ಕನ್ನಡ ಚಿತ್ರರಂಗದಲ್ಲಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಬಿ.ಜಯಾ, ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಗುರುವಾರ (ಜೂ.3) ಮಧ್ಯಾಹ್ನ ತಮ್ಮ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಕನ್ನಡ ಚಿತ್ರರಂಗ, ಅಭಿಮಾನಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಖ್ಯಾತ ನಟಿ ಜಯಾ ಅವರಿಗೆ 77 ವರ್ಷ ವಯಸ್ಸಾಗಿತ್ತು.
ಚಿತ್ರರಂಗಕ್ಕೆ ಬಾಲನಟಿಯಾಗಿ 1958ರಲ್ಲಿ ಭಕ್ತ ಪ್ರಹ್ಲಾದ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಜಯಾ ಅವರು, ಸುಮಾರು 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 6 ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಜಯಾ ಅವರು ಮುಖ್ಯವಾಗಿ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಹಾಸ್ಯನಟಿ ಎಂದು ಜನಪ್ರಿಯರಾಗಿದ್ದರು.
ಇದನ್ನೂ ಓದಿ: ಕನ್ನಡವನ್ನು ಕೊಳಕು ಭಾಷೆ ಎಂದು ತೋರಿಸಿದ್ದ ವೆಬ್‌ಸೈಟ್, ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್
ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದ ಜಯಾ ಅವರು, ಹಾಸ್ಯ ಕಲಾವಿದೆಯಾಗಿ, ಪೋಷಕ ನಟಿಯಾಗಿ ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದರು. ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿರುವ ಹೆಗ್ಗಳಿಕೆ ಅವರದು.
ವರನಟ ರಾಜ್ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ನರಸಿಂಹರಾಜು, ದ್ವಾರಕೀಶ್ ಮುಂತಾದವರೊಂದಿಗೆ ಕೆಲಸ ಮಾಡಿರುವ ಇವರು, ಇಂದಿನ ನಟರ ಚಿತ್ರಗಳಲ್ಲೂ ಕೆಲಸ ಮಾಡಿದ್ದರು.
ನಟ ಅಂಬರೀಶ್ ನಟನೆಯ ‘ಗೌಡ್ರು’ ಚಿತ್ರದಲ್ಲಿ ಜಯಾ ಅವರ ಅಭಿನಯಕ್ಕಾಗಿ 2004-5ನೇ ಸಾಲಿನ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು. ಚಿತ್ರಪ್ರೇಮಿಗಳ ಸಂಘದಿಂದ 1964, 65, 71, 75 ರಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.
’ಗಂಧದ ಗುಡಿ’, ‘ಶುಭಮಂಗಳ’, ‘ದಾರಿ ತಪ್ಪಿದ ಮಗ’, ‘ಪ್ರೇಮದ ಕಾಣಿಕೆ’ ವೀರ ಕನ್ನಡಿಗ, ‘ದೈವಲೀಲೆ’, ‘ವಿಧಿ ವಿಲಾಸ’, ‘ಬೆಳ್ಳಿಮೋಡ’, ‘ಚಿನ್ನದ ಗೊಂಬೆ’, ‘ಪ್ರತಿಜ್ಞೆ’, ‘ನ್ಯಾಯವೇ ದೇವರು’, ‘ಕುಲಗೌರವ’, ‘ಪೂರ್ಣಿಮಾ’, ‘ಮಣ್ಣಿನ ಮಗ’, ‘ಶ್ರೀಕೃಷ್ಣ ದೇವರಾಯ’, ‘ದೇವರು ಕೊಟ್ಟ ತಂಗಿ’ ಮುಂತಾದ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಿ.ಜಯಾ ನಟಿಸಿದ್ದರು.
ಇದನ್ನೂ ಓದಿ: ಹೊಸ ಗೌಪ್ಯತಾ ನೀತಿಗೆ ಕುತಂತ್ರದಿಂದ ಒಪ್ಪಿಗೆ ಪಡೆಯುತ್ತಿದೆ: ಕೇಂದ್ರದಿಂದ ವಾಟ್ಸಪ್ ವಿರುದ್ದ ಹೊಸ ಅಫಿಡವಿಟ್



Shivu.patil age23 katakabhavi mors