Homeಮುಖಪುಟಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ: ಪ್ರೊ.ಶಿವರಾಮಯ್ಯ

ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ: ಪ್ರೊ.ಶಿವರಾಮಯ್ಯ

ಪಂಪಾದಿ ಕವಿಗಳು ಕಟ್ಟಿ ಬೆಳೆಸಿದ ಈ ಕನ್ನಡ ರಾಷ್ಟ್ರೀಯತೆಯು 12ನೇ ಶತಮಾನದ ಕಳಚೂರ್ಯ ಬಿಜ್ಜಳನ ವಚನಕಾರರ ಸಂದರ್ಭದಲ್ಲಿ ಇನ್ನಷ್ಟು ಉಜ್ವಲವಾಗಿ ತೊಳಗಿ ಬೆಳಗಿತು. 'ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಮಾತು ಅರ್ಥ ಸಂಪನ್ನತೆ ಪಡೆಯಿತು.

- Advertisement -
- Advertisement -

ಕರ್ಣ ವ್ಯಾಯಾಮ ರಂಗಪ್ರವೇಶ ಮಾಡಿದ ಸನ್ನಿವೇಶ. ಗುರುದ್ರೋಣರು ಕೌರವ-ಪಾಂಡವ ಕುಮಾರರಿಗೆ ಧನುರ್ವಿದ್ಯಾಭ್ಯಾಸ ನಿರತರಾಗಿದ್ದಾರೆ. ಆ ದಿನ ಅವರಲ್ಲಿ ಯಾರು ಶ್ರೇಷ್ಠ ಬಿಲ್ಲುಗಾರ ಎಂಬ ಬಗ್ಗೆ ಪಂದ್ಯಾವಳಿ ಏರ್ಪಟ್ಟಿದೆ. ಸಕಲ ಪುರಜನ ನೆರೆದಿದ್ದಾರೆ. ಆ ಸಮಯಕ್ಕೆ ಕರ್ಣನ ಪ್ರವೇಶ. ಬಂದವನು ನಾನೂ ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದೇ ಎಂದು ಕೇಳುತ್ತಾನೆ. ಬಿಲ್ವಿದ್ಯೆಯಲ್ಲಿ ಅರ್ಜುನನೇ ಸರ್ವಶ್ರೇಷ್ಠ ಎಂಬ ಮಾತು ಗಾಳಿಯಲ್ಲಿತ್ತು. ಆದ್ದರಿಂದ ಕರ್ಣ ಅವನ ಬಳಿಯೇ ನೇರವಾಗಿ ಹೋಗಿ ಏನು ಅರ್ಜುನ ನನ್ನೊಡನೆ ಸ್ಪರ್ಧೆಗೆ ತಯ್ಯಾರಿ ಇರುವೆಯಾ ಎಂದು ಕೇಳುವನು. ಆಗ ಯುವ ಸಹಜ ಪೈಪೋಟಿಯ ಆಸೆಯಿಂದ ಅರಿಕೇಸರಿಯು ‘ಆಗಲಿ ಏಕೆ ತಡ’? ಎಂದು ಕರ್ಣನಿಗೆ ಆಹ್ವಾನಿಸುವನು. ಆದರೆ ಅಷ್ಟರಲ್ಲಿ ದ್ರೋಣ ಮತ್ತು ಕೃಪರು ಮಧ್ಯೆ ಪ್ರವೇಶಿಸಿ ‘ಏನು ಕರ್ಣ? ನಿನ್ನ ಹುಟ್ಟಿನ ಮೂಲವನ್ನು ಭಾವಿಸದೆ ಕ್ಷತ್ರಿಯ ಕುಮಾರರೊಂದಿಗೆ ಸ್ಪರ್ಧೆಗೆ ಸಾಧ್ಯವೆ? ನಿನಗೂ ಅರಿಕೇಸರಿಗೂ ಇರುವ ಸರಿ ಸಮಾನತೆ ಯಾವುದು? ಎಂದು ಕರ್ಣ ಸೂತಪುತ್ರ ಎಂಬುದನ್ನು ಪ್ರೇಕ್ಷಕವೃಂದವು ಕೇಳುವಂತೆ ಹೀಯ್ಯಾಳಿಸಿಬಿಡುವರು. ಆಗ ಕರ್ಣನ ಸ್ಥಿತಿ ‘ಪಂದೆಯಂ ಪಾವಡರ್ದಂತೆ (ಅಂಜುಬುರುಕನ ಮೇಲೆ ಹಾವು ಹರಿದಂತೆ) ಆಗುವುದು. ಆದರೂ ಕುಂತಿ ತುಟಿ ಬಿಚ್ಚುವುದಿಲ್ಲ. ವ್ಯವಸ್ಥೆ ಅವಳ ಬಾಯಿಕಟ್ಟಿದೆ.

ಆಗ ಇದೆಲ್ಲವನ್ನೂ ವೀಕ್ಷಿಸುತ್ತಿದ್ದ ವೀರ ಪಕ್ಷಪಾತಿ ದುರ್ಯೋಧನನು ಮಿಂಚಿನಂತೆ ಎದ್ದು ಬಂದು ಗುರುಗಳ ಮಾತಿಗೆ ಅಸಮಾಧಾನಗೊಂಡು

ಕುಲಮೆಂಬುದುಂಟೆ-
ಬೀರಮೆ ಕುಲಮಲ್ಲದೆ?
ಕುಲಮನಿಂತು ಪಿಕ್ಕದಿರಿಂ-
ನೀಮ್ ಒಲಿದೆಲ್ಲಿ ಪುಟ್ಟಿ ಬೆಳೆದಿರೊ’?
ಕುಲಮಿರ್ದುದೆ ಕೊಡದೊಳಂ ಶರಸ್ತಂಭದೊಳಂ? (ಆ.2-83)

‘ವೀರವೇ ಕುಲವಲ್ಲದೆ ಕುಲವೆನ್ನುವುದು ಬೇರೆ ಉಂಟೆ? ಹೀಗೆ ಕರ್ಣನ ಕುಲವನ್ನು ಎತ್ತಿ ಆಡದಿರಿ’ ನೀವು (ದ್ರೋಣ-ಕೃಪರು) ಪ್ರೀತಿಸಿ ಎಲ್ಲಿ ಹುಟ್ಟಿ ಬೆಳೆದಿರೋ? ಏನು ಕೊಡದಲ್ಲೂ ದರ್ಭೆ ಹುಲ್ಲಿನಲ್ಲೂ ಕುಲವಿರುವುದೇ? ಎಂದು ಅವರ ಬಾಯಿ ಮುಚ್ಚಿಸುತ್ತಾನೆ. ಎಂದರೆ ಜಾತಿವ್ಯವಸ್ಥೆಗೆ ತಡೆ ಹಾಕಲು ಯತ್ನಿಸುತ್ತಾನೆ. ಅಷ್ಟೇ ಅಲ್ಲ. ಆ ಕೂಡಲೇ ಕರ್ಣ ಅಂಗರಾಜ್ಯಕ್ಕೆ ರಾಜನೆಂದು ಘೋಷಿಸಿ, ಸಕಲ ವೈಭವದೊಂದಿಗೆ ಅವನಿಗೆ ಅಂಗರಾಜ್ಯ ಪಟ್ಟಾಭಿಷೇಕ ಮಾಡುತ್ತಾನೆ.

