Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಿರೇಕೆರೂರು: ’ಕೌರವ’ನನ್ನು ಸೋಲಿಸಲು ಗದೆ ಎತ್ತಿ ನಿಂತಿರುವ ಬಣಕಾರ್!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಿರೇಕೆರೂರು: ’ಕೌರವ’ನನ್ನು ಸೋಲಿಸಲು ಗದೆ ಎತ್ತಿ ನಿಂತಿರುವ ಬಣಕಾರ್!

- Advertisement -
- Advertisement -

ದಾರ್ಶನಿಕ-ತ್ರಿಪದಿ ಕವಿ ಸರ್ವಜ್ಞನ ಜನ್ಮ ಭೂಮಿ ಮತ್ತು ಕರ್ಮ ಭೂಮಿಗಳ ಅರೆ ಮಲೆನಾಡು ಸೀಮೆ ಹಿರೇಕೆರೂರು-ರಟ್ಟಿಹಳ್ಳಿ. ಬೆಳವಲ ನಾಡು ಮತ್ತು ಮಲೆನಾಡುಗಳ ಸಮ್ಮಿಶ್ರ ಗುಣ ಸ್ವಭಾವದ ಹಿರೇಕೆರೂರು-ರಟ್ಟಿಹಳ್ಳಿ ತುಂಗಭದ್ರೆ ಮತ್ತು ಕುಮದ್ವತಿ ನದಿಗಳ ತೀರದಲ್ಲಿದೆ. ಸಾದರ ಲಿಂಗಾಯತರ ಏಕಸ್ವಾಮ್ಯದ ಈ ಅವಳಿ ತಾಲೂಕುಗಳ ಸಾಮಾಜಿಕ-ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಲಾಗಾಯ್ತಿನ ಏಕತಾನತೆ ನೆಲೆಗೊಂಡಿದೆ; ಒಂದು ಕಾಲದಲ್ಲಿ ಪಕ್ಕದ ಸೊರಬ-ಶಿಕಾರಿಪುರದ ಸಮಾಜವಾದಿ ರಾಜಕಾರಣದ ಪ್ರಭಾವದಲ್ಲಿದ್ದ ಗ್ರಾಮೀಣ ಸೊಗಡಿನ ಹಿರೇಕೆರೂರು-ರಟ್ಟಿಹಳ್ಳಿಯ ಮುಗ್ಧ ಮಣ್ಣಿನ ಮಕ್ಕಳ ನಡುವೆ ಈಗ ಪ್ರಗತಿ-ಅಭಿವೃದ್ಧಿಯ ಭ್ರಮೆಬಿತ್ತಿ ಜಾತಿ-ಹಣದ ಪಗಡೆ ಆಟ ಆಡಲಾಗುತ್ತಿದೆ; ಗುಬ್ಬಿ ಶಂಕರಗೌಡ, ಬಿ.ಜಿ.ಬಣಕಾರ್ ಮತ್ತು ಬಿ.ಎಚ್.ಬನ್ನಿಕೋಡರಂಥ ಜನಪರ ಚಿಂತನೆಯ ಮುಂದಾಳುಗಳನ್ನು ಕಂಡ ಹಿರೇಕೆರೂರು ’ಕೌರವ’ನ ಪ್ರವೇಶದ ನಂತರ, ಸಿನಿಮೀಯ ಡ್ಯೂಪ್‌ಗಳ ಆರ್ಭಟದ ಆಡೊಂಬಲದಂತಾಗಿದೆ ಎಂದು ಪ್ರಜ್ಞಾವಂತರು ಹೇಳುತ್ತಾರೆ.

