Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-2)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-2)

- Advertisement -
- Advertisement -

ಪ್ರಿನ್ಸ್, ಜನರಲ್ ಎಪಾಂಚಿನ್ ಮನೆಯ ಮುಖ್ಯದ್ವಾರದ ಕರೆಗಂಟೆಯನ್ನ ಬಾರಿಸಿದಾಗ ಮಧ್ಯಾಹ್ನ ಹನ್ನೊಂದು ಗಂಟೆಯಾಗಿತ್ತು. ಜನರಲ್ ಆ ಮನೆಯ ಮೊದಲನೆಯ ಮಹಡಿಯಲ್ಲಿ ವಾಸವಾಗಿದ್ದ; ಅದೊಂದು ಅವನ ಪದವಿಗೆ ತಕ್ಕಂತಹ ಸಾಧಾರಣವಾದ ವಸತಿ. ಸಮವಸ್ತ್ರವನ್ನ ಧರಿಸಿದ ಸೇವಕನೊಬ್ಬ ಬಾಗಿಲು ತೆರೆದ. ಈ ವ್ಯಕ್ತಿಗೆ ಪ್ರಿನ್ಸ್ ಸುದೀರ್ಘವಾದ ವಿವರಣೆಯನ್ನ ನೀಡಲೇಬೇಕಾದಂತಹ ಪರಿಸ್ಥಿತಿ ಉಂಟಾಯಿತು. ಸೇವಕ ಅವನನ್ನು ಮತ್ತು ಅವನ ಕೈಲಿದ್ದ ಗಂಟನ್ನು ಬಹಳ ಅನುಮಾನಾಸ್ಪದವಾಗಿ ನೋಡತೊಡಗಿದ. ತಾನು ನಿಜವಾಗಲೂ ಪ್ರಿನ್ಸ್ ಮೂಯಿಶ್ಕಿನ್ ಅನ್ನುವುದರ ಬಗ್ಗೆ ಮೇಲಿಂದಮೇಲೆ ಕೊಟ್ಟ ಭರವಸೆಗಳ ನಂತರ ಕೊನೆಗೂ, ಮತ್ತು ಖಂಡಿತವಾಗಿಯೂ ಜನರಲ್‌ನನ್ನು ವ್ಯವಹಾರಿಕ ಕಾರಣಗಳಿಗೋಸ್ಕರ ನೋಡಲೇಬೇಕೆಂದು ಹೇಳಿದಾಗ, ದಿಗ್ಭ್ರಮೆಗೊಂಡ ಸೇವಕ ಅವನನ್ನು ಸಣ್ಣದಾದ ನಿರೀಕ್ಷಣಾ ಕೊಠಡಿಗೆ ಸೇರಿದಂತಿದ್ದ ಜನರಲ್‌ನ ಓದುವ ಕೊಠಡಿಯ ಪಕ್ಕದಲ್ಲಿದ್ದ ಕೊಠಡಿಯನ್ನು ತೋರಿಸಿ ಅವನನ್ನು ಇನ್ನೊಬ್ಬ ಸೇವಕನ ಸುಪರ್ದಿಗೆ ಬಿಟ್ಟುಹೋದ. ಇಲ್ಲಿದ್ದ ಸೇವಕನ ಕರ್ತವ್ಯವೇನೆಂದರೆ ದಿನದ ಇಡೀ ಬೆಳಗಿನ ಸಮಯವೆಲ್ಲಾ ಈ ಕೊಠಡಿಯಲ್ಲಿಯೇ ಇದ್ದು, ಭೇಟಿ ಮಾಡಲು ಬಂದವರ ಬಗ್ಗೆ ಜನರಲ್‌ಗೆ ತಿಳಿಸುವುದು. ಈ ಎರಡನೇ ವ್ಯಕ್ತಿ, ಒಂದು ಕೋಟನ್ನು ಧರಿಸಿದ್ದ, ಮತ್ತು ಸುಮಾರು ನಲವತ್ತು ವರ್ಷ ವಯಸ್ಸಿನವನಾಗಿದ್ದ; ಇವನು ಜನರಲ್‌ನ ವಿಶೇಷ ಓದುವ ಕೊಠಡಿಯಲ್ಲಿನ ಸೇವಕನಾಗಿದ್ದ, ಮತ್ತು ತನ್ನ ವಿಶೇಷವಾದ ಮಹತ್ವದ ಬಗ್ಗೆ ಸದಾ ಅರಿವುಳ್ಳವನಂತೆ ಇರುತ್ತಿದ್ದ.

