ಚುನಾವಣೆಯ ಹೊಸ್ತಿಲಲ್ಲಿ ಕರಾವಳಿ ಕರ್ನಾಟಕದಲ್ಲಿ ಕೋಮು ರಾಜಕಾರಣ ಬಿರುಸು ಪಡೆದಿದೆ. ಸರಣಿ ಕೊಲೆಗಳು ಘಟಿಸಿವೆ. ಕರಾವಳಿಯ ನಿಜವಾದ ಅಸ್ಮಿತೆಯನ್ನು ಉಳಿಸಲು ಅನೇಕರು ನಿರಂತರ ಸಕ್ರಿಯವಾಗಿ ಶ್ರಮಿಸುತ್ತಿದ್ದು, ಅದರಲ್ಲಿ ಪತ್ರಕರ್ತ ನವೀನ್ ಸೂರಿಂಜೆಯವರೂ ಒಬ್ಬರು. ಕರಾವಳಿಯ ರಕ್ತಸಿಕ್ತ ಚರಿತ್ರೆಯನ್ನು ’ನೇತ್ರಾವತಿಯಲ್ಲಿ ನೆತ್ತರು’ ಕೃತಿಯ ಮೂಲಕ ಇತ್ತೀಚೆಗೆ ಅನಾವರಣ ಮಾಡಿರುವ ಅವರು, ’ನ್ಯಾಯಪಥ’ ವಾರಪತ್ರಿಕೆಯೊಂದಿಗೆ ಮಾತನಾಡಿದ್ದು, ಹಲವಾರು ಒಳನೋಟಗಳನ್ನು ಹಂಚಿಕೊಂಡರು.
ಪ್ರಶ್ನೆ: ಚುನಾವಣೆ ಹತ್ತಿರವಾದಂತೆ ಕರಾವಳಿ ಮತ್ತೆ ಸುದ್ದಿಯಲ್ಲಿದೆ. ಹಿಂದೂ ಮುಸ್ಲಿಂ ಬೈನರಿಯಾಚೆಗೆ ಕರಾವಳಿ ಕರ್ನಾಟಕದ ರಾಜಕಾರಣ ಇಲ್ಲವೇ?
ನವೀನ್: ಇತಿಹಾಸವನ್ನು ನೋಡಿದರೆ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಕರಾವಳಿ ಕೋಮು ಸೌಹಾರ್ದತೆಯ ಕೇಂದ್ರವಾಗಿತ್ತು. ಇಲ್ಲಿದ್ದಷ್ಟು ಸೌಹಾರ್ದತೆಯನ್ನು ಬೇರೆ ಯಾವುದೇ ರಾಜ್ಯದಲ್ಲಿ ನೋಡಲು ಸಾಧ್ಯವಿರಲಿಲ್ಲ. ಕರಾವಳಿಯ ಜನಪದ ಸಂಸ್ಕೃತಿ, ದೈವಾರಾಧನೆ, ದೇವಸ್ಥಾನಗಳು ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕವಾಗಿದ್ದವು. ಆದರೆ ಇತ್ತೀಚಿನ ವರ್ಷಗಳ ರಾಜಕೀಯ ಬೆಳವಣಿಗೆಗಳಿಂದ ಅನೇಕ ಪಲ್ಲಟಗಳಾಗಿವೆ.
ಭೂ ಸುಧಾರಣೆ ಕಾಯ್ದೆ ಕರಾವಳಿಯಲ್ಲಿ ಸಶಕ್ತವಾಗಿ ಜಾರಿಯಾಯಿತು. ಆಗಿನ ಕಮ್ಯುನಿಸ್ಟರು, ಸಮಾಜವಾದಿಗಳು, ಕಾಂಗ್ರೆಸ್ಸಿಗರು ಕಾಯ್ದೆಯ ಜಾರಿಗೆ ಶ್ರಮವಹಿಸಿದರು. ಹಿಂದುಳಿದ ವರ್ಗಗಳಿಗೆ, ದಲಿತರಿಗೆ ಜಮೀನು ಸಿಕ್ಕ ನಂತರ ಸಮಾನತೆ ನೆಲೆಸಬೇಕಿತ್ತು. ಆದರೆ ಸಮಾನತೆಯನ್ನು ತಪ್ಪಿಸುವುದಕ್ಕಾಗಿ, ಶ್ರೇಣಿಕೃತ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡುವುದಕ್ಕಾಗಿ ಮೇಲ್ವರ್ಗಗಳು ಹಿಂದುತ್ವ ಎಂಬ ಅಜೆಂಡಾವನ್ನು ಕರಾವಳಿಯಲ್ಲಿ ಜಾರಿ ಮಾಡಿದವು. ಆ ಮೂಲಕ ಸಾಮಾಜಿಕ ಅಸಮಾನತೆಯನ್ನು ಯಥಾಸ್ಥಿತಿಯಲ್ಲಿ ಇಟ್ಟರು. ಭೂ ಸುಧಾರಣೆಯಿಂದಾಗಿ ಬಿಲ್ಲವ, ಮೊಗವೀರ, ಕುಲಾಲ ಸೇರಿದಂತೆ ಮೊದಲಾದ ಜಾತಿಗಳು ಸಾಮಾಜಿಕವಾಗಿ ಉನ್ನತೀಕರಣಗೊಳ್ಳಲು ಅವಕಾಶಗಳಿದ್ದವು. ಅದನ್ನು ಹಿಂದುತ್ವ ರಾಜಕಾರಣ ತಪ್ಪಿಸಿತು. ಇದು ಇಂದಿನ ಯುವಕರಿಗೆ ಅರ್ಥವಾಗುತ್ತಿಲ್ಲ.