ಇತಿಹಾಸ-ಸಂಸ್ಕೃತಿ

ಹಾವೇರಿ ಜಿಲ್ಲೆಯ ಕಟ್ಟಕಡೆಯ ಗ್ರಾಮ ಹಿರೇಕೆರೂರು; ಪ್ರಾಚೀನ ಕಾಲದ ಶಿಲಾಶಾಸನಗಳಲ್ಲಿ “ಪಿರಿಯ ಕೆರೆಯೂರು” “ಮಹಾತಟಾಕ ಗ್ರಾಮ” ಎಂದು ಉಲ್ಲೇಖಿಸಲ್ಪಟ್ಟಿದೆ. ಪಿರಿ(ಹಿರಿ)ಯ-ಕೆರೆ-ಊರು ಕಾಲಾಂತರದಲ್ಲಿ ಹಿರೇಕೆರೂರು ಆಯಿತೆನ್ನಲಾಗುತ್ತಿದೆ. ಮತ್ತೊಂದು ವಾದದ ಪ್ರಕಾರ ಹಿರೇಕೆರೂರು ಎಂದರೆ “ದೊಡ್ಡ ಕೊಳದ ಗ್ರಾಮ” ಎಂದರ್ಥ. ಇದನ್ನು “ಹೀ…ರೇ…ಕೇ…ರೂರ್” ಎಂದು ಉಚ್ಚರಿಸಲಾಗುತ್ತದೆ ಎಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಹಿಂದೆ ಪಿರಿಯ ಕೆರೆಯೂರು ಬನವಾಸಿ ಸಾಮ್ರಾಜ್ಯಕ್ಕೆ ಸೇರಿತ್ತು; 12 ಹಳ್ಳಿಗಳ ಆಡಳಿತ ಕೇಂದ್ರವಾಗಿತ್ತು. 1,000 ಮಹಾರಾಜರ ಮಹಾ ಅಗ್ರಹಾರವಾಗಿತ್ತು; ಈ ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು ಎಂಬುದು ಇತಿಹಾಸದಿಂದ ವೇದ್ಯವಾಗುತ್ತದೆ.

ರಟ್ಟಿಹಳ್ಳಿ ಕದಂಬರು ಮತ್ತು ರಾಷ್ಟ್ರಕೂಟರ ಪರ್ವದಲ್ಲಿ ಪ್ರಸಿದ್ಧವಾಗಿತ್ತು. ರಾಷ್ಟ್ರಕೂಟರು ರಟ್ಟಿಹಳ್ಳಿಯನ್ನು ಮೊದಲು “ರಾಷ್ಟ್ರಪಲ್ಲಿ” ಎಂದು ಗುರುತಿಸುತ್ತಿದ್ದರು. ಕಲ್ಯಾಣ ಚಾಲುಕ್ಯರ ಸಾಮಂತರಾದ ನೊಣಂಬರು ರಟ್ಟಿಹಳ್ಳಿಯನ್ನು ರಾಜಧಾನಿಯಾಗಿ ಮಾಡಿಕೊಂಡು 100 ಗ್ರಾಮಗಳನ್ನು ಆಳುತ್ತಿದ್ದರು. 17ನೇ ಶತಮಾನದಲ್ಲಿ ಹೈದರ್ ಅಲಿ ರಟ್ಟಿಹಳ್ಳಿಯನ್ನು ವಶಪಡಿಸಿಕೊಂಡರು; ನಂತರ ಮರಾಠರ ಪೇಶ್ವೆ ಮಾಧವರಾವ್ ಹಿಡಿತ ಸಾಧಿಸಿದರು. ಇದು ರಟ್ಟಿಹಳ್ಳಿ-ಆನವಟ್ಟಿ ಕದನವೆಂದು ಇತಿಹಾಸ ಹೇಳುತ್ತದೆ. ಹಿರೇಕೆರೂರು ಮತ್ತು ರಟ್ಟಿಹಳ್ಳಿ ಅವಳಿ ತಾಲೂಕಲ್ಲಿ ರಾಷ್ಟ್ರಕೂಟ, ಕಲ್ಯಾಣಿ ಚಾಲುಕ್ಯ, ವಿಜಯನಗರ ಸಾಮ್ರಾಜ್ಯ ಕಾಲದ 17 ಶಾಸನಗಳು ಕಂಡು ಬಂದಿದೆ.

