ಹಾಸನದ ಪೆನ್‌ಡ್ರೈವ್ ವೈರಲ್ ಕೇಸ್ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ದೇಶದಲ್ಲಿ ಭಾರೀ ಸುದ್ದಿಯಾಗಿತ್ತು, ಇದೀಗ ಈ ಸುದ್ದಿ ಅಂತರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲೂ ವರದಿಯಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಓದುಗರನ್ನು, ವೀಕ್ಷಕರನ್ನು ಹೊಂದಿರುವ ಬಿಬಿಸಿ ಹಾಗೂ ಅಲ್‌ಜಝೀರಾ ಸುದ್ದಿ ಮಾಧ್ಯಮಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಜ್ವಲ್ ಪ್ರಕರಣದ ಬಗ್ಗೆ ವಿವರವಾದ ವರದಿ ಪ್ರಕಟಿಸಿವೆ.
ಅಲ್‌ಜಝೀರಾ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ವರದಿಯಲ್ಲಿ 33 ವರ್ಷದ ಪ್ರಜ್ವಲ್ ಚಿತ್ರೀಕರಿಸಿದ ಸುಮಾರು 3,000 ವೀಡಿಯೋಗಳ ಸೋರಿಕೆಯಾಗಿದೆ, ಬಹುಪಾಲು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳವನ್ನು ವಿಡಿಯೋ ತೋರಿಸುತ್ತಿದೆ, ಇದು ಚುನಾವಣೆಯ ಹೊಸ್ತಿಲಲ್ಲಿ ಎನ್‌ಡಿಎ ವಿರುದ್ಧ ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ ಎಂದು ಉಲ್ಲೇಖಿಸಿದೆ.
ಪ್ರಜ್ವಲ್ ವಿರುದ್ಧದ ಆರೋಪಗಳು ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಥವಾ ರಾಷ್ಟ್ರೀಯವಾಗಿ ಪ್ರಧಾನಿಗೆ ಹಾನಿಯನ್ನುಂಟುಮಾಡುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ. ಬಿಜೆಪಿ ಪಕ್ಷ ಮತ್ತು ಮೋದಿಯ ಮತದಾರರು ಇದನ್ನು ನಿರ್ಲಕ್ಷಿಸುತ್ತಾರೆ ಎಂದು ಲೇಖಕ ಮತ್ತು ರಾಜಕೀಯ ವಿಶ್ಲೇಷಕ ರಶೀದ್ ಕಿದ್ವಾಯಿ ಹೇಳಿಕೆಯನ್ನು ಅಲ್ ಜಝೀರಾ ಉಲ್ಲೇಖಿಸಿದೆ. 2023ರಲ್ಲಿ ಭಾರತದ ಕುಸ್ತಿ ಫೆಡರೇಶನ್ ಮುಖ್ಯಸ್ಥರಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೇಶದ ಹಲವು ಪ್ರಮುಖ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರೂ, ಸಿಂಗ್ ಜಾಮೀನಿನ ಮೇಲೆ ಈಗ ಸ್ವತಂತ್ರವಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಪ್ರಜ್ವಲ್ ರೇವಣ್ಣ: ಕರ್ನಾಟಕದ ಸಂಸದರ ‘ಲೈಂಗಿಕ ದೌರ್ಜನ್ಯ’ ವಿಡಿಯೋ ವಿರುದ್ಧ ಆಕ್ರೋಶ’ ಎಂಬ ಶೀರ್ಷಿಕೆಯಲ್ಲಿ ಲಂಡನ್ ಮೂಲದ ಅಂತರಾಷ್ಟ್ರೀಯ ಮಾಧ್ಯಮ ಬಿಬಿಸಿ ವರದಿಯನ್ನು ಮಾಡಿದೆ. ವರದಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕುಮಾರಸ್ವಾಮಿ ಮತ್ತು ಎಚ್‌ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಪ್ರಧಾನಿ ನರೇಂದ್ರ ಮೋದಿಯ ಜೊತೆ ನಿಂತಿರುವ ಪೋಟೋವನ್ನು ಕೂಡ ಪ್ರಕಟಿಸಿದೆ.
ಭಾರತೀಯ ಸಂಸದರೊಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನ್ನು ತೋರಿಸುವ ಸಾವಿರಾರು ವಿಡಿಯೋಗಳು ಕರ್ನಾಟಕದಲ್ಲಿ ಹರಿದಾಡಿದೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಿಬಿಸಿ ವರದಿಯಲ್ಲಿ ಉಲ್ಲೇಖಿಸಿದೆ.
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎನ್ನಲಾದ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಪಕ್ಷ ಮತ್ತು ನಾಯಕತ್ವಕ್ಕೆ ಭಾರೀ ಮುಜುಗರ ಉಂಟು ಮಾಡಿತ್ತು. ಇದರ ಬೆನ್ನಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಸಂತ್ರಸ್ತೆಯೊಬ್ಬರು ಹೊಳೆನರಸೀಪುರ ಪೊಲೀಸ್ ಠಾಣೆಗೆ ಎಚ್‌ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅಪ್ಪ-ಮಗನ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354 (ಎ), 354 (ಡಿ) ಮತ್ತು 506, 509 ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.ಎಸ್‌ಐಟಿ ಅಧಿಕಾರಿಗಳು ಎಚ್.ಡಿ. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣಗೆ ತನಿಖೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದ್ದಾರೆ. 24 ಗಂಟೆಗಳ ಒಳಗೆ ಎಸ್‌ಐಟಿ ಮುಂದೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ಕಾಲಾವಕಾಶ ಕೋರಿ ನಾನು ನನ್ನ ವಕೀಲರ ಮೂಲಕ ಮನವಿ ಸಲ್ಲಿಸಿದ್ದೇನೆ ಎಂದು ಪ್ರಜ್ವಲ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನಲ್ಲಿ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೊಟೀಸ್ ಜಾರಿ ಮಾಡಿದ್ದರು.
ಇದನ್ನು ಓದಿ: ರೋಹಿತ್ ವೇಮುಲಾ ‘ಪರಿಶಿಷ್ಟ ಜಾತಿ’ಗೆ ಸೇರಿದವರಲ್ಲ: ಪ್ರಕರಣದ ಫೈಲ್ ಕ್ಲೋಸ್ ಮಾಡಿದ ಪೊಲೀಸರು


