Homeಕರ್ನಾಟಕಮುನಿಯಪ್ಪ ಗೆದ್ದರೆ ಅದ್ಭುತವೇ ಸರಿ, ಆದರೆ ಅದ್ಭುತಕ್ಕೂ ಅವಕಾಶವುಂಟೂ!

ಮುನಿಯಪ್ಪ ಗೆದ್ದರೆ ಅದ್ಭುತವೇ ಸರಿ, ಆದರೆ ಅದ್ಭುತಕ್ಕೂ ಅವಕಾಶವುಂಟೂ!

ಇದನ್ನು ಓದಿರಿ

- Advertisement -
- Advertisement -

| ಸೂರ್ಯ ಚಿಂತಾಮಣಿ |

ಕೆ.ಎಚ್.ಮುನಿಯಪ್ಪ ಈ ಬಾರಿ ಮತ್ತೆ ಕೋಲಾರವನ್ನು ಗೆದ್ದರೆ ಜಿಲ್ಲೆಯ ಮಟ್ಟಿಗೆ ಅವರನ್ನು ಇಂದಿನ ರಾಜಕೀಯದ ಚಾಣಕ್ಯ ಎಂದು ಕರೆಸಿಕೊಂಡಿರುವ ಅಮಿತ್ ಶಾ ಅವರಿಗೆ ಹೋಲಿಸಬೇಕಾದೀತು, ಕೃಷ್ಣ ಪರಮಾತ್ಮರು ಸೋಲೊಪ್ಪಬೇಕು! ನೆನಪಿಡಿ ಮುನಿಯಪ್ಪ ನರೇಂದ್ರ ಮೋದಿ ಅಲ್ಲ ಅಂದರೆ ಜನಪ್ರಿಯ ನಾಯಕರಲ್ಲ, ಅವರೊಬ್ಬ ಒಳ್ಳೆಯ ತಂತ್ರಗಾರ ಅಷ್ಟೆ.

ಇವತ್ತು ಮುನಿಯಪ್ಪ ಕಾಂಗ್ರೆಸ್ಸಿನ ಮತ್ತು ರಾಜ್ಯದ ಎಡಗೈ ದಲಿತ ಸಮುದಾಯದ ಹಿರಿಯ ನಾಯಕರು. ಆದರೆ ಅವರೆಂದೂ ರಾಜ್ಯ ರಾಜಕೀಯಕ್ಕೆ ಬರಲೇ ಇಲ್ಲ, ಅವರ ರಾಜಕೀಯ ಜೀವನದ ಮೊದಲಿಂದಲೂ ಅವರು ಸಂಸದರು. ಅವರು ಕೆಲವು ಬಾರಿ ಕೆಪಿಸಿಸಿ ಅಧ್ಯಕ್ಷರಾಗಲು ಆಸೆ ಪಟ್ಟಿದ್ದು ನಿಜವಾದರೂ ಅದು ಈಡೇರಲಿಲ್ಲ. ಅದು ದಲಿತ ನಾಯಕನಿಗೆ ದೊರೆಯದ ಅವಕಾಶವೋ ಅಥವಾ ಅವರದೇ ಮಿತಿಯೋ? ಬಹುಶಃ ಎರಡೂ ಹೌದು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಒಂದು ಅವಧಿಗೆ ಅಧಿಕಾರ ಅನುಭವಿಸಿದರು. ಅದೇ ಅವರ ರಾಜಕೀಯದ ಅಧಿಕಾರಸ್ಥ ಪರ್ವ. 1991ರಿಂದ ಶುರುವಾಗಿ ಇವತ್ತಿನವರೆಗೆ ಒಟ್ಟು 28 ವರ್ಷಗಳ ಕಾಲ ಸತತ ಏಳು ಬಾರಿ ಅವರು ಕೋಲಾರ ಲೋಕಸಭೆಯನ್ನು ಗೆದ್ದಿದ್ದಾರೆ.

