Homeಮುಖಪುಟಮಂಗಳೂರು ಗೋಲಿಬಾರ್! ಸಂಘಿ ರಿಪಬ್ಲಿಕ್‍ನಲ್ಲಿ ಜಲಿಯನ್ ವಾಲಾಬಾಗ್ ಮರುಸೃಷ್ಟಿ!!

ಮಂಗಳೂರು ಗೋಲಿಬಾರ್! ಸಂಘಿ ರಿಪಬ್ಲಿಕ್‍ನಲ್ಲಿ ಜಲಿಯನ್ ವಾಲಾಬಾಗ್ ಮರುಸೃಷ್ಟಿ!!

- Advertisement -
- Advertisement -

ದಕ್ಷಿಣ ಕನ್ನಡ ಎಂದರೆ ಈ ನೆಲದ ನ್ಯಾಯ-ನೀತಿ-ಕಾನೂನಿಗೆ ಗಿಮ್ಮತ್ತಿಲ್ಲದ ಸಂಘ ಪರಿವಾರದ ಸಾಮ್ರಾಜ್ಯ ಎಂಬುದನ್ನು ಪೌರತ್ವ ಪ್ರತಿಭಟನಾಕಾರರ ಹತ್ಯೆ ನಿಸ್ಸಂಶಯವಾಗಿ ಸಾಬೀತುಮಾಡಿಬಿಟ್ಟಿದೆ! ಇಲ್ಲಿಯ ಆಡಳಿತ ಆರೆಸ್ಸೆಸ್‍ನ ಕಲ್ಲಡ್ಕ ಕಮಾಂಡ್‍ನ ಆಸೆ-ಆಣತಿಯಂತೆಯೇ ನಡೆಯುತ್ತಿದೆ. ಸಾಕ್ಷಾತ್ ಸಿಎಂ ಯಡ್ಡಿಯ ಮಾತಿಗೂ ಇಲ್ಲಿ ಕಿಲುಬು ಕಾಸಿನ ಬೆಲೆಯಿಲ್ಲ. ಸಿಎಎ ವಿರುದ್ಧ ಪ್ರತಿಭಟನೆ ಮಾಡುವವರ ಮೇಲೆ ಲಾಠಿ ಪ್ರಯೋಗಿಸಲೆಂದು ಪೊಲೀಸರಿಗೆ ಯಡ್ಡಿ ಹೇಳಿದ್ದಾರೆ. ಆದರೆ ಮಂಗಳೂರು ನಗರದ ಚೆಡ್ಡಿಕರಗೊಂಡಿರುವ ಪೊಲೀಸ್ ಪಡೆ ಲಾಠಿಚಾರ್ಜ್, ಅಶ್ರುವಾಯು, ಕಲ್ಲೆಸೆತ ಪ್ರಯೋಗವಷ್ಟೇ ಅಲ್ಲ, ಪ್ರತಿಭಟನಾನಿರತರ ಎದೆಗೇ ಕೋವಿಯಿಟ್ಟು ಕೊಂದು ಕೇಕೆಹಾಕಿದೆ!!