“ಪಕ್ಕದ ಕೋಣೆಯಲ್ಲಿ ದಯವಿಟ್ಟು ಕಾಯುತ್ತಿರು ಮತ್ತು ನಿನ್ನ ಆ ಗಂಟನ್ನು ಇಲ್ಲಿಯೇ ಇಡು” ಅಂತ ಬಾಗಿಲು ಕಾಯುವ ವ್ಯಕ್ತಿ ತನ್ನದೇ ಆದ ಆರಾಮ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ ಹೇಳಿದ. ಅವನ ಪಕ್ಕದಲ್ಲಿಯೇ ಪ್ರಿನ್ಸ್ ಇನ್ನೊಂದು ಕುರ್ಚಿಯಲ್ಲಿ ತನ್ನ ಮಂಡಿಗಳ ಮೇಲೆ ಗಂಟನ್ನು ಇಟ್ಟುಕೊಂಡು ಆಸೀನನಾಗುತ್ತಿದ್ದದನ್ನು ಅವನು ತೀವ್ರವಾದ ಆಶ್ಚರ್ಯದಿಂದ ನೋಡಿದ.

“ನಿನಗೆ ಅಭ್ಯಂತರವಿಲ್ಲದಿದ್ದರೆ, ನಾನು ಇಲ್ಲಿಯೇ ನಿನ್ನ ಜೊತೆ ಕುಳಿತುಕೊಳ್ಳುತ್ತೇನೆ” ಎಂದು ಪ್ರಿನ್ಸ್ ಹೇಳಿದ; “ನಾನು ಅಲ್ಲಿಗಿಂತ ಇಲ್ಲೇ ಕುಳಿತುಕೊಳ್ಳಲು ಇಷ್ಟಪಡುತ್ತೇನೆ.”

“ಓ, ನೀನಿಲ್ಲಿರುವ ಹಾಗಿಲ್ಲ. ನೀನೊಬ್ಬ ಸಂದರ್ಶಕ. ಹೇಳಬೇಕೆಂದರೆ ಅತಿಥಿ. ನೀನು ಜನರಲ್‌ನನ್ನೇ ಖುದ್ದಾಗಿ ನೋಡಲು ಬಂದಿರುವೆಯಾ?”

ಕಣ್ಣಿಗೆ ರಾಚುವಂತಿದ್ದ ಆ ರೀತಿಯ ಕೊಳಕು ಮನುಷ್ಯ ಜನರಲ್‌ನನ್ನು ಭೇಟಿ ಮಾಡಲು ಬಂದಿರುವುದನ್ನ ಆ ಮನುಷ್ಯನಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಮತ್ತು ಇನ್ನೊಮ್ಮೆ ಪ್ರಶ್ನಿಸಲು ನಿರ್ಧರಿಸಿ ಕೇಳಿದ.

“ಹೌದು ಅವರ ಜೊತೆ ನನ್ನ ವ್ಯವಹಾರವೊಂದಿದೆ” ಪ್ರಿನ್ಸ್ ಶುರುಮಾಡಿದ.

“ನಿನ್ನ ವ್ಯವಹಾರ ಏನಿರಬಹುದು ಎಂದು ನಾನು ನಿನ್ನನ್ನು ಕೇಳುವುದಿಲ್ಲ; ನಿನ್ನ ವಿಷಯದ ಬಗ್ಗೆ ಜನರಲ್‌ಗೆ ತಿಳಿಸುವುದು ಮಾತ್ರ ನನ್ನ ಕೆಲಸ; ಕಾರ್ಯದರ್ಶಿ ಬರುವವರೆಗೂ ನಾನದನ್ನ ಮಾಡುವುದಕ್ಕಾಗುವುದಿಲ್ಲ.”

