ಡಿಸೆಂಬರ್ 6, 2022 ಬಾಬಾಸಾಹೇಬರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ’ದಲಿತರ ಸಾಂಸ್ಕೃತಿಕ ಪ್ರತಿರೋಧ’ ಹೆಸರಿನಲ್ಲಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶಕ್ಕ ವೇದಿಕೆ ಸಜ್ಜಾಗಿದೆ. ಎನ್ ವೆಂಕಟೇಶ್, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರೆಗೋಡು, ಲಕ್ಷ್ಮೀನಾರಾಯಣ ನಾಗವಾರ, ವಿ ನಾಗರಾಜ್, ಎನ್ ಮುನಿಸ್ವಾಮಿ ಮುಂತಾದ ಮುಖಂಡರ ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಸಮಾವೇಶ ಇದಾಗಿದೆ. ದೇವನೂರು ಮಹದೇವ, ರಾಮದೇವ ರಾಕೆ, ಕೋಟಗಾನಳ್ಳಿ ರಾಮಯ್ಯ, ಶಿವಾಜಿ ಗಣೇಶನ್ ಮುಂತಾದ ಚಿಂತಕರು ಕೂಡ ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ, ದೀರ್ಘಕಾಲ ಪರ್ತಕರ್ತರಾಗಿ ಸೇವೆ ಸಲ್ಲಿಸಿರುವ, ಡಿಎಸ್‌ಎಸ್‌ನ ಭಾಗವಾಗಿದ್ದ ಮತ್ತು ಸದರಿ ಐಕ್ಯತಾ ಸಮಾವೇಶ ಜರುಗುವುದಕ್ಕೆ ಪ್ರಮುಖ ಪಾತ್ರ ವಹಿಸಿರುವ ’ಸಂವಾದ’ ಪತ್ರಿಕೆಯ ಇಂದೂಧರ ಹೊನ್ನಾಪುರ ಅವರು ನ್ಯಾಯಪಥ ಪತ್ರಿಕೆಯೊಂದಿಗೆ ಮಾತುಕತೆ ನಡೆಸಿದರು.
ಯತಿರಾಜ್: ಪತ್ರಿಕೋದ್ಯಮದಲ್ಲಿ ದಲಿತರ ಪ್ರಾತಿನಿಧ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇಂದೂಧರ ಹೊನ್ನಾಪುರ: ಪತ್ರಿಕೋದ್ಯಮದಲ್ಲಿ ದಲಿತರ ಪ್ರಾತಿನಿಧ್ಯ ಎನ್ನುವುದಕ್ಕಿಂತ ದಲಿತರು ಪತ್ರಿಕೋದ್ಯಮದ ಅಂತರ್ಗತ ಭಾಗವಾಗಬೇಕಿದೆ. ಏಕೆಂದರೆ ಪ್ರಾತಿನಿಧ್ಯ ಎಂದಾಗ ಹಿಂದೆ ಇರುವ ವ್ಯವಸ್ಥೆಯಲ್ಲಿ ಒಂದಷ್ಟು ಅವಕಾಶ ಕೊಡಿಸಿದಂತಾಗುತ್ತದೆ. ದೇಶದಲ್ಲಿ ಸುಮಾರು 27%ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದು, ಈ ನಾಡಿನ ಮೂಲ ನಿವಾಸಿಗಳಾಗಿದ್ದಾರೆ. ಈ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಕಟ್ಟಿ ಬೆಳೆಸಿದವರು ದಲಿತರು. ಹಾಗಾಗಿ ದಲಿತರಿಗೆ ಪತ್ರಿಕೋದ್ಯಮದಲ್ಲಿ ಪ್ರಾತಿನಿಧ್ಯ ಬೇಕು ಎನ್ನುವುದಕ್ಕಿಂತ ಪತ್ರಿಕೋದ್ಯಮವೇ ತನ್ನಳೊಗೆ ದಲಿತರನ್ನು ಒಳಗೊಳ್ಳಬೇಕು. ದಲಿತರೇ ಪತ್ರಿಕೋದ್ಯಮವನ್ನು ನಡೆಸಬೇಕು ಎಂಬುದು ಮುಖ್ಯ ಅನಿಸುತ್ತದೆ.
ನಾನು ಪತ್ರಿಕೋದ್ಯಮಕ್ಕೆ ಬಂದಾಗ ಅದೇ ಪ್ರಾತಿನಿಧ್ಯದ ಪ್ರಶ್ನೆ ಇತ್ತು. ಆ ಕಾಲದಲ್ಲಿ ಪ್ರಜಾವಾಣಿ ಅತಿ ಪ್ರಬಲ ಪತ್ರಿಕೆಯಾಗಿದ್ದು, ಅಲ್ಲಿ ದಲಿತರಿಗೆ ಸಾಕಷ್ಟು ಪ್ರಾತಿನಿಧ್ಯ ಕೊಟ್ಟಿದ್ದಾರೆ ಎಂದು ಜನ ಮಾತನಾಡುತ್ತಿದ್ದರು. ನನಗೆ ಆಗಲೂ ಅದು ಸರಿ ಎನಿಸುತ್ತಿರಲಿಲ್ಲ, ಈಗಲೂ ಸರಿಯೆನಿಸುತ್ತಿಲ್ಲ. ಏಕೆಂದರೆ ಆಗ ನಾನು ಮತ್ತು ಶಿವಾಜಿ ಗಣೇಶನ್ ಇಬ್ಬರೂ ಒಟ್ಟಿಗೆ ಪ್ರಜಾವಾಣಿ ಸೇರಿದ್ದೆವು. ನಾವು ಯಾರಿಗಿಂತಲೂ ಎರಡನೇ ಸ್ಥಾನದ ಕೆಲಸವನ್ನು ಮಾಡಲಿಲ್ಲ. ಬದಲಿಗೆ ನಮಗಿಂತಲೂ 10 ವರ್ಷ ಅನುಭವವಿದ್ದ ಪತ್ರಕರ್ತರನ್ನು ಮೀರಿಸುವ ಮಟ್ಟಕ್ಕೆ ಸಮರ್ಥವಾಗಿ ನಾವು ಕಾರ್ಯನಿರ್ವಹಿಸಿದ್ದೆವು. ಅದಕ್ಕೆ ಸರಿಯಾದ ಮನ್ನಣೆಯೂ ಸಹ ನಮಗೆ ಸಿಕ್ಕಿತ್ತು.
ಈ ಕ್ಷೇತ್ರ ಬೇರೆಯವರದು ಎನ್ನುವ ಮನಸ್ಥಿತಿಯೇ ತಪ್ಪು. ಪತ್ರಿಕೋದ್ಯಮ ನಮ್ಮದು. ಆದರೆ ಬೇರೆಯವರು ಆಕ್ರಮಿಸಿಕೊಂಡಿದ್ದಾರೆ. ಅದರಲ್ಲಿ ಪಾಲು ಕೊಡಿ ಎಂದು ಕೇಳುವುದಕ್ಕಿಂತ ಅದನ್ನೇ ನಮ್ಮದಾಗಿ ಮಾಡಿಕೊಂಡು ಮುನ್ನಡೆಸಿಕೊಂಡು ಹೋಗಬೇಕು. ಅದರಲ್ಲಿಯೇ ನಿಜವಾದ ಭಾರತದ ಸಂಸ್ಕೃತಿ, ಘನತೆ, ಗೌರವ ಇದೆ ಎಂಬುದು ನನ್ನ ಆಶಯ.