ಸಾಬರು ಸಿಎಎ ವಿರೋಧಿಸಿ ಬೀದಿಗಿಳಿಯುತ್ತಾರೆಂಬುದೇ ಸ್ಥಳೀಯ ಸಂಘಿ ದೊರೆಗಳಿಗೆ ತಮ್ಮ ಪ್ರಭುತ್ವಕ್ಕದು ಸವಾಲೆಂಬ ಭಾವನೆಯ ಅಸಹನೆ ಕೆರಳಿಸಿತ್ತು. ಮುಸ್ಲಿಮರು ಪ್ರತಿಭಟಿಸುತ್ತಾರೆಂದರೆ ತಮಗದು ಅವಮಾನ ಎಂಬ ಲೆಕ್ಕಾಚಾರ ಚೆಡ್ಡಿಗಳದಾಗಿತ್ತು. ಇಷ್ಟು ದಿನ ಅನೈತಿಕ ಪೊಲೀಸ್ ಪಡೆ, ಕೌಬಾಯ್ ಗ್ಯಾಂಗ್….. ಮುಂತಾದ ಹೆಸರಿಂದ ಶೂದ್ರ ಕಾಲಾಳು ತಂಡಗಳನ್ನ ಸಾಬರ ವಿರುದ್ಧ ಛೂಬಿಟ್ಟು ಸದೆಬಡಿದಟ್ಟಿದ್ದ ಆರೆಸ್ಸೆಸ್‍ಗಳಿಗೆ ಆ ಸಾಬರು ಪ್ರತಿಭಟನೆಯ ಸೊಲ್ಲೆತ್ತಿದರೆ ಹಿಂದೂ ಸಮುದಾಯದಲ್ಲಿ ತಾವು ಸೋತ ಮೆಸೇಜ್ ಹಬ್ಬಬಹುದೆಂಬ ಆತಂಕ ಶುರುವಿಟ್ಟುಕೊಂಡಿತ್ತು. ದಕ್ಷಿಣ ಕನ್ನಡದಲ್ಲಿ ಹಿಂದೂತ್ವ ಪ್ರಭುತ್ವ ಬಲಾಢ್ಯವಾಗಿದೆ ಎಂದು ತೋರಿಸುವ ಒಳಉದ್ದೇಶದಿಂದ ಸಂಘಿ ಸತ್ತಾಧಾರರು ಪೊಲೀಸರನ್ನು ಸಿಎಎಗೆ ವಿರೋಧಿಸಿ ಪ್ರತಿಭಟನೆ ಮಾಡುವ ಸಾಬರ ಹಣಿಯ ಅಣಿಗೆಗಿಳಿಸಿಬಿಟ್ಟಿದ್ದರು

ಮಂಗಳೂರು ಪೊಲೀಸ್ ಕಮಿಷನರ್ ಡಾ| ಹರ್ಷ.ಪಿ.ಎಸ್ ಸಂಘ ಪರಿವಾರದ ಕಲ್ಲಡ್ಕ ಭಟ್ಟ, ನಳಿನ್‍ಕುಮಾರ್ ಕಟೀಲು, ಒಂದಿಷ್ಟು ಬಿಜೆಪಿ ಶಾಸಕರ ನಿಷ್ಟಾವಂತ ಆಜ್ಞಾನುಧಾರಕ. ಆರೆಸೆಸ್‍ನವರ ಸುಪ್ರೀತಗೊಳಿಯಿಂದ ನಿಭಾಯಿಸುವುದು ಬಿಟ್ಟು ಆತ ಕೆರಳಿಸಲು ಹವಣಿಸಿದ್ದಾನೆ. ಏಕಾಏಕಿ ಲಾಠಿ ಚಾರ್ಜ್‍ಗೆ ಆದೇಶಿಸಿದ್ದಾನೆ. ಅಶ್ರುವಾಯು ಬಿಟ್ಟಿದ್ದಾನೆ. ಕೆರಳಿದ ಹುಡುಗರು ಕಲ್ಲು ಎಸೆದಾಗ ಪ್ರತಿಯಾಗಿ ಪೊಲೀಸ್ ಗೂಂಡಾಗಳೂ ಕಲ್ಲು ತೂರುತ್ತ ಅಟ್ಟಾಡಿಸಿದ್ದಾರೆ.