ಆಗ ಅಂತಃಕರಣಪೂರ್ವಕವಾಗಿ ಅವನನ್ನು ಆಲಂಗಿಸಿದ ದುರ್ಯೋಧನ ಹೀಗೆ ಹೇಳುತ್ತಾನೆ :

ಪೊಡಮಡುವರ್ ಜೀಯೆಂಬರ್ |
ಕುಡು ದಯೆಗೆಯ್ಯೇಂ ಪ್ರಸಾದಮೆಂಬಿವು ಪೆರರೋಳ್ ||
ನಡೆಗೆಮ್ಮ ನಿನ್ನಯೆಡೆಯೊಳ್ |
ನಡೆಯಲ್ವೇಡೆನಗೆ ಕೆಳೆಯನೈ ರಾಧೇಯಾ|| (ಆ.2-85)

ಗದ್ಯಾನುವಾದ : ನಮಸ್ಕಾರ ಮಾಡುವುದು; ಜೀಯಾ ಎನ್ನುವುದು; ಕೊಡು, ದಯೆತೋರು, ಏನು ಪ್ರಸಾದ, ಅನುಗ್ರಹ ಎಂಬ ಇವು-ಇತರರಲ್ಲಿ ನಡೆಯಲಿ. ನಮ್ಮ ನಿನ್ನ ನಡುವೆ, ನಡೆಯುವುದು ಬೇಡ, ಎಲೈ ಕರ್ಣನೇ ನೀನು ನನಗೆ ಗೆಳೆಯನಾಗಿದ್ದೀಯೆ- ನಂತರ ಕರ್ಣನ ಜತೆಗೂಡಿಕೊಂಡು ಹೋಗಿ ತನ್ನ ಮಾತಾಪಿತೃಗಳಿಗೆ ಪರಿಚಯಿಸುತ್ತಾನೆ.

ಹೀಗೆ ಭರತಭೂಮಿಯಲ್ಲಿ ವಿಷವರ್ತುಲವಾಗಿ ಹರಡುತ್ತಿದ್ದ ಅಸ್ಪೃಶ್ಯತೆಯನ್ನು ಚಿವುಟಿ ಹಾಕಲು ಮೊಟ್ಟಮೊದಲಿಗೆ ಪ್ರಯತ್ನಿಸಿದವನು ದುರ್ಯೋಧನ. ಪದವಿ, ಪುರಸ್ಕಾರ, ಅಧಿಕಾರ ಇದ್ದವರಿಗೆ ಯಾವ ಅಸ್ಪೃಶ್ಯತೆ? ಯಾವ ಜಾತಿಭೇದ? ಯುವರಾಜ ದುರ್ಯೋಧನ ಕರ್ಣನನ್ನು ಮುಟ್ಟಿ ಮಾತಾಡಿಸಿ ಆಲಂಗಿಸಿ ಸನ್ಮಾನಿಸಿದುದನ್ನು ಎಲ್ಲಾ ಸಭಾಸದರು ಬೆಕ್ಕಸಬೆರಗಾಗಿ ನೋಡುವರು. ಸಭೆ ಚದುರಿತು. ಇದೆಲ್ಲ ವ್ಯಾಯಾಮ ರಂಗದಲ್ಲೇ ಶರವೇಗದಿಂದ ನಡೆದುಹೋಗುತ್ತದೆ.

ಈ ನಾಟಕೀಯ ದೃಶ್ಯದೊಂದಿಗೆ ಕವಿಪಂಪ ಸಮಕಾಲೀನ ಮಾದರಿ ರಾಷ್ಟ್ರೀಯತೆಗೊಂದು ಸಂವಿಧಾನಬದ್ಧ ರೂಪ ಕೊಡುತ್ತಾನೆ. ದುರ್ಯೋಧನನ ಈ ನಡವಳಿಕೆ ಸಾವಿರ ವರ್ಷ ಕಳೆದರೂ ಪ್ರಸ್ತುತವಾಗಿದೆ. ಪಂಪ ವಿಕ್ರಮಾರ್ಜುನ ವಿಜಯ ಕಾವ್ಯವನ್ನು ವಿವಿಧ ಕಲಾಪಂಡಿತರಿಗೆ ಮಾತ್ರ ಬರೆಯಲಿಲ್ಲ. ಅವನ ಆಶಯ ಸಾರ್ವಕಾಲಿಕವಾದದ್ದು. ಜಾತಿ, ಕುಲ ತಾರತಮ್ಯದಿಂದ ಕೂಡಿದ ಬಹಿಷ್ಕøತ ಭಾರತವನ್ನು ಮೇಲೆತ್ತಲು ಬರೆದದ್ದು. ಇದು ಪಂಪನ ಮಾದರಿ ಕನ್ನಡ ರಾಷ್ಟ್ರೀಯತೆ. ಇದನ್ನು ಬರೆಯುವಾಗ ಕವಿಯ ಕಣ್ಣೆದುರು ರಾಷ್ಟ್ರಕೂಟ ದೊರೆಗಳು ಸಾಮಂತರವನ್ನು ನಡೆಸಿಕೊಳ್ಳುತ್ತಿದ್ದ ದೃಶ್ಯ ಹಾದುಹೋಗಿರಬೇಕು. ಆದುದರಿಂದಲೆ ಅವರನ್ನು ‘ರಾಷ್ಟ್ರಕೂಟರು’ ಎಂದು ಕರೆಯಲಾಗುತ್ತಿತ್ತೇನೋ?

