Homeಕರ್ನಾಟಕತಿಮ್ಮಪ್ಪನವರಿಗೆ ಅರಸು ಪ್ರಶಸ್ತಿ

ತಿಮ್ಮಪ್ಪನವರಿಗೆ ಅರಸು ಪ್ರಶಸ್ತಿ

- Advertisement -
- Advertisement -

ಕಾಗೋಡು ತಿಮ್ಮಪ್ಪನವರಿಗೆ ದೇವರಾಜ ಅರಸು ಪ್ರಶಸ್ತಿ ಲಭಿಸಿದೆ. ಈ ಹಿಂದೆ ಪ್ರಶಸ್ತಿ ಪಡೆದವರ ಪಟ್ಟಿ ನೋಡಿದರೆ, ತಿಮ್ಮಪ್ಪನವರಿಗೆ ತಡವಾಗಿ ಬಂದಿದೆ ಎನ್ನುವುದು ಸ್ಪಷ್ಟವಾಗುತ್ತದೆ. ದಳದ ಸರಕಾರ ಅಧಿಕಾರದಲ್ಲಿದ್ದಾಗ ಕಾಟಾಚಾರಕ್ಕೆಂಬಂತೆ ಯಾರಿಗೊ ಕೊಟ್ಟ ದಾಖಲೆಯಿದೆ. ಇನ್ನು ಬಿಜೆಪಿಯವರು ಅರಸು ಪ್ರಶಸ್ತಿಯನ್ನು ಕೊಡಲೂ ಇಲ್ಲ; ಅವರ ಜಯಂತಿಯನ್ನೂ ಮಾಡಲಿಲ್ಲ. ಇದು ಸಹಜ; ಏಕೆಂದರೆ ಬಿಜೆಪಿ ಪಕ್ಷದಂತಹ ಸಿದ್ಧಾಂತದ ವಿರುದ್ಧವೇ ಅರಸು ರಾಜಕಾರಣ ಮಾಡಿದ್ದು.

ಕಾಗೋಡು ತಿಮ್ಮಪ್ಪನವರದು ಹೋರಾಟದ ಬದುಕು. ಉತ್ತರ ಕನ್ನಡ, ಸಾಗರ, ಬೆಂಗಳೂರಲ್ಲಿ ಓದಿ ಬಿ.ಕಾಂ ಪದವಿ ಪಡೆದ ತಿಮ್ಮಪ್ಪನವರು ಎಲ್‌ಎಲ್‌ಬಿ ಮುಗಿಸಿ ವಕೀಲರಾಗುವ ಮೊದಲೇ ಅಂದರೆ ವಿದ್ಯಾರ್ಥಿ ಜೀವನದಲ್ಲೇ ಕಾಗೋಡು ಭೂಹೋರಾಟದಲ್ಲಿ ತೊಡಗಿಸಿಕೊಂಡವರು. ಅವರು ವಕೀಲರಾಗಿ ಕೆಲಸ ಮಾಡಿದ್ದು ಗೇಣಿ ರೈತರ ಪರವಾಗಿ. ಅಂದು ನ್ಯಾಯಮೂರ್ತಿಗಳಾಗಿದ್ದ ಎನ್.ಡಿ ವೆಂಕಟೇಶರ ಸಹಾಯಕರಾಗಿದ್ದ ತಿಮ್ಮಪ್ಪನವರು ಶಾಂತವೇರಿ ಗೋಪಾಲಗೌಡರ ಶಿಷ್ಯರಾಗಿದ್ದರು. ಈ ಸಂಗತಿ-ಸಂದರ್ಭಗಳಿಂದ ಅವರಿಗೆ ಸಿಕ್ಕ ತಿಳಿವಳಿಕೆ, ವಿವೇಕ, ಹೋರಾಟದ ಮನೋಭಾವ ಅನನ್ಯ. ಅಲ್ಲದೆ ಗೋಪಾಲಗೌಡರ ನಂತರ ಯಾರು ಎಂಬ ಪ್ರಶ್ನೆಗೆ ಅಂದು ಕಾಗೋಡು ತಿಮ್ಮಪ್ಪನವರು ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತಿತ್ತು. ರಾಜಕಾರಣದಲ್ಲಿ ಉನ್ನತವಾದ ಹುದ್ದೆಗೇರಬೇಕೆಂಬ ಮಹತ್ವಾಕಾಂಕ್ಷೆಯೇನೂ ಇಲ್ಲದ ವ್ಯಕ್ತಿತ್ವವಾಗಿತ್ತು ತಿಮ್ಮಪ್ಪನವರದ್ದು. ಬಡವರು ಮತ್ತು ನಿರ್ಗತಿಕರ ಬೆಂಬಲಕ್ಕೆ ನಿಲ್ಲಬೇಕೆಂದು ಸದಾ ಚಿಂತಿಸುತ್ತಿದ್ದ ಅವರಿಗೆ ಚುನಾವಣೆ ಮುಖ್ಯವಾಗಿರಲಿಲ್ಲ. ಟಿಕೆಟ್‌ಗಾಗಿ ಎಂದೂ ಲಾಬಿ ಮಾಡಿದವರಲ್ಲ. ಅದಕ್ಕಾಗಿ ದೆಹಲಿಗೆ ಹೋದವರೂ ಅಲ್ಲ. ಪಾರ್ಟಿಯ ಕಾರ್ಯಕರ್ತರು ಅವರ ಬಳಿ ಹೋಗಬೇಕೆಂದರೆ, ಯಾವುದಾದರೂ ಬೇಡಿಕೆಯ ಅರ್ಜಿ ಜೊತೆಗೆ ಹೋದರೆ ಮಾತ್ರ ಮಾತುಕತೆ, ಇಲ್ಲವಾದರೆ ಹಾಡುಹರಟೆಗೆ ಅವರಲ್ಲಿ ಅವಕಾಶವಿರುತ್ತಿರಲಿಲ್ಲ. ಇಂತಹ ಗುಣಗಳಿಂದಾಗಿ ಕೆಲವು ಬಾರಿ ಸೋತರೂ ತಲೆಕೆಡಿಸಿಕೊಂಡವರಲ್ಲ. ತಮ್ಮಂತ ಆಸಕ್ತರ ಜೊತೆ ನಾಟಕ, ಸಂಗೀತ ಹಾಗೂ ಸಾಮಾಜಿಕ ಸಂಗತಿಗಳ ಬಗ್ಗೆ ಚರ್ಚಿಸಬಲ್ಲರು. ಆಗ ಇವರ ಜೊತೆ ಇಂತಹ ಸಲುಗೆ ಬೆಳೆಸಿಕೊಂಡಿದ್ದವರು ಹುಚ್ಚಪ್ಪ ಮಾಸ್ತರು ಮಾತ್ರ.

ಬಂಗಾರಪ್ಪ

70ರ ದಶಕದಲ್ಲಿ ತಿಮ್ಮಪ್ಪನವರು ತಾಲ್ಲೂಕು ಬೋರ್ಡು ಚುನಾವಣೆಯಲ್ಲಿ ಗೆದ್ದು ಬೋರ್ಡು ಅಧ್ಯಕ್ಷರಾದರು. 1972ರ ಚುನಾವಣೆಯಲ್ಲಿ ಗೆದ್ದು ಅರಸು ಆಡಳಿತದಲ್ಲಿ ವಿರೋಧ ಪಕ್ಷದಲ್ಲಿದ್ದುಕೊಂಡು ಸರಕಾರದ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದ್ದರು. ಅಂದು ಪತ್ರಿಕೆ ತೆಗೆದು ನೋಡಿದರೆ ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಹೆಸರುಗಳು ರಾರಾಜಿಸುತ್ತಿದ್ದವು. ಅರಸು ಭೂಸುಧಾರಣೆ ಕಾನೂನು ಜಾರಿ ಮಾಡಲು ಹೊರಟಾಗ ಆ ಕಾನೂನನ್ನು ತಿದ್ದುಪಡಿ ಮಾಡಿ ಜಾರಿ ಮಾಡುವ ಮುನ್ನ ದೇವರಾಜ ಅರಸು ಕಾಗೋಡು ತಿಮ್ಮಪ್ಪನವರನ್ನ ಕುರಿತು, “ನೀವು ರೈತರ ಗೇಣಿ ಪರ ಹೋರಾಟದಲ್ಲಿ ಸಕ್ರಿಯವಾಗಿದ್ದವರು, ನಿಮ್ಮಂತಹ ನಿಷ್ಟಾವಂತ ಹೋರಾಟಗಾರರು ನಮ್ಮ ಪಕ್ಷದಲ್ಲಿಲ್ಲ. ಆದರೆ, ಪರಿಣಾಮಕಾರಿ ಕಾನೂನು ನಿಮ್ಮಿಂದ ರಚನೆಯಾಗಬೇಕು” ಎಂದು ತಾಕೀತು ಮಾಡಿದ್ದರು. ತಿಮ್ಮಪ್ಪನವರು ಭೂ ಸುಧಾರಣೆ ಕಾನೂನು ಜಾರಿಯಲ್ಲಿ ಅರಸು ಜೊತೆ ನಿಂತಿದ್ದರು. ಆಗಲೇ ಅರಸು ತಿಮ್ಮಪ್ಪನವರನ್ನು ತಮ್ಮ ಪಾರ್ಟಿಗೆ ಸೇರಿಸಿಕೊಳ್ಳುವ ಮನಸ್ಸು ಮಾಡಿದರು. ಈಡಿಗ ಸಮಾಜದ ನಾಯಕರಾದ ಬಂಗಾರಪ್ಪ ಮತ್ತು ಕಾಗೋಡು ತಿಮ್ಮಪ್ಪನವರನ್ನು ಬೆಳೆಸಿ, ಆ ಜೋಡೆತ್ತಿನ ಗಾಡಿಯ ಮೇಲೆ ತಾವು ಕೂರಬೇಕೆಂಬ ಬಯಕೆ ಅರಸುರವರಿಗಿತ್ತು. ಈಗಾಗಲೇ ಬಂಗಾರಪ್ಪ ಅರಸು ಪಾಳಯ ಸೇರಿಯಾಗಿತ್ತು. ಇನ್ನು ಹಿಂದುಳಿದ ವರ್ಗದ ಬಗ್ಗೆ ತಮ್ಮಷ್ಟೇ ಕಾಳಜಿ ಇರುವ ತಿಮ್ಮಪ್ಪನವರನ್ನು ಸೆಳೆದುಕೊಂಡರೆ ಆ ಪ್ರಾಂತ್ಯದಲ್ಲಿ ಸಮರ್ಥ ನಾಯಕತ್ವ ಮೂಡಿದಂತಾಗುತ್ತದೆ ಎಂದು ಭಾವಿಸಿದ್ದರು. ಅವರ ಈ ಭಾವನೆಗೆ ಕಾರಣ ಅರಸು ತಂದ ಭೂಸುಧಾರಣೆ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗಿದ್ದು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ. ಇಂತಹ ಕಾನೂನು ಜಾರಿಗೆ ತಂದ ನಾಯಕನನ್ನು ಜನ ನೋಡಲೆಂದು, ತಿಮ್ಮಪ್ಪನವರು ಮತ್ತು ಬಂಗಾರಪ್ಪನವರು ಹಿಂದೆಂದೂ ಕಂಡರಿಯದ ಅದ್ದೂರಿ ಮೆರವಣಿಗೆ ಮತ್ತು ಸಮಾರಂಭಗಳನ್ನು ಆಯೋಜಿಸಿದರು. ಆ ಸಮಾರಂಭದಲ್ಲೇ ಕಾಗೋಡು ತಿಮ್ಮಪ್ಪನವರು ಅರಸು ಪಾಳಯ ಸೇರುತ್ತಾರೆಂಬ ಪ್ರಚಾರವಿತ್ತು. ಆದರೆ ತಿಮ್ಮಪ್ಪ ಸೇರಲಿಲ್ಲ. ಅರಸು ಕೂಡ ಆ ಬಗ್ಗೆ ಚಕಾರವೆತ್ತಲಿಲ್ಲ. ಅಂದು ಸೋಷಲಿಸ್ಟರು ಉಗ್ರ ಕಾಂಗ್ರೆಸ್ ವಿರೋಧಿಗಳಾಗಿದ್ದುದ್ದು ತಿಮ್ಮಪ್ಪ ಕಾಂಗ್ರೆಸ್ ಸೇರದಿರಲು ಕಾರಣ ಎನ್ನುವವರಿದ್ದಾರೆ, ಬಂಗಾರಪ್ಪ ಕಾರಣ ಎನ್ನುವವರಿದ್ದಾರೆ; ಅಂತೂ ಇದೊಂದು ನಿಗೂಢ ಸಂಗತಿ!