ಆ ಮನುಷ್ಯನಲ್ಲಿನ ಇವನ ಬಗ್ಗೆಯ ಅನುಮಾನ ಜಾಸ್ತಿಯಾಗುತ್ತಾ ಹೋಯಿತು ಅನ್ನಿಸುತ್ತದೆ. ಪ್ರತಿದಿನ ಅಲ್ಲಿಗೆ ಬರುವ ಸಂದರ್ಶಕರಿಗಿಂತ ಈ ಪ್ರಿನ್ಸ್ ವಿಭಿನ್ನವಾಗಿದ್ದ. ಜನರಲ್ ವ್ಯವಹಾರ ಸಂಬಂಧಿತವಾಗಿ ವಿವಿಧ ರೀತಿಯ ಸಂದರ್ಶಕರನ್ನ ಭೇಟಿಯಾಗುತ್ತಿದ್ದರೂ ಕೂಡ, ಈ ಸೇವಕ ಸದರಿ ಸಂದರ್ಶಕನ ಬಗ್ಗೆ ಮಾತ್ರ ಬಹಳಷ್ಟು ಅನುಮಾನಗಳನ್ನ ಹೊಂದಿದ್ದ. ಈ ಸಂದರ್ಭದಲ್ಲಿ ಕಾರ್ಯದರ್ಶಿಯು ಒಬ್ಬ ಮಧ್ಯವರ್ತಿಯಾಗಿರುವುದು ಅಗತ್ಯ ಎಂದು ಅವನು ತಿಳಿದಿದ್ದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

“ನಿಜವಾಗಲೂ ನೀನು ವಿದೇಶದಿಂದ ಬರುತ್ತಿದ್ದೀಯ?”

ಅವನು ಕೊನೆಗೂ ಸ್ವಲ್ಪ ಗೊಂದಲಕ್ಕೊಳಗಾದವನಂತೆ ವಿಚಾರಿಸಿಯೇಬಿಟ್ಟ. ಅವನು ತನ್ನ ವಾಕ್ಯವನ್ನ “ನೀನು ನಿಜವಾಗಲೂ ಪ್ರಿನ್ಸ್ ಮೂಯಿಶ್ಕಿನ್ ಅಲ್ಲ ಅಲ್ಲವಾ?” ಎಂಬ ಅರ್ಥ ಬರುವ ರೀತಿಯಲ್ಲಿ ಶುರುಮಾಡಿದ.

“ಹೌದು, ನೇರವಾಗಿ ರೈಲಿನಿಂದ ಬರುತ್ತಿದ್ದೇನೆ! ನೀನು ’ಖಂಡಿತವಾಗಿಯೂ ಪ್ರಿನ್ಸ್ ಮೂಯಿಶ್ಕಿನ್ ಅಲ್ಲ ಅಲ್ಲವಾ?’ ಅಂತ ಕೇಳುವುದು ಈಗಷ್ಟೇ ನಿನ್ನ ಉದ್ದೇಶವಾಗಿತ್ತಲ್ಲವಾ? ಆದರೆ ಆ ರೀತಿ ಕೇಳಲು ನಿನ್ನ ಸಭ್ಯತೆ ನಿನಗೆ ಅಡ್ಡ ಬಂದಿತಲ್ಲವ?”

“ಹಾ!” ಆಶ್ಚರ್ಯಗೊಂಡ ಸೇವಕ ಗುನುಗುಟ್ಟಿದ.

“ನಾನು ನಿನ್ನನ್ನು ಮೋಸಗೊಳಿಸುತ್ತಿಲ್ಲ ಎಂದು ಭರವಸೆ ಕೊಡುತ್ತೇನೆ; ನನ್ನ ಉಡುಗೆ ಈ ರೀತಿ ಇರುವುದಕ್ಕೆ ಮತ್ತು ಒಂದು ಗಂಟನ್ನು ಜೊತೆಯಲ್ಲಿ ತಂದಿರುವುದರ ಬಗ್ಗೆ, ನೀನೇನೂ ನನಗೋಸ್ಕರ ಉತ್ತರಿಸಬೇಕಾಗಿಲ್ಲ. ಆಶ್ಚರ್ಯಪಡಬೇಕಾದ್ದೂ ಇಲ್ಲ. ಸತ್ಯ ಸಂಗತಿ ಏನೆಂದರೆ ನನ್ನ ಈಗಿನ ಪರಿಸ್ಥಿತಿ ಅಷ್ಟೊಂದು ಉತ್ತಮವಾಗೇನೂ ಇಲ್ಲ.”

“ಅಯ್ಯೊ! ಇಲ್ಲ, ನನಗೆ ಅದರ ಬಗ್ಗೆ ಹೆದರಿಕೆಯೇನೂ ಇಲ್ಲ. ನೋಡು; ನಾನೀಗ ನಿನ್ನ ಉಪಸ್ಥಿತಿಯನ್ನ ಜನರಲ್‌ಗೆ ತಿಳಿಸಬೇಕು, ವಿಷಯ ಅಷ್ಟೇ. ಕಾರ್ಯದರ್ಶಿ ಇನ್ನೇನು ಸೀದ ಬಂದೇಬಿಡುತ್ತಾನೆ, ನೀನು ಇಲ್ಲಿಗೆ ಬಂದಿರುವುದು, ಈ ಪ್ರಶ್ನೆ ಕೇಳಿದ್ದಕ್ಕೆ ನನ್ನನ್ನು ಕ್ಷಮಿಸು, ಅಂದರೆ ನೀನು ಇಲ್ಲಿಗೆ ಬಂದಿರುವುದು ಬಿಕ್ಷೆ ಬೇಡುವುದಕ್ಕಾಗಿ ಅಲ್ಲದೇ ಇದ್ದರೆ, ಅಥವ ನೀನು ಅದೇ ಕಾರಣಕ್ಕಾಗಿ ಬಂದಿದ್ದರೆ ತಿಳಿಸಿಬಿಡು.”

“ಓ, ಖಂಡಿತ ಇಲ್ಲ ಪ್ರೀತಿಪಾತ್ರನೆ, ಈ ವಿಷಯದಲ್ಲಿ ನೀನು ನಿರಾಳವಾಗಿರಬಹುದು. ನಾನು ಬಂದಿರುವುದು ಬೇರೆಯದೇ ಆದ ವಿಷಯಕ್ಕೆ.”

“ನಿನ್ನನ್ನು ಆ ರೀತಿ ಕೇಳಿದ್ದಕ್ಕೆ ನೀನು ಕ್ಷಮಿಸಬೇಕು, ನಿನಗೆ ಗೊತ್ತಲ್ಲ, ನಿನ್ನ ಹೊರನೋಟ ಆ ರೀತಿ ಕೇಳುವಂತೆ ಪ್ರೇರೇಪಿಸಿತು. ಆದರೆ ಕಾರ್ಯದರ್ಶಿಗೋಸ್ಕರ ಸ್ವಲ್ಪ ಕಾಯುತ್ತಿರು; ಜನರಲ್ ಈಗ ಕಾರ್ಯನಿರತರಾಗಿದ್ದಾರೆ, ಆದರೆ ಖಂಡಿತವಾಗಿಯೂ ಕಾರ್ಯದರ್ಶಿ ಸದ್ಯದಲ್ಲೇ ಆಚೆಗೆ ಬರುತ್ತಾನೆ.”

