Homeನ್ಯಾಯ ಪಥಚುನಾವಣೆಯ ಸಂದರ್ಭದಲ್ಲಿ ಭುಗಿಲೇಳುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಭಾಷಾ ನಂಟು ಇದೆಯೇ?

ಚುನಾವಣೆಯ ಸಂದರ್ಭದಲ್ಲಿ ಭುಗಿಲೇಳುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಭಾಷಾ ನಂಟು ಇದೆಯೇ?

- Advertisement -
- Advertisement -

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಈಗ ಏಕಾಏಕಿಯಾಗಿ ಸ್ಫೋಟಿಸಿದ ಭಾಷಾಂಧತೆಯು ಏಕಾಏಕಿ ಹುಟ್ಟಿಕೊಂಡದ್ದೇನಲ್ಲ; ಅಷ್ಟೇ ಅಲ್ಲದೆ, ಅದು ಪ್ರಾಥಮಿಕವಾಗಿ ಭಾಷೆಗೆ ಸಂಬಂಧಿಸಿದ್ದೂ ಅಲ್ಲ. ಮರಾಠಿಯ ಕುರಿತು ಬೆಳಗಾವಿ-ನಿಪ್ಪಾಣಿ ಪ್ರದೇಶದ ಜನರ ಸಹಿಷ್ಣುತೆಯು ಮುಗಿದೇಹೋಯಿತೇನೋ, ಅಥವಾ ಕನ್ನಡದ ಕುರಿತು ಕೊಲ್ಲಾಪುರ-ಸಾಂಗ್ಲಿಯಲ್ಲಿರುವ ಜನರ ಸಹಿಷ್ಣುತೆಯು ಮುಗಿದೇ ಹೋಯಿತೇನೋ ಎಂಬಂತೆಯೂ ಅಲ್ಲ. ಈ ಎರಡೂ ಭಾಷೆಗಳನ್ನೂ ಮಾತನಾಡುವ ಜನರ ಸಂಖ್ಯೆ ತೀರಾ ದೊಡ್ಡದಾಗಿದೆ. ದ್ವಿಭಾಷೆಯ ಪರಂಪರೆಯು ಈ ಪ್ರದೇಶದ ಸಂಸ್ಕೃತಿಯಲ್ಲಿ ಅತ್ಯಗತ್ಯವಾದ ಅಂಶವಾಗಿದೆ. ವಿವಾದಿತ ಗಡಿಯ ಎರಡೂ ಕಡೆಗಳಲ್ಲಿರುವ ಜಾತಿಗಳು ಮತ್ತು ಸಮುದಾಯಗಳು, ತಮ್ಮ ವಿಸ್ತರಿತ ಕುಟುಂಬಗಳನ್ನು ಎರಡೂ ಕಡೆಗಳಲ್ಲಿ ಹರಡಿಕೊಂಡಿವೆ. ಕನ್ನಡ ಮತ್ತು ಮರಾಠಿ ಎರಡರ ಇತಿಹಾಸದುದ್ದಕ್ಕೂ ಪರಿಸ್ಥಿತಿ ಇದುವೇ ಆಗಿತ್ತು.