ಕಾಗೋಡು ತಿಮ್ಮಪ್ಪನವರು ಅರಸು ಕಾಂಗ್ರೆಸ್ ಸೇರದಿದ್ದ ಕಾರಣಕ್ಕೋ ಏನೋ 1978ರ ಚುನಾವಣೆಯಲ್ಲಿ ಸೋತರು. ಈ ಸೋಲಿಗೆ ಗೋಪಾಲಗೌಡರು ಹೇಳಿದ ಮಾತನ್ನು ನೆನೆಯಬಹುದು: “ಗೇಣಿ ಭೂಮಿಗಾಗಿ ನಿನ್ನ ಜೊತೆ ಇರುವ ರೈತರು ಭೂಮಿ ಸಿಕ್ಕ ನಂತರ ನಿನಗೆ ಸಿಗುವುದಿಲ್ಲ” ಎಂದಿದ್ದರಂತೆ. ಹಾಗೆಯೇ ಆಯಿತು. ಚುನಾವಣೆಯ ಸೋಲುಗೆಲುವುಗಳನ್ನು ಗಂಭೀರವಾಗಿ ಪರಿಗಣಿಸದ ತಿಮ್ಮಪ್ಪನವರು ಆ ನಂತರ ಬಗರ್ ಹುಕುಂ ರೈತರ ಪರ ಹೋರಾಡತೊಡಗಿದರು. ಆ ಸಮಯದಲ್ಲಿ ಅವರು ಕಾಂಗ್ರೆಸ್ ಸೇರಿದರು. ಅರಸು ಜೊತೆ ಹೋಗದ ತಿಮ್ಮಪ್ಪನವರು ಗುಂಡೂರಾಯರ ಜೊತೆ ಹೋದದ್ದು ಅವರ ಹೋರಾಟ ಮತ್ತು ಖ್ಯಾತಿಗೆ ಹಿನ್ನಡೆಯುಂಟು ಮಾಡಿತು. ಕರ್ನಾಟಕದ ಮೇಲೆ ಕೆಟ್ಟ ಸರಕಾರವನ್ನು ಹೇರಿದ್ದ ಗುಂಡೂರಾಯರಿಗೆ, ತಿಮ್ಮಪ್ಪನಂತಹ ನಾಯಕ ಬೇಕಿತ್ತು. ಆದ್ದರಿಂದ ಆಹಾರ, ಅರಣ್ಯ ಇಲಾಖೆಯ ಜೊತೆಗೆ ವಿಧಾನಪರಿಷತ್ತಿನ ಸಭಾ ನಾಯಕರನ್ನಾಗಿ ಮಾಡಿದ್ದರು. ಆ ನಂತರ ಕೆಲವು ಕಾಲ ಲೋಕೋಪಯೋಗಿ ಸಚಿವರಾಗಿಯೂ ಇದ್ದರು. ಜನವಿರೋಧಿಯಾಗಿ ರೈತರ ಮೇಲೆ ಗೋಲಿಬಾರು ನಡೆಸಿ ಉಡಾಫೆಯಿಂದ ನಡೆದುಕೊಳ್ಳುವ ಕೆಟ್ಟ ಸರಕಾರ ಅದಾಗಿತ್ತಾದ್ದರಿಂದ ಒಳ್ಳೆಯ ಮಂತ್ರಿಗಳ ಕೆಲಸಗಳೂ ಕೆಟ್ಟ ಹೆಸರು ಪಡೆದವು.

