ರಾಹುಲ್ ಗಾಂಧಿ
PC: Deccan Chronicle

ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ನಡುವೆ ಲಸಿಕೆ ಅಭಿಯಾನವು ನಡೆಯುತ್ತಿದೆ. ಲಸಿಕೆ ಕೊರತೆ ಬಗ್ಗೆ ರಾಜ್ಯಗಳು ಪದೇ ಪದೇ ಹೇಳುತ್ತಿದ್ದರೂ ಲಸಿಕೆ ಕೊರತೆ ಆಗಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ. ಈ ನಡುವೆ ಲಸಿಕೆ ಅಭಿಯಾನದ ಭಾಗವಾಗಿ ಏಪ್ರಿಲ್ 11 ರಿಂದ 14 ರ ವರೆಗೆ ಲಸಿಕೆ ಉತ್ಸವ ನಡೆಸಲು ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ.

ಲಸಿಕೆ ಉತ್ಸವಕ್ಕೆ ಕರೆ ನೀಡಿರುವ ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. “ಕೊರೊನಾ ವಿರುದ್ಧ ಲಸಿಕೆ ಪ್ರಮಾಣಗಳ ಕೊರತೆಯು ಗಂಭೀರ ವಿಷಯವಾಗಿದೆ. ಇದು ಉತ್ಸವ ಅಲ್ಲ” ಎಂದು ಪ್ರಧಾನಿ ಮೋದಿ ಕರೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನಡೆಸಿದ ಸಭೆಯಲ್ಲಿ ಉತ್ಸವ ನಡೆಸಲು ಕರೆ ನೀಡಲಾಗಿತ್ತು. ಲಸಿಕೆ ಕೊರತೆ ಹಿನ್ನೆಲೆ ದೇಶದಲ್ಲೇ ಅತಿಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಲಸಿಕಾ ಕೇಂದ್ರಗಳಿಗೆ ಬೀಗ ಹಾಕಲಾಗಿದೆ. ಜೊತೆಗೆ ಕೇಂದ್ರ ಸರ್ಕಾರ ಮಹಾರಾಷ್ಟ್ರ ವಿಚಾರದಲ್ಲಿ ತಾರತಮ್ಯ ನಡೆಸುತ್ತಿದೆ ಎಂದು ಮಹಾರಾಷ್ಟ್ರ ಆರೋಪಿಸಿದೆ. ಇಂತಹ ಸಮಯದಲ್ಲಿ ಪ್ರಧಾನಿಗಳು ಉತ್ಸವದ ಮಾತನಾಡಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣ: ಕೇಂದ್ರದ ಜಾಣ ಕುರುಡು, ನೂರಾರು ಲಸಿಕಾ ಕೇಂದ್ರಗಳಿಗೆ ಬೀಗ

ಇಂದು ಬೆಳಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಕೊರೊನಾ ಸಾಂಕ್ರಾಮಿಕ ಹೆಚ್ಚುತ್ತಿರುವ ಈ ಬಿಕ್ಕಟ್ಟಿನಲ್ಲಿ ಲಸಿಕೆ ಕೊರತೆಯು ಬಹಳ ಗಂಭೀರ ಸಮಸ್ಯೆಯಾಗಿದೆ, ‘ಉತ್ಸವ’ ಅಲ್ಲ” ಎಂದಿದ್ದಾರೆ. ದೇಶದ ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳುವ ಮೂಲಕ ಲಸಿಕೆಗಳನ್ನು ರಫ್ತು ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದ ವಿಚಾರದಲ್ಲಿ ಕೇಂದ್ರ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಕೇಂದ್ರ ಸರ್ಕಾರ ಪಕ್ಷಪಾತವಿಲ್ಲದೆ ಎಲ್ಲ ರಾಜ್ಯಗಳಿಗೆ ಸಹಾಯ ಮಾಡಬೇಕು. ನಾವೆಲ್ಲರೂ ಒಟ್ಟಾಗಿ ಈ ಸಾಂಕ್ರಾಮಿಕವನ್ನು ಸೋಲಿಸಬೇಕು” ಎಂದಿದ್ದಾರೆ.

ಕೇಂದ್ರವು ಮಹಾರಾಷ್ಟ್ರದ ವಿರುದ್ಧ ಏಕೆ ತಾರತಮ್ಯ ಮಾಡುತ್ತಿದೆ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ಪ್ರಶ್ನಿಸಿದ್ದರು. ಜನಸಂಖ್ಯೆಯ ಪ್ರಕಾರ ರಾಜ್ಯಕ್ಕೆ ವಾರಕ್ಕೆ 40 ಲಕ್ಷ ಡೋಸ್ ಮತ್ತು ತಿಂಗಳಿಗೆ 1.6 ಕೋಟಿ ಲಸಿಕೆಗಳು ಬೇಕಾಗುತ್ತವೆ. ಇನ್ನು “ಮಹಾರಾಷ್ಟ್ರವು ಗುಜರಾತ್ ಜನಸಂಖ್ಯೆಗಿಂತ ದುಪ್ಪಟ್ಟು ಜನಸಂಖ್ಯೆಯನ್ನು ಹೊಂದಿದೆ. ಆದರೂ ಗುಜರಾತ್ ಮತ್ತು ನಮ್ಮ ರಾಜ್ಯಕ್ಕೆ ಸರಿ ಸಮಾನವಾಗಿ ಒಂದು ಕೋಟಿ ಡೋಸ್ ಸಿಕ್ಕಿದೆ” ಎಂದಿದ್ದರು.

ಹೆಚ್ಚು ಸಕ್ರಿಯ ಪ್ರಕರಣಗಳಿರುವ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿನ ಲಸಿಕೆ ಕೇಂದ್ರಗಳು  ಸ್ಥಗಿತಗೊಳ್ಳುತ್ತಿವೆ ಮತ್ತು ಸರಬರಾಜು ಮುಗಿಯುತ್ತಿದ್ದಂತೆ ಜನರನ್ನು ವಾಪಸ್ ಕಳಿಸಲಾಗುತ್ತಿದೆ ಇಂತಹ ಸಮಯದಲ್ಲಿಯೂ ಲಸಿಕೆಗಳ ರಫ್ತು ಕುರಿತು ಕಾಂಗ್ರೆಸ್ ಸಂಸದರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ವ್ಯಾಕ್ಸಿನೇಷನ್‌ ಕೇಂದ್ರಗಳಲ್ಲಿ ಜನ ಲಸಿಕೆಯಿಲ್ಲದೆ ಹಿಂತಿರುಗುತ್ತಿದ್ದಾರೆ : ಮಹಾರಾಷ್ಟ್ರ ಆರೋಗ್ಯ ಸಚಿವ