ಪ್ರಶ್ನೆ: ಸುದ್ದಿ ಸಂಗಾತಿ, ಸಂವಾದ ಪತ್ರಿಕೆಯ ಸಂಪಾದಕರಾಗಿದ್ದಿರಿ. ಅದರ ಅನುಭವಗಳೇನು?
ಉತ್ತರ: ನಾನು ಚಳವಳಿಯ ಹಿನ್ನೆಲೆಯವನು. ವಿದ್ಯಾರ್ಥಿ ಚಳವಳಿಯಿಂದ ಬಂದ ನಾನು ಚಳವಳಿಯ ಮುಂದುವರಿದ ಭಾಗವಾಗಿ ಪತ್ರಿಕಾ ವೃತ್ತಿಯನ್ನು ಪರಿಣಗಿಸಿದೆ. ವಿದ್ಯಾರ್ಥಿಯಾಗಿದ್ದಲೇ ಪತ್ರಿಕೆಗಳೊಟ್ಟಿಗೆ ಕೆಲಸ ಮಾಡಿದ್ದ ಅನುಭವವಿತ್ತು. ಮುಖ್ಯವಾಗಿ ಆಂದೋಲನ ಪತ್ರಿಕೆಯಲ್ಲಿ ಸಣ್ಣ ಪುಟ್ಟದಾಗಿ ಬರೆಯುತ್ತಿದ್ದೆ. ವಿದ್ಯಾರ್ಥಿಯಾಗಿದ್ದಾಗಲೇ ನಾವು ಪಂಚಮ ಎಂಬ ಪತ್ರಿಕೆ ಆರಂಭಿಸಿದ್ದು; ನಾನು ಅದರ ಸಂಪಾದಕನಾಗಿದ್ದೆ. ಅದು ಮುಂದೆ ದಲಿತ ಚಳವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು.
ಮೊದಲ ತಲೆಮಾರಿನ ಓದು ಬರಹ ಕಲಿತ ದಲಿತ ಬರಹಗಾರರಿಗೆ ದೊಡ್ಡ ವೇದಿಕೆ ಒದಗಿಸಿಕೊಟ್ಟಿದ್ದು ಪಂಚಮ ಪತ್ರಿಕೆ. ಆನಂತರ ನನಗೆ ಪ್ರಜಾವಾಣಿಯಂತಹ ಮುಖ್ಯವಾಹಿನಿ ಪತ್ರಿಕೆಯಲ್ಲಿ ಅವಕಾಶ ಸಿಕ್ಕಿತು. ಆದರೆ ನನ್ನ ಚಳವಳಿಯ ಉದ್ದೇಶ ಏನಿತ್ತು ಅದನ್ನು ಮುಂದುವರೆಸಿಕೊಂಡು ಹೋಗಲು ಪ್ರಜಾವಾಣಿ ಸಹ ಸೂಕ್ತ ವೇದಿಕೆಯಲ್ಲ ಎಂದು ಅನಿಸಿದ ಕಾರಣ ಅದನ್ನೂ ಬಿಟ್ಟೆ. ಆನಂತರ ಹಲವರು ಸಮಾನ ಮನಸ್ಕರು ಸೇರಿ ಮುಂಗಾರು ಎಂಬ ಪತ್ರಿಕೆಯನ್ನು ಮಂಗಳೂರಿನಿಂದ ಆರಂಭಿಸಿದೆವು. ನಾನು ಅದರ ಕಾರ್ಯಕಾರಿ ಸಂಪಾದಕನಾಗಿದ್ದೆ. ನಾನು ಯಾವ ಕಾರಣಕ್ಕಾಗಿ ಪ್ರಜಾವಾಣಿ ಪತ್ರಿಕೆ ಬಿಟ್ಟೆನೊ ಅದೇ ಕಾರಣಕ್ಕಾಗಿ ಮುಂಗಾರು ಪತ್ರಿಕೆಯನ್ನು ಸಹ ಬಿಡಬೇಕಾಯಿತು. ಆನಂತರ ಸುದ್ದಿ ಸಂಗಾತಿ ಶುರು ಮಾಡಿದೆವು. ಅದರ ಸರ್ಕ್ಯುಲೇಶನ್ ಚೆನ್ನಾಗಿದ್ದರೂ ವ್ಯಾವಹಾರಿಕವಾಗಿ ಅದನ್ನು ಉಳಿಸಿಕೊಳ್ಳಲು ಕಷ್ಟವಾಯಿತು. ಅದೇ ಸಮಯದಲ್ಲಿ ನನ್ನ ಪತ್ನಿ ಕ್ಯಾನ್ಸರ್‌ನಿಂದ ನಿಧನರಾದರು. ಆಗ ಸುದ್ದಿ ಸಂಗಾತಿ ನಿಂತುಹೋಯಿತು. ಆನಂತರ 2002ರಲ್ಲಿ ಸ್ಪೂರ್ತಿಧಾಮದ ಮರಿಸ್ವಾಮಿಯವರು ಬೆನ್ನೆಲುಬಾಗಿ ನಿಂತ ಕಾರಣ ಸಂವಾದ ಪತ್ರಿಕೆಯನ್ನು ಆರಂಭಿಸಿದೆವು. 2015ರಿಂದ ಅಗ್ನಿ ಪತ್ರಿಕೆಯ ಸಂಪಾದಕನಾಗಿ ಸಹ ಕೆಲ ವರ್ಷ ಕೆಲಸ ಮಾಡಿದ್ದೆ. ಒಟ್ಟಿನಲ್ಲಿ ನಾನು ಯಾವ ಉದ್ದೇಶಕ್ಕಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡೆನೋ ಅದನ್ನು ಇಂದಿಗೂ ಸಹ ಮುಂದುವರೆಸುತ್ತಿದ್ದೇನೆ. ನನ್ನ ಪ್ರಕಾರ ಪತ್ರಿಕೋದ್ಯಮವು ಸಹ ಒಂದು ಚಳವಳಿ. ಪ್ರತಿಯೊಬ್ಬ ಪತ್ರಕರ್ತನ ಹೃದಯದಲ್ಲಿ ಒಬ್ಬ ಚಳವಳಿಗಾರ, ಹೋರಾಟಗಾರ, ಒಬ್ಬ ಬಂಡಾಯಗಾರ ಇರಬೇಕು. ಆಗ ಮಾತ್ರ ಅವನು ನಿಜವಾದ ಪತ್ರಕರ್ತನಾಗುತ್ತಾನೆ. ಅದು ಹೊಟ್ಟೆಪಾಡಿನ, ವ್ಯವಹಾರದ ವೃತ್ತಿಯಲ್ಲ. ಅದು ಸಮಾಜದಲ್ಲಿ ಬದಲಾವಣೆಗೆ, ನೊಂದವರಿಗೆ ನ್ಯಾಯ ಕೊಡಿಸುವ ವೇದಿಕೆ ಮತ್ತು ಚಳವಳಿಯ ಮುಂದುವರೆದ ಭಾಗವಾಗಿದೆ. ಇವತ್ತು ನಾನು ಅದೇ ದಾರಿಯಲ್ಲಿದ್ದೀನಿ.

