ವಿಗ್ರಹಗಳ ಕಳ್ಳಸಾಗಣೆ ಆರೋಪದ ಮೇಲೆ ‘ವಿಗ್ರಹ ವಿಭಾಗ’ದ ಪೊಲೀಸರು ಬಿಜೆಪಿ ಪದಾಧಿಕಾರಿ ಮತ್ತು ಇಬ್ಬರು ಪೊಲೀಸರು ಸೇರಿದಂತೆ ಒಟ್ಟು ನಾಲ್ವರನ್ನು ಬುಧವಾರದಂದು ತಮಿಳುನಾಡಿನ ರಾಮನಾಥಪುರದಲ್ಲಿ ಬಂಧಿಸಿ ಏಳು ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ತಂಡವು ಕೆಲವು ಶಂಕಿತರನ್ನು ಬಂಧಿಸಿದ್ದು, ಗ್ಯಾಂಗ್ ವಿಗ್ರಹಗಳನ್ನು ಕಳ್ಳಸಾಗಣೆ ಮಾಡಲು ಯೋಜಿಸಿತ್ತು ಎಂದು ಕಂಡುಹಿಡಿದಿದೆ. ಈ ಗ್ಯಾಂಗ್ ಕೋಟ್ಯಾಂತರ ರೂಪಾಯಿ ಮೌಲ್ಯದ “ಡೀಲ್” ಅನ್ನು ನಿಗದಿಪಡಿಸಿ ರಾಮನಾಥಪುರದಿಂದ ವಿಗ್ರಹಗಳನ್ನು ರವಾನಿಸಲು ಹೊರಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: BJP ಸದಸ್ಯರನ್ನೆ ‘ಬಿಜೆಪಿ ಬೆಂಬಲಿಸುವ ಸಾಮಾನ್ಯ ಮುಸ್ಲಿಮರು’ ಎಂದು ಚಿತ್ರಿಸಿದ ‘ಟಿವಿ9 ಭಾರತವರ್ಷ’
ಬಿಜೆಪಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿರುವ ಮುದುಕಲತ್ತೂರಿನ ಅಲೆಕ್ಸಾಂಡರ್ (52) ಅವರಿಗೆ ವಿಗ್ರಹಗಳ ಮಾರಾಟದ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂಕಿತರ ತಪ್ಪೊಪ್ಪಿಗೆಯ ಆಧಾರದ ಮೇಲೆ ಪೊಲೀಸರು ವಿರುದುನಗರ ಜಿಲ್ಲೆಯ ಅರುಪ್ಪುಕೊಟ್ಟೈನಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವ ಇಲಂಕುಮಾರನ್ (44) ಮತ್ತು ಆತನ ಸಹಚರ ವಿರುದುನಗರದ ಕರುಪ್ಪಸಾಮಿ (35) ನನ್ನು ಬಂಧಿಸಿದ್ದಾರೆ.
ದಿಂಡಿಗಲ್‌ನ ಸಶಸ್ತ್ರ ಮೀಸಲು ಪೊಲೀಸ್‌ನ ಇಳಂಕುಮಾರ್ ಮತ್ತು ನಾಗ ನರೇಂದ್ರನ್ ಹಾಗೂ ವಿರುದುನಗರ ಜಿಲ್ಲೆಯ ತಿರುತಂಗಲ್‌ನ ಗಣೇಶನ್ ಅವರಿಗೆ ಸೇಲಂ ಜಿಲ್ಲೆಯ ಎಡಪ್ಪಾಡಿಯಲ್ಲಿ ಏಳು ವಿಗ್ರಹಗಳು ಗ್ಯಾಂಗ್ ವಶದಲ್ಲಿದ್ದವು ಎಂದು ತಿಳಿದು ಬಂದಿತ್ತು.
ಇದನ್ನೂ ಓದಿ: ಮಣಿಪುರ ಚುನಾವಣೆ: ಬಿಜೆಪಿಯಿಂದ ಸಿಗದ ಟಿಕೆಟ್- ಮೋದಿ, ಬಿಜೆಪಿ ಧ್ವಜಕ್ಕೆ ಬೆಂಕಿ ಹಚ್ಚಿ ಕಾರ್ಯಕರ್ತರ ಪ್ರತಿಭಟನೆ
ತಾವು ವಿಗ್ರಹ ವಿಭಾಗದ ಪೋಲೀಸರೆಂದು ಬಿಂಬಿಸಿಕೊಂಡ ಇಲಂಕುಮಾರನ್ ಮತ್ತು ಇತರರು ಎಡಪ್ಪಾಡಿಗೆ ಹೋಗಿ ವಿಗ್ರಹಗಳನ್ನು ತೆಗೆದುಕೊಂಡು ಹೋಗಿ ಬಿಜೆಪಿ ನಾಯಕ ಅಲೆಕ್ಸಾಂಡರ್ ಅವರಿಗೆ ಹಸ್ತಾಂತರಿಸಿದ್ದರು. ಅವರು ಈ ವಿಗ್ರಹಗಳನ್ನು ಖರೀದಿಸುವವರನ್ನು ಪತ್ತೆಹಚ್ಚಿ, ಇದರ ಬೆಲೆ ₹ 5 ಕೋಟಿ ಎಂದು ನಿಗದಿಪಡಿಸಿದ್ದರು. ಈ ಗ್ಯಾಂಗ್ ಒಪ್ಪಂದ ಮಾಡಿಕೊಳ್ಳಲು ಮುಂದಾದಾಗ, ಪೊಲೀಸರು ಅದನ್ನು ಭೇದಿಸಿದ್ದಾರೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಅಲೆಕ್ಸಾಂಡರ್, ಇಲಂಕುಮಾರನ್, ನಾಗ ನರೇಂದ್ರನ್ ಮತ್ತು ಕರುಪ್ಪಸಾಮಿ ಅವರನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ವಿಗ್ರಹಗಳು ಕಳ್ಳತನವಾಗಿರುವ ದೇವಾಲಯಗಳನ್ನು ಗುರುತಿಸಲು ತಜ್ಞರ ಸಹಾಯವನ್ನು ಪಡೆಯಲು ಯೋಜಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಬಿಜೆಪಿ ನಾಯಕಿಯ ಗೋಶಾಲೆಯಲ್ಲಿ 100ಕ್ಕೂ ಹೆಚ್ಚು ಹಸುಗಳ ಸಾವು, ಸ್ಥಳೀಯರ ಆಕ್ರೋಶ