“ಓ.. ನೋಡು ನಾನಿನ್ನೂ ಸ್ವಲ್ಪಕಾಲ ಕಾಯಬೇಕಾದರೆ, ನಿನಗೆ ಬೇಸರವಾಗದಿದ್ದಲ್ಲಿ ಇಲ್ಲಿ ಧೂಮಪಾನ ಮಾಡಲು ಯಾವುದಾದರೂ ಸ್ಥಳವನ್ನ ತೋರಿಸುತ್ತೀಯ? ನನ್ನದೇ ಆದ ಪೈಪ್ ಮತ್ತು ಹೊಗೆಸೊಪ್ಪು ನನ್ನ ಬಳಿ ಇದೆ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

“ಧೂಮಪಾನ?” ಆ ಮನುಷ್ಯ ಅವಾಕ್ಕಾಗಿ ತಿರಸ್ಕಾರದಿಂದ ಮತ್ತು ಆಶ್ಚರ್ಯಚಕಿತನಾಗಿ ಕೇಳಿದ, ತನ್ನ ಕಿವಿಯನ್ನೇ ತಾನು ನಂಬದವನಂತೆ, ಪ್ರಿನ್ಸ್‌ನ ಕಡೆಗೆ ಪಿಳಿಪಿಳಿ ನೋಡುತ್ತಾ. “ಇಲ್ಲ ಸರ್, ನೀವಿಲ್ಲಿ ಧೂಮಪಾನ ಮಾಡುವ ಹಾಗಿಲ್ಲ, ನೀವು ಯಾವುದೇ ಸಂಕೋಚವಿಲ್ಲದೆ ಇಂತಹ ಆಲೋಚನೆ ಮಾಡಿದ್ದರ ಬಗ್ಗೆಯೇ ನನಗೆ ಆಶ್ಚರ್ಯವಾಗುತ್ತಿದೆ, ನನ್ನ ಪ್ರಕಾರ ಇದೊಂದು ಸಲ್ಲದ ಆಲೋಚನೆ.”

“ಓ, ನಾನು ಹೇಳಿದ್ದು ಈ ಕೋಣೆಯಲ್ಲೇ ಎಂದಲ್ಲ! ನನಗೂ ಗೊತ್ತು ಇಲ್ಲಿ ಧೂಮಪಾನ ಮಾಡುವ ಹಾಗಿಲ್ಲ ಅಂತ, ನಾನು ಇನ್ನ್ಯಾವುದಾದರೊ ಕೋಣೆಗೆ ಧೂಮಪಾನ ಮಾಡಲು ಹೋಗುತ್ತೇನೆ, ನೀನು ಎಲ್ಲಿ ತೋರಿಸುತ್ತೀಯೊ ಅಲ್ಲಿಗೆ. ನಾನು ಬಹಳವಾಗಿ ಈ ಧೂಮಪಾನದ ಚಟ ಬೆಳೆಸಿಕೊಂಡಿದ್ದೇನೆ, ಮೂರು ಗಂಟೆಗಳಿಂದ ನಾನು ಒಂದು ಪಫ್‌ಅನ್ನೂ ಎಳೆದಿಲ್ಲ; ಏನೇ ಆದರೂ ನಿನ್ನಿಷ್ಟದಂತೆ ಆಗಲಿ.”

“ಈ ರೀತಿಯ ವ್ಯಕ್ತಿಯ ಬಗ್ಗೆ ನಾನು ಅದು ಹೇಗೆ ಜನರಲ್‌ಗೆ ತಿಳಿಸಲಿ?” ಸೇವಕ ಗೊಣಗಿಕೊಂಡ. “ಮೊದಲನೆಯದಾಗಿ ನೀನು ಈ ಕೋಣೆಯಲ್ಲಿರುವುದೇ ಅಸಮಂಜಸವಾದದ್ದು; ನೀನು ನಿರೀಕ್ಷಣಾ ಕೋಣೆಯಲ್ಲಿಯೇ ಇರಬೇಕಾಗಿತ್ತು. ಕಾರಣು ನೀನೂ ಒಂದು ಬಗೆಯ ಸಂದರ್ಶಕನೇ, ನಿಜವಾಗಲೂ ಹೇಳಬೇಕೆಂದರೆ ಒಬ್ಬ ಅತಿಥಿ. ಈಗ ಇದಕ್ಕೋಸ್ಕರವೇ ನಾನು ಉತ್ತರ ಕೊಡಬೇಕಾಗುತ್ತದೆ. ನೀನಿಲ್ಲೇ ಟಿಕಾಣಿ ಹೂಡಲು ಬಂದಿಲ್ಲ ತಾನೆ?” ಪುನಃ ಪ್ರಿನ್ಸ್‌ನ ಗಂಟಿನ ಕಡೆಗೆ ವಿಚಲಿತನಾದವನಂತೆ ನೋಡುತ್ತಾ ಹೇಳಿದ.