ಪ್ರ: ದಲಿತ ಸಂಘರ್ಷ ಸಮಿತಿ ಒಡೆದುಹೋಯಿತು… ನಾಲ್ಕಾರು ಬಣಗಳಾಗಿ ಗುರುತಿಸಿಕೊಂಡಿತು. ದಲಿತ ಶಕ್ತಿ ಒಗ್ಗೂಡುವ ಪ್ರಯತ್ನಗಳಾಗುತ್ತಿವೆ. ಈ ಪ್ರಯತ್ನಗಳು ಹಿಂದೆಯೂ ನಡೆದಿತ್ತು. ಆದರೆ ಅದು ತಕ್ಕಮಟ್ಟಿಗಿನ ಯಶಸ್ಸು ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ದಲಿತ ಐಕ್ಯತಾ ಸಮಾವೇಶದ ಅನಿವಾರ್ಯತೆ ಸೃಷ್ಟಿಯಾಗಿದ್ದು ಹೇಗೆ? ಅದು ದಲಿತರನ್ನು ಒಂದು ವೇದಿಕೆಗೆ ತರಬಲ್ಲದೆ?
ಉ: ಈ ಸಮಾವೇಶ ದಲಿತರನ್ನು ಒಟ್ಟಿಗೆ ತರಬಹುದು ಎಂದು ನನಗನಿಸುತ್ತಿದೆ. ಏಕೆಂದರೆ ದಲಿತ ಚಳವಳಿ ಹುಟ್ಟಿದ್ದು 70ರ ದಶಕದಲ್ಲಿ. ಅದಕ್ಕೊಂದು ಸಾಂದರ್ಭಿಕ ಒತ್ತಡವಿತ್ತು. ಅವತ್ತಿನ ರಾಜಕೀಯ-ಸಾಮಾಜಿಕ ಬದುಕಿನ ಒತ್ತಡಗಳಿಂದ ದಲಿತ ಚಳವಳಿ ಹುಟ್ಟಿತ್ತು. ವ್ಯಕ್ತಿಗಳು ಅದಕ್ಕೆ ನೆಪ ಮಾತ್ರ. ನಾವು ಯಾರ್‍ಯಾರು ಅದರ ಆರಂಭದ ದಿನಗಳಲ್ಲಿ ಅದರ ಹುಟ್ಟಿಗೆ ಕಾರಣ ಎಂದು ಹೇಳಿಕೊಳ್ಳುತ್ತೇವೆಯೋ ನಾವು ನೆಪಮಾತ್ರ. ಅಂದಿನ ಐತಿಹಾಸಿಕ-ಸಾಂದರ್ಭಿಕ ಒತ್ತಡವೇ ಚಳವಳಿ ಹುಟ್ಟಿಗೆ ಕಾರಣ. ಹಲವಾರು ವರ್ಷಗಳವರೆಗೆ ಅದು ಮಹತ್ವದ ಹೋರಾಟಗಳನ್ನು ಮುನ್ನೆಡೆಸಿತ್ತು. ಆದರೆ ಆನಂತರ ವ್ಯಕ್ತಿಗತ, ರಾಜಕೀಯ ಹಿತಾಸಕ್ತಿಗಳು ಮುನ್ನೆಲೆಗೆ ಬಂದು ದಲಿತ ಚಳವಳಿ ವಿಘಟನೆಯಾಯಿತು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ 70ರ ದಶಕಕ್ಕಿಂತ ದೊಡ್ಡ ಸಾಮಾಜಿಕ, ರಾಜಕೀಯ ತುರ್ತು ಇದೆ. ಚಳವಳಿಗಳ ಒಗ್ಗಟ್ಟು ಅನಿವಾರ್ಯವಾಗಿದೆ. ಹಾಗಾಗಿ ದಲಿತ ಸಂಘಟನೆಗಳು ಒಂದೆಡೆ ಸೇರಬೇಕೆಂಬ ಮನಸ್ಥಿತಿ ನಿರ್ಮಾಣವಾಗಿದೆ. ಇಂದು ದಲಿತ ಸಂಘಟನೆಗಳು ಒಗ್ಗೂಡಬೇಕೆಂದು ನಾವು ಯಾರುಯಾರು ಪ್ರಯತ್ನಿಸುತ್ತಿದ್ದೇವೆಯೋ, ಇಲ್ಲಿ ಕೂಡ ನಾವು ನೆಪಮಾತ್ರವಾಗಿದ್ದೇವೆ.
ಇದನ್ನೂ ಓದಿ: ’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ
ಆ ರೀತಿಯ ವಾತವಾರಣ ಸೃಷ್ಟಿಯಾಗಿದೆ. ಯಾರುಯಾರು ವಿಘಟನೆಯಾಗಿದ್ದಾರೋ ಅವರಿಗೂ ಸಹ ನಾವೆಲ್ಲವರೂ ಒಟ್ಟಾಗದಿದ್ದರೆ ಈ ದೇಶ ಉಳಿಸಲು ಸಾಧ್ಯವಿಲ್ಲ ಅಂತ ಅನಿಸಿದೆ. ದಲಿತರು ಮಾತ್ರ ಉಳಿದುಕೊಳ್ಳುವುದಲ್ಲ, ಈ ದೇಶವನ್ನು ಉಳಿಸಬೇಕು; ದೇಶದ ಶ್ರಮಿಕರು ಮತ್ತು ದುಡಿಯುವ ವರ್ಗವನ್ನು ಉಳಿಸಬೇಕಿದೆ. ಇಡೀ ದೇಶವನ್ನೇ ವಿನಾಶದತ್ತ ಕೊಂಡೊಯ್ಯುವ, ಇಡೀ ದೇಶವನ್ನು ಪರರ ಪಾಲು ಮಾಡುವ, ಇಡೀ ದೇಶವನ್ನೇ ಕೆಲವೇ ಕೆಲವು ಕಾರ್ಪೊರೆಟ್ ಹಿತಾಸಕ್ತಿಗಳಿಗೆ ಮಾರಟ ಮಾಡುವಂತೆ ಕೆಟ್ಟ ಆಡಳಿತ ವ್ಯವಸ್ಥೆಯನ್ನು ಇಂದು ಆಳುವ ಪಕ್ಷ ನಿರ್ಮಿಸಿದೆ. ಇದು 1990ರ ದಶಕದಿಂದ ಆರಂಭವಾದರೂ ಇಷ್ಟೊಂದು ಹೀನಾಯ ಸ್ಥಿತಿ ಮುಟ್ಟುತ್ತದೆ ಎಂದು ಅಂದುಕೊಂಡಿರಲಿಲ್ಲ. ದೇಶಭಕ್ತಿ, ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶದ ಸಂಪತ್ತನ್ನು ಮಾರುವುದು, ದೇಶದ ದಿನನಿತ್ಯದ ಬದುಕಿಗೆ ಬೆಂಕಿ ಹಚ್ಚುವುದು, ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವುದು, ಆಂತರಿಕ ಕ್ಷೋಭೆ ಸೃಷ್ಟಿಸುವುದು, ಪರಸ್ಪರ ಅನುಮಾನಿಸುವ ವಾತವಾರಣ ಸೃಷ್ಟಿಸುವ ಕೆಲಸಗಳ ನಿರಂತರವಾಗಿ ಸಾಗಿವೆ. ಆ ಒತ್ತಡ ದಲಿತ ಸಂಘಟನೆಗಳನ್ನು ಒಟ್ಟಿಗೆ ತರುತ್ತಿದೆ. ಅದು ಯಶಸ್ವಿಯಾಗುತ್ತದೆ. ಆದರೆ ಅದನ್ನು ಒಡೆಯಲು ಒಂದಷ್ಟು ಜನ ಯತ್ನಿಸುತ್ತಿದ್ದಾರೆ. ಆದರೆ ಸಾಂದರ್ಭಿಕ ಒತ್ತಡ ನಿರ್ಮಾಣವಾಗಿರುವುದರಿಂದ ಅದೇ ನಮ್ಮನ್ನು ಯಶಸ್ಸಿನತ್ತ ತೆಗೆದುಕೊಂಡುಹೋಗುತ್ತದೆ.