ಕನ್ನಡದ ಅನೇಕ ಪ್ರಸಿದ್ಧ ಲೇಖಕರು ಸಹಜ ರೀತಿಯಲ್ಲಿ ಮರಾಠಿ ಮಾತನಾಡುವವರೂ ಆಗಿದ್ದರು. ಅವರಲ್ಲಿ ಕೆಲವರನ್ನಷ್ಟೇ ಹೆಸರಿಸುವುದಾದಲ್ಲಿ, ಮಹಾನ್ ಕವಿ ದ.ರಾ.ಬೇಂದ್ರೆ, ನಾಟಕಕಾರ ಗಿರೀಶ್ ಕಾರ್ನಾಡ್, ಕಾದಂಬರಿಕಾರ ಶಾಂತಿನಾಥ ದೇಸಾಯಿ, ಗಾಯಕ ಭೀಮಸೇನ ಜೋಷಿ, ಕತೆಗಾರ-ಸಿನಿಮಾ ಹಾಡುಗಳ ರಚನೆಕಾರ ಜಯಂತ ಕಾಯ್ಕಿಣಿ ಸೇರಿದ್ದಾರೆ. ಇನ್ನೊಂದು ಕಡೆಯಲ್ಲಿ ಮರಾಠಿಯ ಅತ್ಯಂತ ಪ್ರಸಿದ್ಧ ಬರಹಗಾರ ಜಿ.ಎ. ಕುಲಕರ್ಣಿಯವರು ತಮ್ಮ ವೃತ್ತಿಜೀವನದ ಬಹುಕಾಲವನ್ನು ಕರ್ನಾಟಕದಲ್ಲಿ ಕಳೆದವರು ಮತ್ತು ತಮ್ಮ ಅದ್ಭುತ ಕಥಾನಕಗಳನ್ನು ಇಲ್ಲಿನ ಪರಿಸರದಿಂದಲೇ ರೂಪಿಸಿಕೊಂಡವರು. ಅದೇ ರೀತಿಯಲ್ಲಿ 20ನೇ ಶತಮಾನದ ಮರಾಠಿ ನಾಟಕರಂಗವು ಕನ್ನಡ ನಾಟಕರಂಗದ ಪ್ರಭಾವದಿಂದಲೇ ಹುಟ್ಟಿಕೊಂಡಿತು. ಕನ್ನಡದ ಮಹಾನ್ ಸಂಗೀತಗಾರರೆಲ್ಲರೂ ನುಡಿಸುತ್ತಿದ್ದ ಹಾರ್ಮೋನಿಯಂ ಮತ್ತು ಸಿತಾರ್‌ಗಳು ಕಳೆದ ನೂರಿಪ್ಪತ್ತು ವರ್ಷಗಳಿಂದ ಮಹಾರಾಷ್ಟ್ರದ ಮೀರಜ್ ಪಟ್ಟಣದಲ್ಲಿಯೇ ತಯಾರಾಗುತ್ತಿವೆ.

ಹಿಂದೆ, ಬಸವಣ್ಣನವರ ಅನುಯಾಯಿಗಳ ವಚನಗಳು ಮರಾಠಿಗರ ಮನಸ್ಸನ್ನು ಪ್ರವೇಶಿಸಿದಷ್ಟೇ ಸುಲಭವಾಗಿ ತುಕಾರಾಮರ ಭಜನೆಗಳು ಕನ್ನಡಿಗರ ಹೃದಯಕ್ಕೆ ದಾರಿಮಾಡಿಕೊಂಡಿವೆ. ಮರಾಠಿಯ ಸಾವಿರಾರು ಶಬ್ದಗಳು ಕನ್ನಡ ಮೂಲದವುಗಳು ಮತ್ತು ಅದೇ ರೀತಿಯಲ್ಲಿ ಅಷ್ಟೇ ಸಂಖ್ಯೆಯ ಕನ್ನಡ ಶಬ್ದಗಳು ಇಂಡೋ ಆರ್ಯನ್ ಬೇರುಗಳನ್ನು ಹೊಂದಿದ್ದು, ಮರಾಠಿಯ ಮೂಲಕ ಕನ್ನಡದಲ್ಲಿ ಸಮ್ಮಿಳಿತಗೊಂಡವು. ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ದೈವ ಎಂದರೆ ಪಂಡರಾಪುರದ ವಿಠೋಬ. ಒಂದು ಜನಪ್ರಿಯ ಜಾನಪದ ಗಾದೆ ಅವನ ಮೂಲವು ಕರ್ನಾಟಕ ಎಂದು ಹೇಳುತ್ತದೆ. ಕರ್ನಾಟಕದ “ಕಶೀದ” ಕಸೂತಿಯ ಸೀರೆಗಳು ಯಾವತ್ತೂ ಮಹಾರಾಷ್ಟ್ರದ ಚೆಲುವೆಯರ ಉಡುಪುಗಳ ನಡುವೆ ಹೆಮ್ಮೆಯ ಸ್ಥಾನ ಪಡೆದಿದ್ದರೆ, ಯುಗಗಳಿಂದ ಕರ್ನಾಟಕದ ಮಹಿಳೆಯರು ತಮ್ಮ ಮದುವೆಯ ಉಡುಪಾಗಿ ಮಹಾರಾಷ್ಟ್ರದ “ಪೈತಾಣಿ” ಇರಬೇಕು ಎಂದು ಬಯಸುತ್ತಾ ಬಂದಿದ್ದಾರೆ. ಎರಡೂ ಭಾಷೆಗಳು, ರಾಜ್ಯಗಳು, ಸಂಸ್ಕೃತಿಗಳು ಈ ರೀತಿಯ ಸಾಂಸ್ಕೃತಿಕ ಬಾಂಧವ್ಯದಲ್ಲಿ ಬೆಸೆದಿರುವಾಗ, ಇದೀಗ ಸ್ಫೋಟಿಸಿರುವ ಕೋಪದ ಮೂಲ ಯಾವುದು?

