Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾನಗಲ್: ಗುಳೆ ಹೊರಡುವವರ ಸೀಮೆಯಲ್ಲಿ ವ್ಯಕ್ತಿಪ್ರತಿಷ್ಠೆಯ ’ಹಣಾ’ಹಣಿ!!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾನಗಲ್: ಗುಳೆ ಹೊರಡುವವರ ಸೀಮೆಯಲ್ಲಿ ವ್ಯಕ್ತಿಪ್ರತಿಷ್ಠೆಯ ’ಹಣಾ’ಹಣಿ!!

- Advertisement -
- Advertisement -

ಅರಬ್ಬೀ ಸಮುದ್ರಕ್ಕೆ ಸಮಾನಾಂತರವಾಗಿ ಹಬ್ಬಿರುವ ಪಶ್ಚಿಮಘಟ್ಟದ ತಪ್ಪಲಲ್ಲಿರುವ ಹಾನಗಲ್ ಐತಿಹಾಸಿಕ ಹಿರಿಮೆ-ಗರಿಮೆಗಳ ತಾಲೂಕು; ತುಂಗಭದ್ರಾ ನದಿಯ ಪಶ್ಚಿಮಕ್ಕೆ-ಅರಬ್ಬೀ ಸಮುದ್ರದ ಪೂರ್ವಕ್ಕೆ 30 ಕಿ.ಮೀ ದೂರದಲ್ಲಿರುವ ಈ ಅರೆಮಲೆನಾಡು ಗುಣಧರ್ಮದ ಸೀಮೆ ಭೌಗೋಳಿಕವಾಗಿ ಸಮತಟ್ಟಾದ ಭೂಪ್ರದೇಶದಲ್ಲಿದೆ. ವಿಪರ್‍ಯಾಸವೆಂದರೆ ಚಿಕ್ಕಪುಟ್ಟ ಗುಡ್ಡಬೆಟ್ಟಗಳಿಂದ ಆವೃತ್ತವಾದ ರಕ್ಷಿತಾರಣ್ಯ-ಹುಲ್ಲುಗಾವಲು-ತೋಟ-ಹೊಲಗಳಿಂದ ಹಚ್ಚಹಸುರಾಗಿ ನಳನಳಿಸುವ ಹಾನಗಲ್ ಬದುಕು ಮಾತ್ರ ಹಸನಾಗಿಲ್ಲ! ಪ್ರಬಲ ಲಿಂಗಾಯತರ ಏಕಸ್ವಾಮ್ಯಕ್ಕೆ ಒಳಪಟ್ಟಿರುವ ಇಡೀ ಹಾನಗಲ್ ತಾಲೂಕಲ್ಲಿ ರೈತ ಶೋಷಕ ಆರ್ಥಿಕ ವ್ಯವಸ್ಥೆ ತಾಂಡವಾಡುತ್ತಿದೆ; ಘನತೆಯ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡದ ಬಡತನ-ಸಾಮಾಜಿಕ ತಾರತಮ್ಯದಿಂದ ಕಂಗೆಟ್ಟಿರುವ ರೈತಾಪಿ ವರ್ಗ ನಿರಂತರ ಗುಳೆ ಹೋಗುತ್ತಿದೆ; ಹಾನಗಲ್ ದೊಡ್ಡ ವೃದ್ಧಾಶ್ರಮದಂತಾಗಿಹೋಗಿದೆ! ಒಂದೊತ್ತಿನ ಗಂಜಿಗೆ ಪರದಾಡುವ ಈ ಅಸಹಾಯಕ ಮಂದಿಯ ಮಧ್ಯೆ ಉಳ್ಳವರು ಜಾತಿ-ಧರ್ಮ-ದುಡ್ಡು-ವ್ಯಕ್ತಿಪ್ರತಿಷ್ಠೆಗಳನ್ನು ವ್ಯವಸ್ಥಿತವಾಗಿ ಪ್ರಯೋಗಿಸುತ್ತ ಅಧಿಕಾರ ರಾಜಕಾರಣದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಮಾಮೂಲಾಗಿದೆ!

ಇತಿಹಾಸ-ಸಂಸ್ಕೃತಿ

’ಹಾನಗಲ್’ ಹೆಸರಿನ ವ್ಯುತ್ಪತ್ತಿ ಇತಿಹಾಸ ಆಸಕ್ತಿದಾಯಕವಾಗಿದೆ. ಆರಂಭಿಕ ದಾಖಲೆಯಲ್ಲಿ ಪುನುಂಗುಲ್, ಪಾಂತಿಪುರ ಎಂದು ಉಲ್ಲೇಖಿಸಲ್ಪಟ್ಟಿರುವ ಹಾನಗಲ್ ಮಧ್ಯಕಾಲೀನ ಶಾಸನಗಳಲ್ಲಿ ವೈರಾಟಪುರ-ವಿರಾಟ ಕೋಟೆ-ವಿರಾಟನಗರಿ ಎಂದು ಗುರುತಿಸಲ್ಪಟ್ಟಿದೆ. ಆನಂತರ ಪಾನಂಗಲ್ಲು ಮತ್ತು ಹಾನಂಗಲ್ಲು ಎಂದಾಯಿತೆನ್ನಲಾಗಿದೆ. ಕ್ರಮೇಣ ರೂಢಿಯಲ್ಲಿ ಹಾನಗಲ್ ಎಂದಾಯಿತೆಂದು ಸ್ಥಳನಾಮ ಪುರಾಣ ಹೇಳುತ್ತದೆ. ಹಿಂದೆ ಹಾನಗಲ್ 500 ಹಳ್ಳಿಗಳ ಆಡಳಿತ ಕೇಂದ್ರವಾಗಿತ್ತು. ಕದಂಬರ ಆಳ್ವಿಕೆಗೆ ಒಳಪಟ್ಟಿದ್ದ ಹಾನಗಲ್ ಕದಂಬರ ಸಾಮಂತರ (ಹಾನಗಲ್ ಕದಂಬರು) ರಾಜಧಾನಿಯೂ ಆಗಿತ್ತೆಂಬ ಇತಿಹಾಸವಿದೆ. ಪಾಂಡವರು 13ನೇ ವರ್ಷದ ಅಜ್ಞಾತವಾಸವನ್ನು ಹಾನಗಲ್‌ನಲ್ಲಿ ಕಳೆದರೆಂಬ ಜನಪದ ಕತೆಗಳಿವೆ.

ಅರೆಮಲೆನಾಡಿನ ಮಡಿಲಲ್ಲಿದ್ದರೂ ಹಾನಗಲ್ ತಾಲೂಕಿನದು ಬೆಳವಲ ನಾಡಿನ ಮಣ್ಣಿನ ಲಯದ ವಿಶಿಷ್ಟ ಕನ್ನಡ ಸಾಂಸ್ಕೃತಿಕ ಸಂಪ್ರದಾಯ. ಲಂಬಾಣಿ, ಮರಾಠಿ ಹಾಗು ಉರ್ದುವಂಥ ಭಾಷೆಯ ಮಾತುಗಳು ಕ್ಷೀಣವಾಗಿ ಕೇಳಿಬರುವ ಹಾನಗಲ್‌ನಲ್ಲಿ ಮಂದಿ ಮನೆಯ ಹೊಸಿಲು ದಾಟುತ್ತಿದ್ದಂತೆಯೇ ಖಡಕ್ ಜವಾರಿ ಕನ್ನಡದಲ್ಲಿ ಸಂವಹನ ನಡೆಸುತ್ತಾರೆ. ಜಾತ್ರೆಗಳು, ಡೊಳ್ಳು ಕುಣಿತ, ಝಾಂಝ್, ದೊಡ್ಡಾಟ, ಕೆರೆ (ಮೀನು) ಬೇಟೆ, ಕೊಬ್ಬರಿ ಹೋರಿ ಸ್ಪರ್ಧೆಗಳಂಥ ಜನಪದ ಕಲೆ-ಕ್ರೀಡೆಯ ಹಾನಗಲ್‌ನಲ್ಲಿ ಪಾಳುಬಿದ್ದ ಕೋಟೆ, 12ನೇ ಶತಮಾನದ ದೇವಸ್ಥಾನ ಮತ್ತು ಶಿಲಾಶಾಸನಗಳಿವೆ. ಈ ಕೋಟೆಗೆ 16 ಬುರುಜು, 3 ಗೋಡೆ, ಕೆಲವೆಡೆ ನಾಲ್ಕು ಗೋಡೆಗಳಿದ್ದ ಕುರುಹುಗಳು ಕಾಣಿಸುತ್ತದೆ.

ಕೋಟೆಯ ಸುತ್ತ ಕಂದಕವಿದ್ದು, ಮಧ್ಯದಲ್ಲಿ ಹಳೆ ಅರಮನೆಯ ಅವಶೇಷವಿದೆ. ಕೋಟೆಯ ಆಗ್ನೇಯಕ್ಕೆ ರಾಜರ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದ ವಿಶಾಲವಾದ ’ಆನೆ ಕೆರೆ’ ಇದೆ. ಈಗಿದು ನಗರದ ಕುಡಿಯುವ ನೀರಿನ ಮೂಲ. ಕೋಟೆಯ ಬಳಿಯಲ್ಲಿ ಉತ್ಖನನ ಮಾಡಿದಾಗ ಲೇಪ ಹಚ್ಚಿ ಸುಟ್ಟ ಮಣ್ಣಿನ ಪಾತ್ರೆಯ ತುಂಡುಗಳು (ಕ್ರಿ.ಶ.50) ಮತ್ತು ಶಾತವಾಹನರು, ಬಾದಾಮಿ ಚಾಲುಕ್ಯರು ಮುಂತಾದ ಅರಸರ ಕಾಲದ ಅವಶೇಷಗಳು ದೊರೆತಿವೆ. 1031ರಲ್ಲಿ ಹಾನಗಲ್ ಹೊಯ್ಸಳರ ಹಾಗೂ 12ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಪಾರಪತ್ಯಕ್ಕೆ ಒಳಪಟ್ಟಿತ್ತು; 1800ರಲ್ಲಿ ಬ್ರಿಟಿಷರು ಹಾನಗಲ್‌ಅನ್ನು ವಶಪಡಿಸಿಕೊಂಡರು.

