ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ 2016ರ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಜಯಗಳಿಸಿದ್ದ ಒಂದೊಂದೇ ರಾಜ್ಯಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಜೋ ಬೈಡೆನ್ ಅವರ ಗೆಲುವಿಗೆ ಟ್ರಂಪ್ ಕಳೆದ ಭಾರಿ ಜಯಗಳಿಸಿದ್ದ ಮಿಚಿಗನ್ ಕೂಡ ಸೇರುವ ನಿರೀಕ್ಷೆಯಿದೆ.
ಇತ್ತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ ಮತ್ತು ಮಿಚಿಗನ್‌ನಲ್ಲಿ ಮತ ಎಣಿಕೆಯನ್ನು ನಿಲ್ಲಿಸಿ, ಅಧ್ಯಕ್ಷೀಯ ಚುನಾವಣೆಯ ಅಂತಿಮ ಫಲಿತಾಂಶಗಳನ್ನು ತಡೆಯುವ ಬೆದರಿಕೆ ಹಾಕಿದ್ದಾರೆ. ಬೈಡೆನ್ ಗೆಲುವು ಸಾಧಿಸಿರುವ ವಿಸ್ಕಾನ್ಸಿನ್‌ನಲ್ಲಿ ಮರು ಮತ ಏಣಿಕೆಗೆ ಟ್ರಂಪ್ ಒತ್ತಾಯಿಸಿದ್ದಾರೆ.
ನಿನ್ನೆ, ಟ್ರಂಪ್ ತಾವು ಜಯಗಳಿಸಿರುವುದಾಗಿ ಅನಧಿಕೃತವಾಗಿ ಘೋಷಿಸಿದರು ಮತ್ತು ಮತ ಎಣಿಕೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರು.
ಇದನ್ನೂ ಓದಿ: ಮತದಾನದಲ್ಲಿ ವಂಚನೆ, ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ: ಡೊನಾಲ್ಡ್ ಟ್ರಂಪ್
ಇಲ್ಲಿಯವರೆಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲೋರಿಡಾ, ಅಲಬಾಮಾ, ಟೆನ್ನೆಸ್ಸೀ, ಒಕ್ಲಾಹೋಮ, ಇಂಡಿಯಾನಾ, ಕೆಂಟುಕಿ, ಪಶ್ಚಿಮ ವರ್ಜೀನಿಯಾ, ಜಾರ್ಜಿಯಾ, ಅಯೋವಾ, ಉತ್ತರ ಕೆರೊಲಿನಾ, ಓಹಿಯೋದಲ್ಲಿ ಮುಂದಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ವಿಸ್ಕಾನ್ಸಿನ್, ಪೆನ್ಸಿಲ್ವೇನಿಯಾ, ಕ್ಯಾಲಿಫೋರ್ನಿಯಾ, ಮೈನೆ, ವಾಷಿಂಗ್ಟನ್, ಇಲಿನಾಯ್ಸ್, ಕೋನೆಕ್ಟಿಕಟ್, ಮಿಚಿಗನ್, ಮಿನ್ನೇಸೋಟ, ವೆರ್ಮೊಂಟ್, ರೋಡೆ ಐಲೆಂಡ್, ನ್ಯೂಜೆರ್ಸಿ, ಮೇರಿಲ್ಯಾಂಡ್, ಡೆಲವೇರ್, ನೆವಾಡಾ, ನ್ಯೂ ಹ್ಯಾಮ್‌ಶೈರ್ ಮತ್ತು ವರ್ಜೀನಿಯಾದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಒಟ್ಟು 538 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಸ್ಪಷ್ಟ ಬಹುಮತಕ್ಕೆ 270 ಸ್ಥಾನಗಳ ಅಗತ್ಯವಿದ್ದು, ಬ್ಯುಸಿನೆಸ್ ಸ್ಟಾಂಡರ್ಡ್ ವರದಿಯ ಪ್ರಕಾರ ಜೋ ಬೈಡೆನ್ 264 ಸ್ಥಾನಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದರೆ, ಟ್ರಂಪ್ 214 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.


