ಕೊರೊನಾ ಸೋಂಕಿನಿಂದ ಆಗುತ್ತಿರುವ ಅನಾಹುತಗಳಿಂತ ಹೆಚ್ಚಾಗಿ ಕೊರೊನಾತಂಕ ಮತ್ತು ಉಲ್ಬಣವನ್ನು ತಡೆಯುವುದು ಮುಖ್ಯ. ಬೆಡ್, ಐಸಿಯು, ವೆಂಟಿಲೇಟರ್ ಬೇಕಾಗುವಂತ ಪರಿಸ್ಥಿತಿ ಬರುವ ಮೊದಲೇ ಅವರನ್ನು ಗುಣಪಡಿಸುವುದನ್ನು ಗುರಿಯಾಗಿಸಿಕೊಂಡು ಕೆಸಿವಿಟಿ (ಕರ್ನಾಟಕ ಕೋವಿಡ್ ವಾಲಂಟಿಯರ್ಸ್ ಟೀಮ್) ರಚನೆಯಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಲೆಂಟಿಯರ್ಸ್ ಜೊತೆಗೆ ಕಾರ್ಯನಿರತವಾಗಿರುವ ಈ ತಂಡ ಮತ್ತೊಂದು ಹೆಜ್ಜೆ ಮುಂದಿಡುತ್ತಿದೆ. ಹಳ್ಳಿಗಳಲ್ಲಿ ಕೊರೊನಾ ಹಬ್ಬುತ್ತಿರುವುದು ಮತ್ತು ಜನರು ಟೆಸ್ಟ್ ಮಾಡಿಸಿಕೊಳ್ಳದೇ ಇರುವುದು, ಮಾಡಿಸಿಕೊಳ್ಳಲು ಬಯಸಿದರೂ ಟೆಸ್ಟ್ ಕಿಟ್ ಇಲ್ಲದಿರುವುದು ಇಂತಹ ತೊಂದರೆಯಿರುವ ಜನರ ಬಳಿಗೆ ಹೋಗುತ್ತಿದೆ.
ಪ್ರತಿ ಹಳ್ಳಿ, ಪಟ್ಟಣಗಳ ವಾರ್ಡ್‌ಗಳಲ್ಲಿಯೂ ಒಂದೊಂದು ಕೊರೊನಾ ವಾಲೆಂಟಿಯರ್ ಟೀಮ್ ತಯಾರಾಗುತ್ತಿದೆ. ರಾಜ್ಯದಲ್ಲಿ ಸಾವುಗಳ ಸಂಖ್ಯೆ ಹೆಚ್ಚಾಗಿರುವುದು ಇರುವುದರಿಂದ ಇದರ ಅಗತ್ಯತೆ ಹೆಚ್ಚಾಗಿದೆ ಎಂದು ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್ ತಂಡ ಹೇಳಿದೆ.
ಇದನ್ನೂ ಓದಿ: ಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್ ತಂಡ
ಈಗಾಗಲೇ ಈ ತಂಡ ರಾಜ್ಯದ 250ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೋವಿಡ್ ವಾಲಂಟಿಯರ್‌ಗಳು ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ಆದಷ್ಟು ಬೇಗ 5,000 ಹಳ್ಳಿಗಳಿಗೆ ವಿಸ್ತರಿಸುವ ಆಲೋಚನೆ ಹೊಂದಿದೆ. ತಮ್ಮ ಊರುಗಳಲ್ಲಿ ಕೊರೊನಾ ಬರದಂತೆ, ಕೊರೊನಾ ಬಂದ ನಂತರದ ಪರಿಸ್ಥಿತಿಯಿಂದ ರಕ್ಷಿಸಿಕೊಳ್ಳಲು ಸಮಯ ನೀಡುವ ವಾಲಂಟಿಯರ್‌ಗಳನ್ನು ಆಹ್ವಾನಿಸುತ್ತಿದೆ.

ವಾಲಂಟಿಯರ್‌ಗಳು ನೋಂದಣಿ ಆದ ನಂತರ, ಅವರಿಗೆ ಆನ್‌ಲೈನ್ ತರಬೇತಿ ನೀಡಲಾಗುತ್ತದೆ. ಈ ವಾಲಂಟಿಯರ್‌ಗಳು ಮನೆ ಮನೆಗೆ ಹೋಗಿ ಕೊರೊನಾ ರೋಗ ಲಕ್ಷಣಗಳನ್ನು ಗುರುತಿಸುತ್ತಾರೆ. ಸೋಂಕಿತರಿಗೆ ನೇರವಾಗಿ ವೈದ್ಯರ ಜೊತೆ ಫೋನಿನಲ್ಲಿ ಕನ್ಸಲ್ಟೇಷನ್ ಏರ್ಪಡಿಸುತ್ತಾರೆ. ಜೊತೆಗೆ ತಮ್ಮಲ್ಲಿ ಲಭ್ಯವಿರುವ ಮಾತ್ರೆಗಳನ್ನೂ ಕೊಡುತ್ತಾರೆ. ಈ ತಂಡದಲ್ಲಿ 105ಕ್ಕೂ ಹೆಚ್ಚು ವೈದ್ಯರಿದ್ದಾರೆ.
ಇನ್ನು ಸೋಂಕಿತರಿಗೆ ಅಗತ್ಯವಿದ್ದರೆ ಸ್ಥಳೀಯ ಕೋವಿಡ್ ಕೇರ್ ಸೆಂಟರ್‌ಗಳು ಅಥವಾ ಆಕ್ಸಿಜನ್ ಇರುವ ಆಸ್ಪತ್ರೆಗೆ ರವಾನಿಸುತ್ತಾರೆ. ಈ ರೀತಿ ಹೋದಾಗ, ಕೆಲವು ಕಡು ಬಡತನದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ತಲುಪಿಸಲೇಬೇಕಾದ ಪರಿಸ್ಥಿತಿಯೂ ಎದುರಾಗುತ್ತದೆ ಎಂದು ಹೇಳಿರುವ ತಂಡ ಅದಕ್ಕೆ ಬೇಕಾದ ಸಂಪನ್ಮೂಲವನ್ನು ಸಂಗ್ರಹಿಸುತ್ತಿದೆ.
ಬೆಂಗಳೂರು ವೈದ್ಯಕೀಯ ಕಾಲೇಜಿನ 1992 ಬ್ಯಾಚ್‌ನ (ಬಿಎಂಸಿ- 92)ನ ಹಲವಾರು ವೈದ್ಯರು ಈಗ ಪ್ರಪಂಚದ ವಿವಿದೆಡೆ ಕೆಲಸ ಮಾಡುತ್ತಿದ್ದಾರೆ. ಆದರೆ ಕೋವಿಡ್ ಎರಡನೇ ಅಲೆ ಅವರನ್ನು ಮತ್ತೆ ಒಗ್ಗೂಡುವಂತೆ ಮಾಡಿದೆ. ಈ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ “ವಿಜ್ಞಾನ ಮೊದಲು” ಎಂಬ ಘೋಷವಾಕ್ಯದೊಂದಿಗೆ ಈ ತಂಡದೊಂದಿಗೆ ಕೈ ಜೋಡಿಸಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾಥ್ ನೀಡಿದೆ.
ಇದನ್ನೂ ಓದಿ: ಪ್ರಚಾರ ಬಯಸದೆ ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿದ ಬಿಎಂಸಿ-92 ವೈದ್ಯರ ತಂಡ


