Homeನ್ಯಾಯ ಪಥಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

ಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

- Advertisement -
- Advertisement -

ಕೊರೊನಾ ಕಾಲದ ದೊಡ್ಡ ಸಮಸ್ಯೆ ಏನೆಂದರೆ ರಾಜಕಾರಣಿಗಳು ತಜ್ಞರ ಮಾತನ್ನು ಉಪೇಕ್ಷಿಸಿ ತೀರ್ಮಾನ ಕೈಗೊಳ್ಳುವುದು; ಟಿವಿ ಆಂಕರ್‌ಗಳು ಲಾಕ್‌ಡೌನ್ ಯಾವಾಗ, ಹೇಗೆ ಹೇರಬೇಕು ಎಂಬುದನ್ನೂ, ಯಾವ ಸಮಸ್ಯೆ ಎಷ್ಟು ರಣಭೀಕರ ಎಂದು ತೀರ್ಮಾನಿಸುವುದು; ಹೃದಯ ತಜ್ಞರು ಸಾಂಕ್ರಾಮಿಕ ರೋಗದ ಉಸ್ತುವಾರಿ ವಹಿಸುವುದು ಮತ್ತು ಅಂತಿಮವಾಗಿ ವಾಟ್ಸಾಪ್‌ನಲ್ಲಿ ಹರಿದುಬರುವ ಸುಳ್ಳುಗಳು ರೋಗಿಗಳ ಚಿಕಿತ್ಸೆ ನಿರ್ಧರಿಸುವುದು. ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಎಂಬ ರೋಗವು ಎಲ್ಲೆಡೆ ಹಬ್ಬುತ್ತಿರುವಾಗ ಮತ್ತೊಮ್ಮೆ ಇದನ್ನು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಈ ಲೇಖನ ಬರೆಯುವಾಗಲೂ, ತಜ್ಞ ವೈದ್ಯರುಗಳು ಹಾಗೂ ಸಂಶೋಧಕರು ಏನು ಹೇಳಿದ್ದಾರೆಂಬುದನ್ನು ಮಾತ್ರವೇ ಹೇಳಬೇಕೆಂಬ ಎಚ್ಚರವನ್ನಿಟ್ಟುಕೊಳ್ಳಲಾಗಿದೆ.
ಕಪ್ಪು ಫಂಗಸ್ ಕುರಿತಂತೆ ವೈದ್ಯಲೋಕದ ಆಚೆಗೆ ಎಲ್ಲರೂ ಕೇಳಲಾರಂಭಿಸಿದ್ದು ಕೊರೊನಾದ ಭಾರತದ ಎರಡನೇ ಅಲೆಯ ತುತ್ತತುದಿಯಲ್ಲಿ. ಮ್ಯುಕೊರ್ ಮೈಸಿಟಿಸ್ ಎಂಬ ಫಂಗಸ್‌ನಿಂದ ಬರುವ ಈ ಕಾಯಿಲೆಯು ಕೊರೊನಾದಿಂದ ಶುರುವಾದದ್ದಲ್ಲ. ಇದು ಮುಂಚಿನಿಂದಲೂ ಇರುವ ಕಾಯಿಲೆಯೇ. ಹಾಗೆ ನೋಡಿದರೆ ಮುಂಚಿನಿಂದಲೂ ಭಾರತವೇ ಅದರ ರಾಜಧಾನಿ. ಬೇರೆ ದೇಶಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ಕೇಸುಗಳು ಇಲ್ಲಿ ಸಂಭವಿಸುತ್ತವೆ. ಆದರೂ ಅವು ಬಹಳಷ್ಟು ಇರುತ್ತಿರಲಿಲ್ಲ. ಕೇವಲ ಕಳೆದೆರಡು ತಿಂಗಳಲ್ಲೇ ೮,೦೦೦ ಪ್ರಕರಣಗಳು ಪತ್ತೆಯಾಗಿವೆ. ಫಂಗಸ್‌ನಿಂದ ಉಂಟಾಗುವ ಸೋಂಕು ದೊಡ್ಡದೇನಲ್ಲ. ಎಲ್ಲರಿಗೂ ಜೀವನದ ಒಂದಲ್ಲಾ ಒಂದು ಸಂದರ್ಭದಲ್ಲಿ ಫಂಗಸ್ ಸೋಂಕು ಇದ್ದೇ ಇರುತ್ತದೆ. ಆದರೆ ಮ್ಯುಕೊರ್ ಮೈಕೋಸಿಸ್ ಒಂದು ಅಪಾಯಕಾರಿ ಕಾಯಿಲೆ. ಈಗಲೂ ಶೇ.೫೦ರಷ್ಟು ಜನರನ್ನು ಅದು ಬಲಿತೆಗೆದುಕೊಳ್ಳುತ್ತಿದೆ. ಅಂದರೆ ಕೊರೊನಾಗಿಂತಲೂ ಹೆಚ್ಚು ಅಪಾಯಕಾರಿ.

