Homeಅಂಕಣಗಳುಕಳೆದು ಹೋದ ದಿನಗಳು -32: ಗಣಪಯ್ಯನವರನ್ನು ಪ್ರಭಾವಿಸಿದ್ದ ಅಂಶಗಳು

ಕಳೆದು ಹೋದ ದಿನಗಳು -32: ಗಣಪಯ್ಯನವರನ್ನು ಪ್ರಭಾವಿಸಿದ್ದ ಅಂಶಗಳು

- Advertisement -
- Advertisement -

1968 ರಲ್ಲೇ ಗಣಪಯ್ಯನವರು ವಿ.ಟಿ.ಶ್ರೀನಿವಾಸನ್, ಬಿ.ವಿ ನಾರಾಯಣ ರೆಡ್ಡಿ ಮುಂತಾದವರೊಡನೆ ಸೇರಿ ಬೆಂಗಳೂರು ಎಜುಕೇಷನ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದರು. ಜನರಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ವಿಚಾರಗಳ ಅರಿವನ್ನು ಹೆಚ್ಚಿಸುವುದು ಈ ಟ್ರಸ್ಟ್‌ನ ಉದ್ದೇಶವಾಗಿತ್ತು.

ದೇಶದ ಅಭಿವೃದ್ಧಿಗೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಅತ್ಯಂತ ಅಗತ್ಯ ಮತ್ತು ಮುಖ್ಯವಾದದ್ದೆಂಬ ರಾಜಾಜಿಯವರ ಸಿದ್ಧಾಂತದ ಹಿನ್ನೆಲೆಯ ವೈಚಾರಿಕತೆಯನ್ನು ಜನರಲ್ಲಿ ಮತ್ತೆ ಪ್ರಚುರ ಪಡಿಸುವ ಉದ್ದೇಶದಿಂದ 1983 ರಿಂದ ರಾಜಾಜಿಯವರ ನೆನಪಿನ ಉಪನ್ಯಾಸ ಮಾಲೆಯನ್ನು ಪ್ರಾರಂಭಿಸಿ, ಆ ಎಲ್ಲಾ ಉಪನ್ಯಾಸಗಳನ್ನು ಮುದ್ರಿಸಿ ಉಚಿತವಾಗಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಹಂಚುವ ಕೆಲಸವನ್ನು ಟ್ರಸ್ಟ್ ಪ್ರಾರಂಭಿಸಿತ್ತು. ಟ್ರಸ್ಟ್‌ನ ಅಧ್ಯಕ್ಷರಾಗಿ ಅದರ ಹೆಚ್ಚಿನ ಹೊಣೆಯನ್ನು ಗಣಪಯ್ಯನವರೇ ಹೊತ್ತಿದ್ದರು. ಈ ಮಾಲಿಕೆಯ ಪ್ರಥಮ ಭಾಷಣ ಎಂ.ಆರ್ ಪೈ ಅವರದ್ದಾಗಿತ್ತು.

*********

ಇದು ರಾಜಾಜಿಯವ ಮಾತುಗಳ ಒಂದು ತುಣುಕು…….

“ಭಾರತದಲ್ಲಿ ಮತ್ತೊಂದು ಆಂಶವನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕು. ಪ್ರಾದೇಶಿಕ ಹಿತಾಸಕ್ತಿಗಳು ರಾಜಕಾರಣದ ಹಲವಾರು ವಿಚಾರಗಳಲ್ಲಿ ಕೇಂದ್ರದ ವಿರುದ್ಧವೆನಿಸುವ ಸಂದರ್ಭಗಳಿವೆ. ಇಷ್ಟೊಂದು ಬೃಹತ್ತಾದ ವೈವಿದ್ಯಮಯ ದೇಶದಲ್ಲಿನ ವಿಭಿನ್ನ ಹಿತಾಸಕ್ತಿಗಳು ಮತ್ತು ಅಭಿವೃದ್ಧಿಯ ಪ್ರಶ್ನೆಗಳು, ಹಲವಾರು ವಿಚಾರಗಳಲ್ಲಿ ಪರಸ್ಪರ ವೈರುದ್ಯಗಳು ಅಭಿವೃಧ್ದಿಯ ಜೊತೆ ಇತರ ಹಲವಾರು ವಿಷಯಗಳಿಗೂ ತೊಡಕಾಗುವ ಸಂಭವಗಳಿವೆ.

ಇದಕ್ಕೆ ಪರಿಹಾರವೆಂದರೆ ಪ್ರಾದೇಶಿಕ ಭಾವನೆಗಳನ್ನು ದೂರುವುದರ ಬದಲಿಗೆ ರಾಜ್ಯಗಳಿಗೆ ಹೆಚ್ಚಿನ  ಸ್ವಾಯತ್ತತೆಯನ್ನು ಕೊಡುವುದು. ಇದರಿಂದ ಪ್ರಾದೇಶಿಕ ಭಾವನೆಗಳು ಕಡಿಮೆಯಾಗುತ್ತವೆ ಮತ್ತು ಕೇಂದ್ರದ ಮೇಲೆ ಈ ಭಾವನೆಗಳ ಪರಿಣಾಮದ ಒತ್ತಡಗಳೂ ಕಡಿಮೆಯಾಗುತ್ತವೆ.

ಈಗಿನಂತೆ ಕೆರೆ ಕಟ್ಟುವುದು, ಶಾಲೆಗಳ ನಿರ್ಮಾಣ, ಸಮಾಜಸೇವಾ ಕೇಂದ್ರಗಳನ್ನೂ ಕೇಂದ್ರವೇ ಮಾಡುತ್ತ ಕೂರುವ ಬದಲಿಗೆ, ವಿಶಾಲವಾದ ದೇಶಕ್ಕೆಲ್ಲ ಅನ್ವಯಿಸುವ ವಿಚಾರಗಳತ್ತ ಮಾತ್ರ ಒಕ್ಕೂಟ ಸರ್ಕಾರ ಗಮನಹರಿಸಬೇಕು.

ಇದು ಉತ್ಪ್ರೇಕ್ಷೆಯೆಂದು ಅನ್ನಿಸಬಹುದು. ಆದರೆ ಇತ್ತೀಚೆಗೆ ಎಲ್ಲ ಅಧಿಕಾರಗಳೂ ಕೇಂದ್ರದಲ್ಲಿ ಕೇಂದ್ರಿಕೃತವಾಗುತ್ತಿರುವುದು ಹಾಸ್ಯಾಸ್ಪದವೂ ಹಾಗೂ ನಮ್ಮನ್ನು ಎಚ್ಚರಿಸುವಂತದ್ದೂ ಆಗಿದೆ.”

ಮತ್ತು ಅವರು ಬಳಸಿದ ಪದಗಳನ್ನು ಗಮನಿಸಬೇಕು ಅವರು ರಾಜ್ಯ ಕೇಂದ್ರ ಸಂಬಂಧದ ಬಗ್ಗೆ ಹೇಳುವಾಗ ಸೆಂಟರ್ ಎಂಡ್ ಸ್ಟೇಟ್ ಎಂದೂ ಸರ್ಕಾರಗಳ ಬಗ್ಗೆ ಹೇಳುವಾಗ ಸ್ಟೇಟ್ ಗೌರ್ನಮೆಂಟ್ ಮತ್ತು ಯೂನಿಯನ್ ಗೌರ್ನಮೆಂಟ್ ಎಂದೇ ಸ್ಪಷ್ಟವಾಗಿ ಹೇಳುತ್ತಾರೆ.

ನಿಜವಾದ ಅರ್ಥದ ಬಲಪಂಥೀಯ ಆರ್ಥಿಕತೆಯ ಪ್ರತಿಪಾದಕರಾಗಿದ್ದ ರಾಜಾಜಿ ಮತ್ತು ಅವರ ಸ್ವತಂತ್ರ ಪಾರ್ಟಿ ಕೂಡಾ ಕಾನೂನು ಮತ್ತು ಸುವ್ಯವಸ್ಥೆ, ರಕ್ಷಣೆ, ಅಂಚೆ, ಕರೆನ್ಸಿ ಮುಂತಾದವಲ್ಲದೆ ಮುಖ್ಯವಾಗಿ ಆರೋಗ್ಯ, ಶಿಕ್ಷಣ, ರಸ್ತೆಗಳು, ಸಂಪರ್ಕ ಜಾಲಗಳು, ಪರಿಸರ ಮತ್ತು ಅರಣ್ಯ ಆರ್ಥಿಕ ಸಂಬಂಧಗಳನ್ನು ನಿಯಂತ್ರಿಸುವ ಕಾನೂನುಗಳು ಸರ್ಕಾರದ ಕೈಯಲ್ಲೇ ಇರಬೇಕು ಎನ್ನುತ್ತಾರೆ.

ಹಾಗೆಯೇ “ಎಲ್ಲಿಯವರೆಗೆ ದೇಶದ ರೈತರು, ಕುಶಲಕರ್ಮಿಗಳು ಮತ್ತು ನೇಕಾರರರು ಮತ್ತಿತರರು, ದಮನಿಸಲ್ಪಟ್ಟು ಎಲ್ಲ ಭಾರವನ್ನು ಹೊತ್ತುಕೊಳ್ಳುವ ಪರಿಸ್ಥಿತಿ ಇರುತ್ತದೆಯೋ ಅಲ್ಲಿಯವರೆಗೆ ದೇಶ ಅಭ್ಯುದಯ ಹೊಂದಲು ಸಾಧ್ಯವಿಲ್ಲ ಎನ್ನುತ್ತಾರೆ.

ಇದರೊಂದಿಗೆ, ಕಾರ್ಮಿಕ ಕಲ್ಯಾಣ ಯೋಜನೆಗಳು, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸರಿಯಾದ ಕಾನೂನು, ಕಾರ್ಮಿಕರ ಶೋಷಣೆಯ ವಿರುದ್ಧ ರಕ್ಷಣೆ ಮುಂತಾದವುಗಳು.

ಗ್ರಾಹಕ ಹಿತರಕ್ಷಣೆಯ ನಿಯಮಗಳು, ಪರಿಸರ ರಕ್ಷಣೆಯ ಕೆಲಸಗಳು ಮತ್ತು ಕಾನೂನಾತ್ಮಕ ಕ್ರಮಗಳು ಇವೆಲ್ಲವನ್ನೂ ಅವರು ಒತ್ತಿ ಹೇಳಿದ್ದಾರೆ.

(ಇಂದು ನಾವು ಬಲಪಂಥೀಯವೆಂದು ಕರೆಯುವ ಸರ್ಕಾರಗಳ ಕ್ರಮ ಮತ್ತು ಆಡಳಿತದ ಜೊತೆ ಈ ಮೇಲಿನ ಎಲ್ಲ ವಿಚಾರಗಳನ್ನು ಹೋಲಿಸಿ ನೋಡಬೇಕು)

ಸ್ವತಂತ್ರ ಪಾರ್ಟಿ ಹುಟ್ಟಿದ್ದು 1959 ರಲ್ಲಿ. 1967ವೇಳೆಗಾಗಲೇ ಅದು ಅಧಿಕೃತವಾಗಿ ಲೋಕಸಭೆಯಲ್ಲಿ ವಿರೋಧ ಪಕ್ಷವಾಗಿ ಹೊರ ಹೊಮ್ಮಿದ್ದು ಮಾತ್ರವಲ್ಲ ಅಂದಿನ ಹಲವಾರು ಚಿಂತಕರನ್ನು ಬುದ್ಧಿಜೀವಿಗಳನ್ನು ಆಕರ್ಷಿಸಿತ್ತು.

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಎಡಪಂಥೀಯ, ಲೋಹಿಯಾವಾದಿ ಪಕ್ಷವಾದ ಪ್ರಜಾ ಸೋಷಲಿಸ್ಟ್ ಪಾರ್ಟಿ, ಈ ಸ್ವತಂತ್ರ ಪಾರ್ಟಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು ಎನ್ನುವುದು.

ಈ ಸರಣಿಯಲ್ಲಿ ಉಲ್ಲೇಖವಾದ ಕೊಡಗಿನ ಸಾಕಮ್ಮ, ಸಿ.ಎಂ. ಪೂಣಚ್ಚ, ಬೇಳೂರು ಗುರಪ್ಪ, ಗುಂಡುಕುಟ್ಟಿ ಮಂಜುನಾಥಯ್ಯ, ವೆಂಕಟಸುಬ್ಬಯ್ಯ, ಎಸ್ ಎಸ್ ರಾಮಮೂರ್ತಿ, ಹಾರ್ಲೆ ಗಣಪಯ್ಯ, ಹಾದಿಗೆ ಶಾಂತಪ್ಪ, ವಾಸಣ್ಣ ಶೆಟ್ಟರು, ಶಾಫ್ ಬಸಪ್ಪ ಮುಂತಾದ ರಾಜಕೀಯ ವಲಯದವರು ಶಿವರಾಮ ಕಾರಂತ, ಹರದಾಸ ಅಪ್ಪಚ್ಚಕವಿ, ಭಾರತೀಸುತ, ಐ.ಮಾ. ಮುತ್ತಣ್ಣ, ಕೊಡಗಿನ ಗೌರಮ್ಮಮುಂತಾದ ಸಾಹಿತ್ಯ ವಲಯದವರು ಮತ್ತು ಇಲ್ಲಿ ಉಲ್ಲೇಖವಾಗದ ಹಲವಾರು ಜನರು. ಇವರೆಲ್ಲರೂ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಇದ್ದವರು ಕೂಡಾ.  ಆದರೆ ಅವರೆಲ್ಲರ ಬದುಕಿನ ವಿನ್ಯಾಸದ ಹಿಂದೆ ಇದ್ದವರು ಮತ್ತು ಬದುಕನ್ನು ರೂಪಿಸಿದವರು ಗಾಂಧೀಜಿ.

ಗಾಂಧಿ ಎಂಬ ಸೂತ್ರ ಅವರೆಲ್ಲರನ್ನು ಒಂದಾಗಿಸಿದೆ. ತುಂಡು ಬಟ್ಟೆಯ ಫಕೀರ ಅಂದಿನ ಭಾರತೀಯರ ಮನಸ್ಸುಗಳನ್ನು ಆವರಿಸಿಕೊಂಡ ರೀತಿ ಆಶ್ಚರ್ಯ ಮೂಡಿಸುತ್ತದೆ.

ರಾಜಾಜಿ ಕೂಡಾ ನೆಹರೂ ಸರ್ಕಾರದ ನೀತಿಗಳ ಮತ್ತ ಆಡಳಿತ ಬಗ್ಗೆ ಮತ್ತು ವಿರೋಧಿಯಾಗಿದ್ದರೇ ವಿನಃ ಗಾಂಧಿಮಾರ್ಗವೇ ಅಂತಿಮ ಎಂಬ ಬಗ್ಗೆ ಅವರಲ್ಲಿ ಅನುಮಾನವಿರಲಿಲ್ಲ.

ಹಾಗಾಗಿ ಅವರು ಗಾಂದೀಜಿಯ ಟ್ರಸ್ಟೀ ಶಿಫ್ ಸಮಾಜವಾದದ ಅತ್ಯಂತ ಸಮರ್ಥಕರೂ ಆಗಿದ್ದರು. ಸರ್ಕಾರ ಮತ್ತು ಉದ್ಯಮಿಗಳು ತಮ್ಮಲ್ಲಿ ಸಂಗ್ರಹವಾಗುವ ಸಂಪತ್ತಿನ ನಿಜವಾದ ಧರ್ಮದರ್ಶಿಗಳಾಗಬೇಕೆಂಬ ವಿಚಾರವನ್ನು ಅವರು  ಬಲವಾಗಿ ನಂಬಿದ್ದರು. ಆದ್ದರಿಂದಲೇ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆ ಅತ್ಯಂತ ಪ್ರಮುಖವಾದ ಮೌಲ್ಯವೆಂದು ಪ್ರತಿಪಾದಿಸಿದರು.