ಈ ಪ್ರಕ್ರಿಯೆ ಶುರುವಾದ ಮೇಲೆ ಸಮಾನ ಮನಸ್ಕರಾದ ವಿವಿಧ ದಲಿತ ಸಂಘರ್ಷ ಸಮಿತಿಗಳನ್ನು ಒಟ್ಟು ಮಾಡುವ ಪ್ರಯತ್ನವನ್ನು ಕಳೆದ 2 ವರ್ಷದಿಂದ ಮಾಡುತ್ತಿದ್ದೇವೆ. ಜಾತ್ಯತೀತವಾದ ಜೀವಪರ ದಲಿತ ಸಂಘಟನೆಗಳನ್ನು ಒಟ್ಟಿಗೆ ತರುತ್ತಿದ್ದೇವೆ. ಯಾರು ಕೋಮುವಾದಿಗಳ ಜೊತೆ ಸೇರಿಲ್ಲವೋ, ಯಾರು ಸಂಘಪರಿವಾದ ಜೊತೆ, ದೇಶ ಒಡೆಯುವವರ ಜೊತೆ ಕೈ ಜೋಡಿಸಿಲ್ಲವೋ ಅಂತಹ ದಲಿತ ಸಂಘಟನೆಗಳನ್ನು ಮೊದಲ ಹಂತದಲ್ಲಿ ಒಟ್ಟುಗೂಡಿಸಲು ಯತ್ನಿಸುತ್ತಿದ್ದೇವೆ. ಆದರೆ ಇದಕ್ಕೆ ಹಲವು ಪ್ರಶ್ನೆಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ. ಇದರ ಹಿಂದೆ ಅವರಿದ್ದಾರೆ, ಇವರಿದ್ದಾರೆ, ಕಾಂಗ್ರೆಸ್‌ನವರಿದ್ದಾರೆ ಎನ್ನುವ ಆರೋಪಗಳು ಬರುತ್ತಿವೆ. ಸತ್ಯ ಏನೆಂದರೆ ಪಕ್ಷಾತೀತವಾದ ಪ್ರಯತ್ನವಿದು. ಚುನಾವಣೆ ಸಂದರ್ಭದಲ್ಲಿ ಒಳ್ಳೆಯ ರಾಜಕೀಯ ಅಧಿಕಾರಕ್ಕೆ ಬರಬೇಕೆಂಬ ಆಶಯದಿಂದ ಸಂಘಟನೆಗಳು ಜಾತ್ಯತೀತ ಪಕ್ಷಗಳಿಗೆ ಇದುವರೆಗೂ ಬೆಂಬಲ ಕೊಟ್ಟಿದ್ದಾವೆಯೇ ಹೊರತು ಯಾವುದೇ ಕೋಮುವಾದಿ ಸಂಘಟನೆಗಳ ಜೊತೆ ಹೋಗಿಲ್ಲ. ಅಷ್ಟರಮಟ್ಟಿಗೆ ಬಾಬಾಸಾಹೇಬರು ತೋರಿದ ಸೈದ್ಧಾಂತಿಕ ತಳಹದಿಯ ಮೇಲೆ ನಡೆಯುತ್ತಿದ್ದೇವೆ. ಅಂತಹ ಸಂಘಟನೆಗಳನ್ನು ಮೊದಲನೇ ಹಂತದಲ್ಲಿ ಒಟ್ಟು ಮಾಡಿದ್ದೇವೆ. ಅದು ಮುಂದುವರೆಯುತ್ತದೆ. ಬಹುತೇಕ ಎಲ್ಲಾ ಸಂಘಟನೆಗಳನ್ನು ಒಟ್ಟಿಗೆ ತರಬೇಕೆಂಬುದು ನಮ್ಮ ಆಶಯ.
ಪ್ರ: ದಲಿತ ಮೀಸಲಾತಿ ಹೆಚ್ಚಳ ಮಾಡಿರುವುದಾಗಿ ಬಿಜೆಪಿ ಸರ್ಕಾರ ಹೇಳುತ್ತಿದೆ. ಮೀಸಲಾತಿ ಹೆಚ್ಚಳದ ತಾಂತ್ರಿಕ ಅಂಶಗಳು ಚರ್ಚೆಯಾಗಿಲ್ಲ. ಜೊತೆ ಒಳಮೀಸಲಾತಿ ಇಲ್ಲದ ಮೀಸಲಾತಿ ಹೆಚ್ಚಳ ಮೂಗಿಗೆ ತುಪ್ಪ ಸವರಿದಂತೆ ಕಾಣುತ್ತದೆ. ಒಳಮೀಸಲಾತಿಯ ಗೊಂದಲ ದಲಿತರಲ್ಲಿನ ಬಿರುಕು ಹೆಚ್ಚಾಗಲೂ ಕಾರಣವಾಗಿತ್ತು. ಈ ವಿಚಾರದಲ್ಲಿ ಅಸ್ಪೃಶ್ಯ ಸಮುದಾಯ ಒಮ್ಮತಕ್ಕೆ ಬಂದಿದೆಯೇ?
ಉ: ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡುವು ಕ್ರಮವನ್ನು ನಾವು ತಪ್ಪು ಎನ್ನದೆ ಸ್ವಾಗತಿಸುತ್ತೇವೆ. ಆದರೆ ಅದು ಚುನಾವಣೆಯ ಗಿಮಿಕ್ ಎನ್ನುವುದು ಅಷ್ಟೇ ಸ್ಪಷ್ಟ. ಹಾಗಾಗಿಯೇ ಅವರು ಚುನಾವಣೆಯ ಸಂದರ್ಭದಲ್ಲಿ ತರಾತುರಿಯಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ದುರಂತವೆಂದರೆ ಇರುವ ಮೀಸಲಾತಿಯನ್ನೇ ಅವರು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿಲ್ಲ. ಈಗ ಕರ್ನಾಟಕದಲ್ಲಿ ದಲಿತರಿಗೆ ಯಾವ 18% ಮೀಸಲಾತಿ ಇದೆಯೋ ಅದೇ ಪೂರ್ಣ ಜಾರಿಯಾಗುತ್ತಿಲ್ಲ. ರಾಜಕೀಯ ಮೀಸಲಾತಿ ಹೊರತುಪಡಿಸಿ ಉಳಿದ ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಮೀಸಲಾತಿ ಸಂಪೂರ್ಣವಾಗಿ ಜಾರಿಗೆ ಬರುತ್ತಿಲ್ಲ. ಅದರ ನಡುವೆ ಮೀಸಲಾತಿ ಹೆಚ್ಚಿಸುವ ಗಿಮಿಕ್ ಮಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಜಾರಿಗೆಯಾಗುತ್ತದೆ ಗೊತ್ತಿಲ್ಲ.
ಈಗ ಇಡಬ್ಲ್ಯುಎಸ್ ತಂದು ಮೀಸಲಾತಿಯ ಪರಿಕಲ್ಪನೆಯನ್ನೇ ಬುಡಮೇಲು ಮಾಡಲು ಹೊರಟಿರುವ ಸರ್ಕಾರವೇ ಇನ್ನೊಂದೆಡೆ ಮೀಸಲಾತಿ ಹೆಚ್ಚು ಮಾಡುತ್ತೇವೆ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಮೀಸಲಾತಿ ನೀಡುವ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ದಲಿತರಿಗೆ ಮೀಸಲಾತಿ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮೂರು ನಡೆಗಳ ಮೂಲಕ ದಲಿತರ ಕಣ್ಣಿಗೆ ಮಣ್ಣೆರೆಚುವ ಈ ಕುತಂತ್ರದ ಬಗ್ಗೆ ದಲಿತರಿಗೆ ಜಾಗೃತಿ ಮೂಡಿಸಬೇಕಾಗಿದೆ. ಇದು ರಾಜಕೀಯ ಜಾಗೃತಿಯಾಗಬೇಕಿದೆ. ಹಾಗಾಗಿ ಇದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮುಂದಿನ ಆದ್ಯತೆಯ ಕೆಲಸವಾಗಿದೆ
ಇನ್ನು ಒಳಮೀಸಲಾತಿಯ ವಿಚಾರಕ್ಕೆ ಬರುವುದಾದರೆ, ಇದು ದಲಿತರು ಒಪ್ಪಿಕೊಳ್ಳಲೇಬೇಕಾದ ವಿಚಾರವಾಗಿದೆ. ಒಳಮೀಸಲಾತಿಯನ್ನು ಯಾರೂ ವಿರೋಧ ಮಾಡುತ್ತಿಲ್ಲ. ಅದು ಇಂದಿನ ಕಾಲದ ಕರೆಯಾಗಿದೆ. ಒಳಮೀಸಲಾತಿಯನ್ನು ಜಾರಿಗೊಳಿಸಲೇಬೇಕಾಗಿದೆ. ಆದರೆ ಕೆಲವರು ಸದಾಶಿವ ಆಯೋಗದ ವರದಿಯನ್ನು ಮಾತ್ರ ವಿರೋಧಿಸುತ್ತಿದ್ದಾರೆ. ಹಾಗಾಗಿ ಒಳಮೀಸಲಾತಿ ಜಾರಿಗೆ ತರುವ ಕಾರ್ಯವಿಧಾನದ ಕುರಿತು ಸಾವಧಾನದಿಂದ, ಸೌಜನ್ಯದಿಂದ ಚರ್ಚೆ ನಡೆಸಬೇಕಿದೆ. ಎಲ್ಲರ ಸಹಮತದಿಂದ ಅದು ಜಾರಿಯಾಗಬೇಕು. ಮೊಟ್ಟಮೊದಲು ಸದಾಶಿವ ಆಯೋಗದ ವರದಿಯನ್ನು ಬಹಿರಂಗಗೊಳಿಸಿ ಚರ್ಚೆ ನಡೆಸಬೇಕು. ಅದರಲ್ಲಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಳ ಮಾಡಬಾರದು ಎಂದಿದ್ದು ಮೀಸಲಾತಿ ಪರಿಕಲ್ಪನೆಗೆ ಅದು ವಿರುದ್ಧವಾಗಿದೆ; ಸಮೀಕ್ಷೆಯಲ್ಲಿನ ಮಾಹಿತಿಗಳು ಸಮರ್ಪಕವಾಗಿಲ್ಲ ಎಂಬ ದೂರುಗಳಿವೆ; ಕ್ರೀಮಿ ಲೇಯರ್ ತಂದಿದ್ದಾರೆ; ಒಂದು ಜನರೇಷನ್‌ಗೆ ಮಾತ್ರ ಮೀಸಲಾತಿ ಸಾಕು ಎಂಬ ಶಿಫಾರಸ್ಸಿದೆ ಎಂದು ಕೆಲವರು ಆರೋಪಿಸಿದ್ದಾರೆ. ಇದು ನಮಗೆ ಸಮರ್ಪಕವಾಗಿ ತಿಳಿಯಬೇಕಾದರೆ ಅದನ್ನು ಸರ್ಕಾರ ಬಿಡುಗಡೆ ಮಾಡಿ ಬಹಿರಂಗ ಸಾರ್ವಜನಿಕ ಚರ್ಚೆಗೆ ತರಬೇಕು. ಪರಿಶಿಷ್ಟ ಜಾತಿಗಳ ಒಳಗೆ ಇರುವ ನೂರಕ್ಕೂ ಅಧಿಕ ಜಾತಿಗಳಿಗೆ ಸಂಬಂಧಿಸಿದ ವಿಷಯವಾದ್ದರಿಂದ ಒಳಮೀಸಲಾತಿ ಬಗ್ಗೆ ಚರ್ಚೆ ನಡೆದು ಜಾರಿಗೆ ಬರಬೇಕಿದೆ.