ಹೆಗ್ಗೇರಿ ಕೆರೆ

ನೂರಾರು ವರ್ಷಗಳ ಇತಿಹಾಸದ ’ಭೈರನಪಾದ’ ತುಂಗಭದ್ರಾ ನದಿ ದಡದಲ್ಲಿದೆ. ಇಲ್ಲಿಯ ಭೈರವೇಶ್ವರ ದೇಗುಲ ಚೋಳರ ಕಾಲದ್ದು; ಆದರೆ ಮೂಲ ಭೈರವ ವಿಗ್ರಹ ಪ್ರಾಚೀನ ಕಾಲದ್ದು ಎನ್ನಲಾಗಿದೆ. ಹಿರೇಕೆರೂರಿನ ಪ್ರಮುಖ ಆಕರ್ಷಣೆ ಸಾವಿರಾರು ವರ್ಷ ಹಳೆಯದಾದ “ಹೆಗ್ಗೇರಿ ಕೆರೆ”. ವಿಶಾಲವಾದ 900 ಎಕರೆ ಕೆರೆ ದಂಡೆಯಲ್ಲಿ ದುರ್ಗಾ ದೇವಸ್ಥಾನವಿದೆ. ಮರಾಠರ ಆಳ್ವಿಕೆಯಲ್ಲಿ ದೇವಸ್ಥಾನಕ್ಕೆ ಅಪಾರ ಆಭರಣದ ಕೊಡುಗೆ ಕೊಡಲಾಗಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ದೇಶದಾದ್ಯಂತ ಲಕ್ಷಾಂತರ ಮಂದಿ-ವಿಶೇಷವಾಗಿ ಮಹಾರಾಷ್ಟ್ರದವರು ಬರುತ್ತಾರೆ. ಎಲ್ಲ ಧರ್ಮೀಯರು ಸೇರಿ ಸಂಭ್ರಮಿಸುವ ಈ ಜಾತ್ರೆ ಭಾವೈಕ್ಯತೆಗೆ ನಿದರ್ಶನವಾಗಿದೆ. ಬ್ರಹ್ಮೇಶ್ವರ ಗುಡಿಯ ಪಕ್ಕದಲ್ಲಿ ರಾಷ್ಟ್ರಕೂಟರ ಕಾಲದ ಬೃಹತ್ ವೀರಗಲ್ಲಿದೆ. ಆದಿಲ್ ಶಾ ದರ್ಬಾರಿನ ಜಾಮಿಯಾ ಮಸೀದಿ ಮತ್ತು ನೂರಾನಿ ಮಸೀದಿಗಳಿವೆ.

ಬಯಲುಸೀಮೆಯ ಕನ್ನಡ ಸಾಂಸ್ಕೃತಿಕ ನೆಲದ ಭಾಗವಾದ ಹಿರೇಕೆರೂರು-ರಟ್ಟಿಹಳ್ಳಿಯಲ್ಲಿ ಹೋರಿ ಬೆದರಿಸಿ ಓಡಿಸುವ ಸ್ಪರ್ಧೆ-ಪರವಂತರಿಕೆ-ಜಾಂಜ್-ಡೊಳ್ಳು ಕುಣಿತದಂಥ ಜಾನಪದ ಕಲೆ-ಕ್ರೀಡೆಗಳಿವೆ; ಬೆಳವಲದ ವಿಶಿಷ್ಟ ಲಯದ ಕನ್ನಡದ ಜತೆ ಲಂಬಾಣಿ-ಉರ್ದುಗಳಂಥ ಭಾಷೆಗಳೂ ಕೇಳಿಬರುತ್ತವೆ. ರಟ್ಟಿಹಳ್ಳಿಯ ಕುಮದ್ವತಿ ನದಿಯ ದಡದ ಹಚ್ಚಹಸುರಿನ ನಡುವೆಯಿರುವ ಚಾಲುಕ್ಯ ಶೈಲಿಯ ಕದಂಬೇಶ್ವರ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರಾಕೃತಿಕ ಸೊಬಗು ನಯನ ಮನೋಹರವಾಗಿದೆ. ಹಳ್ಳೂರು ಗ್ರಾಮದಲ್ಲಿ ಶಿಲಾ ಶಾಸನಗಳ ಅವಶೇಷವಿದೆ. ಹಿರೇಕೆರೂರಿನ ಸಾತೇನಹಳ್ಳಿಯ ಆಂಜನೇಯ ದೇವಾಲಯ ಚಾಲುಕ್ಯರ ಕಾಲಮಾನದ್ದಾದರೆ, ಆಂಜನೇಯ ವಿಗ್ರಹ ವಿಜಯನಗರ ಸಾಮ್ರಾಜ್ಯ ಸಂದರ್ಭದ್ದೆನ್ನಲಾಗಿದೆ. ದೇಗುಲದ ಆವರಣದಲ್ಲಿರುವ ಪೀಠಸ್ಥ ಚತುರ್ಮುಖ ಬ್ರಹ್ಮಶಿರ ಮೂರ್ತಿಯನ್ನು ಸ್ಥಳೀಯರು ಹಟ್ಟಿ ಹಬ್ಬದಂದು (ಗೋ ಹಬ್ಬ) ಪೂಜಿಸುತ್ತಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾವೇರಿ: ಪ್ರಗತಿಗೆ ಪರಿತಪಿಸುತ್ತಿರುವ ಮುಖ್ಯಮಂತ್ರಿಯವರ ’ಮರುಭೂಮಿ’ಯಲ್ಲಿ ಲಿಂಗಾಯತ ಪ್ರತಿಷ್ಠೆಯ…

