ಸೋಮವಂಶ ಸಹಾಸ್ರಾರ್ಜುನ ಕ್ಷತ್ರಿಯ (ಎಸ್‌ಎಸ್‌ಕೆ) ಸಮಾಜದ ಮುಖ್ಯ ಧರ್ಮದರ್ಶಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರ್ಗಿಯವರು ಪತ್ರ ಬರೆದಿದ್ದು, ಎಸ್‌ಎಸ್‌ಕೆ ಸಮಾಜದ ಹೆಣ್ಣು ಹಾಗೂ ಗಂಡು ಮಕ್ಕಳು ಮುಸ್ಲಿಂ ಸಮಾಜದ ಜೊತೆ ವಿವಾಹವಾದರೆ ಸಾಮಾಜಿಕ ಬಹಿಷ್ಕಾರ ಹಾಕಬೇಕೆಂದು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಎಸ್‌ಎಸ್‌ಕೆ ಸಮಾಜದ ಯುವತಿಯೊಬ್ಬರು ಮುಸ್ಲಿಂ ಸಮುದಾಯದ ಯುವಕನನ್ನು ವಿವಾಹವಾಗಿದ್ದರು. ಇದಕ್ಕೆ ‘ಲವ್ ಜಿಹಾದ್’ ಎಂದು ಕರೆದು ವಿವಾದ ಸೃಷ್ಟಿಸಲು ಯತ್ನಿಸಿದಾಗ, ಯುವತಿ ಸ್ಪಷ್ಟನೆ ನೀಡಿದ್ದಳು. ತಾನು ಇಷ್ಟಪಟ್ಟು ಮದುವೆಯಾಗಿದ್ದೇನೆಂದು ಯುವತಿ ಹೇಳಿದ್ದರಿಂದ, ವಿವಾದ ಸೃಷ್ಟಿಸಲು ಯತ್ನಿಸಿದವರಿಗೆ ಹಿನ್ನಡೆಯಾಗಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಗೇಶ್ ಅವರ ಪತ್ರ ಹೊರಬಿದ್ದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಮಾಜದ ಮುಖ್ಯ ಧರ್ಮದರ್ಶಿ ಹಾಗೂ ಕೇಂದ್ರ ಪಂಚ ಟ್ರಸ್ಟ್ ಕಮಿಟಿ ಸದಸ್ಯರಿಗೆ ಪತ್ರ ಬರೆದಿರುವ ಅವರು, “ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮಾಜದ ಯುವಕರು ನಮ್ಮ ಸಮಾಜದ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ ಲವ್ ಜಿಹಾದ್‌ನಲ್ಲಿ ಸಿಲುಕಿಸಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈಗ ಸಮಾಜ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಯಾರು ಮುಸ್ಲಿಂ ಸಮಾಜದ ಯುವಕರನ್ನು, ಹೆಣ್ಣುಮಕ್ಕಳನ್ನು ಮದುವೆ ಆಗಿರುತ್ತಾರೋ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
“ಮುಸ್ಲಿಮರೊಂದಿಗೆ ವಿವಾಹವಾದ ಕುಟುಂಬವನ್ನು ಸಮಾಜದಿಂದ ಹೊರಗಿಡುವುದು, ಆ ಕುಟುಂಬಕ್ಕೆ ಸಮಾಜದ ಯಾವುದೇ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸುವುದು, ಸಮಾಜದ ಜನ ಯಾರೂ ಹೆಣ್ಣು ಕೊಡದಿರುವುದು ಮತ್ತು ತೆಗೆದುಕೊಳ್ಳದಿರುವುದು, ಸಮಾಜದ ಜನ ತಮ್ಮ ಮನೆಯ ಯಾವುದೇ ಕಾರ್ಯಕ್ರಮದಲ್ಲಿ ಕರೆಯದಿರುವುದು, ಅವರ ಮನೆಯಲ್ಲಿ ಭಾಗವಹಿಸದಿರುವುದು” ಎಂಬ ಸಲಹೆಗಳನ್ನು ನಾಗೇಶ್ ನೀಡಿದ್ದಾರೆ.