ಆದರೆ ಹಾಗೆಂದು ಅದು ವ್ಯಕ್ತಿಯಿಂದ ವ್ಯಕ್ತಿಗೆ (ಕೊರೊನಾದಂತೆ) ಹರಡುವುದಿಲ್ಲ. ಮ್ಯುಕೊರ್ ಮೈಸಿಟಿಸ್‌ನ ಸ್ಪೋರ್‌ಗಳು (ಬೀಜ ಎಂದಿಟ್ಟುಕೊಳ್ಳೋಣ) ವಾತಾವರಣದಲ್ಲಿ, ಮಣ್ಣಿನಲ್ಲೂ ಸೇರಿದಂತೆ, ಎಲ್ಲೆಡೆ ಇರುತ್ತವೆ. ಹಾಗಾಗಿ ಅದು ಒಬ್ಬರಿಂದ ಇನ್ನೊಬ್ಬರಿಗೆ ಬರಬೇಕಾದ ಅಗತ್ಯವಿಲ್ಲ. ಯಾರಲ್ಲಿ ರೋಗನಿರೋಧಕ ಶಕ್ತಿ ಅತೀ ಕಡಿಮೆಯಾಗುತ್ತದೋ ಅಂಥವರಿಗೆ ಅದು ಹರಡುತ್ತದೆ. ಬಹುತೇಕ ಮೂಗಿನಿಂದ ಒಳಹೊಕ್ಕು, ಮೂಗಿನ ಎರಡೂ ಬದಿಯಲ್ಲಿ ಇರುವ ಸೈನಸ್ ಒಳಗೂ ವೃದ್ಧಿಯಾಗುತ್ತದೆ ಮತ್ತು ಪಕ್ಕದಲ್ಲೇ ಇರುವ ಕಣ್ಣಿನ ಕುಳಿಗೆ ಪ್ರವೇಶಿಸುತ್ತದೆ; ತಲೆಬುರುಡೆಯೊಳಕ್ಕೂ ಹೋಗಿ ಮೆದುಳಿಗೂ ಹಾನಿಯುಂಟು ಮಾಡುವ ಶಕ್ತಿ ಅದಕ್ಕಿದೆ. ಸಣ್ಣಪುಟ್ಟ ಔಷಧಿಗಳ ಬಡಪೆಟ್ಟಿಗೆ ಅದು ಬಗ್ಗುವುದಿಲ್ಲ. ಯಾವ ಭಾಗದಲ್ಲಿ ಅದು ಬೆಳೆದಿರುತ್ತದೋ, ಅದನ್ನೇ ಕೆರೆದು ಅಥವಾ ಕತ್ತರಿಸಿ ತೆಗೆಯಬೇಕಾಗುತ್ತದೆ. ಇಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ತಜ್ಞರು ಹಾಗೂ ಕಣ್ಣಿನ ತಜ್ಞರು ಅದನ್ನು ನಿಭಾಯಿಸುತ್ತಾರೆ. ಈ ಸದ್ಯ ಅದಕ್ಕೆ ಲಭ್ಯವಿರುವ ಔಷಧಿಗಳು ವಿಪರೀತ ದುಬಾರಿಯಾಗಿವೆ. ಅದರಲ್ಲೂ ಆಂಫೋಟೆರಿಸಿನ್ ಬಿ ಎಂಬ ಔಷಧಿಯು ದುಬಾರಿಯೂ ಹೌದು; ದುರ್ಲಭವೂ ಹೌದು.

