ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೆ, ಸಾಮಾಜಿಕ ನ್ಯಾಯದಡಿ ಒಳಮೀಸಲಾತಿ ನೀಡುವ ನಿಟ್ಟಿನಲ್ಲಿ ಸಂವಿಧಾನದ 341(3) ನೇ ವಿಧಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಅಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಜೆಸಿ ಮಾಧುಸ್ವಾಮಿ ನೇತೃತ್ವದಲ್ಲಿ ಉಪ ಸಮಿತಿ ರಚಿಸಿ, ಮೀಸಲಾತಿ ವರ್ಗೀಕರಣ ಮಾಡಲಾಗಿತ್ತು. ಆದರೆ, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದ್ದ ನ್ಯಾ. ಸದಾಶಿವ ಆಯೋಗದ ವರದಿಗೆ ಬಿಜೆಪಿ ಹೆಚ್ಚಿನ ಮಹತ್ವ ನೀಡಿರಲಿಲ್ಲ.
ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲೇಬೇಕು ಎಂದು ಪರಿಶಿಷ್ಟ ಬಲಗೈ ಸಮುದಾಯದ ಸಚಿವರು ಮತ್ತು ಶಾಸಕರು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಳ ಮೀಸಲಾತಿ ವಿವಾದ ಮುನ್ನೆಲೆಗೆ ಬಂದಿದ್ದಾಗ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೊಳಿಸಲಾಗುವುದು’ ಎಂದು ಕೈ ಮುಖಂಡರು ಭರವಸೆಯನ್ನು ನೀಡಿದ್ದರು.
ಅಂತಿಮವಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ ವಿವಿಧ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇನ್ನು ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದು, ‘ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಗ್ಗೆ ಒಂದು ಅಂತಿಮ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ಹಿಂದಿನ ಸರ್ಕಾರದಲ್ಲಿ ಚಿತ್ರದುರ್ಗ ಸಮಾವೇಶದಲ್ಲಿ ಸದಾಶಿವ ಆಯೋಗ ಬಗ್ಗೆ ನಿರ್ಣಯ ಕೈಗೊಳ್ಳಲು ತೀರ್ಮಾನ ಮಾಡಿದ್ದೆವು. ನಂತರ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಸದಾಶಿವ ಆಯೋಗದ ವರದಿಯನ್ನೇ ತಿರಸ್ಕಾರ ಮಾಡಿದ್ರು. ಕಾನೂನಾತ್ಮಕವಾಗಿ ಒಳ ಮೀಸಲಾತಿ ಕೊಡಬೇಕಾಗುತ್ತದೆ. ನಾವೇ ಸಂವಿಧಾನಕ್ಕೆ ತಿದ್ದುಪಡಿ ತರಲು ಆಗಲ್ಲ. ಹಾಗಾಗಿ ಕೇಂದ್ರಕ್ಕೆ ಸಂವಿಧಾನ ತಿದ್ದುಪಡಿ ಮಾಡಲು ಶಿಫಾರಸು ಕಳಿಸುವ ಬಗ್ಗೆ ಇವತ್ತಿನ ಸಂಪುಟ ಸಭೆಯಲ್ಲಿ ಚರ್ಚಿಸ್ತೇವೆ’ ಎಂದು ಸಭೆಗೂ ಮುನ್ನ ಹೇಳಿದ್ದರು.
ಸಂಪುಟ ಸಭೆ ನಂತರ ಮಾತನಾಡಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ, ‘ಕಳೆದ ಎರಡು ದಶಕಗಳಿಂದ ದಲಿತ ಸಮುದಾಯದ ಒಳಪಂಗಡಗಳು ಒಳಮೀಸಲಾತಿಗೆ ಬೇಡಿಕೆ ಇಟ್ಟಿದ್ದವು. ಚಿತ್ರದುರ್ಗದಲ್ಲಿ ಎಸ್‌ಸಿ-ಎಸ್‌ಟಿ ಸಮಾವೇಶದಲ್ಲಿ ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ಆದರೆ, ಬಿಜೆಪಿ ಸರ್ಕಾರ ತರಾತುರಿಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಿ ಸದಾಶಿವ ಆಯೋಗದ ವರದಿ ಅಪ್ರಸ್ತುತ ಎಂದು ಶಿಫಾರಸು ಮಾಡಿತ್ತು’ ಎಂದು ಹೇಳಿದರು.
‘ಪರಿಶಿಷ್ಟ ಸಮುದಾಯದ 101 ಜಾತಿಗಳ ಹಿತ ಕಾಪಾಡಲು ಯಾರನ್ನು ಹೊರಗಡೆ ಬಿಡುವ ಪ್ರಶ್ನೆ ಇಲ್ಲ. ಈ ನಿಟ್ಟಿನಲ್ಲಿ 341(3) ಗೆ ತಿದ್ದುಪಡಿ ಮಾಡದೆ ಒಳಮೀಸಲಾತಿ ಕೊಡಲು ಸಾಧ್ಯ ಇಲ್ಲ. ಆದ್ದರಿಂದ, ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಂಪುಟ ಸಭೆ ನಿರ್ಧರಿಸಿದೆ ಎಂದು ತಿಳಿಸಿದರು.
ಒಳ ಮೀಸಲಾತಿ ಜಾರಿ ಕಾಂಗ್ರೆಸ್-ಬಿಜೆಪಿ ಜವಾಬ್ದಾರಿ:
ಹಲವು ವರ್ಷಗಳಿಂದ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಹೋರಾಟವನ್ನು ಮುನ್ನಡೆಸುತ್ತಿರುವ ಅಂಬಣ್ಣ ಅರೋಲಿಕರ್ ನಾನುಗೌರಿ.ಕಾಂ ಜತೆ ಮಾತನಾಡಿ, ‘ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಒಳ ಮೀಸಲಾತಿ ಜಾರಿ ಮಾಡಿಸುವ ಜವಾಬ್ದಾರಿ ಆಡಳಿ ಪಕ್ಷ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾದ ಬಿಜೆಪಿ ಎರಡರ ಮೇಲೂ ಇದೆ’ ಎಂದು ಹೇಳಿದರು.
‘ಬಿಜೆಪಿ ಸರ್ಕಾರ ಕಳೆದ ಮಾರ್ಚ್ ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ ಎಂದು ಸುಳ್ಳು ಹೇಳಿತ್ತು. ನ್ಯಾ. ಸದಾಶಿವ ಆಯೋಗದ ವರದಿಯನ್ನು ಬದಿಗೆ ಸರಿಸಿ, ಸಂಪುಟ ಉಪ ಸಮಿತಿ ರಚಿಸಿತ್ತು. ಒಳ ಮೀಸಲಾತಿ ಜಾರಿಗೆ ಮುಂದಾಗಿರುವ ಪಂಜಾಬ್, ಆಂಧ್ರಪ್ರದೇಶ ಯಾವ ರಾಜ್ಯದಲ್ಲೂ ಈ ರೀತಿ ಮಾಡಿರಲಿಲ್ಲ. ಆಯೋಗ ನೀಡಿದ ವರದಿಯನ್ನೇ ಪರಿಗಣಿಸಿದ್ದವು’ ಎಂದರು.

‘ಬಿಜೆಪಿಯ ಈ ತಪ್ಪನ್ನು ಸರಿಪಡಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ನಮ್ಮ ಒತ್ತಡ ಹೆಚ್ಚಾದ ನಂತರ ನ್ಯಾ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಪರಸು ಮಾಡಿದೆ. ಈ ವಿಚಾರದಲ್ಲಿ ಆಡಳಿತ ಹಾಗೂ ವಿಪಕ್ಷಗಳೆರಡರ ಪಾತ್ರ ಬಹಳ ಮುಖ್ಯವಾಗಿದೆ. ಕಾಂಗ್ರೆಸ್-ಬಿಜೆಪಿ ಸೇರಿ ಸಂಸತ್ತಿನಲ್ಲಿ ಅಂಗೀಕಾರ ಆಗುವಂತೆ ಮಾಡಬೇಕು. ಸುಪ್ರೀಂಕೋರ್ಟಿನಲ್ಲಿ ಅರ್ಜಿ ಬಾಕಿ ಇವೆ ಎಂದು ಹೇಳುತ್ತಾರೆ; ಆದರೆ, ನಮ್ಮ ದೇಶದ ಸಂಸತ್ತಿಗೆ ಪರಮಾಧಿಕಾರ ಇದೆ. ಅಲ್ಲಿ ನಿರ್ಧಾರ ಮಾಡಲೇಬೇಕು. ಆರ್ಥಿಕ ಹಿಂದುಳಿದ ವರ್ಗ (ಇಡಬ್ಲ್ಯೂಎಸ್)ಕ್ಕೆ ಮೀಸಲಾತಿ ಜಾರಿ ಮಾಡಿದಂತೆ ಒಳ ಮೀಸಲಾತಿಯೂ ಜಾರಿಯಾಗಬೇಕು. ಯಾವುದೇ ಹೋರಾಟ, ಬೇಡಿಕೆ, ಕಾಯುವಿಕೆ ಏನೂ ಇಲ್ಲದೆ ಅವರಿಗೆ ಮೀಸಲಾತಿ ನೀಡಲಾಗಿದೆ’ ಎಂದರು.
ಒಳ ಮೀಸಲಾತಿ ಜಾರಿಗೆ ಮೂರು ದಿನ.. ಮೂರು ತಿಂಗಳ ಮಾಡಬಾರದು. ಈಗಾಗಲೇ 30 ವರ್ಷಗಳಿಂದ ಸಮುದಾಯದ ಒಂದಿಡೀ ತಲೆಮಾರು ಸರ್ಕಾರಿ ಉದ್ಯೋಗದಿಂದ ಹಿಡಿದು, ಹಲವು ರೀತಿಯಲ್ಲಿ ವಂಚಿತವಾಗಿದೆ. ಆದ್ದರಿಂದ ವಿಪಕ್ಷವಾದ ಬಿಜೆಪಿ ಮತ್ತು ಆಡಳಿತ ಪಕ್ಷವಾದ ಕಾಂಗ್ರೆಸ್ ಮುತುವರ್ಜಿ ತೆಗದುಕೊಂಡು, ಕೇಂದ್ರ ಸರ್ಕಾರ ಒಳ ಮೀಸಲಾತಿ ಜಾರಿಗೆ ತಿದ್ದುಪಡಿ ತರುವಂತೆ ನೋಡಿಕೊಳ್ಳಬೇಕು’ ಎಂದು ಅಂಬಣ್ಣ ಆಗ್ರಹಿಸಿದರು.
ಇದನ್ನೂ ಓದಿ; ‘ಅನ್ನಪೂರ್ಣಿ’ ವಿವಾದ: ಹಿಂದುತ್ವವಾದಿಗಳ ಒತ್ತಡಕ್ಕೆ ಮಣಿದ ನಯನತಾರಾ, ಬಹಿರಂಗ ಕ್ಷಮೆಯಾಚನೆ


