ರಾಮಮಂದಿರ ಉದ್ಘಾಟನೆ ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿದೆ. ಇದೇ ವೇಳೆ ಅಯೋಧ್ಯೆ ಬಾಬರಿ ಮಸೀದಿ-ರಾಮಮಂದಿರದ ದಶಕಗಳ ವಿವಾದದ ಬಗ್ಗೆ ಅಂತಿಮ ತೀರ್ಪು ನೀಡಿದ್ದ ಭಾರತದ ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಸಭಾ ಸಂಸದ ರಂಜನ್ ಗೊಗೊಯ್ ಅವರನ್ನು ಅಸ್ಸಾಂನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಂಜನ್ ಗೊಗಯ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ದಶಕಗಳಷ್ಟು ಹಳೆಯದಾದ ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ಬಗ್ಗೆ ತೀರ್ಪು ನೀಡಿತ್ತು. ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ ಬೊಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರಿದ್ದರು. ಪೀಠವು ಅಯೋಧ್ಯೆ-ಬಾಬರಿ ಮಸೀದಿ ಜಮೀನಿನ ಒಡೆತನದ ಬಗ್ಗೆ ನ. 9, 2019ರಂದು ತೀರ್ಪು ನೀಡಿತ್ತು. ವಿವಾದಿತ 2.77 ಎಕರೆ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಜಮೀನನ್ನು ಸಂಪೂರ್ಣವಾಗಿ ಟ್ರಸ್ಟ್ ವಶಕ್ಕೆ ನೀಡಬೇಕು. ಇದರ ಹೊಣೆ ಸರ್ಕಾರದ್ದು ಎಂದು ಸೂಚಿಸಿತ್ತು. ಇದೇ ವೇಳೆ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಬೋರ್ಡ್‌ಗೆ 5 ಎಕರೆ ಪರ್ಯಾಯ ಭೂಮಿ ನೀಡಲು ಸೂಚಿಸಿತ್ತು. ಇದಲ್ಲದೆ 2010ರಲ್ಲಿ ಇದೇ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯವು ರದ್ದುಪಡಿಸಿತ್ತು. ರಾಮ್ ಲಲ್ಲಾ, ನಿರ್ಮೋಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಬೋರ್ಡ್‌ಗೆ ವಿವಾದಿತ ಜಾಗವನ್ನು ಅಲಹಾಬಾದ್ ಹೈಕೋರ್ಟ್ ಸಮನಾಗಿ ಹಂಚಿಕೆ ಮಾಡಿರುವುದನ್ನು ರದ್ದುಪಡಿಸಿತ್ತು.
ರಾಮ ಅಲ್ಲಿಯೇ ಜನಿಸಿದ ಎಂಬುದು ಹಿಂದುಗಳ ನಂಬಿಕೆ. ನಂಬಿಕೆಯು ವೈಯಕ್ತಿಕ ವಿಷಯ, ಹಿಂದೂಗಳು ಅಯೋಧ್ಯೆಯನ್ನು ರಾಮನ ಜನ್ಮಸ್ಥಾನ ಅಂತ ನಂಬಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಧಾರ್ಮಿಕ ಭಾವನೆಗಳಿವೆ. ಮುಸ್ಲಿಮರು ಆ ಜಾಗ ಬಾಬ್ರಿ ಮಸೀದಿಯದ್ದು ಅಂತಾರೆ. ಆದರೆ ರಾಮ ಅಲ್ಲಿ ಜನಿಸಿದ್ದ ಎಂಬ ಹಿಂದುಗಳ ನಂಬಿಕೆ ವಿವಾದರಹಿತವಾದದ್ದು. ಆದರೆ ಈ ಭೂಮಿ ಯಾರಿಗೆ ಸೇರಿದ್ದೆಂಬ ವ್ಯಾಜ್ಯವು ಸಂಪೂರ್ಣವಾಗಿ ಕಾನೂನಿಗೆ ಸಂಬಂಧಿಸಿದ್ದು. ಮಸೀದಿಗೆ ಹಾನಿ ಮಾಡಿದ್ದು, ಕಾನೂನು ಕೈಗೆ ತೆಗೆದುಕೊಂಡಿದ್ದೂ ಸರಿಯಲ್ಲ. ವಿವಾದಿತ ಜಾಗವನ್ನು ಮೂರು ಭಾಗ ಮಾಡಿದ್ದಕ್ಕೆ ಎಲ್ಲೆಡೆಯಿಂದಲೂ ವಿರೋಧವಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಸುಪ್ರೀಂಕೋರ್ಟ್‌ನ ಈ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಅಯೋಧ್ಯೆ ತೀರ್ಪು ನೀಡಲು ಗೊಗೊಯ್ ತನ್ನನ್ನು ತಾನು ಮಾರಾಟ ಮಾಡಿಕೊಂಡಿದ್ದಾರೆ ಎಂದು ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ಅವರು ಟೀಕಿಸಿದ್ದರು. ಭಾರತದ ನ್ಯಾಯಾಂಗದ ವ್ಯವಸ್ಥೆ ಬಗ್ಗೆ ಮುಸ್ಲಿಮರ ನಂಬಿಕೆಗೆ ಧಕ್ಕೆ ಉಂಟಾಗಿತ್ತು.
