Homeಮುಖಪುಟಎಂಎಸ್‌ಪಿ ಕೊಡಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಒಡೆಯುವ ಸಮಯವಿದು: ಯೋಗೇಂದ್ರ ಯಾದವ್

ಎಂಎಸ್‌ಪಿ ಕೊಡಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಒಡೆಯುವ ಸಮಯವಿದು: ಯೋಗೇಂದ್ರ ಯಾದವ್

ಭಾರತದ ಎಲ್ಲಾ ರೈತರಿಗೆ ಎಂಎಸ್‌ಪಿ ಸಾಧ್ಯವೇ? ಎಂಬುದರ ಕುರಿತು ಕಿರಣ್ ವಾಸ್ಸಾ ಮತ್ತು ಯೋಗೇಂದ್ರ ಯಾದವ್‌ರವರ ಬರೆದ ಲೇಖನದ ಕನ್ನಡ ಅನುವಾದ

- Advertisement -

ಭಾರತದಲ್ಲಿ ನಿಜವಾಗಿಯೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವುದಕ್ಕೆ ಸಾಧ್ಯವೇ? ಈ ಪ್ರಶ್ನೆಗೆ ಉತ್ತರ ರಾಜಕೀಯ ಇಚ್ಛಾಶಕಿಯಲ್ಲಿ ಅಡಗಿದೆ. ಭಾರತದ ರೈತರು ತಮ್ಮ ಉತ್ಪನ್ನಗಳಿಗೆ ಖಾತರಿಯುತ ದರವನ್ನು ಪಡೆಯಲು ಸಾಧ್ಯವೇ? ವ್ಯವಸ್ಥಿತವಾಗಿ ಮತ್ತು ಆರ್ಥಿಕವಾಗಿ ಇದು ಅಸಾಧ್ಯ ಎಂದು ನರೇಂದ್ರ ಮೋದಿ ಸರ್ಕಾರ, ಹಲವು ಅರ್ಥಶಾಸ್ತ್ರಜ್ಞರು ಮತ್ತು ಬಹುಪಾಲು ಮಾಧ್ಯಮಗಳು ನಿಮ್ಮನ್ನು ನಂಬಿಸಲು ಯತ್ನಿಸುತ್ತಿವೆ. ಆದರೆ ಇವರೆಲ್ಲರೂ ತಪ್ಪಾದ ಸಂದೇಶ ನೀಡುತ್ತಿದ್ದಾರೆ. ಒಂದೋ ಇವರಿಗೆ ರೈತರ ಬೇಡಿಕೆ ಅರ್ಥವಾಗುತ್ತಿಲ್ಲ, ಇಲ್ಲವೇ ಇವರು ಉತ್ಪನ್ನಗಳ ವೆಚ್ಚವನ್ನು ಲೆಕ್ಕ ಹಾಕಿಲ್ಲ, ಅಥವಾ ಇವರು ಉದ್ದೇಶಪೂರ್ವಕವಾಗಿಯೇ ’ಮಿಸ್‌ಲೀಡ್ ’ ಮಾಡುತ್ತಿದ್ದಾರೆ.

ಈ ಒಂದು ಮಿಥ್ಯೆಯ ಬಲೂನನ್ನು ಒಡೆಯುವ ಸೂಕ್ತ ಸಂದರ್ಭ ಈಗ ಒದಗಿ ಬಂದಿದೆ. ರೈತರು ನಡೆಸುತ್ತಿರುವ ಅಮೋಘ ಪ್ರತಿಭಟನೆ ಮತ್ತು ಉದ್ದೇಶಿತ ಟ್ರ್ಯಾಕ್ಟರ್ ರ್‍ಯಾಲಿಯ ಸಂದರ್ಭಕ್ಕಿಂತ ಸೂಕ್ತ ಸಂದರ್ಭ ಮತ್ತೊಂದು ಇರಲಾರದು.