ಪ್ರ: ಸಂಘಪರಿವಾರದ ಅಜೆಂಡಾಗಳನ್ನು ಇಲ್ಲಿನ ಬಲಿಪಶುಗಳಿಗೆ ತಿಳಿಸುವ ಪ್ರಯತ್ನಗಳಾಗುತ್ತಿವೆಯೇ? ಅದು ಯಾವ ಮಟ್ಟಿಗಿನ ಯಶಸ್ಸು ಲಭಿಸಿದೆ.
ಉ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಳವಳಿಗಳು ಈಗಲೂ ಮುಂದುವರಿದಿವೆ. ನಾರಾಯಣಗುರು ಚಳವಳಿ, ಸೌಹಾರ್ದತಾ ಚಳವಳಿಗಳು ಬೇರೆಬೇರೆ ನಮೂನೆಯಲ್ಲಿ ಜಾರಿಯಲ್ಲಿವೆ. ಜನನುಡಿ ಕಾರ್ಯಕ್ರಮಗಳನ್ನು ಇದರ ಮುಂದುವರಿದ ಭಾಗವಾಗಿ ಮಾಡಿದೆವು. ಜನನುಡಿ ಪರಿಣಾಮ ಬೀರಿತ್ತು.
ಕೋಮುವಾದವನ್ನು ಮಣಿಸಬೇಕೆಂದರೆ ಜಾತಿಗಳು ಸಶಕ್ತಗೊಳ್ಳುವ ಅಗತ್ಯವಿದೆ. ಹಿಂದುಳಿದ ವರ್ಗಗಳ ಜಾತಿಗಳು ಪ್ರತ್ಯೇಕಪ್ರತ್ಯೇಕವಾಗಿ ಸಮಾವೇಶಗಳನ್ನು ಮಾಡಬೇಕು. ಪ್ರತ್ಯೇಕ ಅಸ್ತಿತ್ವಗಳನ್ನು ಕಂಡುಕೊಳ್ಳಬೇಕು. ಆಗ ಮಾತ್ರ ಈ ಹಿಂದುತ್ವ ರಾಜಕಾರಣಕ್ಕೆ ದೊಡ್ಡದಾದ ಪೆಟ್ಟು ಕೊಡಲು ಸಾಧ್ಯವಾಗುತ್ತದೆ ಎಂಬುದು ಬಹುತೇಕ ಚಿಂತಕರ ಅಭಿಪ್ರಾಯ. ಈ ಕೆಲಸವನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ಬಿಜೆಪಿಯೇತರ ರಾಜಕೀಯ ಪಕ್ಷಗಳು ಯೋಚನೆ ಮಾಡಿಲ್ಲ. ಸಿಪಿಐಎಂ ಸಣ್ಣಮಟ್ಟದಲ್ಲಿ ಈ ಪ್ರಯತ್ನವನ್ನು ಮಾಡಿತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕರೆಸಿ ಬಿಲ್ಲವ ಸಮಾವೇಶಗಳನ್ನು, ನಾರಾಯಣಗುರು ಸಮಾವೇಶಗಳನ್ನು ಏರ್ಪಡಿಸಿತು. ಅದು ಕೆಲವು ಪರಿಣಾಮಗಳನ್ನು ಬೀರಿತು. ಬಿಲ್ಲವರು ಈಗ ಸ್ವಲ್ಪ ಜಾಗೃತರಾಗಿದ್ದಾರೆ. ಯಾಕೆ ನಾವು ಮಾತ್ರ ಕೊಲೆಯಾಗುತ್ತಿದ್ದೇವೆ, ನಮ್ಮನ್ನು ಮಾತ್ರ ಏಕೆ ಕೊಲ್ಲುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ; ಅಧಿಕಾರಕ್ಕೆ ಏರುವುದು ಮಾತ್ರ ಬ್ರಾಹ್ಮಣರು ಮತ್ತು ಬಂಟರು ಮಾತ್ರ ಏಕೆ ಎಂಬ ಪ್ರಶ್ನೆಯನ್ನು ಸಮುದಾಯ ಕೇಳಿಕೊಳ್ಳುತ್ತಿದೆ. ಪ್ರವೀಣ್ ಕೊಲೆಯ ಸಂದರ್ಭದಲ್ಲಿ- ನೋಡಿ ಮತ್ತೊಬ್ಬ ಬಿಲ್ಲವ ಸತ್ತ- ಎಂಬ ವಿಷಾದ ವ್ಯಕ್ತವಾಯಿತು. ಫಾಝಿಲ್ ಕೊಲೆ ಸಂಬಂಧ ಅರೆಸ್ಟ್ ಆಗಿರುವವರಲ್ಲಿ ಬಿಲ್ಲವ, ಬಂಟರನ್ನು ಬಿಟ್ಟರೆ ಬ್ರಾಹ್ಮಣರು, ಮೇಲ್ವರ್ಗಗಳು ಯಾಕಿಲ್ಲ ಎಂಬ ಪ್ರಶ್ನೆ ಮೂಡಿದೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಜಾತಿ ಜಾಗೃತಿಯ ಸಮಾವೇಶಗಳು ಹೆಚ್ಚಾಗಿ ಆಗಬೇಕಿದೆ. ಕೆಳವರ್ಗಗಳು ಜಾತಿ ಸಮಾವೇಶಗಳನ್ನು ಮಾಡುವುದು ಜಾತಿವಾದ ಆಗುವುದಿಲ್ಲ. ಅದು ಸಮಾಜ ಸುಧಾರಣೆಯ ಭಾಗವಾಗುತ್ತದೆ. ಎಲ್ಲ ಕೆಳಸ್ತರದ ಜಾತಿಗಳ ಜಾಗೃತಿ ಸಮಾವೇಶಗಳನ್ನು ಮಾಡುವ ತುರ್ತು ಇದೆ. ಇದಕ್ಕೆ ಕಾಂಗ್ರೆಸ್, ಜೆಡಿಎಸ್ ಥರದ ಪಕ್ಷಗಳು ಸಹಾಯ ಮಾಡಬೇಕು.
