Homeಮುಖಪುಟಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

ಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

- Advertisement -
- Advertisement -

|ಜಯಪ್ರಕಾಶ್ ಶೆಟ್ಟಿ. ಹೆಚ್ |
ಸಹಪ್ರಾಧ್ಯಾಪಕರು, ತೆಂಕನಿಡಿಯೂರು.ಉಡುಪಿ.

2008ರ ನವೆಂಬರ್‍ನಲ್ಲಿ ನಾನು ನಿರೀಕ್ಷೆಯೇ ಮಾಡಿರದ ರಾಜಕೀಯ ಪ್ರೇರಿತವಾದ ಅಕಸ್ಮಾತ್ ವರ್ಗಾವಣೆಯೊಂದು ನನಗೆ ನಾನು ಈ ಹಿಂದೆ ಕಂಡಿರದ ಹಾವೇರಿಯ ಹಿರೇಕೆರೂರಿನ ದುರ್ಗಮ್ಮನ ಕೆರೆಯನ್ನು ಕಾಣಿಸುವ ಜೊತೆಗೆ ನೇರನಡೆನುಡಿಯ ಗೆಳೆಯನೊಬ್ಬನನ್ನೂ ಕಾಣಿಸಿತ್ತು. ನೀರಿರದ ಊರಿಗೆ ನನ್ನನ್ನು ಎತ್ತಿ ಎಸೆಯುವ ಕೇಡಿಗರ ಧಾವಂತದಲ್ಲಿ ತುಂಬಿದ ಕೆರೆಯಿರುವ ಊರಿಗೆ ಹೋಗಿ ಬಿದ್ದ ನನಗೆ ಅರಿಯದ ಊರಿನ ಅನಾಥನೆಂಬ ಆತಂಕವೇ ಬಾಧಿಸದಂತೆ ಮನುಷ್ಯಪ್ರೀತಿಯ ನೆರಳೂ ಸಿಕ್ಕಿತ್ತು. ಸಂಸಾರದಿಂದ ದೂರವಿದ್ದ ಸಂಕಟ ಇದ್ದುದು ನಿಜವಿದ್ದರೂ ನಾನಾಗ ಜೀವಪರ ಚಿಂತನೆಯ ಆಲೋಚನೆಗಳನ್ನು ನಿರ್ಭೀತವಾಗಿ ಹಂಚಿಕೊಳ್ಳುತ್ತಿದ್ದ ಸಮಾನಮನಸ್ಕನೊಬ್ಬನ ಗೆಳೆತನದ ಮೂಲಕ ಬರಡು ನೆಲದಿಂದ ಕಿಂಚಿತ್ತಾದರೂ ಪಾರಾದ ಸುಖವನ್ನೂ ಅನುಭವಿಸಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ಶೇರು, ಬಡ್ಡಿ, ಚೀಟಿ, ಹೊಲ ಮನಿ, ಸೈಟು ಇವ್ಯಾವುದರ ಗೋಜಿಗೆ ಬೀಳದೆ ವೃತ್ತಿ ಮತ್ತು ವಿದ್ಯಾರ್ಥಿಗಳ ಜೊತೆಗೆ ಅಪಾರವಾಗಿ ಬದುಕನ್ನು ಪ್ರೀತಿಸುತ್ತಿದ್ದ ಅಸಲಿ ಮೇಷ್ಟರೊಬ್ಬರ ಗೆಳೆತನ ಉಂಡಿದ್ದೆ. ಹೀಗೆ ಅಂದು ಬೆಸೆದುಕೊಂಡ ಗೆಳೆಯ ಜೋಗುರನೆಂಬ ಆ ಪ್ರೀತಿಯ ಕೊಂಡಿ ಮತ್ತೆಂದೂ ಕಳಚಿಕೊಂಡಿರಲಿಲ್ಲ.