ಮೋದಿ ಸರ್ಕಾರ ಪ್ರತಿ ವರ್ಷ 23 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸುತ್ತದೆ. ಆದ್ದರಿಂದ, ತಾತ್ವಿಕವಾಗಿ, ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಟ ಬೆಲೆ ಪಡೆಯಲು ಅರ್ಹರು ಎಂದು ಭಾರತ ಸರ್ಕಾರ ಒಪ್ಪಿಕೊಳ್ಳುತ್ತದೆ. ಒಟ್ಟಿನಲ್ಲಿ ಎಂಎಸ್‌ಪಿ ಲೆಕ್ಕಾಚಾರ ಹಾಕುವ ಒಂದು ಕಾರ್ಯವಿಧಾನ (ಇದು ದೋಷಪೂರಿತ ಮತ್ತು ವಿವಾದಿತವಾಗಿದೆ) ಜಾರಿಯಲ್ಲಿದೆ. ಅಂದರೆ ರೈತರ ಉತ್ಪನ್ನಗಳಿಗೆ ಅರ್ಹ ಬೆಲೆ ಕೊಡುವುದು ತನ್ನ ಜವಾಬ್ದಾರಿ ಎಂದು ಸರ್ಕಾರ ಒಪ್ಪಿಕೊಳ್ಳುತ್ತದೆ.

ಸಮಸ್ಯೆ ಏನೆಂದರೆ, ಈ ಕುರಿತಾಗಿ ಸರ್ಕಾರ ಹೆಚ್ಚು ಕೆಲಸ ಮಾಡುತ್ತಿಲ್ಲ. ಸರ್ಕಾರವು ಕೆಲವೇ ಪ್ರದೇಶಗಳ 2-3 ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ಘೋಷಿಸುತ್ತದೆ. ಇದರಿಂದ ಇದರ ಪ್ರಯೋಜನ ರೈತರಲ್ಲಿ 1/5 ಜನರಿಗೂ (ಐವರಲ್ಲಿ ಒಬ್ಬರಿಗೂ) ಮುಟ್ಟುತ್ತಿಲ್ಲ. ಬಹಳಷ್ಟು ರೈತರಿಗೆ ಈ ಕನಿಷ್ಠ ಬೆಂಬಲ ದರವೇ ಗರಿಷ್ಠ ಸುರಕ್ಷತಾ ದರವೂ ಆಗಿದೆ. ಈ ಹಂಗಾಮಿನಲ್ಲಿ ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ದರ ಕ್ವಿಂಟಲ್‌ಗೆ 1,850 ರೂ. ಇದೆ. ಆದರೆ 3 ತಿಂಗಳಿನಿಂದ ರೈತರು ಅದನ್ನು 1,100-1,350 ರೂ.ಗಳಿಗೆ ಮಾರುತ್ತ ಬಂದಿದ್ದಾರೆ. ಇದು ಒಂದು ಉದಾಹರಣೆ ಮಾತ್ರ. ದ್ವಿದಳ ಧಾನ್ಯಗಳ, ಕಾಳುಗಳ ಬೆಳೆಗಾರರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಎಂಎಸ್‌ಪಿ ಖಾತರಿ ಕೊಡಿಸಲಾಗದಿದ್ದರೆ ರಾಜಕೀಯ ನಿವೃತ್ತಿ: ಹರಿಯಾಣ ಸಿಎಂ ಖಟ್ಟರ್

ಯಾವುದನ್ನು ಕನಿಷ್ಠ ಬೆಲೆ ಎಂದು ಸರ್ಕಾರ ನಿರ್ಧರಿಸುತ್ತದೋ ಅದಾದರೂ ತಮಗೆ ಲಭ್ಯವಾಗಬೇಕು ಎಂದು ರೈತರು ಮೋದಿ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಎಂಎಸ್‌ಪಿ ಖಾತರಿಗೆ ಒಂದು ಕಾನೂನು ಬೇಕು ಎಂದು ಅವರು ಕೇಳುತ್ತಿದ್ದಾರೆ.

ಎಂಎಸ್‌ಪಿ: ಹೇಗೆಲ್ಲ ಸಾಧಿಸಬಹುದು?