ಬಾಬರಿ ಮಸೀದಿ- ರಾಮಮಂದಿರ ಭೂ ವಿವಾದದ ಬಗ್ಗೆ ಅಂತಿಮ ತೀರ್ಪು ನೀಡಿದ್ದ ಪೀಠದಲ್ಲಿದ್ದ ಎಲ್ಲಾ ಜಡ್ಜ್‌ಗಳು ಕೂಡ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಅಂದಿನ ಸಿಜೆಐ ರಂಜನ್ ಗೊಗಯ್ ಅವರನ್ನು ರಾಜ್ಯಸಭೆಗೆ ಬಿಜೆಪಿ ನಾಮನಿರ್ದೇಶನ ಮಾಡಿತ್ತು. ಎಸ್‌ಎ ಬೋಬ್ಡೆ ಅವರು ನವೆಂಬರ್ 2019ರಿಂದ ಏಪ್ರಿಲ್ 2021ರ ನಡುವೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಡಿವೈ ಚಂದ್ರಚೂಡ್ ಅವರು ಭಾರತದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಪೀಠದಲ್ಲಿದ್ದ ಇನ್ನೋರ್ವ ಜಡ್ಜ್ ಅಬ್ದುಲ್ ನಜೀರ್ ಅವರು ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದಾರೆ.
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ರಂಜನ್ ಗೊಗಯ್ ಅವರಿಗೆ ‘ಅಸ್ಸಾಂ ಬೈಭವ’ ಪ್ರಶಸ್ತಿಯನ್ನು ಫೆಬ್ರವರಿ 10ರಂದು ನೀಡಲಾಗುವುದು ಎಂದು ಘೋಷಿಸಿದ್ದಾರೆ. ‘ಅಸ್ಸಾಂ ಬೈಭವ’ ಪ್ರಶಸ್ತಿಯನ್ನು ಮೂರು ವರ್ಷಗಳಿಂದ ನೀಡಲಾಗುತ್ತಿದೆ. ಮೊದಲ ವರ್ಷದಲ್ಲಿ ನಾವು ಅಸ್ಸಾಂ ಬೈಭವ ಪ್ರಶಸ್ತಿಯನ್ನು ರತನ್ ಟಾಟಾ ಅವರಿಗೆ ನೀಡಿದ್ದೇವೆ. ಕಳೆದ ವರ್ಷ ನಾವು ತಪನ್ ಸೈಕಿಯಾ ಅವರಿಗೆ ಈ ಪ್ರಶಸ್ತಿಯನ್ನು ನೀಡಿದ್ದೇವೆ. ಈ ಬಾರಿ ಅಸ್ಸಾಂ ಸರ್ಕಾರವು ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ‘ಅಸ್ಸಾಂ ಬೈಭವ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹಿಮಂತ ಬಿಸ್ವ ಶರ್ಮಾ ಅವರು ಹೇಳಿದ್ದಾರೆ.
