ಯಾವ ದೃಷ್ಟಿಯಿಂದ ನೋಡಿದರೂ ಕರ್ನಾಟಕದ ಮತದಾರರು ಒಂದು ಹೊಸ ಪರ್ಯಾಯಕ್ಕಾಗಿ ಕಾಯುತ್ತಿರುವಂತೆ ತೋರುತ್ತಿದೆ. ಇದೀಗ ಸುಮಾರು ಎರಡು ದಶಕಗಳಿಂದ ಈ ಸಂದೇಶವನ್ನು ಅವರು ನೀಡುತ್ತಾ ಬಂದಿದ್ದಾರೆ. ಆದರೆ ಈ ಸೂಚನೆಯನ್ನು ಅರ್ಥಮಾಡಿ ಸ್ಪಂದಿಸುವಂತಹ ರಾಜಕೀಯ ಉದ್ಯಮಶೀಲತೆ ವಿಶಾಲ ಕರ್ನಾಟಕದಲ್ಲಿ ಉದಯಿಸದೇ ಹೋದದ್ದು ದುರಂತ.
ಕರ್ನಾಟಕದ ಮತದಾರರು ಒಂದು ಸಂದೇಶವನ್ನು ಮತ್ತೆ ಮತ್ತೆ ಮತಷ್ಟೂ ಸ್ಪಷ್ಟವಾಗಿ ರವಾನಿಸುತ್ತಿದ್ದಾರೆ. ಸದ್ಯ ರಾಜ್ಯದಲ್ಲಿರುವ ಮೂರೂ ಪಕ್ಷಗಳ ಬಗ್ಗೆ ತಮಗೆ ವಿಶ್ವಾಸವಿಲ್ಲ ಎನ್ನುವುದೇ ಆ ಸಂದೇಶ. ಚಿತ್ರವಿಚಿತ್ರವಾದ ಸನ್ನಿವೇಶದಲ್ಲಿ ನಡೆದ ಎರಡು ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಒತ್ತಟ್ಟಿಗಿಟ್ಟು ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ/ಉಪಚುನಾವಣೆಗಳಲ್ಲಿ ಜನ ನೀಡಿದ ತೀರ್ಪುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅರ್ಥವಾಗುತ್ತದೆ. ಮೊದಲಿಗೆ ಚುನಾವಣಾ ಫಲಿತಾಂಶಗಳ ಅಂಕಿ-ಅಂಶಗಳನ್ನು ನೋಡೋಣ.
ಕರ್ನಾಟಕದ ಮತದಾರ ಒಂದು ಪಕ್ಷಕ್ಕೆ ನೀಡಿದ ಕೊನೆಯ ಸ್ಪಷ್ಟ ತೀರ್ಪು ಎಂದರೆ ಅದು 1999ರ ವಿಧಾನಸಭಾ ಚುನಾವಣೆಯ ಫಲಿತಾಂಶ. ಆ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲೂ ಮತದಾರರು ಯಾವ ಪಕ್ಷದ ಮೇಲೂ ನಮಗೆ ಪೂರ್ತಿ ಭರವಸೆ ಇಲ್ಲ ಅಂತಲೇ ಸಾರುತ್ತಿದ್ದಾರೆ. ಅಂದರೆ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾಗುವ ಕನಿಷ್ಠ 113 ಸ್ಥಾನಗಳನ್ನಾದರೂ ಯಾವೊಂದೂ ಪಕ್ಷಕ್ಕೂ ನೀಡದೆ ಮತ್ತೆ ಮತ್ತೆ ಅತಂತ್ರ ವಿಧಾನಸಭೆಗಳನ್ನು ಸೃಷ್ಟಿಸಿ ಮತದಾರರು ಪಕ್ಷಗಳ ಜತೆ ಚೌಕಾಸಿ ನಡೆಸುತ್ತಲೇ ಇದ್ದಾರೆ.