ಈ ವಿಚಾರದಲ್ಲಿ ವೈರಿ ಒಬ್ಬನನ್ನು ಸೃಷ್ಟಿ ಮಾಡಿ ಆತನ ವಿರುದ್ಧ ಹೊಡೆದಾಟಕ್ಕೆ ಎತ್ತಿಕಟ್ಟಲಾಗುತ್ತದೆ. ಅವನು ನಿಜವಾಗಿಯೂ ವೈರಿಯಾಗಿರುವುದಿಲ್ಲ. ದಲಿತರ ಒಳಗೆ ಇದನ್ನು ಹುಟ್ಟಿಸಲಾಗಿದೆ. ವೈರಿ ಇಲ್ಲದಿದ್ದರೂ ಇದ್ದಾನೆ ಎಂಬ ಭಾವನೆ ಬಂದುಬಿಟ್ಟಿದೆ. ಇದರಿಂದ ನಾವು ಅಣ್ಣ ತಮ್ಮಂದಿರು ಜಗಳವಾಡುತ್ತೇವೆಯೆ ಹೊರತು ನಮ್ಮ ನಿಜವಾದ ವೈರಿ ಎಲ್ಲಿದ್ದಾನೆ ಎಂಬುದನ್ನು ಮರೆಯುತ್ತಿದ್ದೇವೆ. ಇದೊಂದು ದೊಡ್ಡ ವೈರುಧ್ಯವಾಗಿದೆ. ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳು ಪರಿಶಿಷ್ಟ ಜಾತಿಯಲ್ಲಿಯೇ ಬರುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಸುಳ್ಳು ಜಾತಿ ಪ್ರಮಾಣಪತ್ರದ ದೊಡ್ಡ ಸಮಸ್ಯೆಯಿದೆ. ವೀರಶೈವ ಜಂಗಮರು ನಾವು ಪರಿಶಿಷ್ಟರು ಎಂದು ಪ್ರಮಾಣ ಪತ್ರ ಬರೆದು ಶಾಸಕರಾಗುತ್ತಿದ್ದಾರೆ. ದಲಿತ ಮಕ್ಕಳಿಗೆ ಸ್ಕಾಲರ್‌ಶಿಪ್ ನಿಲ್ಲಿಸುತ್ತಿದ್ದಾರೆ. ದಲಿತರ ಕುರಿತು ನಡೆಯುತ್ತಿದ್ದ ಸಂಶೋಧಾನ ಕೇಂದ್ರಗಳು ನಿಂತುಹೋಗಿವೆ. ಇಂತಹ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಮೊದಲು ನಮ್ಮಲ್ಲಿ ಒಗ್ಗಟ್ಟು ಬರಬೇಕಾಗಿದೆ. ಅದಕ್ಕಾಗಿ ಈ ಪ್ರಯತ್ನಗಳು ನಡೆಯುತ್ತಿವೆ.
ನಮ್ಮನ್ನು ವಿಸ್ಮೃತಿಗೆ ತಳ್ಳುವ ಹುನ್ನಾರ ಮಾಡುತ್ತಿದ್ದಾರೆ. ಬಾಬಾ ಸಾಹೇಬರ ಪರಿನಿಬ್ಬಾಣದ ದಿನ ಇವರು ಮಸೀದಿ ಒಡೆಯುತ್ತಾರೆ. ಆ ದಿನದ ಮಹತ್ವವನ್ನೇ ಹಾಳು ಮಾಡಿದರು. ಇನ್ನು ನವೆಂಬರ್ 26 ಸಂವಿಧಾನ ಸಮರ್ಪಣ ದಿನವಾಗಿದೆ. ಅಂದು ಸಂವಿಧಾನದ ಹೆಮ್ಮೆಯನ್ನು ಎತ್ತಿ ಹಿಡಿಯುವ ಬದಲು ಸುಳ್ಳು ಹೇಳಿ ವೇದಗಳನ್ನು, ಚಾತುರ್ವಣವನ್ನು ಹೇರುವ ಪಿತೂರಿ ಮಾಡುತ್ತಿದ್ದಾರೆ. ತಳಸಮುದಾಯದ ಬಹುಸಂಸ್ಕೃತಿಯನ್ನು ನಾಶ ಮಾಡಿ ಏಕಸಂಸ್ಕೃತಿಯನ್ನು ಸಂವಿಧಾನದ ಹೆಸರಿನಲ್ಲಿಯೇ ಹೇರಲಾಗುತ್ತಿದೆ. ಇಂತಹ ಹೀನ ಕೆಲಸದಲ್ಲಿ ತೊಡಗಿರುವ ಸಂಘಪರಿವಾರವನ್ನು ದಲಿತರು ಹಿಮ್ಮೆಟ್ಟಿಸಬೇಕಲ್ಲವೇ?
ನಾವು ಯಾವುದೇ ಜಾತಿಯನ್ನು ಅಥವಾ ಬ್ರಾಹ್ಮಣ ಜಾತಿಯನ್ನು ವಿರೋಧಿಸುತ್ತಿಲ್ಲ. ಯಾರ ಮೇಲೂ ನಮಗೆ ಸೇಡಿಲ್ಲ. ಆದರೆ ಬ್ರಾಹ್ಮಣರ ಸಾರ್ವಭೌಮತ್ವವನ್ನು, ಬ್ರಾಹ್ಮಣರೆ ಸರ್ವಶ್ರೇಷ್ಠರು ಎಂದು ಉಳಿದವರ ಮೇಲೆ ಸವಾರಿ ಮಾಡುವ ಯಜಮಾನಿಕೆಯ ಹೇರಿಕೆಯನ್ನು ವಿರೋಧಿಸುತ್ತಿದ್ದೇವೆ. ಮೇಲು ಕೀಳನ್ನು ವಿರೋಧಿಸಿ ಸಂವಿಧಾನ ಸಾರಿದ ಸಮಾನತೆಯನ್ನು ಜಾರಿಗೊಳಿಸಬೇಕು ಎಂಬುದು ನಮ್ಮ ಅಭಿಪ್ರಾಯ. ಅದಕ್ಕಾಗಿ ದಲಿತರ ಜೊತೆಗೆ ಇತರ ಹಿಂದುಳಿದ ವರ್ಗಗಳು, ತಳಸಮುದಾಯಗಳು, ದುಡಿಯುವವರು, ಕಾರ್ಮಿಕರು ಎಲ್ಲರೂ ಒಗ್ಗಟ್ಟಾಗಬೇಕಿದೆ.
ಬಡವರು ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ರಾಷ್ಟ್ರದ್ರೋಹವೇ? ಆದಿವಾಸಿಗಳ ಪರ ಹೋರಾಡುವುದು ತಪ್ಪೇ? ಅನ್ಯಾಯವನ್ನು ಪ್ರಶ್ನಿಸಿದವರನ್ನು ಏಕೆ ಜೈಲಿಗೆ ಹಾಕುತ್ತಿದ್ದಾರೆ? ದೇಶದ ಬ್ಯಾಂಕುಗಳನ್ನು ಕೊಳ್ಳೆ ಹೊಡೆದವರು ವಿದೇಶಗಳಲ್ಲಿ ಸುಖವಾಗಿದ್ದಾರೆ. ಇಲ್ಲಿ ಸರ್ಕಾರಿ ಆಸ್ತಿಗಳನ್ನು ಮಾರಲಾಗುತ್ತಿದೆ. ಅದಾನಿ ಅಂಬಾನಿಗೆ ಎಲ್ಲಾ ಮಾರಿದರೆ ನಾವು ಮೂಲನಿವಾಸಿಗಳು ಎಲ್ಲಿಗೆ ಹೋಗಬೇಕು? ಹಾಲು ಮೊಸರು ಸೇರಿ ಬಿಕ್ಷುಕರ ಮೇಲೆಯೂ ಜಿಎಸ್‌ಟಿ ಹಾಕಲಾಗುತ್ತಿದೆ. ಅವರು ಮಾಡುತ್ತಿರುವ ಮೋಸವೇ ನಾವು ಇಂದು ಒಗ್ಗಟ್ಟಾಗಲು ಕಾರಣವಾಗಿದೆ.