ಪಂಪನ ಅರಿಕೇಸರಿ ರಾಷ್ಟ್ರಕೂಟ ಚಕ್ರವರ್ತಿಗಳಿಗೆ ಒಬ್ಬ ಸಾಮಂತ. ಆದರೂ ಅವನೊಬ್ಬ ಸ್ವತಂತ್ರ ರಾಜನಾಗಿದ್ದ. ಆದರೆ ಈಗ ಕರ್ನಾಟಕದ ಗತಿ ಏನಾಗುತ್ತಿದೆ ನೋಡಿ. ಪ್ರಸ್ತುತ ಕೇಂದ್ರ ಸರ್ಕಾರ ರಾಷ್ಟ್ರದ ಒಕ್ಕೂಟದ ವ್ಯವಸ್ಥೆಗೆ ಭಂಗ ಬರುವಂತೆ ವರ್ತಿಸುತ್ತಾ ಎಲ್ಲಾ ಅಧಿಕಾರವನ್ನು ತಾನೇ ಚಲಾಯಿಸುತ್ತ ರಾಜ್ಯಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತಿದೆ. ಇದು ಸಂವಿಧಾನದಲ್ಲಿ ಹೇಳಿರುವ ‘ಇಂಡಿಯಾ ಎಂದರೆ ಭಾರತವು ರಾಜ್ಯಗಳ ಒಂದು ಒಕ್ಕೂಟವಾಗಿರಲಿದೆ’ ಎಂಬ ಘೋಷಣೆಗೆ ತದ್ವಿರುದ್ಧ. ಹಾಗಾದರೆ ಭಾಷಾವಾರು ಪ್ರಾಂತ್ಯ ರಚನೆಯ ಅವಶ್ಯಕತೆ ಏನಿತ್ತು? ಎಂಬ ಪ್ರಶ್ನೆ ಮೂಡಿ ನಿಲ್ಲುತ್ತದೆ. ನಾವೇಕೆ ಇಂಥ ದೈನ್ಯಸ್ಥಿತಿ ಅನುಭವಿಸಬೇಕು? ಒಂದು ದೇಶ ಒಂದು ಭಾಷೆ, ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ರಾಷ್ಟ್ರೀಯತೆ, ಒಂದು ದೇಶ ಒಂದು ಧರ್ಮ, ಒಂದು ದೇಶ ಒಂದು ಧ್ವಜ ಈ ಮುಂತಾದ ಜಾಣ ಸೂತ್ರಗಳನ್ನು ನೆಯ್ದು ದೇಶದ ಬಹುತ್ವವನ್ನು ಕೊಂದು ರಾಜ್ಯಗಳ ಕೈಕಾಲು ಕಟ್ಟಿ ಹಾಕಿ ಅಖಂಡ ಭರತಖಂಡ ಒಂದು ಎಂದು ಯಾಮಾರಿಸುತ್ತಿದೆ. ಇಂಥ ಹೊತ್ತಿನಲ್ಲಿ ನಾವು ಇನ್ನೊಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಅತಿವೃಷ್ಟಿಯ ಪ್ರಾಕೃತಿಕ ವಿಪತ್ತಿನಿಂದ ಕರ್ನಾಟಕ ತತ್ತರಿಸುತ್ತಿರುವಾಗ, ಕೊರೊನಾ ಪಿಡುಗು ಕಂಗೆಡಿಸುತ್ತಿರುವಾಗ, ಪರಿಹಾರ ಹಾಗೂ ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ಲ. ರಾಜ್ಯವನ್ನು ಜಿ.ಎಸ್.ಟಿ. ತೆರಿಗೆಯಿಂದ ತಪ್ಪಿಸಿ ಕೇಂದ್ರ ತಾನೇ ಸಂಗ್ರಹಿಸುತ್ತಿದೆ. ಆದರೆ ರಾಜ್ಯದ ಪಾಲು ಕ್ರಮವಾಗಿ ಹಿಂದಿರುಗುತ್ತಿಲ್ಲ. ಕೇಳಿದರೆ ‘ಸದ್ಯಕ್ಕೆ ಸಾಲ ಮಾಡಿ ಆಮೇಲೆ ತೀರಿಸಬಹುದು’ ಎಂದು ಸಬೂಬು ಹೇಳುವುದು ಯಾವ ನ್ಯಾಯ? ಅದು ಕೊಟ್ಟಿರುವ ಕೊಂಚ ಪಾಲು ಸಾಲುತ್ತಿಲ್ಲ. ಇನ್ನು ಸಚಿವ ಮಂಡಲ ರಚನೆ ಮೊದಲುಗೊಂಡು, ವಿಸ್ತರಣೆಯಾದಿಯಾಗಿ ಎಲ್ಲಕ್ಕೂ ಕೇಂದ್ರದ ಬಳಿ ಎಡತಾಕಿ ‘ಜೀಯಾ, ಹಸಾದ’ ಎಂದು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಒದಗಿದೆ. ಭಾರತದ ಒಕ್ಕೂಟ ರಾಜ್ಯಗಳು ದಿನದಿಂದ ದಿನಕ್ಕೆ ದೈನೇಶಿ ಸ್ಥಿತಿಗೆ ಇಳಿಯುತ್ತಿವೆ. ಈ ಮಲತಾಯಿ ಧೋರಣೆಯಿಂದ ಭಾರತ ಜನನಿಯ ತನುಜಾತೆಯಾದ ಕನ್ನಡ ಮಾತೆ ಕೃಶವಾಗುತ್ತಿದ್ದಾಳೆ. ಕನ್ನಡತನದ ಅಸ್ಮಿತೆಯೇ (ಐಡೆಂಟಿಟಿ) ಕಳೆದು ಹೋಗುತ್ತಿರುವ ಈ ಹೊತ್ತಿನಲ್ಲಿ ಪಂಪನ ಕಾವ್ಯ ಬಹಳ ಹಿಂದೆಯೇ ಕನ್ನಡ ರಾಷ್ಟ್ರೀಯತೆಯ ಬಗ್ಗೆ ಧ್ವನಿ ಎತ್ತಿ ಹಾಡಿದೆ. ನಿದರ್ಶನ, ಕರ್ಣನಿಗೆ ಅಂಗ ರಾಜ್ಯಪಟ್ಟಕಟ್ಟಿದ ಸಂದರ್ಭ. ಇದು ಒಕ್ಕೂಟ ರಾಜ್ಯ ವ್ಯವಸ್ಥೆಗೆ ಮಾದರಿ. ಈ ನೆಲೆಯಲ್ಲಿ ನಾವು ಪಂಪನನ್ನು ಗ್ರಹಿಸಬೇಕು.

ಪಂಪನಿಗಿಂತ ನೂರು ವರ್ಷ ಮೊದಲೇ ಬಂದ ಕವಿರಾಜ ಮಾರ್ಗದ ಬಗ್ಗೆ ಕೊಂಚ ಪ್ರಸ್ತಾಪಿಸಬೇಕು. ಪಂಪ ಜೀವ ತುಂಬಿ ಹೇಳುವ ಕರ್ನಾಟಕ ರಾಷ್ಟ್ರೀಯತೆಗೆ ಹಾಗೂ ಕನ್ನಡ ಪ್ರಜ್ಞೆಗೆ ನೀಲನಕ್ಷೆಯನ್ನು ಮಾರ್ಗಕಾರನೇ ತಯಾರಿಸಿ ವಾಸ್ತವಕ್ಕಿಳಿಸಿದ್ದ. ಕನ್ನಡಸೀಮೆ ಕಾವೇರಿಯಿಂದ ಗೋದಾವರೀವರಿಗಿತ್ತು ಎಂದೂ, ಅಲ್ಲಿನ ಜನಪದರು ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣಿತ ಮತಿಗಳಾರಾಗಿದ್ದರೆಂದೂ ಅವರ ಗುಣ ಸ್ವಭಾವ ಸಂಸ್ಕೃತಿ ಸಂಪನ್ನತೆಯನ್ನು ಕೊಂಡಾಡಿ ಕರ್ನಾಟಕದ ಗಡಿಸೀಮೆ, ಅದರ ಸಾಮಾಜಿಕ ಹಾಗೂ ರಾಜಕೀಯ ನೀಲನಕ್ಷೆಯ ಗೆರೆ ಕೊರೆದಿದ್ದ. ರಾಷ್ಟ್ರಕೂಟ ಎಂದರೆ ಅರಿಕೇಸರಿಯಂತ ಅನೇಕಾನೇಕ ಸಾಮಂತರಿಂದ ಕೂಡಿದ ಒಂದು ಕೂಟರಾಷ್ಟ್ರ. ಆದ್ದರಿಂದ ಅದು ‘ರಾಷ್ಟ್ರಕೂಟ’ ಎಂಬ ಹೆಸರಿಗೆ ಅನ್ವರ್ಥ ಪಡೆದಿತ್ತೆಂದು ಭಾವಿಸಬಹುದು. ಕವಿರಾಜಮಾರ್ಗ ರಚಿತವಾದದ್ದು ಸುಮಾರು ಕ್ರಿ.ಶ. 840 ಆಗಿರಬಹುದು. ಇದಾದ 100 ವರ್ಷಗಳ ನಂತರ ಪಂಪನ ಕಾವ್ಯಗಳು ರಚಿತವಾದವು. ಆದಿಪುರಾಣ ಕ್ರಿ.ಶ. 941ರಲ್ಲಿ ರಚನೆಗೊಂಡಿದೆ.

ಪಂಪನ ಲೋಕಾನುಭವ ದೊಡ್ಡದು. ಅವನ ಕಾಲಕ್ಕಾಗಲೇ ಉತ್ತರದ ಚಕ್ರವರ್ತಿ ಪೀಠ ದಕ್ಷಿಣಕ್ಕೆ ಸರಿದು ಬರುತ್ತಿತ್ತು. ಪಾಂಡ್ಯರು, ಚೋಳರು, ಗಂಗರು, ಕದಂಬರು, ಚೇರರು, ರಾಷ್ಟ್ರಕೂಟರು, ವೆಂಗಿ ಚಾಳುಕ್ಯರು ಮುಂತಾದ ರಾಜ ಮನೆತನಗಳ ನಡುವೆ ಸೇಡು ಸಂಚುಗಳು, ಕದನ ಕೋಲಾಹಲಗಳು, ರಾಜಿ ಒಪ್ಪಂದಗಳು, ರಕ್ತ ಸಂಬಂಧದ ಕೊಳು ಕೊಡುಗೆಗಳು ನಿರಂತರವಾಗಿ ನಡೆಯುತ್ತಿದ್ದವು. ಹೀಗೆ ಪಂಪನ ಕಣ್ಣೆದುರೇ ಜನಪದಭಾರತ ಖುದ್ದುಕೊಳ್ಳತೊಡಗಿತ್ತು. ಅವನ ಸೂಕ್ಷ್ಮ ಸಂವೇದನಾಶೀಲ ಮನಸ್ಸು ಈ ಹೊರ ಜಗಕ್ಕೂ ತನಗೂ ಏನೇತರ ಸಂಬಂಧ ಎಂದು ವಿಚಾರ ಮಾಡಲು ಹೊರಟಿತು. ಪುರಾಣ ಕಾಲದ ಭಾರತದಲ್ಲಿ ತನ್ನ ಸಮಕಾಲೀನ ಸತ್ಯಮಿಥ್ಯಗಳ ಪರಿಶೀಲನೆಗೆ ತವಕಿಸಿತು. ಈ ಚಿಂತನಮಂಥನದ ಪರಿಣಾಮವಾಗಿ ಅವನ ಕೃತಿಗಳು ಮೈದಳೆದವು. ಯಾವುದೇ ಒಂದು ಧರ್ಮದ ಚೌಕಟ್ಟನ್ನು ಮೀರಿ ಅವನ ಕಾವ್ಯ ಧರ್ಮ ನಿಂತಿತು. ಇದಕ್ಕೆ ಕಾರಣಗಳಿವೆ.

ಪಂಪನ ಆಶ್ರಯದಾತ ಅರಿಕೇಸರಿ ರಾಷ್ಟ್ರಕೂಟರ ಒಬ್ಬ ಸಾಮಂತ. ಅಲ್ಲದೆ ಆ ಮನೆತನದ ರಕ್ತಸಂಬಂಧಿ ನೆಂಟ ಕೂಡ. ಚಕ್ರವರ್ತಿ ಇಂದ್ರನ ತಂಗಿ ಜಾಕಬ್ಬೆ ಮತ್ತು ಚಾಲುಕ್ಯ ನರಸಿಂಹ ಇವನ ತಾಯಿ ತಂದೆ. ಇವನ ಹೆಂಡತಿ ಲೋಕಾಂಬಿಕೆ ಇಂದ್ರನ ಮಗಳೇ. ಸೋದರ ಮಾವನ ಮನೆಯಲ್ಲಿ ಹುಟ್ಟಿ, ಬೆಳೆದು ಅವರ ರಾಜಧಾನಿ ಮಾನ್ಯೇಖೇಟದಲ್ಲಿಯೇ ವಿದ್ಯಾಭ್ಯಾಸ ಮಾಡಿದವನು ಅರಿಕೇಸರಿ. ಇವನ ಗುರು ದೇವೇಂದ್ರ ಮುನಿ ಪಂಪನ ಗುರುವೂ ಸಹ. ಬಹುಶಃ ಇವರಿಬ್ಬರೂ ಬಾಲ್ಯ ಸ್ನೇಹಿತರು, ಸಹಪಾಠಿಗಳು. ಸ್ನಾತಕರಾದ ಮೇಲೆ ಇಬ್ಬರೂ ಮಾನ್ಯಖೇಟದಿಂದ ವೇಮುಲವಾಡ ಅಥವಾ ಬೋದನಕ್ಕೆ ಬಂದರು. ಆ ವೇಳೆಯಲ್ಲಿ ಪಂಪ ಅರಿಕೇಸರಿಯೊಂದಿಗೆ ಹೋಗಿ ಯುದ್ಧ ಕಲಿಯಾದರೆ, ಅರಿಕೇಸರಿ ಪಂಪನೊಂದಿಗೆ ಕಲೆತು ಸಹೃದಯ ವಿದ್ವಾಂಸನಾದ. ಹೀಗೆ ಇಬ್ಬರು ಸನ್ಮಿತ್ರರಾದರು. ದೊರೆಯು ಕವಿಗೆ ‘ಪೋ ಸಾಲ್ಗುಂ’ ಎನ್ನುವಷ್ಟು ದಾನ ಧರ್ಮಾದಿಗಳನ್ನು ನೀಡಿ ಸತ್ಕರಿಸಿದರೆ, ಕವಿ ತನ್ನ ಸಾಮಂತನ ಹೆಸರು ಆ ಚಂದ್ರಾರ್ಕ ನಿಲ್ಲುವಂತೆ ಕೀರ್ತಿಸಿ ಕಾವ್ಯ ರಚಿಸಿದ. ಪುರಾಣ ಪುರುಷ ಅರ್ಜುನನೊಂದಿಗೆ ಅರಿಕೇಸರಿಯನ್ನು ಸಮೀಕರಿಸುತ್ತಾ ‘ಗರ್ವಮೆ ದೋಷಂ, ಅಳ್ತಿಗಂ ದೋಷಮೇ? ಕಾಣೆನ್’ ಎಂದು ಕೈ ವಾರಿಸಿದ. ಅರಿಕೇಸರಿ ನಿಜಕ್ಕೂ ಅಂಥ ಗುಣಾರ್ಣವನೇ ಆಗಿದ್ದನೆಂಬುದನ್ನು ಪರೀಕ್ಷಿಸಬೇಕಾದರೆ ವಿಕ್ರಮಾರ್ಜುನ ವಿಜಯದ ಒಂಭತ್ತನೇ ಆಶ್ವಾಸದಲ್ಲಿ ಸೂಚಿತವಾಗಿರುವ ಕೆಲವು ಚಾರಿತ್ರಿಕ ಸಂಗತಿಗಳನ್ನೂ, ಪಂಪನ ತಮ್ಮ ಜಿನವಲ್ಲಭನ ಗಂಗಾಧರಂ ಶಾಸನವನ್ನೂ, ಹಾಗೂ ವೇಮುಲವಾಡದ ಶಾಸನವನ್ನೂ ನೋಡಬಹುದು.

