Homeಅಂಕಣಗಳುಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ಬೇಸಗೆಯ ಕೊನೆಯಿಂದ ದೀಪಾವಳಿ ಹಬ್ಬದವರೆಗೆ ಅಥವಾ ಕಾಫಿಹಣ್ಣು ಕೊಯ್ಲಿನ ಸಮಯದವರೆಗೆ ತೋಟದ ಎಲ್ಲಾ ನೌಕರ, ಕಾರ್ಮಿಕರಿಗೂ ಪ್ರತಿವಾರ ಭತ್ತ ಅಥವಾ ಅಕ್ಕಿಯನ್ನು ಲಾಭ ನಷ್ಟವಿಲ್ಲದೆ ಕೊಡುತ್ತಿದ್ದರು.

- Advertisement -
- Advertisement -

ಗಣಪಯ್ಯನವರು ಹಾರ್ಲೆಗೆ ಬಂದ ಮೇಲೆ ಕೃಷಿ ವಿಸ್ತರಣೆಯ ಜೊತೆಯಲ್ಲಿ ಸುತ್ತಲಿನ ಜನರೊಡನೆ ಸಂಬಂಧಗಳನ್ನೂ ವಿಸ್ತರಿಸುತ್ತಾ ಹೋದರು. ಇದಕ್ಕೆ ಕಾರಣವೂ ಇತ್ತು.

ಗಣಪಯ್ಯ ಸಹೋದರರರು ಕೊಡಗಿನಿಂದ ಬರುವಾಗ ಅನೇಕ ಕಾರ್ಮಿಕ ಕುಟುಂಬಗಳು ಇವರೊಂದಿಗೆ ಹಾರ್ಲೆಗೆ ಬಂದರು. ಅವರಲ್ಲಿ ಕೂಲಿ ಕಾರ್ಮಿಕರು, ಮೇಸ್ತ್ರಿಗಳು, ಮೆಕ್ಯಾನಿಕ್‌ಗಳು, ಡ್ರೈವರ್‌ಗಳು, ರೈಟರ್‌ಗಳು ಎಲ್ಲರೂ ಇದ್ದರು. ಕೊಡಗಿನಲ್ಲಿ ಇದ್ದಾಗಲೇ ಇವರೆಲ್ಲರಿಗೂ ಗಣಪಯ್ಯ ತಮ್ಮ ಬಂಧುವೆನ್ನುವಂತಹ ಬಾಂಧವ್ಯ ಬೆಳೆದಿತ್ತು. ಇವರಲ್ಲಿ ಹಲವರು ಈಗ ತೀರಿಕೊಂಡಿದ್ದಾರೆ. ಕೆಲವರ ಮೊಮ್ಮಕ್ಕಳು ಇಂದಿಗೂ ಹಾರ್ಲೆ ಸುತ್ತ ಮುತ್ತ ಇದ್ದಾರೆ. ಇನ್ನು ಕೆಲವರು ಸರ್ಕಾರಿ ಉದ್ಯೋಗಗಳಲ್ಲಿದ್ದಾರೆ, ಉನ್ನತ ಹುದ್ದೆ ತಲುಪಿದ್ದಾರೆ, ಉದ್ಯಮಿಗಳಾಗಿದ್ದಾರೆ.

ನಂತರದ ದಿನಗಳಲ್ಲಿಯೂ ಕೊಡಗಿನಿಂದ ಹಲವು ಕುಟುಂಬಗಳು ಗಣಪಯ್ಯನವರ ಆಶ್ರಯದಲ್ಲಿ ಸಕಲೇಶಪುರ ತಾಲ್ಲೂಕಿಗೆ ಬಂದು ಬದುಕು ಕಟ್ಟಿಕೊಂಡರು. ಕೆಲವರು ಹಾರ್ಲೆಯಲ್ಲಿ ಮತ್ತು ಅವರ ಸಹೋದರ ಕೃಷ್ಣಮೂರ್ತಿಯವರಲ್ಲಿ ಉದ್ಯೋಗ ಪಡೆದರೆ ಇನ್ನು ಕೆಲವರು ಸ್ವತಂತ್ರವಾಗಿ ಕೃಷಿಯಲ್ಲಿ ತೊಡಗಿಕೊಂಡರು.