ಅದು ಭಾಷೆ ಅಲ್ಲವೆಂದಾದಲ್ಲಿ, ಕೆಟ್ಟದಾಗಿ ಅಧ್ವಾನಗೊಳಿಸಲಾಗಿರುವ ಪ್ರಾದೇಶಿಕ ಗಡಿಯ ಹಠಾತ್ ನೆನಪು ಜನರಿಗೆ ಕಿರಿಕಿರಿ ಉಂಟುಮಾಡಿತೆ? ಕಳೆದ ಆರು ದಶಕಗಳಲ್ಲಿ ಗಡಿ ವ್ಯಾಖ್ಯಾನವು ಹಾದುಹೋಗಿರುವ ಪುನರಾವರ್ತನೆಗಳನ್ನು ನೋಡುವ ತನಕ ಯಾರೂ ಕೂಡಾ ಹೀಗೆ ಭಾವಿಸಬಹುದು. ಶಾತವಾಹನ, ವಕಾಟಕ, ರಾಷ್ಟ್ರಕೂಟ, ಚಾಲುಕ್ಯ ಮತ್ತು ಯಾದವ ಅರಸರ ಕಾಲಗಳಲ್ಲಿ ಮತ್ತು ಮರಾಠ, ಪೇಶ್ವೆ, ನಂತರ ವಸಾಹತುಶಾಹಿ ಆಡಳಿತದ ಕಾಲಗಳಲ್ಲಿ ಕೂಡಾ ಪೂರ್ವ ಮತ್ತು ದಕ್ಷಿಣ ಮಹಾರಾಷ್ಟ್ರದ ಗಡಿಗಳು ಲೆಕ್ಕವಿಲ್ಲದಷ್ಟು ಸಲ ಬದಲಾಗಿರುವುದನ್ನು ಮತ್ತೆ ಉಲ್ಲೇಖಿಸುವ ಅಗತ್ಯವಿಲ್ಲ.

ಆಧುನಿಕ ಭಾರತದಲ್ಲಿ ರಾಜ್ಯದ ರಚನೆಗೆ ಸ್ವಲ್ಪ ಮೊದಲ ತನಕ ಉತ್ತರ ಕರ್ನಾಟಕದ ದೊಡ್ಡ ಭಾಗವು ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚಾಗಿ ಮಹಾರಾಷ್ಟ್ರದ ಜೊತೆಗಿದ್ದು, ಬಾಂಬೆ ಪ್ರೆಸಿಡೆನ್ಸಿಯಲ್ಲಿ ಸೇರಿತ್ತು. ಸ್ವಾತಂತ್ರ್ಯಾನಂತರ ರಾಜ್ಯಗಳ ರಚನೆಯು ಭಾಷಾ ಬಹುಸಂಖ್ಯಾತತೆಯ ಆಧಾರದಲ್ಲಿ ನಡೆಯಿತು. ಮಹಾರಾಷ್ಟ್ರದ ಉತ್ತರ ಮತ್ತು ಈಶಾನ್ಯದಲ್ಲಿ ಮರಾಠಿ, ಗುಜರಾತಿ, ಹಿಂದಿ ಅಥವಾ ತೆಲುಗು ಭಾಷೆಗಳಿಗಿಂತ ಹೆಚ್ಚೇನೂ ಬೇರೆಯಾಗಿರದ ಭಾಷೆಗಳನ್ನು ಮಾತನಾಡುವ ಹಲವಾರು ಆದಿವಾಸಿ ಸಮುದಾಯಗಳು ಇರುವ ಕಾರಣದಿಂದ ಗಾಢವಾದ ಭಾಷಾವಾರು ವಿಭಜನೆಯು ಬಹಳಷ್ಟು ತೆಳುವಾಯಿತು. ಅವು ಎರಡು ಭಾಷೆಗಳ ನಡುವೆ ಹೆಚ್ಚುವರಿ ಭಾಷೆಗಳಾಗಿ ಕೆಲಸ ಮಾಡಿದವು.

