Homeಕರ್ನಾಟಕಪೊಲೀಸ್‌‌ ಹುದ್ದೆ ಆಕಾಂಕ್ಷಿಗಳ ಮೇಲೆ ಪೊಲೀಸ್‌ ದಬ್ಬಾಳಿಕೆ; ಕಾಂಗ್ರೆಸ್ ಖಂಡನೆ

ಪೊಲೀಸ್‌‌ ಹುದ್ದೆ ಆಕಾಂಕ್ಷಿಗಳ ಮೇಲೆ ಪೊಲೀಸ್‌ ದಬ್ಬಾಳಿಕೆ; ಕಾಂಗ್ರೆಸ್ ಖಂಡನೆ

- Advertisement -
- Advertisement -

ಪೊಲೀಸ್‌ ಹುದ್ದೆ ಆಕಾಂಕ್ಷಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು ಕಾಂಗ್ರೆಸ್ ಖಂಡಿಸಿದೆ. ಪಿಎಸ್‌ಐ ಹಗರಣದಿಂದ ಸಂತ್ರಸ್ತರಾದ ಅಭ್ಯರ್ಥಿಗಳು, ಪೊಲೀಸ್ ಕಾನ್‌ಸ್ಟೇಬಲ್‌ ಹುದ್ದೆ ಆಕಾಂಕ್ಷಿಗಳು ಹೋರಾಟ ನಡೆಸುತ್ತಿದ್ದಾರೆ.

ಪಿಎಸ್‌ಐ ಹಗರಣದ ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕು. ಪೊಲೀಸ್ ಕಾನ್‌ಸ್ಟೇಬಲ್‌ ಹುದ್ದೆ ನೇಮಕಾತಿ ವಯೋಮಿತಿ ಹೆಚ್ಚಿಸಬೇಕು ಎಂದು ಆಕಾಂಕ್ಷಿಗಳು ಹೋರಾಟ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರು ತುಮಕೂರಿನಲ್ಲಿ ಹಲ್ಲೆ ನಡೆಸಿದ್ದಾರೆ.

ಪಿಎಸ್‌ಐ ಹುದ್ದೆ ಆಕಾಂಕ್ಷಿ ಮೇಲೆ ಹಲ್ಲೆ ನಡೆದಿದೆ ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದ್ದು, ಮತ್ತೊಂದೆಡೆ ಪೊಲೀಸ್ ಕಾನ್‌ಸ್ಟೇಬಲ್‌ ಹುದ್ದೆ ನೇಮಕಾತಿಯ ವಯೋಮಿತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾಗ ಈ ಘಟನೆ ನಡೆದಿರುವುದಾಗಿ ಆಕಾಂಕ್ಷಿಗಳು ತಿಳಿಸಿದ್ದಾರೆ.

“ಅಭ್ಯರ್ಥಿಗಳನ್ನು ಎದುರುಗೊಳ್ಳಲು, ಅವರ ನೋವು ಆಲಿಸಲು ಧೈರ್ಯವಿಲ್ಲದೆ ಪೊಲೀಸರನ್ನು ಬಿಟ್ಟು ಹೊಡೆಸುತ್ತೀರಾ?” ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.

“ಆರಗ ಜ್ಞಾನೇಂದ್ರ ಅವರೇ, ಅಕ್ರಮ ನಡೆಸಿದ ಸರ್ಕಾರ ಅಪರಾಧಿ ಸ್ಥಾನದಲ್ಲಿದೆ. ಆದರೆ ಶಿಕ್ಷೆ ಮಾತ್ರ ಅಭ್ಯರ್ಥಿಗಳಿಗೆ. ಅವರು ಉದ್ಯೋಗ ಕೇಳುತ್ತಿದ್ದಾರೆ ಹೊರತು ನಿಮ್ಮ ಕುರ್ಚಿಯನ್ನಲ್ಲ” ಎಂದು ಕಟುವಾಗಿ ಟೀಕಿಸಿದ್ದಾರೆ.

“ಪಿಎಸ್‌ಐ ಅಕ್ರಮದಿಂದ ಸಂತ್ರಸ್ತರಾದ ಪ್ರಾಮಾಣಿಕ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿದ ತುಮಕೂರು ಡಿವೈಎಸ್ಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರಗ ಅವರೇ, ಅಭ್ಯರ್ಥಿಗಳನ್ನು ಭೇಟಿಯಾಗಲು, ಅವರ ನೋವು ಆಲಿಸಲು ಹಿಂದೇಟು ಹಾಕುವುದೇಕೆ? ಅವರ ಸಮಸ್ಯೆಗೆ ಇದುವರೆಗೂ ಪರಿಹಾರ ಸೂಚಿಸದಿರುವುದೇಕೆ? ಯೋಗ್ಯತೆ ಇಲ್ಲದ ಮೇಲೆ ಕುರ್ಚಿಯಿಂದ ಇಳಿಯಿರಿ” ಎಂದು ಆಗ್ರಹಿಸಿದೆ.