ಇದನ್ನೂ ಓದಿರಿ: ಮಾಜಿ ಸಿಎಂಗಳಾದ ಎಚ್‌ಡಿಕೆ, ಸಿದ್ದರಾಮಯ್ಯ, ಸಾಹಿತಿ ಕುಂವೀ ಸೇರಿ 61+ ಜನರಿಗೆ ಕೊಲೆ ಬೆದರಿಕೆ
“ಇಂತಹ ಕಠಿಣ ಕ್ರಮಕೈಗೊಳ್ಳುವುದರಿಂದ ಸಮಾಜದಲ್ಲಿ ಎಚ್ಚರಿಕೆ ಗಂಟೆ ಭಾರಿಸವುದು ಅನಿವಾರ್ಯವಾಗಿದೆ. ಈ ವಿಚಾರವಾಗಿ ಎಸ್‌ಎಸ್‌ಕೆ ಸಮಾಜದ ಕೇಂದ್ರ ಪಂಚ ಟ್ರಸ್ಟ್ ಕಮಿಟಿಯ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಿ ಸಮಾಲೋಚಿಸಿ” ಎಂದು ಅವರು ವಿನಂತಿಸಿಕೊಂಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಲೆಟರ್ ಹೆಡ್‌ನಲ್ಲಿ ನಾಗೇಶ್ ಪಿ.ಕಲಬುರ್ಗಿಯವರು ಪತ್ರ ಬರೆದಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಪತ್ರವನ್ನು ಹೇಗಾದರೂ ಬರೆದಿರಲಿ, ಈ ರೀತಿಯ ಬಹಿಷ್ಕಾರ ಸಂವಿಧಾನ ಬಾಹಿರವಲ್ಲವೇ? ಎಂಬ ಪ್ರಶ್ನೆಯನ್ನು ಮುಖ್ಯವಾಗಿಟ್ಟುಕೊಂಡು ‘ನಾನುಗೌರಿ.ಕಾಂ’ ನಾಗೇಶ್ ಅವರನ್ನು ಸಂಪರ್ಕಿಸಿತು. ಹಲವಾರು ಪ್ರಶ್ನೆಗಳನ್ನು ಕೇಳಲಾಗಿದ್ದು, ಹಾರಿಕೆಯ ಉತ್ತರಗಳನ್ನು ನಾಗೇಶ್ ನೀಡಿದ್ದಾರೆ.
“ಇದು ಪ್ರಾಧಿಕಾರದಿಂದ ಬರೆದ ಅಧಿಕೃತ ಪತ್ರವಲ್ಲ” ಎಂದು ಅವರು ಮೊದಲಿಗೆ ಸ್ಪಷ್ಟಪಡಿಸಿದರು.
ನಾನುಗೌರಿ.ಕಾಂ: “ಅಧಿಕೃತ ಪತ್ರವೋ ಅಲ್ಲವೋ ಬದಿಗಿರಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು, ಈ ರೀತಿಯಲ್ಲಿ ಸಂವಿಧಾನ ಬಾಹಿರ ನಿಲುವು ತಾಳಬಹುದೇ? ಮದುವೆ ಎಂಬುದು ವೈಯಕ್ತಿಕ ಆಯ್ಕೆ. ಒಂದು ಕುಟುಂಬವನ್ನು ಬಹಿಷ್ಕರಿಸುವ ಅಧಿಕಾರ ನಿಮಗೆ ಇದೆಯೇ?’’
ನಾಗೇಶ್: ನಮ್ಮ ಸಮಾಜದ ಹುಡುಗಿ ಲವ್ ಜಿಹಾದ್‌ನಲ್ಲಿ ಸಿಲುಕಿ ರಿಜಿಸ್ಟ್ರಾರ್ ಮದುವೆ ಆಗಿದ್ದಾಳೆ. ಇದನ್ನು ಸಮಾಜದ ಮುಖಂಡರು ವಿರೋಧಿಸಿದ್ದಾರೆ. ಹೀಗೇಕೆ ಆಗುತ್ತಿದೆ ಎಂದು ಧರ್ಮದರ್ಶಿಗಳು ಚರ್ಚೆ ಮಾಡಿದರು. ಸಮಾಜದಲ್ಲಿ ಸ್ವಲ್ಪ ಎಚ್ಚರಿಕೆ ಘಂಟೆ ಬಾರಿಸಬೇಕು. ಹಾಗಾದಾಗ ಮಾತ್ರ ಇಂಥವು ಕಡಿಮೆಯಾಗಬಹುದು ಎಂದು ಅವರಲ್ಲಿ ತಿಳಿಸಿದೆ. ಕೆಲವು ಸಲಹೆ ನೀಡುವಂತೆ ಧರ್ಮದರ್ಶಿಗಳು ಸೂಚಿಸಿದರು. ಹೀಗಾಗಿ ಐದು ಸಲಹೆಗಳನ್ನು ಕೊಟ್ಟಿದ್ದೇನೆ. ಅವುಗಳನ್ನು ಒಪ್ಪುವುದು, ಬಿಡುವುದು ಸಮಿತಿಗೆ ಬಿಟ್ಟಿದ್ದು.
ಇದನ್ನೂ ಓದಿರಿ: ಹರ್ಷ ಹತ್ಯೆಯ ನಂತರ ದ್ವೇಷ ಭಾಷಣ: ಸಚಿವ ಈಶ್ವರಪ್ಪ ವಿರುದ್ದ ಎಫ್‌ಐಆರ್
ನಾನುಗೌರಿ.ಕಾಂ: ಅಧಿಕೃತ ಪತ್ರವೋ, ಅಲ್ಲವೋ ಬೇರೆ ಪ್ರಶ್ನೆ. ನೀವು ಸಮಾಜವನ್ನು ನೋಡುತ್ತೀರೋ; ಜಾತಿ, ಧರ್ಮ ತಾರತಮ್ಯ ನಿರ್ಬಂಧಿಸಿರುವ, ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ ಎಂದಿರುವ ಸಂವಿಧಾನವನ್ನು ಪಾಲನೆ ಮಾಡುತ್ತೀರೋ?
ನಾಗೇಶ್: ಸಮಾಜದವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ. ಸಮಾಜಕ್ಕಿಂತ ದೊಡ್ಡವನು ನಾನಲ್ಲ.
ನಾನುಗೌರಿ.ಕಾಂ: ಸಂವಿಧಾನ ದೊಡ್ಡದೋ ಸಮಾಜ ದೊಡ್ಡದೋ ತಿಳಿಸಿ.
ನಾಗೇಶ್: ಸಂವಿಧಾನವೂ ಬೇಕು, ಸಮಾಜವೂ ಬೇಕು. ಸಮಾಜದ ರಕ್ಷಣೆಯಾಗಬೇಕಲ್ಲ? ನಾನು ಸಲಹೆಗಳನ್ನು ನೀಡಿದ್ದೇನೆಯೇ ಹೊರತು, ಜಾರಿ ಮಾಡಲೇಬೇಕು ಎಂದು ಹಠ ಹಿಡಿದಿಲ್ಲ. ಸಂವಿಧಾನ ವಿರೋಧಿಯಾಗಿದ್ದರೆ ಸಮಾಜ ಸಲಹೆಗಳನ್ನು ಸಮಾಜ ನಿರಾಕರಿಸುತ್ತದೆ. ಸಂವಿಧಾನಕ್ಕಿಂತ ದೊಡ್ಡವರು ಯಾರು? ನಮ್ಮ ಸಮಾಜದ ಯುವತಿ ಮುಸ್ಲಿಂ ಸಮುದಾಯದವರನ್ನು ಮದುವೆಯಾದಲ್ಲಿ, ಇಡೀ ಕುಟುಂಬವೇ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜಾಗೃತಿ ಮೂಡಿಸಲು ಪತ್ರ ಬರೆದಿದ್ದೇನೆ. ಇದನ್ನು ಜಾರಿ ಮಾಡಲೇಬೇಕೆಂದು ಹೇಳುತ್ತಿಲ್ಲ. ಸಮಾಜದಲ್ಲಿ ಹೆದರಿಕೆ ಹುಟ್ಟಿಲಿ ಎಂದು ಬರೆದಿದ್ದೇನೆ.
ನಾನುಗೌರಿ.ಕಾಂ: ಮದುವೆ ಎಂಬುದು ವೈಯಕ್ತಿಕ ನಿರ್ಧಾರವಾಗಿರುವಾಗ ಹೆದರಿಕೆ ಹುಟ್ಟಿಸಲು ನೀವ್ಯಾರು?
ನಾಗೇಶ್: ಸಮಾಜ ರಕ್ಷಣೆಯನ್ನು ನಾವು ಮಾಡಬೇಕಾಗುತ್ತದೆ.
ನಾನುಗೌರಿ.ಕಾಂ: ಸಂವಿಧಾನ ಬಾಹಿರವಾಗಿ ಸಮಾಜವನ್ನು ರಕ್ಷಣೆ ಮಾಡಬಾರದಲ್ಲ?
ನಾಗೇಶ್: ನನ್ನ ಸಲಹೆಗಳು ಜಾರಿಯೇನೂ ಆಗಿಲ್ಲವಲ್ಲ.
(ಕೇಂದ್ರ ಸರ್ಕಾರ ಲವ್ ಜಿಹಾದ್ ಕುರಿತು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯನ್ನು ಅವರ ಗಮನಕ್ಕೆ ತರಲಾಯಿತು. “ಇದುವರೆಗೂ ‘ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ” ಎಂದು ಸರ್ಕಾರ ಹೇಳಿರುವುದನ್ನು ವಿವರಿಸಲಾಯಿತು.)
ನಾನುಗೌರಿ.ಕಾಂ: ಮುಸ್ಲಿಂ ವಿರುದ್ಧ ಮಾತನಾಡುತ್ತಿದ್ದೀರಿ. ಇರಲಿ, ಈಗ ನಿಮ್ಮ ಸಮಾಜದವರು ಹಿಂದೂ ಧರ್ಮದಲ್ಲೇ ಬರುವ ದಲಿತ ಹಾಗೂ ಇತರ ಜಾತಿಯವರನ್ನು ಮದುವೆಯಾದರೆ ನಿಮ್ಮ ನಿಲುವು ಏನಾಗಿರುತ್ತದೆ?
ನಾಗೇಶ್: ನಾನು ಸ್ಪಷ್ಟವಾಗಿ ಹೇಳುತ್ತಿರುವುದು ಮುಸ್ಲಿಂ ಬಗ್ಗೆ ಮಾತ್ರ. ಹಿಂದೂ ಸಮಾಜ ಜಾಗೃತಿಯಾಗಬೇಕಿದೆ.
ನಾನುಗೌರಿ.ಕಾಂ: ದಲಿತರೊಂದಿಗೆ ವಿವಾಹವಾದರೂ ನಿಮ್ಮ ಸಮಾಜಕ್ಕೆ ಇಂಥದ್ದೇ ಸಲಹೆ ನೀಡುತ್ತೀರಾ?
ನಾಗೇಶ್: ಲವ್ ಜಿಹಾದ್ ಬಗ್ಗೆ ಹೇಳುತ್ತಿದ್ದೇನೆ.
ನಾನುಗೌರಿ.ಕಾಂ: ಹಾಗಾದರೆ ಬೇರೆ ಜಾತಿಯವರನ್ನು ಮದುವೆಯಾಗಬಹುದಲ್ಲವೇ?
ನಾಗೇಶ್: ಇಲ್ಲಿ ಲವ್ ಜಿಹಾದ್- ಮಾತ್ರ ವಿರೋಧಿಸುತ್ತಿದ್ದೇನೆ. ಮೊನ್ನೆ ನಡೆದ ಘಟನೆ ಬೇಜಾರಾಗಿದೆ.
ಅಂತರ್‌ಜಾತಿ ವಿವಾಹದ ಕುರಿತು ಎಷ್ಟೇ ಪ್ರಶ್ನಿಸಿದರೂ ನಾಗೇಶ್ ಅವರ ಉತ್ತರ ಬದಲಾಗಲೇ ಇಲ್ಲ. ಅಂತರ್ಜಾತಿ ವಿವಾಹವು ಸಂವಿಧಾನದಲ್ಲಿ ಮಾನ್ಯವಾಗಿದೆ ಎಂದು ಪದೇ ಪದೇ ಉಲ್ಲೇಖಿಸಿದರೂ, ‘ಲವ್ ಜಿಹಾದ್, ಲವ್ ಜಿಹಾದ್’ ಎನ್ನುತ್ತಾ ಮಾತು ಮುಗಿಸಿದರು.