ಹಾನಗಲ್‌ನಲ್ಲಿ 20ಕ್ಕೂ ಹೆಚ್ಚು ಶಿಲಾಶಾಸನಗಳಿವೆ; ಇವುಗಳಲ್ಲಿ ಹಲವು 12-13ನೇ ಶತಮಾನದ ಚಾಲುಕ್ಯರ 6ನೇ ವಿಕ್ರಮಾದಿತ್ಯ, ಕಳಚೂರಿ ಬಿಜ್ಜಳ, ಕದಂಬರ ತೈಲಪ, ಕಾಮದೇವ, ಸೋವಿದೇವ ಮತ್ತು ಮಲ್ಲಿದೇವರ ಆಡಳಿತದ ದಿನಮಾನದ್ದು. ಇಲ್ಲಿ ಕದಂಬರು, ಚಾಲುಕ್ಯರು ಮತ್ತು ಹೊಯ್ಸಳರ ಕಾಲದ ಅನೇಕ ದೇವಾಲಯಗಳಿವೆ. ಕದಂಬರು ಜೈನ ಸಂಪ್ರದಾಯದಂತೆ ದೇವಾಲಯಗಳನ್ನು ಕಟ್ಟಿಸಿದರೆ, ಚಾಲುಕ್ಯರು ಬೂದು-ಹಸಿರು ಬಣ್ಣದ ಕ್ಲೋರೈಟಿಕ್ ಸ್ಕ್ರಿಪ್ಟ್‌ನಿಂದ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಜಗದ್ವಿಖ್ಯಾತ ಶಿಲ್ಪಿ ಜಕಣಾಚಾರಿ ಕಪ್ಪು-ಹಸಿರು ಕಲ್ಲಿನಿಂದ ನಿರ್ಮಾಣ ಮಾಡಿದ ಹಾನಗಲ್‌ನ ತಾರಕೇಶ್ವರ ದೇವಾಲಯ ಭವ್ಯವೂ, ಕಲಾತ್ಮಕವೂ ಆಗಿದೆ. ದೇಗುಲದ ಗೋಡೆಗಳಲ್ಲಿ ರಾಮಾಯಣ ಹಾಗೂ ಭಾಗವತದ ದೃಶ್ಯಾವಳಿಗಳನ್ನು ಕೆತ್ತಲಾಗಿದೆ; ಹೊರಗಿನ ಗೋಡೆಗಳನ್ನು ದ್ರಾವಿಡ ಮತ್ತು ನಾಗರ ಶೈಲಿಯ ಚಿಕಣಿ ಶಿಕಾರಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಮುಖ್ಯ ಸಭಾಂಗಣಕ್ಕೆ ಹೊಂದಿಕೊಂಡಂತೆ ಅಭಯಾರಣ್ಯವಿದೆ. ಕದಂಬರು ಕಟ್ಟಿಸಿದ ಈ ದೇಗುಲದಲ್ಲಿ ಚಾಲುಕ್ಯರು ಗಮನಾರ್ಹ ಬದಲಾವಣೆ ಮಾಡಿದ್ದಾರೆ.

ಹಾನಗಲ್ ಆಕರ್ಷಕ ಪ್ರವಾಸಿ ತಾಣ; ಹೊಯ್ಸಳ ಶೈಲಿಯಲ್ಲಿ ಸುಂದರವಾಗಿ ಅಲಂಕೃತವಾದ ಜೈನ ದೇವಾಲಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿದೆ. ಕೋಟೆಯಲ್ಲಿ ವೀರಭದ್ರ ದೇವಾಲಯವಿದೆ. ಬಿಲ್ವೇಶ್ವರ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ. ಸುಪ್ರಸಿದ್ಧ ಜೈನ ಬಸದಿ ಯಳವಟ್ಟಿ ಗ್ರಾಮದಲ್ಲಿದೆ. ರಾಜ್ಯದಲ್ಲೇ ಪ್ರಸಿದ್ಧವಾದ ವಿರಕ್ತ ಪರಂಪರೆಯ ಕುಮಾರೇಶ್ವರ ಮಠವಿರುವುದು ಹಾನಗಲ್‌ನಲ್ಲಿ. ಶರಣ ಶ್ರೇಷ್ಠ ಕುಮಾರ ಶಿವಯೋಗಿ, ವಾಗೀಶ ಪಂಡಿತಾರಾಧ್ಯ, ಹಿಂದೂಸ್ತಾನಿ ಸಂಗೀತದ ಮೇರು ಹಾಡುಗಾರ ಗಾನಯೋಗಿ ಪಂಚಾಕ್ಷರಿ ಗವಾಯಿ, ಗಾನ ವಿಶಾರದೆ ಖ್ಯಾತಿಯ ಗಂಗೂಬಾಯಿ ಹಾನಗಲ್‌ನ ಪ್ರತಿಭೆಗಳು.

ವ್ಯರ್ಥ ಕೃಷಿ ಆರ್ಥಿಕತೆ!

ಹಾನಗಲ್ ಕೃಷಿ ಪ್ರಧಾನ ತಾಲೂಕು. ಮೈ ಮುರಿದು ದುಡಿಯುವ ನೇಗಿಲ ಯೋಗಿಗಳ ಕರ್ಮ ಭೂಮಿ. ಹಾನಗಲ್ ಆರ್ಥಿಕತೆ ಕೃಷಿ ಚಟುವಟಿಕೆ ಮೇಲೆ ಅವಲಂಬಿಸಿದೆ. ವ್ಯವಸಾಯ ಬಿಟ್ಟರೆ ಮತ್ತ್ಯಾವುದೇ ಆರ್ಥಿಕ ಮೂಲ ತಾಲೂಕಿನಲಿಲ್ಲ. ರೈತಾಪಿ ವರ್ಗ ಉತ್ತು-ಬಿತ್ತಿ-ಬೆಳೆದರಷ್ಟೇ ಹಾನಗಲ್‌ಗೆ ಜೀವಕಳೆ. ದುಡಿಯುವ ಕೈಗೆ ಕೆಲಸ ಕೊಡುವ ಒಂದೇ ಒಂದು ಕೈಗಾರಿಕೆ-ಉದ್ಯಮ ಇಲ್ಲಿಲ್ಲ; ನಿರುದ್ಯೋಗಿಗಳು ವ್ಯಾಪಾರ-ವಹಿವಾಟು ಮಾಡಿ ಜೀವಿಸುವ ಅವಕಾಶ ಮೇಲ್ವರ್ಗದ ಹಿಡಿತದಲ್ಲಿರುವ ಹಾನಗಲ್ ಪೇಟೆಯಲ್ಲಿಲ್ಲ. ಹಾನಗಲ್ ಪಟ್ಟಣ ವಾಣಿಜ್ಯಿಕ ಬೆಳವಣಿಗೆ ಕಂಡಿಲ್ಲ. ಗುಣಮಟ್ಟದ ಖರೀದಿಗೂ ಸ್ಥಳೀಯರು ಹುಬ್ಬಳ್ಳಿಗೆ ಹೋಗಬೇಕಾದ ಅನಿವಾರ್ಯತೆಯಿದೆ. ಹೊಲ-ಜಮೀನು ಇಲ್ಲದವರು, ಇದ್ದರೂ ಕೃಷಿ ಕಸುಬಿಂದ ಬದುಕಲು ಸಾಧ್ಯವಾಗದವರು ತುತ್ತಿನ ಚೀಲ ತುಂಬಿಕೊಳ್ಳಲು ಉಡುಪಿ ಮತ್ತು ದಕ್ಷಿಣ ಕನ್ನಡದತ್ತ ಗುಳೆ ಹೋಗುತ್ತಿದ್ದಾರೆ. ಈ ಎರಡು ಜಿಲ್ಲೆಗಳ ಪ್ರತಿ ತಾಲೂಕಿನಲ್ಲಿ ಹಾನಗಲ್‌ನ ಅಸಹಾಯಕ ಮಂದಿ ಕೂಲಿನಾಲಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವರದಾ ಮತ್ತು ಧರ್ಮಾ ಹಾನಗಲ್‌ನ ಜೀವನದಿಗಳು. ವರದೆ ತಾಲೂಕಿನಲ್ಲಿ ಉತ್ತರ ಮತ್ತು ಈಶಾನ್ಯಾಭಿಮುಖವಾಗಿ ಹರಿಯುತ್ತದೆ; ಪಶ್ಚಿಮದಿಂದ ತಾಲೂಕನ್ನು ಪ್ರವೇಶಿಸುವ ಧರ್ಮಾ ನದಿ ಈಶಾನ್ಯ ಮತ್ತು ಪೂರ್ವಾಭಿಮುಖವಾಗಿ ಹರಿಯುತ್ತದೆ. ಎರಡೂ ನದಿ ಪಾತ್ರದುದ್ದಕ್ಕೂ ರೇವೆ ಮಣ್ಣಿನ ಫಲವತ್ತಾದ ಭೂಪ್ರದೇಶವಿದೆ. ಹಿಂದಿನಿಂದಲೂ ಹಾನಗಲ್ ನೀರಾವರಿಗೆ ಒಳಪಟ್ಟಿದೆ. ಹಾನಗಲ್, ನರೇಗಲ್ ಕಡೆಯಲ್ಲಿ ದೊಡ್ಡ ಕೆರೆಗಳಿವೆ. ಧರ್ಮಾ ಆಣೆಕಟ್ಟೆಯಿಂದ ಎರಡು ನಾಲೆಗಳ ಮೂಲಕ 18 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುವ ಯೋಜನೆ ಸುಮಾರು ಐದು ದಶಕದ ಹಿಂದೆಯೇ ಕೈಗೊಳ್ಳಲಾಗಿದೆ. ಮೂರ್‍ನಾಲ್ಕು ಏತ ನೀರಾವರಿ ಪ್ರಾಜೆಕ್ಟ್‌ಗಳು ಇತ್ತೀಚಿನ ವರ್ಷದಲ್ಲಿ ಬಂದಿವೆ; ತಾಲೂಕಿನ ಅರ್ಧಕ್ಕಿಂತ ಹೆಚ್ಚು ಪ್ರದೇಶದಲ್ಲಿ ನೀರಾವರಿಯಿದೆ.