ಪ್ರ: ಕೋಮುದ್ವೇಷ ಹಿನ್ನೆಲೆಯ ಕೊಲೆಗಳಲ್ಲಿ ಸರ್ಕಾರ ಪರಿಹಾರ ನೀಡುವಾಗ ತಾರತಮ್ಯ ನೀತಿ ಅನುಭವಿಸುತ್ತಿರುವ ಟೀಕೆಗಳು ಬರುತ್ತಿವೆ. ಇದನ್ನು ಹೇಗೆ ನೋಡುತ್ತೀರಿ?
ಉ: ಕೋಮುದ್ವೇಷ ಪ್ರಕರಣಗಳಲ್ಲಿ ಪರಿಹಾರ ಕೊಡುವಾಗ ಸರ್ಕಾರ ಒಂದು ಮಾರ್ಗಸೂಚಿಯನ್ನು ಹಾಕಿಕೊಳ್ಳಬೇಕಾಗಿದೆ. ಕೋಮುದ್ವೇಷಕ್ಕೆ ಬಲಿಯಾದ ವ್ಯಕ್ತಿ ಕೋಮುವಾದಿಯಾಗಿದ್ದರೆ ಪರಿಹಾರವನ್ನು ಕೊಡಬಾರದು. ಕೋಮುವಾದಿಯಲ್ಲದೆ ಕೆಲವು ಅಮಾಯಕರು ಕೊಲೆಯಾಗುತ್ತಾರೆ. ಅವರಿಗೂ ಪಕ್ಷರಾಜಕಾರಣಕ್ಕೂ ಸಂಬಂಧ ಇರುವುದಿಲ್ಲ. ಕೊಲೆಯಾದ ವ್ಯಕ್ತಿಯು ಹಿಂದುತ್ವ ರಾಜಕಾರಣದೊಂದಿಗಾಗಲೀ, ಮುಸ್ಲಿಂ ರಾಜಕಾರಣದೊಂದಿಗಾಗಲೀ ಸಂಬಂಧ ಹೊಂದಿರಲಿಲ್ಲ ಎಂದಾಗ ಪರಿಹಾರ ಕೊಡಬೇಕು. ಪ್ರವೀಣ್ ನೆಟ್ಟಾರು ರಾಜಕೀಯ ಕಾರ್ಯಕರ್ತರಾಗಿದ್ದರು. ಮಸೂದ್ ಕೊಲೆಯಲ್ಲಿ ಪ್ರವೀಣ್ ಅವರ ನೇರವಾದ ಸಂಬಂಧ ಇಲ್ಲ. ಆದರೆ ಮಸೂದ್ ಕೊಲೆ ಮಾಡಿದವರನ್ನು ಜಾಮೀನಿನ ಮೇಲೆ ಹೊರ ತರಲು ಪ್ರವೀಣ್ ನೆಟ್ಟಾರ್ ಪ್ರಯತ್ನಿಸಿದ್ದರು ಎಂಬ ಮಾತುಗಳನ್ನು ಸ್ಥಳೀಯರು ಆಡುತ್ತಿದ್ದಾರೆ. ಪ್ರವೀಣ್‌ಗೆ ಪರಿಹಾರವನ್ನು ನೀಡಲಾಗಿದೆ. ಆದರೆ ನಂತರದಲ್ಲಿ ಕೊಲೆಯಾದ ಫಾಝಿಲ್‌ಗೆ ಯಾವುದೇ ಪಕ್ಷದ ಸಂಪರ್ಕವಿರಲಿಲ್ಲ. ಹಿಂದೂ ಅಥವಾ ಮುಸ್ಲಿಂ ರಾಜಕಾರಣದಲ್ಲಿ ಆತ ಭಾಗಿಯಾಗಿರಲಿಲ್ಲ. ಹೀಗಾಗಿ ನಿಜವಾದ ಸಂತ್ರಸ್ತರನ್ನು ಗುರುತಿಸುವ ಮಾರ್ಗಸೂಚಿಯನ್ನು ಸರ್ಕಾರಿ ಜಾರಿಗೊಳಿಸಬೇಕು.
ಮತ್ತೊಂದು ವಿಷಯ, ಕೋಮುಗಲಭೆಗಳಲ್ಲಿ ಸತ್ತವರಿಗೆ ಹಣ ನೀಡುವುದೇ ಪರಿಹಾರವಲ್ಲ. ಕೋಮುಗಲಭೆಗಳನ್ನು, ಕೋಮು ರಾಜಕಾರಣವನ್ನು ನಿಲ್ಲಿಸುವುದೇ ನಿಜವಾದ ಪರಿಹಾರ. ಕೋಮು ಪ್ರೇರಿತ ಸಿದ್ಧಾಂತವನ್ನು ಸರ್ಕಾರ ಮಟ್ಟ ಹಾಕಬೇಕು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದಾಗಿ ಸರ್ಕಾರ ಖಾತ್ರಿಪಡಿಸಬೇಕು. ಆಗ ಕೋಮುಗಲಭೆಗಳು ನಿಲ್ಲುತ್ತವೆ, ಪರಿಹಾರ ನೀಡುವ ವ್ಯವಸ್ಥೆಯೂ ನಿಲ್ಲುತ್ತದೆ. ಸಂವಿಧಾನದ ಆಶಯ ಜಾರಿಗೊಳಿಸುವ ಪಕ್ಷ ಅಧಿಕಾರಕ್ಕೆ ಬರುವುದೇ ನಿಜವಾದ ಪರಿಹಾರ.
