ದೇಶದ ಪ್ರಮುಖ ಕಾರ್ಮಿಕ ಸಂಘಟನೆಯಾದ ‘ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್’(ಸಿಐಟಿಯು)ನ 17ನೇ ಅಖಿಲ ಭಾರತ ಸಮ್ಮೇಳನದ ಉದ್ಘಾಟನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆಯಿತು. ಸಮ್ಮೇಳನವು ಜನವರಿ 18ರ ಬುಧವಾರದಿಂದ 22ರ ಭಾನುವಾರದ ವರೆಗೆ ಒಟ್ಟು ಐದು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ.
ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದ ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಕೆ.ಹೇಮಲತಾ, ಕೋಮುವಾದಿ ಶಕ್ತಿಗಳ ವಿರುದ್ಧ ವರ್ಗ ಹೋರಾಟವನ್ನು ಒಗ್ಗಟ್ಟಿನಿಂದ ನಡೆಸುವಂತೆ ಕರೆ ನೀಡಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅರಮನೆ ಮೈದಾನದಲ್ಲಿ ಬುಧವಾರ ಬೆಳಗ್ಗೆ 9 ಗಂಟೆಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೆಜಿಎಫ್ ಹುತಾತ್ಮರ ಸ್ಮಾರಕದಿಂದ ತಂದ ಜ್ಯೋತಿಯನ್ನು ಸಮ್ಮೇಳನದ ಮೈದಾನದಲ್ಲಿ ಬೆಳಗಿಸಲಾಯಿತು. ನಂತರ ರೆಡ್ ಆರ್ಮಿ ಸದಸ್ಯರಿಂದ ಗೌರವ ವಂದನೆ ಮತ್ತು ನಂತರ ಪುಷ್ಪ ನಮನ ಕಾರ್ಯಕ್ರಮ ನಡೆಯಿತು.
‘ರಂಜನಾ ನೀರುಲಾ – ರಘುನಾಥ್ ಸಿಂಗ್’ ವೇದಿಕೆಯನ್ನು ಪ್ರತಿನಿಧಿಗಳ ಸಭೆಯ ಉದ್ಘಾಟನೆ ಮಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಮುಖ್ಯ ಭಾಷಣ ಮಾಡಿದರು. ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಂಬಿಸ್ ಕಿರಿಟ್ರಿಸ್ ಮತ್ತು ಸಿಐಟಿಯು ಮುಖಂಡರು ಅಭಿನಂದನಾ ಭಾಷಣ ಮಾಡಿದರು.
ಹೈಟೆಕ್ ನಗರವಾದ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮ್ಮೇಳನವು ಆಧುನಿಕ ಕಾಲದ ಸವಾಲುಗಳನ್ನು ಮುಂದಕ್ಕೆ ಹೇಗೆ ಎದುರಿಸುತ್ತದೆ ಎಂಬುದರ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಜೊತೆಗೆ ಕಾರ್ಮಿಕ-ರೈತ ಐಕ್ಯ ಪ್ರತಿಭಟನೆಗಳ ಯಶಸ್ಸಿನಿಂದ ಪಡೆದ ಪಾಠಗಳನ್ನು ಅಳವಡಿಸಿಕೊಂಡು, ಐಕ್ಯ ಹೋರಾಟವನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಸಮ್ಮೇಳನವು ಚರ್ಚಿಸಲಿದೆ.
ಮೋದಿ ಸರಕಾರದ ನವ ಉದಾರವಾದಿ ನೀತಿಗಳ ವಿರುದ್ಧ ಐಕ್ಯ ಹೋರಾಟದ ಕ್ರಮದ ಬಗ್ಗೆ ಕೂಡಾ ಸಮ್ಮೇಳನವೂ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ.
ಸಮ್ಮೇಳನದಲ್ಲಿ ದೇಶಾದ್ಯಂತ 2000 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಐದು ದಿನಗಳ ಸಮ್ಮೇಳನವು ಜನವರಿ 22ರ ಭಾನುವಾರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ಕಾರ್ಮಿಕರಿಗೆ ಕೂಲಿ | ಕೇರಳ, ಜಮ್ಮುಕಾಶ್ಮೀರ ಟಾಪ್; ಗುಜರಾತ್, ಮಧ್ಯಪ್ರದೇಶ ಅತ್ಯಂತ ಕಡಿಮೆ – RBI ವರದಿ


