Homeಅಂತರಾಷ್ಟ್ರೀಯಇರಾನ್: ಮತೀಯ ಸರ್ಕಾರಗಳ ಬಂಧನದಲ್ಲಿ ಮಾನವ ಹಕ್ಕುಗಳು

ಇರಾನ್: ಮತೀಯ ಸರ್ಕಾರಗಳ ಬಂಧನದಲ್ಲಿ ಮಾನವ ಹಕ್ಕುಗಳು

- Advertisement -
- Advertisement -

ಪರ್ಷಿಯಾ, 1848ರ ಜೂನ್ ಅಥವಾ ಜುಲೈ ತಿಂಗಳ ಒಂದು ದಿನ. ಬಾಬಿ ಎಂಬ ಆಧ್ಯಾತ್ಮಿಕ ಆಂದೋಲನದ ಮುಂದಾಳುಗಳು ಬಾದ್ಶತ್ ಎಂಬ ಸ್ಥಳದಲ್ಲಿ ಸಭೆ ಸೇರಿದ್ದರು. ಬಹಾಯಿ ಶ್ರದ್ಧೆಯ ಮುಂದಾಳಾದ ಬಹಾವುಲ್ಲ ಇದನ್ನು ಆಯೋಜಿಸಿದ್ದರು. ಅವರ ಮುಖ್ಯವಾದ ಚರ್ಚೆಯ ವಿಷಯವೆಂದರೆ ತಮ್ಮ ಮೂಲ ಧರ್ಮವಾದ ಇಸ್ಲಾಂನ ಸಂಪ್ರದಾಯದಲ್ಲಿಯೇ ಮುಂದುವರಿಯಬೇಕೋ ಅಥವಾ ಅದರಿಂದ ಮುಂದುವರಿದ ಭಾಗವಾಗಿ ಮತ್ತೊಂದು ವಿಕಾಸದ ಪಥವನ್ನು ಆಯ್ದುಕೊಳ್ಳಬೇಕೋ ಎಂಬುದು. ಇಸ್ಲಾಂ ಕರ್ಮಠರ ಉಸಿರುಗಟ್ಟಿಸುವಿಕೆಯ ಸಾಂಪ್ರದಾಯಿಕ ಸಂಕೋಲೆಯು ಅಲ್ಲಾಹನೊಂದಿಗೆ ಹೊಂದುವ ಮಧುರ ಸಂಬಂಧವನ್ನು ಹೊಸಕಿ ಹಾಕುತ್ತಿದೆ ಎಂಬುದು ಅನೇಕ ಪ್ರಗತಿಪರ ಆಧ್ಯಾತ್ಮಿಕ ಚಿಂತಕರ ಅಭಿಪ್ರಾಯವಾಗಿತ್ತು.

ಅಂದು ಇದರ ಬಗ್ಗೆ ತೀವ್ರವಾದ ಚರ್ಚೆಗಳು ಆಗುತ್ತಿರುವಾಗಲೇ ತಾಹೀರೆ ಎಂಬ ಕವಿಯಿತ್ರಿ ಕರ್ಮಠರ ಒತ್ತಡವನ್ನು ವಿರೋಧಿಸುತ್ತಾ “ಖಂಡಿತವಾಗಿ ಧರ್ಮನಿಷ್ಠರು ತೋಟಗಳಲ್ಲಿ ಹಾಗೂ ಝರಿಗಳಲ್ಲಿ ಇರುವರು” (ಕುರಾನ್ 15.45) ಎನ್ನುತ್ತಾ ಸಾಂಕೇತಿಕವಾಗಿ ತನ್ನ ಮುಸುಕನ್ನು ಬಹಿರಂಗವಾಗಿ ತೆಗೆದೊಗೆದಳು. ಅಲ್ಲೋಲಕಲ್ಲೋಲವಾಗಿಬಿಟ್ಟಿತು. ಭಯಭೀತರಾಗಿ ಕಿರುಚಾಡಿದರು. ಕತ್ತಿಗಳನ್ನು ಹಿರಿದರು. ಗದ್ದಲವೊ ಗದ್ದಲ. ಒಬ್ಬ ಸಂಪ್ರದಾಯವಾದಿಯಂತೂ ತನ್ನ ತಲೆಗವುಸನ್ನು ತೆಗೆದ ಮಹಿಳೆಯನ್ನು ನೋಡಲಾಗದೇ ತನ್ನ ಕುತ್ತಿಗೆಯನ್ನೇ ಕುಯ್ದುಕೊಂಡು ಅಲ್ಲೇ ಸತ್ತುಬಿದ್ದ. ಮಹಿಳೆಯ ಹಕ್ಕನ್ನು ಪ್ರತಿಪಾದಿಸಿದ ತಾಹಿರೆಯನ್ನು ಬಂಧಿಸಲಾಯಿತು. ಬಾಬಿಯ ಹೊಸ ಪಂಥವನ್ನು ಅಂಗೀಕರಿಸಿದಕ್ಕಾಗಿ ಮತ್ತು ಬಹಿರಂಗವಾಗಿ ಹಿಜಾಬನ್ನು ತೆಗೆದುದಕ್ಕಾಗಿ ಅವಳ ಹತ್ಯೆ ಮಾಡಲಾಯಿತು. ಆಗ ಅವಳಿಗೆ ಬರೀ 35 ವರ್ಷ.