ಪ್ರ: ಕರಾವಳಿ ಪೊಲೀಸರ ಮತೀಯವಾದಿ ಧೋರಣೆಯ ಕುರಿತು ಆತಂಕಗಳು ವ್ಯಕ್ತವಾಗುತ್ತಿವೆ. ಇದರ ಕುರಿತು ನಿಮ್ಮ ಅನಿಸಿಕೆಗಳೇನು?
ಉ: ಕೋಮುಗಲಭೆಗಳಲ್ಲಿ ಪೊಲೀಸರ ಪಾತ್ರ ಬಹುದೊಡ್ಡದಿದೆ. ಮಂಗಳೂರಿನಲ್ಲಿ ಚರ್ಚ್ ಮೇಲೆ ದಾಳಿಯಾದ ಘಟನೆ ನೆನೆಯುತ್ತೇನೆ. ಆ ದಿನ ಭಜರಂಗದಳದವರು ಒಂದು ಕಡೆ ಮಾತ್ರ ಚರ್ಚ್ ದಾಳಿ ಮಾಡಿದ್ದರು. ಆದರೆ ಅದೇ ದಿನ ಹದಿನೈದು ಕಡೆ ಚರ್ಚ್‌ಗಳ ಮೇಲೆ ದಾಳಿಯಾಯಿತು. ಅವುಗಳೆಲ್ಲ ಪೊಲೀಸರೇ ಮಾಡಿದ್ದಾಗಿತ್ತೇ ಹೊರತು ಭಜರಂಗದಳವಲ್ಲ.
ಅಡೊರೇಷನ್ ಚರ್ಚ್ ಮೇಲೆ ದಾಳಿಯಾದಾಗ ಕ್ರಿಶ್ಚಿಯನ್ನರು ದೊಡ್ಡ ಸಂಖ್ಯೆಯಲ್ಲಿ ಚರ್ಚ್‌ಗಳಲ್ಲಿ ಸೇರಿದರು. ಪೊಲೀಸರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರು. ಮೊದಲೇ ಮತೀಯವಾದವನ್ನು ತಲೆಗೇರಿಕೊಂಡ ಪೊಲೀಸರು ಪ್ರತಿ ಚರ್ಚ್‌ಗಳಿಗೂ ನುಗ್ಗಿ ಹಲ್ಲೆ ಮಾಡಿದರು. ಇದಕ್ಕೆಲ್ಲ ನಾವು ಪ್ರತ್ಯಕ್ಷದರ್ಶಿಯಾಗಿದ್ದೇವೆ. ಕುಲಶೇಖರದಲ್ಲಿರುವ ಚರ್ಚ್‌ಗೆ ಪೊಲೀಸ್ ಅಧಿಕಾರಿ ಗಣಪತಿ (ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ) ನುಗ್ಗಿ ನನ್‌ಗಳ ಮೇಲೆ ಹಲ್ಲೆ ನಡೆಸಿದ್ದರು.
ಸುಳ್ಯದಲ್ಲಿ ಒಮ್ಮೆ ಹಿಂದೂ ಮುಸ್ಲಿಂ ಯುವಕ-ಯುವತಿಯನ್ನು ಹಿಡಿದು ಪೊಲೀಸರಿಗೆ ಭಜರಂಗದಳದವರು ಒಪ್ಪಿಸಿದ್ದರು. ರಾಜೀ ಸಂಧಾನ ನಡೆಸಿದ ಪೊಲೀಸರು ಪ್ರಕರಣವನ್ನು ಮುಗಿಸಿದರು. ಅಂದು ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದರು. ಪೊಲೀಸರು ರಾಜಿ ಮಾಡಿದ್ದು ಭಜರಂಗದಳದವರಿಗೆ ಬೇಸರ ತಂದಿತು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲುಗಳನ್ನು ತೂರಿದರು. ಪೊಲೀಸರಿಗೆ ಗಾಯಗಳಾಗಿ ಕೆಲವರು ಅಡ್ಮಿಟ್ ಆದರು. ಕಲ್ಲು ಬಿಸಾಡಿದವರ ಮೇಲೆ ಎಫ್‌ಐಆರ್ ಹಾಕಿದ ಅಂದಿನ ಎಸ್‌ಪಿ, ಕೆಲವರನ್ನು ಬಂಧಿಸಿದರು. ತಕ್ಷಣವೇ ಹಿಂದುತ್ವ ಸಂಘಟನೆಗಳು ಸ್ಟೇಷನ್‌ಗೆ ನುಗ್ಗಿ ಹಲ್ಲೆ ಮಾಡಿದವು. ಆಗ ಸರ್ಕಾರ ಏನು ಮಾಡಿತು? ಗಾಯಗೊಂಡ ಪೊಲೀಸರನ್ನು, ಎಫ್‌ಐಆರ್ ಹಾಕಿದವರನ್ನು ಅಮಾನತು ಮಾಡಿತು. ಒಂದು ಕಡೆ ಕೋಮುವಾದಿ ಸರ್ಕಾರ ತೊಂದರೆ ನೀಡುತ್ತಿದ್ದರೆ, ಮತ್ತೊಂದೆಡೆ ಪೊಲೀಸರೂ ಕೋಮುವಾದಿಗಳಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಕಾನೂನಾತ್ಮಕವಾಗಿ ದನಗಳನ್ನು ಸಾಗಿಸುತ್ತಿದ್ದ ಕಬೀರ್ ಎಂಬ ಯುವಕನನ್ನು ಎಎನ್‌ಎಫ್ (ಎಂಟಿ ನಾರ್ಕೋಟಿಕ್ಸ್) ಪೊಲೀಸ್ ಅಧಿಕಾರಿ ಶೂಟ್ ಮಾಡಿ ಸಾಯಿಸಿದ್ದನು. ಅಂದು ಸಿದ್ದರಾಮಯ್ಯನವರ ಸರ್ಕಾರವಿತ್ತು. ಆದರೆ ಆ ಅಧಿಕಾರಿ ಕೋಮುವಾದಿಯಾಗಿದ್ದ. ಇತ್ತೀಚೆಗೆ ಕಾಪುವಿನಲ್ಲಿ ಪೊಲೀಸರೇ ಕೇಸರಿಶಾಲು ಹಾಕಿಕೊಂಡು ಸಂಭ್ರಮಾಚರಣೆ ಮಾಡಿದ್ದರು. ಮುಸ್ಲಿಮರ ಜೊತೆ ಒಂದು ರೀತಿ, ಹಿಂದೂಗಳಿಗೆ ಒಂದು ರೀತಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ. ಇದು ಕೂಡ ಕರಾವಳಿಯಲ್ಲಿ ಕೋಮುವಾದ ಹೆಚ್ಚಲು ಕಾರಣವಾಗಿದೆ.