ಇಷ್ಟರಿಂದ ತೃಪ್ತಿರಾಗದ ಪೊಲೀಸರು ಯದ್ವಾತದ್ವಾ ಗೋಲಿಬಾರ್ ಮಾಡಿದ್ದಾರೆ. ಹೆಣ ಉರುಳಿಸುವ ಹಠತೊಟ್ಟಂತೆ ಹಾರಾಡಿದ ಹರ್ಷನ ಖಾಕಿ ಕಿರಾತಕರು ಇಬ್ಬರನ್ನು ಬಲಿ ಪಡೆದಿದ್ದಾರೆ. ಆರು ಮಂದಿಗೆ ಗುಂಡೇಟಿನ ಗಾಯ ಮಾಡಿದ್ದಾರೆ. ಗೋಲಿಬಾರ್ ನಿಯಂತ್ರಿಸಲು ಒಬ್ಬ ಅಧಿಕಾರಿ ಮುಂದಾದಾಗ ಪೇದೆಯೊಬ್ಬ “ಸಾರ್, ಒಂದು ಹೆಣವೂ ಬಿದ್ದಿಲ್ಲ….. ಒಂದಾದರೂ ಬೀಳಲಿ, ಸಾರ್…..” ಎನ್ನುತ್ತ ಮನಸೋಇಚ್ಛೆ ಗುಂಡು ಹಾರಿಸಿದ್ದಾನೆ. ಕದ್ರಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಶಾಂತಾರಾಮ ಕುಂದರ್…” ಫೈರ್ ಮಾಡಿದ್ರೂ ಒಂದೂ ಗುಂಡು ಕೂಡ ಬಿದ್ದಿಲ್ಲ… ಒಬ್ರೂ ಸಾಯಲಿಲ್ಲ…” ಎಂದು ಪೊಲೀಸರ ಜತೆ ಮಾತಾಡುವ ವಿಡಿಯೋ ವೃರಲ್ ಆಗಿದೆ. ಕಮಿಷನರ್ ಹರ್ಷನಂತೂ ಮಾಡಿದ ಪಾತಕ-ಮುಚ್ಚಿಕೊಳ್ಳಲು ಒಂದರ ಹಿಂಬಾಲಕರಂತೆ ಸುಳ್ಳು ಕತೆಗಳನ್ನೇ ಪೋಣಿಸುತ್ತಿದ್ದಾನೆ.

ಸಾಹೇಬರ ಸಬೂಬು, ಆತನ ಸಹೋದ್ಯೋಗಿಗಳ ಹಿಂಸೋಮಾದದ ಮಾತುಗಳೆಲ್ಲಾ ಗಲಭೆ-ಗೋಲಿಬಾರ್-ರಕ್ಷಪಾತದ ಸಂಚು ಯಾರದೆಂಬುದನ್ನು ಸಾಬೀತುಮಾಡುವಂತಿದೆ. ಸಾಬರ ಸೊಲ್ಲಡಗಿಸಲು ಸಂಘ ಸೈತಾನರ ನಿರ್ದೇಶನದಂತೆ ಸ್ಕೆಚ್ ಹಾಕಿದ್ದರೆಂಬ ಅನುಮಾನ ಬರುವಂತಿದೆ ಮಾಜಿ ಮೇಯರ್ ಅಶ್ರಫ್‍ಗೆ ಆದ ಗುಂಡೇಟು! ಕಮಿಷನರ್ ಹರ್ಷ ಪ್ರತಿಭಟನೆಗೆ ಇಳಿದಿದ್ದ ಸಾಬರ ಹುಡುಗರ ಕಂಟ್ರೋಲ್ ಮಾಡಲು ಅಶ್ರಫ್‍ರನ್ನು ಕರೆಸಿಕೊಂಡಿದ್ದರು. ಸಾಹೇಬರ ಮಾತು ನಂಬಿದ ಅಶ್ರಫ್ ಹುಡುಗರ್ನು ಸಮಾಧಾನಿಸುತ್ತ ಬಂದರು ರಸ್ತೆಯಲ್ಲಿ ಹೋಗುತ್ತಿದ್ದಾಗ ಆತನ ಮೇಲೆಯೇ ಗುಂಡು ಹಾರಿಸಲಾಯಿತು!! ಈಗ ಅಶ್ರಫ್ ಐಸಿಯುನಲ್ಲಿ ಒದ್ದಾಡುತ್ತಿದ್ದರೆ, ಇಂಥದೊಂದು ಅನಾಹುತಕ್ಕೆ ಎಡೆಮಾಡಿ ತಮ್ಮ ತಾಕತ್ತು ಪ್ರದರ್ಶನಕ್ಕೆ ಹಾತೊರೆಯುತ್ತಿದ್ದ ಅಬ್ದುಲ್ ಜಲೀಲ್ ಮತ್ತು ದೊಂಬಿಯಲ್ಲಿ ಸಿಕ್ಕಿ ಬೀಳುವ ಭಯದಲ್ಲಿ ಮನೆಯತ್ತ ಧಾವಿಸುತ್ತಿದ್ದ ಕೂಲಿ ಜೀವಿ ನೌಶಿನ್ ಎಂಬ ನಿಷ್ಪಾಪಿಗಳು ಚೆಡ್ಡಿ ಪ್ರಭುತ್ವಕ್ಕೆ ಬಲಿಯಾಗಿದ್ದಾರೆ. ಆ ಮನೆಯ ಗೋಳು ಹೇಳತೀರದು!!

ಮಂಗಳೂರಲ್ಲಿ ಆಗಿರುವುದು ಪಕ್ಕಾ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಮರು ಸೃಷ್ಟಿ. ಅಲ್ಲಿ ಬ್ರಿಟಿಷ್ ಸತ್ತೆಯ ಜನರಲ್ ಡಯರ್ ಫೈರಿಂಗ್ ಮಾಡಿಸಿದ್ದರೆ, ಇಲ್ಲಿ ಸಂಘಿ ಸರ್ಕಾರದ ಪೊಲೀಸ್ ಕಮಿಷನರ್ ಡಾ| ಹರ್ಷ ಮಾರಣಹೋಮದ ಪೌರೋಹಿತ್ಯ ವಹಿಸಿದ್ದಾನೆ. ಲಾಠಿ ಬೀಸುವ ಅವಶ್ಯಕತೆಯೂ ಇಲ್ಲದಲ್ಲಿ ಗುಂಡು ಹಾರಿಸಲಾಗಿದೆ ಎಂಬುದು ಸಿಎಂ ಯಡ್ಡಿಗೂ ಖಾತ್ರಿಯಾಗಿದೆ. ಹಾಗಾಗಿಯೇ ಸಿಎಂ ಮಂಗಳೂರಲ್ಲಿ ಕಮೀಷನರ್ ಹರ್ಷನ ಹೊರಗಿಟ್ಟೇ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇಡೀ ದೇಶವನ್ನೇ ದಿಗಿಲು ಬೀಳಿಸಿರುವ ಮಂಗಳೂರು ಪೊಲೀಸರ ಕ್ರೌರ್ಯ ಈಗ ಅಂತಾರಾಷ್ಟ್ರೀಯ ಚರ್ಚೆಯ ಸಂಗತಿಯಾಗಿದೆ. ಪೊಲೀಸರು ಬುದ್ಧಿಪೂರ್ವಕವಾಗೇ ಮಾನವ ಹಕ್ಕುಗಳನ್ನು ಧಿಕ್ಕರಿಸಿ ದೌರ್ಜನ್ಯ ಎಸಗಿರುವುದು ಮತ್ತು ಹಿಂಸಾಚಾರಕ್ಕೆ ಪೊಲೀಸರೇ ಇಳಿದಿದ್ದರೆಂಬುದಕ್ಕೆ ನಗರದ ಹಲವು ಸಿಸಿ ಕ್ಯಾಮೆರಾಗಳು ಪ್ರಬಲ ಸಾಕ್ಷ್ಯ ಒದಗಿಸುತ್ತಿವೆ!! ಹೇಗಾದರೂ ಮಾಡಿ ಸಾಬರ ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸಲೇಬೇಕೆಂಬ ಹಿಕಮತ್ತಿನ ಒತ್ತಡಕ್ಕೆ ಪೊಲೀಸರು ಬಿದ್ದರೆಂಬುದನ್ನು ಸಿಸಿ ಕ್ಯಾಮರಾ ದೃಶ್ಯಗಳು ಹೇಳುತ್ತಿವೆ.