ಎನ್-ಘೆಲಾಬ್ ರಸ್ತೆಯ ಹುಡುಗಿಯರು

2017–19 ಅವಧಿಯಲ್ಲಿ ಇರಾನಿನಲ್ಲಿ ಕಡ್ಡಾಯ ಹಿಜಾಬ್ ತೊಡುವುದರ ವಿರುದ್ಧವಾಗಿ ಯುವತಿಯರು ಪ್ರತಿಭಟನೆ ನಡೆಸಿದರು. 27ನೇ ಡಿಸೆಂಬರ್ 2017ರಲ್ಲಿ ಟೆಹ್ರಾನಿನ ಕ್ರಾಂತಿಮಾರ್ಗ ಎಂದೇ ಕರೆಯುವ ಎನ್ ಘೆಲಾಬ್ ರಸ್ತೆಯಲ್ಲಿ ವಿದಾ ಮೊವಹೆದ್ ಎಂಬ ಇರಾನಿ ಮಹಿಳೆ ತನ್ನ ಹಿಜಾಬನ್ನು ತೆಗೆದು ಕೋಲಿಗೆ ಬಾವುಟದಂತೆ ಕಟ್ಟಿ ನಡೆದಾಡುತ್ತಿದ್ದ ಗುಂಪುಗಳ ಕಡೆಗೆ ಬೀಸಿದಳು. ಅವಳನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅವಳನ್ನು ಅನುಸರಿದ ಎಷ್ಟೋ ಹುಡುಗಿಯರು ಬಹುದೊಡ್ಡ ಸಂಖ್ಯೆಯಲ್ಲಿ ಕಡ್ಡಾಯ ಹಿಜಾಬ್ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದರು. ಇದನ್ನು ಬೆಂಬಲಿಸಿ, ಈ ಹುಡುಗಿಯರ ವಕಾಲತ್ತು ವಹಿಸಿದ್ದ ಅನೇಕ ಪ್ರಮುಖರಲ್ಲಿ ನಸ್ರೀನ್ ಸುಟುಡೇ ಕೂಡಾ ಒಬ್ಬರು.