ಪ್ರ: ಕೋಮುವಾದದಾಚೆಗೆ ಕರಾವಳಿ ಜನತೆಯ ನಿಜವಾದ ಸಮಸ್ಯೆಗಳು ಯಾವುವು?
ಉ: ಕರಾವಳಿಯ ಜನತೆ ಉದ್ಯೋಗ ಮತ್ತು ಶಿಕ್ಷಣದ ಸಮಸ್ಯೆಗಳ ಕುರಿತು ಯೋಚಿಸಬೇಕಿತ್ತು. ಆಳ್ವಾಸ್, ಎಸ್‌ಡಿಎಂ ಥರದ ಖಾಸಗಿ ಸಂಸ್ಥೆಗಳು ಸುಲಿಗೆ ಮಾಡುತ್ತಿವೆ. ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಯಾಕೆ ಸಾವನ್ನಪ್ಪುತ್ತಿದ್ದಾರೆಂದು ಚಿಂತನೆ ನಡೆಯುತ್ತಿಲ್ಲ. ಇತ್ತೀಚೆಗೆ ಆಳ್ವಾಸ್‌ನಲ್ಲಿ ಆದಂತಹ ಕಾವ್ಯ ಪೂಜಾರಿಯವರ ಸಾವನ್ನು ಬಿಟ್ಟರೆ ಬೇರೆ ಯಾವ ಸಾವುಗಳು ಕೂಡ ದೊಡ್ಡ ಪ್ರತಿಭಟನೆಗೆ ಸಾಕ್ಷಿಯಾಗಿಲ್ಲ. ಇದನ್ನು ಯುವಸಮುದಾಯ ಯೋಚನೆ ಮಾಡಬೇಕು.
ಎಂಆರ್‌ಪಿಎಲ್, ಎಸ್‌ಇಜೆಡ್, ಬಿಎಸ್‌ಎಫ್, ಎಂಸಿಎಫ್‌ನಂತಹ ಸಂಸ್ಥೆಗಳು ಕರಾವಳಿಯಲ್ಲಿವೆ. ಎಷ್ಟು ಸ್ಥಳೀಯರಿಗೆ ಇಲ್ಲಿ ಉದ್ಯೋಗ ಸಿಕ್ಕಿದೆ? ಇವುಗಳಿಗಾಗಿ ನಮ್ಮ ನೆಲ ಜಲವನ್ನು ಇಲ್ಲಿನ ಜನ ತ್ಯಾಗ ಮಾಡಿದ್ದಾರೆ. ಸುಮಾರು ಐದು ಸಾವಿರ ಎಕರೆ ಕೃಷಿ ಭೂಮಿ ಎಂಆರ್‌ಪಿಎಲ್ ಮತ್ತು ಎಸ್‌ಇಜೆಡ್‌ಗಾಗಿ ಸ್ವಾಧೀನ ಆಗಿದೆ. 2035 ಎಕರೆ ಕೃಷಿ ಭೂಮಿಯನ್ನು ವಿದ್ಯಾ ದಿನಕರ್ ನೇತೃತ್ವದ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಉಳಿಸಿಕೊಟ್ಟಿದೆ. ಈ ಹೋರಾಟಗಳಲ್ಲಿ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಬಿಟ್ಟರೆ ಇನ್ಯಾವ ಸ್ವಾಮೀಜಿಗಳು ಭಾಗಿಯಾಗಿಲ್ಲ. ಹಿಂದುತ್ವ ನಾಯಕರು ಭಾಗಿಯಾಗಿಲ್ಲ. ಇವೆಲ್ಲವೂ ಇತ್ತೀಚೆಗೆ ನಡೆದ ರೈತ ಚಳವಳಿಗಳು. ಎಂಆರ್‌ಪಿಎಲ್, ಎಸ್‌ಇಜೆಡ್‌ನಲ್ಲಿ ಆಗುತ್ತಿರುವ ಸಾವುಗಳ ಕುರಿತು ಯಾವ ಯುವಕರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಇಂದು ಕೋಮುಸಂಘರ್ಷದಲ್ಲಿ ತೊಡಗಿರುವವರು ಉದ್ಯೋಗಕ್ಕಾಗಿ ಹೋರಾಡಿದ್ದರೆ ಇಂದು ಎಂಆರ್‌ಪಿಎಲ್‌ನಲ್ಲಿ ಕೆಲಸ ದಕ್ಕಿಸಿಕೊಳ್ಳುತ್ತಿದ್ದರು. ಎಸ್‌ಇಜೆಡ್‌ಗಾಗಿ ದೈವಸ್ಥಾನಗಳು ನೆಲಸಮವಾಗಿದ್ದಾಗ ಇವರು ಎಲ್ಲಿ ಹೋಗಿದ್ದರು? ನಾಗಬನವನ್ನು ಮುಸ್ಲಿಮರು ಅಪವಿತ್ರ ಮಾಡುತ್ತಿದ್ದಾರೆಂದು ವಿವಾದ ಎಬ್ಬಿಸಲಾಯಿತು. ಆದರೆ ನೂರಾರು ನಾಗಬನಗಳು ಎಸ್‌ಇಜೆಡ್‌ಗಾಗಿ ನೆಲಸಮವಾದವು. ಇದರ ಕುರಿತು ಹಿಂದುತ್ವಕ್ಕಾಗಿ ಹೋರಾಡುತ್ತಿರುವ ಯುವಕರು ಯೋಚನೆ ಮಾಡಿದ್ದಾರಾ? ಹೋಮ್‌ಸ್ಟೇ ದಾಳಿಯಲ್ಲಿ ಭಾಗಿಯಾದ ಯುವಕರನ್ನು ದೇವಸ್ಥಾನಗಳ ತೆರವಿಗೆ ಪೊಲೀಸರು ಬಳಸಿಕೊಂಡಿದ್ದರು. ಇದು ಕಾರ್ಪೊರೇಟ್ ಮತ್ತು ಕೋಮುವಾದದ ಮೈತ್ರಿಯಾಗಿದೆ.
