ಕೇರಳದಲ್ಲಿ ತೀವ್ರ ಸಂಚಲ ಸೃಷ್ಟಿಸಿರುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆದಿದೆ ಎನ್ನಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಿದೆ.
ಪೊಲೀಸ್ ಮಹಾ ನಿರೀಕ್ಷಕ ಸ್ಪರ್ಜನ್ ಕುಮಾರ್ ನೇತೃತ್ವದ ಏಳು ಜನರ ವಿಶೇಷ ತಂಡದಲ್ಲಿ, ರಾಜ್ಯದ ನಾಲ್ವರು ಮಹಿಳಾ ಐಪಿಎಸ್ ಅಧಿಕಾರಿಗಳು ಇದ್ದಾರೆ. ಕ್ರೈಂ ಬ್ರಾಂಚ್ ಎಡಿಜಿಪಿ ಹೆಚ್. ವೆಂಕಟೇಶ್ ಅವರು ತಂಡದ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತ ಆಘಾತಕಾರಿ ಮಾಹಿತಿಗಳನ್ನು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಇತ್ತೀಚೆಗೆ ಬಿಚ್ಚಿಟ್ಟಿತ್ತು.
ವರದಿ ಬಹಿರಂಗಗೊಂಡ ಬಳಿಕ ಅದರಲ್ಲಿ ಆರೋಪಿಸಿರುವ ಪ್ರಕರಣಗಳ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ತಿರುವನಂತಪುರ ನಿವಾಸಿ ನವಾಝ್ ಎಂಬುವರು ಕೇರಳ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎ.ಮುಷ್ತಾಕ್ ಹಾಗೂ ನ್ಯಾಯಮೂರ್ತಿ ಎಸ್. ಮಾನು ಅವರಿದ್ದ ವಿಭಾಗೀಯ ಪೀಠ, ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ನಡುವೆ, ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್ ಮತ್ತು ಮಲಯಾಳಂ ಸಿನಿಮಾ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ವಿರುದ್ದ ಕೇಳಿ ಬಂದಿದೆ. ಇವರಿಬ್ಬರೂ ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸರ್ಕಾರ ತನಿಖೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಿದೆ. ಇದರಿಂದ ಹೇಮಾ ಸಮಿತಿಯ ವರದಿ ಇನ್ನಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಕಲರ್‌ಫುಲ್ ಜಗತ್ತಿನ ಕರಾಳತೆ ತೆರೆದಿಟ್ಟ ‘ಜಸ್ಟೀಸ್ ಹೇಮಾ ಸಮಿತಿ’ ವರದಿ