ಮರಾಠಿ ಮತ್ತು ಕನ್ನಡದ ನಡುವೆ ಇಂತಹ ಯಾವುದೇ ಹೆಚ್ಚುವರಿ ಭಾಷೆಯಿಲ್ಲ. ಆದುದರಿಂದ ಎರಡೂ ರಾಜ್ಯಗಳ ಪ್ರಾದೇಶಿಕ ಗಡಿಯ ಉದ್ದಕ್ಕೂ ಎರಡೂ ಕಡೆಯ ದ್ವಿಭಾಷಿಕತೆಯ ಹೊರತಾಗಿಯೂ, ಎರಡೂ ಭಾಷೆಗಳ ನಡುವಿನ ವ್ಯತ್ಯಾಸವು ಇರುವುದಕ್ಕಿಂತಲೂ ಗಾಢವಾಗಿ, ಆಳವಾಗಿ ಕಾಣಿಸಿಕೊಳ್ಳುತ್ತದೆ. ಹೀಗಿದ್ದರೂ, ಇದೇನೂ ಹೊಸ ಸಂಶೋಧನೆ ಅಲ್ಲ. ಯಾವೂದೇ ಅಸಮ್ಮತಿ, ಅಸಮಾಧಾನ ಇಲ್ಲದೇ ಗಡಿಯನ್ನು ಗುರುತಿಸಬೇಕಾದ ಬಹುತೇಕ ಅಸಾಧ್ಯವಾದ ಈ ಕೆಲಸವು ವರ್ಷಗಳಲ್ಲಿ ವಿವಾದಗಳ ಹಲವು ಹಂತಗಳನ್ನು ದಾಟಿಹೋಗಿದೆ.

ಹಲವಾರು ಸಮಿತಿಗಳು ವಿವಾದವನ್ನು ಬಗೆಹರಿಸಲು ಭಾರೀ ಪ್ರಯತ್ನಗಳನ್ನು ಮಾಡಿವೆ. ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿ, ಕಾದಾಡಲಾಗಿದೆ. ಎರಡೂ ರಾಜ್ಯಗಳು ತರ್ಕ ಮತ್ತು ವಾದಗಳ ಮೂಲಕ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ತಮ್ಮ ತಮ್ಮ ದಾವೆಗಳನ್ನು ಸಮರ್ಥಿಸಿ ಅವನ್ನು ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೊಯ್ಯಲು ಸಾಧ್ಯವಾಗುವಂತೆ ತಮ್ಮದೇ ಆಯೋಗಗಳನ್ನೂ ನೇಮಿಸಿವೆ. ದ್ವಿಪಕ್ಷೀಯ ಒಪ್ಪಂದಕ್ಕೆ ಬರಲು ಜನಸಂಖ್ಯಾ ಗಣನೆ ಕೂಡಾ ಮಾಡಲಾಗಿದೆ. ಆಡಳಿತ ಸಂರಚನೆ, ಉಪವಿಭಾಗಿಯ ತಾಲೂಕುಗಳ ಪುನರ್‌ರಚನೆ ಮತ್ತು ಕರ್ನಾಟಕ ವಿಧಾನಸಭೆಯಲ್ಲಿ ಅವುಗಳ ಪ್ರಾತಿನಿಧ್ಯದ ಲೆಕ್ಕಾಚಾರದ ಪ್ರಯೋಗಗಳನ್ನೂ ಮಾಡಲಾಗಿದೆ. ಈ ಪ್ರದೇಶಗಳ ಜನರು ಇದಕ್ಕೆ ಒಗ್ಗಿಕೊಂಡು, ರಾಜಿ ಮಾಡಿಕೊಂಡು, ತಮ್ಮ ಜೀವನದಲ್ಲಿ ಮುಂದುವರಿದಿದ್ದಾರೆ. ಈ ಹೊತ್ತಿಗೆ ತೀವ್ರಗಾಮಿಗಳು ಕೂಡಾ ಗತಕಾಲಕ್ಕೆ ಸೇರಿಹೋಗಿದ್ದಾರೆ. ವಿವಾದವು ಭಾಷೆಯ ಹೆಸರಿನಲ್ಲಿ ನಡೆಯುತ್ತಿದೆ. ಆದರೆ, ಅದು ಹೂರಣದಲ್ಲಿ ಭಾಷೆಗೆ ಸಂಬಂಧಿಸಿದ್ದಲ್ಲ. ಅದು ಗಡಿಯ ಹೆಸರಿನಲ್ಲಿ ನಡೆಯುತ್ತಿದೆ. ಆದರೆ, ಅದು ಹೂರಣದಲ್ಲಿ ಪ್ರದೇಶಕ್ಕೆ ಸಂಬಂಧಿಸಿದ್ದಲ್ಲ. ರಾಜಕಾರಣಿಗಳು ಬಯಸಿ ಕಿಡಿ ಹಚ್ಚಿದಾಗಲೆಲ್ಲಾ ಈ ಪ್ರದೇಶವು ಅಶಾಂತಿಯನ್ನು ಕಾಣುತ್ತದೆ ಎಂದು ಜನರಿಗೆ ಗೊತ್ತಿದೆ.

ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ. ಇತ್ತೀಚಿನ ಸಮಯದಲ್ಲಿ ಭ್ರಷ್ಟಾಚಾರ ಮಿತಿಮೀರಿರುವ ಕುರಿತ ಸುದ್ದಿಗಳು ಧಾರಾಳವಾಗಿ ಬರುತ್ತಿವೆ. ಪೊಲೀಸ್ ನೇಮಕಾತಿ ಹಗರಣ, 40% ಕಮಿಷನ್ ಮುಂತಾದ ಹಲವಾರು ಹಗರಣಗಳು ನಡೆದಿವೆ. ರಾಜ್ಯದಲ್ಲಿ ಕಳೆದ ಮಳೆಗಾಲದಲ್ಲಿ ಹೊಂಡಬಿದ್ದ ರಸ್ತೆಗಳು ಹಾಗೆಯೇ ಇವೆ. ಕೈಗಾರಿಕೆಗಳು ದಕ್ಷಿಣದ ಬೇರೆ ರಾಜ್ಯಗಳಿಗೆ ವಲಸೆ ಹೋಗಲಾರಂಭಿಸಿವೆ. ಅಲ್ಪಸಂಖ್ಯಾತರಿಗೆ ವ್ಯಾಪಾರ ದಿಗ್ಬಂಧನಗಳನ್ನು ಹೇರುವುದರ ಮೂಲಕ, ಹಿಜಾಬ್, ಲವ್ ಜಿಹಾದ್ ಮುಂತಾದವುಗಳನ್ನು ವಿವಾದವನ್ನಾಗಿ ಮಾಡುವುದರ ಮೂಲಕ, ಮಾಧ್ಯಮಗಳು ಕ್ರಿಮಿನಲ್ ಪ್ರಕರಣಗಳನ್ನು ಬಹಳ ದೊಡ್ಡ ರಾಷ್ಟ್ರೀಯ ಸಂಚುಗಳೋ ಎಂಬಂತೆ ಬಿಂಬಿಸುವುದರ ಮೂಲಕ, ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಎತ್ತಿಕಟ್ಟಿ, ಈ ಎಲ್ಲವುಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಮಾಡಲಾಗುತ್ತಿರುವ ಪ್ರಯತ್ನಗಳು ಫಲ ನೀಡುವುದು ಕಡಿಮೆಯಾಗುತ್ತಿದೆ. ಸ್ಥಳೀಯಾಡಳಿತ ಚುನಾವಣೆಗಳು ಕೂಡಾ ಆಳುವ ಪಕ್ಷಕ್ಕೆ ಹೆಚ್ಚೇನೂ ಒಳ್ಳೆಯ ಸುದ್ದಿಯನ್ನು ತರಲಿಲ್ಲ. ಮಹಾರಾಷ್ಟ್ರದಲ್ಲಿ ಆಳುವ ಕೂಟವು ಕೂಡಾ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಗಡಿಯ ಎರಡೂ ಕಡೆಗಳಲ್ಲಿ ಪರಿಸ್ಥಿತಿಯು ಬಿಜೆಪಿಗೆ ಬಹಳಷ್ಟು ಚಿಂತೆಯನ್ನು ಉಂಟುಮಾಡಿದೆ. ಈ ಸನ್ನಿವೇಶದಲ್ಲಿ ಭಾಷಾಂಧತೆಯನ್ನು ಬಡಿದೆಬ್ಬಿಸುವುದು ರಾಜಕೀಯ ಅಸ್ತ್ರವೊಂದನ್ನು ಒದಗಿಸುತ್ತದೆ.