ಈ ಬಾರಿ ಅವರು ಎಂಟನೇ ಬಾರಿ ಮರು ಆಯ್ಕೆ ಬಯಸಿದ್ದಾರೆ. ಒಬ್ಬ ವ್ಯಕ್ತಿಯನ್ನು ಸರಿಸುಮಾರು ಮೂರು ದಶಕಗಳ ಕಾಲ ಸಂಸದನಾಗಿ ಚುನಾಯಿಸಿದರೆ ಸ್ವಾಭಾವಿಕವಾಗಿ ಆ ಕ್ಷೇತ್ರದಲ್ಲಿ ಅವರ ವಿರುದ್ಧ ಒಂದು ಆಡಳಿತ ವಿರೋಧಿ ಅಲೆ ಇದ್ದೇ ಇರುತ್ತದೆ. ಕೋಲಾರದ ದೊಡ್ಡ ಯುವ ಸಮುದಾಯ ಹುಟ್ಟುವುದಕ್ಕೂ ಮೊದಲೇ ಮುನಿಯಪ್ಪ ಅಲ್ಲಿನ ಸಂಸದರು! ಮುನಿಯಪ್ಪರಿಗೆ ವಿರೋಧಿ ಅಲೆ ಶುರುವಾಗಿಯೇ ಎರಡು ಚುನಾವಣೆಗಳು ಕಳೆದಿವೆ. ಇದು ವಿರೋಧಿ ಅಲೆಯ ನಡುವೆ ಅವರು ಎದುರಿಸುತ್ತಿರುವ ಮೂರನೇ ಚುನಾವಣೆ. ಈ ಬಾರಿಯೂ ಅವರು ಗೆಲ್ಲುವರೆ? ಪಾರಂಪರಿಕವಾಗಿ ಕೋಲಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎದುರಾಳಿಗಳು, ಇಲ್ಲಿ ಬಿಜೆಪಿಗೆ ಗಟ್ಟಿಯಾದ ನೆಲೆಯಿಲ್ಲ. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿದೆ. 2014ರ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಕೂಡಿ ಒಟ್ಟು ಶೇ70ರಷ್ಟು ಮತಗಳನ್ನು ಪಡೆದಿದ್ದವು. ಹಾಗಾಗಿ ಗಣಿತದ ಆಧಾರದ ಮೇಲೆ ನೋಡಿದರೆ ಮುನಿಯಪ್ಪ ಸೋಲುವಂತೆಯೇ ಇಲ್ಲ. ಆದರೆ ರಾಜಕೀಯ ಗಣಿತದ ಸರಳ ಲಾಜಿಕ್ ಎಂದಿಗೂ ಅಲ್ಲ.

ಮುನಿಯಪ್ಪ ಸೋಲಬಹುದೇ? ಖಂಡಿತವಾಗಿಯೂ ಆ ಸಾಧ್ಯತೆಯಿದೆ. ಹೇಗೆ? ಅದಕ್ಕೆ ಮುನಿಯಪ್ಪರ ರಾಜಕೀಯದ ಮತ್ತೊಂದು ಆಯಾಮ ಕಾರಣ. ಅದು ಕಾಂಗ್ರೆಸ್ಸಿನ ಒಳರಾಜಕೀಯದ ಏಟುಗಳ ಕಥೆ. ಇವತ್ತು ಮುನಿಯಪ್ಪ ಸೋತರೆ ಅದಕ್ಕೆ ಕಾಂಗ್ರೆಸ್ಸೇ ಕಾರಣ, ಬಿಜೆಪಿಯಂತೂ ಅಲ್ಲ. ಬಿಜೆಪಿ ಅಯಾಚಿತವಾದ ಲಾಭ ಪಡೆಯುವ ನಿರೀಕ್ಷೆಯಲ್ಲಿದೆಯಷ್ಟೆ. ಕಳೆದೆರಡು ಬಾರಿಯಂತೆ ಈ ಬಾರಿಯೂ ಶಾಸಕರ ನಿಯೋಗವು ಮುನಿಯಪ್ಪರಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದೆಂದು ತೀವ್ರವಾದ ಲಾಬಿ ನಡೆಸಿತು. ತೆರೆಮರೆಯಲ್ಲಿ ಅದರ ನೇತೃತ್ವ ವಹಿಸಿದ್ದವರು ಸ್ಪೀಕರ್ ರಮೇಶ ಕುಮಾರ್. ಆದರೆ ಎಡಗೈ ದಲಿತ ಸಮುದಾಯದ ಹಿರಿಯ ನಾಯಕನೊಬ್ಬನಿಗೆ ಅಷ್ಟು ಸುಲಭವಾಗಿ ಟಿಕೆಟ್ ನಿರಾಕರಿಸಲಾದೀತೆ, ಅದೂ ಕಾಂಗ್ರೆಸ್ ಇಡೀ ರಾಜ್ಯದಲ್ಲಿ ಈ ಸಮುದಾಯದಿಂದ ಇವರೊಬ್ಬರಿಗೇ ಟಿಕೆಟ್ ನೀಡುತ್ತಿರುವಾಗ? ಅದಕ್ಕೂ ಮಿಗಿಲು ಕೋಲಾರದಲ್ಲಿ ಮುನಿಯಪ್ಪರಿಗೆ ಒಬ್ಬ ಬದಲಿ ಅಭ್ಯರ್ಥಿಯೇ ಇಲ್ಲ. ಹಾಗಾಗಿ ಸ್ವಾಭಾವಿಕವಾಗಿಯೇ ಮುನಿಯಪ್ಪರಿಗೆ ಟಿಕೆಟ್ ದಕ್ಕಿತು. ತಮ್ಮ ವಿರೋಧದ ನಡುವೆಯೂ ಕಾಂಗ್ರೆಸ್ ಮುನಿಯಪ್ಪರನ್ನೇ ತನ್ನ ಹುರಿಯಾಳಾಗಿಸಿದ ಕೂಡಲೇ ಈ ಅಸಮಾಧಾನಿತ ನಾಯಕರು ಬಿಜೆಪಿಯ ಜೊತೆ ಕೈಜೋಡಿಸಿದ್ದಾರೆ.