2013ರಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವುದಕ್ಕೆ ಕಾರಣವಾದ ಮತದಾರರ ತೀರ್ಪು ಇದಕ್ಕೆ ಅಪವಾದ ಅಂತ ಅನ್ನಿಸಬಹುದು. ಆದರೆ ಸ್ವಲ್ಪ ಆಳವಾಗಿ ಯೋಚಿಸಿದ್ದೇ ಆದರೆ ಆ ಚುನಾವಣೆಯ ಫಲಿತಾಂಶವೂ ಕಾಂಗ್ರೆಸ್ ಪರವಾಗಿ ಮತದಾರ ನೀಡಿದ ಸ್ಪಷ್ಟ ತೀರ್ಪು ಎಂದು ಹೇಳುವ ಹಾಗಿಲ್ಲ. ಯಾಕೆಂದರೆ, ಅತಂತ್ರ ವಿಧಾನಸಭೆಯಾಗಬಹುದಾಗಿದ್ದ ಸಾಧ್ಯತೆಯನ್ನು ಬಿಜೆಪಿ ಮೂರು ಹೋಳಾಗಿ ಚುನಾವಣೆಯನ್ನು ಎದುರಿಸಿದ ವಿದ್ಯಮಾನ ತಡೆಹಿಡಿದ ಒಂದೇ ಕಾರಣಕ್ಕೆ ಕಾಂಗ್ರೆಸ್ಸಿಗೆ ಆಗ ಬಹುಮತ ಬಂದಿದ್ದು. ಅದು ಕಾಂಗ್ರೆಸ್ ಪರವಾದ ಜನಾದೇಶವೂ ಆಗಿರಲಿಲ್ಲ, ಸಿದ್ದರಾಮಯ್ಯನವರ ಪರವಾದ ಜನಾದೇಶವೂ ಆಗಿರಲಿಲ್ಲ. ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಜೆಡಿ(ಎಸ್), ಬಿಜೆಪಿ, ಕೆಜೆಪಿ, ಬಿಎಸ್‍ಆರ್‍ಸಿ ಪಕ್ಷಗಳ ಉಮೇದುವಾರರು ಕ್ಷೇತ್ರವಾರು ಪಡೆದ ಮತಗಳನ್ನು ಸ್ವಲ್ಪ ಕೂಲಂಕಷವಾಗಿ ಪರಿಶೀಲಿಸಿದರೆ ಈ ಅಂಶ ಚೆನ್ನಾಗಿ ಮನದಟ್ಟಾಗುತ್ತದೆ.
ಪಕ್ಷಗಳ ಬಗ್ಗೆ ಕರ್ನಾಟಕದ ಮತದಾರರ ಭ್ರಮನಿರಸನ ಎಷ್ಟರಮಟ್ಟಿಗೆ ಇದೆ ಎಂದರೆ ಈ ಪಕ್ಷಗಳು ಏನೇ ಮಾಡಿದರೂ ಮತದಾರರಿಗೆ ಅವುಗಳ ಮೇಲೆ ಪೂರ್ಣವಿಶ್ವಾಸ ಮೂಡುತ್ತಿಲ್ಲ. ಇದಕ್ಕೆ ಪೂರಕವಾಗಿ ಕೆಲವು ಅಂಶಗಳನ್ನು ಗಮನಿಸೋಣ. 2004ರಲ್ಲಿ ಎಸ್.ಎಂ.ಕೃಷ್ಣ ಅವರ ನಾಲ್ಕೂವರೆ ವರ್ಷದ ‘ಉತ್ತಮ ಆಡಳಿತ’ದ ನಂತರ ಜನರಿಗೆ ಕಾಂಗ್ರೆಸ್ಸಿನ ಮೇಲೆ ನಂಬಿಕೆ ಉಳಿಯಲಿಲ್ಲ, 2018ರಲ್ಲಿ ಸಿದ್ದರಾಮಯ್ಯ ಅವರ ಪೂರ್ಣಾವಧಿ, ಭಿನ್ನಮತ-ಮುಕ್ತ ಸರಕಾರದ ‘ಸಾಮಾಜಿಕ ನ್ಯಾಯ ಕ್ರಾಂತಿ’ ಕೂಡಾ ಮತದಾರರಿಗೆ ಕಾಂಗ್ರೆಸ್ಸಿನ ಮೇಲೆ ಭರವಸೆ ಮೂಡಿಸಿಲ್ಲ. ಕೃಷ್ಣ ಸರಕಾರವನ್ನು ಒಪ್ಪದೇ, ಸಿದ್ದರಾಮಯ್ಯ ಸರಕಾರವನ್ನು ಒಪ್ಪದೇ ಕಾಂಗ್ರೆಸ್ಸನ್ನು ತಿರಸ್ಕರಿಸಿದ ಜನರು ಮತ್ತೊಂದು ಪಕ್ಷಕ್ಕೆ ಮಣೆ ಹಾಕಿದ್ದರೆ ಅದು ಸರ್ವೇಸಾಮಾನ್ಯ ಬೆಳವಣಿಗೆಯಾಗುತಿತ್ತು. ಆದರೆ ಹಾಗಾಗಲಿಲ್ಲ. 2004ರಲ್ಲಿ ಕಾಂಗ್ರೆಸ್ಸಿನ ಬದಲಿಗೆ ಬಿಜೆಪಿ ಅಥವಾ ಜನತಾದಳ ಪರ್ಯಾಯ ಎಂಬ ಹಾಗೆ ಜನರಿಗೆ ಅನ್ನಿಸಲಿಲ್ಲ. ಬಿಜೆಪಿಗೆ ಆಗ ಜನ ನೀಡಿದ ಒಟ್ಟು ಸ್ಥಾನಗಳು 76. ಆ ಚುನಾವಣೆಯ ಸಂದರ್ಭದಲ್ಲಿ ಜನತಾದಳದ ಹಲವು ಘಟಾನುಘಟಿ ನಾಯಕರುಗಳು ಬಿಜೆಪಿಗೆ ವಲಸೆ ಹೋಗಿದ್ದರು. ಒಂದೆಡೆ ತನ್ನ ಮೂಲ ಬಲ ಮತ್ತು ಇನ್ನೊಂದೆಡೆ ಅನಾಯಾಸವಾಗಿ ಒಲಿದುಬಂದ ವಲಸಿಗರ ಬಲ. ಇಷ್ಟಿದ್ದರೂ ಗಳಿಸಿದ ಸೀಟುಗಳು ಮಾತ್ರ ಅಷ್ಟೇ.
