Homeಮುಖಪುಟನೀಟ್‌‌ ಸೀಟು ಹಂಚಿಕೆಯ ವಿಚಾರದಲ್ಲಿ ‘ಮತ್ತೆ ಮತ್ತೆ’ ಸುಳ್ಳು ಹೇಳಿತೇ ವಿಶ್ವವಾಣಿ?

ನೀಟ್‌‌ ಸೀಟು ಹಂಚಿಕೆಯ ವಿಚಾರದಲ್ಲಿ ‘ಮತ್ತೆ ಮತ್ತೆ’ ಸುಳ್ಳು ಹೇಳಿತೇ ವಿಶ್ವವಾಣಿ?

- Advertisement -
- Advertisement -

ನೀಟ್‌ ಟಾಪರ್‌‌ಗೆ ಸೀಟು ಸಿಗಲಿಲ್ಲ ಎಂದು ಸುಳ್ಳು ಸುದ್ದಿ ಬರೆದು, ಸೀಟು ಹಂಚಿಕೆ ಮತ್ತು ಮೀಸಲಾತಿ ಬಗ್ಗೆ ಓದುಗರ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ಕನ್ನಡ ದಿನ ಪತ್ರಿಕೆ ‘ವಿಶ್ವವಾಣಿ’ ಮತ್ತು ಅದರ ಸಂಪಾದಕ ವಿಶ್ವೇಶ್ವರ ಭಟ್‌ ಮತ್ತೇ ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಜನವರಿ 29ರ ಶನಿವಾರದಂದು ‘‘ನೀಟ್‌‌ ಪಿಜಿ ಪರೀಕ್ಷೆಯಲ್ಲಿ ಭಾರತಕ್ಕೆ ಮೊದಲ ರ್‍ಯಾಂಕ್ ಪಡೆದ ಬ್ರಾಹ್ಮಣ ವಿದ್ಯಾರ್ಥಿಗೆ ಮೀಸಲಾತಿಯ ಕಾರಣಕ್ಕೆ ಗದಗ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ” ಎಂದು ಪ್ರತಿಪಾದಿಸಿ ‘ವಿಶ್ವವಾಣಿ’ ಸುದ್ದಿಯೊಂದನ್ನು ಪ್ರಸಾರ ಮಾಡಿತ್ತು. ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌, “ಇದು ಕರ್ನಾಟಕದ ಅರ್ಹತೆಯ ಅಣಕ. ಮೊದಲ ರ್‍ಯಾಂಕ್‌ ಪಡೆದರೂ ಮೀಸಲಾತಿ ಕಾರಣಕ್ಕೆ ಎಂಡಿ ಸೀಟು ನಿರಾಕರಿಸಲಾಗಿದೆ” ಎಂದು ಬರೆದು, ತಮ್ಮ ಪತ್ರಿಕೆಯ ವರದಿಯ ಚಿತ್ರವನ್ನು ಪೋಸ್ಟ್‌ ಮಾಡಿದ್ದರು.

ವಿಶ್ವೇಶ್ವರ ಭಟ್‌ ಟ್ವೀಟ್

ವಾಸ್ತವದಲ್ಲಿ, ವಿಶ್ವವಾಣಿ ಪ್ರಕಟಿಸಿದ್ದ ಸುದ್ದಿಯಾಲಿ, ವಿಶ್ವೇಶ್ವರ ಭಟ್ ಅವರ ಟ್ವೀಟ್‌ ಆಗಲಿ, ಯಾವುದೂ ನಿಜವಾಗಿರಲಿಲ್ಲ. ಸುದ್ದಿಯಲ್ಲಿ ಹೇಳಿರುವಂತೆ ಗಗನ್‌ ಕುಬೇರ್‌ ಎನ್ನುವ ವ್ಯಕ್ತಿ ದೇಶಕ್ಕೆ ಮೊದಲನೇ ರ್‍ಯಾಂಕ್ ಪಡೆದಿರಲಿಲ್ಲ, ಈ ಬಗ್ಗೆ ಗಗನ್‌ ಅವರೇ ಸ್ಪಷ್ಟೀಕರಣ ನೀಡಿದ್ದರು.