ಜಮ್ಮು-ಕಾಶ್ಮೀರದಲ್ಲಿ ತಾವು ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆಂಬಂಥ ರೋಚಕ ಭ್ರಮೆ ಬಿದ್ದು ನೇರಾನೇರ ಪ್ರತಿಭಟನಾಕಾರರಿಗೆ ಪೊಲೀಸರು ಗುಂಡು ಹಾರಿಸುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹೆಚ್ಚೆಂದರೆ
200 ಜ£ರಿದ್ದ ಪ್ರತಿಭಟನಾಕಾರರನ್ನು ಕಮಿಷನರ್ 4,000ಕ್ಕೂ ಹೆಚ್ಚಿದ್ದವರ ಗುಂಪೆಂದು ಹೇಳುತ್ತಿದ್ದಾರೆ; ಪ್ರತಿಭಟನಾಕಾರರ ಕೈಯಲ್ಲಿ ಮಾರಕಾಯುಧ ಇತ್ತೆಂದು ಕತೆ ಕಟ್ಟುತ್ತಿದ್ದಾರೆ. ಆದರೆ ಸಿಸಿ ಕ್ಯಾಮರಾ 4000 ಜನ ಪ್ರತಿಭಟನೆ ಮಾಡುತ್ತಿರಲಿಲ್ಲ ಎಂತಲೂ, ಅವರ ಕೈಲಿ ಮಾರಕಾಯುಧ ಇರಲಿಲ್ಲವೆಂತಲೂ ಸಾರಿಸಾರಿ ಸಾಬೀತು ಮಾಡುತ್ತಿದೆ. ಇದೆಲ್ಲಕ್ಕಿಂತ ಆಘಾತಕಾರಿ ಎಂದರೆ, ಹರ್ಷನ ಪೊಲೀಸ್ ಪುಂಡರ ಪಡೆ ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೆ ನುಗ್ಗಿ ಸೇಡು ತೀರಿಸಿಕೊಳ್ಳುವ ಹಠದಿಂದ ಗೂಂಡಾಗಿರಿ ಮಾಡಿದ್ದಾರೆ. ಗಾಯಾಳುಗಳ ಬಂಧು-ಬಾಂಧವರಿಗೆ ಲಾಠಿಯಿಂದ ಬಡಿದಿದ್ದಾರೆ. ಅಶ್ರುವಾಯು ಐಸಿಯು ಬಳಿ ಸಿಡಿಸಿದ್ದಾರೆ. ಗಾಯಾಳುಗಳು ದಾಖಲಾಗಿದ್ದ ಐಸಿಯು ಕೊಠಡಿಯ ಬಾಗಿಲು ಒದ್ದು ಒಳನುಗ್ಗಿ ಭಯ ಬೀಳಿಸಿದ್ದಾರೆ. ಪೊಲೀಸರ ಸಾಹಸ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಕಮಿಷನರ್ ತಪ್ಪು ಮುಚ್ಚಿಕೊಳ್ಳಲು ಹೇಳುತ್ತಿರುವ ಕಾರಣಗಳಿಗೂ ಆತನ ಆಧೀನಾಧಿಕಾರಿಗಳು ಹಾಕಿರುವ ಎಫ್‍ಐಆರ್‍ಗೂ ತಾಳೆಯೇ ಆಗುತ್ತಿಲ್ಲ. ಕಮಿಷನರ್ 4,000 ಪ್ರತಿಭಟನಾಕಾರರ ಕೈಯಲ್ಲಿ ಮಾರಕಾಸ್ತ್ರ ಇತ್ತೆಂದು ಹೇಳಿದರೆ, ಡಿಸಿಸಿ ಬಂದರ್ ಠಾಣೆಯಲ್ಲಿ ದಾಖಲಿಸಿದ್ದು, ಎಫ್‍ಐಆರ್ ಪ್ರಕಾರ ಇದ್ದ ಪ್ರತಿಭಟನಾಕಾರರು ಒಂದೂವರೆಯಿಂದ ಎರಡು ಸಾವಿರವಷ್ಟೇ. ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಬಂದಾಗ ಅನಿವಾರ್ಯವಾಗಿ ಗೋಲಿಬಾರ್ ಮಾಡಬೇಕಾಯಿತೆಂದು ಚೆಡ್ಡಿ ಖಾಕಿಗಳು ಹೇಳುತ್ತಾರೆ. ಆದರೆ ಗುಂಡೇಟಿನಿಂದ ಸತ್ತವರ ದೇಹ ಠಾಣೆಯಿಂದ ಕಿಲೋಮೀಟರ್‍ಗಳಷ್ಟು ದೂರದಲ್ಲಿ ಬಿದ್ದಿದ್ದವು!! ದೊಂಬಿಕಾರರ ದಾಳಿಯಿಂದ ಡಿಸಿಪಿ ಮತ್ತಿತರ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆಂದು ಕಮಿಷನರ್ ಸಾಹೇಬರ ಅಳಲು. ಆದರೆ ಈ ಅಧಿಕಾರಿಗಳು ಯಾವ ಆಸ್ಪತ್ರೆಯಲ್ಲಿದ್ದಾರೆ? ಎಂಥ ಪೆಟ್ಟಾಗಿದೆ? ಅವರ್ಯಾಕೆ ಮಾಧ್ಯಮದ ಮುಂದೆ ಬರುತ್ತಿಲ್ಲ? ಎಂಬಿತ್ಯಾದಿ ಪ್ರಶ್ನೆಗೆ ಗೃಹಮಂತ್ರಿ ಬೊಮ್ಮಾಯಿಜೀ ಕೈಲೂ ಉತ್ತರವಿಲ್ಲ. ಪಾಪ!