ಜೋಗುರರು ನನ್ನಂತಹ ಕೆಲವೇ ಮಂದಿ ಸ್ನೇಹಿತರಿಗಷ್ಟೇ ಪರಿಚಿತರಲ್ಲ. ಸಮಾಜಶಾಸ್ತ್ರದ ಉಪನ್ಯಾಸಕನಾಗಿ, ಹವ್ಯಾಸಿ ಪತ್ರಕರ್ತ, ಕತೆಗಾರ, ಸಮೂಹಪರ ಚಿಂತನೆಯ ಬರಹಗಾರ, ಅತ್ಯುತ್ತಮ ವಾಗ್ಮಿಯಾಗಿ ತನ್ನನ್ನು ಗುರುತಿಸಿಕೊಂಡ ಜೋಗುರ ಕನ್ನಡದ ಓದುಗರಿಗೆ ಚಿರಪರಿಚಿತರು. ಸಾವಿಗೆ ಸಮೀಪದಲ್ಲಿದ್ದಾಗಲೂ ಅಕ್ಷರ ಮತ್ತು ಬದುಕುಗಳೆರಡರ ಅಪಾರಪ್ರೀತಿಯಲ್ಲಿ ಜೀವಂತವಾಗಿ ಉಳಿದವರು. ಈ ಲೋಕದ ಸಾಮಾಜಿಕ ಆಗುಹೋಗುಗಳು ಮತ್ತು ರಾಜಕೀಯದ ಸೂಕ್ಷ್ಮಗಳ ಕುರಿತಂತೆ ಅನೇಕ ಜನಪರ ಚಳುವಳಿಗಳಲ್ಲಿ ಸಮಾನಮನಸ್ಕರೊಂದಿಗೆ ಪ್ರಗತಿಪರ ವಿವೇಕದೊಂದಿಗೆ ಬೆರೆಯುತ್ತಿದ್ದವರು. ಸಂವೇದನೆಗಳು ಸತ್ತು ಮತಿಹೀನ ಉದ್ರೇಕಗಳೇ ಮಿಂಚುತ್ತ್ತಿರುವ ಜಗತ್ತಿನಲ್ಲಿ ಒಬ್ಬ ಬರಹಗಾರನಿಗೆ ಇರುವ ಹೊಣೆಗಾರಿಕೆಯ ಮಹತ್ವವನ್ನು ಅರಿತವರು.

ಮನುಷ್ಯನಾಗಿ ಸ್ವಯಂ ಕಷ್ಟದ ಬದುಕನ್ನು ಬದುಕಿದ ಅನುಭವದ ಹಿನ್ನೆಲೆಯುಳ್ಳ ಜೋಗುರರು ಬಡತನದ ಬಗೆಗೆ ಎಂದೂ ಅವಹೇಳನ ಮಾಡಿದವರಲ್ಲ. ಈ ನೆಲದ ಜಾತಿಜಾಡ್ಯದ ಪರ ವಹಿಸಿದ ಸಣ್ಣತನದವರೂ ಅಲ್ಲ. ಜಾತಿಯನ್ನು ವಿರೋಧಿಸಿದ ಜೋಗುರರು ಸ್ವಯಂ ಅಂತಹ ಉದಾಹರಣೆಯಾಗಿ ಬದುಕಿದವರು. ಮಾತನ್ನು ಕೃತಿಯಾಗಿಸುವ ಬಸವಪರಂಪರೆಯ ನಿಜ ವಾರಸುದಾರನಂತೆ ಜಾತಿಯ ಕಕ್ಷೆಯನ್ನು ಮೀರಿ ವಿವಾಹ ಸಂಬಂಧವನ್ನು ಹೊಂದಿದ್ದಷ್ಟೇ ಅಲ್ಲ, ಅದನ್ನು ಅತ್ಯಂತ ಪ್ರೀತಿಯಿಂದ ಬದುಕಿದವರು. ಆದರೆ ಜೋಗುರರ ಬರಹಗಳನ್ನು ಗಮನಿಸುವುದಾದರೆ ಆ ಬರಹಗಳಲ್ಲಿ ಇರುವ ವ್ಯವಸ್ಥೆಯನ್ನು ನಿರಾಕರಿಸಲೇಬೇಕೆಂಬ ಹಟವೇನೂ ಇಲ್ಲ. ಮುಖ್ಯವಾಗಿ ಅವು ಸಾಮಾಜಿಕ ಸ್ವಾಸ್ಥ್ಯದ ಕಡೆಗೆ ಹೆಚ್ಚು ಒಲಿದವುಗಳು. ಅವರ ಅನೇಕ ಬರಹಗಳು ಕೆಲವೊಂದು ಸಾಮಾಜಿಕಸಂಸ್ಥೆಗಳನ್ನು ಅವುಗಳ ಆರೋಗ್ಯಕರ ಸ್ವರೂಪದಲ್ಲಿ ಹಾಗೆಯೇ ಮುಂದುವರೆಯಬೇಕೆಂದು ತಣ್ಣಗೆ ಆಶಿಸುವಂತೆಯೂ ಕಂಡುಬರುತ್ತವೆ. ಕುಟುಂಬ ಸಂಬಂಧ, ಮನುಷ್ಯ ಸಂಬಂಧಗಳ ಆರೋಗ್ಯಕರ ಇರುವಿಕೆಯ ನಿರೀಕ್ಷೆಯಲ್ಲಿ ಸಾಂಸ್ಥಿಕಸ್ವರೂಪಗಳನ್ನು ಒಂದು ಹಂತಗಳಲ್ಲಿ ಅವರ ಬರಹಗಳು ಬೆಂಬಲಿಸುತ್ತವೆ ಕೂಡಾ. ಅದು ಅವರ ಬದುಕಿನ ತರ್ಕವೂ ಆಗಿರುವಂತಿದೆ.