ಈಗ ಅದು ಏಕೆ ಇಷ್ಟೊಂದು ಹೆಚ್ಚಾಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ಈ ಒಂದು ತಿಂಗಳಲ್ಲಿ ನಡೆದಿದೆ. ಕೊರೊನಾ ಬಂದವರಲ್ಲೇ ಅದು ಅತಿ ಹೆಚ್ಚು ಕಾಣಿಸಿಕೊಂಡಿದ್ದು, ಈ ಹಿಂದಿನಂತೆ ಕ್ಯಾನ್ಸರ್‌ಗೆ ಕೀಮೋಥೆರಪಿ ತೆಗೆದುಕೊಂಡವರು, ಕಿಡ್ನಿ ಕಸಿ ಮಾಡಿಸಿಕೊಂಡವರು ಮುಂತಾದವರಲ್ಲೂ ಇದೆ. ಅತೀ ಹೆಚ್ಚು ಡಯಾಬಿಟಿಸ್ ಇರುವವರನ್ನು ಬಾಧಿಸಿದೆಯಾದರೂ ಡಯಾಬಿಟಿಸ್ ಇಲ್ಲದವರಿಗೂ ಬಂದಿದೆ. ಕೊರೊನಾ ಬಂದು ಆಸ್ಪತ್ರೆ ಸೇರಿ ಆಕ್ಸಿಜನ್ ಕೊಟ್ಟವರಲ್ಲಿ ಸಾಕಷ್ಟು ಜನರಲ್ಲಿ ಬಂದಿದೆಯಾದರೂ, ಆಸ್ಪತ್ರೆಗೇ ಹೋಗದೇ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡವರಿಗೂ ಬಂದಿದೆ. ಸ್ಟಿರಾಯ್ಡ್ ಔಷಧಿ (ಮಧ್ಯಮದಿಂದ ತೀವ್ರ ಪ್ರಮಾಣದ ಕೊರೊನಾ ಬಂದವರೆಲ್ಲರಿಗೂ ನೀಡಲಾಗುತ್ತಿದೆ) ತೆಗೆದುಕೊಂಡವರನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸಿದೆಯಾದರೂ, ಸ್ಟಿರಾಯ್ಡ್ ಮಾತ್ರೆಯನ್ನೂ ತೆಗೆದುಕೊಂಡಿಲ್ಲದವರಿಗೂ ಬಂದಿದೆ.

ಹೀಗಾಗಿ ಮೊದಲು ಹೇಳುತ್ತಿದ್ದಂತೆ ಕೈಗಾರಿಕಾ ಆಕ್ಸಿಜನ್ ಬಳಸಿದ್ದರಿಂದ ಬಂದಿದೆ; ಆಕ್ಸಿಜನ್ ನೀಡುವಾಗ ಬಳಸುವ ಹ್ಯೂಮಿಡಿಫೈಯರ್‌ನಲ್ಲಿ ಶುದ್ಧ ನೀರು ಬಳಸದ್ದರಿಂದ ಹೀಗಾಗಿದೆ ಎಂಬ ಮಾತುಗಳಿಗೆ ಈಗ ಹೆಚ್ಚು ಅರ್ಥವಿಲ್ಲ. ಹಾಗೆ ನೋಡಿದರೆ ಮೊದಲ ಅಲೆಯಲ್ಲೂ ಆಕ್ಸಿಜನ್ ನೀಡಲಾಗಿತ್ತು; ಡಯಾಬಿಟಿಸ್ ಇದ್ದವರಿಗೂ ಸ್ಟಿರಾಯ್ಡ್ ನೀಡಲಾಗಿತ್ತು. ಆದರೆ ಆಗ ಈ ರೀತಿ ಈ ಪ್ರಮಾಣದಲ್ಲಿ ಕಪ್ಪು ಫಂಗಸ್ ಇರಲಿಲ್ಲ.

ಮೊದಲ ಅಲೆಯ ಹೊತ್ತಿನಲ್ಲಿ ನಡೆದ ಅಧ್ಯಯನಗಳೂ ಇವನ್ನು ದೃಢಪಡಿಸುತ್ತವೆ. 2020ರ ಜೂನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕೊರೊನಾದಿಂದ ತೊಂದರೆಗೀಡಾಗಿದ್ದ 17,534 ರೋಗಿಗಳಲ್ಲಿ ಉಂಟಾದ ಸೆಕೆಂಡರಿ ಸೋಂಕನ್ನು ಅಧ್ಯಯನ ಮಾಡಲಾಗಿತ್ತು. ಅವುಗಳಲ್ಲಿ ಮ್ಯುಕೊರ್ ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಕಂಡುಬಂದಿದ್ದು ಕೆಲವೇ ಕೆಲವು ಪ್ರಕರಣಗಳಲ್ಲಿ.

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜಗತ್ತಿನಲ್ಲಿ ಇನ್ನೆಲ್ಲೂ ಕಾಣದ ಪ್ರಮಾಣದಲ್ಲಿ ಭಾರತದಲ್ಲಿ ಕಪ್ಪು ಫಂಗಸ್ ಕಾಣಿಸಿಕೊಂಡಿದ್ದರಿಂದ ಸಹಜವಾಗಿ ಇಲ್ಲಿನ ತಜ್ಞರೇ ಹೆಚ್ಚು ತಿಳಿದವರೂ ಆಗಿದ್ದಾರೆ. ಇದುವರೆಗೆ ಈ ತಜ್ಞರು ಮೇಲೆ ಹೇಳಲಾದ ಸಂಗತಿಗಳನ್ನು ಗುರುತಿಸಿದ್ದರೂ, ಡಯಾಬಿಟಿಸ್, ಸ್ಟಿರಾಯ್ಡ್ ಹಾಗೂ ರೋಗನಿರೋಧಕತೆಯನ್ನು ಕಡಿಮೆ ಮಾಡುವ ಇತರ ಸಂಗತಿಗಳನ್ನು ಈಗಲೇ ತಳ್ಳಿ ಹಾಕಲಾಗದು. ಏಕೆಂದರೆ ಜಗತ್ತಿನಲ್ಲಿ ಡಯಾಬಿಟಿಸ್ ಅತೀ ಹೆಚ್ಚು ಇರುವ ದೇಶಗಳಲ್ಲಿ ಭಾರತ ಅಗ್ರಗಣ್ಯ ದೇಶವಾಗಿದೆ. ಇಲ್ಲಿ ಸ್ಟಿರಾಯ್ಡ್ ವಿಪರೀತ ಬಳಸಲಾಗುತ್ತದೆ. ಜೊತೆಗೆ ಟೊಸಿಲಿಜುಮಾಬ್‌ನಂತಹ ರೋಗ ನಿರೋಧಕತೆಯನ್ನು ಏರುಪೇರು ಮಾಡುವ ಔಷಧಗಳನ್ನೂ ಬಳಸಲಾಗುತ್ತಿದೆ.

ಇವೆಲ್ಲದರ ಜೊತೆಗೆ ಗಮನಿಸಬೇಕಾದ ಇನ್ನೂ ಕೆಲವು ಸಂಗತಿಗಳಿವೆ. ಕೊರೊನಾ ವೈರಸ್‌ನಿಂದ ಬಂದ ರೋಗವನ್ನು ನಿರ್ವಹಿಸುವಾಗ ವಿಪರೀತ ಆಂಟಿಬಯಾಟಿಕ್‌ಗಳನ್ನೂ ನೀಡಲಾಗಿದೆ. ಇದರ ಪರಿಣಾಮವಾಗಿ ಫಂಗಸ್ ರೋಗ ಹೆಚ್ಚಾಗಿರುವ ಸಾಧ್ಯತೆ ಇದೆಯೇ ಎಂಬುದನ್ನು ಒರೆಗೆ ಹಚ್ಚಲಾಗುತ್ತಿದೆ. ಅದೇನೇ ಇದ್ದರೂ, ಬಿ.1.217 (ಭಾರತೀಯ) ಕೊರೊನಾ ವೈರಸ್ ರೋಗನಿರೋಧಕತೆಯನ್ನು ಕಡಿಮೆ ಮಾಡುತ್ತಿದೆ. ಇದು ಎರಡನೆಯ ಅಲೆಯ ಸಂದರ್ಭದಲ್ಲಿ ಮಾತ್ರ ಹೆಚ್ಚಾಗಿರುವ ರೋಗ ಪ್ರಮಾಣಕ್ಕೆ ಒಂದು ಸಮರ್ಥ
ವಿವರಣೆಯನ್ನು ಒದಗಿಸುತ್ತದೆ. ಅದರ ಜೊತೆಗೆ ಚರ್ಚೆ ನಡೆಯುತ್ತಿರುವುದು ಇನ್ನೂ ಮೂರು ಸಂಗತಿಗಳ ಮೇಲೆ. ಒಂದು, ಅನಗತ್ಯವಾಗಿ ಪ್ರತಿಯೊಬ್ಬ ಕೊರೊನಾ ರೋಗಿಗೂ ಜಿಂಕ್ ಸಲ್ಫೇಟ್ ಕೊಡಲಾಗಿದೆ. ಜಿಂಕ್ ಲವಣವು ಈ ಮ್ಯುಕೊರ್ ಮೈಸಿಟಿಸ್ ಫಂಗಸ್ ಬೆಳೆಯಲು ಅತ್ಯಗತ್ಯ. ಹಾಗಾಗಿ ಅದು ಬೆಳೆಯಲು ಜಿಂಕ್ ಪ್ರಶಸ್ತ ವಾತಾವರಣ ಕಲ್ಪಿಸಿತೇ? ಎರಡು, ಎರಡೂ ವ್ಯಾಕ್ಸೀನ್ ತೆಗೆದುಕೊಂಡವರಲ್ಲಿ ಮ್ಯುಕೋರ್ ಬಂದಿರುವುದು ಕಡಿಮೆ. ಇದು ನಮಗೇನು ಸೂಚಿಸುತ್ತದೆ? ಮೂರು, ವಿಪರೀತ ಬಿಸಿನೀರಿನ ಹವೆ ತೆಗೆದುಕೊಳ್ಳುವುದರಿಂದ ಮೂಗು, ಗಂಟಲಿನ ತೆಳುವಾದ ಪದರಕ್ಕೆ ಹಾನಿಯಾಗಿ ಅದರ ರೋಗನಿರೋಧಕತೆ ಕಡಿಮೆಯಾಗಿದೆ. ಬೆಂಗಳೂರಿನ ಪ್ರಸಿದ್ಧ ಇಎನ್‌ಟಿ ತಜ್ಞ ಡಾ.ದೀಪಕ್ ಹಲ್ದಿಪುರ ಅವರ ಪ್ರಕಾರ ವಾಟ್ಸಾಪ್‌ನಲ್ಲಿ ಹರಿಯಬಿಟ್ಟ ಇಂತಹ ಚಿಕಿತ್ಸೆಗಳಿಂದಲೂ ಈ ಸಮಸ್ಯೆ ಉದ್ಭವಿಸಿದೆ.

