ಕೋವಿಡ್ ಎರಡನೇ ಅಲೆಯ ನಡುವೆಯೂ ನಡೆಯುತ್ತಿರುವ ಉತ್ತರಾಖಂಡದ ಹರಿದ್ವಾರದ ಕುಂಭಮೇಳದಿಂದ ಹಿಂದಿರುಗಿದ ಯಾತ್ರಿಗಳು ತಮ್ಮ ರಾಜ್ಯಗಳಲ್ಲಿ ಕೊರೊನಾವನ್ನು “ಪ್ರಸಾದ” ಎಂದು ವಿತರಿಸಲಿದ್ದಾರೆ ಎಂದು ಮುಂಬೈನ ಮೇಯರ್ ಭಕ್ತರ ವಿರುದ್ಧ ಕಿಡಿಕಾರಿದ್ದಾರೆ.
ಕುಂಭಮೇಳದಿಂದ ಮುಂಬೈಗೆ ಮರಳುವ ಯಾತ್ರಾರ್ಥಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಿದ್ದೇವೆ ಮತ್ತು ಇದರ ಖರ್ಚನ್ನು ಅವರೇ ಭರಿಸಬೇಕು ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ಕಿಶೋರಿ ಪಡ್ನೇಕರ್ ತಿಳಿಸಿದ್ದಾರೆ.
“ಕುಂಭಮೇಳದಿಂದ ಆಯಾ ರಾಜ್ಯಗಳಿಗೆ ಹಿಂದಿರುಗುವವರು ಕೊರೋನಾವನ್ನು ‘ಪ್ರಸಾದ’ ಎಂಬಂತೆ ವಿತರಿಸುತ್ತಾರೆ. ಈ ಎಲ್ಲ ಜನರನ್ನು ಆಯಾ ರಾಜ್ಯಗಳಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಬಂಧಿಸಬೇಕು. ಮುಂಬೈನಲ್ಲಿಯೂ ಸಹ, ಹಿಂದಿರುಗುವಾಗ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಬಗ್ಗೆ ಯೋಚಿಸುತ್ತಿದ್ದೇವೆ” ಎಂದು ಕಿಶೋರಿ ಪಡ್ನೇಕರ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
“95 ಪ್ರತಿಶತದಷ್ಟು ಮುಂಬೈವಾಲಾಗಳು ಕೊರೊನಾ ನಿರ್ಬಂಧಗಳಿಗೆ ಬದ್ಧರಾಗಿದ್ದಾರೆ. ಉಳಿದ 5 ಪ್ರತಿಶತದಷ್ಟು ಜನರು ನಿರ್ಬಂಧಗಳನ್ನು ಪಾಲಿಸುತ್ತಿಲ್ಲ. ಅವರು ಇತರರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದಾರೆ. ಪ್ರಸ್ತುತ ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಲಾಕ್‌ಡೌನ್ ವಿಧಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಗಂಗಾ ನದಿಯ ದಡದಲ್ಲಿ ನಡೆದಿರುವ ಕುಂಭಮೇಳಕ್ಕಾಗಿ ಲಕ್ಷಾಂತರ ಭಕ್ತರು ಶಾಹಿ ಸ್ನಾನ (ಪವಿತ್ರ ಸ್ನಾನ) ಮಾಡಿದ್ದಾರೆ. ಕುಂಭಮೇಳದಲ್ಲಿ ಭಾಗವಹಿಸಿದ್ದ ಸಾಧುಗಳಿಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇತರ 80 ಮಂದಿ ಸಾಧುಗಳಿಗೆ ಕೊರೊನಾ ದೃಢಪಟ್ಟಿದೆ. ಲಕ್ಷಾಂತರ ಮಂದಿ ಸೇರುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ್ದ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಕೊರೊನಾ ಸೋಂಕು ಹರಡಿದೆ ಎಂದು ವರದಿಯಾಗಿದೆ. ಕುಂಭಮೇಳಕ್ಕೆ ದೇಶಾದ್ಯಂತದ ಯಾತ್ರಾರ್ಥಿಗಳು ಬಂದು ತಮ್ಮ ರಾಜ್ಯಗಳಿಗೆ ಮತ್ತು ಹಳ್ಳಿಗಳಿಗೆ ಮರಳುತ್ತಿರುವುದರಿಂದ ಇದು “ಸೂಪರ್-ಸ್ಪ್ರೆಡರ್” ಆಗಿ ಬದಲಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಕುಂಭಮೇಳ ಸಾಂಕೇತಿಕವಾಗಿಸಬೇಕು, ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ತರುತ್ತದೆ: ಪ್ರಧಾನಿ ಮೋದಿ