ಮುನಿಸ್ವಾಮಿ ಬಿಜೆಪಿ

ಇವತ್ತು ಕೋಲಾರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕಾಂಗ್ರೆಸ್, 2 ಜೆಡಿಎಸ್ ಮತ್ತು ಒಂದು ಸ್ವತಂತ್ರ ಶಾಸಕರಿದ್ದರೆ, ಅದರಲ್ಲಿ ಇಬ್ಬರು ಶಾಸಕರು – ಕಾಂಗ್ರೆಸಿನ ರೂಪಾ ಶಶಿಧರ್ (ಮುನಿಯಪ್ಪರ ಮಗಳು) ಮತ್ತು ಚಿಂತಾಮಣಿಯ ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿ ಮಾತ್ರ ನಿಜಕ್ಕೂ ಮುನಿಯಪ್ಪರ ಜೊತೆಗಿದ್ದಾರೆ. ಇನ್ನುಳಿದ ಅಷ್ಟೂ ಜನ ಮುನಿಯಪ್ಪರ ವಿರುದ್ಧ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿ ಬೆಂಗಳೂರಿನ ಕಾಡುಗೋಡಿಯ ತನ್ನ ಕಾರ್ಪೊರೇಟರ್ ಆದ ಎಸ್. ಮುನಿಸ್ವಾಮಿಯನ್ನು ತನ್ನ ಅಭ್ಯರ್ಥಿ ಆಗಿಸಿದೆ. ಪಕ್ಷದಲ್ಲಿ ಕೋಲಾರದ ಟಿಕೆಟ್‍ಗೆ ಆಕಾಂಕ್ಷಿಗಳಾಗಿದ್ದ ಡಿ.ಎಸ್.ವೀರಯ್ಯ, ಚಿ.ನಾ.ರಾಮು ಮತ್ತು ಕೋಲಾರ ಕೇಶವ ಎಲ್ಲರನ್ನೂ ಬದಿಗೊತ್ತಿ ಬಿಜೆಪಿ ಆಶ್ಚರ್ಯಕರ ರೀತಿಯಲ್ಲಿ ಮುನಿಸ್ವಾಮಿಗೆ ಟಿಕೆಟ್ ನೀಡಿತು. ಮುನಿಸ್ವಾಮಿ ಮೂಲತಃ ಕೋಲಾರದ ಟೇಕಲ್ ಊರಿನವರೇ, ಆದರೆ ಅವರ ಉದ್ಯಮ ವಹಿವಾಟು ಬೆಂಗಳೂರು. ಈ ಹಿಂದಿನ ಅಭ್ಯರ್ಥಿಗಳು ಮುನಿಯಪ್ಪರ ತಂತ್ರಗಾರಿಕೆಗೆ ಬಲಿಯಾಗಿ ಕಡೆಯ ವಾರಗಳಲ್ಲಿ ಗಾಯಬ್ ಆಗುತ್ತಿದ್ದರು ಎಂಬುದೂ ಬಿಜೆಪಿಯ ಭಯಕ್ಕೆ ಕಾರಣ. ಮುನಿಸ್ವಾಮಿ ಸ್ವತಃ ಶಕ್ತಿವಂತನಾಗಿದ್ದು, ಮುನಿಯಪ್ಪರ ಆಮಿಷಗಳಿಗೆ ಬಲಿಯಾಗದೆ ಸೆಡ್ಡು ಹೊಡೆದು ನಿಂತು ದುಡ್ಡನ್ನು ನೀರಿನಂತೆ ಖರ್ಚು ಮಾಡುತ್ತಾನೆ ಎಂಬ ನಂಬಿಕೆ ಬಿಜೆಪಿಗೆ. ಬಿಜೆಪಿಯ ಹಿರಿಯ ನಾಯಕರು ಮುಕ್ತವಾಗಿ ಹೇಳುವುದು: ಬಿಜೆಪಿಯ ಅಭ್ಯರ್ಥಿಯನ್ನು ಸೂಚಿಸಿದ್ದೇ ಕಾಂಗ್ರೆಸ್ ನಾಯಕರು! ಸ್ಪೀಕರ್ ರಮೇಶ ಕುಮಾರ್ ಅವರು ಮುನಿಯಪ್ಪರ ವಿರುದ್ಧ ಬಂಡಾಯದ ನೇತೃತ್ವ ವಹಿಸಿದ್ದರಿಂದ ಅವರೇ ಮುನಿಸ್ವಾಮಿಯ ಹಿಂದೆಯೂ ಇದ್ದಾರೆಂದು ಗುಸುಗುಸು. ಸ್ಪೀಕರ್ ಆಗಿರುವುದರಿಂದ ಅವರು ಪ್ರಚಾರದ ಕಣಕ್ಕೆ ಬರಲಿಲ್ಲ. ಹಾಗಾಗಿ ಅವರನ್ನೇ ಕಣದ ಕೃಷ್ಣ ಪರಮಾತ್ಮ ಎಂದು ಬಣ್ಣಿಸಲಾಗುತ್ತಿದೆ.