ಮತ್ತೆ 2018ರಲ್ಲೂ ಇದುವೇ ಆಯಿತು. ಸಿದ್ದರಾಮಯ್ಯ ಸರಕಾರದ ಬದಲಿಗೆ ಬಿಜೆಪಿ ಸರಕಾರ ಬೇಕು ಎನ್ನುವ ರೀತಿಯಲ್ಲಿರಲಿಲ್ಲ ಮತದಾರರ ತೀರ್ಪು. ಮತ್ತೆ ಅತಂತ್ರ ಫಲಿತಾಂಶ. ಕುತಂತ್ರದಿಂದ ಅತಂತ್ರ ಫಲಿತಾಂಶವನ್ನು ಈಗ ಬಿಜೆಪಿ ತನ್ನ ಕಡೆಗೆ ವಾಲಿಸಿದ್ದು ಬೇರೆಯೇ ವಿಚಾರ. ಚುನಾವಣೆಯಲ್ಲಿ ಗಳಿಸಿದ ಸ್ಥಾನಗಳ ಸಂಖ್ಯೆ ಇಲ್ಲಿ ಮುಖ್ಯವಾಗುವುದು, ದುಡ್ಡುಕೊಟ್ಟು ಖರೀದಿಸಿದ ಸಂಖ್ಯಾ ಬಲವಲ್ಲ. ಈ ನಿಟ್ಟಿನಲ್ಲಿ ನೋಡಿದರೆ 2018ರ ಹೊತ್ತಿಗೆ ಬಿಜೆಪಿಗೆ ಇದ್ದ ಅನುಕೂಲಗಳಾದರೂ ಎಂತವುಗಳು. ಯಡಿಯೂರಪ್ಪನವರ ಬಲ ಅರ್ಥಾತ್ ಲಿಂಗಾಯತರ ಬೆಂಬಲ, ನರೇಂದ್ರ ಮೋದಿಯವರ ‘ಮಹಾನ್ ನಾಮ’ ಬಲ ಮತ್ತು ಅಮಿತ್ ಷಾ ಅವರ ಸಂಘಟನಾ ಚಾತುರ್ಯದ ಬೆಂಬಲ – ಹೀಗೆ ಇರಬಹುದಾಗಿದ್ದ ಎಲ್ಲಾ ಅನುಕೂಲಗಳು ಇದ್ದಾಗ್ಯೂ ವಿಧಾನಸಭೆಯಲ್ಲಿ ಕನಿಷ್ಠ ಬಹುಮತವನ್ನು ಮತದಾರ ಬಿಜೆಪಿಗೆ ನೀಡಲಿಲ್ಲ. 2008ರಲ್ಲೂ ಇದೇ ವಿದ್ಯಮಾನವನ್ನು ರಾಜ್ಯ ಕಂಡದ್ದು. ಆ ಹೊತ್ತಿಗೆ ಬಿಜೆಪಿ ಶತಾಯಗತಾಯ ಪ್ರಯತ್ನಿಸಿ, ಗೆಲ್ಲುವ ಸಾಮಥ್ರ್ಯವಿರುವ ವಿವಿಧ ಗುಂಪುಗಳನ್ನು ಬಗಲಿಗೆ ಕಟ್ಟಿಕೊಂಡು ಸಮರ್ಥವಾಗಿ ಎದ್ದು ನಿಂತಿತ್ತು. ಬಿಜೆಪಿಯನ್ನು ಚುನಾವಣೆಗೆ ಒಯ್ದಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಪೂರ್ವವಾದ ಅನುಕಂಪದ ಆಸರೆ ಇತ್ತು. ಇವೆಲ್ಲ ಆಗಿಯೂ ಆ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು 110 ಸೀಟುಗಳನ್ನು. ಅಂದರೆ ಕಾಂಗ್ರೆಸ್ಸಿನ ಬದಲು ಬಿಜೆಪಿಯೂ ಬೇಡಾ ಅಂತ ಅಲ್ಲವೇ ತೀರ್ಪು. ಜನತಾದಳದ ಜನ ಬೆಂಬಲವಂತೂ 2004ರ ನಂತರ ಕುಸಿಯುತ್ತಾ ಕುಸಿಯುತ್ತಾ ಸಾಗಿ ಈಗ ಪಾತಾಳ ತಲುಪಿದೆ. ಅದೊಂದು ರಾಜ್ಯವ್ಯಾಪೀ ಪಕ್ಷವಲ್ಲದ ಕಾರಣ ಮತ್ತು ಅದರ ನಾಯಕರುಗಳಿಗೆ ಅಧಿಕಾರ ಹಿಡಿಯುವುದಕ್ಕಿಂತ ಹೆಚ್ಚಾಗಿ ‘ಕಿಂಗ್ ಮೇಕರ್’ ಆಗುವುದರಲ್ಲೇ ಹೆಚ್ಚು ಆಸಕ್ತಿ ಇದ್ದಂತೆ ಕಾಣುವುದರಿಂದ ಆ ಪಕ್ಷದ ಮೇಲೆ ಜನ ಭರವಸೆ ಇರಿಸಿಲ್ಲ ಅಂತ ಹೇಳುವುದಕ್ಕೆ ವಿಶೇಷ ಪುರಾವೆಗಳೇನೂ ಅಗತ್ಯವಿಲ್ಲ.