“ಇಲ್ಲ, ಆ ರೀತಿಯೇನೂ ಇಲ್ಲ. ಅವರು ನನ್ನನ್ನು ಇಲ್ಲೇ ಇರಲು ಆಹ್ವಾನಿಸಿದರೂ ಕೂಡ ನಾನಿಲ್ಲಿ ವಾಸಿಸುವುದು ಅಸಂಭವ. ನಾನು ಬಂದಿರುವುದು ಸುಮ್ಮನೇ ಅವರ ಪರಿಚಯವನ್ನ ಮಾಡಿಕೊಳ್ಳುವುದಕ್ಕೋಸ್ಕರ ಅಷ್ಟೇ, ಮತ್ತು ಇನ್ನ್ಯಾವುದಕ್ಕೂ ಅಲ್ಲ.”

“ಪರಿಚಯ ಮಾಡಿಕೊಳ್ಳುವುದಕ್ಕಾ?” ಆ ಮನುಷ್ಯ ಬೆರಗುಗೊಂಡು ಮತ್ತು ಇಮ್ಮಡಿಯಾದ ಅನುಮಾನದಿಂದ ಕೇಳಿದ. “ಹಾಗಾದರೆ ಜನರಲ್ ಜೊತೆ ವ್ಯವಹಾರವಿದೆ ಎಂದು ಯಾಕೆ ಹೇಳಿದೆ?”

“ಅಂದರೆ, ಒಂದು ಸಣ್ಣ ವ್ಯವಹಾರ ಅಷ್ಟೆ. ಸ್ವಲ್ಪ ಸಲಹೆಗಾಗಿ ಜನರಲ್‌ನನ್ನು ಕೇಳುತ್ತೇನೆ; ಆದರೆ ನನ್ನ ಮುಖ್ಯ ಉದ್ದೇಶ ಕೇವಲ ನನ್ನನ್ನು ಪರಿಚಯಿಸಿಕೊಳ್ಳುವುದು ಮಾತ್ರ, ಕಾರಣ ನಾನು ಪ್ರಿನ್ಸ್ ಮೂಯಿಶ್ಕಿನ್, ಮತ್ತು ಮೇಡಮ್ ಎಪಾಂಚಿನ್ ಆ ಮೂಯಿಶ್ಕಿನ್ ಕುಟುಂಬದ ಉಳಿದಿರುವ ಒಂದೇ ಕುಡಿ, ಅವಳು ಮತ್ತು ನನ್ನನ್ನು ಬಿಟ್ಟರೆ ಮೂಯಿಶ್ಕಿನ್‌ಗಳಲ್ಲಿ ಇನ್ನ್ಯಾರೂ ಉಳಿದಿಲ್ಲ.”