ಆ ಪ್ರಕಾರವಾಗಿ ಚಾಲುಕ್ಯ ವಿಜಯಾಧಿತ್ಯನಿಗೆ ರಾಷ್ಟ್ರಕೂಟ ದೊರೆ ಗೋವಿಂದ (ಗೊಜ್ಜಿಗ) ಎಂಬುವವನು ಮುನಿದು ಯುದ್ಧಕ್ಕೆ ಬಂದಾಗ ವಿಜಯಾಧಿತ್ಯನನ್ನು ಹಿಂದಿಟ್ಟುಕೊಂಡು ಹೋಗಿ ಕಾಪಾಡಿದವನೆಂದರೆ ಅರಿಕೇಸರಿ. ಇನ್ನೊಮ್ಮೆ ದಂಡೆತ್ತಿ ಬಂದ ಆ ಸಕಲ ಸಾಮಂತರ್ನು ಹೋರಾಡಿ ಹಿಮ್ಮೆಟ್ಟಿಸಿದ್ದು ಅರಿಕೇಸರಿ. (ಅವರನ್ನೆಲ್ಲಾ ಅರಿಕೇಸರಿಯ ಮೇಲೆ ಎತ್ತಿ ಕಟ್ಟಿದವನು ಗೋವಿಂದನೇ ಇರಬೇಕು). ಮತ್ತೊಮ್ಮೆ ಇದೇ ಗೋವಿಂದ ಅತಿವರ್ತಿಯಾಗಿ ಮೇಲೆ ಬಿದ್ದಾಗ ಅವನನ್ನು ಕಂಗೆಡಿಸಿ ತನ್ನನ್ನು ನಂಬಿ ಬಂದಿದ್ದ ಬದ್ದೆಗನಿಗೆ (ಗೋವಿಂದನ ಚಿಕ್ಕಪ್ಪ) ಸಕಲ ಸಾಮ್ರಾಜ್ಯವನ್ನು ಗೆದ್ದುಕೊಟ್ಟು ಅವನನ್ನು ಚಕ್ರವರ್ತಿ ಪೀಠದಲ್ಲಿ ಪುನರ್ ಪ್ರತಿಷ್ಠಾಪಿಸಿದ್ದು ಅರಿಕೇಸರಿಯೇ. (ಚಕ್ರವರ್ತಿ ಪೀಠ ಕೈಸಾರುವಂತಿದ್ದರೂ ಅರಿಕೇಸರಿ ಅದಕ್ಕೆ ಆಸೆ ಪಡದೆ ನೆಂಟರೂ ಚಕ್ರವರ್ತಿಗಳೂ ಆದ ರಾಷ್ಟ್ರಕೂಟರ ಮನೆತನವನ್ನು ಮಾನ್ಯಖೇಟದಲ್ಲಿ ಮುಂದುವರಿಯುವಂತೆ ನೋಡಿಕೊಂಡ). ತನ್ನ ಆಶ್ರಯದಾತನ ಈ ಉದಾರ ಗುಣ ಸಂಪನ್ನತೆ ಪಂಪನ ಮನಸ್ಸಿನ ಮೇಲೆ ಅಚ್ಚೊತ್ತಿದೆ. ಆದ್ದರಿಂದ ಕವಿ ಅರ್ಜುನನನ್ನು ಅರಿಕೇಸರಿಯೊಂದಿಗೆ ಸಮೀಕರಿಸಿ ಸಮಸ್ತ ಭಾರತವನ್ನು ಬರೆದ. ಇದರಿಂದ ‘ತಗುಳ್ಚಿ’ ಹೇಳುವ ತಂತ್ರ ಅವನಿಗೆ ಪ್ರಿಯವೆನಿಸಿತು. ಅದು ಸಮಸ್ತ ಭಾರತವಾಗಿ ಕನ್ನಡದಲ್ಲಿ ಅವತರಿಸಿ ಪೊಸದೇಸಿಯ ಸೊಗಡು ಪಡೆಯಿತು. ಹೀಗೆ ಸಂಸ್ಕೃತ ಮಾರ್ಗಕಾವ್ಯ ವ್ಯಾಸ ಭಾರತವು ಕನ್ನಡದ ನೆಲದಲ್ಲಿ ಮರುಹುಟ್ಟು ಪಡೆಯಿತು. ಪರಂಪರೆಗೆ ವಿನಮ್ರವಾಗಿಯೇ ಪಂಪನ ಕೃತಿಗಳು ಹಿಂದಿನ ಕೃತಿಗಳನ್ನೆಲ್ಲ ಇಕ್ಕಿ ಮೆಟ್ಟಿದವು.