ಆ ಕಾಲದಲ್ಲಿ ಸುತ್ತಲಿನ ಹಳ್ಳಿಯ ಕೃಷಿಕರು ಸಣ್ಣ ಪುಟ್ಟ ಹಣ ಸಹಾಯಕ್ಕಾಗಿ ಗಣಪಯ್ಯನವರಲ್ಲಿಗೆ ಬರುತ್ತಿದ್ದರು. ಇತರ ಕೃಷಿ ಸಂಬಂಧದ ಕೆಲಸಕ್ಕಾಗಿ ಬರುವವರಿದ್ದರು. ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯುತ್ತಿದ್ದರು, ಆ ಬಾಡಿಗೆಯೂ ಯಂತ್ರಗಳ ದುರುಪಯೋಗವಾಗದಂತೆ ಹೆಸರಿಗೆ ಮಾತ್ರ ಇರುತ್ತಿತ್ತು.

ನಿಧಾನವಾಗಿ ಗಣಪಯ್ಯ ಸುತ್ತಲಿನ ಹಳ್ಳಿಯ ರೈತರಿಗೆ ಆಪದ್ಭಾಂಧವರಾಗುತ್ತ ಹೋದರು.

ಹಾರ್ಲೆ ಎಸ್ಟೇಟ್

ತುರ್ತು ಸಂದರ್ಭಗಳಲ್ಲಿ ಹಣ ಪಡೆದ ರೈತರು ಗದ್ದೆ ಕೊಯ್ಯವ ಸಮಯದಲ್ಲಿ ಅದಕ್ಕೆ ತಕ್ಕ ಭತ್ತವನ್ನು ಹಿಂದಿರುಗಿಸಬೇಕು. ಇದು ಶರತ್ತು ಜೊತೆಯಲ್ಲಿ ಹಾರ್ಲೆ ಎಸ್ಟೇಟ್‌ನಲ್ಲಿಯೂ ಗದ್ದೆಯಿದ್ದು ಅಲ್ಲೂ ಬೇಸಾಯ ನಡೆಯುತ್ತಿತ್ತು. ಈ ಎಲ್ಲಾ ಭತ್ತವನ್ನೂ ಅವರು ಒಂದಿಷ್ಟೂ ಮಾರುತ್ತಿರಲಿಲ್ಲ. ಬೇಸಗೆಯ ಕೊನೆಯಿಂದ ದೀಪಾವಳಿ ಹಬ್ಬದವರೆಗೆ ಅಥವಾ ಕಾಫಿಹಣ್ಣು ಕೊಯ್ಲಿನ ಸಮಯದವರೆಗೆ ತೋಟದ ಎಲ್ಲಾ ನೌಕರ ಕಾರ್ಮಿಕರಿಗೂ ಪ್ರತಿವಾರ ಭತ್ತ ಅಥವಾ ಅಕ್ಕಿಯನ್ನು ಲಾಭ ನಷ್ಟವಿಲ್ಲದೆ ಕೊಡುತ್ತಿದ್ದರು. ಇದರಿಂದ ಮಳೆಗಾಲದಲ್ಲಿ ಕೆಲಸಗಾರರು ಊಟಕ್ಕಿಲ್ಲದೆ ಕೂರುವುದು ತಪ್ಪುತ್ತಿತ್ತು. ಅದೇ ಭತ್ತದ ಅಕ್ಕಿಯನ್ನೇ ಅವರೂ ಊಟ ಮಾಡುತ್ತಿದ್ದುದು.