ಕೃಷಿ ಕಾಯಕಕ್ಕೆ ಹೇಳಿ ಮಾಡಿಸಿದಂತಿರುವ ಹಾನಗಲ್ ತಾಲೂಕಿನ ರೈತಾಪಿ ವರ್ಗದ ಪ್ರಮುಖ ಆರ್ಥಿಕ ಬೆಳೆ ಮೆಕ್ಕೆ ಜೋಳ, ಭತ್ತ ಮತ್ತು ಕಬ್ಬು. ಸುಮಾರು ಇಪ್ಪತ್ತು ವರ್ಷದ ಹಿಂದೆ ಹಾನಗಲ್ ಭತ್ತದ ಬೆಳೆಗೆ ಹೆಸರುವಾಸಿಯಾಗಿತ್ತು. 10-15 ಅಕ್ಕಿ ಗಿರಣಿಗಳಿದ್ದವು. ರಾಜ್ಯದಾದ್ಯಂತ ಅಷ್ಟೇ ಅಲ್ಲ, ಹೊರ ರಾಜ್ಯಕ್ಕೂ ಹಾನಗಲ್ ಅಕ್ಕಿ ಪೂರೈಕೆ ಆಗುತಿತ್ತು. ಅಕ್ಕಿ ವ್ಯವಹಾರ ಜೋರಾದಂತೆ ರೈತರನ್ನು ಶೋಷಿಸುವ ಮಾಫಿಯಾವೂ ಬೆಳೆಯಿತು. ದಲ್ಲಾಳಿ ಹಾವಳಿಯಿಂದ ರೈತರಿಗೆ ಭತ್ತದ ಕೃಷಿ ಹಾನಿಕಾರಕವಾಗತೊಡಗಿತು. ಅನಿವಾರ್ಯವಾಗಿ ರೈತರು ಭತ್ತದ ವ್ಯವಸಾಯದಿಂದ ಕ್ರಮೇಣ ಹಿಂದೆ ಸರಿದು ಮೆಕ್ಕೆ ಜೋಳ, ಹತ್ತಿ, ಕಬ್ಬು, ಮಾವು, ಎಣ್ಣೆ ಕಾಳುಗಳಾದ ಶೇಂಗಾ, ಹುಚ್ಚೆಳ್ಳು, ತರಕಾರಿ ಬೆಳೆಗಳತ್ತ ಹೊರಳಿದರು. ಈಗ ಅಕ್ಕಿ ಮಿಲ್‌ಗಳು ಮೆಕ್ಕೆ ಜೋಳ ದಾಸ್ತಾನು ಮಾಡುವ ಗೋದಾಮುಗಳಾಗಿವೆ!

ಸಣ್ಣ ಹಿಡುವಳಿ ಕುಟುಂಬಗಳು ತರಕಾರಿ ಕೃಷಿಯಿಂದ ಬದುಕು ಕಟ್ಟಿಕೊಂಡಿವೆ. ಭತ್ತದ ಹೊಲಗಳು ಇತ್ತೀಚಿನ ವರ್ಷದಲ್ಲಿ ಅಡಿಕೆ ತೋಟಗಳಾಗಿ ಮಾರ್ಪಾಡಾಗುತ್ತಿವೆ! ಬಹುವಾರ್ಷಿಕ ಬೆಳೆಯಾದ ಅಡಿಕೆ ತೋಟಗಾರಿಕೆ ಹಚ್ಚಾಗುತ್ತಿದೆ. ಹಾನಗಲ್ ರೈತರ ದುರಂತವೆಂದರೆ, ವ್ಯವಸಾಯಕ್ಕೆ ಸೌಲಭ್ಯವಿದ್ದರೂ ಕೃಷಿ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆಯಿಲ್ಲ! ವಿವಿಧ ಕೃಷಿ ಉತ್ಪನ್ನ ಸಮೃದ್ಧವಾಗಿ ಉತ್ಪತ್ತಿಯಾಗುವ ಹಾನಗಲ್‌ನಲ್ಲಿ ಯಾವುದಕ್ಕೂ ಸುಸ್ಥಿರ ಮಾರುಕಟ್ಟೆಯಿಲ್ಲ. ರೈತರು ನೇರವಾಗಿ ಕೃಷಿ ಉತ್ಪನ್ನ ಮಾರಲು ಸಾಧ್ಯವಾಗುತ್ತಿಲ್ಲ. ದಲ್ಲಾಳಿಗಳ ಮೂಲಕವೇ ಕೃಷಿ ಉತ್ಪನ್ನ ಮಾರುವಂಥ ಅನಿವಾರ್ಯತೆಯನ್ನು ವ್ಯಾಪಾರಿ ಮಾಫಿಯಾ ಸೃಷ್ಟಿಸಿದೆ. ಎಪಿಎಂಸಿಯಿದ್ದರೂ ಅಲ್ಲೂ ದಲ್ಲಾಳಿಗಳದೇ ಹಾವಳಿ. ರೈತರು ಒಂದೋ ಈ ಮಧ್ಯವರ್ತಿಗಳಿಗೆ ಬಲಿಬೀಳಬೇಕು, ಇಲ್ಲವೆ ದುಬಾರಿ ಸಾಗಾಣಿಕಾ ವೆಚ್ಚ ಭರಿಸಿ ಫಸಲನ್ನು ದೂರದ ಮಾರುಕಟ್ಟೆಗೆ ಕೊಂಡೊಯ್ಯಬೇಕಾದ ಸಂದಿಗ್ಧ ಪರಿಸ್ಥಿತಿ ಹಾನಗಲ್‌ನಲ್ಲಿದೆ.

ಹತ್ತಿರದ ಸಂಗೂರು ಸಕ್ಕರೆ ಕಾರ್ಖಾನೆ ರೈತರ ಕಬ್ಬು ಖರೀದಿಗೆ ಮುಂದಾಗುತ್ತಿಲ. ಸುತ್ತಲಿನಲ್ಲಿ ಬೆಳೆಯಲಾಗುತ್ತಿರುವ ಕಬ್ಬನ್ನು ನುರಿಯುವ ಸಾಮರ್ಥ್ಯವೂ ಆ ಫ್ಯಾಕ್ಟರಿಗಿಲ್ಲ. ದೂರದ ಹಳಿಯಾಳ ಅಥವಾ ದಾವಣೆಗೆರೆಯ ಸಕ್ಕರೆ ಕಾರ್ಖಾನೆಗೆ ಕಬ್ಬು ಒಯ್ಯಲು ಸಾಗಾಣಿಕಾ ವೆಚ್ಚ ಭರಿಸುವ ತಾಕತ್ತು ಬಡ ರೈತರಿಗಿಲ್ಲ. ಹಾಗೆಯೇ ದೂರ ಸಾಗಿಸಿದರೆ ಲಾಭವೂ ಇಲ್ಲ; ಮಾವಿನ ಹಣ್ಣಿನ ಫಸಲು ವ್ಯರ್ಥವಾಗುತ್ತಿದೆ. ಮಾವು ಸಂಸ್ಕರಣಾ ಘಟಕಕ್ಕಾಗಿ ಬೆಳೆಗಾರರು ಒತ್ತಾಯಿಸುತ್ತಲೇ ಇದ್ದಾರೆ. ಅದಿನ್ನೂ ಸಾಕಾರವಾಗಿಲ್ಲ. ಹೀಗಾಗಿ ರೈತರು ಮಾವಿನ ಮರಗಳನ್ನು ಕಡಿದು ಅಡಿಕೆ ತೋಟಗಾರಿಕೆಗೆ ಇಳಿದಿದ್ದಾರೆ. ಹತ್ತಿಯಾದರೆ ರಾಣಿಬೆನ್ನೂರಿಗೆ, ಕಬ್ಬು ದಾವಣಗೆರೆಗೆ, ತರಕಾರಿ ಕರಾವಳಿ ಜಿಲ್ಲೆಗಳಿಗೆ ಮತ್ತು ಅಡಿಕೆ ಶಿರಸಿ ಮಾರ್ಕೆಟ್‌ಗೆ ಸಾಗಿಸಬೇಕಾಗಿದೆ.

ಸಿ.ಎಂ.ಉದಾಸಿ

ಸುಮಾರು ಮೂರೂವರೆ ದಶಕದ ರಾಜಕಾರಣದಲ್ಲಿ ಹಲವು ಬಾರಿ ಎಮ್ಮೆಲ್ಲೆ-ಮಂತ್ರಿಯಾಗಿದ್ದ ಹಾನಗಲ್‌ನ ಪ್ರಭಾವಿ ರಾಜಕಾರಣಿ ಸಿ.ಎಂ.ಉದಾಸಿ ಕೃಷಿ ಕಾಯಕಕ್ಕೆ ನೀರಾವರಿ ಅನುಕೂಲವನ್ನೇನೋ ಕಲ್ಪಿಸಿದರು; ಆದರೆ ಸ್ಥಳೀಯವಾಗಿ ಕೃಷಿ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ ಮಾಡಲಿಲ್ಲ; ವ್ಯಾಪಾರಿ ಕಸುಬಿನ ಉದಾಸಿ ತಮ್ಮ ವ್ಯಾಪಾರಿ ಪರಿವಾರದ ಫಾಯಿದೆಗಾಗಿ ಪ್ರಜ್ಞಾಪೂರ್ವಕವಾಗಿ ಅಮಾಯಕ ರೈತರ ಶೋಷಣೆಗೆ ಅವಕಾಶ ಮಾಡಿಕೊಟ್ಟರೆಂಬ ಆರೋಪ ಇವತ್ತಿಗೂ ಹಾನಗಲ್‌ನಲ್ಲಿ ಅನುರಣಿಸುತ್ತಿದೆ.