ಇದಿಷ್ಟು ಹಿನ್ನೆಲೆಯೊಂದಿಗೆ ಪಂಪಭಾರತದಲ್ಲಿ ಮೈವೆತ್ತುನಿಂತಿರುವ ಕನ್ನಡ ರಾಷ್ಟ್ರೀಯ ಪ್ರಜ್ಞೆಯನ್ನು ಪರಿಶೀಲಿಸಬಹುದು. ರಾಷ್ಟ್ರೀಯತೆ ಎಂದರೆ ಒಂದು ಭಾಷಾ ಸಮುದಾಯವು ಸ್ವತಂತ್ರವಾಗಿ ಬಾಳಿಬದುಕಿದ, ಅದರ ಆಗು-ಹೋಗು ಕುರಿತ ಸಂಕಥನ. ಅಲ್ಲಿನ ನುಡಿಯಲ್ಲಿ ಆ ಸಮುದಾಯ ಒಟ್ಟಿಗೆ ಜೀವಿಸಿದ ಅಂಕಿತ ಮುದ್ರೆ, ಗುರುತುಗಳು ಬಿದ್ದಿರುತ್ತವೆ. ಆ ಪ್ರದೇಶದ ನೆಲ, ನೀರು, ಬಯಲು, ಕಾಡು, ಜೀವಸಂಕುಲ, ಸಸ್ಯ ಸಂಕುಲ, ಕಲೆ-ಸಾಹಿತ್ಯ ಎಲ್ಲದರಲ್ಲೂ ಅವರದೇ ಆದ ನುಡಿಯ ಅಂಕಿತ ಅಸ್ಮಿತೆ ಇರುತ್ತದೆ. ಅಲ್ಲಿ ಕೀಳರಿಮೆ, ಮೇಲರಿಮೆಗಳ ತಾರತಮ್ಯತೆ ಇರಲಾರದು. ಅಷ್ಟರಮಟ್ಟಿಗೆ ಆ ಸಮೂಹ ನಿತ್ಯ ಬಳಸುವ ನುಡಿ ಸರ್ವತಂತ್ರ ಸ್ವಾತಂತ್ರ್ಯ ಅಭಿವ್ಯಕ್ತಿ ಪಡೆದಿರುತ್ತದೆ. ಇದನ್ನೇ ಕುವೆಂಪು ‘ಕರ್ನಾಟಕ ಎಂದರೇನು? ಹೆಸರೆ ಬರಿಯ ಮಣ್ಣಿಗೆ?’ ಎಂದು ಪ್ರಶ್ನಿಸಿರುವುದು. ಆದ್ದರಿಂದ ಸಾಮ್ರಾಜ್ಯಶಾಹಿ ಆಕ್ರಮಣಾಕಾರರು ಇಂಥ ಸಮುದಾಯಗಳನ್ನು ಗೆಲ್ಲಬೇಕಾದರೆ ಮೊದಲು ಅವರ ನುಡಿಯ ಸ್ವಾತಂತ್ರ್ಯವನ್ನು ಉಪೇಕ್ಷೆಮಾಡಿ ತಮ್ಮ ಭಾಷಾ ಸ್ವಾಮ್ಯತೆಯನ್ನು ಎತ್ತಿ ಹಿಡಿಯುತ್ತಾರೆ. ಆದ್ದರಿಂದಲೇ ‘ಕೊಲ್ವ ಮುನ್ನ ಸೊಲ್ಲಡಗಿಸು’ ಎಂಬ ಕನ್ನಡ ನುಡಿಗಟ್ಟು ಹುಟ್ಟಿಕೊಂಡಿದೆ. ಸೊಲ್ಲಡಗಿದ ಸಮುದಾಯ ಇದ್ದರೂ ಸತ್ತಂತೆ ಸಾಮ್ರಾಜ್ಯಶಾಹಿ ಗುಲಾಮಗಿರಿಯನ್ನು ಒಪ್ಪಿಕೊಂಡಿರುತ್ತದೆ.

ಈ ನೆಲೆಯಿಂದ ಪಂಪ ಮೆರೆದಿರುವ ಕನ್ನಡ ‘ನುಡಿ’ ಸ್ವಾತಂತ್ರ್ಯವನ್ನು ಹೇಗೆ ಪ್ರತಿಪಾದಿಸಿದ್ದಾನೆ? ಎಂಬುದನ್ನು ನಾವೀಗ ಸಮೀಕ್ಷಿಸಬಹುದು. ಇದನ್ನು ನಾಲ್ಕಾರು ನೆಲೆಯಿಂದ ಪರಿಭಾವಿಸಬಹುದಾಗಿದೆ. ವೆಂಗಿಚಾಳುಕ್ಯ ಸಾಮಂತದೊರೆ ಅರಿಕೇಸರಿಯನ್ನು ಕವಿ ಯಾವಾಗ ‘ವಿಕ್ರಮಾರ್ಜುನ ವಿಜಯ’ ಕಾವ್ಯದ ಅಂತರಂಗಕ್ಕೆ ನುಗ್ಗಿಸಿಕೊಂಡನೋ ಆಗ ಅವನ ಜೊತೆ ಜೊತೆಗೆ ವ್ಯಾಸನ ಸಮಸ್ತ ಭಾರತವೂ ಒಳನುಗ್ಗಿ ಬಂತು. ಉತ್ತರಾಪಥದ ಮಹಾಭಾರತ ದಕ್ಷಿಣಾ ಪಥದ ಕನ್ನಡ ಸೀಮೆಯಲ್ಲಿ ಮರುಹುಟ್ಟು ಪಡೆಯಿತು. ಆದುದರಿಂದ ವಿಕ್ರಮಾರ್ಜುನ ವಿಜಯ ಸಮಕಾಲೀನವೂ ಸಾರ್ವಕಾಲಿಕವೂ ಆಯಿತು. ವ್ಯಾಸ ಮಹಾಭಾರತ ಹೇಗೆ ಒಂದು ರಾಷ್ಟ್ರದ ಆತ್ಮಕಥೆಯಾಗಿ ರಾಷ್ಟ್ರೀಯ ಕಾವ್ಯ ಎನಿಸಿಕೊಂಡಿದೆಯೋ ಹಾಗೇ ವಿಕ್ರಮಾರ್ಜುನ ವಿಜಯವೂ ಕರ್ನಾಟಕ ರಾಷ್ಟ್ರದ ಆತ್ಮಕತೆ ಎನಿಸಿಕೊಂಡಿದೆ.

ಪಂಪನ ಲೌಕಿಕ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಕಟ್ಟಿ ಕೊಡುವ ಕನ್ನಡ ರಾಷ್ಟ್ರೀಯತೆ ಇಂತಿದ್ದರೆ, ಇನ್ನು ಆಗಮ ಕಾವ್ಯ ಆದಿಪುರಾಣದಲ್ಲಿ ಕಟ್ಟಿಕೊಡುವ ಕನ್ನಡ ರಾಷ್ಟ್ರೀಯತೆ ಹೇಗೆ?