ರೂಪ ಶಶಿಧರ್

ಜಿಲ್ಲೆಯಾದ್ಯಂತ ಮುನಿಯಪ್ಪರನ್ನು ಸೋಲಿಸುವ ಇರಾದೆ ಮತದಾರರಲ್ಲಿ ಎದ್ದು ಕಾಣುತ್ತಿತ್ತು. ಬಿಜೆಪಿಯ ಅಭ್ಯರ್ಥಿಯ ಪರಿಚಯವೇ ಬಹುತೇಕರಿಗೆ ಇರಲಿಲ್ಲ, ಬಿಜೆಪಿಯ ಬಗ್ಗೆಯೂ ಅಕ್ಕರೆಯೇನಿಲ್ಲ. ಆದರೆ ಮುನಿಯಪ್ಪರನ್ನು ಸೋಲಿಸಲು ಬಿಜೆಪಿಗೆ ಮತ ನೀಡುವುದು ಎಂಬ ಭಾವನೆ ಇದ್ದು, ಮೋದಿ ಅಲೆ ಖಂಡಿತ ಕ್ಷೇತ್ರದಲ್ಲಿತ್ತು. ಈ ವರದಿಗಾರನು ಮತದಾನಕ್ಕೂ ಎರಡು ದಿನ ಹಿಂದೆ ಕ್ಷೇತ್ರದಲ್ಲಿ ಸಂಚರಿಸುತ್ತಾ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಲ್ಲಿ 60ಕ್ಕೂ ಹೆಚ್ಚು ಸಾಮಾನ್ಯ ಜನರನ್ನು ಮಾತಾಡಿಸಿದಾಗ, ಶೇ80ಕ್ಕೂ ಅಧಿಕ ಮಂದಿ ಈ ಬಾರಿ ಮುನಿಯಪ್ಪರನ್ನು ಸೋಲಿಸಬೇಕು ಹಾಗಾಗಿ ಬಿಜೆಪಿಗೆ ಮತ ನೀಡುವುದಾಗಿ ಹೇಳಿದರು. ದಲಿತ ಮತ್ತು ಮುಸ್ಲಿಂ ಸಮುದಾಯಗಳಲ್ಲೂ ಸಹ ಮುನಿಯಪ್ಪರ ಬಗ್ಗೆ ಅಸಮಾಧಾನ ಇರುವುದು ದಿಟ. ಇನ್ನು ಒಕ್ಕಲಿಗರು ಸಾಧಾರಣ ಜೆಡಿಎಸ್‍ಗೆ ಮತ ನೀಡುತ್ತಿದ್ದರು. 2014ರಲ್ಲಿ ಜೆಡಿಎಸ್ 3.71 ಲಕ್ಷ ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಗಳಿಸಿತ್ತು. ಆದರೆ ಇವತ್ತು ಜೆಡಿಎಸ್ ಕಣದಲ್ಲಿ ಇಲ್ಲದಿರುವುದರಿಂದ, ಅವರು ಪಾರಂಪರಿಕವಾಗಿ ಮುನಿಯಪ್ಪರನ್ನು ವಿರೋಧಿಸುತ್ತಲೇ ಬಂದಿರುವುದರಿಂದ ಅವರು ಮುನಿಯಪ್ಪಗೆ ಮತ ನೀಡುವುದು ಅನುಮಾನ. ಈ ವರದಿಗಾರ ಭೇಟಿ ಮಾಡಿದ ಹಲವು ಒಕ್ಕಲಿಗ, ರೆಡ್ಡಿ ರೈತರು ಬಹಿರಂಗವಾಗಿಯೇ ತಾವು ಬಿಜೆಪಿಗೆ ಮತ ನೀಡುವುದಾಗಿ ಹೇಳಿದರು. ಇಲ್ಲಿ ದಲಿತ/ಒಕ್ಕಲಿಗ-ರೆಡ್ಡಿ ರಾಜಕಾರಣ.

