ಅದಾನಿ ಗ್ರೂಪ್ ಕೃತಕವಾಗಿ ತನ್ನ ಕಂಪನಿಗಳ ಶೇರುಗಳ ಬೆಲೆಗಳನ್ನು ಹೆಚ್ಚಿಸಿದೆ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ಯೋಜನೆ (ಒಸಿಸಿಆರ್‌ಪಿ)ಯು ಗುರುವಾರ ಆರೋಪಿಸಿದೆ. ಈ ಹೊಸ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
INDIA ಸಭೆಗೂ ಮುನ್ನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ”ಅದಾನಿ ಕುರಿತು ವಿದೇಶಿ ಪತ್ರಿಕೆಗಳು ಪ್ರಕಟಿಸಿದ ಲೇಖನಗಳನ್ನು ಉಲ್ಲೇಖಿಸಿ, ಇವು ಯಕಶ್ಚಿತ್ ಪತ್ರಿಕೆಗಳಲ್ಲ, ಈ ಪತ್ರಿಕೆಗಳು ಭಾರತದಲ್ಲಿ ಹೂಡಿಕೆ ಮಾಡುವುದರ ಮೇಲೆ ಮತ್ತು ಪ್ರಪಂಚದ ಉಳಿದ ಭಾಗಗಳಲ್ಲಿ ಭಾರತದ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತವೆ. ಒಂದು ಶತಕೋಟಿ ಡಾಲರ್‌ಗೂ ಹೆಚ್ಚು ಹಣ ಭಾರತದಿಂದ ಹೋಗಿದೆ” ಎಂದು ಅವರು ಹೇಳಿದರು.
“ಮೊದಲ ಪ್ರಶ್ನೆ ಉದ್ಭವಿಸುತ್ತದೆ – ಇದು ಯಾರ ಹಣ? ಇದು ಅದಾನಿಯವರದ್ದೋ ಅಥವಾ ಬೇರೆಯವರದ್ದೋ? ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಇದರ ಹಿಂದಿನ ಮಾಸ್ಟರ್ ಮೈಂಡ್. ಈ ಹಣದ ದಂಧೆಯಲ್ಲಿ ಇನ್ನಿಬ್ಬರು ಭಾಗಿಯಾಗಿದ್ದಾರೆ. ಒಬ್ಬರು ನಾಸಿರ್ ಅಲಿ ಶಾಬಾನ್ ಅಹ್ಲಿ, ಇನ್ನೊಬ್ಬರು ಚಾಂಗ್ ಚುಂಗ್ ಲಿಂಗ್ ಎಂಬ ಚೀನಾದ ವ್ಯಕ್ತಿ” ಎಂದು ಅವರು ಹೇಳಿದರು.
”ಎರಡನೆಯ ಪ್ರಶ್ನೆ ಉದ್ಭವಿಸುತ್ತದೆ – ಈ ಇಬ್ಬರು ವಿದೇಶಿ ಪ್ರಜೆಗಳಿಗೆ ಭಾರತದ ಬಹುತೇಕ ಎಲ್ಲಾ ಮೂಲಸೌಕರ್ಯಗಳನ್ನು ನಿಯಂತ್ರಿಸುವ ಕಂಪನಿಗಳೊಂದಿಗೆ ಆಟವಾಡಲು ಏಕೆ ಅನುಮತಿಸಲಾಗಿದೆ?” ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
”ಸೆಬಿ ತನಿಖೆ ನಡೆಸಿ ಅದಾನಿ ಗ್ರೂಪ್‌ಗೆ ಕ್ಲೀನ್ ಚಿಟ್ ನೀಡಿದ ಮಹಾನುಭಾವರು ಈಗ ಅದೇ ಗುಂಪಿನ ಮಾಲೀಕತ್ವದ ಮಾಧ್ಯಮ ಕಂಪನಿಯಲ್ಲಿ ನಿರ್ದೇಶಕರಾಗಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು.
”ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನವಾಗಿದ್ದಾರೆ? ಅವರು ಈ ವಿಷಯವನ್ನು ಏಕೆ ತನಿಖೆ ಮಾಡುತ್ತಿಲ್ಲ?” ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ.
”ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ವಾರ ನಡೆಯಲಿರುವ ಜಿ 20 ಶೃಂಗಸಭೆಗೆ ಮುಂಚಿತವಾಗಿ ಭಾರತದ ಪ್ರತಿಷ್ಠೆ ಅಪಾಯದಲ್ಲಿದೆ. ಪ್ರಧಾನಿ ಮೋದಿ ಅವರು ಈ ವಿಷಯವನ್ನು ಪರಿಶೀಲಿಸಬೇಕು” ಎಂದು ಹೇಳಿದರು.
ಬಿಲಿಯನೇರ್ ಗೌತಮ್ ಅದಾನಿ ಅವರ ಸಮೂಹವು ಗುರುವಾರ 2013 ರಿಂದ 2018 ರ ಅವಧಿಯಲ್ಲಿ ಕೃತಕವಾಗಿ ತನ್ನ ಕಂಪನಿಗಳ ಶೇರುಗಳ ಬೆಲೆಗಳನ್ನು ಹೆಚ್ಚಿಸಿದೆ ಎಂದು ಮಾರಿಷಸ್ ಮೂಲದ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ಯೋಜನೆ (ಒಸಿಸಿಆರ್‌ಪಿ)ಯು ಗುರುವಾರ ಆರೋಪಿಸಿದೆ.
ಇದನ್ನೂ ಓದಿ: ಗೌತಮ್ ಅದಾನಿಗೆ ಮತ್ತೆ ಸಂಕಷ್ಟ: ಕೃತಕವಾಗಿ ಶೇರುಗಳ ಬೆಲೆ ಹೆಚ್ಚಿಸಿದ ಅದಾನಿ ಗ್ರೂಪ್- ಒಸಿಸಿಆರ್‌ಪಿ ಆರೋಪ