ಪಂಪ ಆದಿತೀರ್ಥಂಕರನ ಹತ್ತು ಭವಾವಳಿಯನ್ನೂ ಅವನ ಹಿರಿಯ ಮಗ ಭರತ ಮತ್ತು ಅವನ ಮಲತಮ್ಮ ಬಾಹುಬಲಿ ಇವರ ವ್ಯಾಯೋಗವನ್ನು ಕುರಿತು ಕನ್ನಡದಲ್ಲಿ ಬರೆದುದರಿಂದ, ಕನ್ನಡ ಭಾಷೆ ಧಾರ್ಮಿಕ ಮೆಟ್ಟಿಲೇರಿತು. ಸಮವಸರಣ ಮಂಟಪದಲ್ಲಿ ವಿಹರಿಸಿತು. ಇದು ಪಂಪ ಮೆರೆದ ಕನ್ನಡ ಭಾಷಾಪ್ರಜ್ಞೆ, ಸಂಸ್ಕೃತ ಭಾಷಾ ಸ್ವಾಮ್ಯತೆಯನ್ನು ಮುರಿದು ಪ್ರಾದೇಶಿಕ ಭಾಷೆಗೆ ಆತ್ಮಾಭಿಮಾನವನ್ನು ತಂದುಕೊಟ್ಟವು ಪಂಪನ ಕಾವ್ಯಗಳು. ಅವುಗಳನ್ನು ಇದು ಲೌಕಿಕ, ಇದು ಧಾರ್ಮಿಕ ಎಂದು ಗೆರೆ ಕೊರೆದು ಹೇಳಲು ಬರುವುದಿಲ್ಲ. ಪ್ರಧಾನವಾಗಿ ವಿಕ್ರಮಾರ್ಜುನ ವಿಜಯ ಲೌಕಿಕವನ್ನು ಕುರಿತು ಹೇಳುತ್ತದೆ. ಆದರೆ ಅಲ್ಲಿ ಧಾರ್ಮಿಕತೆ ಗೈರು ಹಾಜರಾಗಿಲ್ಲ. ಹಾಗೆ ಆದಿಪುರಾಣ ಪ್ರಧಾನವಾಗಿ ಜಿನಾಗಮವನ್ನು ಕುರಿತು ಹೇಳುತ್ತದೆ. ಆದರೆ ಅಲ್ಲಿ ಲೌಕಿಕ ಗೈರುಹಾಜರಾಗಿಲ್ಲ. ಕದಿಯದ, ಪುಸಿಯದ, ಕೊಲ್ಲದ, ಹಾದರಕ್ಕೆಳಸದ, ಸಂಗ್ರಹಿಸದ ಈ ಧರ್ಮದ ಪಂಚಾಣು ವ್ರತಶೀಲಗಳನ್ನು ಜಾಗತಿಕ ಯಾವ ಧರ್ಮವೂ ಅಲ್ಲಗಳೆಯಲಾರದು. ಆದಿಪುರಾಣದ ದಿವ್ಯ ಸಂದೇಶವೇ ಇದು.

ಉದಾಹರಣೆಗಾಗಿ ಭರತ-ಬಾಹುಬಲಿ ವ್ಯಾಯೋಗವನ್ನು ಅವಲೋಕಿಸಬಹುದು. ಅಣ್ಣ ಭರತನನ್ನು ಜಲಯುದ್ಧ, ದೃಷ್ಟಿಯುದ್ಧ ಹಾಗೂ ಮಲ್ಲಯುದ್ಧಗಳಲ್ಲಿ ಸೋಲಿಸಿದ ಬಾಹುಬಲಿ ತನ್ನ ಎರಡೂ ಕೈಗಳಿಂದ ಅವನನ್ನು ಮೇಲೆತ್ತಿ ಹಿಡಿದು ನೆಲಕ್ಕೆ ಅಪ್ಪಳಿಸಬೇಕೆಂದಿದ್ದವನು ಆದರೆ ಹಾಗೆ ಮಾಡದೆ ಮನೋಪರಿವರ್ತನೆಗೊಂಡು ಮೆಲ್ಲಗೆ ಕೆಳಕ್ಕಿಳಿಸಿ ವೈರಾಗ್ಯವಶನಾಗಿ ಹೇಳುವ ಮಾತು :

ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಲಮೀಭಟಖಡ್ಗ ಮಂಡಲೋ |
ತ್ಪಲವನವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ ||
ವಲಯಮನಯ್ಯನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ |
ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆರಳ್ತೆ ಮಾಸದೆ? || (ಆ.14-130)

ಅನು: ಯೋಧಖಡ್ಗಗಳೆಂಬ ಉತ್ಪಲವನದಲ್ಲಿ ಸೊಗಸಿನಿಂದ ಸಂಚರಿಸುವ ದುಂಬಿಯಂತಿರುವವಳೂ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವವಳೂ ಆದ ರಾಜ್ಯಲಕ್ಷ್ಮಿಯು ನಿನ್ನ ಎದೆಯ ಮೇಲೆ ನಿಶ್ಚಲವಾಗಿ ನೆಲಸಿರಲಿ! ನನ್ನಯ್ಯನಿತ್ತ ರಾಜ್ಯವನ್ನು ನಾನು ನಿನಗೆ ಸಮರ್ಪಿಸುವೆನು. ನೀನು ಬಯಸಿರುವ ಹೆಣ್ಣನ್ನೂ ಭೂಮಿಯನ್ನೂ ನಾನು ಬಯಸಿದರೆ ನನ್ನ ಕೀರ್ತಿಯು ಮಾಸದೆ? ಇವನೇ ಶ್ರವಣ ಬೆಳಗೊಳದ ಗೊಮ್ಮಟ ಮೂರ್ತಿ.

ಇಂಥ ಮಾತುಗಳು ಯಾವುದೇ ಒಂದು ಧರ್ಮದ ಚೌಕಟ್ಟಿನೊಳಗೆ ಮಾತ್ರ ಬರತಕ್ಕ ಬರಬೇಕಾದ ನುಡಿಗಟ್ಟುಗಳಲ್ಲ. ಇವು ಎಲ್ಲ ಧರ್ಮಕ್ಕೂ ಸಾಮಾನ್ಯ. ಅಪ್ಪಟ ಮನುಷ್ಯ ಮಾತ್ರದವನಿಂದ ಹುಟ್ಟಿ ಬರತಕ್ಕ ಮಾತುಗಳು. ಧರ್ಮದ ಗಡಿರೇಖೆಗಳು ಇಲ್ಲಿಲ್ಲ. ಇನ್ನು ಲೌಕಿಕ, ಧಾರ್ಮಿಕ ಮುಂತಾದ ಮಾತುಗಳಿಂದೇನು? ಕಾವ್ಯದ ಧರ್ಮ ಮತ್ತು ಧರ್ಮ ಇವುಗಳ ಆತ್ಮಸಂಗ.