ಇವರಲ್ಲಿ ಕೆಲಸ ಕೇಳಿಕೊಂಡು ಬರುವವರ ಸಂಖ್ಯೆಯೂ ಹೆಚ್ಚಿತ್ತು, ಇಲ್ಲಿ ಬಂದು ಸೇರಿದವರು ಬಿಟ್ಟು ಹೋಗುವುದಿಲ್ಲ ಎಂಬ ಮಾತು ಜನರಲ್ಲಿ ವಾಡಿಕೆಯಾಯಿತು. ಗಣಪಯ್ಯ ಕಾಫಿ ತೋಟದ ವಿಸ್ತರಣೆಯಲ್ಲಿ ತೊಡಗಿದರು. ಆಗೆಲ್ಲ ಪತ್ನಿ ದೇವಮ್ಮನವರು ಆಕ್ಷೇಪಿಸುವರು, “ಯಾಕೆ ಇಷ್ಟೊಂದು ನಮಗೆ, ಇಷ್ಟು ವರ್ಷ ನೀವು ದುಡಿದದ್ದು ಸಾಕು ಇನ್ನು ನೆಮ್ಮದಿಯಲ್ಲಿರೋಣ” ಎನ್ನುವರು. ದೇವಮ್ಮನವರ ಆರೋಗ್ಯ ಮೊದಲಿನಿಂದಲೂ ಚೆನ್ನಾಗಿರಲಿಲ್ಲ. ಕೊಡಗಿನಲ್ಲಿ ಇರುವಾಗಲೇ ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳಾಗಿದ್ದವು. ನಿರಂತರ ಔಷಧಿ ಸೇವನೆ ಮುಂದುವರೆದಿತ್ತು. ಅವರಿಗೆ ಈಗಲೂ ಇದೆಲ್ಲ ಜಂಜಾಟ ಯಾಕೆ ಎಂದು ಅನ್ನಿಸುತ್ತಿತ್ತು.

ಆಗ ಗಣಪಯ್ಯ “ನಿಂಗೇನು ಗೊತ್ತು ಸುಮ್ಮನಿರು ಒಂದು ಎಕರೆ ತೋಟ ಮಾಡಿದ್ರೆ ನಾಕು ಜನರಿಗೆ ಉದ್ಯೋಗ ಆಗುತ್ತೆ. ಇಷ್ಟು ಜನ ಕೆಲಸ ಕೇಳಿಕೊಂಡು ಬರ್ತಾ ಇದ್ದಾರಲ್ಲ ಅವರು ಕಷ್ಟ ಇರುವುದರಿಂದ ಬರ್ತಾರೆ, ತಮಾಷೆಗೆ ಯಾರೂ ಬರದಿಲ್ಲ” ಎನ್ನುವರು.

ಮುಂದಿನ ದಿನಗಳಲ್ಲಿ ಗಣಪಯ್ಯ ತಮ್ಮ ತೋಟವಲ್ಲದೇ ಇನ್ನೂ ಕೆಲವರ ತೋಟಗಳನ್ನು ನೋಡಿಕೊಳ್ಳಲು ತೊಡಗಿದರು. ಆವಾಗ ಸ್ಥಾಪಿಸಿದ್ದು “ಹಾರ್ಲೆ ಮ್ಯಾನೇಜ್ ಮೆಂಟ್ ಸರ್ವಿಸಸ್” ಎಂಬ ಸಂಸ್ಥೆ. ಇದರಿಂದ ಇನ್ನೂ ಅನೇಕರಿಗೆ ಉದ್ಯೋಗ ನೀಡಲು ಅವರಿಗೆ ಸಾಧ್ಯವಾಯಿತು.