ಇನ್ನು ಹೊಲವೊಂದರಲ್ಲಿ ಸೊಪ್ಪು ಕೀಳುತ್ತಿದ್ದ ಹೆಂಗಸರ ಗುಂಪೊಂದನ್ನು ಈ ವರದಿಗಾರನು ಮಾತಾಡಿಸಿದಾಗ ಆಸಕ್ತಿಕರ ಪ್ರಸಂಗವೊಂದು ನಡೆಯಿತು. ವಿಮಲ ಎಂಬ ನಲವತ್ತರ ಆಸುಪಾಸಿನ ಹೆಂಗಸು ಎಷ್ಟೇ ಪ್ರಯತ್ನಿಸಿದರೂ ತಾನು ಯಾರಿಗೆ ಮತ ನೀಡುವೆನು ಎಂದು ಹೇಳುತ್ತಲೇ ಇಲ್ಲ. ಯಾರು ತನಗೆ ಮನೆ ಕಟ್ಟಿಸಿಕೊಡುವರೋ ಅವರಿಗೇ ತನ್ನ ಮತ ಎಂದು ಹೇಳುತ್ತಿರುವಾಗಲೇ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದವನೊಬ್ಬ ಬಂದ. ಆತ ಬಿಜೆಪಿ ಎಲ್ಲರಿಗೂ ಉಚಿತ ಮನೆ, ಉಚಿತ ಗ್ಯಾಸ್ ಕೊಡುತ್ತಿದೆಯೆಂದೂ ಆಕೆ ಬಿಜೆಪಿಗೆ ಮತ ಹಾಕಬೇಕೆಂದೂ ಹೇಳಿದ. ಅದೆಲ್ಲಿತ್ತೋ ಕೋಪ. ಮುನಿಯಪ್ಪರ ಕಾಂಗ್ರೆಸ್ಸು ಮತ್ತು ಬಿಜೆಪಿಯನ್ನು ತರಾಮರಾ ಬೈದಾಡಿದಳು – ಎರಡೂ ಪಕ್ಷಗಳೂ ತನಗೆ ಏನೂ ಸಹಾಯ ಮಾಡಿಲ್ಲವೆಂದೂ ತಾನು ಎರಡೂ ಪಕ್ಷಗಳಿಗೂ ಮತ ನೀಡುವುದಿಲ್ಲವೆಂದೂ ಬೈದಳು.

ಕೃಷ್ಣರೆಡ್ಡಿ

ಬಿಜೆಪಿ ಕಾರ್ಯಕರ್ತನ ಮುಖ ಸಣ್ಣದಾಯಿತು. ಮಾಧ್ಯಮದವರ ಮುಂದೆ ಅವಮಾನವಾದಂತಾಗಿ ಹೊರಟುಬಿಟ್ಟ. ಕಾಂಗ್ರೆಸ್ಸು – ಬಿಜೆಪಿ ಇಬ್ಬರಿಗೂ ಮತ ನೀಡದಿದ್ದರೆ ಇನ್ಯಾರಿಗೆ ಮತ ನೀಡುತ್ತೀ ಎಂದು ಮತ್ತೆ ಹರಟೆಗಿಳಿದಾಗ ಆಕೆಯ ಉತ್ತರ: “ಅವನೊಬ್ಬ ಮಹಾನುಭಾವ ಇದ್ದಾನೆ ಸರ್ ಮೋದಿ, ಶ್ರೀಮಂತರ ಹತ್ತಿರ ನೋಟು ಕಿತ್ತುಕೊಂಡು ಬಡವರಿಗೆ ಕೊಡ್ತಾ ಇದ್ದಾನೆ, ಅವನಿಗೆ ಹಾಕ್ತೀನಿ.” ನಿನಗೆ ಕೊಟ್ನಾ ದುಡ್ಡು ಮೋದಿ? “ಅಲ್ಲೆಲ್ಲ ಕೊಟ್ಟಿದ್ದಾನಂತೆ ಅಣ್ಣ, ಮತ್ತೆ ಬಂದರೆ ನನಗೂ ಕೊಡ್ತಾನೆ.” ಆಕೆ ಮಾತಾಡುತ್ತಿದ್ದದ್ದು ನೋಟು ಅಮಾನ್ಯೀಕರಣದ ಬಗ್ಗೆ. ಅಲ್ಲಮ್ಮ ಈಗ ಬಿಜೆಪಿಗೆ ಹಾಕಲ್ಲ ಅಂತ ಬೈದು ಕಳಿಸಿದೆ, ಈಗ ಮೋದಿಗೆ ಹಾಕ್ತೀನಿ ಅಂತೀಯಲ್ಲ? “ಮೋದಿ ಬಿಜೆಪಿನಾ ಅಣ್ಣ?” ಬೇಸ್ತುಬೀಳುವ ಸರದಿ ನಮ್ಮದು. ಇದು ಮೋದಿ ಅಲೆ. ಕೋಲಾರದಲ್ಲಿ ಈ ಅಲೆ ಬಲವಾಗಿದೆ. ಈ ವರದಿಗಾರನು ಮಾತಾಡಿಸಿದ ಹಲವರು ಮೋದಿ ಜಪ ಮಾಡಿದವರೇ. ಅದೇ ಬಿಜೆಪಿಗೆ ಬಲ.