ಪ್ರ: ಬಹುಜನ ಸಿದ್ಧಾಂತದ ಬಗ್ಗೆ ಮಾತನಾಡುತ್ತೇವೆ. ಆದರೆ ಬಹುಜನ ಸಿದ್ಧಾಂತವನ್ನು ಶೂದ್ರ ಸಮುದಾಯಕ್ಕೆ ಅರ್ಥ ಮಾಡಿಸಲು ಸಾಧ್ಯವಾಗಲಿಲ್ಲವೇಕೆ?
ಉ: ಸೈಕೋಫ್ಯಾನ್ಸಿ ನಮ್ಮಲ್ಲಿ ಹಬ್ಬುತ್ತಿದೆ. ಅದಕ್ಕೆ ಕಾರಣ ನಮ್ಮ ತಾರತಮ್ಯದ ಶ್ರೇಣಿಕೃತ ವ್ಯವಸ್ಥೆಯಲ್ಲಿ ನಮ್ಮ ಕಾಲ ಕೆಳಗೆ ಒಬ್ಬ ಇದ್ದಾನೆ ಎಂಬ ಕೆಟ್ಟ ಭಾವನೆ ಮನಸ್ಸಿನಲ್ಲಿ ಬೇರೂರಿರುವುದು. ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರವರೆಗೆ, ಅವರಲ್ಲಿಯೂ ತೀರ ಕೆಳಗಿನವರೆಗೆ ಈ ಶ್ರೇಣೀಕರಣ ಗಾಢವಾಗಿ ಹರಡಿದೆ. ಈ ಬ್ರಾಹ್ಮಣ್ಯ ಎಂಬುದು ಕೇವಲ ಬ್ರಾಹ್ಮಣರಲ್ಲಿ ಮಾತ್ರವಿಲ್ಲ. ಅದು ಪ್ರತಿಯೊಂದು ಜಾತಿಯಲ್ಲಿಯೂ ಇದೆ. ಅದನ್ನು ಈಗ ಒಂದು ಜಾತಿಗೆ ಸೀಮಿತ ಮಾಡಲು ಸಾಧ್ಯವಿಲ್ಲ; ಅದು ಒಂದು ಸ್ವಾರ್ಥದ ಮನಸ್ಥಿತಿಯಾಗಿದೆ. ಸುಲಿಗೆಕೋರರ, ಇನ್ನೊಬ್ಬರನ್ನು ತುಳಿದು ಬದುಕುವವರ ದುಷ್ಟ ಮನಸ್ಥಿತಿ. ಅದು ಎಲ್ಲಾ ಜಾತಿಯಲ್ಲಿಯೂ ಇದೆ. ಅದನ್ನು ಪುರೋಹಿತಶಾಹಿ ಮನಸ್ಥಿತಿ ಎನ್ನಬಹುದು. ಇದಕ್ಕೆ ಮುಖ್ಯ ಕಾರಣ ಜಾಗೃತಿ ಇಲ್ಲದಿರುವುದಾಗಿದೆ. ತಮಗಾಗಿರುವ ಅನ್ಯಾಯ ಹಿಂದುಳಿದ ವರ್ಗಗಳಿಗೆ ಅರ್ಥವಾಗುತ್ತಿಲ್ಲ. ಮಂಡಲ್ ವರದಿ ಜಾರಿಗೆ ತಂದಾಗ ಹಿಂದುಳಿದವರೆ ಹೆಚ್ಚು ಹೋರಾಡಿದ್ದರು. ಇದನ್ನೆ ಬ್ರಾಹ್ಮಣ್ಯ ಎನ್ನಬಹುದು.
ದಲಿತರೊಳಗೆ ನೂರಾರು ಒಳ ಜಾತಿಗಳನ್ನು ಸೃಷ್ಟಿಸಿ ಭಾರತೀಯ ಸಮಾಜದಲ್ಲಿ ಎಂದೆಂದಿಗೂ ಒಂದಾಗದಂತಹ ಪರಿಸ್ಥಿತಿಯನ್ನು ವೈದಿಕಶಾಹಿ ಮನಸ್ಸುಗಳು ನಿರ್ಮಿಸಿದ್ದಾರೆ. ಇದು ಹೋಗಬೇಕು ಎಂದು ಬುದ್ಧನಿಂದಲೂ ಹೋರಾಟಗಳು ನಡೆಯುತ್ತಿವೆ. ಆದರೆ ವೈದಿಕಶಾಹಿ ಬುದ್ಧನನ್ನೂ ಹಿಮ್ಮೆಟ್ಟಿಸಿ ಪ್ರಾಬಲ್ಯ ಮೆರೆಯಿತು. ಈ ಬಂಡವಾಳಶಾಹಿಗಳು ಅವರೊಟ್ಟಿಗೆ ಸೇರಿರುವುದರಿಂದ ಜನರಿಗೆ ಮಂಕುಬೂದಿ ಎರಚಿದಂತಾಗಿದೆ. ಕಣ್ಮುಂದೆಯೇ ಅನ್ಯಾಯ ನಡೆಯುತ್ತಿದ್ದರೂ ಜನರಿಗೆ ತಿಳಿಯುತ್ತಿಲ್ಲ. ಇದನ್ನು ಮೀರಲು ಬೇಕಾದ ಜಾಗೃತಿಯನ್ನು ಸಂಘಟನೆಗಳು, ರಾಜಕೀಯ ಪಕ್ಷಗಳು ಇದುವರೆಗೂ ಮಾಡಿಲ್ಲ. ಲಾಭಕೋರತನಕ್ಕೆ ಬಿದ್ದು ಅವರು ಅದನ್ನು ಮಾಡುತ್ತಿಲ್ಲ. ಅದನ್ನು ಮೀರಲು ನಾವು ಅಂಬೇಡ್ಕರ್‌ರವರನ್ನು ಆದರ್ಶವಾಗಿ ಪರಿಗಣಿಸಬೇಕಿದೆ. ಜಾತೀಯತೆ ಮೀರಲು ಅವರು ಬೋಧಿಸಿದ ಅಂತರ್ಜಾತಿ ವಿವಾಹಗಳನ್ನು ಪೋಷಿಸಬೇಕು. ಚಾತುವರ್ಣವನ್ನು ನಿರ್ಮೂಲನೆ ಮಾಡಬೇಕಿದೆ. ಅದನ್ನು ಬುಡಸಮೇತ ಕಿತ್ತಾಕಬೇಕು. ಸಮಾಜ ನಿಂತ ನೀರಲ್ಲ. ಅಂತಹ ಒಂದು ಸಮಯ ಬಂದೇ ಬರುತ್ತದೆ.