ಎಂ. ವೀರಪ್ಪ ಮೊಯಿಲಿ

ಮುಂದೆ ಸ್ವಜಾತಿಯ ಬಂಗಾರಪ್ಪ ಮುಖ್ಯಮಂತ್ರಿಯಾದಾಗ, ಅವರ ಸಂಪುಟದಲ್ಲಿ ಮಂತ್ರಿಯಾಗಲೊಲ್ಲದ ತಿಮ್ಮಪ್ಪನವರು ಹೌಸಿಂಗ್ ಬೋರ್ಡು ಛೇರ್ಮನ್ ಆದರು. ಎಂ. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾದಾಗ ತಿಮ್ಮಪ್ಪ ಸಮಾಜ ಕಲ್ಯಾಣ ಸಚಿವರಾದರು. 1999ರಲ್ಲಿ ಬಂದ ಎಸ್ಸೆಂ ಕೃಷ್ಣರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಹೆಸರು ಮಾಡತೊಡಗಿದರು. ಈ ಅವಧಿಯಲ್ಲಿ ಅವರು ಸಾಗರಕ್ಕೆ ತಂದ ಸವಲತ್ತುಗಳು ಇದುವರೆಗೆ ಯಾರೂ ಮುರಿಯಲಾಗದ ಸಾಧನೆ ಎನ್ನಬಹುದು. ಇದೇ ಸಮಯದಲ್ಲಿ ಅವರೊಮ್ಮೆ ಕಡೂರಿಗೆ ಬರುತ್ತಿರಬೇಕಾದರೆ ಮತ್ತಿಘಟ್ಟದ ಬಳಿ ಎಡಬಲವನ್ನು ಗಮನಿಸುತ್ತ ಬಂದರು. ಅವರ ಅಧಿಕಾರಿಗಳ ಗುಂಪಿನಲ್ಲಿ ರುದ್ರಸ್ವಾಮಿಯವರೂ ಇದ್ದರು. ರುದ್ರಸ್ವಾಮಿಯವರು ತಿಳಿದ ಹಿನ್ನೆಲೆಯವರು ಮತ್ತು ದಲಿತ ಸಂಘರ್ಷ ಸಮಿತಿಯ ಬುನಾದಿಯಲ್ಲಿ ಅವರೂ ಒಬ್ಬರು. ಹಿಂದುಳಿದ ವರ್ಗವನ್ನು ಮೇಲೆತ್ತುವಲ್ಲಿ ತಿಮ್ಮಪ್ಪನವರ ಪ್ರಾಮಾಣಿಕ ಪ್ರಯತ್ನ ಮೆಚ್ಚಿ ಅವರ ಜೊತೆಗೆ ಬಂದಿದ್ದರು. ಕಡೂರಿನ ಐಬಿಗೆ ಬಂದ ತಿಮ್ಮಪ್ಪನವರು ಶಾಸಕ ಕೃಷ್ಣಮೂರ್ತಿ ಎದುರು “ಬರುತ್ತ ರಸ್ತೆಯಲ್ಲಿ ಏನು ನೋಡಿದಿರಿ” ಎಂದರು. ಮೂರು ಅಧಿಕಾರಿಗಳು ಮೂರು ಉತ್ತರ ಕೊಟ್ಟರು. ಆಗ ತಿಮ್ಮಪ್ಪನವರು “ಮತ್ತಿಘಟ್ಟದ ಬಳಿ ರಸ್ತೆ ಬದಿಯಲ್ಲಿ ಒಬ್ಬ ಕುರ್ಚಿಗೆ ಛತ್ರಿ ಕಟ್ಟಿಕೊಂಡು ತಾನು ಬಿಸಿಲಲ್ಲಿದ್ದು ಚೌರ ಮಾಡತಿದ್ನಲ್ಲ ನೋಡಿದ್ರ ಎಂದರು. ಅಧಿಕಾರಿಗಳು ಬಾಯಿ ಬಿಡಲಿಲ್ಲ. “ನಾನು ಇನ್ನೊಂದು ಸತಿ ಬರದ್ರಲ್ಲಿ ಅವನಿಗೊಂದು ಶೆಡ್ಡಾಗಬೇಕು” ಎಂದರು. ಅಧಿಕಾರಿಗಳು ಒಕ್ಕೊರಲಿನಿಂದ “ಆಯ್ತು ಸಾರ್” ಎಂದರು. ಸಾಮಾನ್ಯವಾಗಿ ಸುಖವಾಗಿ ಇದ್ದುಕೊಂಡು ಹೋಗಲು ಇಷ್ಟಪಡುವ ಅಧಿಕಾರಿಗಳಿಗೆ ತಿಮ್ಮಪ್ಪನವರ ಬಳಿ ಏಗಲಾಗುತ್ತಿರಲಿಲ್ಲ. ತಿಮ್ಮಪ್ಪನವರ ಸಚಿವಾಲಯದ ಅಧಿಕಾರಿಗಳು ವರ್ಗಾವಣೆಗೆ ಪ್ರಯತ್ನಿಸುವುದು ಸಾಮಾನ್ಯವಾಗಿತ್ತು. ಅನಿವಾರ್ಯವಾಗಿ ಸಿಕ್ಕಿಕೊಂಡವರು ಹೆಣಗುತ್ತಿದ್ದರು. ಅವತ್ತು ಹಾಗೇ ಆಯ್ತು. ಮತಿಘಟ್ಟದ ಬಳಿ ಕಂಡ ಬಯಲು ಕ್ಷೌರಿಕನನ್ನು ಪತ್ತೆಹಚ್ಚಿ ಅವನಿಗೆ ಒಂದು ಶೆಡ್ ನಿರ್ಮಿಸಿ, ಆತ ಬಳಸುವ ಟೂಲ್ಸ್ ಪೆಟ್ಟಿಗೆ ತೆಗೆದುಕೊಟ್ಟು ಅಧಿಕಾರಿಗಳು ವರದಿ ಒಪ್ಪಿಸಿದರು. “ಎಲ್ಲಿ ಅವನನ್ನು ಕರಕೊಂಡು ಬನ್ನಿ” ಎಂದರು ತಿಮ್ಮಪ್ಪ. ಅಧಿಕಾರಿಗಳು ಓಡಿದರು. ಅಲ್ಲಿ ಕ್ಷೌರಿಕ ತನ್ನ ಕೆಲಸ ಮಾಡುತ್ತಿದ್ದವನು ಈಗ ಬರಕ್ಕಾಗಲ್ಲ ಬಿಜಿ ಇದ್ದೀನಿ ಅಮ್ಯಾಲೆ ಬತ್ತಿನಿ” ಎಂದ! ದಂಗುಬಡಿದ ಅಧಿಕಾರಿಗಳು ಆತನ ಮಾತನ್ನು ತಂದು ತಿಮ್ಮಪ್ಪನವರಿಗೆ ಹೇಳಿದರು. ನಗಾಡಿದ ತಿಮ್ಮಪ್ಪ ’ಅಂಥವರಿಗೆ ಕಂಡ್ರಿ ಸಮಾಜ ಕಲ್ಯಾಣ ಇಲಾಖೆ ಇರದು; ಅಂಥವುರಿಗೆ ಏನೂ ಮಾಡಕ್ಕಾಗಲಿಲ್ಲ ಅಂದ್ರೆ ನಾವ್ಯಾಕಿರಬೇಕು’ ಎಂದರು. ತಿಮ್ಮಪ್ಪನವರ ಆಡಳಿತ ಅವಧಿಯಲ್ಲಿ ಇಂತಹ ನೂರಾರು ಘಟನೆಗಳು ನಡೆದಿವೆ. ಒಮ್ಮೆ ಮೋಟಮ್ಮನವರು ಮೂಡಿಗೆರೆಗೆ ಕರೆದು ಸಭೆ ಮಾಡಿದಾಗ, ಮೇಲು ಜಾತಿಯವರೆಲ್ಲಾ ಕುರ್ಚಿಯಲ್ಲಿ ಅಸೀನರಾಗಿ ದಲಿತರು ದೂರ ನಿಂತು ನೋಡುತ್ತಿದ್ದರು. ಇದನ್ನು ಗಮನಿಸಿದ ತಿಮ್ಮಪ್ಪನವರು “ಮೋಟಮ್ಮ ನೋಡು ಆ ಬಾಯಿಲ್ಲದ ಬಸವಣ್ಣಗಳಿಗೆ ನಾವು ಬಾಯಿ ಕೊಡಬೇಕು. ಇಲ್ಲ ಅಂದ್ರೆ ನಾನು ನೀನು ಯಾಕೆ ಮಂತ್ರಿಗಳಾಗಿರಬೇಕು” ಎಂದರು. ತಿಮ್ಮಪ್ಪನವರು ಇವತ್ತಿಗೂ ಅರಸು ರಾಜಕಾರಣದ ಮುಂದುವರಿಕೆಯಾಗಿ ಕಾಣುತ್ತಾರೆ. ಅವರು ಎಲ್ಲ ಪಾರ್ಟಿಯವರ ಕೆಲಸ ಮಾಡಿಕೊಡುತ್ತಿದ್ದರು. ಅವರಿಗೆ ಒಂದು ಓಟನ್ನೂ ಹಾಕದ ಊರಿಗೆ ನೀರಿನ ವ್ಯವಸ್ಥೆ ಮಾಡಬಾರದೆಂದು ಸ್ಥಳೀಯ ಮುಖಂಡರು ಹೇಳಿದಾಗ, “ಮತ್ತೇನು ಕುಡಿಬೇಕು ಅವುರು? ನಾನು ಮಂತ್ರಿ. ಅವರಿಗೆ ನೀರಿನ ವ್ಯವಸ್ಥೆ ಮಾಡದು ನನ್ನ ಕರ್ತವ್ಯ” ಎಂದರು. ಮುಖ್ಯಮಂತ್ರಿಯಾಗಲು ಎಲ್ಲ ಯೋಗ್ಯತೆಯಿದ್ದರೂ ಆ ಬಗ್ಗೆ ಕಿಂಚಿತ್ತೂ ಮನಸ್ಸು ಮಾಡಲಿಲ್ಲ ಮತ್ತು ಅದಕ್ಕಾಗಿ ಎಂದಿಗೂ ಲಾಬಿಗೆ ಇಳಿಯಲಿಲ್ಲ. ಈ ಇಳಿವಯಸ್ಸಿನಲ್ಲೂ ಸಭೆ ಸಮಾರಂಭಕ್ಕೆ ಬರುವುದಲ್ಲದೆ ಸದ್ಯಕ್ಕೆ ಮುಗಿಯದ ಬಗರ್ ಹುಕುಂ ಸಮಸ್ಯೆ ಹಿಡಿದು ಹೋರಾಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಇತಿಹಾಸದಲ್ಲಿ ಅರಸು ಎಂಬ ನಕ್ಷತ್ರ

ಲಂಕೇಶ್ ಪತ್ರಿಕೆಗೆ ಇಪ್ಪತ್ತು ವರ್ಷ ತುಂಬಿದಾಗ, ಒಂದು ಸೆಮಿನಾರ್ ಮಾಡಲು ಶಿವಮೊಗ್ಗದ ಗೆಳೆಯರೆಲ್ಲಾ ತೀರ್ಮಾನಿಸಿದೆವು. ಯಾರನ್ನಾದರೂ ಕರೆಯಲು ಲಂಕೇಶ್ ನಮಗೆ ಸ್ವಾತಂತ್ರ್ಯ ಕೊಟ್ಟಿದ್ದರು ಆದ್ದರಿಂದ ಕಾಗೋಡು ತಿಮ್ಮಪ್ಪನವರನ್ನ ಕರೆಯಲು ಸರ್ಕಿಟ್ ಹೌಸಿಗೆ ಹೋಗಿ “ಸಾರ್ ಲಂಕೇಶ್ ಪತ್ರಿಕೆಗೆ ಇಪ್ಪತ್ತು ವರ್ಷ ಆಯ್ತು; ಇದೇ 14ನೇ ತಾರೀಖು ಕುವೆಂಪು ರಂಗಮಂದಿರದಲ್ಲಿ ಸೆಮಿನಾರ್ ಇದೆ. ನೀವು ಉದ್ಘಾಟಿಸಬೇಕು ಎಂದೆ.” “ಆಗ್ಲೆ ಇಪ್ಪತ್ತೊರ್ಷ ಆಯ್ತೆ” ಎಂದ ಅವರು, ತಮ್ಮ ಪಿ.ಎ ಕರೆದು ಆ ದಿನಾಂಕವನ್ನು ದಾಖಲಿಸಲು ಹೇಳಿದರು. ಇನ್ನೇನು ಮಾತನಾಡುವಂತಿರಲಿಲ್ಲ. ಹೊರಟು ಬಂದು ಲಂಕೇಶರಿಗೆ ಫೋನ್ ಮಾಡಿ ತಿಳಿಸಿದೆ. ಆಗವರು “ಏ ತಿಮ್ಮಪ್ಪ ಒಳ್ಳೆ ಕೆಲಸಗಾರ. ನಾವೆ ಕ್ರ್ಯಾಕ್‌ಗಳ ತರ ಏನೇನೊ ಬರಿತಿವಿ” ಎಂದರು. ಹೀಗೆ ಕ್ರ್ಯಾಕ್‌ಗಳ ತರ ಬರದದ್ದು ಒಂದೆರಡು ವರ್ಷವಲ್ಲ; ಇಪ್ಪತ್ತು ವರ್ಷಗಳ ಕಾಲ ಪತ್ರಿಕೆ ತಿಮ್ಮಪ್ಪನವರ ಬಗ್ಗೆ ಪೂರ್ವಗ್ರಹದಿಂದ ಬರೆದಿತ್ತು. ಅದಕ್ಕೆ ಕಾರಣ ಲಂಕೇಶರು ನಿರ್ದೇಶಿಸಿದ್ದ “ಎಲ್ಲಿಂದಲೊ ಬಂದವರು” ಚಿತ್ರಕ್ಕೆ ತಿಮ್ಮಪ್ಪನವರು ತೆರಿಗೆ ವಿನಾಯಿತಿ ಕೊಡಿಸಲು ಪ್ರಯತ್ನಿಸಲಿಲ್ಲ ಎಂಬುದ ಮತ್ತು ಲಂಕೇಶರ ಭೇಟಿಯನ್ನು ನಿರಾಕರಿಸಿದ್ದರು ಎಂಬುದಾಗಿತ್ತು.