ಯಾವ ದೃಷ್ಟಿಯಿಂದ ನೋಡಿದರೂ ಕರ್ನಾಟಕದ ಮತದಾರರು ಒಂದು ಹೊಸ ಪರ್ಯಾಯಕ್ಕಾಗಿ ಕಾಯುತ್ತಿರುವಂತೆ ತೋರುತ್ತಿದೆ. ಇದೀಗ ಸುಮಾರು ಎರಡು ದಶಕಗಳಿಂದ ಈ ಸಂದೇಶವನ್ನು ಅವರು ನೀಡುತ್ತಾ ಬಂದಿದ್ದಾರೆ. ಆದರೆ ಈ ಸೂಚನೆಯನ್ನು ಅರ್ಥಮಾಡಿ ಸ್ಪಂದಿಸುವಂತಹ ರಾಜಕೀಯ ಉದ್ಯಮಶೀಲತೆ ವಿಶಾಲ ಕರ್ನಾಟಕದಲ್ಲಿ ಉದಯಿಸದೇ ಹೋದದ್ದು ದುರಂತ. ರಾಷ್ಟ್ರ ರಾಜಕೀಯದ ಮಟ್ಟಿಗೆ ಕರ್ನಾಟಕದ ಮತದಾರರು ಕೂಡಾ ಉತ್ತರದ ರಾಜ್ಯಗಳ ಮತದಾರರೊಂದಿಗೆ ಹೆಜ್ಜೆ ಹಾಕಿ ನರೇಂದ್ರ ಮೋದಿಯವರ ಬಿಜೆಪಿಗೆ ಸ್ಪಷ್ಟ ಬೆಂಬಲ ನೀಡಿದ್ದಾರೆ. ಆದರೆ ರಾಜ್ಯದ ಆಡಳಿತಕ್ಕೆ ಸಂಬಂಧಿಸಿದಂತೆ ಅದ್ಯಾಕೋ ಕರ್ನಾಟಕಕ್ಕೆ ಬಿಜೆಪಿಯ ಮೇಲೆ ನಂಬಿಕೆ ಮೂಡುತ್ತಿಲ್ಲ. ಕಾಂಗ್ರೆಸ್ಸಿನ ಬಗ್ಗೆ ಒಂದು ಕಾಲಕ್ಕೆ ಇದ್ದ ನಂಬಿಕೆ ಮರಳಿ ಬರುತ್ತಿಲ್ಲ. ಜನತಾದಳ ಈ ನಿಟ್ಟಿನಲ್ಲಿ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿಲ್ಲ. ಮತದಾರರ ಪಾಲಿಗೆ ಪರ್ಯಾಯಗಳು ಕಾಣಿಸುತ್ತಿಲ್ಲ, ಇದ್ದ ಪಕ್ಷಗಳ ಬಗ್ಗೆ ಭರವಸೆ ಇರಿಸಲು ಅವರು ತಯಾರಿಲ್ಲ. ಅವರು ಮತ್ತೆ ಮತ್ತೆ ಸ್ಪಷ್ಟವಾದ ಅತಂತ್ರ ವಿಧಾನಸಭೆಗಳನ್ನು ಸೃಷ್ಟಿಸುತ್ತಾ, ಅಥವಾ ಸ್ವತಂತ್ರ-ಅತಂತ್ರಗಳ ಗಡಿಯಲ್ಲಿರುವ ವಿಧಾನಸಭೆಗಳನ್ನು ಆರಿಸುತ್ತಾ ತಮ್ಮ ಅಸಹಾಯಕತೆಯನ್ನು ಮತ್ತು ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಇದ್ದಾರೆ. ಈ ಸ್ಥಿತಿಯಲ್ಲಿ, ಚುನಾವಣೋತ್ತರ ಮೈತ್ರಿಗಳ ಮೂಲಕ, ‘ಆಪರೇಷನ್ ಕಮಲ’ಗಳ ಮೂಲಕ, ಉಪಚುನಾವಣೆಗಳನ್ನು ಕೃತಕವಾಗಿ ಸೃಷ್ಟಿಸುವ ಮೂಲಕ ಹೇಗೋ ಹೇಗೋ ಒಂದು ಒಲ್ಲದ ಸರಕಾರವನ್ನು ಜನರ ಮೇಲೆ ಹೇರುವ ಪ್ರಯತ್ನ ನಡೆಯುತ್ತಲೇ ಇದೆ.
ಕರ್ನಾಟಕಕ್ಕೆ ಕರ್ನಾಟಕದ್ದೇ ಆದ ಪರ್ಯಾಯ ರಾಜಕೀಯ ಪಕ್ಷವೊಂದರ ಅಗತ್ಯವಿದೆ ಮತ್ತು ಅದಕ್ಕೆ ಕಾಲ ಕೂಡಿಬಂದಿದೆ ಎಂದಾಕ್ಷಣ ಕೆಲವರು ಈ ರಾಜ್ಯದಲ್ಲಿ ಅಂತಹ ಪಕ್ಷಗಳಿಗೆ ಅವಕಾಶವಿಲ್ಲವೆಂದೂ, ಹಿಂದೆ ಹಲವು ಘಟಾನುಘಟಿ ನಾಯಕರು ಇಂತಹ ಸಾಹಸಕ್ಕೆ ಮುಂದಾಗಿ ಕೈಸುಟ್ಟುಕೊಂಡಿದ್ದಾರೆಂದೂ ಒಂದೇ ಉಸಿರಿಗೆ ಹೇಳಿಬಿಡುತ್ತಾರೆ. ಈ ಅನುಭವದ ಮಾತುಗಳನ್ನು ಈಗ ನಯವಾಗಿ ಮತ್ತು ವಿನಮ್ರವಾಗಿ ತಿರಸ್ಕರಿಸುವ ಕಾಲಬಂದಿದೆ. ಕಾರಣ ಇಷ್ಟೇ. ಹಿಂದೆ ಹಲವು ಬಾರಿ ಪ್ರಾದೇಶಿಕ ಪಕ್ಷಗಳನ್ನು ಕರ್ನಾಟಕದ ಮಣ್ಣಿನಿಂದ ಬೆಳೆಸುವ ಪ್ರಯತ್ನ ಕೈಗೂಡಲಿಲ್ಲ ಎನ್ನುವುದು ಸತ್ಯ. ಆದರೆ ಹಿಂದೆ ಪ್ರಾರಂಭವಾದ ಯಾವುದೇ ಪ್ರಾದೇಶಿಕ ಪಕ್ಷ ಒಂದು ಕಾಲದ ರಾಜಕೀಯ ಅಗತ್ಯಕ್ಕೆ ಓಗೊಟ್ಟು ಪ್ರಾರಂಭವಾದ ಪಕ್ಷವಾಗಿರಲಿಲ್ಲ. ಹಿಂದೆ ಪ್ರಾರಂಭವಾದ ಯಾವ ಪ್ರಾದೇಶಿಕ ಪಕ್ಷವೂ ಕೂಡಾ ಮತದಾರರು ಪರ್ಯಾಯವೊಂದನ್ನು ಎದುರು ನೋಡುತಿದ್ದಾರೆ ಎಂಬ ಕಾರಣಕ್ಕೆ ಪ್ರಾರಂಭವಾಗಿರಲಿಲ್ಲ. ಹಿಂದೆ ಆಗಿಹೋದ ಬಹುತೇಕ ಪಕ್ಷಗಳು ಒಂದೋ ಒಬ್ಬ ನಾಯಕ ತಾನು ಬಿಟ್ಟು ಬಂದ ಪಕ್ಷಕ್ಕೆ ಪಾಠ ಕಲಿಸಲು ಅಸ್ತಿತ್ವಕ್ಕೆ ಬಂದ ಪಕ್ಷಗಳು, ಇಲ್ಲವೇ ಯಾವುದೋ ವ್ಯಕ್ತಿ ತನ್ನ ರಾಜಕೀಯ ಮಹತ್ವಾಕಾಂಕ್ಷೆಯನ್ನು ಪೂರೈಸಲು ತನ್ನದೇ ಆದ ಒಂದು ವೇದಿಕೆ ನಿರ್ಮಿಸಿ ಅಧಿಕಾರ-ರಾಜಕೀಯದಲ್ಲಿ ಪ್ರಯೋಗ ನಡೆಸುವ ಸಲುವಾಗಿ ಹುಟ್ಟಿಕೊಂಡ ಪಕ್ಷಗಳು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನಾಗಲೀ, ಕರ್ನಾಟಕ ವಿಕಾಸ ಪಕ್ಷವನ್ನಾಗಲೀ ಸ್ಥಾಪಿಸಿದ್ದು ಕರ್ನಾಟಕದ ರಾಜಕೀಯದಲ್ಲಿ ಉಂಟಾದ ಶೂನ್ಯವೊಂದನ್ನು ತುಂಬುವ ಉದ್ದೇಶದಿಂದಲ್ಲ. ಅವರ ಉದ್ದೇಶ ತನ್ನ ಪಕ್ಷ ಅಧಿಕಾರ ಹಿಡಿಯಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದಾಗಿತ್ತು. ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದ್ದು, ದೇವೇಗೌಡರು ಸಮಾಜವಾದಿ ಜನತಾ ಪಕ್ಷ ಸ್ಥಾಪಿಸಿದ್ದು ಕೂಡಾ ಇಂತಹ ಉದ್ದೇಶಗಳ ಹಿನ್ನೆಲೆಯಲ್ಲೇ. ಇನ್ನು ವಿಜಯ ಮಲ್ಯ, ಹರಿಕೋಡೆ ಮುಂತಾದ ಉದ್ಯಮಿಗಳು ಪಕ್ಷ ಸ್ಥಾಪಿಸಿದ್ದು ತಮ್ಮ ರಾಜಕೀಯ ಆಸಕ್ತಿಗಳಿಗೆ ಒಂದು ಮೂರ್ತ ರೂಪ ಕೊಡುವ ಉದ್ದೇಶದಿಂದ. ದೇವರಾಜ ಅರಸು ಅವರ ಕರ್ನಾಟಕ ಕ್ರಾಂತಿರಂಗ ಅರಸು ಅವರು ಬದುಕಿ ಉಳಿಯುತಿದ್ದರೆ ಯಶಸ್ಸು ಗಳಿಸುತ್ತಿರಲಿಲ್ಲ ಅಂತ ಈಗ ಹೇಳುವುದು ಹೇಗೆ? ಇವೆಲ್ಲವುಗಳಿಗಿಂತ ಆಚೆಗೆ ಯಾರಾದರೂ ಕರ್ನಾಟಕದಲ್ಲಿ ಕರ್ನಾಟಕದ್ದೇ ಆದ ಒಂದು ಪಕ್ಷವನ್ನು ಕಟ್ಟುವ ಅಪ್ಪಟ ಪ್ರಯತ್ನ ನಡೆಸಿ ವಿಫಲರಾಗಿದ್ದರೂ ಕರ್ನಾಟಕದ ಮಣ್ಣಿನಲ್ಲಿ ಇನ್ನೊಂದು ಪಕ್ಷಕ್ಕೆ ಅವಕಾಶವೇ ಇಲ್ಲ ಎನ್ನಲು ಅಷ್ಟು ಸಾಲದು. ನಾಲ್ಕು ಕಾರಣಗಳಿಗೆ ಈ ಕಾಲ ಭಿನ್ನವಾಗಿದೆ ಮತ್ತು ಹೊಸ ರಾಜಕೀಯ ಪ್ರಯೋಗಕ್ಕೆ ಪಕ್ವವಾಗಿದೆ ಎನ್ನಬಹುದು. ಮೊದಲನೆಯದ್ದು, ಹಿಂದೆ ಯಾವತ್ತೂ ಇಲ್ಲದ ರೀತಿಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಕರ್ನಾಟಕದ ಜನತೆಗೆ ಒಂದು ರೀತಿಯ ಉದಾಸೀನ ಬಂದುಬಿಟ್ಟಿದೆ. ಉಳಿದಂತೆ ಜನತಾದಳ ಈ ಎರಡು ಪಕ್ಷಗಳಿಗೆ ಪರ್ಯಾಯ ಎನ್ನುವಂತೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಿಲ್ಲ, ಒಡ್ಡಿಕೊಂಡರೂ ಜನ ಅದನ್ನು ಒಪ್ಪಿಕೊಳ್ಳುವಂತೆಯೂ ಕಾಣುತ್ತಿಲ್ಲ. ಈ ಕಾಲ ಭಿನ್ನವಾಗಿದೆ ಅಂತ ಹೇಳಲು ಎರಡನೆಯ ಕಾರಣ ಏನೆಂದರೆ ಹೊಸ ರೀತಿಯಲ್ಲಿ ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಎನ್ನುವ ವಾದ ಸತ್ಯವಲ್ಲ ಎನ್ನುವ ಉದಾಹರಣೆಯೊಂದು ಈಗ ನಮ್ಮ ಕಣ್ಣ ಮುಂದಿದೆ. ದೆಹಲಿಯ ಆಮ್ ಆದ್ಮಿ ಪಕ್ಷ ಹಲವು ರೀತಿಯಲ್ಲಿ ಅದರ ಒಂದು ಕಾಲದ ಅಭಿಮಾನಿಗಳನ್ನು ಭ್ರಮನಿರಸನಗೊಳಿಸಿರಬಹುದು; ಆದರೆ ಅದು ಹಣ, ಜಾತಿ ಮತ್ತು ಮತೀಯ-ಮಾದಕದ್ರವ್ಯದ ಸಹಾಯವಿಲ್ಲದೆ ರಾಜಕೀಯ ಮಾಡಬಹುದು ಎಂಬ ಸಂದೇಶವನ್ನಂತೂ ನೀಡಿದೆ. ಇಡೀ ದೇಶ ದೆಹಲಿಯಲ್ಲ ಎನ್ನುವುದು ನಿಜ. ಆದರೆ ಪರ್ಯಾಯ ರಾಜಕಾರಣಕ್ಕೆ ಆಪ್ ಮಾದರಿಯೊಂದೇ ಇರುವುದಲ್ಲ ಎನ್ನುವುದು ಅಷ್ಟೇ ನಿಜ.