ಇದನ್ನೂ ಓದಿ: ಫ್ಯಾಕ್ಚ್ ಚೆಕ್: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂಬ ಸುಳ್ಳು ವರದಿ – ವಿಶ್ವೇಶ್ವರ ಭಟ್ ಕ್ಷಮೆ ಕೇಳಿದ್ದು ನಿಜವೇ?

ಇಷ್ಟೇ ಅಲ್ಲದೆ, ಪತ್ರಿಕೆಯ ಇಡೀ ಸುದ್ದಿಯಲ್ಲಿ ಮತ್ತು ವಿಶ್ವೇಶ್ವರ ಭಟ್ ಅವರ ಪ್ರತಿಪಾದನೆಯಲ್ಲಿ ನೀಟ್‌ ಸೀಟ್‌ ಹಂಚಿಕೆಯ ಬಗ್ಗೆ ತಪ್ಪು ಮಾಹಿತಿ ಮತ್ತು ಮೀಸಲಾತಿ ಬಗ್ಗೆಗಿನ ಅಸಹನೆ ಮಾತ್ರವೇ ಇತ್ತು. ಈ ಬಗ್ಗೆ ನಾನುಗೌರಿ.ಕಾಂ ಫ್ಯಾಕ್ಟ್‌ಚೆಕ್ ಕೂಡಾ ಮಾಡಿದೆ. ಅದನ್ನು ಇಲ್ಲಿ ಓದಬಹುದು.

ಇದರ ನಂತರ, ಜನವರಿ 31ರ ಸೋಮವಾರದಂದು ವಿಶ್ವವಾಣಿ ಮತ್ತೇ ವರದಿ ಮಾಡಿ ಸೀಟು ಹಂಚಿಕೆಯ ಬಗೆಗಿನ ತಪ್ಪಾದ ಮಾಹಿತಿಯನ್ನು ಓದುಗರಿಗೆ ನೀಡಿದೆ. “ನೀಟ್‌ನಲ್ಲಿ ಎರಡನೇ ರ್‍ಯಾಂಕ್ ಪಡೆದ ಅರ್ಜುನ್‌ ಎಂಬ ವ್ಯಕ್ತಿ, ತನಗೆ ಬೇಕಾದ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ ಎಂದು ಹೇಳಿದ್ದಾರೆ” ಎಂದು ಪ್ರತಿಪಾದಿಸಿ ಪತ್ರಿಕೆ ಸುದ್ದಿ ಪ್ರಕಟಿಸಿದೆ.

ಈ ಸುದ್ದಿಯಲ್ಲಿ ವಿಶ್ವವಾಣಿ, “ಸೀಟು ಹಂಚಿಕೆ ಎಡವಟ್ಟು, ಸಾಮಾನ್ಯರಿಗೆ ಇಕ್ಕಟ್ಟು” ಎಂಬ ಹೆಡ್‌ಲೈನ್‌ ಕೊಟ್ಟು, ಉಪಶೀರ್ಷಿಕೆಯಲ್ಲಿ, “ನೀಟ್‌ನಲ್ಲಿ 2ನೇ ರ್‍ಯಾಂಕ್‌ ಪಡೆದರೂ ದೆಹಲಿ ವಿದ್ಯಾರ್ಥಿಗೆ ಸಿಗಲಿಲ್ಲ ಇಷ್ಟಪಟ್ಟ ಕಾಲೇಜು, ಸರ್ಕಾರಿ ಕಾಲೇಜಿನಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗೆ ಸಿಗೋಲ್ಲ ಅವಕಾಶ” ಎಂದು ಬರೆದಿದೆ.

(ಆರ್ಕೈವ್‌ಗೆ ಇಲ್ಲಿ ಮತ್ತು ಇಲ್ಲಿ ನೋಡಿ)

ವಿಶ್ವವಾಣಿಯ ಈ ವರದಿ ಕೂಡಾ ತಪ್ಪು ಮಾಹಿತಿಯಿಂದ ಕೂಡಿದ್ದು, ಮುಖ್ಯವಾಗಿ ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವುದಿಲ್ಲ ಎಂಬ ಉಪಶೀರ್ಷಿಕೆಯು ಸುಳ್ಳಾಗಿದೆ. ಸರ್ಕಾರಿ ಸೀಟುಗಳಲ್ಲಿ ಸಾಮಾನ್ಯ ವರ್ಗಕ್ಕೆ ಎಂದು ಇಂತಿಷ್ಟು ಸೀಟುಗಳು ಇದ್ದೇ ಇರುತ್ತದೆ. ಇದರ ಜೊತೆಗೆ ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ 10% ಮೀಸಲಾತಿಯಿದೆ.