ಹಾರ್ಲೆ ಎಸ್ಟೇಟನ್ನು ಖರೀದಿಸುವಾಗ ಅದರ ಕೆಲವು ಭಾಗಗಳಷ್ಟೇ ಕಾಫಿಕೃಷಿಯಾಗಿತ್ತು. ಉಳಿದ ಹೆಚ್ಚಿನ ಭಾಗಗಳು ಯಾಲಕ್ಕಿ ಬೆಳೆ. ಬಾಕಿ ಕುರುಚಲು ಕಾಡು ಮತ್ತು ಕರೆದೀಣೆ. ಇವೆಲ್ಲ ಖಾಲಿ ಇದ್ದವು. ನಿಧಾನವಾಗಿ ಇವೆಲ್ಲವೂ ಕೃಷಿಗೆ ಒಳಪಟ್ಟವು. ಸುತ್ತಲಿನ ಬೆಳೆಗಾರರು ಹಾರ್ಲೆಗೆ ಬರುವುದು ಗಣಪಯ್ಯನವರ ಸಲಹೆ ಸೂಚನೆ ಪಡೆಯುವುದೂ ಸಾಮಾನ್ಯ ವಿಷಯವಾಯಿತು. ದೂರ ದೂರದಿಂದ ಹಾರ್ಲೆಯ ಯಾಲಕ್ಕಿ ತೋಟವನ್ನು ನೋಡಲು ಜನರು ಬರುತ್ತಿದ್ದರು.

ಗಣಪಯ್ಯನವರು ಹಾರ್ಲೆಗೆ ಬಂದ ಪ್ರಾರಂಭದಲ್ಲಿ ಗೆಳೆಯ ಸಿ.ಎಂ. ಪೂಣಚ್ಚನವರು (ಅವರಾಗ ಕರ್ನಾಟಕದ ಗೃಹ ಮಂತ್ರಿಗಳು) ಗಣಪಯ್ಯನವರಲ್ಲಿ “ನನ್ನ ಪಿತ್ರಾರ್ಜಿತ ಆಸ್ತಿ ಗಂಡು ಮಕ್ಕಳಿಗಿರಲಿ, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಲ್ಲಿ ಕೊಡಗಿನಲ್ಲಿ ಜಮೀನಿನ ಬೆಲೆ ಏರಿ ಹೋಗಿದೆ ನಿಮ್ಮ ಸುತ್ತ ಮುತ್ತ ಕಡಿಮೆ ಬೆಲೆಗೆ ಯಾವುದಾದರೂ  ಜಮೀನಿದ್ದರೆ ಕೊಡಿಸಿ, ಮತ್ತೆ ಅದನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನಿಮ್ಮದೇ ಎಂದರಂತೆ”.

ಹಾರ್ಲೆಯ ಪಕ್ಕದ ರಕ್ಷಿದಿ ಗ್ರಾಮದಲ್ಲಿ ಒಂದು ತೋಟವನ್ನು ಗಣಪಯ್ಯನವರು ಹರಾಜಿನಲ್ಲಿ ಪಡೆದುಕೊಂಡಿದ್ದರು. ಅದರ ಕೆಲವು ಭಾಗ ಮಾತ್ರ ತೋಟವಾಗಿದ್ದು ಉಳಿದ ಜಾಗ ಕಾಡು ಮತ್ತು ಹುಲ್ಲುಗಾವಲಾಗಿತ್ತು.