ಬಹಳ ವ್ಯವಸ್ಥಿತವಾಗಿ, ಕೇಂದ್ರ ಗೃಹ ಮಂತ್ರಿ- ಇಡೀ ಭಾರತದಲ್ಲಿ ಹಿಂದಿಯನ್ನು ಹೇರುವ ಹೊಸ ಪ್ರಯತ್ನವನ್ನು ಮಾಡಿದಾಗ, ಕರ್ನಾಟಕದಲ್ಲಿ ಕನ್ನಡದ ವಕೀಲರಂತೆ ವರ್ತಿಸುವ ಬಿಜೆಪಿಗಾಗಲೀ, ಮಹಾರಾಷ್ಟ್ರದಲ್ಲಿ ಮರಾಠಿಯ ವಕೀಲರಂತೆ ವರ್ತಿಸುವ ಬಿಜೆಪಿಗಾಗಲೀ ಪ್ರತಿಭಟಿಸುವ ಯಾವ ಅಗತ್ಯವೂ ಕಾಣಲಿಲ್ಲ. ನಿಜ ಹೇಳಬೇಕೆಂದರೆ, ಎರಡೂ ಭಾಷೆಗಳಾಗಲೀ, ಗಡಿಯ ಎರಡೂ ಕಡೆಗಳಲ್ಲಿ ಇರುವ ಜನರಾಗಲೀ- ಅವರಿಗೆ ನೈಜ ವಿಷಯವೇ ಅಲ್ಲ. ಈ ಪ್ರದೇಶದ ಸಮುದಾಯಗಳಿಗೆ ಏನೇ ಹಾನಿಯನ್ನು ಬೇಕಾದರೂ ತರಲಿ; ರಾಜಕೀಯದ ದೊಣ್ಣೆನಾಯಕರಿಗೆ ಬೇಕಾಗಿರುವುದು- ಜನರ ಅಸಮಾಧಾನವನ್ನು ಬೇರೆಡೆಗೆ ತಿರುಗಿಸುವುದು ಮಾತ್ರ. ದುರದೃಷ್ಟವಶಾತ್ ದೇಶದ ಬಹುತೇಕ ಮಾಧ್ಯಮಗಳು ಈ ಸತ್ಯವನ್ನು ಹೇಳುವ ಧೈರ್ಯವನ್ನು ಕಳೆದುಕೊಂಡಿವೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ’ದಿ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ದ ಅಧ್ಯಕ್ಷರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತಕ್ಕೆ ಮರಳಲು ಇದು ಕೊನೆಯ ಅವಕಾಶ’: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್‌ ಎಚ್ಚರಿಕೆ

ಭಾರತದ ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ ನ್ಯಾಯಾಲಯದ ಪ್ರಕ್ರಿಯೆಗಳಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್, ಅವರಿಗೆ ಭಾರತಕ್ಕೆ ಮರಳಲು “ಒಂದು ಕೊನೆಯ ಅವಕಾಶ” ನೀಡಿದೆ. ಒಂದು ವೇಳೆ...

ಕೆಲಸದ ಸ್ಥಳದಲ್ಲಿ ಜಾತಿ ತಾರತಮ್ಯದ ಬಗ್ಗೆ ರಾಜ್ಯಸಭೆಯಲ್ಲಿ ಖರ್ಗೆ ಕಳವಳ; ಒಡಿಶಾ ಅಂಗನವಾಡಿ ಘಟನೆ ಉಲ್ಲೇಖ

ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಜಾತಿ ತಾರತಮ್ಯದ ಕುರಿತು ರಾಜ್ಯಸಭೆಯಲ್ಲಿ ಗುರುವಾರ (ಫೆ.12) ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಒಡಿಶಾದ ಅಂಗನವಾಡಿಯೊಂದರಲ್ಲಿ ದಲಿತ ಮಹಿಳೆ ತಯಾರಿಸಿದ ಆಹಾರವನ್ನು...

ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ...

‘ಆಕೆಯ ಜೀವ ಮುಖ್ಯ’: ಅಮೆರಿಕದ ಪೊಲೀಸ್ ಅಧಿಕಾರಿ ವೇಗದ ಚಾಲನೆಯಿಂದ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

2023 ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಚಾಲನೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಡಿಕ್ಕಿ ಹೊಡೆದ ಕಾರಣ ಸಾವನ್ನಪ್ಪಿದ ಭಾರತದ 23 ವರ್ಷದ ಪದವೀಧರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ಸಿಯಾಟಲ್ ನಗರವು...

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ಲೋಕಸಭೆ ಅಧಿವೇಶನದಲ್ಲಿ ಗುರುವಾರ (ಫೆ.12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿಲುವಳಿ ಸೂಚನೆ ಸಲ್ಲಿಸಿದ್ದು, ಅವರ ಸಂಸತ್ತಿನ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್...

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾ ಬಂಧನ

2026 ಫೆಬ್ರವರಿ 8, ಭಾನುವಾರದಂದು ವಿಐಪಿ ರಸ್ತೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದ ಹೈ ಪ್ರೊಫೈಲ್ ಲ್ಯಾಂಬೋರ್ಗಿನಿ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು...

ಫೆಬ್ರವರಿ 12 ರಂದು ಭಾರತ್ ಬಂದ್| ಹಲವು ರಾಜ್ಯಗಳಲ್ಲಿ ಬಂದ್ ಗೆ ಪೂರ್ಣ ಬೆಂಬಲ: ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12, ಗುರುವಾರ ಸಾರ್ವತ್ರಿಕ ಮುಷ್ಕರಕ್ಕೆ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿದೆ. ಕರ್ನಾಟಕದಲ್ಲಿಯೂ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರದ 4...

ವಿದ್ಯಾರ್ಥಿ ದಂಗೆ ಬಳಿಕ ಬಾಂಗ್ಲಾದಲ್ಲಿ ಇಂದು ಮೊದಲ ಮತದಾನ

ಬಾಂಗ್ಲಾದೇಶದಲ್ಲಿ ಇಂದು (ಫೆ. 12, 2026) ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯುತ್ತಿದೆ. ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 7:30ಕ್ಕೆ ಆರಂಭವಾದ ಮತದಾನವು...

ಬೇಸಿಗೆ ಎದುರಿಸಲು ಸಿದ್ಧತೆ: ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಮಿನಿ ವಾಟರ್ ಟ್ಯಾಂಕ್‌ ಸ್ಥಾಪನೆಗೆ ಮುಂದಾದ ಬಿಡಬ್ಲ್ಯೂಎಸ್ಎಸ್ಬಿ

ಬೆಂಗಳೂರು: ಬೇಸಿಗೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ನಗರದ ನಿರ್ದಿಷ್ಟ ಪ್ರದೇಶಗಳಲ್ಲಿ ನೀರಿನ ಬೇಡಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಸಂಭಾವ್ಯ ಕೊರತೆಯನ್ನು ನೀಗಿಸಲು ಸಿದ್ಧತೆಗಳನ್ನು ಹೆಚ್ಚಿಸಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ...

ಸೋನಮ್ ವಾಂಗ್‌ಚುಕ್ ಆರೋಗ್ಯವಾಗಿದ್ದಾರೆ, ವೈದ್ಯಕೀಯ ಕಾರಣಕ್ಕೆ ಬಿಡುಗಡೆ ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ಲಡಾಖ್‌ನ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರನ್ನು ವೈದ್ಯಕೀಯ ಆಧಾರದ ಮೇಲೆ ಬಂಧನದಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ (ಫೆ.11) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. "ವೈದ್ಯಕೀಯ ಆಧಾರದಲ್ಲಿ ಸೋನಮ್ ವಾಂಗ್‌ಚುಕ್ ಅವರ...