ಕೋಲಾರದ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷರಾಗಿರುವ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೋಚಿಮುಲ್) ದಲ್ಲಿ ಇತ್ತೀಚೆಗೆ ನಡೆದ 75 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.
ಸುಮಾರು 40 ತಾಸುಗಳ ದಾಖಲೆ ಪರಿಶೀಲನೆ ಕೊನೆಗೊಂಡ ಬಳಿಕ ಜಾರಿ ನಿರ್ದೇಶನಾಲಯ ಗುರುವಾರ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ‘ಪ್ರತಿ ಹುದ್ದೆ ₹20 ಲಕ್ಷದಿಂದ ₹30 ಲಕ್ಷಕ್ಕೆ ಮಾರಾಟವಾಗಿರುವ ಕುರಿತು ಕೋಚಿಮುಲ್ ನಿರ್ದೇಶಕರು ಮತ್ತು ನೇಮಕಾತಿ ಸಮಿತಿಯ ಸದಸ್ಯರು ಶೋಧ ಕಾರ್ಯಾಚರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದೆ.
ಕೋಚಿಮುಲ್ ಆಡಳಿತ ಮಂಡಳಿ ತೀರ್ಮಾನದಂತೆ ಅಂತಿಮ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮುನ್ನವೇ, ಆಯ್ಕೆಯಾಗದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ತರಬೇತಿಗೆ ಕಳುಹಿಸಲಾಗಿದೆ. ಕೆಲ ರಾಜಕಾರಣಿಗಳು ಅಭ್ಯರ್ಥಿಗಳ ಆಯ್ಕೆಗೆ ಶಿಫಾರಸು ಮಾಡಿದ್ದು, 30 ಪ್ರಕರಣಗಳು ತಾಳೆಯಾಗಿವೆ. ಅಧ್ಯಕ್ಷ ಕೆ.ವೈ.ನಂಜೇಗೌಡ ಅಕ್ರಮದಲ್ಲಿ ಭಾಗಿಯಾಗಿದ್ದು, ಸಂದರ್ಶನದ ಅಂಕ ಬದಲಾವಣೆ ಮಾಡಿರುವುದು ಪತ್ತೆ ಮಾಡಿರುವುದಾಗಿ ಇಡಿ ಹೇಳಿದೆ.
ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ಸುಮಾರು ₹150 ಕೋಟಿ ಮೌಲ್ಯದ 80 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಶೋಧ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ–2002 (ಪಿಎಂಎಲ್‌ಎ) ಅಡಿ ನಂಜೇಗೌಡ ಹಾಗೂ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳ ಮನೆಗಳಲ್ಲಿ ಶೋಧ ಕಾರ್ಯ ಮಾಡಲಾಗಿತ್ತು.
ED has conducted search operations in the case of KY Nanje Gowda, MLA, Malur, Karnataka and his associates under the provisions of PMLA, 2002. Search actions were conducted in connection with a case related to illegal allotment of Government Land worth Rs.150 Crore. During the…
— ED (@dir_ed) January 11, 2024
ಮಾಲೂರು ದರಖಾಸ್ತು ಸಮಿತಿ ಅಧ್ಯಕ್ಷರಾಗಿದ್ದ ನಂಜೇಗೌಡ, ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳು ಕೇವಲ ಒಂದು ತಿಂಗಳಲ್ಲಿ ಸಭೆ ನಡೆಸಿ, ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ಸುಮಾರು ₹150 ಕೋಟಿ ಮೌಲ್ಯದ 80 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿರುವ ಸಂಬಂಧ ಶೋಧ ಕೈಗೊಳ್ಳಲಾಗಿತ್ತು.
ಪ್ರಾದೇಶಿಕ ಆಯುಕ್ತರ ಪರಿಶೀಲನಾ ವರದಿ ಆಧಾರದ ಮೇಲೆ ಆ ಮಂಜೂರಾತಿ ರದ್ದಾಗಿದೆ. ಮಾರ್ಗಸೂಚಿಯನ್ನು ಉಲ್ಲಂಘಿಸಿ ದಾಖಲೆಗಳನ್ನು ತಿರುಚಿ ಅಕ್ರಮವಾಗಿ ಜಮೀನನ್ನು ಮಂಜೂರಾತಿ ಮಾಡಿರುವುದು ಶೋಧದ ವೇಳೆ ಪತ್ತೆಯಾಗಿದೆ. ಎಲ್ಲಾ ಅಕ್ರಮಗಳ ಕುರಿತು ತನಿಖೆ ಮುಂದುವರಿದಿದೆ ಇಡಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಹಾವೇರಿ: ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ತಿರುವು; ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಆರೋಪ


