Homeಚಳವಳಿಪೌರತ್ವ ತಿದ್ದುಪಡಿ ಕಾಯಿದೆ ಸಂವಿಧಾನಬಾಹಿರ: ಸಂದರ್ಶನದಲ್ಲಿ ನ್ಯಾಯಮೂರ್ತಿ ಮದನ್ ಲೋಕೂರ್

ಪೌರತ್ವ ತಿದ್ದುಪಡಿ ಕಾಯಿದೆ ಸಂವಿಧಾನಬಾಹಿರ: ಸಂದರ್ಶನದಲ್ಲಿ ನ್ಯಾಯಮೂರ್ತಿ ಮದನ್ ಲೋಕೂರ್

- Advertisement -
- Advertisement -

ಕೃಪೆ: ಹಿಂದೂಸ್ತಾನ್‌ ಟೈಮ್ಸ್‌

ಅನುವಾದ: ನಿಖಿಲ್ ಕೋಲ್ಪೆ

(2018ರ ಜನವರಿಯಲ್ಲಿ ಭಾರತದ ಪ್ರಜಾತಂತ್ರ ಅಪಾಯದಲ್ಲಿದೆ ಎಂದು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಲ್ಲಿ ಒಬ್ಬರಾದ ಮತ್ತು ಪ್ರಸ್ತುತ ಫಿಜಿ ದೇಶದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಮದನ್ ಲೋಕೂರ್‌ರವರು ಹಿಂದೂಸ್ತಾನ್‌ ಟೈಮ್ಸ್‌ ಜೊತೆಗೆ ನಡೆಸಿದ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ)

ಸಂವಿಧಾನದ ವಿಧಿ 14 ಎಂಬುದು ಕೇವಲ ಸಮಂಜಸ- reasonable- (ವಾಸ್ತವಿಕವಾಗಿ ವಿಚಾರಬದ್ಧ – rational-) ವರ್ಗೀಕರಣಕ್ಕೆ ಮಾತ್ರ ಸೀಮಿತವಲ್ಲ. ಯಾವುದು ಮುಖ್ಯವೆಂದರೆ, ವಿಚಾರಬದ್ಧ ವರ್ಗೀಕರಣವು- ಕಾನೂನು ಸಾಧಿಸಲು ಬಯಸುವ ಉದ್ದೇಶದೊಂದಿಗೆ ಸಮಂಜಸವಾದ ಸಂಬಂಧವನ್ನು ಹೊಂದಿರಬೇಕು ಎಂದು ನ್ಯಾ. ಮದನ್ ಲೋಕೂರ್ ಹೇಳುತ್ತಾರೆ.

ಸುಪ್ರೀಂ ಕೋರ್ಟ್ 1957ರಲ್ಲಿ ವಿಷದೀಕರಿಸಿದ ಕಾನೂನನ್ನು ಒಪ್ಪುವುದಾದಲ್ಲಿ, ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ‘ಕಾನೂನುಬಾಹಿರ ವಲಸಿಗ’ (illegal immigrant) ಎಂಬುದರ ವ್ಯಾಖ್ಯೆಗೆ ವಿಧಿಸಲಾಗಿರುವ ನಿಯಮಾವಳಿ ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಮದನ್ ಲೋಕೂರ್ ಹೇಳುತ್ತಾರೆ.

ಭರತ್ ಸಿನ್ಹಾ ಅವರೊಂದಿಗೆ ನಡೆಸಿದ ಇ-ಮೈಲ್ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವ ಅವರು, ಯಾವುದೇ ಕಾನೂನು-ಸಮಾನತೆಗೆ ಸಂಬಂಧಿಸಿದಂತೆ ಇರುವ ಸಂವಿಧಾನದ ವಿಧಿ 14ರ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ವಿಚಾರಬದ್ಧ ವರ್ಗೀಕರಣ ಮತ್ತು ಸಮಂಜಸ ಸಂಬಂಧದ ಅವಳಿ ಅಗತ್ಯ ಇರುತ್ತದೆ ಎಂದು ಹೇಳಿದ್ದಾರೆ‌. ಆದರೆ, ಈಗಿನ ಚರ್ಚೆಯಲ್ಲಿ ದುರದೃಷ್ಟವಶಾತ್ ಇದನ್ನು ಮರೆತುಬಿಡಲಾಗಿದೆ ಎಂದು ನ್ಯಾ. ಲೋಕೂರ್ ಹೇಳಿದ್ದಾರೆ.

ಅವರು ಈ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ ಕೊಲೆಮಾಡಿದ ನಾಲ್ವರು ಆರೋಪಿಗಳ ಎನ್‌ಕೌಂಟರ್ ಸಾವು ಮತ್ತು ದಿಲ್ಲಿಯ ವಾಯುಮಾಲಿನ್ಯ ಇತ್ಯಾದಿ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ:

***

ಪ್ರಶ್ನೆ: ಹೈದರಾಬಾದಿನ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್‌ಕೌಂಟರ್ ಹತ್ಯೆಯು  ಭಾರತದ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ನ್ಯಾಯಾಂಗ ಪ್ರಕ್ರಿಯೆ ನಿಧಾನ ಮತ್ತು ಜಟಿಲ ಎಂದು ಆಡಳಿತ ಹೇಳುವುದರೊಂದಿಗೆ ಮತ್ತು ಹೈದರಾಬಾದ್ ಬಲಿಯಾದ ಮಹಿಳೆಯ ಹೆತ್ತವರು ಮತ್ತು ಇತರ ಅತ್ಯಾಚಾರ ಸಂತ್ರಸ್ತರು ಪೊಲೀಸ್ ಕೃತ್ಯವನ್ನು ಸ್ವಾಗತಿಸುವುದರೊಂದಿಗೆ ದೂರುವ ಆಟ ಆರಂಭವಾಗಿದೆ. ವಿಚಾರಣೆಯ ಹಂತದಲ್ಲಿಯೇ ಎನ್‌ಕೌಂಟರ್‌ಗಳು ತ್ವರಿತ ನ್ಯಾಯದಾನಕ್ಕೆ ಪರಿಹಾರವೆ?

ನ್ಯಾ. ಲೋಕೂರ್: ಅಲ್ಲವೆಂಬುದು ಸ್ಪಷ್ಟ. ಎನ್‌ಕೌಂಟರ್ ಸಾವಿಗೂ, ನ್ಯಾಯಾಂಗಬಾಹಿರ ಹತ್ಯೆಗೂ ವ್ಯತ್ಯಾಸವಿದೆ. ತೆಲಂಗಾಣದಲ್ಲಿ ನಡೆದದ್ದು ನ್ಯಾಯಾಂಗಬಾಹಿರ ಹತ್ಯೆ. ಪೋಲೀಸರ ಜೀವ ಅಪಾಯದಲ್ಲಿದ್ದುದರ ಪರಿಣಾಮವಾಗಿ ಎನ್‌ಕೌಂಟರ್ ಸಂಭವಿಸಿತೆ ಮತ್ತು ಎಲ್ಲಾ ನಾಲ್ವರು ಆರೋಪಿಗಳನ್ನು ಕೊಲ್ಲುವುದು ಅಗತ್ಯವಾಗಿತ್ತೆ ಎಂಬ ಕುರಿತು ವಿಚಾರಣೆ ನಡೆಯುತ್ತಿದೆ.

ಪ್ರಶ್ನೆ: ನೀವು ಜನವರಿ 2018ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಡೆಸಿದ ಸುದ್ದಿಗೋಷ್ಠಿಯ ಭಾಗವಾಗಿದ್ದಿರಿ. ಇಂತಹಾ ತೀವ್ರ ಹೆಜ್ಜೆ ಇಡುವಂತೆ ನಿಮ್ಮನ್ನು ಪ್ರೇರೇಪಿಸಿದ್ದು ಏನು? ಆ ಬಳಿಕ ನಿಮ್ಮ ಆತಂಕಗಳನ್ನು ಪರಿಹರಿಸಲಾಯಿತೆ? ಅದು ಸಂಸ್ಥೆಯ ಒಳಗೆ ನೀವು ಬಯಸಿದ್ದ ಸುಧಾರಣೆಗಳನ್ನು ತಂದಿತೆ? ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ರಂಜನ್ ಗೊಗೋಯ್ ಅವರಿಗೆ ಸುದ್ದಿಗೋಷ್ಠಿ ಬಯಸಿದ್ದ ಸುಧಾರಣೆಗಳನ್ನು ಅನುಷ್ಟಾನಗೊಳಿಸಲು ಸಾಧ್ಯವಾಯಿತೆ?

ನ್ಯಾ. ಲೋಕೂರ್: ಅದು ಸಾಂಪ್ರದಾಯಿಕ ಅರ್ಥದಲ್ಲಿ ಸುದ್ದಿಗೋಷ್ಠಿ ಆಗಿರಲಿಲ್ಲ. ಅದು ಒತ್ತಟ್ಟಿಗಿರಲಿ; ಹೌದು, ಅದು ಕೆಲವು ಬದಲಾವಣೆಗಳನ್ನು ತಂದಿತು. ಆದರೆ, ಸಾಕಷ್ಟು ಅಲ್ಲ ಮತ್ತು ಸುಧಾರಣೆಯ ನಿಜವಾದ ಅರ್ಥದಲ್ಲಿ ಅಲ್ಲ.

ಪ್ರಶ್ನೆ: ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಆಗಾಗ ತಮ್ಮ ಮತ್ತು ಮುಖ್ಯ ನ್ಯಾಯಾಧೀಶರ ನಡುವೆ ಸಂವಹನದಲ್ಲಿ ಅಂತರದ ಕುರಿತು ಮಾತನಾಡುತ್ತಾರೆ. ಇದು ನಿಜವೆ? ಅದಕ್ಕಾಗಿಯೇ ನೀವು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದಿರೆ? ಸುದ್ದಿಗೋಷ್ಠಿ ನಡೆಸಿದ್ದಕ್ಕಾಗಿ ಎಂದಾದರೂ ವಿಷಾದವಾಗಿದೆಯೆ?

ನ್ಯಾ. ಲೋಕೂರ್: ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಾಧೀಶರ ನಡುವೆ ಸಂವಹನದ ಅಂತರವಿಲ್ಲ. ಇಲ್ಲ; ತಥಾಕಥಿತ ಸುದ್ದಿಗೋಷ್ಠಿ ನಡೆಸಿದ್ದಕ್ಕಾಗಿ ನಾನು ವಿಷಾದಪಡುವುದಿಲ್ಲ.

ಪ್ರಶ್ನೆ: ಆಯ್ದ ಪ್ರಕರಣಗಳಲ್ಲಿ ಮಾತ್ರ ತ್ವರಿತ ವಿಚಾರಣೆ ನಡೆಸುವುದಕ್ಕಾಗಿ ಸುಪ್ರೀಂ ಕೋರ್ಟ್ ಆಗಾಗ ಟೀಕೆಗೆ ಒಳಗಾಗಿದೆ. ಉದಾಹರಣೆಗೆ ಅಯೋಧ್ಯೆ. ಜನರ ಹಕ್ಕುಗಳಿಗೆ ಸಂಬಂಧಿಸಿದ ಮುಖ್ಯ ಪ್ರಕರಣಗಳು ತ್ವರಿತ ಗಮನವನ್ನು ಪಡೆಯುವುದಿಲ್ಲ. ನಿಮ್ಮ ಪ್ರಕಾರ ಇದು ನಿಜವೆ?

ನ್ಯಾ. ಲೋಕೂರ್: ಇದು ಕೇವಲ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಷಯ. ನನ್ನ ದೃಷ್ಟಿಯಲ್ಲಿ ಎಲ್ಲಾ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು. ದೂರುದಾರರು ತೀರ್ಪಿಗಾಗಿ ವರ್ಷಗಟ್ಟಲೆ ಕಾಯಬೇಕೆಂದು ನಿರೀಕ್ಷಿಸಬಾರದು. ಎಲ್ಲರಿಗೂ ತ್ವರಿತ ಮತ್ತು ಸಮಾನ ನ್ಯಾಯ ಒದಗಿಸಲು ತೀವ್ರವಾದ ಸುಧಾರಣೆಗಳ ಅಗತ್ಯವಿದೆ. ನ್ಯಾಯಾಂಗ ಸುಧಾರಣೆಗಳಿಗೆ ತ್ವರಿತವಾಗಿ ಗಮನಕೊಡಲು ಇವತ್ತು ಸಾಕಷ್ಟು ವಾಸ್ತವಿಕ ಆಧಾರಗಳಿವೆ.

ಪ್ರಶ್ನೆ: ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ ನ್ಯಾಯಮಂಡಳಿಯನ್ನು- ದೂರುದಾರರಿಗೆ ವರದಿಯ ಪ್ರತಿಯನ್ನು ನೀಡದುದಕ್ಕಾಗಿ ಟೀಕಿಸಿ ನೀವೊಂದು ಲೇಖನ ಬರೆದಿದ್ದಿರಿ. ನಿಯಮಗಳು ಅವಕಾಶ ನೀಡುವುದಿಲ್ಲವೆಂದಾದಲ್ಲಿ ನ್ಯಾಯಮಂಡಳಿಯು ಹೇಗೆ ಅದನ್ನು ಮಾಡಲು ಸಾಧ್ಯ? ಈ ವಿಷಯದಲ್ಲಿ ಮುಖ್ಯ ನ್ಯಾಯಾಧೀಶರು ಒಳಗೊಂಡಿದ್ದಾರೆಂಬ ಮಾತ್ರಕ್ಕೆ ಬೇರೆಯೇ ನಿಯಮಾವಳಿ ರೂಪಿಸಲು ಸಾಧ್ಯವೆ?

ನ್ಯಾ. ಲೋಕೂರ್: ವರದಿಯ ಪ್ರತಿಯನ್ನು ದೂರುದಾರರಿಗೆ ನೀಡಬಾರದೆಂದು ಯಾವ ನಿಯಮ ಹೇಳುತ್ತದೆ? ಅದಕ್ಕೆ ವ್ಯತಿರಿಕ್ತವಾಗಿ, ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ವರದಿಯ ಪ್ರತಿಯನ್ನು ನೀಡಬೇಕೆಂದು ನಾನೇ ನೇತೃತ್ವ ವಹಿಸಿದ್ದ ಪೀಠವೊಂದು ನಿರ್ದೇಶನ ನೀಡಿತ್ತು. ನನಗೆ ನೆನಪಿನಲ್ಲಿ ಇರುವಂತೆ, ನ್ಯಾಯಾಲಯದಲ್ಲಿ ವರದಿಯ ಪ್ರತಿಯೊಂದು ಅಲ್ಲೇ ಇದ್ದುದರಿಂದ ಅಲ್ಲಿಯೇ, ಆಗಲೇ ದೂರುದಾರರಿಗೆ ಅದನ್ನು ನೀಡಲಾಗಿತ್ತು.

ಪ್ರಶ್ನೆ: ಹಸಿರು ನ್ಯಾಯಪೀಠದ ಭಾಗವಾಗಿ, ನೀವು ದಿಲ್ಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಯಂತ್ರಿಸಲು ಲೆಕ್ಕವಿಲ್ಲದಷ್ಟು ಆದೇಶಗಳನ್ನು ನೀಡಿದ್ದಿರಿ. ನ್ಯಾಯಾಂಗವು ಮಿತಿ ಮೀರಿತೆ? ತನ್ನ ಕೆಲಸವನ್ನು ಮಾಡುವಂತೆ ನ್ಯಾಯಾಂಗವು ಕಾರ್ಯಾಂಗಕ್ಕೆ ಚುಚ್ಚುತ್ತಲೇ ಇರಬೇಕೆ? ಯಾರು ಇಲ್ಲಿ ಹಿಂದೆ ಉಳಿದಿದ್ದಾರೆ ಮತ್ತು ಎಲ್ಲಿ?

ನ್ಯಾ. ಲೋಕೂರ್: ನಾನು ಯಾವತ್ತೂ ಒಂದು ಪ್ರಶ್ನೆ ಕೇಳಿದ್ದೇನೆ: ಸಂಸತ್ತು ಅಂಗೀಕರಿಸಿದ ಕಾನೂನು ವಿಧಿಸಿರುವ ಕರ್ತವ್ಯಗಳನ್ನು ಕಾರ್ಯಾಂಗ ಪರಿಪಾಲಿಸದಿದ್ದರೆ, ಒಬ್ಬ ನಾಗರಿಕ ಏನು ಮಾಡಬೇಕು? ಒಂದೋ ನಾಗರಿಕ ಬೀದಿಗಿಳಿಯಬೇಕು ಇಲ್ಲವೇ ನ್ಯಾಯಾಲಯಕ್ಕೆ ಹೋಗಬೇಕು. ಒಬ್ಬ ನಾಗರಿಕ ನ್ಯಾಯಾಲಯಕ್ಕೆ ಬಂದರೆ, ಅದು ತನ್ನ ಕಾನೂನು ಬಾಧ್ಯತೆಗಳನ್ನು ಅನುಸರಿಸುವಂತೆ ಕಾರ್ಯಾಂಗಕ್ಕೆ ಹೇಳಲು ಬದ್ಧವಾಗಿರುತ್ತದೆ. ಇದು ಕಾನೂನು ನಿಯಮದ ಜೀವಾಳ. ಇದನ್ನು ಮಿತಿಮೀರುವುದು ಎಂದು ಕರೆಯುವುದಾದರೆ, ಅದು ಶಾಸನಾತ್ಮಕ ಮತ್ತು ಸಾಂವಿಧಾನಿಕ ಬಾಧ್ಯತೆಗಳ ಕುರಿತ ತಿರುಚಿದ ತಿಳುವಳಿಕೆಯಾಗುತ್ತದೆ.

ಪ್ರಶ್ನೆ: ಸರಕಾರವು ಅನಧಿಕೃತ ಬಡಾವಣೆಗಳ ಸಕ್ರಮಕ್ಕೆ ಅಂಗೀಕಾರ ನೀಡುತ್ತಿದೆ. ಇದರಿಂದ ನಗರಗಳನ್ನು ಸ್ವಚ್ಛಗೊಳಿಸುವ ನ್ಯಾಯಾಲಯಗಳ ಯತ್ನ ವಿಫಲವಾಗುತ್ತಿದೆಯೆ? ಅನಧಿಕೃತ ಕಟ್ಟಡಗಳು ಮತ್ತು ವಸತಿ ಪ್ರದೇಶಗಳ ಕಾನೂನುಬಾಹಿರ ಬಳಕೆಗೆ ಕಡಿವಾಣ ಹಾಕುವ ಮೇಲುಸ್ತುವಾರಿ ಸಮಿತಿಗಳನ್ನು ಪುನರುಜ್ಜೀವನಗೊಳಿಸಿದ್ದು ನಿಮ್ಮದೇ ಪೀಠವಾಗಿತ್ತು.

ನ್ಯಾ. ಲೋಕೂರ್: ಅನಧಿಕೃತ ಬಡಾವಣೆಗಳನ್ನು ಸಕ್ರಮಗೊಳಿಸುವುದರಿಂದ ನಗರಗಳ ಕೊಳಚೆ ಸ್ವಚ್ಛವಾಗುವುದಿಲ್ಲ ಎಂದು ಖಂಡಿತಾ ನೆನಪಿರಲಿ.

ಪ್ರಶ್ನೆ: ಪೌರತ್ವ ತಿದ್ದುಪಡಿ ಕಾಯಿದೆಯು ಟೀಕಾಕಾರರು ಹೇಳುವಂತೆ ‘ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುವ ಕಾನೂನು’ ಎಂಬ ಕಾರಣದಿಂದ ವ್ಯಾಪಕ ಟೀಕೆಗೆ ಒಳಗಾಗಿದೆ. ಸರಕಾರವು ಅದನ್ನು ಸಂವಿಧಾನದ ವಿಧಿ 14ನ್ನು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿರುವಂತೆ- ಸಮಂಜಸ ವರ್ಗೀಕರಣದ ಹೆಸರಿನಲ್ಲಿ ಸಮರ್ಥಿಸುತ್ತಿದೆ. ನೀವು ಈ ಕಾಯಿದೆಯನ್ನು ಹೇಗೆ ವಿಶ್ಲೇಷಿಸುತ್ತೀರಿ? ಅದು ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಭಾರತವು ಹೇಳುತ್ತಿರುವ ದೇಶಗಳ ಆಂತರಿಕ ಆಡಳಿತದ ಬಗ್ಗೆ ಪರೋಕ್ಷ  ಟೀಕೆಯೂ ಆಗುವುದಿಲ್ಲವೆ?

ನ್ಯಾ. ಲೋಕೂರ್: ಸುಪ್ರೀಂ ಕೋರ್ಟ್ 1957ರಷ್ಟು ಹಿಂದೆಯೇ ಅನ್ವರ್ ಆಲಿ ಸರ್ಕಾರ್ ವಿರುದ್ಧ ಪಶ್ಚಿಮ ಬಂಗಾಳ ಸರಕಾರ ಪ್ರಕರಣದಲ್ಲಿ ವಿಷದೀಕರಿಸಿದ ರೀತಿಯಲ್ಲಿ ವಿಧಿ 14ನ್ನು ಒಪ್ಪುವುದಾದಲ್ಲಿ, ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಸೇರಿಸಲಾಗಿರುವ ‘ಕಾನೂನುಬಾಹಿರ ವಲಸಿಗ’ (illegal immigrant) ಎಂಬುದರ ವ್ಯಾಖ್ಯೆಗೆ ವಿಧಿಸಲಾಗಿರುವ ನಿಯಮಾವಳಿಯು ಸ್ಪಷ್ಟವಾಗಿ ಸಂವಿಧಾನಬಾಹಿರ.  ಸಂವಿಧಾನದ ವಿಧಿ 14 ಎಂಬುದು ಕೇವಲ ಸಮಂಜಸ- reasonable- (ವಾಸ್ತವಿಕವಾಗಿ ವಿಚಾರಬದ್ಧ – rational) ವರ್ಗೀಕರಣಕ್ಕೆ ಮಾತ್ರ ಸೀಮಿತವಲ್ಲ. ಯಾವುದು ಮುಖ್ಯವೆಂದರೆ, ವಿಚಾರಬದ್ಧ ವರ್ಗೀಕರಣವು ಕಾನೂನು ಸಾಧಿಸಲು ಬಯಸುವ ಉದ್ದೇಶದೊಂದಿಗೆ ಸಮಂಜಸವಾದ ಸಂಬಂಧವನ್ನು ಹೊಂದಿರಬೇಕು.

ಸುಪ್ರೀಂ ಕೋರ್ಟ್ ನ್ಯಾಯಧೀಶ ನ್ಯಾ. ಎಸ್. ಕೆ. ದಾಸ್ ಅವರು ಸ್ಪಷ್ಟವಾಗಿ ತೀರ್ಪುನೀಡಿದ್ದರು: “ವರ್ಗೀಕರಣವು ಅನಿಯಂತ್ರಿತ (ನಿರಂಕುಶ)ವಾಗಿರಬಾರದು ಬದಲಾಗಿ ಅದು ವಿಚಾರಬದ್ಧವಾಗಿರಬೇಕು; ಅದರ ಅರ್ಥ- ಒಂದು ಗುಂಪಿನಲ್ಲಿ ಸೇರಿಸಲಾದ ಎಲ್ಲಾ ವ್ಯಕ್ತಿಗಳಲ್ಲಿ ಕಂಡುಬರಬಹುದಾದ ಮತ್ತು  ಅದರಿಂದ ಹೊರಗಿಟ್ಟ ಇತರರಲ್ಲಿ ಕಂಡುಬರಲಾರದ ಕೆಲವು ಗುಣಗಳು ಅಥವಾ ಸ್ವಭಾವಗಳ ಮೇಲೆ ಅದು ಆಧರಿತವಾಗಿರಬೇಕು ಮಾತ್ರವಲ್ಲ, ಆ ಗುಣಗಳು ಮತ್ತು ಸ್ವಭಾವಗಳು ಕಾನೂನಿನ ಉದ್ದೇಶದೊಂದಿಗೆ ಸಮಂಜಸವಾದ ಸಂಬಂಧ ಹೊಂದಿರಬೇಕು.

ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಎರಡು ಶರತ್ತುಗಳನ್ನು ಪೂರೈಸಬೇಕು- ಅವೆಂದರೆ, ಒಂದು ಗುಂಪಿನ ಜೊತೆ ಸೇರಿಸಲಾದವರ ಮತ್ತು ಹೊರಗಿಡಲಾದವರ ನಡುವಿನ ವ್ಯತ್ಯಾಸವನ್ನು ತೋರಿಸುವ ಗ್ರಾಹ್ಯ ಮಾನದಂಡದ ಮೇಲೆ ವರ್ಗೀಕರಣವು ಆಧರಿತವಾಗಿರಬೇಕು. (ಎರಡನೆಯದಾಗಿ) ವ್ಯತ್ಯಾಸದ ಮಾನದಂಡವು ಕಾನೂನು ಸಾಧಿಸಲು ಉದ್ದೇಶಿಸಿರುವ ಗುರಿಯೊಂದಿಗೆ ವಿಚಾರಬದ್ಧ ಸಂಬಂಧವನ್ನು ಹೊಂದಿರಬೇಕು. ವರ್ಗೀಕರಣಕ್ಕೆ ಆಧಾರವಾಗಿರುವ ವ್ಯತ್ಯಾಸದ ಮಾನದಂಡ ಮತ್ತು ಕಾಯಿದೆಯ ಉದ್ದೇಶ ಎರಡು ಪ್ರತ್ಯೇಕ ವಿಷಯಗಳಾಗಿದ್ದು, ಇಲ್ಲಿ ಅಗತ್ಯವಿರುವುದು ಏನೆಂದರೆ, ಅವುಗಳ ನಡುವೆ ಸಮಂಜಸ ಸಂಬಂಧ ಇರಬೇಕು.”

(ಚುಟುಕಾಗಿ ಹೇಳಬೇಕೆಂದರೆ, ಒಂದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನರ ಗುಂಪಿನಲ್ಲಿ ಕೆಲವರನ್ನು ಮಾತ್ರ ಅನಿಯಂತ್ರಿತ ಅಥವಾ ನಿರಂಕುಶವಾಗಿ ಪ್ರತ್ಯೇಕಿಸಿ ಅನುಕೂಲತೆಗಳನ್ನಾಗಲೀ, ಅನಾನುಕೂಲತೆಗಳನ್ನಾಗಲೀ ವಿಧಿಸುವಂತಹ  ವರ್ಗಾಧರಿತ ಶಾಸನವನ್ನು ವಿಧಿ 14 ನಿಷೇಧಿಸುತ್ತದೆ. ಅದು ಕಾನೂನಿನ ಸಲುವಾಗಿ ವರ್ಗೀಕರಣವನ್ನು ನಿಷೇಧಿಸುವುದಿಲ್ಲವಾದರೂ, ವರ್ಗೀಕರಣವು ಮೇಲೆ ಹೇಳಿದ ರೀತಿಯಲ್ಲಿ ನಿರಂಕುಶ ಅಥವಾ ಅನಿಯಂತ್ರಿತವಾಗಿರಬಾರದೆಂಬು ನ್ಯಾ. ಎಸ್.ಕೆ. ದಾಸ್ ಅವರ ತೀರ್ಪಿನ ಅರ್ಥ- ಅನುವಾದಕ)

ಈ ದೃಷ್ಟಿಕೋನವನ್ನು ಸುಪ್ರೀಂ ಕೋರ್ಟ್ ನೂರಾರು ಬಾರಿ ಮತ್ತು ಎಲ್ಲಾ ಹೈಕೋರ್ಟುಗಳು ಸಾವಿರಾರು ಬಾರಿ ಅನುಸರಿಸಿವೆ. ಈ ನ್ಯಾಯಶಾಸ್ತ್ರೀಯ ಪರೀಕ್ಷೆಯನ್ನು ಅನ್ವಯಿಸಿದರೆ, ಪೌರತ್ವ ತಿದ್ದುಪಡಿ ಕಾಯಿದೆಯ ನಿಯಮಾವಳಿ ಸಂವಿಧಾನಬಾಹಿರವಾಗಿದೆ.

ಕಾಯಿದೆಯ ಜೊತೆಗಿರುವ ಉದ್ದೇಶ ಮತ್ತು ಕಾರಣಗಳ ಹೇಳಿಕೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತದೆ. ಇದು ರಾಜತಾಂತ್ರಿಕವಾಗಿ ಅವಿವೇಕ ಎಂದು ಎಂದು ನನ್ನ ಅಭಿಪ್ರಾಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತ 6ನೇ ಅತ್ಯಂತ ಕಲುಷಿತ ರಾಷ್ಟ್ರ; ಉತ್ತರ ಪ್ರದೇಶದ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರ: ವರದಿ

ಪ್ರಮುಖ ವಾಯು ಮಾಲಿನ್ಯಕಾರಕ ಸೂಕ್ಷ್ಮ ಕಣಗಳ ಮಟ್ಟದಲ್ಲಿ ಭಾರತ ಆರನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದ್ದರೆ, ಉತ್ತರ ಪ್ರದೇಶದ ಲೋನಿ ಜಗತ್ತಿನಾದ್ಯಂತ ಅತ್ಯಂತ ಕಲುಷಿತ ನಗರವಾಗಿದೆ. ದೆಹಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ವಿಶ್ವ ವಾಯು...

ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿ ಹರೀಶ್ ರಾಣಾ ದೆಹಲಿ ಏಮ್ಸ್‌ನಲ್ಲಿ ನಿಧನ

ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸಿ, ಅಂತಿಮವಾಗಿ 2026ರ ಮಾರ್ಚ್ 11ರಂದು ನಿಷ್ಕ್ರಿಯ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದ 32 ವರ್ಷದ ಯುವಕ ಹರೀಶ್ ರಾಣಾ, ಮಂಗಳವಾರ (ಮಾ.24)...

ಪಶ್ಚಿಮ ಏಷ್ಯಾ ಸಂಘರ್ಷ: ಪಾಕಿಸ್ತಾನ ಮಧ್ಯವರ್ತಿಯಾದರೆ ಅದು ಭಾರತದ ರಾಜತಾಂತ್ರಿಕ ಹಿನ್ನೆಡೆಯಾಗಬಹುದು; ಕಾಂಗ್ರೆಸ್ 

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂವಹನದಲ್ಲಿ ಪಾಕಿಸ್ತಾನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಗಳು ದೃಢಪಟ್ಟರೆ ಭಾರತಕ್ಕೆ ರಾಜತಾಂತ್ರಿಕ ಹಿನ್ನಡೆಯಾಗಬಹುದು ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ,...

ಭಯೋತ್ಪಾದಕ ಚಟುವಟಿಕೆಗಳ ಆರೋಪ; ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಜೀವಾವಧಿ ಶಿಕ್ಷೆ

ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಆರೋಪದ ಮೇಲೆ ದೆಹಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಆಕೆಯ ಸಹಚರರಾದ ಸೋಫಿ...

ಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿ ಕೇರಳ ರಾಜ್ಯ ಘಟಕದ ಸೀಲ್ ಇದ್ದ ಬಗ್ಗೆ ಸೋಮವಾರದಿಂದ (ಮಾ.23) ಭಾರೀ ಚರ್ಚೆಯಾಗುತ್ತಿದೆ. ಸಿಪಿಐ(ಎಂ), ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಚುನಾವಣಾ...

ಪಂಜಾಬ್: ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳಕ್ಕೆ ಅಧಿಕಾರಿ ಆತ್ಮಹತ್ಯೆ; ಅಮೃತಸರದಲ್ಲಿ ಶವಪರೀಕ್ಷೆಗೆ ಕುಟುಂಬ ಒಪ್ಪಿಗೆ

ಪಂಜಾಬ್‌ನ ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಗೋದಾಮು ನಿಗಮದ ಅಧಿಕಾರಿ ಗಗನ್‌ದೀಪ್ ಸಿಂಗ್ ರಾಂಧವ ಅವರ ಮರಣೋತ್ತರ ಪರೀಕ್ಷೆಯನ್ನು ಮಂಗಳವಾರ ಅಮೃತಸರದಲ್ಲಿ ನಡೆಸಲಾಗುವುದು...

ಮುಸ್ಲಿಂ ಮಹಿಳೆಯರು ‘ನಮಾಜ್’ ಮಾಡುತ್ತಿದ್ದ ಕೊಠಡಿಯಲ್ಲಿ ಮಂತ್ರ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ

ತೆಲಂಗಾಣದ ಭಾರತೀಯ ಜನತಾ ಪಕ್ಷದ (ಬಿಜೆಪಿ)ದ ವಿವಾದಾತ್ಮಕ ನಾಯಕಿ ಮಾಧವಿ ಲತಾ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಾರೆ. ನಮಾಜ್‌ ಮಾಡುತ್ತಿದ್ದವರ ಹಿಂದೆ ಮಂತ್ರ ಪಠಿಸುತ್ತಿರುವ ಅವರ ವೀಡಿಯೊವೊಂದು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...

ತೂತುಕುಡಿ ಸಾತನ್‌ಕುಳಂ ತಂದೆ ಮಗನ ಕಸ್ಟಡಿ ಸಾವು ಪ್ರಕರಣ : ಒಂಬತ್ತು ಪೊಲೀಸರು ದೋಷಿಗಳು ಎಂದ ಕೋರ್ಟ್

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

4 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ; ಗುರುಗ್ರಾಮ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಹರಿಯಾಣದ ಗುರುಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ನಿರ್ವಹಿಸಿದ ಬಗ್ಗೆ ಹರಿಯಾಣ ಪೊಲೀಸರು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮಗುವಿನೊಂದಿಗೆ...

ದಾವಣಗೆರೆ: ನಿಮ್ಮ ದೇಶಭಕ್ತಿ ಪ್ರಶ್ನಿಸುವ ಅಯೋಗ್ಯರಿಗೆ ಮತ ಹಾಕಬೇಡಿ; ಮುಸ್ಲಿಮರಿಗೆ ಪ್ರದೀಪ್ ಈಶ್ವರ್ ಮನವಿ

ದಾವಣಗೆರೆ: ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿದ, ಅವರ ಕುಟುಂಬಗಳ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು ಬಿಜೆಪಿ. ಇವತ್ತು ಯಾವುದೋ ಅಸಮಾಧಾನಕ್ಕೆ ಬಿಜೆಪಿಗೆ ಮತ ಹಾಕದರೆ ನಿಮ್ಮ ಅಸ್ತಿತ್ವಕ್ಕೆ ಕುತ್ತು ಬರುತ್ತದೆ. ಇಂತಹ ಅಯೋಗ್ಯರಿಗೆ ಮತ...