ಅಂತಾರ್ಜಾತಿ ವಿವಾಹವನ್ನು ಒಪ್ಪಲ್ಲ: ಎಸ್‌ಎಸ್‌ಕೆ ಸಮುದಾಯದ ಮುಖಂಡ
ಎಸ್‌ಎಸ್‌ಕೆ ಸಮಾಜ ಚಿಂತನ ಮಂಥನ ರಾಜ್ಯ ಸಮಿತಿಯ ಪ್ರಮುಖರಾದ ಹನುಮಂತ ಚಂದ್ರಕಾಂತ ನಿರಂಜನ ‘ನಾನುಗೌರಿ.ಕಾಂ’ ಸಂಪರ್ಕಕ್ಕೆ ಸಿಕ್ಕರು. ನಾಗೇಶ್ ಅವರಿಗೆ ಕೇಳಿದ ಪ್ರಶ್ನೆಗಳನ್ನೇ ಅವರಲ್ಲಿಯೂ ಪ್ರಸ್ತಾಪಿಸಲಾಯಿತು. “ಸಂವಿಧಾನ, ಕಾಯ್ದೆಗಳು ಒಂದು ಕಡೆ ಇದ್ದರೆ, ಸಮಾಜದ ಕಟ್ಟಳೆಗಳು ಬೇರೆ ಇವೆ” ಎಂದ ಅವರು, ನಾಗೇಶ್ ಅವರ ಪತ್ರವನ್ನು ಸಮರ್ಥಿಸಿಕೊಂಡರು.
ಹನುಮಂತ ಅವರು ಲವ್ ಜಿಹಾದ್‌ನಿಂದ ಮಾತು ಆರಂಭಿಸಿ ಹಿಜಾಬ್, ಮುಸ್ಲಿಮರ ಬಂದ್ ಇತ್ಯಾದಿಗಳನ್ನೆಲ್ಲ ಪ್ರಸ್ತಾಪಿಸಿದರು. “ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಹೇಳುವುದಾದರೆ ಹಿಂದೂ ಧರ್ಮದಲ್ಲಿನ ಇತರ ಜಾತಿಗಳೊಂದಿಗೂ ನಿಮ್ಮ ಸಮಾಜದವರು ವಿವಾಹ ಆಗುವುದನ್ನು ನೀವು ಒಪ್ಪುವುದಿಲ್ಲವೇ?” ಎಂದು ಪ್ರಶ್ನಿಸಲಾಯಿತು.
“ಅದನ್ನೂ ಕೂಡ ನಾವು ಸ್ವೀಕಾರ ಮಾಡಲ್ಲ. ಅಂತಾರ್ಜಾತಿ ವಿವಾಹವೂ ತಪ್ಪು” ಎಂದರು.
ಹುಬ್ಬಳ್ಳಿ–ಧಾರವಾಡದ ಎಸ್‌ಎಸ್‌ಕೆ ಸಮಾಜದ ಕೇಂದ್ರ ಪಂಚ ಸಮಿತಿಯ ಧರ್ಮದರ್ಶಿ ನೀಲಕಂಠ ಪಿ.ಜಡಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಅವರ ಪ್ರತಿಕ್ರಿಯೆ ಸಿಕ್ಕಲ್ಲಿ ಅಪ್‌ಡೇಟ್ ಮಾಡಲಾಗುವುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಕೊಲೆ ಬೆದರಿಕೆ ಸ್ವೀಕರಿಸಿರುವ ಚಿಂತಕರು ಏನಂತಾರೆ?



ಹಾಗಾದರೆ ಆರ್ ಎಸ್ ಎಸ್ ಮುಖಂಡರ ಮಕ್ಕಳ ಮದುವೆ ಬಗ್ಗೆ ಯೆನನ್ನುವೆ ನೀನು