ಅಖಾಡದ ಆಕಾರ

ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣಾ ಚರಿತ್ರೆಯ ಪುಟಗಳನ್ನು ತೆರೆದು ನೋಡಿದಾಗ ಲಿಂಗಾಯತ ಸಮುದಾಯದವರೇ ಹೆಚ್ಚು ಸಲ ಶಾಸಕರಾಗಿರುವುದು ಸ್ಪಷ್ಟವಾಗುತ್ತದೆ; ನಡುನಡುವೆ ಸಾವಿರದಷ್ಟೂ ಮತದಾರರಿರದ ಮೈಕ್ರೋಸ್ಕೋಪಿಕ್ ಮೈನಾರಿಟಿಯ ’ಬಲಿಜ’ ಸಮುದಾಯದ ಮನೋಹರ ತಹಶೀಲ್ದಾರ್ ಗೆಲುವು ಕಂಡಿದ್ದು ಅಚ್ಚರಿ ಮೂಡಿಸುತ್ತದೆ. ಜನತಾ ಪರಿವಾರ ಮತ್ತು ಬಿಜೆಪಿಯ ಸರಕಾರ ನಡೆಸುತ್ತಿದ್ದ ದಿಗ್ಗಜರ ಜತೆಜತೆಯಲ್ಲೆ ಮಿಂಚುತ್ತಿದ್ದ ಲಿಂಗಾಯತ ಪಂಚಮಸಾಲಿ ಪಂಗಡದ ಸಿ.ಎಂ.ಉದಾಸಿ ಪಕ್ಷಾಂತರಗಳ ನಡುವೆಯೇ ಆರು ಬಾರಿ ಗೆದ್ದು ಅಧಿಕಾರದ ಆಯಕಟ್ಟಿನ ಸ್ಥಾನಕ್ಕೇರುತ್ತ ಸ್ವಪ್ರತಿಷ್ಠೆಯ ಸಾಮ್ರಾಜ್ಯ ಕಟ್ಟಿಕೊಂಡಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಿರೇಕೆರೂರು: ’ಕೌರವ’ನನ್ನು ಸೋಲಿಸಲು ಗದೆ ಎತ್ತಿ ನಿಂತಿರುವ ಬಣಕಾರ್!

ಉದಾಸಿ ಎಷ್ಟು ಪ್ರಭಾವಶಾಲಿ ಆಗಿದ್ದರೆಂದರೆ, 2007ರ ಅಸೆಂಬ್ಲಿ ಕ್ಷೇತ್ರಗಳ ಭೌಗೋಳಿಕ ಪರಿಧಿ-ಮೀಸಲಾತಿ ಪುನರ್ ವಿಂಗಡಣೆ ಸಂದರ್ಭದಲ್ಲಿ ಪರಿಶಿಷ್ಟರಿಗೆ ಮೀಸಲಾಗಬೇಕಿದ್ದ ಹಾನಗಲ್ ಸಾಮಾನ್ಯ ಕ್ಷೇತ್ರವಾಗಿ ಮುಂದುವರಿಯುವಂತೆ ತಂತ್ರಗಾರಿಕೆ ಮಾಡಿ ಅಸ್ತಿತ್ವ ಉಳಿಸಿಕೊಂಡರೆನ್ನಲಾಗುತ್ತದೆ. ಡಿಲಿಮಿಟೇಶನ್‌ನಲ್ಲಿ ಹಾನಗಲ್ ಕ್ಷೇತ್ರದಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ. ಪಕ್ಷ ಪ್ರತಿಷ್ಠೆಯ ಅಖಾಡವಾಗಿದ್ದ ಹಾನಗಲ್‌ನಲ್ಲಿ ಉದಾಸಿ ಬಿಜೆಪಿ ಸೇರಿದ ಬಳಿಕ ಜಾತಿ-ಧರ್ಮ-ದುಡ್ಡಿನ ದೌಲತ್ತಿನ ಮೇಲಾಟ ಶುರುವಾಯಿತೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಒಟ್ಟು 2,11,312 ಮತದಾರರಿರುವ ಕ್ಷೇತ್ರದಲ್ಲಿ 70 ಸಾವಿರ ಲಿಂಗಾಯತ, 38 ಸಾವಿರ ಎಸ್‌ಸಿ-ಎಸ್‌ಟಿ, 35 ಸಾವಿರ ಮುಸ್ಲಿಮ್, 25 ಸಾವಿರ ಗಂಗಾಮತಸ್ಥ, 11 ಸಾವಿರ ಮರಾಠ, 6 ಸಾವಿರ ಕುರುಬ ಮತ್ತು 15 ಸಾವಿರ ಬ್ರಾಹ್ಮಣ ಸಮುದಾಯಗಳ ಹಾಗೂ ಇತರ ಜಾತಿಗಳ ಸಣ್ಣ ಸಂಖ್ಯೆಯ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ.

ಚುನಾವಣಾ ಚಿತ್ರಗಳು ಹಾನಗಲ್‌ನ ಪ್ರಥಮ ಎಮ್‌ಎಲ್‌ಎ ಪಕ್ಷೇತರ!

1957ರಲ್ಲಿ ಪಕ್ಷಾತೀತ ಹುರಿಯಾಳಾಗಿದ್ದ ಬಿ.ಆರ್.ಪಾಟೀಲ್ 13,152 ಮತ ಪಡೆದು 12,303 ಮತ ಗಳಿಸಿದ್ದ ಕಾಂಗ್ರೆಸ್‌ನ ಎಸ್.ಪಿ.ಸಿಂಧೂರ್‌ರನ್ನು ಮಣಿಸಿ ಶಾಸನಸಭೆ ಪ್ರವೇಶಿಸಿದ್ದರು. 1962ರ ಚುನಾವಣೆ ಹೊತ್ತಲ್ಲಿ ಹಾನಗಲ್‌ನಲ್ಲಿ ಸಮಾಜವಾದದ ಗಾಳಿ ಬೀಸಲಾರಂಭಿಸಿತ್ತು. ಪಕ್ಕದ ಸೊರಬದ ಸಮಾಜವಾದಿ ಚಳುವಳಿ-ಗೇಣಿ ರೈತ ಹೋರಾಟದ ಮುಂಚೂಣಿಯಲ್ಲಿದ್ದ ಸಾರೆಕೊಪ್ಪ ಬಂಗಾರಪ್ಪರ ಪ್ರಭಾವ ಹಾನಗಲ್ ಮೇಲಾಗಿತ್ತು. ಶಾಸಕ ಬಿ.ಆರ್.ಪಾಟೀಲ್ ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ ಕಣಕ್ಕಿಳಿದರು. ಪ್ರಬಲ ಹೋರಾಟ ಕೊಟ್ಟರೂ ಪಾಟೀಲ್ 953 ಮತಗಳಿಂದ ಸಣ್ಣ ಅಂತರದಲ್ಲಿ ಸೋಲುವಂತಾಯಿತು. 19,843 ಮತ ಪಡೆದ ಕಾಂಗ್ರೆಸ್‌ನ ಹುರಿಯಾಳು ಜಿ.ಎನ್.ದೇಸಾಯಿ ಶಾಸಕನಾದರು.

1967ರ ಚುನಾವಣೆ ಅಖಾಡದಲ್ಲಿ 1957ರ ತುರುಸಿನ ಚಿತ್ರಣ ಮತ್ತೆ ಮೂಡಿತ್ತು. ಬಿ.ಆರ್.ಪಾಟೀಲ್ (18,742) ಪಕ್ಷೇತರರಾಗಿ ಸ್ಪರ್ಧೆಗಿಳಿದರೆ ಅವರ ಹಳೆಯ ಎದುರಾಳಿ ಎಸ್.ಸಿ.ಸಿಂಧೂರ್ (16,781) ಕಾಂಗ್ರೆಸ್ ಕ್ಯಾಂಡಿಡೇಟಾದರು. ಈ ನಿಕಟ ಪೈಪೋಟಿಯಲ್ಲಿ ಪಾಟೀಲ್ 1,961 ಮತದಿಂದ ಎರಡನೇ ಸಲ ಶಾಸಕ ಎನಿಸಿಕೊಂಡರು. 1972ರಲ್ಲಿ ಕಾಂಗ್ರೆಸ್‌ನ ಚಂದ್ರಶೇಖರಪ್ಪ ಮತ್ತು ಸಂಸ್ಥಾ ಕಾಂಗ್ರೆಸ್‌ನ ಶಿವಲಿಂಗಪ್ಪ ಮುಖಾಮುಖಿಯಾದರು. ಇಂದಿರಾ ಗಾಂಧಿ ಗಾಳಿಯಲ್ಲಿ 31,348ರಷ್ಟು ದೊಡ್ಡ ಸಂಖ್ಯೆಯ ಮತ ಪಡೆದ ಚಂದ್ರಶೇಖರಪ್ಪ ಎದುರಾಳಿಯನ್ನು 16,346 ಮತಗಳಿಂದ ಸೋಲಿಸಿದರು.