ವಿದಾ ಮೊವಹೆದ್

ಮತೀಯವಾದಕ್ಕೆ ರಾಜಕೀಯದ ಅಂಕುಶ

ಭಾರತದ ಇಂದಿನ ಮತೀಯ ವ್ಯವಸ್ಥೆಯು ನಿರ್ಮಿಸಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಇರಾನಿನ ಸ್ಥಿತಿಗತಿಗಳನ್ನು ಅವಲೋಕಿಸಲು ಕಷ್ಟವೇನಾಗದು. ಆನಂದ ತೇಲ್ತುಂಬ್ಡೆ, ತೆಲುಗು ಕವಿ ವರವರರಾವ್, ಸುಧಾ ಭಾರಧ್ವಾಜ್‌ರಂತಹ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲು ಮಾವೋವಾದಿಗಳ ಕೊಂಡಿಯನ್ನು ಸೃಷ್ಟಿಸಿ, ಭೀಮ್ ಕೋರೆಗಾವ್ ಗಲಭೆಯಲ್ಲಿ ವೃಥಾ ಬಂಧಿಸಿ ಶಿಕ್ಷೆ ನೀಡಲು ಕಾನೂನಿನಲ್ಲಿ ಯಾವ ಆಧಾರದಲ್ಲೂ ಅವರಿಗೆ ಸಡಿಲಿಕೆ ಸಿಗದಂತೆ ವಿಚಾರಣೆಯನ್ನು ಬಿಗಿಗೊಳಿಸಿ ಸರ್ಕಾರದ ವಿರುದ್ಧ ಹೋರಾಡುವವರ ಉಸಿರುಗಟ್ಟಿಸಿ ದೇಶದ್ರೋಹ ಆಪಾದನೆಗಳನ್ನು ಮಾಡುವ ಮಾದರಿಯನ್ನು ಗಮನಿಸಿದರೆ, ಇರಾನಿನಲ್ಲಿ ನಸ್ರೀನ್ ಸುಟುಡೆ, ಅವರಿಗೂ ಮುಂಚೆ ಶಿರಿನ್ ಇಬಾದಿ, ನಟಿ ಜ಼ಹ್ರ ಬಹ್ರಮಿಯವರನ್ನೆಲ್ಲಾ ವಿವಿಧ ಕಾರಣಗಳನ್ನು ಒಡ್ಡಿ ಬಂಧಿಸಿರುವ ರೀತಿ ಅರ್ಥವಾಗುತ್ತದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಬೆನ್ನಲ್ಲೇ ಇರಾನಿನ ಮಾನವ ಹಕ್ಕು ಹೋರಾಟಗಾರ್ತಿ ಮತ್ತು ನ್ಯಾಯವಾದಿ ನಸ್ರೀನ್ ಸುಟುಡೆಯವರಿಗೆ ಇರಾನಿಗೆ ನ್ಯಾಯಾಲಯವು 38 ವರ್ಷಗಳ ಕಾರಾಗೃಹ ಬಂಧನವನ್ನೂ ಮತ್ತು 148 ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿದೆ.

ಮುಸಲ್ಮಾನರ ಸಾಂಪ್ರದಾಯಿಕ ಹಿಜಾಬ್ ಹೆಣ್ಣು ಮಕ್ಕಳಿಗೆ ಕಡ್ಡಾಯದ ತಲೆಗವಸು ಆಗಬಾರದೆಂದು ಪ್ರತಿಪಾದಿಸಿದರೆಂದೂ, ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರೆಂದೂ, ಗೂಢಚರ್ಯೆಯಲ್ಲಿ ತೊಡಗಿದ್ದಾರೆಂದೂ, ಇರಾನಿನ ಪರಮೋಚ್ಛ ನಾಯಕನನ್ನು ಅವಮಾನಿಸಿದರೆಂಬ ಆರೋಪಗಳ ಮೇಲೆ ಅವರಿಗೆ ಶಿಕ್ಷೆ ವಿಧಿಸಿದ್ದಾರೆಂದು ಅವರ ವಕೀಲರು ತಿಳಿಸಿದ್ದಾರೆ.