ಪ್ರ: ದೇಶದ, ರಾಜ್ಯದ ಹಲವು ಸಮಸ್ಯೆಗಳಿಗೆ ದಲಿತ ಸಂಘಟನೆಗಳ ಹೋರಾಟ ಅನಿವಾರ್ಯವಾಗಿದೆ. ಆದರೆ ಚಳವಳಿಗಳು ಕುಸಿಯುತ್ತಿರುವಾಗ ಇದನ್ನು ನಿಭಾಯಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ದಲಿತ ಸಂಘಟನೆಗಳು ಉಳಿಸಿಕೊಂಡಿವೆಯೆ?
ಉ: ಒಗ್ಗಟ್ಟನ್ನು ಉಳಿಸಿ ಬೆಳೆಸುವುದು ದೊಡ್ಡ ಸವಾಲು. ಇವತ್ತಿನ ಸಂದರ್ಭದಲ್ಲಿ ಹಲವಾರು ಸವಾಲುಗಳು ನಮ್ಮ ಮುಂದಿವೆ. ಆದುದರಿಂದ ನಮ್ಮ ಕಾರ್ಯಕ್ರಮ, ನಮ್ಮ ನಡೆ-ನುಡಿ ಪ್ರತಿಯೊಂದನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕಿದೆ. 70ರ ದಶಕದ ಪರಿಸ್ಥಿತಿ ಈಗಿಲ್ಲ. ಇವತ್ತು ಕಾಲ ಬದಲಾಗಿದ್ದು, ಮನಷ್ಯನ ಮತ್ತು ದಲಿತರ ಆದ್ಯತೆಗಳು ಬದಲಾಗಿವೆ. ಹಾಗಾಗಿ ದಸಂಸ ಮುಖಂಡರು ತಮ್ಮ ಆದ್ಯತೆಯನ್ನು, ನುಡಿಗಟ್ಟನ್ನು, ತಮ್ಮ ಕಾರ್ಯಕ್ರಮಗಳನ್ನು ಬದಲಾಯಿಸಿಕೊಳ್ಳಬೇಕಿದೆ. ಈ ಹೊತ್ತಿನ ತುರ್ತಿಗೆ ನಾವು ಸ್ಪಂದಿಸುತ್ತಾ ಭವಿಷ್ಯದ ಮುನ್ನೋಟವುಳ್ಳ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಅಧಿಕಾರ ರಾಜಕಾರಣದ ಹೊರತಾಗಿ ಚಳವಳಿ ರಾಜಕಾರಣವನ್ನು ಹೇಗೆ ಗಟ್ಟಿಗೊಳಿಬೇಕು ಎಂದು ಯೋಚಿಸಬೇಕಿದೆ. ಏಕೆಂದರೆ ಒಂದು ಕಾಲದಲ್ಲಿ ದಲಿತ ಸಂಘಟನೆಗಳು ಬೀದಿಯಲ್ಲಿ ಕೂಗುತ್ತಿದ್ದ ಘೋಷಣೆಗಳು ಇಂದು ಸರ್ಕಾರದ ಕಾರ್ಯಕ್ರಮಗಳಾಗಿವೆ. ಅಂದರೆ ದಲಿತ ಚಳವಳಿ ಅಷ್ಟು ಬಲಿಷ್ಠವಾಗಿತ್ತು. ಹಾಗಾಗಿ ಇಂದಿನ ಕಾಲದ ಅಗತ್ಯಕ್ಕೆ, ಸಾಮಾಜಿಕ-ರಾಜಕೀಯ ಸಂದರ್ಭಕ್ಕೆ ಬೇಕಾದ ಕಾರ್ಯಕ್ರಮಗಳನ್ನು ಅದು ರೂಪಿಸಬೇಕಿದೆ. ಜನಗಳ ತುಡಿತಕ್ಕೆ ನಾವು ಸ್ಪಂದಿಸಿದರೆ ಈ ಚಳವಳಿ ಇನ್ನೂ ಬಹಳ ಗಟ್ಟಿಯಾಗಿ ಮುಂದುವರಿಯುತ್ತದೆ ಎಂಬ ಭರವಸೆ ನನಗಿದೆ. ಆದು ಸುಲಭ ಸಾಧ್ಯವಲ್ಲದಿದ್ದರೂ ಅಸಾಧ್ಯವಾದದ್ದೇನೂ ಅಲ್ಲ. ಇಂದಿನ ಚಳವಳಿಗೆ ಹಳೆ ಮತ್ತು ಹೊಸ ತಲೆಮಾರು ಬೆಸೆದು ಸೇರುತ್ತವೆ ಎನ್ನುವ ಭರವಸೆ ನನಗಿದೆ. ಕಳೆದ 2-3 ವರ್ಷದ ಬೆಳವಣಿಗೆಗಳನ್ನು ಬಹಳ ಹತ್ತಿರದಿಂದ ನೋಡಿದವನಾಗಿ ನನಗೆ ಈ ವಿಶ್ವಾಸವಿದೆ. ಇನ್ನೂ ದೂರವಿರುವವರ ಜೊತೆ ನಾವು ಸೇರಲು ಯೋಜಿಸುತ್ತಿದ್ದೇವೆ. ಹಾಗಾಗಿ ನಮ್ಮ ಈ ಕಾರ್ಯಕ್ರಮಕ್ಕೆ ದಲಿತರ ಸಾಂಸ್ಕೃತಿಕ ಪ್ರತಿರೋಧ ಎಂದು ಹೆಸರಿಟ್ಟಿದ್ದೇವೆ. ದಸಂಸ ಹುಟ್ಟಿದ್ದೇ ಒಂದು ಸಾಂಸ್ಕೃತಿಕ ಚಳವಳಿಯಾಗಿ. ಅದು ಚುನಾವಣೆ ಬಂದಾಗಷ್ಟೇ ಕೆಲವು ಜಾತ್ಯತೀತ ಪಕ್ಷಗಳಿಗೆ ಬೆಂಬಲ ನೀಡಿತೇ ಹೊರತು ತಾನೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಅದೊಂದು ಸಾಂಸ್ಕೃತಿಕ ಚಳವಳಿ; ಪ್ರಜಾಸತಾತ್ಮಕ ಹಿನ್ನೆಲೆಯಲ್ಲಿ ಶಾಂತಿಯಿಂದ ಬುದ್ಧ ಮತ್ತು ಬಾಬಾಸಾಹೇಬರ ಮಾರ್ಗದರ್ಶನದಲ್ಲಿ ನಡೆದ ಚಳವಳಿಯಿದು. ಹಾಗಾಗಿ ಮುಂದೆಯೂ ಸಾಂಸ್ಕೃತಿಕ ಚಳವಳಿಯಾಗಿ ಇದನ್ನು ಮುಂದುವರೆಸಲು ಸಜ್ಜಾಗಿದ್ದೇವೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎನ್ನುವ ಭರವಸೆ ನನಗಂತೂ ಇದೆ.
ಸಂದರ್ಶಕ: ಯತಿರಾಜ್ ಬ್ಯಾಲಹಳ್ಳಿ