ರಂಜನ್ ಗೊಗಯ್ ‘ಭಾರತದ ಮುಖ್ಯ ನ್ಯಾಯಮೂರ್ತಿಯಂತಹ’ ಅತ್ಯುನ್ನತ ಹುದ್ದೆ ಅಲಂಕರಿಸಿದ ಈಶಾನ್ಯದ ಮೊದಲ ನ್ಯಾಯಾಧೀಶರಾಗಿದ್ದಾರೆ. ಈ ಪ್ರಶಸ್ತಿಯು ನ್ಯಾಯದ ವಿತರಣೆಯನ್ನು ವಿಸ್ತರಿಸಲು ಮತ್ತು ನಮ್ಮ ನ್ಯಾಯಶಾಸ್ತ್ರವನ್ನು ಶ್ರೀಮಂತಗೊಳಿಸಲು ಅವರ ಅಸಾಧಾರಣ ಪ್ರಯತ್ನಗಳನ್ನು ಗುರುತಿಸಿ ನೀಡಲಾಗುತ್ತಿದೆ. ಇಂದು ಮತ್ತೊಮ್ಮೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸ್ಥಾಪಿಸಿದ್ದರೆ…., ಅದರ ಸ್ವಲ್ಪ ಕ್ರೆಡಿಟ್ ಅಸ್ಸಾಂಗೆ ಸಲ್ಲುತ್ತದೆ ಎಂದು ಕೂಡ ಶರ್ಮಾ ಹೇಳಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ.
ರಂಜನ್ ಗೊಗೊಯ್ ರಾಜ್ಯಸಭೆಗೆ ನಾಮನಿರ್ದೇಶನ:
ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ಕೆಲವೇ ದಿನಗಳಲ್ಲಿ ಗೊಗೊಯ್ ಅವರನ್ನು ಬಿಜೆಪಿ ರಾಜ್ಯಸಭೆಗೆ ನಾಮನಿರ್ದೇಶಗೊಳಿಸಿತ್ತು. ಈ ವೇಳೆ ಗೊಗೊಯ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಯೋಗೇಂದ್ರ ಯಾದವ್ ಅವರು, “ತಮ್ಮ ಮಾಲೀಕರಿಂದ ರಂಜನ್ ಗೋಗಾಯಿ ಅವರಿಗೆ ಯಾಕೆ ರಾಜ್ಯಸಭಾ ಸದಸ್ಯತ್ವದ ಭಕ್ಷೀಸು ಸಂದಾಯವಾಗಿದೆ ಎಂಬುದನ್ನು ತಿಳಿಯಬೇಕಾದರೆ ಇದನ್ನು ಗಮನಿಸಿ.. ತೀರಾ ನಾಚಿಕೆಗೇಡು” ಎಂದು ‘ದ ಕ್ಯಾರವಾನ್’ ಪತ್ರಿಕೆಯಲ್ಲಿ ಗೋಗಾಯಿ ಸರ್ಕಾರದ ಪರ ನೀಡಿದ್ದ ತೀರ್ಪುಗಳ ಪಟ್ಟಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
ಸ್ವತಃ ಸುಪ್ರೀಂಕೋರ್ಟ್ ವಕೀಲರಾಗಿದ್ದ ಕಪಿಲ್ ಸಿಬಲ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ನ್ಯಾ. ಎಚ್ ಆರ್ ಖನ್ನಾ ಅವರನ್ನು, ಅವರ ವ್ಯಕ್ತಿತ್ವದ ಬದ್ಧತೆ, ಸರ್ಕಾರದ ವಿರುದ್ಧದ ಗಟ್ಟಿ ನಿಲುವು, ನ್ಯಾಯವನ್ನು ಎತ್ತಿಹಿಡಿದ ದೃಢತೆಗಾಗಿ ನೆನಪಿಸಿಕೊಳ್ಳುತ್ತೇವೆ. ಹಾಗೇ ರಂಜನ್ ಗೋಗಾಯಿ ಅವರನ್ನು ಸರ್ಕಾರದಿಂದ ಬಚಾವಾದದ್ದಕ್ಕಾಗಿ, ಆ ಕೃತಜ್ಞತೆಗಾಗಿ ಸರ್ಕಾರದ ಸೇವೆಗೆ ನಿಂತದ್ದಕ್ಕಾಗಿ, ತನ್ನ ವೈಯಕ್ತಿಕ ಮತ್ತು ಒಟ್ಟಾರೆ ನ್ಯಾಯಾಂಗದ ಘನತೆಯ ವಿಷಯದಲ್ಲಿ ರಾಜಿ ಮಾಡಿಕೊಂಡದ್ದಕ್ಕಾಗಿ ನಾವು ರಾಜ್ಯಸಭಾ ಸದಸ್ಯತ್ವವನ್ನು ಬುಟ್ಟಿಗೆ ಹಾಕಿಕೊಂಡರು ಎಂದು ಸ್ಮರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದರು.
ರಂಜನ್ ಗೊಗೊಯ್ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಆರೋಪ:
ರಂಜನ್ ಗೊಗೊಯ್ ಅವರು ಭಾರತದ ಸುಪ್ರೀಂಕೋರ್ಟ್‌ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಸಿಜೆಐ ಆಗಿರುವ ವೇಳೆ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿತ್ತು. ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಸಿಜೆಐ ಓರ್ವರ ವಿರುದ್ಧ ಇದೇ ಮೊದಲ ಬಾರಿಗೆ ಲೈಂಗಿಕ ಕಿರುಕುಳದಂತಹ ಆರೋಪ ಕೇಳಿ ಬಂದಿತ್ತು.
ನ್ಯಾಯಾಲಯದ ಮಾಜಿ ಉದ್ಯೋಗಿ ತಾನು ಬರೆದ ಅಫಿಡವಿಟ್ ಪ್ರತಿಗಳನ್ನು ಸುಪ್ರೀಂಕೋರ್ಟ್‌ನ 22 ನ್ಯಾಯಮೂರ್ತಿಗಳ ನಿವಾಸಕ್ಕೆ ತಲುಪಿಸಿದ್ದರು. ಇದರಲ್ಲಿ ಆಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯಿ ತಮಗೆ ಲೈಂಗಿಕ ಶೋಷಣೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದರು. 2018ರ ಅಕ್ಟೋಬರ್‌ನಲ್ಲಿ ಗೊಗೋಯಿ ಸಿಜೆಐ ಆಗಿ ನೇಮಕಗೊಂಡ ಕೆಲವೇ ದಿನಗಳ ಬಳಿಕ ನಡೆದ ಘಟನೆಗಳು ಇವಾಗಿತ್ತು. ಮುಖ್ಯ ನ್ಯಾಯಮೂರ್ತಿಗಳ ಲೈಂಗಿಕ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಕೆಲಸ ಕಳೆದುಕೊಳ್ಳುವುದು, ಬಂಧನ, ಪೊಲೀಸರಿಂದ ಹಿಂಸೆಯಂತಹ ನಿರಂತರ ಕಿರುಕುಳದ ಘಟನೆಗಳನ್ನು ನನ್ನ ಕುಟುಂಬ ಅನುಭವಿಸಬೇಕಾಯಿತು ಎಂದು ಆಕೆ ದೂರಿದ್ದರು. ಸಿಜೆಐ ತಮ್ಮ ಸ್ಥಾನವನ್ನು, ಕಚೇರಿ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮತ್ತು ಪೋಲಿಸರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಅವರು ಆರೋಪಿಸಿದ್ದರು. 2019ರಲ್ಲಿ ದಾಖಲಿಸಲಾಗಿದ್ದ ಈ ಕುರಿತ ಸುಮೋಟೋ ಕೇಸ್ 2021ರಲ್ಲಿ ಮುಕ್ತಾಯಗೊಂಡಿತ್ತು.
ಇದನ್ನು ಓದಿ: ದಲಿತ ಯುವಕನಿಗೆ ಥಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ: ಅಮಾನವೀಯ ಘಟನೆ ವರದಿ