ವಾಸ್ತವದಲ್ಲಿ ಮಾನವ ಹಕ್ಕುಗಳ ನ್ಯಾಯವಾದಿಯಾಗಿ ನಸ್ರೀನ್ ಜೂನ್ 2009ರ ಅಧ್ಯಕ್ಷೀಯ ಚುನಾವಣೆಯ ನಂತರ ವಿಚಾರಣೆಗಳನ್ನು ಎದುರಿಸುತ್ತಿದ್ದ ಮಾನವ ಹಕ್ಕು ಹೋರಾಟಗಾರರ ಪರವಾಗಿ ನ್ಯಾಯಾಲಯದಲ್ಲಿ ಹೋರಾಡಿದ್ದರು. ಮಹಿಳೆಯರಿಗೆ ಸಮಾನ ಹಕ್ಕನ್ನು ನೀಡಬೇಕೆಂದೂ, ಅಂತರರಾಷ್ಟ್ರೀಯ ಕಾನೂನು ಕ್ರಮವನ್ನು ಎತ್ತಿ ಹಿಡಿಯುತ್ತಾ ಬಾಲಾಪರಾಧಿಗಳಿಗೆ ಮರಣದಂಡನೆ ನೀಡಬಾರದೆಂಬುದು ಕೂಡಾ ಇವರ ಹೋರಾಟದ ಭಾಗವಾಗಿತ್ತು. ಹೆಣ್ಣು ಮಕ್ಕಳು ಹಿಜಾಬನ್ನು ಧರಿಸಲೇಬೇಕೆಂಬ ಒತ್ತಾಯದ ವಿರುದ್ಧವೂ ಇವರ ಧ್ವನಿಯಿತ್ತು. ಹಿಜಾಬ್ ಧರಿಸುವುದನ್ನು ಹೆಣ್ಣಿನ ಆಯ್ಕೆಯ ಸ್ವಾತಂತ್ರ್ಯಕ್ಕೆ ಬಿಡಬೇಕೆಂಬುದು ಕರ್ಮಠರ ಕೆರಳಿಸಿತ್ತು. ಮತೀಯವಾದಿಗಳಾದ ಅಧಿಕಾರಸ್ಥರು ತಮ್ಮ ರಾಜಕೀಯ ಶತ್ರುಗಳನ್ನು ದಮನ ಮಾಡಲು ಇಸ್ಲಾಂ ಕರ್ಮಠತನವನ್ನು ಬಳಸಿಕೊಂಡರು.

ಇರಾನಿನ ನಿವೃತ್ತ ನ್ಯಾಯಮೂರ್ತಿಯಾಗಿದ್ದ ಮತ್ತು ನೊಬಲ್ ಶಾಂತಿ ಪ್ರಶಸ್ತಿ ವಿಜೇತೆ ಶಿರಿನ್ ಇಬಾದಿಯವರ ಪ್ರಕರಣಗಳಲ್ಲಿಯೂ, ಆಫ್ಘನ್ ನಿರಾಶ್ರಿತೆಯಾಗಿ ಬಂದಿದ್ದು, ನಂತರ ನಟಿಯಾದ ಸಾರಾ (ಜ಼ಹ್ರ) ಬಾಹ್ರಾಮಿಯ ಪ್ರಕರಣದಲ್ಲಿಯೂ ನಸ್ರೀನ್ ನ್ಯಾಯವಾದಿಯಾಗಿದ್ದರು.