ಒಟ್ಟು ಒಂಬೈನೂರು ಎಕರೆಗಳಷ್ಟಿರುವ ಇಡೀ ರಕ್ಷಿದಿ ಕಂದಾಯ ಗ್ರಾಮವೇ ಹಿಂದೆ ಮೇಜರ್ ಅಟ್ಲಿ ಎನ್ನುವ  ಬ್ರಿಟಿಷ್ ಅಧಿಕಾರಿಯದ್ದಾಗಿತ್ತು. ಅದರ ಒಂದು ಭಾಗವನ್ನು ಆತ ಅಮೀರ್ ಜಾನ್ ಎಂಬುವರಿಗೆ ಮಾರಾಟ ಮಾಡಿ, ನಂತರ ಅದು ಹಲವರ ಕೈದಾಟಿ ಗಣಪಯ್ಯನವರಿಗೆ ಬಂದಿತ್ತು. ಆ ತೋಟವನ್ನು ಆಗ ಜನರು ‘ಸಣ್ ರಕ್ಷಿದಿ’ ಎಂದು ಕರೆಯುತ್ತಿದ್ದರು. ಆ ತೋಟವನ್ನೇ ಗಣಪಯ್ಯನವರು 1958ರಲ್ಲಿ ಪೂಣಚ್ಚನವರಿಗೆ ಕೊಟ್ಟರು. ಸಕಲೇಶಪುರದ ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಿ, ಮೂವತ್ತೈದು ಸಾವಿರ ರೂಗಳಿಗೆ ಪೂಣಚ್ಚ ಅದನ್ನು ಕೊಂಡುಕೊಂಡರು. ತೋಟಕ್ಕೆ ಗಣಪಯ್ಯನವರೇ “ಪೂರ್ಣಿಮಾ ಎಸ್ಟೇಟ್” ಎಂದು ಹೆಸರಿಟ್ಟರು.

ಪೂರ್ಣಿಮಾ ಎಸ್ಟೇಟ್ ಗೇಟ್ 1982 ರಲ್ಲಿ

ಗಣಪಯ್ಯನವರ ಇನ್ನೊಬ್ಬರು ಗೆಳೆಯರಾದ ಗ್ರೆಗೊರಿ ಮಥಾಯಿಸ್ ಅವರ ಶ್ರೀನಿವಾಸ ಎಸ್ಟೇಟ್, ಜೊತೆಗೆ, ಕ್ಯಾಮನಹಳ್ಳಿ ಗ್ರಾಮದ ಬಾವಲಿ ಮೂಲೆ ಎಸ್ಟೇಟ್, ಹಾರ್ಲೆ ಮ್ಯಾನೇಜ್‌ಮೆಂಟ್‌ನಲ್ಲಿ ಇದ್ದವು. ಹಾಗೆಯೇ ಕಾಲಾನಂತರದಲ್ಲಿ ಕಪ್ಪಳ್ಳಿ ಎಸ್ಟೇಟ್, ಮೇಲಳ್ಳಿ ದೊಡ್ಡನಾಗರ ಎಸ್ಟೇಟ್, ದೇವಾಲದಕೆರೆಯ ಬೈರಳ್ಳಿ ಎಸ್ಟೇಟ್, ಹೀಗೆ ಹಲವಾರು ತೋಟಗಳು ಗಣಪಯ್ಯನವರ ಸುಪರ್ದಿಗೆ ಬಂದವು.

ಈ ಎಸ್ಟೇಟುಗಳೆಲ್ಲ ಇವರ ಗೆಳೆಯರದ್ದು ಮತ್ತು ಬಂಧುಗಳದ್ದಾಗಿತ್ತು. ಬಹಳ ಜನರು ಇದರಿಂದ ಗಣಪಯ್ಯನವರಿಗೆ ಲಾಭವಾಗಿರಬಹುದು ಎಂದುಕೊಂಡರೆ ಅದು ನಿಜವಲ್ಲ. ಈ ಯಾವ ತೋಟಗಳ ಉಸ್ತುವಾರಿಯಿಂದ ಅವರು ಯಾವುದೇ ಮ್ಯಾನೇಜ್‌ಮೆಂಟ್ ಸಂಭಾವನೆ ಪಡೆಯುತ್ತಿರಲಿಲ್ಲ. ಎಲ್ಲವೂ ಸ್ವಸಂತೋಷದ ಉಚಿತ ಸೇವೆ. ಆದರೆ ಇದರಿಂದಾಗಿ ನೂರಾರು ಜನರಿಗೆ ಅನ್ನ, ಬದುಕು ಸಿಕ್ಕಿತು.

