Homeಮುಖಪುಟಪಾಕಿಸ್ತಾನದಿಂದ ಕಾಶ್ಮೀರಕ್ಕೆ ಡ್ರಗ್ ಕಳ್ಳಸಾಗಣೆ: ಐವರು ಪೊಲೀಸ್ ಸೇರಿ 17 ಜನರ ಬಂಧನ

ಪಾಕಿಸ್ತಾನದಿಂದ ಕಾಶ್ಮೀರಕ್ಕೆ ಡ್ರಗ್ ಕಳ್ಳಸಾಗಣೆ: ಐವರು ಪೊಲೀಸ್ ಸೇರಿ 17 ಜನರ ಬಂಧನ

- Advertisement -
- Advertisement -

ಪಾಕಿಸ್ತಾನದಿಂದ ಕಳ್ಳ ಸಾಗಣೆ ಮಾಡಲಾಗುತ್ತಿರುವ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸರು, ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ 17 ಜನರನ್ನು ಬಂಧಿಸಿದ್ದಾರೆ. ಈ ಆರೋಪಿಗಳಲ್ಲಿ ಐವರೂ ಪೊಲೀಸರೂ ಸೇರಿದ್ದಾರೆ.

ಈ ದೊಡ್ಡ ಗುಂಪು ಗಡಿ ನಿಯಂತ್ರಣ ರೇಖೆಯ ಬಳಿಯಿಂದ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿತ್ತು. ನಂತರ ಕಾಶ್ಮೀರದ ವಿವಿಧ ಭಾಗಗಳಿಗೆ ಡ್ರಗ್ ಸರಬರಾಜು ಮಾಡುತ್ತಿತ್ತು. ಕುಪ್ವಾರ ಜಿಲ್ಲೆಯ ಕೆರಾನ್ ಸೆಕ್ಟರ್ ಮೂಲಕ ಪಾಕಿಸ್ತಾನದಿಂದ ಡ್ರಗ್ಸ್ ತರಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಪ್ರಮುಖ ಮಾದಕ ದ್ರವ್ಯಗಳ ಘಟಕವನ್ನು ನಾವು ಭೇದಿಸಿದ್ದೇವೆ. 17 ಜನರನ್ನು ಬಂಧಿಸಲಾಗಿದೆ – ಐವರು ಪೊಲೀಸರು, ಅಂಗಡಿಯವರು, ರಾಜಕೀಯ ಕಾರ್ಯಕರ್ತರು ಮತ್ತು ಗುತ್ತಿಗೆದಾರ ಇದರಲ್ಲಿ ಸೇರಿದ್ದಾರೆ” ಎಂದು ಕುಪ್ವಾರದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಯುಗಲ್ ಕುಮಾರ್ ಮನ್ಹಾಸ್ ವಿವರಿಸಿದ್ದಾರೆ. “ಡ್ರಗ್‌ ಪಾಕಿಸ್ತಾನದಿಂದ ಸರಬರಾಜಾಗುತ್ತಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವ ಕೆರಾನ್‌ನ ನಿವಾಸಿ ಶಾಕಿರ್ ಅಲಿ ಖಾನ್, ಕೆರಾನ್‌ನಲ್ಲಿ ವಾಸಿಸುತ್ತಿರುವ ತನ್ನ ಮಗ ತಮ್ಹೀದ್ ಅಹ್ಮದ್‌ಗೆ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುತ್ತಿದ್ದ ಎಂದು ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ.

ಕುಪ್ವಾರ ಪಟ್ಟಣ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿ ಕೆಲವು ಡ್ರಗ್ ಪ್ಯಾಡ್ಲರ್‌ಗಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ದೊಡ್ಡ ಜಾಲವು ತನಿಖೆಯ ವೇಳೆ ಪತ್ತೆಯಾಗಿದೆ ಎಂದಿದ್ದಾರೆ.

ಆರೋಪಿಯಿಂದ ಈವರೆಗೆ ಎರಡು ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಘಟಕವು ಐದು ಕೆಜಿ ಹೆರಾಯಿನ್‌ ಪಡೆದಿತ್ತು” ಎಂದು ಎಸ್ಎಸ್ಪಿ ಮಾಹಿತಿ ನೀಡಿದ್ದಾರೆ.

ಈ ವರ್ಷ ಕಾಶ್ಮೀರದ ಗಡಿ ಜಿಲ್ಲೆಯಲ್ಲಿ 161 ಜನರ ವಿರುದ್ಧ 85 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್ ದಂಧೆ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗಡಿ ನಿಯಂತ್ರಣ ರೇಖೆಯ ಬಳಿ ನಿಯೋಜಿಸಲಾದ ಭದ್ರತಾ ಪಡೆಗಳ ಕೆಲವು ಅಧಿಕಾರಿಗಳೂ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವರ್ಷ ರಾಷ್ಟ್ರೀಯ ತನಿಖಾ ಸಂಸ್ಥೆಯು ಕುಪ್ವಾರಾ ಜಿಲ್ಲೆಯ ಹಂದ್ವಾರಾ ಪ್ರದೇಶದಲ್ಲಿ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಲಷ್ಕರ್-ಎ-ತೈಬಾದ ಉಗ್ರಗಾಮಿ ಗುಂಪುಗೆ ಸಂಪರ್ಕ ಹೊಂದಿರುವ ಗಡಿ ಭದ್ರತಾ ಪಡೆ ಅಧಿಕಾರಿಯನ್ನು ಬಂಧಿಸಿತ್ತು.

ಬಿಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ರೋಮೇಶ್ ಕುಮಾರ್ ಅವರಿಂದ ಎನ್‌ಐಎ ₹ 91 ಲಕ್ಷ ನಗದು ವಶಪಡಿಸಿಕೊಂಡಿತ್ತು. ಈ ನಗದು ಮಾದಕವಸ್ತು ಕಳ್ಳಸಾಗಣೆಯಿಂದ ಬಂದ ಹಣದ ಭಾಗವಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...