ಕುಮದ್ವತಿ ನದಿಯಿಂದ ನಿರ್ಮಾಣವಾಗಿರುವ ವಿಶಾಲವಾದ ಮದಗದ ಮಾಸೂರು ಕೆರೆ (ಕೆಂಚಮ್ಮನ ಕೆರೆ) ಅದರ ಪಾತ್ರದುದ್ದಕ್ಕೂ ಇರುವ ಹಳ್ಳಿಗಳ ಜೀವ ಸೆಲೆ! ವಲಸೆ ಹಕ್ಕಿಗಳ ತಾಣವಾದ ಈ ಕೆರೆಯೆ ಸುಪ್ರಸಿದ್ಧ ಜನಪದ ಕತೆ “ಕೆರೆಗೆ ಹಾರ”ಕ್ಕೆ ಸ್ಪೂರ್ತಿ! ಸರೋವರ-ಜಲಪಾತ ಪರಿಸರದ ಮದಗ ಮಾಸೂರು ಕೆರೆ ಪ್ರವಾಸಿಗಳ ಸೆಳೆಯುವ ಪ್ರಕೃತಿ ಸೌಂದರ್ಯದ ಪ್ರದೇಶ. ತತ್ವಜ್ಞಾನಿ ವಚನಕಾರ ಸರ್ವಜ್ಞನ ಮೂಲ ಹಿರೇಕೆರೂರು-ರಟ್ಟಿಹಳ್ಳಿ. ಸರ್ವಜ್ಞನ ಜನ್ಮಸ್ಥಳದ ಬಗ್ಗೆ ಸ್ಪಷ್ಟತೆಯಿಲ್ಲ ಎನ್ನಲಾಗುತ್ತಿದೆ. ಈಗಿರವ ನಂಬಿಕೆಯಂತೆ, ಹಿರೇಕೆರೂರಿನ ಅಬಲೂರು ಸರ್ವಜ್ಞನ ಜನ್ಮಭೂಮಿ; ಕರ್ಮಭೂಮಿ ರಟ್ಟಹಳ್ಳಿಯ ಮಾಸೂರು.

