸೀತಪ್ಪನವರು ಸದ್ಯ ಆಮ್‌ ಆದ್ಮಿ ಪಕ್ಷ ಸೇರಿದ್ದಾರೆ. ಅವರಿಗೆ ಆಪ್ ಟಿಕೆಟ್ ಘೋಷಿಸಿದೆ.

2023ರ ಸಾಧ್ಯತೆಗಳು

ಜೆಡಿಎಸ್ ಪಕ್ಷವು ಸಿಪಿಎಂ ಅಭ್ಯರ್ಥಿಗೆ ಬೆಂಬಲ ಘೋಷಿಸಿರುವುದರಿಂದ ಡಾ.ಅನಿಲ್ ಕುಮಾರ್‌ರವರಿಗೆ ಮತ್ತಷ್ಟು ಬಲ ಬಂದಿದೆ. ಸದ್ಯ ಒಂದಷ್ಟು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಇಲ್ಲದ ಕಾರಣದಿಂದ ಪಕ್ಷಾಂತರ ಆರಂಭಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಅವರನ್ನು ಸೆಳೆದುಕೊಳ್ಳುತ್ತಿವೆ. ಇದೆಲ್ಲದರ ನಡುವೆಯೂ ಹೆಚ್.ಡಿ ಕುಮಾರಸ್ವಾಮಿಯವರ ಮಾತಿಗೆ ಬೆಲೆ ಕೊಟ್ಟು ಹಲವರು ಈ ಬಾರಿ ಸಿಪಿಎಂಗೆ ಮತ ಹಾಕುವ ಸಾಧ್ಯತೆಯಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಸಿಪಿಎಂ ನಡುವಿನ ನೇರ ಹಣಾಹಣಿಯಲ್ಲಿ ಸಿಪಿಎಂನ ಡಾ.ಅನಿಲ್ ಕುಮಾರ್‌ರವರಿಗೆ ಗೆಲುವಿನ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಮಂಡ್ಯ: ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ – ಬಂಡಾಯದ ಬಿಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...