ಬಂಗಾರಪ್ಪ ಶಿಷ್ಯನ ಎಂಟ್ರಿ

ಹಾನಗಲ್ ಕ್ಷೇತ್ರದ ಜಾತಿ ರಸಾಯನಶಾಸ್ತ್ರದ ಸೂತ್ರ 1978ರ ಚುನಾವಣಾ ಕದನದಲ್ಲಿ ಬದಲಾಯಿತು; ಮೊದಲ ಬಾರಿ ಲಿಂಗಾಯತೇತರ ಅಭ್ಯರ್ಥಿ ಗೆಲುವು ಸಾಧಿಸಿದರು. ತೀರಾ ಸಣ್ಣ ಬಲಿಜ ಸಮುದಾಯದ ಮನೋಹರ ತಹಶೀಲ್ದಾರ್‌ಗೆ ಬಂಗಾರಪ್ಪ ಕಾಂಗೈ ಟಿಕೆಟ್ ಕೊಡಿಸಿದರು. ಬಂಗಾರಪ್ಪನವರ ಪ್ರಭಾವ ಹಾನಗಲ್‌ನ ಹಿಂದುಳಿದ ವರ್ಗದ ಮೇಲಿದ್ದರಿಂದ ತಹಶೀಲ್ದಾರ್ ಸುಲಭವಾಗಿ ಗೆದ್ದರು. 35,228 ಮತ ಪಡೆದ ತಹಶೀಲ್ದಾರ್‌ಗೆ ಜನತಾ ಪಕ್ಷದ ಮಹ್ಮದ್ ಹುಸೇನ್ ಮಾಳಗಿ 25,362 ಮತಗಳ ಅಂತರದಿಂದ ಮಣಿಯಬೇಕಾಯಿತು.

1980ರ ದಶಕದಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬಿರುಸಾಗಿದ್ದ ರೈತ ಚಳವಳಿ, ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್ ಕಳೆಗುಂದಿತ್ತು. ಗುರು ಬಂಗಾರಪ್ಪ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಕ್ರಾಂತಿ ರಂಗ ಸೇರಿಕೊಂಡರೂ ಶಿಷ್ಯ ಮನೋಹರ ತಹಶೀಲ್ದಾರ್ ಹಿಂಬಾಲಿಸಲಿಲ್ಲ. ಪುರಸಭೆ ಸದಸ್ಯ-ಅಧ್ಯಕ್ಷರಾಗಿ ಮತ್ತು ವರ್ಚಸ್ವಿ ಅಕ್ಕಿ ವರ್ತಕರಾಗಿ ಹಾನಗಲ್ ಉದ್ದಗಲಕ್ಕೆ ಪರಿಚಿತರಾಗಿದ್ದ ಸಿ.ಎಂ.ಉದಾಸಿ ಪಕ್ಷೇತರ ಉಮೇದುವಾರರಾಗಿ 1983ರ ಅಖಾಡಕ್ಕೆ ಧುಮುಕಿದರು; ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್ ಮತ್ತು ಉದಾಸಿ ನಡುವೆ ರೋಚಕ ಕಾಳಗ ನಡೆದುಹೋಯಿತು! 35,617 ಮತ ಪಡೆದ ಉದಾಸಿ 10,052 ಮತಗಳ ಭರ್ಜರಿ ವಿಜಯ ಸಾಧಿಸಿದರು!

ಮನೋಹರ ತಹಶೀಲ್ದಾರ್‌

1983ರಲ್ಲಿ ಅಧಿಕಾರಕ್ಕೆ ಬಂದಿದ್ದ ಜನತಾ ಪಕ್ಷದ ಅಲ್ಪಮತದ ಸರಕಾರಕ್ಕೆ ಬೆಂಬಲ ನೀಡಿದ ಉದಾಸಿಗೆ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷತೆಯನ್ನು ಬಕ್ಷೀಸಾಗಿ ಕೊಟ್ಟರು. 1985ರ ನಡುಗಾಲ ಚುನವಣೆಯಲ್ಲಿ ಜನತಾ ಪಾರ್ಟಿ ಚಿಹ್ನೆಯಲ್ಲೇ ಸ್ಪರ್ಧೆ ಮಾಡಿದ ಉದಾಸಿಗೆ ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್ ಎದುರಾದರು. ಈ ಕತ್ತುಕತ್ತಿನ ಕಾಳಗದಲ್ಲಿ 39,264 ಓಟು ಗಿಟ್ಟಿಸಿದ ಉದಾಸಿ 3,059 ಮತಗಳ ಅಂತರದಿಂದ ಗೆದ್ದು ಎರಡನೆ ಬಾರಿ ಶಾಸಕನಾದರು. ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಮಂತ್ರಿಯೂ ಆದ ಉದಾಸಿ 1989ರ ಚುನವಣೆ ಬರುವ ಹೊತ್ತಿಗೆ ಆಂಟಿ ಇನ್‌ಕಂಬೆನ್ಸ್ ಸುಳಿಗೆ ಸಿಲುಕಿಕೊಂಡಿದ್ದರು! ಆಗ ಜನತಾ ಪರಿವಾರ ದಾಯಾದಿ ಕಲಹದಿಂದ ಕಳೆಗುಂದಿತ್ತು; ಆ ಕಾಲಕ್ಕೆ ಲಿಂಗಾಯತರ ಜನಪ್ರಿಯ ನಾಯಕನೆನಿಸಿದ್ದ ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನ ಮುಖ್ಯಮಂತ್ರಿ ಕ್ಯಾಂಡಿಡೇಟಾಗಿದ್ದರು. ಈ ರಾಜಕೀಯ ರಾಸಾಯನಿಕ ಕ್ರಿಯೆಯಲ್ಲಿ ಉದಾಸಿ 39,023 ಮತವಷ್ಟೇ ಪಡೆಯಲು ಶಕ್ಯವಾಯಿತು. ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್ 15,737 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

1994ರಲ್ಲಿ ಜನತಾದಳದ ಹುರಿಯಾಳಾದ ಉದಾಸಿ ಕೈ ಮೇಲಾಯಿತು; 38,865 ಮತ ಪಡೆದ ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್ 17,483 ಮತಗಳ ದೊಡ್ಡ ಅಂತರದಲ್ಲಿ ಸೋಲು ಕಾಣುವಂತಾಯಿತು! ದೇವೇಗೌಡ ಪಿಎಂ ಆಗಿಹೋದ ಬಳಿಕ ಮುಖ್ಯಮಂತ್ರಿಯಾದ ಜೆ.ಎಚ್.ಪಟೇಲ್ ತಮ್ಮ ಸಚಿವಸಂಪುಟಕ್ಕೆ ಉದಾಸಿಯವರನ್ನು ಸೇರಿಸಿಕೊಂಡರು. 1999ರ ಚುನಾವಣೆ ಬರುವಾಗ ಉದಾಸಿ ಬಗ್ಗೆ ಕ್ಷೇತ್ರದಲ್ಲಿ ಅಸಮಾಧಾನ ಶುರುವಾಗಿತ್ತು; ಉದಾಸಿ ಅಸಹಾಯಕರಿಗೆ ಸ್ಪಂದಿಸುವುದಿಲ್ಲ; ತಮ್ಮ ವ್ಯಾಪಾರಿ ಬಳಗದ ಹಿತಾಸಕ್ತಿ ಕಾಯುತ್ತಾರಷ್ಟೆ ಎಂಬ ಆಕ್ಷೇಪ ಮತದಾರದಾಗಿತ್ತು. ಅದೇ ವೇಳೆಗೆ ಮನೋಹರ ತಹಶೀಲ್ದಾರ್ ಗುರು ಬಂಗಾರಪ್ಪ ಕಾಂಗ್ರೆಸ್‌ಗೆ ಮರಳಿದರು; ಜೆಡಿಯು ಮತ್ತು ಜೆಡಿಎಸ್ ಎಂಬ ದಾಯಾದಿ ಬಣಗಳಾಗಿ ಜನತಾ ದಳ ಒಡೆದಿತ್ತು. ಇದೆಲ್ಲದರ ಒಟ್ಟೂ ಲಾಭ ಮನೋಹರ ತಹಶೀಲ್ದಾರ್‌ರಿಗಾಗಿ 59,628 ಮತ ಪಡೆಯಲು ಸಾಧ್ಯವಾಯಿತು. ಅಂದು ಮಂತ್ರಿಯಾಗಿದ್ದ ಉದಾಸಿ 15,258 ಮತಗಳ ಅಂತರದಿಂದ ಪರಾಭವಗೊಂಡರು. ಗೆದ್ದ ತಹಶೀಲ್ದಾರ್ ವಿಧಾನಸಭೆಯ ಉಪಾಧ್ಯಕ್ಷರಾದರು.

ಯಡಿಯೂರಪ್ಪ ಆಪ್ತ ಉದಾಸಿ!

ಹಾನಗಲ್‌ನಲ್ಲಿ ಮುಖಭಂಗವಾದರೂ ಆ ಹೊತ್ತಿಗೆ ರಾಜ್ಯ ಲಿಂಗಾಯತ ಲಾಬಿಯ ಮುಂಚೂಣಿಗೆ ಬಂದಿದ್ದ ಉದಾಸಿ ಉಪಾಯವಾಗಿ ಯಡಿಯೂರಪ್ಪ ಪರಿವಾರ ಸೇರಿಕೊಂಡರು; 2004ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಕೇಸರಿ ಕಲಿಯಾಗಿ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್‌ಗೆ ಸೆಡ್ಡುಹೊಡೆದರು. ಆ ಚುನಾವಣೆ ಸಂದರ್ಭದಲ್ಲಿ ರಾಜ್ಯ ಲಿಂಗಾಯತ ರಾಜಕಾರಣದಲ್ಲಿ ಯಡಿಯೂರಪ್ಪ ಪ್ರವರ್ಧಮಾನಕ್ಕೆ ಬಂದರೆ, ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಬಲಗೊಂಡಿತ್ತು. ತತ್ಪರಿಣಾಮವಾಗಿ 61,167 ಮತ ಗಿಟ್ಟಿಸಿದ ಉದಾಸಿ 18,087 ಮತದಂತರದ ಗೆಲುವು ಪಡೆದರು; ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಉದಾಸಿಗೆ ಗ್ರಾಮೀಣಾಭಿವೃದ್ಧಿಯಂಥ ಮಹತ್ವದ ಮಂತ್ರಿ ಪಟ್ಟವೂ ದಕ್ಕಿತು!