ವ್ಯವಸ್ಥೆಯ ವಿರುದ್ಧವಾಗಿ ಹುನ್ನಾರಗಳನ್ನು ಮಾಡುತ್ತಿದ್ದಾರೆಂದು, ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವಂತಹ ವಿಷಯಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದಲ್ಲದೇ ಕಾನೂನು ಬಾಹಿರ ಸಂಸ್ಥೆಯಾದ ‘ಡೆಫೆಂಡರ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್ (ಡಿಹೆಚ್‌ಆರ್‌ಸಿ)’ನ ಸದಸ್ಯತ್ವವನ್ನು ಹೊಂದಿರುವುದಾಗಿ ಆರೋಪಿಸಿ ನ್ಯಾಯವಾದಿಯಾಗಿರುವುದನ್ನೂ ಮತ್ತು ವಿದೇಶ ಪ್ರವಾಸ ಮಾಡುವುದನ್ನೂ ನಿಷೇಧಿಸಿ ನಂತರ 14ನೇ ಸೆಪ್ಟೆಂಬರ್ 2011ರಲ್ಲಿ ಬಂಧಿಸಿತು. ನ್ಯಾಯಾಂಗ ಬಂಧನದ ನೆಪದಲ್ಲಿ ತನಗೂ ಮತ್ತು ತನ್ನ ಮನೆಯವರಿಗೂ ಕೊಡುತ್ತಿರುವ ಕಿರುಕುಳವನ್ನು ವಿರೋಧಿಸಿ ನಸ್ರೀನ್ ಐದು ವಾರಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರು. ಇದರ ಫಲವಾಗಿ ಕೆಲವು ನಿಮಿಷಗಳ ಕಾಲ ಪೋಲಿಸ್ ಸಮ್ಮುಖದಲ್ಲಿ ಕುಟುಂಬವನ್ನು ನೋಡುವ ಅವಕಾಶ ನೀಡಿದರು. ಆರು ವರ್ಷಗಳ ಕಾಲದ ಬಂಧನದಿಂದ ಬಿಡುಗಡೆಯಾದ ಮೇಲೆ ಅವರ ಹೋರಾಟವನ್ನು ಮತ್ತೆ ಮುಂದುವರಿಸಿದ್ದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳೆ, ಮಕ್ಕಳ, ರಾಜಕೀಯ ಖೈದಿಗಳ ಹಾಗೂ ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಬಂದರು. ನಿರ್ಭೀತವಾಗಿ ವ್ಯವಸ್ಥೆಯ ವೈಫಲ್ಯ ಮತ್ತು ಶೋಷಣೆಗಳನ್ನು ಗಟ್ಟಿ ದನಿಯಲ್ಲಿ ವಿರೋಧಿಸುತ್ತಲೇ ಬಂದ ಫಲವಾಗಿ ಈಗ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಂತರವೇ ಅವರಿಗೆ 38 ವರ್ಷಗಳ ಸೆರೆವಾಸವನ್ನೂ ಮತ್ತು 148 ಛಡಿಯೇಟಿನ ಶಿಕ್ಷೆಯನ್ನು ವಿಧಿಸಲಾಗಿದೆ.


ಇದನ್ನೂ ಓದಿ: ಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿ ಶಿರಿನ್ ಇಬಾದಿಯ ಹೋರಾಟದ ಕಥೆ


ಮಹಿಳೆಯೊಬ್ಬಳ ಶಾಂತಿಪತ್ರ

ಜೈಲಿನಲ್ಲಿರುವ ನಸ್ರೀನ್ ಸುಟುಡೆ ಅಂತರಾಷ್ಟ್ರೀಯ ಮಹಿಳಾ ದಿನದಂದು ಶಾಂತಿಯನ್ನು ಕೋರುತ್ತಾ ಬರೆದ ಪತ್ರ.

ಮಾರ್ಚ್ 6, 2020

2018ನೇ ವರುಷದ ವಸಂತಕಾಲದ ಕೊನೆಯ ದಿನಗಳ ಮಧ್ಯಾಹ್ನದಲ್ಲಿ ಇರಾನಿನ ಕಾನೂನು ವ್ಯವಸ್ಥೆಯ ಮತ್ತು ಇಂಟೆಲಿಜೆನ್ಸಿಯ ಅಧಿಕಾರಿಗಳ ಗುಂಪು ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ಬಂದು ಬಂಧಿಸಿತು. ನನ್ನನ್ನು ಹಸಿರು ಟ್ಯಾಕ್ಸಿಯಲ್ಲಿ ಇವಿನ್ ಕಾರಾಗೃಹಕ್ಕೆ ಕರೆದೊಯ್ದರು. ಮಹಿಳೆಯರ ಮತ್ತು ಮಕ್ಕಳ ಹಕ್ಕನ್ನು ಪ್ರತಿಪಾದಿಸುವ ನನ್ನ ಕಾಯಕದ ಕಾರಣ ನಾನು ಐದುವರ್ಷಗಳ ಸೆರೆವಾಸಕ್ಕೆ ಒಳಗಾಗಬೇಕಾಯಿತು. ಕೆಲವು ತಿಂಗಳುಗಳ ನಂತರ ಇನ್ನೂ ಏಳು ಪ್ರಕರಣಗಳನ್ನು ನನ್ನ ಮೇಲೆ ದಾಖಲಿಸಲಾಯಿತು. ಈಗ ಒಟ್ಟಾರೆ 33 ವರ್ಷಗಳ ಸೆರೆವಾಸ ಮತ್ತು 148 ಛಡಿಯೇಟಿನ ಶಿಕ್ಷೆಯನ್ನು ವಿಧಿಸಲಾಗಿದೆ. ಈ ಕಠಿಣ ಶಿಕ್ಷೆಗಳು ಏಕೆಂದರೆ ನಾನು ಹನ್ನೆರಡು ವರ್ಷಗಳ ಕಾಲ ನಶ್ವರವಾದುದನ್ನು ಮತ್ತು ಅಗೌರವಯುತವಾದ ವಿಷಯಗಳನ್ನು ಪ್ರಚಾರ ಮಾಡುತ್ತಿದ್ದೆ ಅಂತೆ.