ಮೂರನೆಯ ಕಾರಣ, ಕಳೆದ 35 ವರ್ಷಗಳ ಕರ್ನಾಟಕದ ರಾಜಕಾರಣವನ್ನು ನೋಡೋಣ. ಮೊದಲು ಬಿಜೆಪಿಯು ಮೂರನೇ ಶಕ್ತಿಯಾಗಿ ಉದಯಿಸಿತ್ತು. 1994ರ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿಧಾನಸಭೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದು, ಅದಕ್ಕಿಂತ ಶೇ.10ರಷ್ಟು ಕಡಿಮೆ ಮತ ಗಳಿಸಿದ್ದ ಬಿಜೆಪಿಯು ಅಧಿಕೃತ ವಿರೋಧ ಪಕ್ಷವಾಗಿತ್ತು. ಹಾಗೆಯೇ 1999ರ ಚುನಾವಣೆಯಲ್ಲಿ ಆಡಳಿತಾರೂಢ ಜನತಾದಳವು ಒಡೆದು ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಮತ್ತೆ ಬಿಜೆಪಿಯೇ ವಿರೋಧ ಪಕ್ಷವಾಗಿತ್ತು. 2004ರ ಹೊತ್ತಿಗೆ ಒಂದಂಕಿ ಸ್ಥಾನಗಳನ್ನು ಮಾತ್ರ ಗಳಿಸಬಹುದು ಎಂದು ಭಾವಿಸಲಾಗಿದ್ದ ಜನತಾದಳವು (ಜೆಡಿಯು ಇಷ್ಟರಲ್ಲಿ ಪೂರ್ಣ ಕುಸಿದು, ಒಂದಷ್ಟು ಭಾಗ ಬಿಜೆಪಿಯೊಳಗೂ, ಇನ್ನೊಂದು ಭಾಗವು ಕಾಂಗ್ರೆಸ್ಸಿನೊಳಗೂ ಸೇರಿಹೋಗಿದ್ದರಿಂದ ಜಾತ್ಯತೀತ ಜನತಾದಳವು, ಜನತಾಪರಿವಾರದ ಪ್ರಮುಖ ಪಕ್ಷವಾಗಿ ಉಳಿದುಕೊಂಡಿತ್ತು) 58 ಸ್ಥಾನಗಳನ್ನು ಗಳಿಸಿತು. ಅಂದರೆ ಸತತವಾಗಿ ಮೂರನೆಯ ಶಕ್ತಿಯೊಂದು ಈ ಎಲ್ಲಾ ಸಂದರ್ಭಗಳಲ್ಲಿ ಅಸ್ತಿತ್ವದಲ್ಲಿ ಇದ್ದೇ ಇದೆ. ಜೆಡಿಎಸ್ ಕಥೆ ಮುಗಿದೇ ಹೋಯಿತು ಎಂದುಕೊಂಡರೂ ಮತ್ತೆ ಮತ್ತೆ ಅದು ಪುಟಿದೇಳುತ್ತಿರುವುದು ಅದರ ಆಂತರಿಕ ಶಕ್ತಿ ಅಥವಾ ದೇವೇಗೌಡರ ಚಾಣಾಕ್ಷತನ ಎಂಬ ದೊಡ್ಡದಾಗಿ ಉಬ್ಬಿಸಲಾದ ಸಾಮಥ್ರ್ಯದಿಂದ ಮಾತ್ರವೇ ಅಲ್ಲ. ಮೂರನೆಯ ಶಕ್ತಿಗೆ ಇರುವ ಒಂದು ಸ್ಪೇಸ್‍ನಿಂದಲೂ ಹೌದು.