ಇದೆಲ್ಲ ಸಾಧ್ಯವೇ? ಮೊದಲಿಗೆ ಅಂತಹ ಬೆಂಬಲದ ಬಗೆಗಿನ ತಪ್ಪು ತಿಳುವಳಿಕೆಯನ್ನು ಬಗೆಹರಿಸಿಕೊಳ್ಳೋಣ. ಎಂಎಸ್‌ಪಿ ಖಾತರಿಗೊಳಿಸಿದರೆ, ಸರ್ಕಾರ ಎಲ್ಲ ಕೃಷಿ ಉತ್ಪನ್ನಗಳನ್ನು ಸಾರಾಸಗಟಾಗಿ ಕೊಳ್ಳಬೇಕು ಎಂದು ಅರ್ಥವಲ್ಲ. ಅದು ಅಸಾಧ್ಯ, ಕಾರ್ಯಸಾಧುವೂ ಅಲ್ಲ ಮತ್ತು ಅನಗತ್ಯ ಕೂಡ.

ಸಾರ್ವಜನಿಕ ಪಡಿತರ ವ್ಯವಸ್ಥೆಗೆ (ಪಿಡಿಎಸ್) ಸಂಗ್ರಹಿಸುವ (ಖರೀದಿಸುವ) ಆಹಾರ ಧಾನ್ಯಗಳನ್ನು ವಿಸ್ತರಿಸಬೇಕು. ಅದು ಬೇಳೆಕಾಳು, ಎಣ್ಣೆಬೀಜ ಮತ್ತು ರಾಗಿ-ಜೋಳದಂತಹ ನಿತ್ಯ ಬಳಕೆಯ ಆಹಾರ ಉತ್ಪನ್ನಗಳನ್ನು ಒಳಗೊಂಡಿರಬೇಕು. ಇದು ಕೋಟ್ಯಂತರ ಜನರ ಪೌಷ್ಟಿಕತೆ ವೃದ್ಧಿಗೂ ನೆರವಾಗುತ್ತದೆ.

750 ಮಿಲಿಯನ್ ಪಡಿತರ ಫಲಾನುಭವಿಗಳಿಗೆ ತಿಂಗಳಿಗೆ ಒಂದು ಕೆ.ಜಿ ಆಹಾರ ಧಾನ್ಯ (ಕಾಳು-ಕಡಿ) ವಿತರಿಸಿದರೆ, ಅದರಿಂದ ಈ ಬೆಳೆಗಳನ್ನು 13 ಮಿಲಿಯನ್ ಟನ್ ಅಧಿಕ ಬೆಳೆಯುವ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಸದ್ಯ ವಾರ್ಷಿಕ 23 ಮಿಲಿಯನ್ ಟನ್ ಆಹಾರ ಧಾನ್ಯ ಬೆಳೆಯುತ್ತಿದ್ದು, 13 ಮಿಲಿಯನ್ ಟನ್ ಅಧಿಕ ಬೇಡಿಕೆ ಈ ಆಹಾರಧಾನ್ಯ ಬೆಳೆಯುವವರಿಗೆ ಒಳ್ಳೆಯ ಅವಕಾಶ ನೀಡುತ್ತದೆ.

ಇದನ್ನೂ ಓದಿ: 2024 ರವರೆಗೂ ಪ್ರತಿಭಟನೆ ಮುಂದುವರಿಸಲು ಸಿದ್ಧರಿದ್ದೇವೆ: ರೈತ ನಾಯಕ ರಾಕೇಶ್ ಟಿಕಾಯತ್