ಕೃಷಿ ಆಧಾರಿತ ಆರ್ಥಿಕತೆ

ಹಿರೇಕೆರೂರು ಮತ್ತು ರಟ್ಟಿಹಳ್ಳಿ ಕೃಷಿ ಪ್ರಧಾನವಾದ ತಾಲೂಕುಗಳು. ತುಂಗಭದ್ರಾ ಹಾಗು ಕುಮದ್ವತಿ ನದಿಗಳು ಅವಳಿ ತಾಲೂಕಿನ ಜೀವನಾಡಿ. ತುಂಗಭದ್ರಾ ಮೇಲ್ದಂಡೆ ಯೋಜನೆ ತಾಲೂಕಿನಲ್ಲಿ ಹಾದುಹೋಗಿದೆ; ಒಂದಿಷ್ಟು ಕೆರೆ ತುಂಬಿಸಲಾಗಿದೆ. ಈ ನೀರಾವರಿ ಮೇಲೆ ರೈತಾಬಿ ಕಸುಬು ಅವಲಂಬಿಸಿದೆ. ನದಿ ತೀರದ ಮಂದಿ ವಿದ್ಯುತ್ ಚಾಲಿತ ನೀರೆತ್ತುವ ಪಂಪ್‌ಗಳ ಮೂಲಕ ಹೊಲ-ತೋಟಗಳಿಗೆ ನೀರುಣಿಸುತ್ತಿದ್ದಾರೆ. ಈ ಎರಡು ತಾಲುಕಿನ ಮುಖ್ಯವಾದ ಆರ್ಥಿಕ ಬೆಳೆ ಮೆಕ್ಕೆ ಜೋಳ ಮತ್ತು ಹತ್ತಿ. ತರಕಾರಿ ಬೆಳೆಗೆ ಅವಳಿ ತಾಲುಕುಗಳು ಪ್ರಸಿದ್ಧವಾಗಿವೆ; ತರಕಾರಿ ಬೆಳೆದು ಅನೇಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಅಡಿಕೆ-ಕಬ್ಬು-ಭತ್ತ ಮಲೆನಾಡಿನ ಸೆರಗಿನ ವ್ಯವಸಾಯಗಾರರ ಜೀವನಾಧಾರ; ಪಶುಸಂಗೋಪನೆಯತ್ತ ಹಳ್ಳಿಗರು ಆಕರ್ಷಿತರಾಗುತ್ತಿದ್ದಾರೆ. ಆದರೆ ಮಣ್ಣಿನ ಮಕ್ಕಳು ಉತ್ತು-ಬಿತ್ತಿ-ಬೆಳೆ ಬೆಳೆದರಷ್ಟೆ ಈ ಅವಳಿ ತಾಲೂಕುಗಳಿಗೆ ಆರ್ಥಿಕ ಚೈತನ್ಯ.

ಒಂದು ಕಾಲದಲ್ಲಿ ತರಕಾರಿ ಮತ್ತಿತರ ಬೆಳೆಗಳ ಬೀಜೋತ್ಪಾದನೆಗೆ ಹಿರೇಕೆರೂರು ಹೆಸರುವಾಸಿಯಾಗಿತ್ತು. ಕೃಷಿ ಪ್ರಧಾನ ಸೀಮೆಯಲ್ಲಿ ಕೃಷಿ ಕಾಯಕದವರಿಗೆ ಬೀಜ-ಗೊಬ್ಬರ ಮತ್ತಿತರ ಸೇವೆ-ಸೌಕರ್ಯ ಸರಿಯಾಗಿ ಸಿಗುತ್ತಿಲ್ಲ; ಕ್ಷೇತ್ರದ ಶಾಸಕರೇ ಕೃಷಿ ಮಂತ್ರಿಯಾಗಿದ್ದರೂ ನೇಗಿಲ ಯೋಗಿಗಳ ಗೋಳು ತಪ್ಪಿಲ್ಲ. ಬಿ.ಎಚ್.ಬನ್ನೀಕೋಡರ ಶಾಸಕತ್ವದ ಅವಧಿಯಲ್ಲಿ ಕೆಲವು ನೀರಾವರಿ ಯೋಜನೆ ಮತ್ತು ಬಿ.ಸಿ.ಪಾಟೀಲರ ಮಂತ್ರಿಪರ್ವದಲ್ಲಿ ಕೆಲವು ಕೆರೆ ಮರುಪೂರಣ ಆಗಿದ್ದು ಬಿಟ್ಟರೆ ಕೃಷಿ ಉನ್ನತೀಕರಣದ ಬೇರ್‍ಯಾವ ಯೋಜನೆಗಳೂ ಅಧಿಕಾರಸ್ಥರಿಗೆ ಹೊಳೆದಿಲ್ಲ ಎಂದು ರೈತರು ಬೇಸರದಿಂದ ಹೇಳುತ್ತಾರೆ. ಬಿಟಿ ಹತ್ತಿ ಬೆಳೆದರೆ ರೈತರು ಕೈ ತುಂಬ ಸಂಪಾದಿಸಬಹುದೆಂದು ಪ್ರೋತ್ಸಾಹಿಸಲಾಯಿತು; ಆದರೆ ರೈತರಿಗೆ ಸಿಕ್ಕಿದ್ದು ಮಾತ್ರ ನಕಲಿ ಬೀಜ; ರೈತರು ಉದ್ಧಾರವಾಗುವುದಿರಲಿ, ಇನ್ನಷ್ಟು ಹೈರಾಣಾಗಿಹೋದರು.