2008ರಲ್ಲಿ ಮತ್ತೆ ಉದಾಸಿ ಹಾಗೂ ಕಾಂಗ್ರೆಸ್‌ನ ತಹಶೀಲ್ದಾರ್ ಮುಖಾಮುಖಿಯಾದರು; ಚುನಾವಣೆ ಸಂದರ್ಭದಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದರೂ ಉದಾಸಿ (60,025) ಜಾತಿ-ಕೇಸರಿ ಧರ್ಮ ಮತ್ತು ಕಾಸಿನ ಪಗಡೆಯಾಟವನ್ನು ಯೋಜನಾಬದ್ಧವಾಗಿ ಆಡಿ 5,922 ಮತದಂತರದಿಂದ ದಡ ತಲುಪಿ ನಿಟ್ಟುಸಿರುಬಿಟ್ಟರೆಂದು ಅಂದಿನ ಹಣಾಹಣಿ ಕಂಡವರು ವಿವರಿಸುತ್ತಾರೆ. ಮುಖ್ಯಮಂತ್ರಿಯಾದ ಯಡಿಯೂರಪ್ಪ ತಮ್ಮ ಪರಮಾಪ್ತ ಉದಾಸಿಗೆ ಸಮೃದ್ಧ ಲೋಕೋಪಯೋಗಿ ಖಾತೆಯನ್ನೇ ಕೊಟ್ಟು ಮಂತ್ರಿ ಮಾಡಿಕೊಂಡರು! 2013ರಲ್ಲಿ ಯಡಿಯೂರಪ್ಪರ ಕೆಜೆಪಿ ಕ್ಯಾಂಡಿಡೇಟಾದ ಉದಾಸಿಗೆ ಜಾತಿ-ಕಾಸು ಹದವಾಗಿ ಬಳಸಿದರೂ ಗೆಲ್ಲಲು ಆಗಲಿಲ್ಲ; ಬಿಜೆಪಿ ಅಭ್ಯರ್ಥಿ ಪಡೆದ 7,052 ಓಟು ಉದಾಸಿ ಪರಾಭವಕ್ಕೆ ಸಾಕಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. ಆ ಚುನಾಚಣೆಯಲ್ಲಿ 66,324 ಮತ ಗಳಿಸಿದ ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್ 5,686 ಮತದಂತರದಿಂದ ಉದಾಸಿಯವರನ್ನು ’ಮಾಜಿ’ ಮಾಡಿದರು. ಶಾಸಕರಾದ ತಹಶೀಲ್ದಾರ್‌ಗೆ ಆರೇಳು ತಿಂಗಳು ಸಿದ್ದು ಸರಕಾರದಲ್ಲಿ ಅಬಕಾರಿ ಮಂತ್ರಿಯಾಗುವ ಭಾಗ್ಯವೂ ಬಂತು!

ವಲಸಿಗರ ಮೇಲಾಟ!

ಹಾನಗಲ್‌ನಲ್ಲಿ 2018ರಲ್ಲಿ ನಡೆದದ್ದು ಅಕ್ಷರಶಃ ’ಹಣಾ’ಹಣಿ ಎಂಬುದು ಸಾಮಾನ್ಯ ಅಭಿಪ್ರಾಯ. ಮನೋಹರ ತಹಶೀಲ್ದಾರರದೆನ್ನಲಾದ ಸೆಕ್ಸ್ ಸಿಡಿ ಪ್ರಸಾರ ಮತ್ತು ಅವರಿಗೆ ವಯೋಸಹಜ ಕಾಯಿಲೆ-ದೌರ್ಬಲ್ಯವಿದೆ ಎಂಬ ಋಣಾತ್ಮಕ ಗುಲ್ಲು ಮತ್ತಿತರ ಕಾರಣದಿಂದ ಕಾಂಗ್ರೆಸ್ ಟಿಕೆಟ್ ಅವರಿಗೆ ಸಿಗಲಿಲ್ಲ. ವಿಧಾನ ಪರಿಷತ್ ಸದಸ್ಯ-ಹುಬ್ಬಳ್ಳಿ ಕಡೆಯ ಹಣವಂತ ಉದ್ಯಮಿ ಶ್ರೀನಿವಾಸ್ ಮಾನೆ ಕಾಂಗ್ರೆಸ್ ಹುರಿಯಾಳಾಗಿ ಬಿಜೆಪಿಯ ಹಳೆ ಹುಲಿ ಉದಾಸಿಗೆ ಸೆಡ್ಡುಹೊಡೆದರು! ಇಬ್ಬರೂ ಯಥೇಚ್ಛವಾಗಿ ಹಣ ಹರಿಸಿದರೆಂಬ ಮಾತು ಈಗಲೂ ಹಾನಗಲ್‌ನಲ್ಲಿ ಜಾಲ್ತಿಯಲ್ಲಿದೆ. ಈ ನೇರ-ನಿಕಟ ಜಿದ್ದಾಜಿದ್ದಿಯಲ್ಲಿ ಉದಾಸಿ 80,529 ಮತ ಪಡೆದು 74,015 ಮತ ಪಡೆದ ಮಾನೆಯನ್ನು 6,514 ಮತದಂತರದಿಂದ ಮಣಿಸಿದರು.

ಶಿವರಾಜ್ ಸಜ್ಜನರ್‌

ತುಂಬು ಜೀವನ-ತುಂಬು ರಾಜಕಾರಣ ನಡೆಸಿದ ಉದಾಸಿ ವಯೋಸಹಜವಾಗಿ ನಿಧನರಾದ್ದರಿಂದ 2021ರ ಅಕ್ಟೋಬರ್‌ನಲ್ಲಿ ಉಪಚುನಾವಣೆ ನಡೆಯಿತು. ಸಂಸದ ಶಿವಕುಮಾರ್ ಉದಾಸಿ ಅಪ್ಪನ ಉತ್ತರಾಧಿಕಾರಿ ಆಗುವುದಾಗಿ ಪರಿಪರಿಯಾಗಿ ಬೇಡಿದರೂ ಬಿಜೆಪಿ ಹೈಕಮಾಂಡ್ ಒಪ್ಪಲಿಲ್ಲ; ತಮ್ಮ ಪತ್ನಿಗಾದರೂ ಟಿಕೆಟ್ ಕೊಡಿಯೆಂದು ಗೋಗರೆದರು. ಅದಕ್ಕೂ ಮನ್ನಣೆ ಸಿಗಲಿಲ್ಲ. ಹಾವೇರಿಯ ಮಾಜಿ ಶಾಸಕ-ಯಡಿಯೂರಪ್ಪರ ಅನುಯಾಯಿ ಶಿವರಾಜ್ ಸಜ್ಜನರ್‌ರನ್ನು ಕೇಸರಿ ಪಕ್ಷ ಕ್ಯಾಂಡಿಡೇಟ್ ಮಾಡಿತು. ಪಕ್ಕದ ಶಿಗ್ಗಾಂವಿ ಶಾಸಕ-ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಕ್ಯಾಂಪ್ ಮಾಡಿ “ನಾನು ಹಾನಗಲ್ ಅಳಿಯ, ನನ್ನ ಕೈ ಬಿಡಬೇಡಿ” ಎಂದು ದಯನೀಯವಾಗಿ ಪ್ರಚಾರ ಮಾಡಿದರು. ಆದರೂ ಜನರು ಬಿಜೆಪಿ ಹುರಿಯಾಳು ಸಜ್ಜನರ್‌ರನ್ನು ಗೆಲ್ಲಿಸಲಿಲ್ಲ! 2018ರಲ್ಲಿ ಸೋತ ಕ್ಷಣದಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾನೆ ಕ್ರಿಯಾಶೀಲರಾದರು. ಕೊರೊನಾ ಹಾವಳಿ ಹೊತ್ತಲ್ಲಿ ಆಡಳಿತ ಪಕ್ಷದ ಶಾಸಕ ಉದಾಸಿ ಉದಾಸೀನದಿಂದಿದ್ದರೆ, ಮಾನೆ ನೊಂದವರಿಗೆ ನೆರವಾಗುತ್ತಿದ್ದರು; ಇದು ಮಾನೆ(87,490)ಗೆ ಸಜ್ಜನರ್(80,117)ರನ್ನು ಮಣಿಸಲು ನೆರವಾಯಿತು ಎನ್ನಲಾಗುತ್ತಿದೆ!