ನಸ್ರೀನ್ ಸುಟುಡೆ

ಸಧ್ಯಕ್ಕೆ ನಾನು ಮಹಿಳೆಯರಿಗೆ ಮೀಸಲಿರುವ ಬಂಧಿಖಾನೆಯಲ್ಲಿದ್ದೇನೆ. ಮೂರು ಕೊಠಡಿಗಳಿದ್ದು ಇದರಲ್ಲಿ ಒಟ್ಟು ನಲವತ್ತು ಜನ ಖೈದಿಗಳಿದ್ದಾರೆ. ಬಹಳಷ್ಟು ಜನ ಬಂಧಿತರಾಗಿರುವುದು ರಾಜಕೀಯ ಕಾರಣಗಳಿಂದ.

ಎವಿನ್ ಬಂಧಿಖಾನೆಯ ಮಹಿಳಾ ವಿಭಾಗದಲ್ಲಿ ಇರುವವರೆಲ್ಲಾ ಬಹುಪಾಲು ಮಾನವ ಹಕ್ಕುಗಳ ಪ್ರತಿಪಾದಕರು, ಮಹಿಳಾ ಹಕ್ಕುಗಳ ಹೋರಾಟಗಾರರು, ನಾಗರಿಕ ಮತ್ತು ಪರಿಸರ ಹೋರಾಟಗಾರರು, ಧಾರ್ಮಿಕ ಅಲ್ಪಸಂಖ್ಯಾತರು, ದಾರ್ಶನಿಕರು, ಕಾರ್ಮಿಕ ಚಳವಳಿಗಳ ಕಾರ್ಯಕರ್ತರು, ಇವರ ಜೊತೆಗೆ ಬೇಹುಗಾರಿಕೆಯ ಆಪಾದನೆಗಳ ಮೇಲೆ ಎರಡು ಪೌರತ್ವವಿರುವವರು ಕೂಡಾ ಇದ್ದಾರೆ.

ಇಲ್ಲಿ ನನ್ನ ವೈಯಕ್ತಿಕ ಕೆಲಸಗಳನ್ನು ಮಾಡಿಕೊಂಡು ಇತರರೊಂದಿಗೆ ವ್ಯಾಯಾಮ ಮಾಡುತ್ತಾ, ಕರಕುಶಲ ವಸ್ತುಗಳನ್ನು ನಿರ್ಮಿಸುತ್ತಾ, ಪುಸ್ತಕಗಳನ್ನು ಓದುತ್ತಾ, ಗುಂಪು ಚರ್ಚೆಗಳನ್ನು ಮಾಡುತ್ತಾ ನನ್ನ ದಿನಗಳನ್ನು ಕಳೆಯುತ್ತಿದ್ದೇನೆ. ಭಾನುವಾರ ಸಂದರ್ಶಕರ ದಿನ. ಸಂದರ್ಶನದ ವಿಷಯದಲ್ಲಿ ನಾನು ನಿಷೇಧಕ್ಕೊಳಗಾಗದಿದ್ದರೆ ನನ್ನ ಕುಟುಂಬವನ್ನು ನೋಡಬಹುದು.