ಶುರುವಿನಲ್ಲೇ ಮುನಿಯಪ್ಪಗೆ ಈ ಬಾರಿ ತನ್ನ ಉಮೇದುವಾರಿಕೆಯನ್ನು ದಕ್ಕಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಎಂಬುದು ತಿಳಿದು ಒಂದು ಅಳುಕಿನಲ್ಲಿಯೇ ಚುನಾವಣೆ ಶುರು ಮಾಡಿದರು. ಶಾಸಕರು ತನ್ನ ಬೆಂಬಲಕ್ಕಿಲ್ಲ ಎಂಬುದು ಅವರಿಗೂ ಗೊತ್ತಿತ್ತು. ಧೃತಿಗೆಡಲಿಲ್ಲ. ಅವರ ವಿರುದ್ಧ ನಿಂತು ಸಾಕಷ್ಟು ಮತಗಳನ್ನು ಪಡೆದು ಸೋತ ಅಭ್ಯರ್ಥಿಗಳ ತಂಡ ಕಟ್ಟಿದರು – ಕೋಲಾರದಲ್ಲಿ ವರ್ತೂರು ಪ್ರಕಾಶ್, ಶ್ರೀನಿವಾಸಪುರದಲ್ಲಿ ವೆಂಕಟಶಿವಾರೆಡ್ಡಿ.. ಹೀಗೆ. ಇವರನ್ನು ಇಟ್ಟುಕೊಂಡು ಚುನಾವಣೆ ನಡೆಸಿದ್ದಾರೆ ಈ ಬಾರಿ. ಇನ್ನು ಎರಡು ದಿನ ಇದೆ ಮತದಾನಕ್ಕೆ ಎನ್ನುವಾಗ ಶಿಡ್ಲಘಟ್ಟದ ವಿ. ಮುನಿಯಪ್ಪರ ಜೊತೆ ರಾಜಿ ಮಾಡಿಕೊಂಡು ಅವರ ಜೊತೆ ಪ್ರಚಾರ ನಡೆಸುತ್ತಿದ್ದರು. ಅವರ ಜೊತೆ ಮಾತಿಗಿಳಿದಾಗ, ತಾನು ಗೆಲ್ಲುವನೆಂಬ ನಂಬಿಕೆ ಇದ್ದಂತಿತ್ತು. “ಏಳು ಸರತಿ, 28 ವರ್ಷ ಗೆದ್ದಿದ್ದೀನಿ. ಸ್ವಾಭಾವಿಕವಾಗೇ ವಿರೋಧೀ ಅಲೆ ಇರುತ್ತೆ. ಕಾಂಗ್ರೆಸ್ಸಿನ ಶಾಸಕರೇ ವಿರುದ್ಧ ಕೆಲಸ ಮಾಡ್ತಿರೋದೂ ನಿಜ. ಆದರೆ ಇದೇನು ಮೊದಲ ಬಾರಿ ಅಲ್ಲ, ಹಿಂದೆಯೂ ಮಾಡಿದ್ದರು. ಆದರೂ ಆಗಲೂ ನಾನು ಗೆದ್ದಿದ್ದೆ. ಈಗಲೂ ಗೆಲ್ತೀನಿ,” ಅಂದರು. ಪಕ್ಕದಲೇ ಕೂತಿದ್ದ ವಿ. ಮುನಿಯಪ್ಪರನ್ನು ತೋರಿಸಿ ನೋಡಿ ಇವರೂ ನನಗೆ ಟಿಕೆಟ್ ಕೊಡಕೂಡದು ಎಂದು ದೆಹಲಿಗೆ ಹೋಗಿದ್ದರು, ಹೈಕಮಾಂಡ್ ನನಗೆ ಟಿಕೆಟ್ ನೀಡಿದರು. ಈಗ ನೋಡಿ ಪಕ್ಷದ ಪರ ಪ್ರಚಾರ ಮಾಡ್ತಿಲ್ಲವಾ ಅಂದರು. ಮುನಿಯಪ್ಪರು ಇರಿಸುಮುರುಸಿನಲ್ಲೇ ಗೋಣಾಡಿಸಿದರಷ್ಟೆ.