ಸರ್ಕಾರ ಯಾವುದೇ ಇರಲಿ ತನ್ನ ಅಭಿಪ್ರಾಯ ಸರಿಯೆನಿಸಿದಾಗ ಅದು ಜನಪರವಾಗಿದ್ದಾಗ, ಧೈರ್ಯವಾಗಿ, ಮುಕ್ತವಾಗಿ ಹೇಳಬೇಕೆಂಬುದಕ್ಕೆ ರಾಜಾಜಿಯವರೇ ಉದಾಹರಣೆಯಾಗಿದ್ದರು. ಬ್ರಿಟಿಷ್ ಸರ್ಕಾರದ ತಪ್ಪು ನೀತಿಗಳನ್ನು, ಹಲವು ಸ್ನೇಹಿತರು ಇದರಿಂದ ನಿಮಗೆ ತೊಂದರೆಯಾಗಬಹುದೆಂದು ಎಚ್ಚರಿಸಿದಾಗಲೂ ಹಿಂಜರಿಯದೆ ರಾಜಾಜಿಯವರು ಧೈರ್ಯದಿಂದ ಹೇಳಿದ್ದರು.

ರಾಜಾಜಿಯವರ ಈ ಎಲ್ಲ ಗುಣಗಳು ಮತ್ತು ವಿಚಾರಗಳು ಸಹಜವಾಗಿಯೇ ಗಣಪಯ್ಯನಂತವರನ್ನು ಆಕರ್ಷಿಸಿದೆ. ಯಾಕೆಂದರೆ ಒಂಬತ್ತನೇ ತರಗತಿಯಲ್ಲಿದ್ದಾಗಲೇ ಬ್ರಿಟಿಷ್ ಅಧಿಕಾರಿಯ ತಪ್ಪು ನಿರ್ಧಾರದ ವಿರುದ್ಧ ಪತ್ರಿಕೆಗೆ ಲೇಖನ ಬರೆದವರು ಗಣಪಯ್ಯ.

ಈ ಎಲ್ಲದರೊಂದಿಗೆ ದಲಿತರಿಗೆ ಜಮೀನು ಮಾಡಿಕೊಡುವ ಯೋಚನೆ ಗಣಪಯ್ಯನವರಿಗೆ ಗಾಂಧಿಯಿಂದ ಬಂದಿದ್ದೇ? ಇಲ್ಲಿ ಕುತೂಹಲಕಾರಿಯಾದ ಅಂಶವೊಂದಿದೆ. ರಾಜಾಜಿಯವರಿಗೂ ಕುದ್ಮುಲ್ ರಂಗರಾಯರಿಗೂ ಒಂದು ಸಂಬಂಧದ ಎಳೆ. ಕುದ್ಮುಲ್ ರಂಗರಾಯರ ಮಗಳು ರಾಧಾಬಾಯಿಯವರ (ಅವರು ಸಣ್ಣ ವಯಸ್ಸಿನಲ್ಲೇ ವಿಧವೆಯಾಗಿದ್ದರು) ಎರಡನೆಯ ಮದುವೆಯನ್ನು ತಮಿಳುನಾಡಿನ ಪಿ.ಸುಬ್ಬರಾಯನ್ ಕುಮಾರಮಂಗಳಂ ಅವರೊಂದಿಗೆ, ನಿಂತು ನೆರವೇರಿಸಿಕೊಟ್ಟದ್ದು ರಾಜಾಜಿಯವರು. ಅದೊಂದು ಅಂತರ್ಜಾತೀಯ ಮತ್ತು ವಿಧವಾ ವಿವಾಹವಾಗಿತ್ತು. ಆ ಮದುವೆಯ ನಂತರ ಸ್ವತಃ ರಾಜಾಜಿ ಗಾಂಧೀಜಿ ಜೊತೆ ಕೌಟುಂಬಿಕ ಸಂಬಂಧ ಬೆಳೆಸಿದರು. ಆ ನಂತರ ಗಾಂಧೀಜಿ ತಾನು ಅಂತರ್ಜಾತಿ ಮದುವೆಗಳಿಗೆ ಮಾತ್ರ ಹೋಗುವೆನೆಂದು ನಿರ್ಣಯಿಸಿಕೊಂಡರು. ರಾಜಾಜಿಯವರ ಬದುಕಿನ ಈ ಎಲ್ಲ ಅಂಶಗಳೂ ಗಣಪಯ್ಯನವರನ್ನು ಪ್ರಭಾವಿಸಿರಬೇಕು.

ಹಾಗಾಗಿಯೇ ಗಣಪಯ್ಯ ಜಾತಿಬೇಧವಿಲ್ಲದ ಅನೇಕ ಮದುವೆಗಳಿಗೆ ಸಹಾಯ ಮಾಡಿದ್ದಾರೆ. ನಾವು ಪ್ರೀತಿಸಿದ್ದೇವೆ ಎಂದು ಬಂದವರಿಗೆ ಮದುವೆಯಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ.