ಪ್ರ: ಕರಾವಳಿ ಭಾಗದ ಮುಸ್ಲಿಮರ ಆರ್ಥಿಕ ಸಬಲೀಕರಣ ಕೂಡ ಮುಸ್ಲಿಮೇತರರ ಅಸೂಯೆಗೆ ಕಾರಣವಾಗಿದೆಯೇ?
ಉ: ಖಂಡಿತ ಆರ್ಥಿಕ ಕಾರಣವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದು ಕ್ಷುಲ್ಲಕ ಅನಿಸಿದರೂ ಕೂಡ ವಾಸ್ತವ. ಮುಸ್ಲಿಮ್ ಯುವಕರು ಮುಂಜಾನೆ ಐದೂವರೆಗೆ ದಕ್ಕೆ (ದೋಣಿಗಳು ಬರುವ ಜಾಗ) ತಲುಪಿ, ಮೀನು ತಂದು ಹತ್ತು ಗಂಟೆಯ ಒಳಗೆ ಎಲ್ಲ ಮನೆಗಳಿಗೆ ಸರಬರಾಜು ಮಾಡಿ, ನಂತರ ಗುಜರಿ ಕೆಲಸಕ್ಕೋ, ಮತ್ಯಾವುದೋ ಕೂಲಿಗೋ ಹೋಗಿ ಸಂಜೆ ವೇಳೆಗೆ ಟಿಪ್‌ಟಾಪ್ ಆಗಿ ಸಿನಿಮಾ ಹೀರೋಗಳಂತೆ ಹೊರಬರುತ್ತಾರೆ. ಜೀವನವನ್ನು ಸಂಭ್ರಮಿಸುವ ರೀತಿ ಇದು. ಆದರೆ ಹಿಂದೂ ಯುವಕರು ಜಮೀನಿದ್ದರೂ ಕೆಲಸ ಮಾಡುತ್ತಿಲ್ಲ. ಕೂಲಿ ಕೆಲಸಕ್ಕೂ ಹೋಗುತ್ತಿಲ್ಲ. ಹೀಗಾಗಿ ಆರ್ಥಿಕ ಅಭದ್ರತೆ ಇವರನ್ನು ಕಾಡುತ್ತಿದೆ. ಮುಸ್ಲಿಮರ ಬದುಕುವ ಶೈಲಿಯೂ ಅಸೂಯೆಯನ್ನು ಇವರಲ್ಲಿ ಹುಟ್ಟಿಸುತ್ತಿದೆ.
ಪ್ರ: ಕರಾವಳಿಯ ಸಮಸ್ಯೆಯಲ್ಲಿ ಸರ್ಕಾರ ವೈಫಲ್ಯತೆ ಅಂತೂ ಇದ್ದೇ ಇದೆ. ಆದರೆ ನಾಗರಿಕ ಸಮಾಜ ಎಲ್ಲಿ ಎಡವುತ್ತಾ ಇದೆ?
ಉ: ತುಳುನಾಡಿನ ಸಂಸ್ಕೃತಿಯನ್ನು ಯುವಜನರಿಗೆ ಮುಟ್ಟಿಸುವಲ್ಲಿ ವಿಫಲರಾಗಿದ್ದೇವೆ. ಫಾಝಿಲ್
ಕೊಲೆಯಾದ ಜಾಗಕ್ಕೆ ಸಮೀಪದಲ್ಲಿ ಕಾಂತೇರಿ ಜುಮಾದಿ ದೈವಸ್ಥಾನ ಇದೆ. ಹಿಂದುಳಿದ ಸಮುದಾಯ ಹೇಗೆ ಬಲಿಷ್ಟವಾಯಿತು ಎಂಬುದನ್ನು ಈ ದೈವದ ಪಾಡ್ಡನಗಳು ಹೇಳುತ್ತವೆ. ಸಿರಿ ಕಥೆಗಳು, ಹಿಂದೂ ಮುಸ್ಲಿಂ ಗಂಡ ಹೆಂಡತಿಗೆ ಜನಿಸಿದ ಬೊಬ್ಬರ್ಯ (ಮೊಗವೀರರ ಆರಾಧ್ಯ ದೈವ) ದೈವದ ಕಥೆ, ಬ್ಯಾರಿ ಬೂತದ ಇತಿಹಾಸ- ಇವೆಲ್ಲವೂ ಮಂಗಳೂರಿನ ಭಾವೈಕ್ಯತೆಯನ್ನು ಸಾರುತ್ತವೆ. ನಾವು ಯುವಜನರಿಗೆ ಈ ಸಂಗತಿಗಳನ್ನು ತಿಳಿಸುವಲ್ಲಿ ವಿಫಲರಾಗಿದ್ದೇವೆ.