ಕ್ಷೇತ್ರದ ಸ್ಥಿತಿ-ಗತಿ

ಬಿಜೆಪಿಯ ಸಿ.ಎಂ.ಉದಾಸಿ ಮತ್ತು ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್ ಪೈಪೋಟಿಗೆ ಬಿದ್ದು ಕ್ಷೇತ್ರದ ಹೊರಚಹರೆ ಬದಲಿಸದ್ದೇನೂ ನಿಜ. ಕ್ಷೇತ್ರದಲ್ಲಿ ರಸ್ತೆ, ಬೃಹತ್ ಸರಕಾರಿ ಕಟ್ಟಡಗಳಂಥ ಕಾಂಕ್ರೀಟ್-ಡಾಂಬರು ಕಾಮಗಾರಿಗಳಾಗಿವೆ. ಇಂಥ ಸಿವಿಲ್ ಕೆಲಸದಲ್ಲಿ ಅಧಿಕಾರಸ್ಥರಿಗೆ ಬರುವ ಪರ್ಸೆಂಟೇಜೂ ಜಾಸ್ತಿಯಾದ್ದರಿಂದ ಇತ್ತ ಗಮನ ಜಾಸ್ತಿ ಎಂಬ ತರ್ಕಗಳೂ ಕೇಳಿಬರುತ್ತದೆ. ಇವೆಲ್ಲ ಅನಿವಾರ್ಯ-ಅವಶ್ಯ ಮೂಲ ಸೌಕರ್ಯಗಳೇ ಹೊರತು ಸಮಗ್ರ ಅಭಿವೃದ್ಧಿಯಲ್ಲ; ಕೃಷಿ ಪ್ರಧಾನವಾದ ಹಾನಗಲ್‌ನ ರೈತರು ಗುಳೆ ಹೋಗುವುದನ್ನು ತಪ್ಪಿಸಿದರೆ, ಸ್ಥಳೀಯವಾಗಿ ಬದುಕು ಕಟ್ಟಿಕೊಂಡು ಸ್ವಾವಲಂಬಿಗಳಾಗಲು ಕೃಷಿ ಉನ್ನತೀಕರಣಗೊಳಿಸಿದರೆ ಮತ್ತು ದುಡಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯಮ-ಕೈಗಾರಿಕೆ ತಂದರೆ ಅದನ್ನು ಪ್ರಗತಿಯೆನ್ನಬಹುದೆಂದು ಪ್ರಜ್ಞಾವಂತರು ಹೇಳುತ್ತಾರೆ. ತಹಶೀಲ್ದಾರ್ ಮತ್ತು ಉದಾಸಿ ಶಾಸಕ-ಮಂತ್ರಿಯಾಗಿದ್ದಾಗ ಸ್ಥಾವರ ಸ್ಥಾಪನೆಗೆ ಮಹತ್ವ ಕೊಟ್ಟರೆ ಹೊರತು ಜಂಗಮದ ಬಗ್ಗೆ ಕಾಳಜಿ ವಹಿಸಲಿಲ್ಲ ಎಂಬ ಬೇಸರದ ಮಾತುಗಳು ಕ್ಷೇತ್ರದಲ್ಲಿ ಜೋರಾಗಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ವಾಣಿಜ್ಯ ನಗರ ಚಿಂತಾಮಣಿಯ ಶಾಸಕರನ್ನು ನಿರ್ಧರಿಸುವ ’ಹಣಾ’ಹಣಿ

ಹಾನಗಲ್‌ನಲ್ಲಿ ರಸ್ತೆಗಳಿವೆ; ಸಾರಿಗೆ ವ್ಯವಸ್ಥೆ ಸರಿಯಿಲ್ಲ. ಹಳ್ಳಿಗಳಲ್ಲಿ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಕೇಂದ್ರದಲ್ಲಿ ಬೃಹತ್ ಆಸ್ಪತ್ರೆ ಕಟ್ಟವಿದೆ; ಆದರೆ ವೈದ್ಯರು-ಆರೋಗ್ಯ ಸೌಲಭ್ಯ ಸಮರ್ಪಕವಾಗಿಲ್ಲ. ಶೀಕು-ಸಂಕಟವಾದರೆ ದೂರದ ಹುಬ್ಬಳ್ಳಿ-ದಾವಣಗೆರೆಗೆ ಓಡಬೇಕು. ಬಿ.ಎ, ಬಿ.ಕಾಂ ಡಿಗ್ರಿ ಬಿಟ್ಟರೆ ಬೇರ್‍ಯಾವ ವೃತ್ತಿಪರ ಶಿಕ್ಷಣಕ್ಕೂ ಸುಲಭವಾದ ಅವಕಾಶವಿಲ್ಲ. ದಾವಣಗೆರೆ, ಹುಬ್ಬಳ್ಳಿ-ಧಾರವಾಡಕ್ಕೆ ಹೋಗಿ ಕಲಿತುಬಂದವರು ಉದ್ಯೋಗ ಅರಸುತ್ತ ಪುಣೆ, ಬೆಂಗಳೂರು, ಹುಬ್ಬಳ್ಳಿಗೆ ವಲಸೆಹೋಗುತ್ತಿದ್ದಾರೆ. ರೈತರಿಗೆ ಫಲವತ್ತಾದ ಭೂಮಿ-ನೀರಾವರಿ ಸೌಲಭ್ಯವಿದೆ; ಗೊಬ್ಬರ-ಬೀಜ ಸರಿಯಾಗಿ ಸಿಗುತ್ತಿಲ್ಲ. ಫಸಲಿಗೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ. ಕೃಷಿ ಉತ್ಪನ್ನಗಳನ್ನು ರೈತರು ನೇರವಾಗಿ ಮಾರಾಟ ಮಾಡುವಂತಹ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಗೋಜಿಗೆ ಉದಾಸಿ ಅಥವಾ ತಹಶೀಲ್ದಾರ್ ಹೋಗಲಿಲ್ಲ.

ವಿಪುಲವಾಗಿ ಮಾವಿನ ಹಣ್ಣು ಬೆಳೆಯುವ ಹಾನಗಲ್ ರೈತರ ಬಹುದಿನದ ಬೇಡಿಕೆಯಾದ ಮಾವು ಸಂಸ್ಕರಣಾ ಘಟಕ ಸ್ಥಾಪನೆಯ ಘೋಷಣೆ ಕಳೆದ ಬಜೆಟ್‌ನಲ್ಲೇನೋ ಮಾಡಲಾಗಿದೆ. ಆದರೆ ಯೋಜನೆಗೆ ಬೇಕಾದ ಜಾಗ ಗುರುತಿಸಿದ್ದು ಬಿಟ್ಟರೆ ಇನ್ನೇನು ಮುಂದುವರಿದಿಲ್ಲ ಎಂದು ರೈತರು ಹೇಳುತ್ತಾರೆ.

ರೈತರು ಕಬ್ಬು ಬೆಳೆದು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಕಬ್ಬು ಹೊತ್ತುತಂದ ರೈತರ ವಾಹನಗಳನ್ನು ಸರತಿ ಸಾಲಿನಲ್ಲಿ ತಿಂಗಳುಗಟ್ಟಲೆ ಕಾಯಿಸುವ ಸಂಗೂರು ಸಕ್ಕರೆ ಫ್ಯಾಕ್ಟರಿಯ ಇದ್ದೂ ಇಲ್ಲದಂತಾಗಿದೆ. ಪ್ರವಾಸೋದ್ಯಮ ಮತ್ತು ಕೈಗಾರಿಕೆ ಸ್ಥಾಪನೆಗೆ ಹಾನಗಲ್‌ನಲ್ಲಿ ಹಲವು ಅವಕಾಶಗಳಿವೆ; ಆಕರ್ಷಕ ಐತಿಹಾಸಿಕ-ಪ್ರಾಕೃತಿಕ ತಾಣಗಳಿವೆ. ಸರಣಿ ಪ್ರವಾಸೋದ್ಯಮ ಆರಂಭಿಸಿದರೆ ಯುವಕರಿಗೆ ಸ್ಥಳೀಯವಾಗಿ ಬದುಕು ನಡೆಸುವ ಧೈರ್ಯ ಬರುತ್ತದೆ. ಇಂಥ ಜನಪರ ಬೇಕು-ಬೇಡಗಳತ್ತ ಅಧಿಕಾರಸ್ಥರು ಗಮನಹರಿಸುತ್ತಿಲ್ಲ ಎಂಬ ಅಸಮಾಧಾನ-ಆಕ್ರೋಶ ಹಾನಗಲ್ಲನಲ್ಲಿ ಮಡುಗಟ್ಟಿದೆ.

ತಾಲೂಕಿನಲ್ಲಿ ಒಂದೇಕಡೆ 50 ಎಕರೆಯಷ್ಟು ಸರಕಾರಿ ಪಾಳು ಭೂಮಿ ಸಿಗುವ ಹಲವು ಪ್ರದೇಶಗಳಿವೆ; ಇಲ್ಲಿ ಕೈಗಾರಿಕೆ-ಉದ್ಯಮ ತೆರೆಯಬಹುದು. ಯುವ ಸಮೂಹ ಕೈಗಾರಿಕೆ ಬೇಕೆನ್ನುತ್ತಿದೆ. ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಶುರುವಾದರೆ ಒಂದಿಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ; ರೈತರಿಗೂ ಅನುಕೂಲವಾಗುತ್ತದೆ. ಅಪ್ಪ-ಮಗ ಉದಾಸಿಗಳು ದಶಕಗಳ ಕಾಲ ಶಾಸಕ-ಮಂತ್ರಿ, ಸಂಸದರಾದರೂ ಹಾನಗಲ್ ದೆಸೆ ಮಾತ್ರ ಬದಲಾಗಲಿಲ್ಲ; 2023ರಲ್ಲಿ ಆಯ್ಕೆಯಾಗುವ ಶಾಸಕನಿಗಾದರೂ ಪ್ರಥಮ ಆದ್ಯತೆ ಕೈಗಾರಿಕೆ ಸ್ಥಾಪನೆ, ರೈತರ ಗುಳೆತಪ್ಪಿಸಿ ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು ಮತ್ತು ಕೃಷಿ ಮಾರುಕಟ್ಟೆ ಮಧ್ಯವರ್ತಿಗಳ ಹಿಡಿತದಿಂದ ತಪ್ಪಿಸುವುದಾಗಬೇಕು ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ಟಿಕೆಟ್ ಯಾರಿಗೆ?!