ಪಂಪ ಮೆರೆದಿರುವ ಧಾರ್ಮಿಕ ರಾಷ್ಟ್ರೀಯತೆ ಇದು. ಆದರೀಗ ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಬನ್ನಿ ಎಂದರೆ ಪುರೋಹಿತಶಾಹಿ ಮೂಢರು ಗುಡಿ, ಚರ್ಚು, ಮಸೀದಿಗಳಲ್ಲೇ ಅವಿತು ಗಲಭೆ, ಭಯೋತ್ಪಾದನೆ, ಹಿಂಸೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಗಲಭೆಗಳಿಗೆ ಪ್ರಭುತ್ವವು ಒಮ್ಮೊಮ್ಮೆ ಆಜ್ಯ ಸುರಿಯುತ್ತದೆ. ಬಾಹುಬಲಿಯಂತೆ ಅಧಿಕಾರ ಕೇಂದ್ರವಾದ ಭರತನನ್ನು ಎದುರಿಸಿ ನಿಂತು ‘ಪೆರರೀವಿದೇಂ? ಪೆರರಮಾಡುವುದೇಂ? ಪೆರರಿಂದಮಪ್ಪುದೇಂ?’ ಎಂದು ಸ್ವಸಾಮರ್ಥ್ಯದಿಂದ ತೊಡೆತಟ್ಟಿ ನಿಲ್ಲುವ ನೈತಿಕ ಸ್ಥೈರ್ಯ ನಮ್ಮ ಪ್ರಾದೇಶಿಕ ಭಾಷಾ ರಾಜಕಾರಣಿಗಳಿಗೆ ಬರುವುದೆಂದು? ಒಂದು ದೇಶ, ಒಂದು ಭಾಷೆ, ಒಂದು ರಾಷ್ಟ್ರೀಯತೆ, ಒಂದು ಧರ್ಮ ಎನ್ನುವ ಕತ್ತಿಯನ್ನು ನೆತ್ತಿಯಲ್ಲಿ ಊರಿ ಕೀರಿ ಬಲವಂತ ಪಡಿಸುವುದು ಪಂಪ ಹೇಳುವ ಕರ್ನಾಟಕ ರಾಷ್ಟ್ರೀಯತೆಗೆ ತದ್ವಿರುದ್ಧ. ಇದೆಂದಿಗೂ ಕೂಡುಕೇಂದ್ರ ಪ್ರಜ್ಞೆಯನ್ನು ಬೆಳಸಲಾರದು. ಇಂಥ ಹುಚ್ಚು ಸಾಹಸಕ್ಕೆ ಹೊರಟ ಸೋವಿಯತ್ ರಷ್ಯಾ ಒಕ್ಕೂಟದ ಗತಿ ಏನಾಯಿತು? ಅದರ ಅಂಗದೇಶಗಳು ಒಂದೊಂದೇ ಕಿತ್ತು ಹೋದ ದೃಷ್ಟಾಂತ ನಮ್ಮ ಕಣ್ಣು ಮುಂದೆ ಇನ್ನೂ ಕೆಂಪಾಗಿದೆ. ನಮ್ಮ ಜನಪ್ರತಿನಿಧಿಗಳು ಕೇಂದ್ರ ಸರ್ಕಾರ ಸುಧಾರಣೆಯ ಹೆಸರಿನಲ್ಲಿ ಜಾರಿಗೆ ತರುತ್ತಿರುವ ಭೂಸುಧಾರಣೆ, ಜಿಎಸ್‍ಟಿ ತೆರಿಗೆ, ಪೌರತ್ವ ಕಾಯಿದೆ ಮುಂತಾದ ಕಾನೂನುಗಳನ್ನು ಕಣ್ಣುಮುಚ್ಚಿ ಬೆಂಬಲಿಸಿದರೆ ಭವಿಷ್ಯದಲ್ಲಿ ನಮ್ಮ ಯುವಪೀಳಿಗೆ ಕ್ಷಮಿಸಲಾರದು. ಆಗ ಕನ್ನಡಿಗರ ಅಸ್ಮಿತೆ(ಐಡೆಂಟಿಟಿ)ಯೇ ಇಲ್ಲವಾಗುತ್ತದೆ. ಭಾರತ ಜನನಿಯ ತನುಜಾತೆಯಾದ ಕನ್ನಡ ಮಾತೆ ಕೇಂದ್ರವು ನೂಕಿದಾ ಕಡೆ ಬಿದ್ದು ಬದುಕು ಸಾಗಿಸ ಬೇಕಾಗುತ್ತದೆ. ಇದು ಸಲ್ಲದು ಎಂಬ ಸಂದೇಶವನ್ನು ನಿಚ್ಚಂಪೊಸತಾದ ಪಂಪನ ಕಾವ್ಯಗಳು ಸಾರಿ ಸಾರಿ ಹೇಳುತ್ತಿವೆ. ಆದ್ದರಿಂದಲೇ ಪಂಪ ಕನ್ನಡದ ಆದಿಕವಿ, ಅಗ್ರಕವಿ, ನಾಡೋಜ.

ಪಂಪಾದಿ ಕವಿಗಳು ಕಟ್ಟಿ ಬೆಳೆಸಿದ ಈ ಕನ್ನಡ ರಾಷ್ಟ್ರೀಯತೆಯು 12ನೇ ಶತಮಾನದ ಕಳಚೂರ್ಯ ಬಿಜ್ಜಳನ ಕಾಲಾವಧಿಯಲ್ಲಿ ವಚನಕಾರರ ಸಂದರ್ಭದಲ್ಲಿ ಇನ್ನಷ್ಟು ಉಜ್ವಲವಾಗಿ ತೊಳಗಿ ಬೆಳಗಿತು. ವಿವಿಧ ಜಾತಿ-ವೃತ್ತಿಯ ಶಿವಶರಣರು ರಾಜಧಾನಿ ಕಲ್ಯಾಣ ನಗರವನ್ನು ನಿಜಾರ್ಥದಲ್ಲಿ ‘ಕಲ್ಯಾಣ ನಗರ’ವನ್ನಾಗಿಯೇ ಬೆಳೆಸಿದರು. ವಚನಗಳಲ್ಲಿ ಕನ್ನಡ ನುಡಿ ಸಮೃದ್ಧವಾಗಿ ಇಹಪರ ಸಾಧನೆಗೆ ಮೆಟ್ಟಿಲಾಯಿತು. ಪಂಪ ಹೇಳಿದ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಮಾತು ಅರ್ಥ ಸಂಪನ್ನತೆ ಪಡೆಯಿತು.

  • ಪ್ರೊ. ಶಿವರಾಮಯ್ಯ

ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ತಾತ್ಸಾರ ತೊರೆದು ಸ್ವಾಯತ್ತತೆಗಾಗಿ – ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟವೇ ರಾಜ್ಯೋತ್ಸವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...