ಬಂಧಿಖಾನೆಯಲ್ಲಿ ಕೆಲವು ಸಲ ಮಿತಿಗೊಳಿಸಿರುವ ಸಮಯದಲ್ಲಿ ಆಸಕ್ತರಿಗೆ ಮಾನವ ಹಕ್ಕುಗಳ ವಿಷಯವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ಮುಖ್ಯವಾಗಿ ಇತರರೊಂದಿಗೆ ವಿವಿಧ ದೇಶಗಳಲ್ಲಿನ ಸತ್ಯಾಸತ್ಯತೆಗಳ ಮತ್ತು ಸಾಮರಸ್ಯದ ಆಯೋಗಗಳ ಬಗ್ಗೆ ತಿಳಿಸುತ್ತಾ, ತಿಳಿದುಕೊಳ್ಳುತ್ತಾ ನನ್ನನ್ನು ತೊಡಗಿಸಿಕೊಂಡಿರುತ್ತೇನೆ.

ಕಡ್ಡಾಯ ಹಿಜಾಬ್ ಧರಿಸಬೇಕು ಎಂಬ ಇರಾನಿನ ಕಾನೂನನ್ನು ಪ್ರತಿಭಟಿಸಿ ಎಂಗೆಲಾಬ್ ಬೀದಿಯಲ್ಲಿ ತಮ್ಮ ತಲೆಗವುಸುಗಳನ್ನು ಸಾರ್ವಜನಿಕವಾಗಿ ತೆಗೆದು ಅವನ್ನು ಕೋಲಿಗೆ ಸಿಕ್ಕಿಸಿ ಆಡಿಸಿಕೊಂಡು ಪ್ರತಿಭಟನೆ ಮಾಡಿದ ಹುಡುಗಿಯರಾಗಲಿ, ಹೆಂಗಸರಾಗಲಿ ಇಲ್ಲಿ ಇಲ್ಲ. ಆದರೆ ನನ್ನ ಕೊಠಡಿಯಲ್ಲಿರುವ ಕೆಲವು ಯುವತಿಯರು ಕಳೆದ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಟೆಹ್ರಾನಿನ ಸಾರ್ವಜನಿಕ ಸುರಂಗ ಮಾರ್ಗದಲ್ಲಿ ಪ್ರಯಾಣಿಕರಿಗೆ ಹೂಗಳನ್ನು ಕೊಟ್ಟು ಮಾತನಾಡಿಸಿದವರು. ಮತ್ತೊಂದು ಸಲ ಈ ಗುಂಪಿನವರು ನನ್ನ ಚಿತ್ರಗಳನ್ನು ಹಿಡಿದು ನನ್ನ ಬೆಂಬಲಿಸಿದವರು. ಆ ಕಾರಣದಿಂದಾಗಿ ಕಠಿಣ ಶಿಕ್ಷೆಗಳಿಗೆ ಅವರು ಒಳಗಾಗಿದ್ದಾರೆ. ಇದು ನನ್ನ ಜವಾಬ್ದಾರಿಯ ಪ್ರಜ್ಞಾವಂತಿಕೆಯನ್ನು ಮತ್ತಷ್ಟು ಗಾಢಗೊಳಿಸಿದೆ.

ಮಹಿಳೆಯರ ಹಕ್ಕುಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವಂತಹ ದೇಶ ಇರಾನ್. ಆದ್ದರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗೌರವಿಸುವ ಮತ್ತು ಸ್ಮರಿಸಿಕೊಳ್ಳುವ ಪ್ರಾಮುಖ್ಯತೆ ಇಲ್ಲಿದೆ.

