ಮಹಾಮಳೆಯಿಂದ ಪ್ರವಾಹಕ್ಕೆ ಒಳಗಾಗಿರುವ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ತತ್ತರಿಸಿವೆ. ಇವುಗಳ ನಡುವೆ ಹೈದರಾಬಾದ್‌ನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ. ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ಹೈದರಾಬಾದ್‌ನ ಹಲವಾರು ಭಾಗಗಳು ಪ್ರವಾಹಕ್ಕೆ ಸಿಲುಕಿದ್ದವು.
ಹೈದರಾಬಾದ್‌ನಲ್ಲಿ ಕಳೆದ ರಾತ್ರಿ ಬಾಲನಗರ ಕೆರೆ ಕೋಡಿ ಒಡೆದಿದ್ದು, ಹತ್ತಿರದ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದೆ. ಬೀದಿಗಳಲ್ಲಿ ಕೆರೆ ನೀರು ನುಗ್ಗಿದ್ದರಿಂದ ವಾಹನಗಳು ಕೊಚ್ಚಿಹೋಗಿದ ದೃಶ್ಯಗಳು ಕಂಡು ಬಂದವು.
These are visuals of #BalapurLakeBreach that caused storm water drains to be exposed #HyderabadFloods @ndtv @ndtvindia pic.twitter.com/gFjbvHADvo
— Uma Sudhir (@umasudhir) October 18, 2020
ಮಳೆಯ ಪರಿಣಾಮ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಅಲ್ಲಿ ವಾಸವಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್‌ಎಂಸಿ) ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರೀ ಮಳೆ: ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ 83 ಜನರು ಬಲಿ!
ಮಳೆಯಿಂದಾಗಿ ಪಿವಿಎನ್ಆರ್ ಎಕ್ಸ್‌ಪ್ರೆಸ್ ವೇ ಇಂದ ವಿಮಾನ ನಿಲ್ದಾಣದ ಕಡೆಗೆ ಹಳೆಯ ಕರ್ನೂಲ್ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ವಿಮಾನ ನಿಲ್ದಾಣ, ಬೆಂಗಳೂರು ಕಡೆಗೆ ಸಂಚರಿಸುವ ಎಲ್ಲಾ ಸಾರ್ವಜನಿಕರಿಗೆ ಹೊರಗಿನ ರಿಂಗ್ ರಸ್ತೆಯನ್ನು ಬಳಸಲು ಶಮ್‌ಶಾಬಾದ್‌ನ ಡಿಸಿಪಿ ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ.
ನಗರದ ಕೆಲವು ಪ್ರದೇಶಗಳಲ್ಲಿ ದಿನವಿಡೀ 150 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ. ಆದರೆ ರಾತ್ರಿ ಮತ್ತೆ 170 ಮಿ.ಮೀಟರ್‌ನಷ್ಟು ಮಳೆ ಸುರಿದಿದೆ. ರಾತ್ರಿ ಸಾಕಷ್ಟು ಅವಘಡಗಳು ಸಂಭವಿಸಿದ್ದು, ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಹೈದರಾಬಾದ್‌ನಲ್ಲಿ ಮಳೆಯಿಂದಾಗಿ ಈ ವಾರದಲ್ಲಿ 50 ಜನರು ಮೃತಪಟ್ಟಿದ್ದಾರೆ. ಸುಮಾರು, 6,000 ಕೋಟಿ ಮೌಲ್ಯದ ಆಸ್ತಿ-ಪಾಸ್ತಿಗಳು ನಷ್ಟವಾಗಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿತ್ತು. ಎನ್‌ಡಿಆರ್‌ಎಫ್ ಹಾಗೂ ಪಾಲಿಕೆ ಸಿಬ್ಬಂದಿಗಳನ್ನು ರಕ್ಷಣ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ, ಆಂಧ್ರದಲ್ಲಿ ಭಾರಿ ಮಳೆ: ಕಾಂಪೌಂಡ್ ಕುಸಿದು 2 ತಿಂಗಳ ಮಗು ಸೇರಿ 9 ಮಂದಿ ದುರ್ಮರಣ
ತೆಲಂಗಾಣದಲ್ಲಿ ಇನ್ನೂ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 17ರಿಂದ 21ರವರೆಗೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಹೇಳಿದೆ.
ಪ್ರವಾಹದಿಂದ ತೆಲಂಗಾಣ ಹೆಚ್ಚು ಹಾನಿಗೊಳಗಾಗಿದ್ದರೆ, ಮಳೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ಕರ್ನಾಟಕದ ಮೇಲೂ ಸಹ ಪರಿಣಾಮ ಬೀರಿವೆ.