ಮತಗಳಿಕೆಯನ್ನು ನೋಡಿದಾಗ ರಾಜ್ಯದೆಲ್ಲೆಡೆ ಹರಡಿರುವ ಕಾಂಗ್ರೆಸ್ ಈಗಲೂ ಉಳಿದವರಿಗಿಂತ ಗಣನೀಯ ಹೆಚ್ಚು ಪ್ರಮಾಣವನ್ನೂ, ಜೆಡಿಎಸ್ ದಕ್ಷಿಣ ಭಾಗ ಮತ್ತು ಉತ್ತರ ಕರ್ನಾಟಕದ ಕೆಲವು ಪಾಕೆಟ್‍ಗಳಲ್ಲಿ ಮಾತ್ರ ಮೇಲುಗೈ ಹೊಂದಿದೆಯೆಂಬುದೂ ವಾಸ್ತವ. ಆದರೂ ಒಟ್ಟಾರೆ ಕರ್ನಾಟಕವನ್ನು ನೋಡಿದಾಗ ಮೂರನೆಯ ಶಕ್ತಿಯ ಅಸ್ತಿತ್ವಕ್ಕೆ ಇಲ್ಲಿ ಪೂರಕ ವಾತಾವರಣ ಇರುವುದು ಕಾಣುತ್ತದೆ. ಇನ್ನೊಂದು ಮೂರನೆಯ ಶಕ್ತಿ ಉದಯಿಸುವವರೆಗೆ ಮಾತ್ರ ಜೆಡಿಎಸ್‍ನ ಅಸ್ತಿತ್ವ ಇರುತ್ತದೆ.
ನಾಲ್ಕನೆಯದು ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಇಡೀ ದೇಶದಲ್ಲಿ ಕಳೆದ 40 ವರ್ಷಗಳಲ್ಲಿ ಮೇಲೆದ್ದು ಬಂದಿರುವ ಪಕ್ಷವೆಂದರೆ ಬಿಜೆಪಿ ಮಾತ್ರ. ಉಳಿದಂತೆ ಹೊಸದಾಗಿ ಉದಯಿಸಿರುವವು ಮತ್ತು ಬಿಜೆಪಿಯನ್ನು ಎದುರಿಸುತ್ತಿರುವುದೂ ಪ್ರಾದೇಶಿಕ ಪಕ್ಷಗಳು. ಕಾಂಗ್ರೆಸ್ ಕಳೆದುಕೊಂಡಿರುವ ಕಡೆಯೂ ಮೇಲೆದ್ದು ಬಂದಿರುವುದು ಪ್ರಾದೇಶಿಕ ಪಕ್ಷಗಳೇ. ದೆಹಲಿ ಹೈಕಮಾಂಡ್‍ನ ಕಾಂಗ್ರೆಸ್ ಆಗಲೀ, ಆಪ್ ಆಗಲೀ ರಾಜ್ಯಗಳಲ್ಲಿ ಒಪ್ಪಿಗೆಯಾಗುವ ಸಾಧ್ಯತೆ ಬಹಳ ಕಡಿಮೆ.
ಕರ್ನಾಟಕ ಈತನಕ ತನ್ನ ನೆರೆ ರಾಜ್ಯಗಳೊಂದಿಗೆ ಉದ್ಯಮದಲ್ಲಿ, ವ್ಯವಹಾರದಲ್ಲಿ, ಆಡಳಿತ ನಡೆಸುವಲ್ಲಿ ಸರಿ-ಸಮನಾಗಿ ಉಳಿಯಲು ಯಶಸ್ವಿಯಾಗಿ ಪ್ರಯತ್ನಿಸಿದೆ. ಈಗ ರಾಜಕೀಯವಾಗಿಯೂ ತಾನು ನೆರೆ ರಾಜ್ಯಗಳಿಗಿಂತ ಏನೂ ಕಡಿಮೆಯಲ್ಲ ಅಂತ ಮಾಡಿ ತೋರಿಸಬೇಕಿದೆ. ಅದಕ್ಕಾಗಿ ಮೊದಲು ಮಾಡಬೇಕಿರುವುದು ಎರಡೂ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಜೋತು ಬೀಳುವುದನ್ನು ಬಿಟ್ಟು ಹೊಸ ರಾಜಕೀಯ ಶಕ್ತಿಯೊಂದರ ಉಗಮಕ್ಕೆ ವೇದಿಕೆ ಸಿದ್ಧಪಡಿಸುವುದು



ಹೌದು ನಿಜ ನೇಗಿಲ ಹೊತ್ತ ರೈತ ಗುರುತು ಹೋದಾಗಿನಿಂದ ನಾವು ಅನಾಥರಾಗಿದ್ದೇವೆ. ರಾಮಕೃಷ್ಣ ಹೆಗ್ಡೆ ಯಂಥವರು ಬೇಕು. ದೇವೇಗೌಡ, S. M. ಕೃಷ್ಣ. ಯೆಡಿಯೂರಪ್ಪ, ಇಂಥವರಿಂದ ರಾಜಕೀಯ ಹೊಲಸಾಗಿದೆ. ದೇವರೇ ನಮ್ಮನ್ನು ಕಾಪಾಡಬೇಕು
Yes it is need of the hour. New party for Karnataka with clear programme can win if party is formed with good leaders. We are losing our position in our own state since the national parties are controlled from Delhi and Regional party by a family. Lot of young are waiting for new regional party to be lead honest public face. If the party formed now we are having 3 1/2 years time to face next state election. I hope some well known public faces will emerge as leaders for new party