ನ್ಯಾಯಕ್ಕಾಗಿ ಆಗ್ರಹಿಸುತ್ತಾ ಆರಗ ಜ್ಞಾನೇಂದ್ರ ಅವರ ಕಾಲು ಹಿಡಿದು ಅಳುತ್ತಿರುವ ಅಭ್ಯರ್ಥಿಗಳ ವಿಡಿಯೊ ಜೊತೆಗೆ ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್‌, “ಪೊಲೀಸ್ ಕಾನ್‌ಸ್ಟೇಬಲ್‌ ಅಭ್ಯರ್ಥಿಗಳು ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಬಂದಾಗ ಗೃಹಸಚಿವರ ಉಡಾಫೆ, ದುರಹಂಕಾರದ ನಡವಳಿಕೆ ಇದು. ಜನರೊಂದಿಗೆ ನಡೆದುಕೊಳ್ಳುವ ರೀತಿ ಇದೇನಾ? ಉದ್ಯೋಗಕ್ಕಾಗಿ ಪರಿತಪಿಸುವ ಯುವಜನರಿಗೆ ನಿಮ್ಮ ಸ್ಪಂದನೆ ಇದೇನಾ? ಈ ದರ್ಪ, ದೌಲತ್ತುಗಳು ಆಯಸ್ಸು ಕೆಲವೇ ತಿಂಗಳುಗಳಷ್ಟೇ, ನೆನಪಿರಲಿ” ಎಂದು ಎಚ್ಚರಿಸಿದೆ.

ಇದನ್ನೂ ಓದಿರಿ: ‘ಪೇಸಿಎಂ ಆಕ್ಷನ್ ಕಮಿಟಿ’ ವಾಟ್ಸ್‌ಅಪ್‌ ಗ್ರೂಪ್‌: ಪೋಸ್ಟರ್‌ ಅಭಿಯಾನ ಬಳಿಕ ವಿಡಿಯೊ ಪ್ರಯೋಗ ಮಾಡಿದ ಕಾಂಗ್ರೆಸ್!

ಆರಗ ಅವರ ವರ್ತನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮಾಡಿರುವ ಟ್ವೀಟ್‌ಗೆ ದಿಲೀಪ್ ಲಮಾಣಿ ಎಂಬವರು ಪ್ರತಿಕ್ರಿಯಿಸಿ, “ಸುಮಾರು ದಿನಗಳಿಂದ ಪೋಲೀಸ್ ಕಾನ್‌ಸ್ಟೇಬಲ್‌ ವಯೋಮಿತಿ ಹೆಚ್ಚಳ ಸಲುವಾಗಿ ಮನವಿ ನೀಡುತ್ತಲೇ ಬಂದಿರುತ್ತೇವೆ ಆದರೂ ಈ ಸರ್ಕಾರ ಯುವಕರನ್ನ ಕಡೆಗಣಿಸುತ್ತಿದೆ” ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ನಾಯಕ ಬಾಬುರಾವ್‌ ಚಿಂಚನಸೂರ್ ಅವರ ವಿಡಿಯೊ ತುಣುಕನ್ನು ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ “ಇವತ್ತು ಖಾಲಿ ಪೇಪರ್ ಇದ್ದರೂ ಸಹ ಡಿವೈಎಸ್ಪಿ ಆಗಬಹುದು ಎಂದು ಚಿಂಚನಸೂರ್ ಹೇಳಿದ್ದಾರೆ. ಹಣದೊಂದಿಗೆ ಖಾಲಿ ಪೇಪರ್ ಇದ್ದರೆ ವ್ಯಾಪಾರಕ್ಕಿಟ್ಟಿರುವ ಸರ್ಕಾರಿ ಹುದ್ದೆಗಳು ಸಿಗುತ್ತವೆ ಎಂಬುದನ್ನು ಸೊಗಸಾಗಿ ಹೇಳಿದ್ದಾರೆ ಅಲ್ಲವೇ? ಬೊಮ್ಮಾಯಿಯವರೇ #40PercentSarkaraದ ಅಕ್ರಮ ನೇಮಕಾತಿಗಳು ಖಾಲಿ ಪೇಪರ್‌ನಲ್ಲಿಯೇ ನಡೆಯುತ್ತವೆ” ಎಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...