ಹೀಗಾಗಿ ಕೊರೊನಾ ಬಂದವರೆಲ್ಲರೂ ಎಚ್ಚರ ವಹಿಸಬೇಕಾದ ಕೆಲವು ಸಂಗತಿಗಳಿವೆ. ಡಯಾಬಿಟಿಸ್ ಇದ್ದರೆ ಅವರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು; ಸ್ಟಿರಾಯ್ಡ್ ಮಾತ್ರೆ/ಇಂಜೆಕ್ಷನ್ ಪಡೆದವರೆಲ್ಲರೂ ರಕ್ತದ ಸಕ್ಕರೆ ಪರೀಕ್ಷಿಸಿಕೊಂಡು ಹೆಚ್ಚಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಅನಗತ್ಯವಾಗಿ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಜೊತೆಗೆ ಕಪ್ಪು ಫಂಗಸ್‌ನ ಲಕ್ಷಣಗಳು ಕಂಡರೆ ಕೂಡಲೇ ತಜ್ಞ ವೈದ್ಯರನ್ನು (ಇಎನ್‌ಟಿ ವೈದ್ಯರನ್ನು) ಸಂಪರ್ಕ ಮಾಡಬೇಕು.

ಕಪ್ಪು ಫಂಗಸ್‌ನ ಲಕ್ಷಣಗಳು ಈ ಕೆಳಕಂಡಂತಿವೆ.
ತಲೆಯ ಒಂದು ಬದಿ ಮಾತ್ರ ಬರುವ ತಲೆನೋವು, ಅಂದರೆ ನಿದ್ದೆ ಮಾಡಲೇ ಬಿಡದಂತಹ ವಿಪರೀತ ತಲೆನೋವು (ಸ್ವಲ್ಪ ತಲೆ ನೋವಲ್ಲ), ಎದ್ದು ಕಾಣುವಂತಹ ಮುಖದ ಊತ, ಒಂದು ಕಣ್ಣು ಗುಡ್ಡೆ ಸ್ವಲ್ಪ ಹೊರಬರುವುದು, ಮೂಗಿನ ಒಳಗೆ ಹಾಗೂ ಹೊರಗೆ ಕಾಣುವಂತಹ ಕಪ್ಪು ಗಾಯ, ಕಣ್ಣಿನ ದೃಷ್ಟಿ ಏರುಪೇರಾಗುವುದು. ಮೂಗು, ಸೈನಸ್‌ನಲ್ಲಿ ಕಫ ದಟ್ಟಣೆ. ಮೂಗಿನ ಮೇಲೆ ಅಥವಾ ಬಾಯಿಯ ಒಳಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ಹಲ್ಲು ನೋವು ಹಾಗೂ ಹಲ್ಲುಗಳು ಒಸಡಿನಿಂದ ಸಡಿಲವಾಗುವುದು, ಎದೆ ನೋವು ಹಾಗೂ ಉಸಿರಾಟದ ತೊಂದರೆ, ಕೆಮ್ಮಿದಾಗ ಅಥವಾ ಮೂಗಿನಿಂದ ರಕ್ತ ಸೋರುವುದು.

– ಡಾ.ವಾಸು ಎಚ್.ವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...