ಮುನಿಯಪ್ಪ ಪ್ರತಿ ಬಾರಿಯೂ ಏಕೆ ಈ ಮಟ್ಟದ ವಿರೋಧವನ್ನು ಸ್ವಪಕ್ಷೀಯರಿಂದಲೇ ಎದುರಿಸುತ್ತಾರೆ? ಅವರ ಪಕ್ಷದ ನಾಯಕರನ್ನು ಕೇಳಿ ನೋಡಿ ಉತ್ತರ ಸರಳ – ಅವರು ಕುತಂತ್ರಿ, ಯಾರನ್ನೂ ಬೆಳೀಲಿಕ್ಕೆ ಬಿಡೋಲ್ಲ, ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿ ಎಲ್ಲವನ್ನೂ ತಮ್ಮ ಹಿಡಿತದಲ್ಲೇ ಇಟ್ಟುಕೊಳ್ತಾರೆ. ಅವರಿಂದ ನೋವನುಭವಿಸಿ ಪಕ್ಷ ಬಿಟ್ಟ, ಊರು ಬಿಟ್ಟ ನಾಯಕರ ಪಟ್ಟಿಯೇ ಇದೆ – ಚಿಂತಾಮಣಿಯ ಚೌಡರೆಡ್ಡಿಯವರ ಮಗ ಸುಧಾಕರ ರೆಡ್ಡಿ ಮತ್ತು ಕೃಷ್ಣಭೈರೇಗೌಡ ಈ ಪಟ್ಟಿಯ ಮೊದಲ ಹೆಸರುಗಳು. ಇಬ್ಬರೂ ನಿಜಕ್ಕೂ ಒಳ್ಳೆಯ ನಾಯಕರು, ವಿದ್ಯಾವಂತರು, ಜಿಲ್ಲೆಯಲ್ಲಿ ಹೊಸ ನಾಯಕತ್ವದ ಆಸೆ ಮೂಡಿಸಿದ್ದವರು. ಮುನಿಯಪ್ಪ ಇಬ್ಬರನ್ನೂ ತುಳಿದರು. ನಿಜ ರಮೇಶ ಕುಮಾರ್, ಮುನಿಯಪ್ಪರಿಂದ ಹಿಡಿದು ಅನೇಕರನ್ನು ತುಳಿಯಲು ಯತ್ನಿಸಿದ್ದಾರೆ. ಮುನಿಯಪ್ಪರೇಕೆ ಹೀಗೆ? ಅದಕ್ಕೆ ಉತ್ತರ ಕೋಲಾರದಲ್ಲೇ ಇದೆ. ಕೋಲಾರದಲ್ಲಿ ದಲಿತರ ಜನಸಂಖ್ಯೆ, ದಲಿತ ಚಳವಳಿ ಎರಡೂ ಶಕ್ತವೇ. ಆದರೆ ಅದಕ್ಕೂ ಮಿಗಿಲು ರೆಡ್ಡಿ-ಒಕ್ಕಲಿಗರ ಫ್ಯೂಡಲಿಸಂ. ಈ ಕೋಮಿನಲ್ಲಿ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಬಲ್ಲ ಪ್ರಬಲ ನಾಯಕ ಬೆಳೆದರೆ ಅದು ಮುನಿಯಪ್ಪರ ಅಸ್ತಿತ್ವದ ಪ್ರಶ್ನೆ. ಇದೇ ಇನ್‍ಸೆಕ್ಯೂರಿಟಿ ಮತ್ತು ಮಾಸ್ ಲೀಡರ್ ಅಲ್ಲದ ಅವರ ವ್ಯಕ್ತಿತ್ವ ಅವರ ರಾಜಕೀಯವನ್ನು ರೂಪಿಸಿದೆ. ಹೋಗಲಿ ಪ್ರಬಲ ಕೋಮುಗಳ ಫ್ಯೂಡಲಿಸಂ ಅನ್ನು ಎದುರು ಹಾಕಿಕೊಂಡು ಸ್ವಾಭಿಮಾನದ ಬಹುಜನ ರಾಜಕಾರಣ ಮಾಡುತ್ತಿದ್ದಾರೆಯೇ ಎಂದರೆ ಅದೂ ಇಲ್ಲ ಎಂದೇ ಹೇಳಬೇಕು. ಅವರು ಎಂದಿಗೂ ವರ್ಚಸ್ವೀ ಮಾಸ್ ಲೀಡರ್ ಅಲ್ಲ, ಹಾಗಾಗಿ ಅವರಿಗೆ ಅಹಿಂದವೇ ಸಾಕು ಎಂಬ ಧಾಷ್ಟ್ರ್ಯವೂ ಇಲ್ಲ. ಅವರದು ಒಕ್ಲಿಗ-ರೆಡ್ಡಿಯರನ್ನು ನೇರವಾಗಿ ಎದುರುಹಾಕಿಕೊಳ್ಳದ ರಾಜಿ ರಾಜಕಾರಣವೇ. ಮೇಲಾಗಿ ಅವರು ಜಿಲ್ಲೆಯಲ್ಲಿ ಶಕ್ತವಾಗಿರುವ ದಲಿತ ಚಳವಳಿಯ ಭಾಗವೂ ಏನಲ್ಲ. ಹಾಗೆಯೇ ದಲಿತರಲ್ಲೂ ತನಗೆ ಬದಲಿ ನಾಯಕ ಬೆಳೆಯದಂತೆ ನೋಡಿಕೊಂಡಿದ್ದಾರೆ.