ಲಂಕೇಶ್

ಕಾರ್ಯಕ್ರಮದ ದಿನ ತಿಮ್ಮಪ್ಪನವರು ನಿಗದಿಯಾದ ಸಮಯಕ್ಕೆ ಮೊದಲೇ ಬಂದು ಅದ್ಭುತವಾಗಿ ಮಾತನಾಡಿದರು. ಸಭೆಯಲ್ಲಿದ್ದ ಲಂಕೇಶರು ಕೇಳಿಸಿಕೊಂಡರು. ಹೊರಟಾಗ ಸಭೆಯ ನಡುವೆ ಇದ್ದ ಲಂಕೇಶರ ಬಳಿಗೆ ಬಂದು ಮಾತನಾಡಿಸಿ ಹೋದರು. ಅದು ಅವರಿಬ್ಬರ ಕಡೆಯ ಭೇಟಿಯಾಗಿತ್ತು. ಮುಂದಿನ ತಿಂಗಳು ಜನವರಿ ಇಪ್ಪತ್ತೈದ್ದಕ್ಕೆ ಲಂಕೇಶ್ ನಿರ್ಗಮಿಸಿದರು.

ತಿಮ್ಮಪ್ಪನವರಿಗೆ ಈಗ 82 ವರ್ಷವಾದರೂ ಕ್ರಿಯಾಶೀಲರಾಗಿದ್ದಾರೆ; ಅವರು ಯುವಜನರಿಗೆ ಕೊಡುವ ಸಂದೇಶ ಯಾವುದೆಂದರೆ, “ಯಾವುದೇ ಸರಕಾರದ ಕೆಲಸವಾಗಲಿ ಅಧಿಕಾರಿಗಳ ಬೆನ್ನತ್ತಿ ಮಾಡಿಸಬೇಕು. ಇಲ್ಲದಿದ್ದರೆ ಇಲ್ಲೇನೂ ಆಗುವುದಿಲ್ಲ” ಎಂದು. ತಮ್ಮ ದೀರ್ಘವಾದ ಕ್ರಿಯಾಶೀಲ ಬದುಕಿನಲ್ಲಿ ಯಾವುದೇ ಪ್ರಶಂಸೆ ಪ್ರಶಸ್ತಿ ಕಿರೀಟಕ್ಕಾಗಿ ತಿರುಗಿಯೂ ನೋಡದ ತಿಮ್ಮಪ್ಪನವರಿಗೆ ದೇವರಾಜ ಅರಸು ಪ್ರಶಸ್ತಿ ಸಂದಿದೆ. ಅರಸು ಪ್ರಶಸ್ತಿಯನ್ನು ಬಹಳ ಸಂಭ್ರಮದಿಂದ ಸ್ವೀಕರಿಸಿದ್ದೂ ಅಲ್ಲದೆ, ತಮ್ಮ ಬದುಕಿನ ಕೊನೆಯ ಹಂತದಲ್ಲಿನ ಸಾರ್ಥಕ ಕ್ಷಣಗಳಿವು ಎಂಬ ಉದ್ಘಾರ ತೆಗೆದಿದ್ದಾರೆ.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶ್‌ರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...