ರೈತರ ಕೃಷಿ ಉತ್ಪನ್ನಕ್ಕೂ ಇಲ್ಲಿ ವ್ಯವಸ್ಥಿತ ಮಾರುಕಟ್ಟೆ ಇಲ್ಲ; ಯೋಗ್ಯ ಬೆಲೆಯೂ ಸಿಗದ ಕಾರಣ ಮಧ್ಯವರ್ತಿಗಳಿಗೆ ರೈತರನ್ನು ಶೋಷಿಸಲು ಆಸ್ಪದವಾಗಿದೆ ಎಂದು ರೈತ ಮುಂದಾಳುಗಳು ಹೇಳುತ್ತಾರೆ. ಹಿರೇಕೆರೂರು ನಗರದಲ್ಲಿ ವಾಣಿಜ್ಯ-ವ್ಯಾಪಾರ ಅಷ್ಟಕ್ಕಷ್ಟೆ; ಬದುಕು ಕಟ್ಟಿಕೊಳ್ಳುವಷ್ಟರ ಮಟ್ಟಿಗೆ ಇಲ್ಲಿ ವ್ಯವಹಾರ ಬೆಳೆದಿಲ್ಲ; ಇರುವ ಸಣ್ಣ ಮಾರುಕಟ್ಟೆಯೂ ಬಲಾಢ್ಯ ಸಾದರ ಲಿಂಗಾಯತರ ಸುಪರ್ದಿಯಲ್ಲಿದೆ. ಪ್ರತಿಯೊಂದಕ್ಕೂ ರಾಣೇಬೆನ್ನೂರು, ಹಾವೇರಿ ಅಥವಾ ಹುಬ್ಬಳ್ಳಿಯತ್ತ ಹೋಗಬೇಕಾಗಿದೆ. ತಲತಲಾಂತರದ ಕುಲಕಸುಬಿನಿಂದ ಒಂದಿಷ್ಟು ಸಂಸಾರಗಳು ಸಾಗುತ್ತಿವೆ. ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತ ಕಾರ್ಖಾನೆ-ಕಂಪನಿಗಳಿಲ್ಲ; ಕೃಷಿಯೇತರ ಆರ್ಥಿಕ ಮೂಲ ಅವಳಿ ತಾಲೂಕಿನಲ್ಲಿಲ್ಲ!

ಸಾದರ ಲಿಂಗಾಯತರ ಹಿಡಿತ!

ಹಿರೇಕೆರೂರು ವಿಧಾನಸಭಾ ಕ್ಷೇತ್ರ ರಚನೆಯಾದಾಗಿನಿಂದ ಲಿಂಗಾಯತರ ಸಾದರ(ಸಾದು) ಒಳಪಂಗಡದ ಹಿಡಿತದಲ್ಲೆ ಇದೆ; ಕ್ಷೇತ್ರದಲ್ಲಿ ಅಹಿಂದ ಮತದಾರರು ಹೆಚ್ಚಿದ್ದರೂ ಶೇ.35ರಷ್ಟಿರುವ ಲಿಂಗಾಯತರದೇ ಪಾರುಪತ್ಯ! 1957ರ ಮೊದಲ ಚುನಾವಣೆಯಿಂದ, 2019ರಲ್ಲಿ ಅನೈತಿಕ ಆಪರೇಷನ್ ಕಮಲದಿಂದಾಗಿ ಬಂದೆರಗಿದ ಉಪ ಚುನಾವಣೆಯ ತನಕದ ಒಟ್ಟೂ 15 ಚುನಾವಣೆಗಳಲ್ಲಿ ವಿವಿಧ ಪಕ್ಷದಿಂದ ಇಲ್ಲವೆ ಪಕ್ಷೇತರರಾಗಿ ಶಾಸಕರಾದವರೆಲ್ಲರೂ ಸಾದರ ಲಿಂಗಾಯತ ಸಮುದಾಯದವರು! ಮತ್ತೆರಡು ಸ್ವಾರಸ್ಯಕರ ಅಂಶಗಳೆಂದರೆ, ಈ 15 ಇಲೆಕ್ಷನ್‌ಗಳಲ್ಲಿ ಗೆದ್ದವರು ಐದೆ ಮಂದಿ; ಈ ಐವರಲ್ಲಿ ಮೂವರು ಮಂತ್ರಿಗಳಾಗಿದ್ದಾರೆ; ಇವರಲ್ಲಿ ಒಬ್ಬರು ವಿಧಾನ ಸಭಾಧ್ಯಕ್ಷರೂ ಆಗಿದ್ದರು!!

