ಪರಿಸರ ಪೂರ್ವಾನುಮತಿ (Environment clearance) ಇಲ್ಲದೆ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ವಿನಾಯಿತಿ ನೀಡುವ ಅಧಿಕಾರ ರಾಜ್ಯಕ್ಕೆ ಇಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಹೇಳಿದೆ.
ಪರಿಹಾರ ಪಾವತಿಯ ಆಧಾರದ ಮೇಲೆ ಪರಿಸರ ಪೂರ್ವಾನುಮತಿ ಇಲ್ಲದೆ ಕೈಗಾರಿಕೆಗಳು ಕಾರ್ಯನಿರ್ವಹಿಸಲು ರಾಜ್ಯವು ಅನುಮತಿ ನೀಡುವಂತಿಲ್ಲ. ಪರಿಸರ ಪೂರ್ವಾನುಮತಿ ಶಾಸನಬದ್ಧ ಆದೇಶವಾಗಿರುವುದರಿಂದ, ಅದನ್ನು ಪಾಲಿಸಬೇಕು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಸೆಪ್ಟೆಂಬರ್ 14, 2006 ರ ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಅಧಿಸೂಚನೆಯಡಿಯಲ್ಲಿ ಪೂರ್ವಾನುಮತಿ ಅಗತ್ಯವಿದೆ ಎಂದು ಹಸಿರು ನ್ಯಾಯಪೀಠ ಹೇಳಿದೆ. ಜೊತೆಗೆ ಕಾನೂನಿನ ಆದೇಶವನ್ನು ಉಲ್ಲಂಘಿಸಿ ಅಂತಹ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡುವುದು ಸಮರ್ಥನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಫಾರ್ಮಾಲ್ಡಿಹೈಡ್ (formaldehyde) ತಯಾರಕರಿಗೆ ಪರಿಸರಪೂರ್ವಾನುಮತಿ ಇಲ್ಲದೆ ಆರು ತಿಂಗಳ ಕಾಲ ಕಾರ್ಯನಿರ್ವಹಿಸಲು ಅನುಮತಿ ನೀಡಿರುವ ಹರಿಯಾಣ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ದಸ್ತಕ್ ಎನ್‌ಜಿಒ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಪಿಜ್ಜಾ, ಬರ್ಗರ್, ಸ್ಮಾರ್ಟ್‌ಫೋನ್ ಮನೆ ಬಾಗಿಲಿಗೆ ಬರುವುದಾದರೇ, ಪಡಿತರವೇಕೆ ಬೇಡ? ಕೇಂದ್ರಕ್ಕೆ ಕೇಜ್ರಿವಾಲ್ ಪ್ರಶ್ನೆ