1861 ರಲ್ಲಿ ಮೇಜರ್ ಅಟ್ಲಿ ಕಟ್ಟಿಸಿದ ರಕ್ಷಿದಿ ಎಸ್ಟೇಟ್ ಬಂಗಲೆ

ಇದೆಲ್ಲದರ  ಜೊತೆಗೆ ಗಣಪಯ್ಯನವರ ಕಾರ್ಯಕ್ಷೇತ್ರ ವಿಸ್ತರಿಸುತ್ತಿತ್ತು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬೇರೆ ಬೇರೆ ಕಾರಣಕ್ಕೆ ಹಾರ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಸಕಲೇಶಪುರದಿಂದ ಮೂಡಿಗೆರೆ ರಸ್ತೆಯಲ್ಲಿ ಎಂಟು ಕಿ.ಮೀ ದೂರದಲ್ಲಿ ಹಾರ್ಲೆ ಕೂಡಿಗೆ ಸಿಗುತ್ತದೆ. ಅಲ್ಲಿಂದ ಮೂರು ಕಿ.ಮೀ ದೂರ ಸಾಗಿದರೆ ಹಾರ್ಲೆ ಎಸ್ಟೇಟ್ ದಾರಿಯಲ್ಲಿ ಅಡ್ಡಲಾಗಿ ಈಗ ಎತ್ತಿನಹೊಳೆ ಎಂದು ಪ್ರಖ್ಯಾತವಾಗಿರುವ “ಯೆತ್ನಳ್ಳ” ಸಿಗುತ್ತದೆ. ಅದಕ್ಕೆ ಸೇತುವೆ ಇರಲಿಲ್ಲ. ಬೇಸಗೆಯಲ್ಲಿ ಹೊಳೆಗೆ ಇಳಿದು ಗಾಡಿಗಳು ಹೋಗುತ್ತಿದ್ದವು ಮಳೆಗಾಲದಲ್ಲಿ ಹಾರ್ಲೆ, ಅದರಿಂದಾಚೆ, ಕುಂಬರಡಿ, ಬೆಂಬಳೆ, ಗೊಚ್ಚೆಗುಂಡಿ, ನಡಹಳ್ಳಿ, ದೇಕಲ, ಮಲ್ಲೇಗದ್ದೆ ಮುಂತಾದ ಊರುಗಳಿಗೆ ಸಂಪರ್ಕ ಕಡಿದು ಹೋಗುತ್ತಿತ್ತು. ಗಣಪಯ್ಯನವರು ಪ್ರಯತ್ನ ಮಾಡಿ ಸರ್ಕಾರದಿಂದ ಮಂಜೂರಾತಿ ಪಡೆದು 1958ರಲ್ಲಿ ಯೆತ್ನಳ್ಳಕ್ಕೆ ಒಂದು ಸೇತುವೆ ಮಾಡಿಸಿದರು. ಇದರಿಂದಾಗಿ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಸಾಧ್ಯವಾಯಿತು.

ಈ ವಿಸ್ತರಣೆಗಳಿಂದಾಗಿ ಗಣಪಯ್ಯನವರಿಗೆ ಎಲ್ಲವನ್ನೂ ನೋಡಿಕೊಳ್ಳಲು ಒಬ್ಬ ಸಮರ್ಥ ಮ್ಯಾನೇಜರ್‌ನ ಅಗತ್ಯವಿತ್ತು. ಮಿಡ್ಲಟನ್ ಕಾಲದಿಂದಲೇ ಇದ್ದ ಕೇಶವಮೂರ್ತಿ ಎಂಬವರು ಹಾರ್ಲೆಯನ್ನು ಬಿಟ್ಟು ಹಲಸೂರು ಎಂಬಲ್ಲಿ ಸ್ವಂತ ತೋಟ ಮಾಡಿದ್ದರು.