ವಿ. ಮುನಿಯಪ್ಪ

ಇನ್ನು ಈ ಚುನಾವಣೆಯಲ್ಲಿ ಅವರ ಸೋಲು ಖಚಿತ ಎಂದೇ ಈ ವರದಿಗಾರನು ಭಾವಿಸಿ ತಿರುಗಿ ಬಂದದ್ದು, ಚುನಾವಣೆಗೂ ಎರಡು ದಿನ ಮೊದಲು. ಆದರೆ ಮತದಾನದ ದಿನದ ಚಿತ್ರಣ ಕೊಂಚ ಬದಲಿತ್ತು. ಯಥೇಚ್ಛವಾಗಿ ಹಣ ಖರ್ಚು ಮಾಡುವ ಆಶ್ವಾಸನೆಯ ಮೇಲೆ ಬಿಜೆಪಿ ಟಿಕೆಟ್ ಪಡೆದ ಮುನಿಸ್ವಾಮಿ ಕಡೆಯ ಎರಡು ದಿನಗಳು ಸರಿಯಾಗಿ ದುಡ್ಡು ಬಿಚ್ಚಿಲ್ಲ. ಹಲವು ನಾಯಕರಿಗೇ ದುಡ್ಡು ತಲುಪಿಲ್ಲವೆಂಬ ಅಸಮಾಧಾನ ಹೊಗೆಯಾಡುತ್ತಿತ್ತು ಮತದಾನದ ದಿನ. ಬಿಜೆಪಿ ಹಿರಿಯ ನಾಯಕರೊಬ್ಬರು ಇಲ್ಲ ಮುನಿಸ್ವಾಮಿಯ ಬಳಿ ಆತ ಹೇಳಿಕೊಂಡಷ್ಟು ದುಡ್ಡು ಇಲ್ಲ, ಇಲ್ಲ ಈತನೂ… ಎಂದು ರಾಗ ಎಳೆಯುತ್ತಿದ್ದಾರೆ. ಇನ್ನು ಇತ್ತ ಮುನಿಯಪ್ಪ ಹಿಂದೆಂದಿಗಿಂತಲೂ ಹೆಚ್ಚು ದುಡ್ಡು ಖರ್ಚು ಮಾಡಿದ್ದಾರೆಂದು ಸುದ್ದಿಯಿದೆ. ಮತ್ತೆ ಮುನಿಯಪ್ಪರ ಕ್ಯಾಂಪಿನಲ್ಲಿ ಸಣ್ಣದೊಂದು ಆಸೆ ಚಿಗುರಿದೆ, ಗೆದ್ದೇ ತೀರುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಯಲ್ಲಿ 50-50 ಎನ್ನತೊಡಗಿದ್ದಾರೆ.

ಇದನ್ನು ಓದಿರಿ ಮೊಯ್ಲಿ-ಮುನಿಯಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...