ಈ ದಿನ ಕಳೆದು ಹೋದ ವರ್ಷಗಳ ಕುರಿತು ಆಲೋಚಿಸುತ್ತಿದ್ದೇನೆ. ಅವು ನಮ್ಮ ಸದ್ದಡಗಿಸಿದ ಮತ್ತು ಬಂಧಿಸಿದ ವರ್ಷಗಳು; ಪ್ರತಿಭಟಿಸಿದ, ಬಂಧಿಸಿದ, ಗೋಡೆಗಳ ಹಿಂದೆ ನಮ್ಮನ್ನು ಜಾಲಕ್ಕೆ ಸಿಕ್ಕಿಸಿದ ವರ್ಷಗಳು. ಹಾಗೆಯೇ, ಈ ವರ್ಷದ ಕುರಿತೂ ನಾನು ಆಲೋಚಿಸುತ್ತಿದ್ದೇನೆ. ಇದು ಇರಾನಿ ಪ್ರಜೆಗಳ ದುರಂತ ಮತ್ತು ರೋಗಗಳ ವರ್ಷ. ಹಗೆತನ ಮತ್ತು ಶತ್ರುತ್ವಗಳ ಪರಿಣಾಮವು ಬೆನ್ನತ್ತಿ ನಮ್ಮನ್ನು ಸುತ್ತುವರಿಯುತ್ತಿರುವುದು.

ನಾವು ತೆಗೆದುಕೊಂಡಿರುವ ದಾರಿಯನ್ನು ಅವಲೋಕಿಸುತ್ತಾ ವಿಮರ್ಶೆ ಮಾಡಿಕೊಳ್ಳುತ್ತಿದ್ದೇನೆ. ನಾವೆಲ್ಲಿ ತಪ್ಪಿದ್ದೇವೆ? ನಾವೇಕೆ ಯಶಸ್ಸನ್ನು ಕಾಣುತ್ತಿಲ್ಲ? ನಮ್ಮ ಸರ್ಕಾರಕ್ಕೆ ಸರಿಯಾಗಿ ಆಡಳಿತವನ್ನೇಕೆ ನಡೆಸಲಾಗುತ್ತಿಲ್ಲ? ಏಕೆ ನಮಗೆ ಪರಿಣಾಮಕಾರಿಯಾಗಿ ಮತ್ತು ಶಾಂತಿಯುತವಾಗಿ ವಿರೋಧಿಸಲಾಗುತ್ತಿಲ್ಲ?

ಈಗ ಮುಂದೇನು? ಗೊತ್ತಿಲ್ಲ. ನಸ್ರೀನ್ ತಮ್ಮನ್ನು ಕೇಳಿಕೊಂಡಿರುವ ಪ್ರಶ್ನೆಗಳು ಭಾರತದಲ್ಲಿರುವ ಹೋರಾಟಗಾರಲ್ಲೂ ಮೂಡಿದ್ದರೆ ಆಶ್ಚರ್ಯವೇನಿಲ್ಲ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ವಿಶ್ವಸಂಸ್ಥೆಯೂ ಕೂಡಾ ಇರಾನಿನ ಆಂತರಿಕ ಕಾನೂನು ವ್ಯವಸ್ಥೆಯಲ್ಲಿ ಮಧ್ಯೆ ಪ್ರವೇಶಿಸಲಾಗುವುದಿಲ್ಲ. ಒಟ್ಟಾರೆ ಸಂಪ್ರದಾಯವಾದಿ ಕರ್ಮಠರ ಕೈಯಲ್ಲಿ ಒಪ್ಪಿಸಿರುವ ಕಾನೂನು ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆಯು ಪ್ರಜಾಪ್ರಭುತ್ವಕ್ಕೆ ಮತ್ತು ಮಾನವಹಕ್ಕುಗಳಿಗೆ ಎರವೇ. ವಿಶ್ವಸಂಸ್ಥೆಯಾಗಲಿ, ಇತರ ಪ್ರಗತಿಪರ ಸಮೂಹಗಳಾಗಲಿ ಮಹಿಳೆಯ ಹಕ್ಕನ್ನು ಮತ್ತು ಮಾನವಹಕ್ಕುಗಳನ್ನು ಪ್ರತಿಬಂಧಿಸುವ ಇಂತಹ ಸಂದರ್ಭಗಳಲ್ಲಿ ಸಾಮರಸ್ಯವನ್ನೂ ಕಾಪಾಡಿಕೊಂಡು ಹೇಗೆ ಪ್ರತಿಕ್ರಿಯಿಸಬೇಕು? ಇನ್ನೂ ಗೊತ್ತಾಗಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...