ಕೆಲವೇ ಸಮಯ ಒಟ್ಟಿಗೆ ಕೆಲಸ ಮಾಡಿದ ನಾವಿಬ್ಬರೂ ಒಟ್ಟಿಗೇ ವರ್ಗಾವಣೆ ಪಡೆದು ಹಿರೇಕೆರೂರನ್ನು ಬಿಟ್ಟು ನಾನು ಉಡುಪಿಗೆ ಬಂದೆ ಅವರು ಧಾರವಾಡಕ್ಕೆ ಹೋದರು. ಆದರೆ ನಮ್ಮ ಗೆಳೆತನ ಹಾಗೆಯೇ ಉಳಿದಿತ್ತು. ಅವರ ಹಟಕ್ಕೆ ಕಟ್ಟುಬಿದ್ದು ಕಾರವಾರದ ‘ಕರಾವಳಿ ಮುಂಜಾವು’ ದಿನಪತ್ರಿಕೆಯಲ್ಲಿ ನಾನು ಒಂದು ವರ್ಷದ ತನಕ ಅಂಕಣವನ್ನೂ ಬರೆದೆ. ಹೀಗೆ ಸಲುಗೆಯಲ್ಲಿ ಒತ್ತಾಯಿಸಬಲ್ಲ, ಅಷ್ಟೇ ಸಲೀಸಾಗಿ ತಾನು ಕಂಡ ಮಿತಿಯನ್ನು ಹೇಳಬಲ್ಲ ಪ್ರೀತಿಯ ಜೋಗುರ ಇನ್ನಿಲ್ಲವಾದರು ಎಂಬುದು ನನ್ನನ್ನೂ ಒಳಗೊಂಡಂತೆ ಅನೇಕ ಗೆಳೆಯರಿಗೆ ಮರೆಯಲಾರದ ನೋವು. ಆದರೆ ಅಗಲಿ ಹೋದ ಈ ಪ್ರೀತಿಯ ಕರುಳು ನಮ್ಮೊಳಗೆ ಉಳಿಸಿ ಹೋದ ಗೆಳೆತನದ ತೇವ ಮತ್ತು ಅಗಲಿಕೆಯ ನೋವುಗಳಲ್ಲಿ ಆ ಜೀವದ ನೆನಪು ನಮ್ಮೊಳಗೆ ಹಸಿರಾಗಿರಲಿ ಎಂಬುದಷ್ಟೇ ಕರಗಿ ಹೋದ ಗೆಳೆಯನಿಗೆ ನಮ್ಮೆಲ್ಲರ ಹರಕೆ ಎಂದುಕೊಳ್ಳುತ್ತೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜನದ್ರೋಹಿ ಬಿಜೆಪಿ ಸರಕಾರವನ್ನು ಸೋಲಿಸಿ, ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು: ಸಂವಿಧಾನ ಪರ ಸಂಘಟನೆಗಳ...

0
ಪ್ರಜಾಪ್ರಭುತ್ವ ಹಾಗೂ ಗಣತಂತ್ರದ ಕೊಲೆ ಮಾಡಲು ಹವಣಿಸುತ್ತಿರುವ ಜನದ್ರೋಹಿ ಸರಕಾರವನ್ನು ಸೋಲಿಸಿ, ಜನಪರವಾದ ಪ್ರಗತಿಪರ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು, ಬಸವಣ್ಣನವರು ಹಾಗೂ ಸರ್ವಸಮತೆಯ ಬಂಧುತ್ವದ ಸ್ವಾಭಿಮಾನಿ ದೇಶವನ್ನು ಕಟ್ಟುವ ಅಭಿಲಾಷೆ ಹೊಂದಿದ್ದ ಡಾ....