ಆಗ ಮ್ಯಾನೇಜರ್ ಆಗಿ ಬಂದವರು ಇಡ್ಯ ವಾಸುದೇವ ರಾವ್ ಎಂಬವರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನವರು. ವಾಸುದೇವರಾಯರ ತಂದೆ ಇಡ್ಯ ನಾರಾಯಣರಾವ್. ಅವರು ಹಲವಾರು ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡವರು. ಹಲವು ವಿದ್ಯಾಸಂಸ್ಥೆಗಳ ಸ್ಥಾಪನೆಗೂ ದುಡಿದಿದ್ದವರು, ಯಾವಾಗಲೂ ಒಂದು ಪಂಚೆ ಅಂಗಿ ಹಾಕದ ಬರಿಮೈ ಮತ್ತು ಬಿಳಿಯ ಟವಲ್ ಇಷ್ಟೇ ಅವರ ಉಡುಗೆ. ಜನರು ಅವರನ್ನು ಸುರತ್ಕಲ್ ಗಾಂಧಿ ಎಂದು ಕರೆಯುತ್ತಿದ್ದರು.

ಹಾರ್ಲೆ ತೋಟಗಳ ಉಸ್ತುವಾರಿಗೆ ಬಂದ ವಾಸುದೇವರಾವ್ ಉಗ್ರಮೂರ್ತಿಯೆಂದು ಹೆಸರಾದವರು. ಶೀಘ್ರಕೋಪಿ, ಆದರೆ ದಕ್ಷ ಹಾಗೂ ಪ್ರಾಮಾಣಿಕರೆಂದು ಹೆಸರಾಗಿದ್ದರು. ಅವರಿಗೆ ಕೃಷಿ ಅನುಭವ ಹೆಚ್ಚೇನೂ ಇರಲಿಲ್ಲ ಆದರೆ ಆಡಳಿತ ಮತ್ತು ಲೆಕ್ಕಪತ್ರಗಳಲ್ಲಿ ಅನುಭವಿ, ಎಲ್ಲವನ್ನೂ ಬಿಗಿಯಾಗಿ ತೂಗಿಸಿಕೊಂಡು ಹೋಗುತ್ತಿದ್ದರು. ಕೃಷಿಯ ವಿಷಯಕ್ಕೆ ಬಂದರೆ ಗಣಪಯ್ಯನವರ ಅಗಾಧವಾದ ಅನುಭವ ಅವರ ಬೆನ್ನಿಗಿತ್ತು.

ಆ ಕಾಲದಲ್ಲಿ ಕಾಫಿ ಎಸ್ಟೇಟುಗಳ ನಿರ್ವಹಣೆ ಇಂದಿನಂತಲ್ಲ ಜನರಲ್ಲಿ. ವಿದ್ಯಾಭ್ಯಾಸ ತೀರ ಕಡಿಮೆ. ಕೂಲಿಕಾರ್ಮಿಕರಲ್ಲಂತೂ ವಿದ್ಯೆ ಇಲ್ಲವೇ ಇಲ್ಲ. ಮ್ಯಾನೇಜರ್ ಆದವನು, ತೋಟದಲ್ಲಿ ಆಡಳಿತಗಾರ, ಪೋಲಿಸು, ನ್ಯಾಯಾಧೀಶ, ವೈದ್ಯ, ಆಪ್ತ ಸಮಾಲೋಚಕ, ಅಗತ್ಯ ಬಿದ್ದಾಗ ಡ್ರೈವರ್, ಮೆಕ್ಯಾನಿಕ್, ಎಲ್ಲವೂ ಆಗಿರಬೇಕಾಗುತ್ತಿತ್ತು. ಸಾಂಧರ್ಭಿಕವಾಗಿ ಬರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತಿತ್ತು. ಕೂಲಿ ಕಾರ್ಮಿಕರಲ್ಲಿ ಅನೇಕರಲ್ಲಿ ರಾತ್ರಿ ಕುಡಿದು ಗಲಾಟೆಗಳು ಆಗುವುದು ಸಾಮಾನ್ಯವಾಗಿತ್ತು. ಆಗ ಬರುವ ದೂರು,  ಪಂಚಾಯತಿ ಎಲ್ಲವನ್ನೂ ನಿಭಾಯಿಸಬೇಕಾಗುತ್ತಿತ್ತು.

