Homeಮುಖಪುಟ'ಚುನಾವಣಾ ಆಯುಕ್ತರ ಕಾಯ್ದೆ' ಜಾರಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

‘ಚುನಾವಣಾ ಆಯುಕ್ತರ ಕಾಯ್ದೆ’ ಜಾರಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

- Advertisement -
- Advertisement -

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಛೇರಿಯ ಅವಧಿ) ಕಾಯಿದೆ-2023ರ ಸೆಕ್ಷನ್ 7 ಮತ್ತು 8ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು (ಜ12) ಸಮ್ಮತಿಸಿದೆ. ಆದರೆ, ಕಾನೂನಿಗೆ ತಕ್ಷಣ ತಡೆ ನೀಡಲು ನಿರಾಕರಿಸಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆಗೊಂಡು, ಕಳೆದ ಡಿಸೆಂಬರ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕುವ ಮೂಲಕ ಚುನಾವಣಾ ಆಯುಕ್ತರ ನೇಮಕಾತಿ, ನಿಯಂತ್ರಣ ಕಾಯ್ದೆ ಜಾರಿಗೆ ಬಂದಿದೆ.

ಇದರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಂವಿಧಾನದ 32ನೇ ವಿಧಿ ಅಡಿಯಲ್ಲಿ ಮಧ್ಯಪ್ರದೇಶದ ಮಹಿಳಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಜಯಾ ಠಾಕೂರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ವಿಚಾರಣೆ ನಡೆಸುತ್ತಿದೆ.

ನೂತನ ಕಾನೂನು, ಶಾಸಕಾಂಗ ಕ್ರಮದ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಕೈಬಿಟ್ಟಿದೆ.

ಅರ್ಜಿ ವಿಚಾರಣೆ ವೇಳೆ, ಠಾಕೂರ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ಈ ಕಾಯಿದೆಯು ನಮ್ಮ ಸಂವಿಧಾನದ ಮೂಲ ರಚನೆಯಾದ ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಹೊಸ ಕಾನೂನು ಸಂವಿಧಾನದ 14, 21, 50 ಮತ್ತು 324 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಜಯಾ ಠಾಕೂರ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಸ್ವತಂತ್ರ, ನಿಷ್ಪಕ್ಷಪಾತ ಆಯ್ಕೆ ಸಮಿತಿಯ ಅಗತ್ಯತೆಯಿದೆ. ಅದನ್ನು ರಚಿಸಲು ಮತ್ತು ನಿಯಂತ್ರಿಸಲು ಸಂಸತ್ ಕಾನೂನು ಜಾರಿಗೊಳಿಸುವವರೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಇರಲಿದ್ದಾರೆ ಎಂದು 2023ರ ಮಾರ್ಚ್‌ನಲ್ಲಿ ನ್ಯಾಯಮೂರ್ತಿ ಅನೂಪ್ ಬರನ್ವಾಲ್ ಹೇಳಿದ್ದರು.

ಈ ಹಿನ್ನೆಲೆ ಡಿಸೆಂಬರ್‌ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಛೇರಿಯ ಅವಧಿ ಮಸೂದೆ- 2023ರನ್ನು ಕೇಂದ್ರ ಸರ್ಕಾರ ಮಂಡಿಸಿ ಅನುಮೋದನೆ ಪಡೆದಿತ್ತು. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ್ದು, ಕಾನೂನು ಜಾರಿಯಾಗಿದೆ.

ಇದನ್ನೂ ಓದಿ: ಹೆಣ್ಣು ಹೆತ್ತಿದ್ದಕ್ಕೆ ಮಹಿಳೆ ಹೊಣೆಯಲ್ಲ, ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ: ದೆಹಲಿ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...