ಹಾನಗಲ್ ಸಮರಾಂಗಣ ಸಾವಕಾಶವಾಗಿ ಹದಗೊಳ್ಳುತ್ತಿದೆ. ಕಾಂಗ್ರೆಸ್ ರಂಗ ತಾಲೀಮು ಬಿರುಸಾಗುತ್ತಿದೆ. ಸಮರ್ಥ ಕದನ ಕಲಿಯಿಲ್ಲದ ಬಿಜೆಪಿ ಬೇಗುದಿ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಲಿಂಗಾಯತರಲ್ಲಿ ಹೆಚ್ಚಿನವರು ಬಿಜೆಪಿ ಬೆಂಬಲಿಗರಾದರೆ, ಮುಸಲ್ಮಾನ ಸಮುದಾಯ ಸಾಮಾನ್ಯವಾಗಿ ಕಾಂಗ್ರೆಸ್ ಇಡುಗಂಟು; ಉಳಿದ ಜಾತಿಯವರು ಜಾತಿ-ಧರ್ಮ-ಪಕ್ಷ ಪರಿಗಣಿಸದೆ “ಯಾರು ಹಿತವರು ನಮಗೆ” ಎಂಬ ಲೆಕ್ಕಾಚಾರದಲ್ಲಿ ವ್ಯಕ್ತಿನಿಷ್ಠವಾಗಿ ಮತಹಾಕುತ್ತಾರೆ. ಕ್ಷೇತ್ರದಲ್ಲಿ ಗಟ್ಟಿ ಹಿಡಿತ ಸಾಧಿಸಿದ್ದ ಸಿ.ಎಂ.ಉದಾಸಿ ನಿರ್ಗಮನದ ನಂತರ ಬಿಜೆಪಿ ಬೇರುಗಳು ಒಣಗುತ್ತಿವೆ. ಉದಾಸಿ ಇಲ್ಲದ ಅಖಾಡದಲ್ಲಿ ಅವರ ಲಾಗಾಯ್ತಿನ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಹಳೆ ತಲೆಮಾರಿನ ರಾಜಕಾರಣಿ ಮನೋಹರ ತಹಶೀಲ್ದಾರ್ ಒಂಥರಾ ನಿವೃತ್ತಿಯಲ್ಲಿರುವಂತಿದ್ದಾರೆ.

ಕಾಂಗ್ರೆಸ್ ಟಿಕೆಟ್‌ಗೆ ಮೂರ್‍ನಾಲ್ಕು ಮಂದಿ ಅರ್ಜಿ ಹಾಕಿದ್ದಾರೆ; ಹಿಂದೊಮ್ಮೆ ಜಿಪಂ ಸದಸ್ಯನಾಗಿದ್ದ ಮಗನ ಭವಿಷ್ಯ ರೂಪಿಸುವ ತಂತ್ರಗಾರಿಕೆಯಲ್ಲಿ ಮಾಜಿ ಮಂತ್ರಿ ಮನೋಹರ ತಹಶೀಲ್ದಾರ್ ತಾವೂ ಟಿಕೆಟ್ ಅರ್ಜಿ ಗುಜರಾಯಿಸಿದ್ದಾರೆ. ತನಗಲ್ಲದಿದ್ದರೆ ತನ್ನ ಮಗನಿಗಾದರೂ ಅಭ್ಯರ್ಥಿತನ ಕೊಡಿಯೆಂಬ ಬಿನ್ನಹ ತಹಶೀಲ್ದಾರ್ ಅವರದಾಗಿದೆ. ಗಣನೀಯ ಸಂಖ್ಯೆಯ ಮತದಾರರಿರುವ ಮರಾಠ ಜನಾಂಗದ ಶಾಸಕ ಶ್ರೀನಿವಾಸ್ ಮಾನೆಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತವಾಗಿದೆ. ಕಳೆದ ಹದಿಮೂರು ತಿಂಗಳ ಶಾಸಕತ್ವದಲ್ಲಿ ಮಾನೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಓಡಾಡುತ್ತ ಮತದಾರರೊಂದಿಗೆ ’ಧನಾಧಾರಿತ’ ಒಡನಾಟ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಜನರಾಡಿಕೊಳ್ಳುತ್ತಿರುವ ಭಾತ್ಮಿ ಪ್ರಕಾರ ಮಾನೆಗೆ ಪ್ರತಿ ದಿನ ಎರಡು ಲಕ್ಷದ ಖರ್ಚು-ವೆಚ್ಚವಿದೆ! ಒಟ್ಟಿನಲ್ಲಿ ಮಾನೆ 2023ರ ಚುನಾವಣಾ ಪ್ರಚಾರವನ್ನು ಯೋಜನಾಬದ್ಧವಾಗಿ ನಡೆಸಿದ್ದಾರೆ.

ಉದಾಸಿ ಸಾವಿನ ನಂತರ ಹಾನಗಲ್‌ನಲ್ಲಿ ಬಿಜೆಪಿಗೆ ಸ್ಥಳೀಯ ಗಟ್ಟಿ ಜಟ್ಟಿ ಸಿಗದಾಗಿದೆ. ಸುಮಾರು ಹತ್ತು ಕೇಸರಿ ಟಿಕೆಟ್ ಆಕಾಂಕ್ಷಿಗಳು ಕಿತ್ತಾಡುತ್ತಿದ್ದಾರೆ; ಉಪ ಸಮರದಲ್ಲಿ ಸೆಣಸಾಡಿ ಸೋತಿದ್ದ ಹಾವೇರಿಯ ಶಿವರಾಜ್ ಸಜ್ಜನರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಈಳಿಗೇರ್, ದಿವಂಗತ ಉದಾಸಿ ಸುಪುತ್ರ-ಎಂಪಿ ಶಿವಕುಮಾರ್ ಉದಾಸಿ ಮತ್ತವರ ಮಡದಿಯ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಸಜ್ಜನರ್‌ಗೆ ಮತ್ತೆ ಕಣಕ್ಕಿಳಿಸುವ ಯೋಚನೆ ಬಿಜೆಪಿಯ ಹಿರಿಯರದೆಂಬ ಸುದ್ದಿಗಳು ಆ ಪಕ್ಷದಿಂದ ಹೊರಬರುತ್ತಿದೆ. ಆದರೆ ಸಜ್ಜನರ್ ಹೊರಗಿನವರು; ಸ್ಥಳೀಯರಲ್ಲಿ ಯಾರಿಗಾದರೂ ಒಬ್ಬರಿಗೆ ಅವಕಾಶ ಕೊಡಿಯೆಂಬ ಕೂಗನ್ನು ಸಂಸದ ಶಿವಕುಮಾರ್ ಎಬ್ಬಿಸಿದ್ದಾರೆನ್ನಲಾಗುತ್ತಿದೆ.

ನಿಷ್ಪ್ರಯೋಜಕ ಸಂಸದನೆಂದು ಹಾವೇರಿ ಜಿಲ್ಲೆಯಾದ್ಯಂತ ಜನರ ಆಕ್ರೋಶಕ್ಕೆ ಈಡಾಗಿರುವ ಶಿವಕುಮಾರ್ ಉದಾಸಿಗೆ ಮತ್ತೆ ಸಂಸದನಾಗಿ ಆಯ್ಕೆಯಾಗುವ ಧೈರ್ಯ ಇಲ್ಲದಾಗಿದೆ. ಬಿಜೆಪಿ ಟಿಕೆಟ್ ಕೊಡದ ಸಂಸದರ ಬ್ಲ್ಯಾಕ್ ಲಿಸ್ಟ್‌ನಲ್ಲಿ ಶಿವಕುಮಾರ್ ಉದಾಸಿ ಹೆಸರಿದೆ. ಹೀಗಾಗಿ ಹಾನಗಲ್ ಶಾಸಕನಾಗುವ ಯೋಜನೆ ಹಾಕಿಕೊಂಡಿರುವ ಶಿವಕುಮಾರ್ ಟಿಕೆಟ್‌ಗೆ ಲಾಗ ಹಾಕುತ್ತಿದ್ದಾರೆ. ಆದರೆ ಅವಿಭಜಿತ ಧಾರವಾಡ ಜಿಲ್ಲಾ ಬಿಜೆಪಿ ಹೈಕಮಾಂಡ್‌ನಂತಿರುವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್‌ರವರಿಗೆ ಶಿವಕುಮಾರ್ ಉದಾಸಿ ಶಾಸಕನಾಗುವುದು ಇಷ್ಟವಿಲ್ಲ. ಆರೆಸ್ಸೆಸ್ ಸೂತ್ರಧಾರರು ತಾತ್ಸಾರ ಮಾಡುವುದು ಮನಗಂಡಿರುವ ಶಿವಕುಮಾರ್ “ಎಮ್ಮೆಲ್ಲೆ ಟಿಕೆಟ್ ಕೊಡದಿದ್ದರೆ, ಎಂಪಿಗೂ ರಾಜಿನಾಮೆ ನೀಡಿ ರಾಜಕಾರಣ ಬಿಡುತ್ತೇನೆ” ಎಂದು ಬೆದರಿಸುತ್ತಿದ್ದಾರೆ; ಆದರದು ವರ್ಕ್ ಔಟ್ ಆಗೋದು ಕಷ್ಟವೆಂದು ಬಿಜೆಪಿಗರೇ ಮಾತಾಡಿಕೊಳ್ಳುತ್ತಿದ್ದಾರೆ.

ಸದ್ಯದ ಸಮೀಕ್ಷೆಯಂತೆ ಕಾಂಗ್ರೆಸ್ ಸುಸ್ಥಿತಿಯಲ್ಲಿದೆ; ಹಿಂದುತ್ವದ ಹವಾ ಇಲ್ಲದ ಹಾನಗಲ್‌ನಲ್ಲಿ ಬಿಜೆಪಿ ಭಿನ್ನಮತ ಕಾಂಗ್ರೆಸ್‌ಗೆ ವರವಾಗಿದೆ. ಉದಾಸಿ ಕುಟುಂಬದವರು ಬಿಜೆಪಿ ಅಭ್ಯರ್ಥಿಯಾದರೆ ಪ್ರಬಲ ಪೈಪೋಟಿ ಆಗಬಹುದಷ್ಟೆ; ಗೆಲ್ಲುವ ಅವಕಾಶ ಕಾಂಗ್ರೆಸ್‌ಗೇ ಹೆಚ್ಚೆಂಬ ಚರ್ಚೆ ಕ್ಷೇತ್ರದ ರಾಜಕಾರಣದ ಕಟ್ಟೆಯಲ್ಲಿ ನಡೆದಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...