ಹಾಗೆ ನೋಡಿದರೆ, ಸಾಮಾನ್ಯ ವರ್ಗದ ವಿದ್ಯಾರ್ಥಿ ಮಾತ್ರವಲ್ಲ, ಯಾವುದೇ ಕೆಟಗೆರಿ ವಿದ್ಯಾರ್ಥಿಗಳಿಗೂ ಇಂತಹದ್ದೇ ಕಾಲೇಜಿನಲ್ಲಿ ನಮಗೆ ಸರ್ಕಾರಿ ಸೀಟು ಬೇಕೆಂದರೆ ಸಿಗುವುದಿಲ್ಲ. ಈಗಾಗಲೇ ಹಂಚಿಕೆಯಾಗಿರುವ ಕಾಲೇಜಿನಲ್ಲಿ ಅವರು ತಮ್ಮ ಸೀಟುಗಳಿಗೆ ಅರ್ಜಿ ಹಾಕಬಹುದಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’!

ಅಲ್ಲದೆ, ಈ ರೀತಿಯ ಮೀಸಲು ಕ್ಯಾಟಗರಿಗಳು ಯಾವಾಗಲೂ ಅದೇ ರೀತಿ ಇರುವುದಿಲ್ಲ. ವರ್ಷ ವರ್ಷವೂ ಬೇರೆ ಬೇರೆ ಕಾಲೇಜಿಗೆ ಬದಲಾಗುತ್ತಲೇ ಇರುತ್ತದೆ. ಉದಾಹರಣಗೆ ಹೇಳಬಹುದಾದರೆ, ಈ ವರ್ಷ ಗದಗ ಕಾಲೇಜಿಗೆ ಒಬಿಸಿ, ಎಸ್‌ಟಿ ಮತ್ತು ಸರ್ಕಾರಿ ಸೇವೆಯ ಸಾಮಾನ್ಯ ವರ್ಗಕ್ಕೆ ಇದ್ದರೆ, ಮುಂದಿನ ವರ್ಷ ಈ ಕಾಂಬಿನೇಷನ್‌ ಬದಲಾಗಿರುತ್ತದೆ. ಒಂದು ವೇಳೆ ಹಾಗೆ ಇದ್ದರೆ, ಒಂದು ಕಾಲೇಜಿಗೆ ಒಂದು ವರ್ಗದ ವಿದ್ಯಾರ್ಥಿಗಳ ಪ್ರವೇಶ ನಿರಾಕರಿಸದಂತಾಗುತ್ತದೆ. ಹಾಗಾಗಿ ಇದು ಬದಲಾಗುತ್ತಲೇ ಇರುತ್ತದೆ.

ಸುಳ್ಳು ಸುದ್ದಿಯ ತಪ್ಪನ್ನು ‘ಗಗನ್’ ಮೇಲೆ ಹೊರಿಸಿದ ವಿಶ್ವವಾಣಿ!

ಜನವರಿ 29ರ ಶನಿವಾರದಂದು ಪ್ರಕಟವಾಗಿದ್ದ ಸುದ್ದಿಯ ಸುಳ್ಳನ್ನು ವಿಶ್ವವಾಣಿಯು ಸುದ್ದಿಯ ಕೇಂದ್ರವಾಗಿದ್ದ ಗಗನ್‌ ಮೇಲೆ ಹೊರಿಸಿದೆ. ಪತ್ರಿಕೆಯು, ಸೋಮವಾರ ಪ್ರಕಟಿಸಿದ ವರದಿಯಲ್ಲಿ, “ರಾಜ್ಯದ ಗಗನ್ ಕುಬೇರ್‌ ವಿಷಯದಲ್ಲಿ ಆತ ಮೊದಲ ರ್‍ಯಾಂಕ್‌ ಪಡದೇ ಇಲ್ಲ. ಹೀಗಾಗಿ ಆತನ ತಪ್ಪಿದೆ ಎನ್ನುವ ಮಾತನ್ನು ಅನೇಕರು ಹೇಳಿದ್ದರು” ಎಂದು ಬರೆದಿದೆ.

ವಾಸ್ತವದಲ್ಲಿ, ಗಗನ್‌ ಕುಬೇರ್‌ ಅವರಿಗೆ ನೀಟ್‌ ಸೀಟ್‌ ಹಂಚಿಕೆಯ ಬಗ್ಗೆ ಸ್ಪಷ್ಟವಾದ ಅರಿವಿಲ್ಲ ಮತ್ತು ಮೀಸಲಾತಿ ಬಗ್ಗೆ ಅಸಮಾಧಾನವಿದೆ ಎಂಬುವುದನ್ನು ಬಿಟ್ಟರೆ, ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ‘ನಾನು ಮೊದಲ ರ್‍ಯಾಂಕ್ ಪಡೆದಿದ್ದೇನೆ’ ಎಂದು ಹೇಳಿಯೇ ಇಲ್ಲ.

ಅವರು ಸೀಟು ಹಂಚಿಕೆಯ ಬಗ್ಗೆ ಮಾತನಾಡುತ್ತಾ, ‘ನಾನು ಭಾರತ ಮಟ್ಟದಲ್ಲಿ ಒಂದನೇ ರ್‍ಯಾಂಕ್ ಪಡೆದರೂ, ನನಗೆ ಸೀಟು ಸಿಗುವುದಿಲ್ಲ’ ಎಂದು ಹೇಳಿದ್ದರು. ಆದರೆ ಪತ್ರಿಕೆಯು ಮೀಸಲಾತಿ ವಿರೋಧಿ ವರದಿ ಬರೆಯುವ ಭರದಲ್ಲಿ, ‘ನಾನು ಭಾರತ ಮಟ್ಟದಲ್ಲಿ ಒಂದನೇ ರ್‍ಯಾಂಕ್ ಪಡೆದರೂ, ನನಗೆ ಸೀಟು ಸಿಗುವುದಿಲ್ಲ’ ಎಂದು ಗಗನ್ ಅವರು ಉದಾಹರಣೆಯಾಗಿ ಹೇಳಿದ್ದ ಮಾತನ್ನು “ದೇಶಕ್ಕೆ ಮೊದಲ ರ್‍ಯಾಂಕ್” ಎಂದು ತಪ್ಪಾಗಿ ಅರ್ಥೈಸಿಕೊಂಡು ವರದಿ ಮಾಡಿದೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಬಗ್ಗೆ ಸುಳ್ಳು ಹರಡಿ, ನಂತರ ಪೋಸ್ಟ್ ಡಿಲೀಟ್ ಮಾಡಿದ ಪೋಸ್ಟ್ ಕಾರ್ಡ್ ಕನ್ನಡ

ಈ ಬಗ್ಗೆ ಪತ್ರಿಕೆಯು ಇನ್ನೂ ತಪ್ಪೊಪ್ಪಿಕೊಂಡಿರುವ ಬಗೆಗಿನ ಮಾಹಿತಿ ನಾನುಗೌರಿ.ಕಾಂಗೆ ಸಿಕ್ಕಿಲ್ಲ. ಮಾಹಿತಿ ಸಿಕ್ಕ ಕೂಡಲೇ ಈ ಬಗ್ಗೆ ಇಲ್ಲಿ ಅಪ್‌ಡೇಟ್‌ ಮಾಡಲಾಗುವುದು. ಇಷ್ಟೇ ಅಲ್ಲದೆ, ವಿಶ್ವೇಶ್ವರ ಭಟ್ ಅವರು ಈ ತಪ್ಪು ಮಾಹಿತಿ ಇರುವ ತಮ್ಮ ಟ್ವೀಟ್ ಅನ್ನು ಕೂಡಾ ಇದುವರೆಗೂ ಡಿಲೀಟ್ ಮಾಡಿಲ್ಲ.

ಮತ್ತೆ ತಮ್ಮ ತಪ್ಪನ್ನು ಸಮರ್ಥಿಸಿಕೊಂಡ ವಿಶ್ವವಾಣಿ ಮತ್ತು ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌!

ಈ ಎಲ್ಲದರ ನಡುವೆ, ವೈದ್ಯಕೀಯ ಶಿಕ್ಷಣ ಇಲಾಖೆಯು ಸೀಟ್‌ ಮ್ಯಾಟ್ರಿಕ್ಸ್‌‌ನಲ್ಲಿ ರೋಸ್ಟರ್‌‌ ಅನ್ನು ಪುನರ್‌ ನಿಗದಿಪಡಿಸಿರುವುದರಿಂದ 2021ನೇ ಪಿಜಿ ವೈದ್ಯಕೀಯ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಸೋಮವಾರ ರದ್ದು ಪಡೆಸಿ, ಹಿಂಪಡೆದಿತ್ತು.

ಇದನ್ನು ಆಧಾರವಾಗಿಟ್ಟುಕೊಂಡು ಮತ್ತೆ ಟ್ವೀಟ್ ಮಾಡಿರುವ ವಿಶ್ವೇಶ್ವರ ಭಟ್‌, ‘‘ನಮ್ಮ ವರದಿಯ ಆಶಯ ಮತ್ತು ಕಳಕಳಿಯನ್ನು ಅರಿಯದ ಕೆಲವು ಅವಿವೇಕಿಗಳು, ವಿಶ್ವವಾಣಿ ಸುಳ್ಳು ವರದಿ ಮಾಡಿದೆ ಎಂದು ಅರಚಿಕೊಂಡಿದ್ದರು. ಇಂದು ವೈದ್ಯಕೀಯ ಶಿಕ್ಷಣ ಇಲಾಖೆ ಪಿಜಿ ವೈದ್ಯಕೀಯ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ರದ್ದುಪಡಿಸಿದೆ. ಈಗ ಏನಂತಾರೋ ?!” ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಅವರ ಪತ್ರಿಕೆಯು ಈ ಬಗ್ಗೆ ಸುದ್ದಿ ಕೂಡಾ ಮಾಡಿದೆ.

ಪತ್ರಿಕೆಯ ಆರ್ಕೃವ್‌ ಲಿಂಕ್ ಇಲ್ಲಿದೆ.
ವಿಶ್ವೇಶ್ವರ ಭಟ್‌ ಟ್ವೀಟ್ ಆರ್ಕೈವ್‌‌ಗೆ ಇಲ್ಲಿ ಕ್ಲಿಕ್ ಮಾಡಿ

ವಾಸ್ತವದಲ್ಲಿ ವಿಶ್ವವಾಣಿ ಪತ್ರಿಕೆಯ ಸುದ್ದಿಗೂ, ಸೀಟು ಹಂಚಿಕೆ ರದ್ದು ಮಾಡಿರುವ ಸರ್ಕಾರದ ಆದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೆರಿಯರ್‌ ಗೈಡನ್ಸ್‌ ಎಕ್ಸ್‌ಪರ್ಟ್ ಯು.ಎಚ್‌. ಉಮ್ಮರ್‌ ಅವರು ಹೇಳಿದ್ದಾರೆ.

“ಕೆಲವು ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳು ಸೇರ್ಪಡೆಯಾಗಿವೆ. ಜೊತೆಗೆ ಮೊದಲ ಸುತ್ತಿನ ಆಪ್ಷನ್ ಎಂಟ್ರಿಯಲ್ಲಿ ಹಲವು ಎಡವಟ್ಟುಗಳಾಗಿವೆ. ಇಲ್ಲದ ಕೋರ್ಸ್ ಮತ್ತು ಫೀಸ್ ಅದರಲ್ಲಿ ಕಾಣಿಸುತ್ತಿದ್ದವು. ಇದು ಸೀಟ್ ಮ್ಯಾಟ್ರಿಕ್ಸ್‌‌ಗೆ ತಾಳೆಯಾಗಿತ್ತಿರಲಿಲ್ಲ. ಅದಕ್ಕಾಗಿ ಈ ಹಿಂದಿನ ಸೀಟು ಹಂಚಿಕೆ ರದ್ದಾಗಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ ದಿನಪತ್ರಿಕೆಗಳಿಗೆ ‘ಮೇಕೆದಾಟು’ ಜಾಹೀರಾತು ಕೊಟ್ಟವರ್‍ಯಾರು? ಪತ್ರಿಕೆಗಳು ಹೇಳಿದ್ದೇನು?

“ಗಗನ್ ಕುಬೇರ್‌ ಮತ್ತು ವಿಶ್ವವಾಣಿ ವರದಿಗೂ, ಸೀಟು ಹಂಚಿಕೆ ರದ್ದಾಗಿರುವ ಈ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ಗದಗ ಮೆಡಿಕಲ್ ಕಾಲೇಜಿನ ಹಳೇ ಮತ್ತು ಹೊಸ ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಯಾವುದೇ ವ್ಯತ್ಯಾಸವಿಲ್ಲ” ಎಂದು ಉಮ್ಮರ್‌ ಹೇಳಿದ್ದಾರೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೂಡಾ ವೆಬ್‌ಸೈಟ್‌ನಲ್ಲಿ ಅದೇ ರೀತಿ ಹೇಳಿಕೊಂಡಿದೆ. “ಚಾಮರಾಜನಗರ, ಕಾರವಾರ ಮತ್ತು ಇಎಸ್‌ಐ, ಬೆಂಗಳೂರಿನ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹೊಸ ಸೀಟುಗಳನ್ನು ಸೇರಿಸಲಾಗಿದೆ” ಎಂದು ಪ್ರಾಧಿಕಾರ ಹೇಳಿದೆ. ಆದರೆ ಗದಗ ಕಾಲೇಜಿನಲ್ಲಿ ಯಾವುದೆ ಸೀಟು ಬದಲಾವಣೆ ಬಗ್ಗೆ ಮತ್ತು ಮೀಸಲಾತಿ ಕ್ಯಾಟಗರಿ ಬದಲಾವಣೆ ಬಗ್ಗೆ ಇದರಲ್ಲಿ ಮಾಹಿತಿಯಿಲ್ಲ.

ಒಟ್ಟಿನಲ್ಲಿ ಹೇಳಬಹುದಾದರೆ, ವಿಶ್ವವಾಣಿ ಮತ್ತು ಅದರ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರು ಮೀಸಲಾತಿ ಬಗೆಗಿನ ಅಸಮಾಧಾನವನ್ನು ವರದಿಯಲ್ಲಿ ಮತ್ತು ಟ್ವೀಟ್‌ನಲ್ಲಿ ಹೇಳಿಕೊಂಡು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಗದಗಿನ ಕಾಲೇಜಿನಲ್ಲಿ ಯಾವುದೆ ಸೀಟನ್ನು ಸೇರಿಸಲಾಗಿಲ್ಲ. ಸರ್ಕಾರಿ ಸೀಟು ಹಂಚಿಕೆ ಈ ಹಿಂದೆ ಇದ್ದಂತೆ, ತಮ್ಮ ಕ್ಯಾಟಗರಿ ಇರುವ ಕಾಲೇಜನ್ನು ನೋಡಿಕೊಂಡೇ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಈಗಲೂ ಸಲ್ಲಿಸಬೇಕಾಗುತ್ತದೆ.

ವಿಶ್ವೇಶ್ವರ ಭಟ್‌ ಅವರ ದಾರಿ ತಪ್ಪಿಸುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಂಗಳೂರಿನ ಖ್ಯಾತ ವೈದ್ಯರಾದ ಶ್ರೀನಿವಾಸ ಕಕ್ಕಿಲ್ಲಾಯ ಅವರು, “ನಿಮ್ಮ ಸುಳ್ಳು ಸುಳ್ಳೇ, ಸಮರ್ಥನೆಗೆ ಸಾವಿರ ಪ್ರಯತ್ನ ಪಟ್ಟರೂ ಸುಳ್ಳೇ. ಇದು ಕೆಇಎ ಪ್ರಕಟಣೆ. ಹೊಸ ಪಟ್ಟಿ ಮಾಡಿದ ಬಳಿಕವೂ ಗದಗದ ಅರಿವಳಿಕೆ ವಿಭಾಗ ಹಾಗೂ ನರಮಾನಸಿಕ ವಿಭಾಗದ ಈ ಬಾರಿಯ ಪಿಜಿ ಸೀಟು ಹಂಚಿಕೆ ಬದಲಾಗುವುದಿಲ್ಲ, ನಿಮ್ಮ ಸುಳ್ಳು ವರದಿಗೆ ಬೆಲೆ ಬರುವುದೂ ಇಲ್ಲ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನಿಮೇಷನ್‌ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್‌ ಫಸ್ಟ್‌ ಕನ್ನಡ?’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...