ಇದಲ್ಲದೇ, ಎರಡನೆ ವಿಧಾನವೆಂದರೆ, ಎಂಎಸ್‌ಪಿಗಿಂತ ಕಡಿಮೆ ದರಕ್ಕೆ ಉತ್ಪನ್ನ ದರ ’ಕುಸಿದಾಗ’ ಸರ್ಕಾರ ಪರಿಣಾಮಕಾರಿಯಾಗಿ ಹಸ್ತಕ್ಷೇಪ ಮಾಡುವ ಮೂಲಕ ರೈತರ ನೆರವಿಗೆ ನಿಲ್ಲಬೇಕು. ಮಾರ್ಕ್‌ಫೆಡ್ ಮತ್ತು ನಫೆಡ್‌ಗಳ (ಇವು ಎಂಎಸ್‌ಪಿ ಆಧಾರದಲ್ಲಿ ರೈತರ ಉತ್ಪನ್ನ ಖರೀದಿಸುವ ಸರ್ಕಾರಿ ಸಂಸ್ಥೆಗಳು) ಬಜೆಟ್ ಹೆಚ್ಚಿಸಬೇಕು. ಆ ಮೂಲಕ ಅವುಗಳ ಸಂಗ್ರಹಣಾ ಸಾಮರ್ಥ್ಯ ಮತ್ತು ಮಾರ್ಕೆಟಿಂಗ್ ಸಾಮರ್ಥ್ಯಗಳನ್ನು ಉನ್ನತೀಕರಿಸಬೇಕು. ಈ ಸಂಸ್ಥೆಗಳು ದೇಶದ ಒಟ್ಟು ಕೃಷಿ ಉತ್ಪನ್ನದಲ್ಲಿ ಶೇ. 10-20 ರಷ್ಟು ಖರೀದಿಸಿದರೂ ಸಾಕು, ಆ ಬೆಳೆ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ತಂತಾನೇ ರೇಟು ಏರುತ್ತದೆ. ಹೀಗೆ ಮಾಡಬೇಕು ಎಂಬ ಯೋಜನೆ ಜಾರಿಯಲ್ಲಿದೆ, ಆದರೆ ಅದಕ್ಕೆ ದೊಡ್ಡ ಪ್ರಮಾಣದ ಅನುದಾನ ಒದಗಿಸುವ ಅಗತ್ಯವಿದೆ.

ಈ ವಿಧಾನ ಕೂಡ ವಿಫಲವಾದರೆ, ಸರ್ಕಾರ ಕೊರತೆ ಪಾವತಿ (deficit payment)ಯ ಮೂಲಕ ಮೂರನೇ ವಿಧಾನವನ್ನು ಅನುಸರಿಸಬಹುದು. ರೈತರು ತಮ್ಮ ಉತ್ಪನ್ನಗಳನ್ನು ಮಾರಿದ ಬೆಲೆಯು ಎಂಎಸ್‌ಪಿಗಿಂತ ಕಡಿಮೆಯಿದ್ದರೆ, ಸರ್ಕಾರ ಆ ವ್ಯತ್ಯಾಸದ ಮೊತ್ತವನ್ನು ಪರಿಹಾರದ ರೂಪದಲ್ಲಿ ನೀಡುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು. ಮಧ್ಯಪ್ರದೇಶದಲ್ಲಿ ಈ ಪ್ರಯೋಗ ಮಾಡಲಾಗಿತ್ತಾದರೂ, ಯೋಜನೆಯ ಅಸಮರ್ಥ ವಿನ್ಯಾಸದ ಕಾರಣ ಅದು ವಿಫಲವಾಗಿತು.

ನಾಲ್ಕನೆ ಮತ್ತು ಕೊನೆಯ ವಿಧಾನವೆಂದರೆ, ಎಂಎಸ್‌ಪಿಗಿಂತ ಕಡಿಮೆ ದರದಲ್ಲಿ ನಡೆಯುವ ಖರೀದಿಯನ್ನು ಕಾನೂನುಬಾಹಿರ ಎಂದು ಘೋಷಿಸುವುದು. ಆದರೆ ಈ ವಿಧಾನ ಸರ್ವಶ್ರೇಷ್ಠವಲ್ಲ, ಮೊದಲ ಮೂರು ವಿಧಾನಗಳು ಚಾಲ್ತಿಯಲ್ಲಿರದಿದ್ದರೆ ಇದು ಉಲ್ಟಾ ಕೂಡ ಹೊಡೆಯಬಹುದು. ಹೀಗಾಗಿ ಈ ನಾಲ್ಕು ವಿಧಾನಗಳನ್ನು ಸೂಕ್ತವಾಗಿ ಹೆಣೆಯುವ ಮೂಲಕ ಎಲ್ಲ ರೈತರಿಗೆ ಎಂಎಸ್‌ಪಿ ದರ ಲಭ್ಯವಾಗುವಂತೆ ಮಾಡಲು ಸಾಧ್ಯ.