ವಾಸುದೇವರಾವ್ ಇವುಗಳಲ್ಲಿ ಅನೇಕ ಸಮಸ್ಯೆಗಳನ್ನು ತಮ್ಮ ಅಬ್ಬರದ ಸ್ವರದಲ್ಲೇ ನಿಭಾಯಿಸಿಬಿಡುತ್ತಿದ್ದರು.

ಒಂದು ಸಂದರ್ಭವನ್ನು ಹೇಳಿದರೆ ಅವರ ವ್ಯಕ್ತಿತ್ವ ಅರ್ಥವಾದೀತು.

ಒಮ್ಮೆ ಕೆಲಸಗಾರನೊಬ್ಬ ಅವರಲ್ಲಿ ಕಂಟ್ರಾಕ್ಟ್ ಕೆಲಸದ ಹಣದ ಲೆಕ್ಕದ ವಿಚಾರಕ್ಕೆ ತಕರಾರೆತ್ತಿ ವಾದ ಮಾಡಿ ಗಣಪಯ್ಯನರಲ್ಲಿ ದೂರು ಕೊಟ್ಟ. ಅದಕ್ಕವರು, ವಾಸುದೇವರಾವ್ ಅವರಿಗೆ ಸುಮ್ಮನೆ ಯಾಕೆ ರಗಳೆ ಸ್ವಲ್ಪ ಸೇರಿಸಿ ಕೊಟ್ಟುಬಿಡಿ ಎಂದರು.

ಮ್ಯಾನೇಜರ್ ವಾಸುದೇವ ರಾವ್ (ಕನ್ನಡಕ ಧಾರಿ)

“ಕೊಡುವುದಿಲ್ಲ ಮ್ಯಾನೇಜರ್ ನಾನು ನೀವಲ್ಲ” ಎಂದು ಬಿಟ್ಟರು ಮ್ಯಾನೇಜರ್ ಸಾಹೇಬರು. ಗಣಪಯ್ಯ ಸುಮ್ಮನಾದರು.

ಅನೇಕ ವೇಳೆ ಇತರ ನೌಕರರಿಗೂ ವಾಸುದೇವರಾವ್ ಅವರರೊಂದಿಗೆ ಜಗಳವಾಗುತ್ತಿತ್ತು. ಈ ಎಲ್ಲವನ್ನೂ ಗಣಪಯ್ಯ ನಿಭಾಯಿಸಿಕೊಳ್ಳುತ್ತಿದ್ದರು. ವಾಸುದೇವರಾವ್ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಹಾರ್ಲೆಯಲ್ಲಿ ಸೇವೆ ಸಲ್ಲಿಸಿದರು. ಗಣಪಯ್ಯನವರ ಹಣಕಾಸಿನ ವ್ಯವಹಾರಗಳನ್ನು ಚೆನ್ನಾಗಿ ನೋಡಿಕೊಂಡರು. ಇದರಿಂದ ಗಣಪಯ್ಯ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಾಜಕಾರಣ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ವಾಸುದೇವರಾವ್ ಅವರ ದಕ್ಷ ಆಡಳಿತದ ಬೆಂಬಲ ಇದ್ದುದರಿಂದ ಸುಲಭವಾಯಿತು. ಹಾರ್ಲೆ ಎಸ್ಟೇಟ್ ಕರ್ನಾಟಕದ ಪ್ರತಿಷ್ಟಿತ ತೋಟಗಳಲ್ಲಿ ಒಂದಾಯಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು – 4: ಗಣಪಯ್ಯನವರು ಹಾರ್ಲೆ ಎಸ್ಟೇಟ್ ಮಾಲೀಕರಾಗಿದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...