ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರಿಗೆ ತಮ್ಮ ಒಳವಸ್ತ್ರವನ್ನು ತೆಗೆದು ಪರೀಕ್ಷೆ ಬರೆಯುವಂತೆ ಕೇಳಿ, ಮಹಿಳೆಯರ ಘನತೆಗೆ ಕುಂದುಂಟು ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 354 (ಹೆಣ್ಣಿನ ಸ್ವಾಭಿಮಾನಕ್ಕೆ ಕುಂದುಂಟು ಮಾಡುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಮತ್ತು 509 (ಮಹಿಳೆಯರ ಸ್ವಾಭಿಮಾನಕ್ಕೆ ಅವಮಾನ ಮಾಡುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ)ದ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೊಲ್ಲಂ ಜಿಲ್ಲೆಯ ಆಯುರ್‌ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ನೀಟ್ ಪರೀಕ್ಷೆಗೆ ಹಾಜರಾಗುವ ವೇಳೆ ವಿದ್ಯಾರ್ಥಿನಿಯರ ವಿರುದ್ಧ ಈ ಅವಮಾನಕರ ಘಟನೆ ನಡೆದಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಮಸ್ಯೆ ಮೀಸಲಾತಿಯಲ್ಲಿಲ್ಲ, ಬದಲಿಗೆ NEET ನಲ್ಲಿದೆ: ನೀಟ್ ರದ್ಧತಿಗೆ ಕನ್ನಡಿಗರ ಆಗ್ರಹ
ಮಹಿಳಾ ಅಧಿಕಾರಿಗಳ ತಂಡವು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನೀಟ್ ಪರೀಕ್ಷೆಗೆ ಕುಳಿತಿದ್ದ 17 ವರ್ಷದ ಬಾಲಕಿಯ ತಂದೆಯೊಬ್ಬರು ತನ್ನ ಮಗಳು ಮೂರು ಗಂಟೆಗಳ ಕಾಲ ಒಳವಸ್ತ್ರ ಇಲ್ಲದೆ ಪರೀಕ್ಷೆಗೆ ಕುಳಿತಿದ್ದ ಆಘಾತಕಾರಿ ಅನುಭವವನ್ನು ಮಾಧ್ಯಮಗಳ ಮುಂದೆ ತಿಳಿಸಿದ ನಂತರ ಪ್ರಕರಣವು ಬೆಳಕಿಗೆ ಬಂದಿತ್ತು. ತನ್ನ ಮಗಳು ನೀಟ್ ಬುಲೆಟಿನ್‌ನಲ್ಲಿ ಉಲ್ಲೇಖಿಸಲಾದ ಡ್ರೆಸ್ ಕೋಡ್‌ನಂತೆ ಬಟ್ಟೆ ಧರಿಸಿದ್ದಳು, ಆದರೆ ಅದರಲ್ಲಿ ಒಳ ಉಡುಪುಗಳ ಬಗ್ಗೆ ಏನೂ ಉಲ್ಲೇಖಿಸಿರಲಿಲ್ಲ ಎಂದು ತಂದೆ ಟಿವಿ ಚಾನೆಲ್‌ಗೆ ತಿಳಿಸಿದ್ದರು.
ಈ ಘಟನೆಯನ್ನು ಖಂಡಿಸಿ ವಿವಿಧ ಯುವ ಸಂಘಟನೆಗಳು ಪ್ರತಿಭಟನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವೂ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೊಲ್ಲಂ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗೆ ಆಯೋಗ ಸೂಚಿಸಿದೆ.
ಇದನ್ನೂ ಓದಿ: ಕೊರೊನಾ ಕರ್ತವ್ಯ: ನೀಟ್ ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ 5,000 ವೈದ್ಯಕೀಯ ಇಂಟರ್ನ್‌ಗಳು
ಸಾವಿರಾರು ವೈದ್ಯಕೀಯ ಆಕಾಂಕ್ಷಿಗಳಿಗೆ, NEET ಭದ್ರತಾ ತಪಾಸಣೆಯನ್ನು ತೆರವುಗೊಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಭ್ಯರ್ಥಿಗಳು ಸ್ಟೇಷನರಿಯನ್ನು ಕೊಂಡೊಯ್ಯದಂತೆ ಮತ್ತು ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಅನುಸರಿಸಲು ಕೇಳಿಕೊಳ್ಳಲಾಗಿದ್ದು, ಇದರಲ್ಲಿ ವ್ಯಾಲೆಟ್‌ಗಳು, ಕೈಚೀಲಗಳು, ಬೆಲ್ಟ್‌ಗಳು, ಕ್ಯಾಪ್‌ಗಳು, ಆಭರಣಗಳು, ಶೂಗಳು ಮತ್ತು ಹೀಲ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ.