ಬಿ.ಜಿ ಬಣಕಾರ್

ಸಾದರ ಆಡೊಂಬಲವೆಂದೇ ಚಿರಪರಿಚಿತವಾಗಿರುವ ಹಿರೇಕೆರೂರು-ರಟ್ಟಿಹಳ್ಳಿ ಅಸೆಂಬ್ಲಿ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳು ಆ ಜಾತಿಯ ಪ್ರಬಲರನ್ನೇ ಕದನಕ್ಕಿಳಿಸುತ್ತಾ ಬಂದಿವೆ. ರಾಜ್ಯ ರಾಜಕಾರಣದ ಪ್ರಭಾವ ಅಥವಾ ಪಕ್ಷಕಾರಣದ ಪರಿಣಾಮ ಹಿರೇಕೆರೂರು ಕ್ಷೇತ್ರದ ಮೇಲೆಂದೂ ಆಗಿಲ್ಲ. ಇಲ್ಲೇನಿದ್ದರೂ ಆರಂಭದ ಚುನಾವಣೆಯಿಂದ ವ್ಯಕ್ತಿ ಪ್ರತಿಷ್ಠೆಯ ಜಿದ್ದಾಜಿದ್ದಿ. ಧರ್ಮಕಾರಣದ ಸೋಂಕು ಹಿರೇಕೆರೂರಲ್ಲಿ ಚುನಾವಣೆಯ ಸೋಲು-ಗೆಲುವು ನಿರ್ಧರಿಸುವ ಮಟ್ಟಿಗೆ ಹಬ್ಬಿಲ್ಲ ಎನ್ನಲಾಗಿದೆ. ಮೂರು ಪಕ್ಷದಿಂದ ಶಾಸಕನಾಗಿ ಈಗ ಮಂತ್ರಿ ಪೀಠದಲ್ಲಿರುವ ಮಾಜಿ ಕಾಪ್, ಹಾಲಿ ಸಿನೆಮಾ ನಟ ಕಮ್ ರಾಜಕಾರಣಿ ಬಿ.ಸಿ.ಪಾಟೀಲ್ ಎಂಟ್ರಿಯ ಬಳಿಕ ಕ್ಷೇತ್ರದಲ್ಲಿ ’ಹಣಾ’ಹಣಿ ಏರ್‍ಪಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ. ಒಟ್ಟು 1,82,796 ಮತದಾರರಿರುವ ಕ್ಷೇತ್ರದಲ್ಲಿ ಒಂದು ಅಂದಾಜಿನಂತೆ 65 ಸಾವಿರ ಲಿಂಗಾಯತ (ಇದರಲ್ಲಿ ಬಹುತೇಕರು ಸಾದರು), 33 ಸಾವಿರ ಮುಸ್ಲಿಮ್, 32 ಸಾವಿರ ಕುರುಬ, 22 ಸಾವಿರ ಎಸ್‌ಸಿ-ಎಸ್‌ಟಿ, 8 ಸಾವಿರ ಮರಾಠ, 4 ಸಾವಿರ ಬ್ರಾಹ್ಮಣರ ಜತೆ ಇನ್ನಿತರ ಸಣ್ಣ-ಪುಟ್ಟ ಸಂಖ್ಯೆಯ ಸಮುದಾಯದ ಮತದಾರರಿದ್ದಾರೆ.

ಸಚಿವ-ಸ್ಪೀಕರ್ ತವರು!!