“ಏನು, ನೀನು ಸಂಬಂಧಿಕ ಹಾಗಾದರೆ, ಹೌದ?” ಸೇವಕ ಕೇಳಿದ. ಅವನೆಷ್ಟು ದಿಗ್ಭ್ರಮೆಗೊಂಡ ಎಂದರೆ ಅವನೀಗ ಆದಷ್ಟು ಎಚ್ಚರವಹಿಸಲು ಶುರುಮಾಡಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-3)

“ಹಾಗಂತಲೇ ಹೇಳುವುದಕ್ಕಾಗುವುದಿಲ್ಲ. ಆದರೂ ಎಳೆದು ನೋಡಿದರೆ ನಾನೂ ಕೂಡ ದೂರದ ಸಂಬಂಧಿ. ಎಷ್ಟು ದೂರದ ಸಂಬಂಧಿ ಎಂದರೆ ಯಾರೂ ಗಮನಕ್ಕೆ ತೆಗೆದುಕೊಳ್ಳಲಾರದಷ್ಟು. ನಾನು ಒಮ್ಮೆ ನಿನ್ನ ಯಜಮಾನಿಗೆ ವಿದೇಶದಿಂದ ಕಾಗದ ಬರೆದಿದ್ದೆ, ಆದರೆ ಅವರು ಉತ್ತರಿಸಲಿಲ್ಲ. ಏನೇ ಆದರೂ, ನಾನು ಈ ಊರಿಗೆ ಬಂದ ತಕ್ಷಣ ಅವರ ಪರಿಚಯ ಮಾಡಿಕೊಳ್ಳುವುದು ಸಮಂಜಸ ಎಂದು ಪರಿಗಣಿಸಿದೆ. ನಾನಿದನ್ನೆಲ್ಲಾ ನಿನಗೆ ಹೇಳುತ್ತಿರುವುದು ನಿನ್ನ ಮನಸ್ಸಿನಲ್ಲಿರುವ ಗೊಂದಲವನ್ನ ನಿವಾರಿಸುವುದಕ್ಕೋಸ್ಕರ, ಯಾಕೆಂದರೆ ನೀನು ನನ್ನ ಕಾರಣಕ್ಕೋಸ್ಕರ ಗೊಂದಲಗೊಂಡಂತೆ ಕಾಣುತ್ತದೆ. ಈಗ ನೀನು ಮಾಡಬೇಕಾದದ್ದಿಷ್ಟೆ. ಮೂಯಿಶ್ಕಿನ್ ಅನ್ನುವವನು ಬಂದಿದ್ದಾನೆ ಅಂತ ಜನರಲ್‌ಗೆ ನಿವೇದಿಸಿದರಷ್ಟೆ ಸಾಕು; ನನ್ನ ಭೇಟಿಯ ಉದ್ದೇಶ ಸಾಕಷ್ಟು ನೇರವಾದದ್ದು. ಅವರು ಬರಮಾಡಿಕೊಂಡರೆ ತುಂಬಾ ಸಂತೋಷಕರವಾಗಿರುತ್ತದೆ, ಬರಮಾಡಿಕೊಳ್ಳದೇ ಇದ್ದರೆ ಅದೂ ಕೂಡ ಅಷ್ಟೇ ಸಂತೋಷಕರದ್ದಾಗಿರುತ್ತದೆ. ಆದರೆ ಅವರು ಖಂಡಿತವಾಗಿಯೂ ನನ್ನನ್ನು ಬರಮಾಡಿಕೊಳ್ಳುತ್ತಾರೆ ಅನ್ನುವುದು ನನ್ನ ನಂಬಿಕೆ: ಮೇಡಮ್ ಎಪಾಂಚಿನ್‌ಗೆ ಖಂಡಿತವಾಗಿಯೂ ಅವರ ಕುಟುಂಬದ ಉಳಿದಿರುವ ಒಬ್ಬನೇ ಸದಸ್ಯನನ್ನು ನೋಡುವ ಕುತೂಹಲ ಇದ್ದೇ ಇರುತ್ತದೆ, ಅವಳ ಮ್ಯೂಶಿಕಿನ್ ವಂಶಾವಳಿಯ ಬಗ್ಗೆ ಅವಳು ಹೆಮ್ಮೆಪಡುತ್ತಾಳೆ, ನಾನಿದನ್ನು ಅನೇಕ ಬಾರಿ ಕೇಳಿ ತಿಳಿದುಕೊಂಡಿದ್ದೇನೆ.”

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...