ಶಿವರಾಮಕಾರಂತರು ಒಮ್ಮೆ ತಮ್ಮ ಚೋಮನ ದುಡಿಯ ಬಗ್ಗೆ ಮಾತಾಡುತ್ತ ಕೃಷಿಕರಾಗಬೇಕೆಂಬ ದಲಿತರ ಕನಸು ಹಾಗೆಯೇ ಉಳಿದಿದೆ. ಎಲ್ಲೋ ಅಲ್ಲೊಬ್ಬ ದಲಿತ ಕೃಷಿಯನ್ನು ಮಾಡುತ್ತಿರಬಹುದು, ಆದರೆ ಒಂದು ಸಮುದಾಯವಾಗಿ ದಲಿತರು ಕೃಷಿಕರಾಗಿಲ್ಲ ಎಂದಿದ್ದರು.

ದಲಿತರನ್ನು ಕೃಷಿಕರಾಗಿಸುವಲ್ಲಿನ ಗಣಪಯ್ಯನವರ ಪ್ರಯತ್ನಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಆಗ ಅದರ ಮಹತ್ವ ಅರಿವಾಗುತ್ತದೆ.

ಈ ಎಲ್ಲ ಕೆಲಸಗಳನ್ನು ನಾವು ಗಾಂಧೀಜಿಯ ಮನಪರಿವರ್ತನೆಯ, ಹಾಗೂ ಶ್ರೀಮಂತರರು ತಮ್ಮ ಸಂಪತ್ತಿನ ಧರ್ಮದರ್ಶಿಗಳಾಗಬೇಕೆಂಬ “ಟ್ರಸ್ಟೀ ಶಿಪ್ ಸಮಾಜವಾದ” ಹಿನ್ನೆಲೆಯಲ್ಲಿ ನೋಡಿದರೆ ಆ ಸಿದ್ಧಾಂತದ ಮಿತಿಗಳೂ ಕೂಡ ಗೋಚರವಾಗುತ್ತದೆ.

ಯಾಕೆಂದರೆ “ಟ್ರಸ್ಟೀ ಶಿಪ್ ಸಮಾಜವಾದ” ನಿಂತಿರುವುದೇ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಯ ಆಧಾರದ ಮೇಲೆ. ಅಂತಹ “ಸಚ್ಛಾರಿತ್ರದ ವ್ಯಕ್ತಿಗಳು” ಇದ್ದಲ್ಲಿ ಅದು ಪರಿಣಾಮಕಾರಿ ಎನ್ನಿಸಬಹುದು. ಆದರೆ ನಾವು ಈ ಎಲ್ಲ ಗುಣಗಳನ್ನು ಸಾರ್ವತ್ರಿಕವಾಗಿ ಕಾಣುವುದು ಕಷ್ಟ. ಆದ್ದರಿಂದ ವ್ಯಕ್ತಿಯೊಬ್ಬನ ಮಿತಿಯೇ ಈ ವಿಚಾರಗಳ ಅನುಷ್ಟಾನದ ಮಿತಿಯೂ ಆಗಿಬಿಡುತ್ತದೆ.

ಆಗ ನಮಗೆ ದಾರಿ ತೋರುವವರು ಬಾಬಾ ಸಾಹೇಬರು. ಅಂಬೇಡ್ಕರರ ಸಂವಿಧಾನ ಮತ್ತು ಸಾಂವಿಧಾನಿಕವಾಗಿಯೇ ಸಮಾಜದ ಬದಲಾವಣೆ ನಮಗಿರುವ ಅನಿವಾರ್ಯ ಮತ್ತು ಏಕೈಕ ದಾರಿಯಾಗುತ್ತದೆ. ಆಗ ಗಾಂಧೀಜಿ ನಮಗೆ ದಾರಿಯ ಪಕ್ಕದಲ್ಲಿ ನಿಂತು ಬೆಳಕು ನೀಡುವ ದೀಪವಾಗಿರುತ್ತಾರೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು- 2: ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಸಾಕಮ್ಮ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...