ಪ್ರ: ಅಕಸ್ಮಾತ್, ಕೋಮು ಧ್ರುವೀಕರಣವನ್ನು ತಗ್ಗಿಸಿ, ದಕ್ಷಿಣ ಕನ್ನಡದಲ್ಲಿ ಸೌಹಾರ್ದತೆ ನೆಲೆಸಲು ತಯಾರಾಗುವ ಪಕ್ಷ ಅಧಿಕಾರಕ್ಕೆ ಬಂದರೆ, ಅವರು ಯಾವ್ಯಾವ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು?
ಉ: ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್ ಪಕ್ಷಗಳನ್ನು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ. ಮೊದಲ ಆಯ್ಕೆ ಕಾಂಗ್ರೆಸ್ ಆಗಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೋಮುವಾದ ನಿಲ್ಲಿಸುವ ಕ್ರಮಗಳನ್ನು ಕೈಗೊಂಡಿದ್ದಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದೇ ಸ್ವಾಮೀಜಿ, ಅದೇ ಧರ್ಮಾಧಿಕಾರಿಗಳ ಅಡಿಯಾಳಾಗಿ ಕೆಲಸ ಮಾಡುವುದನ್ನು ನೋಡುತ್ತಿದ್ದೇವೆ. ಶಿಕ್ಷಣ ಮಾಫಿಯಾ, ಭೂ ಮಾಫಿಯಾಗಳಿಗೆ ಬೆಂಬಲ ನೀಡುತ್ತಾರೆ.
ಎಸ್.ಎಂ.ಕೃಷ್ಣ ಅವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಕರಾವಳಿಯಲ್ಲಿ ಆರ್‌ಎಸ್‌ಎಸ್ ದೊಡ್ಡ ಮಟ್ಟದಲ್ಲಿ ಬೆಳೆಯಿತು. ನಾಗಮಂಡಲ ಕಾರ್ಯಕ್ರಮ, ಬ್ರಹ್ಮಕಳಶೋತ್ಸವ, ದೇವಸ್ಥಾನ ಪುನರುಜ್ಜೀವನಗಳು ಈ ಅವಧಿಯಲ್ಲಿ ಹೆಚ್ಚಾದವು. ಈ ಕಾರ್ಯಕ್ರಮಗಳು ನಡೆದದ್ದು ಸಮಸ್ಯೆಯಲ್ಲ. ಆದರೆ ಅವುಗಳು ಸೆಕ್ಯುಲರ್ ಆಗಿರಲಿಲ್ಲ. ಕೇಸರಿಮಯವಾಗಿದ್ದವು. ಪ್ರತಿ ಗ್ರಾಮಗಳು ಕೇಸರಿಕರಣಗೊಂಡವು. ಆ ಮೂಲಕ ಆರ್‌ಎಸ್‌ಎಸ್ ತನ್ನ ಕಾರ್ಯಕರ್ತರನ್ನು ಹುಟ್ಟಿಹಾಕಿಕೊಂಡಿತು. ದೇವಸ್ಥಾನದ ಸ್ವಯಂಸೇವಕರನ್ನು ಆರ್‌ಎಸ್‌ಎಸ್ ತನ್ನ ಸ್ವಯಂಸೇವಕರನ್ನಾಗಿ ಮಾಡಿಕೊಂಡಿತು. ಇಂತಹ ಬೆಳವಣಿಗೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು.
ಕೋಮುವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಒಂದು ಮಾರ್ಗಸೂಚಿಯನ್ನು ರೂಪಿಸಬೇಕು. ಪೊಲೀಸರು ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ತಿಳಿಸಬೇಕು. ಪೊಲೀಸರು ಯಾವುದೇ ಕೋಮಿನ ಜೊತೆ ಗುರುತಿಸಿಕೊಳ್ಳಬಾರದು ಎಂದು ಎಚ್ಚರಿಸಬೇಕು. ಕೋಮುಗಲಭೆಯಲ್ಲಿ ಸತ್ತವರು ಅಮಾಯಕರಾಗಿದ್ದಾಗ ಮಾತ್ರ ರಾಜಕಾರಣಿಗಳು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಬೇಕು.
ಪ್ರ: ನೀವು ಬರೆದ ’ನೇತ್ರಾವತಿಯಲ್ಲಿ ನೆತ್ತರು’ ಕೃತಿ ಕರಾವಳಿಯ ಗಂಭೀರ ಸಮಸ್ಯೆಯ ಕುರಿತು ಮಾತನಾಡಿದೆ. ಓದುಗರಿಂದ ಪ್ರತಿಕ್ರಿಯೆ ಹೇಗಿದೆ?
ಉ: ಓದುಗ ವರ್ಗದಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಮೊದಲ ಮುದ್ರಣದ ಎಲ್ಲ ಪ್ರತಿಗಳು ಖಾಲಿಯಾಗಿವೆ. ಎರಡನೇ ಮುದ್ರಣಕ್ಕೆ ಹೋಗಿದ್ದೇವೆ. ಈ ಕೃತಿಯನ್ನು ಸ್ವಲ್ಪ ಕಾವ್ಯಾತ್ಮಕವಾಗಿ ಬರೆಯಬೇಕಿತ್ತು, ಬಹಳ ಸರಳವಾಗಿ ಬರೆದಿದ್ದೀರಿ ಎಂದು ಅನೇಕರು ತಿಳಿಸಿದರು. ಆದರೆ ಈ ಕೃತಿ ಕರಾವಳಿಯ ಸಾಮಾನ್ಯ ಜನರಿಗೆ ತಲುಪಬೇಕು, ಅವರಿಗೆ ಅರ್ಥವಾಗಬೇಕೆಂಬುದು ನನ್ನ ಆಶಯ. ಹಿಂದುತ್ವ ಕಾರ್ಯಕರ್ತರು ಹೆಚ್ಚು ಓದಿಕೊಂಡವರಲ್ಲ. ಅದೇ ಕಾರಣಕ್ಕೆ ಅವರು ಭಜರಂಗದಳ, ಶ್ರೀರಾಮಸೇನೆಯಂತಹ ಸಂಘಟನೆಗಳಿಗೆ ಸೇರಿ ಹಾಳಾಗುತ್ತಾರೆ. ಅಂಥವರಾಗಿ ಈ ಕೃತಿಯನ್ನು ಬರೆದಿದ್ದೇನೆ.