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ನಿಯೋಗ ಮಂಗಳೂರು ಪ್ರವೇಶಿಸದಂತೆ ನಿರ್ಬಂಧ ಹಾಕಿದ್ದ ಡಾ| ಹರ್ಷ ಸಾಹೇಬ. ಆದರೆ ಸಿಎಂ ಯಡ್ಡಿ ಬಂದಾಗ ಸಂಸದೆ ಶೋಭಾ ಕರಂದ್ಲಾಜೆ ಅನವಶ್ಯಕ ಬಡಬಡಿಸಿದಾಗ ಬಾಯಿ ಮುಚ್ಚಿಕೊಂಡಿದ್ದ!! ಕಾಟಾಚಾರಕ್ಕೆ ಮಂಗಳೂರಿಗೆ ಬಂದಿದ್ದ ಸಿಎಂ ಟೂರ್‍ನ ಮುಖ್ಯ ಉದ್ದೇಶ ಪಕ್ಕದ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪೇಜಾವರ ಸ್ವಾಮಿ ನೋಡುವುದಾಗಿತ್ತು. ಹಾಗಾಗಿ ಯಡ್ಡಿ ಮಾತಲ್ಲಿ ಗೋಲಿಬಾರ್ ಘಟನೆ ಬಗ್ಗೆ ನೋವಾಗಲಿ, ಗಂಭೀರತೆಯಾಗಲಿ ಇರಲಿಲ್ಲ. ಗಾಯಾಳುಗಳನ್ನು ನೋಡುವ ಮನಸ್ಸು ಯಡ್ಡಿಗೆ ಇರಲಿಲ್ಲ. ಸತ್ತವರಿಗೆ ಸ್ಥಳದಲ್ಲಿ ಪರಿಹಾರವೂ ಸಿಎಂರಿಂದ ಘೋಷಿಸಲಾಗಲಿಲ್ಲ! ಮಂಗಳೂರಲ್ಲಿ ಸಿಎಂಗಿಂತ ಆತನ ಪರಮಾಪ್ತೆ ಶೋಭಾ ಕರಂದ್ಲಾಜೆ ಹೆಚ್ಚು ಮಾತಾಡಿದ್ದರು.

ನಿಷ್ಪಕ್ಷಪಾತ ತನಿಖೆಯಾಗಬೇಕು; ಮಾನವ ಹಕ್ಕು ಉಲ್ಲಂಘನೆಯ ಪರಿಶೀಲನೆ ಆಗಬೇಕು, ಅಮಾಯಕರ ಹೊಡೆದು-ಬಡಿದು-ರಕ್ತ ಹರಿಸಿ-ಕೊಂದೇ ಹಾಕಿದ ಕಮಿಷನರ್ ಡಾ| ಹರ್ಷ ಮತ್ತವನ ಪೊಲೀಸ್ ಪಡೆಯ ಪುಂಡರಿಗೆ ಶಿಕ್ಷೆಯಾಗಬೇಕು. ಆಗ ಮಾತ್ರ ಆಳುವವರ ಪಾಪಕ್ಕೆ ಕೊಂಚವಾದರೂ ಪ್ರಾಯಶ್ಚಿತ್ತವಾದೀತು!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...