ದೆಹಲಿ ಸರ್ಕಾರದ ಮನೆ ಬಾಗಿಲಿಗೆ ಪಡಿತರ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರ ಪಡಿತರ ಮಾಫಿಯಾದ ಪ್ರಭಾವದ ಅಡಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
“ದೆಹಲಿಯಲ್ಲಿ ‘ಡೋರ್‌ಸ್ಟೆಪ್ ಡೆಲಿವರಿ ಆಫ್ ರೇಷನ್’ ಯೋಜನೆ ಜಾರಿಗೆ ಬರುವ ಎರಡು ದಿನಗಳ ಮೊದಲೇ ಕೇಂದ್ರ ಸರ್ಕಾರ ಅದನ್ನು ನಿಲ್ಲಿಸಿದೆ. ಪಿಜ್ಜಾ, ಬರ್ಗರ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಬಟ್ಟೆಗಳನ್ನು ಮನೆಗಳಿಗೆ ತಲುಪಿಸಬಹುದಾದರೆ, ಪಡಿತರವನ್ನು ಯಾಕೆ ಜನರ ಮನೆ ಬಾಗಿಲಿಗೆ ತಲುಪಿಸಲು ಆಗುವುದಿಲ್ಲ?” ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
“ಮೊದಲ ಬಾರಿಗೆ, ಪಡಿತರ ಮಾಫಿಯಾವನ್ನು ಪರೀಕ್ಷಿಸಲು ಸರ್ಕಾರ ಒಂದು ಹೆಜ್ಜೆ ಇಟ್ಟಿದೆ. ಪಡಿತರ ಮಾಫಿಯಾದವರು ಎಷ್ಟು ಪ್ರಬಲರಾಗಿದ್ದಾರೆಂದರೆ, ಈ ಯೋಜನೆ ಜಾರಿಗೆ ಬರುವ ಒಂದು ವಾರದ ಮುಂಚೆಯೇ ಅವರು ಯೋಜನೆಯನ್ನು ರದ್ದುಗೊಳಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಮನೆ ಬಾಗಿಲಿನ ಪಡಿತರ ವಿತರಣಾ ಯೋಜನೆಯಿಂದ ರಾಷ್ಟ್ರದ ರಾಜಧಾನಿಯ 72 ಲಕ್ಷ ಪಡಿತರ ಕಾರ್ಡುದಾರರಿಗೆ ಲಾಭವಾಗಬಹುದೆಂದು ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ಸರ್ಕಾರ ಈ ಯೋಜನೆಯನ್ನು ಮಾರ್ಚ್‌ನಲ್ಲಿ ರೂಪಿಸಿತ್ತು.
ಇದನ್ನೂ ಓದಿ: ಪ್ರತಿದಿನ ಭಯದಲ್ಲೇ ಮನೆಗೆ ಹೋಗುವ ನಮಗೆ, ನಮ್ಮ ಹಳ್ಳಿಗಳಲ್ಲೇ ಗೌರವವಿಲ್ಲ: ಆಶಾ ಕಾರ್ಯಕರ್ತರ ಅಳಲು
ಡಿಜಿಟಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಈ ಯೋಜನೆಯ ಅನುಷ್ಠಾನಕ್ಕೆ ದೆಹಲಿ ಸರ್ಕಾರ ಅನುಮತಿ ಪಡೆದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವ ಹೇಳಿಕೆಯನ್ನು ತಿಳಿಸಿದ್ದಾರೆ. “ಯೋಜನೆ ಅನುಷ್ಠಾನಕ್ಕೆ ದೆಹಲಿ ಸರ್ಕಾರಕ್ಕೆ ಕೇಂದ್ರದ ಅನುಮೋದನೆ ಅಗತ್ಯವಿರಲಿಲ್ಲ, ಆದರೂ ಯಾವುದೇ ವಿವಾದ ಬರದಂತೆ ತಪ್ಪಿಸಲು ಐದು ಬಾರಿ ಅನುಮತಿ ಕೋರಿದ್ದೇವು” ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರವು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ, ದೆಹಲಿ ಮತ್ತು ಜಾರ್ಖಂಡ್ ಸರ್ಕಾರಗಳು, ರೈತರು ಮತ್ತು ಲಕ್ಷದ್ವೀಪದ ಜನರು ಸೇರಿದಂತೆ ಎಲ್ಲರೊಂದಿಗೆ ಯುದ್ಧಕ್ಕೆ ನಿಂತಿದೆ ಎಂದು ಆರೋಪಿಸಿದ್ದಾರೆ.
“ಕೇಂದ್ರ ಸರ್ಕಾರ ಎಲ್ಲರ ವಿರುದ್ಧ ಹೋರಾಡುತ್ತಿದೆ ಎಂದು ಜನರು ಬೇಸರಗೊಂಡಿದ್ದಾರೆ. ನಾವು ಈ ರೀತಿ ಬಡಿದಾಡುತ್ತಿದ್ದರೆ, ಕೊರೊನಾ ಸೋಂಕನ್ನು ಹೇಗೆ ನಿಭಾಯಿಸುತ್ತೇವೆ..? ಪಡಿತರವು ಎಎಪಿ ಅಥವಾ ಬಿಜೆಪಿಗೆ ಸೇರಿಲ್ಲ. ಯೋಜನೆಯನ್ನು ಕಾರ್ಯಗತಗೊಳಿಸಲಿ, ಇದರ ಸಂಪೂರ್ಣ ಕ್ರೇಡಿಟ್ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡುತ್ತೇನೆ. ದೆಹಲಿಯ 70 ಲಕ್ಷ ಬಡ ಜನರ ಪರವಾಗಿ ನಾನು ಕೈ ಮುಗಿದು ಈ ಯೋಜನೆಯನ್ನು ಜಾರಿಗೆ ತರಲು ವಿನಂತಿಸುತ್ತೇನೆ “ಎಂದು ಕೇಜ್ರಿವಾಲ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷವು ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾದ ಈ ಯೋಜನೆಯನ್ನು ಜಾರಿಗೆ ತರಲು ದೆಹಲಿ ಸರ್ಕಾರವು, ಕಳೆದ ವರ್ಷ ಜುಲೈನಲ್ಲಿ ದೆಹಲಿಯ ಎಲ್ಲಾ ಕಾರ್ಡುದಾರರಿಗೆ ಪಡಿತರವನ್ನು ಮನೆಗೆ ತಲುಪಿಸಲು ಅನುಮತಿ ನೀಡಿತ್ತು.
ಇದನ್ನೂ ಓದಿ: ಹೊಟ್ಟೆಗೆ ಅನ್ನ, ಬದುಕಿಗೆ ಭರವಸೆ ನೀಡುವ ಸಮಗ್ರ ಪ್ಯಾಕೇಜ್ ನೀಡಿ: ಜನಾಗ್ರಹ ಆಂದೋಲನ



ತನ್ನ ವಿರೋಧಿಗಳು ಒಳ್ಳೆಯ ಕೆಲಸ ಮಾಡಿ ಜನಪ್ರಿಯರಾದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ಮನಗಂಡಿರುವ ನಮ್ಮ ಪ್ರದಾನಿಯವರು; ತಮ್ಮ ರಾಜಕೀಯ ವಿರೋಧಿಗಳ ಜನಪ್ರಿಯ ಕಾರ್ಯಕ್ರಮಗಳನ್ನು ಈ ರೀತಿಯಲ್ಲಿ, ಸಂವಿಧಾನ ಬಾಹಿರವಾಗಿ ಹತ್ತಿಕ್ಕುತ್ತಿರುವುದು ಕಂಡನಾರ್ಹ.