ನಟಿ ಕಂಗನಾ ರಾಣಾವತ್ ವಿರುದ್ಧ ಗೀತರಚನೆಕಾರ ಜಾವೇದ್ ಅಖ್ತರ್ ಹೂಡಿದ್ದ ಮಾನಹಾನಿ ದೂರಿನಲ್ಲಿ ಮ್ಯಾಜಿಸ್ಟ್ರೇಟ್ ಹೊರಡಿಸಿರುವ ಜಾಮೀನು ವಾರೆಂಟ್ ಅನ್ನು ಪ್ರಶ್ನಿಸಿ ನಟಿ ಕಂಗನಾ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.
ಬುಧವಾರ ಕಂಗನಾ ರಾಣಾವತ್ ಸಲ್ಲಿಸಿರುವ ಮನವಿಯನ್ನು ಮಾರ್ಚ್ 15 ರಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಾರ್ಚ್ 1 ರಂದು ನಟಿ ಕಂಗನಾ ರಾಣಾವತ್ ವಿರುದ್ಧ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣದಿಂದ ಜಾಮೀನು ವಾರೆಂಟ್ ಹೊರಡಿಸಿತ್ತು.
ಇದನ್ನೂ ಓದಿ: ಕಂಗನಾ ವಿರುದ್ಧ ಜಾವೇದ್ ದೂರು: ಅದೊಂದು ತೋಳಗಳ ಹಿಂಡು ಎಂದ ನಟಿ!
ಮಾರ್ಚ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶಿಸಿ ಮ್ಯಾಜಿಸ್ಟ್ರೇಟ್ ಫೆಬ್ರವರಿಯಲ್ಲಿ ಸಮನ್ಸ್ ಜಾರಿಗೊಳಿಸಿದ್ದರು.
ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ಪ್ರಕರಣದಲ್ಲಿ ನಟಿ ಕಂಗನಾ ಅನಗತ್ಯವಾಗಿ ನನ್ನನ್ನು ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ಖಾಸಗಿವಾಹಿನಿಗಳಿಗೆ ನೀಡಿರುವ ಸಂದರ್ಶನಗಳಲ್ಲಿ ನನ್ನ ವಿರುದ್ಧ ಆಧಾರರಹಿತ ದೂರುಗಳನ್ನು ಮಾಡುವ ಮೂಲಕ ನನ್ನ ಮಾನಹಾನಿ ಮಾಡಿದ್ದಾರೆ ಎಂದು ಜಾವೇದ್ ಅಖ್ತರ್ ಮುಂಬೈ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ, ಅಖ್ತರ್ ಅವರ ದೂರಿನ ಬಗ್ಗೆ ಪೊಲೀಸರು ವರದಿಯನ್ನು ಸಲ್ಲಿಸಿದ್ದರು.
ಇದನ್ನೂ ಓದಿ: ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಕಂಗನಾ ರಾಣಾವತ್ ವಿರುದ್ಧ FIR ದಾಖಲು