ಫಾಝಿಲ್‌ನ ಕೊಲೆಗಾರರೂ ಒಂದು ರೀತಿಯಲ್ಲಿ ಅಮಾಯಕರು. ತಲವಾರನ್ನು ಹಿಡಿದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಆನಂತರದಲ್ಲಿ ಕೊಲೆ ಮಾಡಿದ್ದಾರೆ. ಧರ್ಮವನ್ನು ಈ ರೀತಿಯಲ್ಲಿ ಅವರ ತಲೆಯಲ್ಲಿ ತುಂಬಿದವರು ಯಾರು? ಇವರೇಕೆ ಬಲಿಪಶುಗಳಾಗುತ್ತಿದ್ದಾರೆ? ಎಂಬ ಸಂಗತಿಗಳಿಗೆ ಇಂತಹ ಯುವಕರಿಗೆ ತಿಳಿಸಲೆಂದೇ ಈ ಕೃತಿ ಬರೆದಿರುವೆ.
ಪ್ರ: ’ನೇತ್ರಾವತಿಯಲ್ಲಿ ನೆತ್ತರು’ ಕೃತಿ ಮುಸ್ಲಿಂ ಕೋಮುವಾದದ ಕುರಿತು ಚರ್ಚೆ ನಡೆಸಿಲ್ಲ ಎಂಬ ಆಕ್ಷೇಪಗಳಿವೆಯಲ್ಲ…
ಉ: ಉದ್ದೇಶಪೂರ್ವಕವಾಗಿಯೇ ಮುಸ್ಲಿಂ ಕೋಮುವಾದದ ಬಗ್ಗೆ ನಾನು ಬರೆದಿಲ್ಲ. ಯಾಕೆಂದರೆ ಮುಸ್ಲಿಂ ಕೋಮುವಾದಿಗಳಿಗೆ ವ್ಯವಸ್ಥೆಯ ಸಹಕಾರ ಇಲ್ಲ. ಪೊಲೀಸ್ ಆಗಲೀ, ಬಲಾಢ್ಯ ಪಕ್ಷಗಳಾಗಲೀ ಬೆಂಬಲ ನೀಡುವುದಿಲ್ಲ. ಆದರೆ ಹಿಂದೂ ಕೋಮುವಾದಿಗೆ ಪಕ್ಷ, ಪೊಲೀಸ್ ಇಲಾಖೆ, ವಕೀಲರ ತಂಡ, ಮಾಧ್ಯಮಗಳು, ಪತ್ರಕರ್ತರು- ಇವರೆಲ್ಲರ ಸಹಾಯವಿದೆ. ಮುಸ್ಲಿಂ ಕೋಮುವಾದವನ್ನು ಈ ವ್ಯವಸ್ಥೆ ಸುಲಭವಾಗಿ ಮುಗಿಸುತ್ತದೆ. ಅದಕ್ಕಾಗಿ ನಾವ್ಯಾರೂ ಶ್ರಮಪಡಬೇಕಾಗಿಲ್ಲ. ಆದರೆ ಹಿಂದೂ ಕೋಮುವಾದವನ್ನು ಎಲ್ಲರೂ ಸೇರಿ ಬೆಳೆಸುತ್ತಿದ್ದಾರೆ. ಹಿಂದೂ ಕೋಮುವಾದವನ್ನು ಮುಗಿಸಲು ನಾವು ಕೆಲಸ ಮಾಡಬೇಕಾಗುತ್ತದೆ. ಮುಸ್ಲಿಂ ಕೋಮುವಾದದ ಕುರಿತು ಬರೆಯುವುದು ದೊಡ್ಡ ವಿಷಯವೇ ಅಲ್ಲ.
ಬಲ ಇಲ್ಲದ ವ್ಯಕ್ತಿಗಳು ಮಾಡುವ ಕ್ರೈಂಗೂ ಎಲ್ಲ ರೀತಿಯ ವ್ಯವಸ್ಥೆಯ ಬೆಂಬಲ ಇರುವ ವ್ಯಕ್ತಿಗಳು ಮಾಡುವ ಕ್ರೈಂಗೂ ವ್ಯತ್ಯಾಸವಿರುತ್ತದೆ. ಹಾಗಾಗಿ ನಾನು ಮುಸ್ಲಿಂ ಕೋಮುವಾದವನ್ನು ಗಂಭೀರವಾಗಿ ತೆಗೆದುಕೊಂಡು ಬರೆದಿಲ್ಲ. ಹಾಗೆಂದು ನಾನು ಮುಸ್ಲಿಂ ಕೋಮುವಾದಕ್ಕೆ ಬೆಂಬಲ ನೀಡುತ್ತೇನೆ ಎಂದಲ್ಲ. ನಾನು ಮುಸ್ಲಿಂ ಕೋಮುವಾದಿಗಳ ಪರವೂ ಇಲ್ಲ ಹಿಂದೂ ಕೋಮುವಾದಿಗಳ ಪರವೂ ಇಲ್ಲ.
ಸಂದರ್ಶಕ: ಯತಿರಾಜ್ ಬ್ಯಾಲಹಳ್ಳಿ
ಇದನ್ನೂ ಓದಿ: ಕರಾವಳಿಯಲ್ಲಿನ ಕೋಮುದ್ವೇಷಗಳ ಆಯಾಮ ತೆರೆದಿಡುವ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’