ಎಂಎಸ್‌ಪಿ ಅಸಾಧ್ಯ ಎನ್ನುವ ಮಿಥ್ಯೆ

ನಿಜಕ್ಕೂ ಇದು ಕಾರ್ಯಸಾಧುವೆ? ಸರ್ಕಾರಿ ಅಧಿಕಾರಿಗಳು, “ಅಸಾಧ್ಯ. ಇದಕ್ಕೆ 17 ಲಕ್ಷ ಕೋಟಿ ರೂ., ಅಂದರೆ ಕೇಂದ್ರ ಬಜೆಟ್‌ನ ಅರ್ಧದಷ್ಟು ಹಣ ಬೇಕಾಗುತ್ತದೆ” ಎಂದು ಬೊಂಬಡಾ ಹೊಡೆದಿದ್ದಾರೆ. ಈ ಅಂಕಿಸಂಖ್ಯೆ ಒಂದು ಕುಚೋದ್ಯದವಾಗಿದೆ. ಸರ್ಕಾರ ದೇಶದ ಎಲ್ಲ ರೈತರ ಎಲ್ಲ ಉತ್ಪನ್ನಗಳನ್ನೂ ತಾನೇ ಖರೀದಿಸಿ, ನಂತರ ಈ ಉತ್ಪನ್ನಗಳನ್ನು ಸಮುದ್ರದಲ್ಲಿ ಡಂಪ್ ಮಾಡಿದಾಗ ಮಾತ್ರ 17 ಲಕ್ಷ ಕೋಟಿ ರೂ. ಬೇಕಾಗಬಹುದು! ಈ ಲೆಕ್ಕಾಚಾರದಲ್ಲಿ ಖರೀದಿಸಿದ ಉತ್ಪನ್ನಕ್ಕೆ ಶೂನ್ಯ ಮೌಲ್ಯ ನೀಡಲಾಗಿದೆ. ಅಂದರೆ ಖರೀದಿಸಿದ ಉತ್ಪನ್ನಕ್ಕೆ ಯಾವುದೇ ಕಿಮ್ಮತ್ತೂ ಇಲ್ಲ!

ಇದನ್ನೂ ಓದಿ: ದೆಹಲಿ ಗಡಿಯಲ್ಲಿ ಹೋರಾಟದ ಹೊಸ ಭಾಷ್ಯ ಬರೆಯುತ್ತಿರುವ ದೇಶದ ರೈತರು: ಡಾ. ಪುರುಷೋತ್ತಮ ಬಿಳಿಮಲೆ

ಒಂದು ವಾಸ್ತವ ಅಂದಾಜು ಪಡೆಯಲು ನಾವು, ಎಂಎಸ್‌ಪಿ ಮತ್ತು ಮಾರುಕಟ್ಟೆ ದರದ ಸರಾಸರಿಯ ವ್ಯತ್ಯಾಸವನ್ನು ಲೆಕ್ಕ ಹಾಕಿದ್ದೇವೆ. ಸರ್ಕಾರ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸಿದಾಗ ಮತ್ತು ರೈತರಿಗೆ ಕೊರತೆ ಪಾವತಿ ಮಾಡಿದಾಗ ಮಾತ್ರ ಅಷ್ಟೊಂದು ಮೊತ್ತ ಬೇಕಾಗುತ್ತದೆ. ಆದರೆ ವಾಸ್ತವ ಇದಲ್ಲ. 2017-18ರ ಅಧಿಕೃತ ಮಾಹಿತಿಯ ಕೋಷ್ಠಕವನ್ನು ಇಲ್ಲಿ ನೀಡಿದ್ದೆವೆ.( ಟೇಬಲ್ ಗಮನಿಸಿ). ಇದು ಮಾರುಕಟ್ಟೆಯ ದರ, ಎಂಎಸ್‌ಪಿ, ಎರಡರ ನಡುವಿನ ವ್ಯತ್ಯಾಸ ಮತ್ತು ಸರ್ಕಾರ ಭರಿಸಬೇಕಾದ ಮೊತ್ತವನ್ನು ಸೂಚಿಸುತ್ತದೆ.

ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಸರ್ಕಾರ, ಕೃಷಿ ಉತ್ಪನ್ನದ ವೆಚ್ಚದ ಶೇ. 50 ರಷ್ಟು ಎಂಎಸ್‌ಪಿ ಏರಿಕೆ ಮಾಡಿದರೆ, ಆಗ ಸರ್ಕಾರ ಭರಿಸಬೇಕಾದ ಗರಿಷ್ಠ ಮೊತ್ತ 2 ಲಕ್ಷ 28 ಸಾವಿರ ಕೋಟಿ ರೂ. ಅಷ್ಟೇ. ಇದು ಜಿಡಿಪಿಯ ಶೇ 1.3 ಮಾತ್ರ ಮತ್ತು ಕೇಂದ್ರ ಬಜೆಟ್‌ನ ಶೇ. 8 ಮಾತ್ರ. ಈ ಮೊತ್ತ ಭರಿಕೆ ಕಠಿಣ ಎನಿಸಬಹುದು. ಆದರೆ ಅಸಾಧ್ಯವಾದುದೇನಲ್ಲ. ಈ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸಕಾರಗಳು ಹಂಚಿಕೊಳ್ಳಬಹುದು.

ಭಾರತ ಇದನ್ನು ಭರಿಸಬಹುದೇ? ಈ ದೇಶ ಯಾವುದರ ಮೇಲೆ ಅವಲಂಬಿತ ಎಂಬುದನ್ನು ನೋಡುವ ಕ್ರಮವನ್ನು ಇದು ಆಧರಿಸಿದೆ ಮತ್ತು ಅನ್ನದಾತನ ಮೌಲ್ಯ ಎಷ್ಟು ಎಂದು ಗ್ರಹಿಸುವುದರ ಆಧಾರದಲ್ಲಿ ಇದು ಅವಲಂಬಿತವಾಗಿದೆ. ಇದು ರಾಜಕೀಯ ಇಚ್ಛಾಶಕ್ತಿಯ ಪ್ರಶ್ನೆ. ಈ ಪ್ರಶ್ನೆಯನ್ನೇ ಕೋಟ್ಯಂತರ ರೈತರು ಇವತ್ತು ಕೇಳುತ್ತಿದ್ದಾರೆ.

(ಮೂಲ ಲೇಖನ: ಕಿರಣ್ ವಾಸ್ಸಾ, ಭಾರತ್ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಸದಸ್ಯ. ಯೋಗೇಂದ್ರ ಯಾದವ್, ಸಮಾಜೋ-ಆರ್ಥಿಕ ತಜ್ಞ ಮತ್ತು ಸ್ವರಾಜ್ ಇಂಡಿಯಾದ ಮುಖ್ಯಸ್ಥರು. 
ಅನುವಾದ: ಮಲ್ಲನಗೌಡರ್ ಕೆ.ಪಿ)


ಇದನ್ನೂ ಓದಿ: ರೈತರಿಗೆ ಮಣಿಯುತ್ತಿರುವ ಕೇಂದ್ರ: ಕೃಷಿ ಕಾಯ್ದೆಗಳ ಪರ ಕಾರ್ಯಕ್ರಮ ಮಾಡದಂತೆ ಆದೇಶ ಹೊರಡಿಸಿದ ಅಮಿತ್ ಶಾ!

ಅನುವಾದಿತ ಲೇಖನ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial