ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರ ಜೀವನದ ಮೇಲೆ ಬರೆ ಬಿದ್ದಿದೆ. ಮೂರು ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಬೀದಿಗಿಳಿದಿದ್ದಾರೆ. ಈ ನಡುವೆಯೇ ರಸಗೊಬ್ಬರ ಬೆಲೆ ಹೆಚ್ಚಿಸಿ ಮತ್ತಷ್ಟು ಹೊರೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋಆಪರೇಟಿವ್ ಲಿಮಿಟೆಡ್ (ಇಫ್ಕೊ) ಇತ್ತೀಚೆಗೆ ನೀಡಿರುವ ನೋಟಿಸ್ ಪ್ರಕಾರ, ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) 1.200 ರೂ.ಗಳು ಇದದ್ದು, 1,900 ರೂಗಳಿಗೆ ಏರಿಕೆಯಾಗಿದೆ. ಏಕಾಏಕಿ 700 ರೂಪಾಯಿಗಳನ್ನು ಏರಿಕೆ ಮಾಡಿರುವ ಕ್ರಮಕ್ಕೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ಜೊತೆಗೆ, ಇತರ ಉತ್ಪನ್ನಗಳ ಬೆಲೆಯೂ ಹೆಚ್ಚಾಗಿದೆ.
ರಸಗೊಬ್ಬರದ ಬೆಲೆ ಹೆಚ್ಚಳವನ್ನು ವಿರೋಧಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, “ಈ ಹೆಚ್ಚಳವು ರೈತರ ಮೇಲೆ ನೇರ ದಾಳಿಯಾಗಿದ್ದು, ದುಬಾರಿ ಬೆಲೆಯಲ್ಲಿ ಡಿಎಪಿ ಖರೀದಿಸಲು ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ. ಸರ್ಕಾರದ ಈ ಕ್ರಮವನ್ನು ಯೂನಿಯನ್ ತೀವ್ರವಾಗಿ ಖಂಡಿಸುತ್ತದೆ. ಬೆಲೆ ಕಡಿಮೆಯಾಗದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ’ ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ರೈತ ಹೋರಾಟ: ಹುತಾತ್ಮ ಸ್ಮಾರಕಕ್ಕೆ ಸೇರಿದ ದೇಶದ 23 ರಾಜ್ಯಗಳ 1,500 ಹಳ್ಳಿಗಳ ಮಣ್ಣು
1,200 ರೂ ಇದ್ದ ಡಿಎಪಿ ಗೊಬ್ಬರ ಈಗ 1900 ಅಂದರೆ 700 ರೂ. ಏರಿಕೆ. ಇಫ್ಕೋ ಗೊಬ್ಬರ 1,185 ರೂ. ಇದದ್ದು 1,800 ರೂಪಾಯಿಯಾಗಿದೆ.ಅಂದರೆ 615 ರೂ. ಏರಿಕೆಯಾಗಿದೆ. 20-20 ಗೊಬ್ಬರವನ್ನು 425 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 925 ರಿಂದ 1350 ರೂ.ಏರಿಕೆಯಾಗಿದೆ.
ರಸಗೊಬ್ಬರವನ್ನು ಒಂದೇ ಬಾರಿ ಈ ಪ್ರಮಾಣದಲ್ಲಿ ಬೆಲೆ ಏರಿಸಿದ ಇತಿಹಾಸವಿಲ್ಲ. ಇದು ರೈತರಿಗೆ ಬಹು ದೊಡ್ಡ ಹೊಡೆತ. ಬೆಲೆ ಏರಿಕೆಗಳ ನಡುವೆ ಜನಸಾಮಾನ್ಯರ ಮೇಲೆ ಸವಾರಿ ಮಾಡುತ್ತಿದೆ ಕೇಂದ್ರ ಸರ್ಕಾರ. ಬೆನ್ನೆಲುಬು ಅಂತಲೇ ರೈತನ ಬೆನ್ನೆಲುಬು ಮುರಿದಿದೆ. ಇವೆಲ್ಲಾ ಬೆಳವಣಿಗೆಗಳು ನಿರೀಕ್ಷಿತ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಸ್ತಾನಿರುವ ಗೊಬ್ಬರವನ್ನು ಹಳೆಯ ದರಕ್ಕೆ ಮಾರಾಟ ಮಾಡಲಾಗುವುದು. ಹೊಸ ರಸಗೊಬ್ಬರ ಉತ್ಪನ್ನಕ್ಕೆ ಹೊಸ ದರ ಅನ್ವಯವಾಗಲಿದೆ ಎಂದು ಕೇಂದ್ರದ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಗಳ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಇಫ್ಕೊ ಭಾರತದ ಅತಿದೊಡ್ಡ ಸಹಕಾರಿ ಸಂಘಗಳಲ್ಲಿ ಒಂದಾಗಿದ್ದು, ಇದು ಸಂಪೂರ್ಣವಾಗಿ ಭಾರತೀಯ ಸಹಕಾರಿ ಸಂಸ್ಥೆಗಳ ಒಡೆತನದಲ್ಲಿದೆ. ಇಫ್ಕೋ ವೆಬ್‌ಸೈಟ್‌ನ ಪ್ರಕಾರ ದಕ್ಷ ರಸಗೊಬ್ಬರಗಳ ಸಮತೋಲನ ಬಳಕೆಯ ಮೂಲಕ ರೈತರ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡಿ, ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳುತ್ತದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ’ಇಫ್ಕೋ ಮಾಡಿರುವ ಬೆಲೆಗಳ ಹೆಚ್ಚಳವು ರೈತರಿಗೆ ಯಾವುದೇ ರೀತಿಯಲ್ಲಿ ಸಹಾಯವಾಗುವುದಿಲ್ಲ. ಎಲ್ಲಾ ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡದಿದ್ದರೆ ಚಳುವಳಿ ಮತ್ತಷ್ಟು ತೀವ್ರಗೊಳ್ಳುತ್ತದೆ’ ಎಂದು ಇಫ್ಕೊ ಮತ್ತು ಸರ್ಕಾರಕ್ಕೆ ಎಸ್‌ಕೆಎಂ ಎಚ್ಚರಿಕೆ ನೀಡಿದೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 134ನೇ ದಿನಕ್ಕೆ ಕಾಲಿಟ್ಟಿದೆ. ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಲಕ್ಷಾಂತರ ರೈತರು ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರವನ್ನು ಮುರಿಯಲು ಪ್ರಯತ್ನಿಸುತ್ತಿರುವ ಸರ್ಕಾರ?; ಗೃಹ ಸಚಿವ ಹೇಳಿದ್ದೇನು?



Too high