ಗುಬ್ಬಿ ಶಂಕರಗೌಡ ಎಂದೇ ಪರಿಚಿತರಾಗಿದ್ದ ಸಾದರ ಪಂಗಡದ ಜಿ.ಬಿ.ಶಂಕರ್‌ರಾವ್ 1957ರ ಪ್ರಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಪಕ್ಷೇತರ ಅಭ್ಯರ್ಥಿ ಬಿ.ಡಿ.ಪಾಟಿಲ(10,060)ರನ್ನು 8,077 ಮತದಿಂದ ಮಣಿಸಿ ಶಾಸನಸಭೆಗೆ ಪ್ರವೇಶ ಪಡೆದರು. 1962ರಲ್ಲಿ ರಾಜಾಜಿಯವರ ಸ್ವತಂತ್ರ ಪಕ್ಷದ ಹುರಿಯಾಳಾಗಿದ್ದ ಎಸ್.ಎಸ್.ಕೆರೆಗೌಡರ್‌ರನ್ನು (12,946) ಕಾಂಗ್ರೆಸ್‌ನ ಶಂಕರ್‌ರಾವ್(23,284) ಸೋಲಿಸಿ ಎರಡನೆ ಬಾರಿ ಆಯ್ಕೆಯಾದರು. 1960ರ ದಶಕದ ದ್ವಿತಿಯಾರ್ಧದಲ್ಲಿ ಶಂಕರ್‌ರಾವ್ ಕ್ಷೇತ್ರದಲ್ಲಿ ಮತ್ತು ಕಾಂಗ್ರೆಸ್‌ನಲ್ಲಿ ವರ್ಚಸ್ವಿಯಾಗಿದ್ದರು; ಅದೇ ವೇಳೆಗೆ ಶಂಕರರಾವ್‌ಗೆ ಎದುರಾಳಿಯಾಗಿ ಸಾದರ ಸಮುದಾಯದ ಬಿ.ಜಿ.ಬಣಕಾರ್ ಕ್ಷೇತ್ರದಲ್ಲಿ ತಲೆಯೆತ್ತಿದರು.

1967ರಲ್ಲಿ ಶಂಕರರಾವ್‌ಗೆ ಪಿಎಸ್‌ಪಿ ಹುರಿಯಾಳಾಗಿ ಬಣಕಾರ್ ಸೆಡ್ಡುಹೊಡೆದರು. ಈ ಕದನ ಕುತೂಹಲದಲ್ಲಿ 30,368 ಮತ ಪಡೆದ ಶಂಕರರಾವ್ ಪಿಎಸ್‌ಪಿಯ ಬಣಕಾರ್‌ರನ್ನು 15,242 ಮತದಿಂದ ಸೋಲಿಸಿದರು. ಮುಖ್ಯಮಂತ್ರಿ ನಿಜಲಿಂಗಪ್ಪ ತಮ್ಮ ಸರಕಾರದಲ್ಲಿ ಶಂಕರರಾವ್‌ರನ್ನು ಮಂತ್ರಿ ಮಾಡಿಕೊಂಡರು; ವೀರೇಂದ್ರ ಪಾಟೀಲ್ ಸಹ ತಮ್ಮ ಸಚಿವಸಂಪುಟದಲ್ಲಿ ಶಂಕರರಾವ್‌ಗೆ ಸ್ಥಾನ ಕೊಟ್ಟರು. 1972 ಚುನಾವಣೆ ಮೊದಲು ಕಾಂಗ್ರೆಸ್ ವಿಭಜನೆಯಾಯಿತು. ನಿಜಲಿಂಗಪ್ಪ-ವೀರೇಂದ್ರ ಪಾಟೀಲ್‌ರ ಸಂಸ್ಥಾ ಕಾಂಗ್ರೆಸ್ ಕಡೆ ಶಂಕರರಾವ್ ಉಳಿದರು. 1972ರ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಶಂಕರರಾವ್‌ಗೆ ಎದುರಾಗಿ ಬಿ.ಜಿ.ಬಣಕಾರ್ ಇಂದಿರಾ ಬಣದ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದರು. 28,205 ಮತ ಪಡೆದ ಬಣಕಾರ್ ಜಯಗಳಿಸಿದರು; ಶಂಕರರಾವ್ ಕೇವಲ 3,676 ಮತಗಳಿಂದ ಪರಾಭವ ಅನುಭವಿಸುವಂತಾಯಿತು. ಬಣಕಾರ್‌ರನ್ನು ಅಂದಿನ ಸಿಎಂ ದೇವರಾಜ ಅರಸು, ಪಶುಸಂಗೋಪನಾ ಇಲಾಖೆಯ ಮಂತ್ರಿ ಮಾಡಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ರಾಣೇಬೆನ್ನೂರು: ಸುಪ್ರಸಿದ್ಧ ಸರಕು ಮಾರುಕಟ್ಟೆಯಲ್ಲಿ ಜಾತಿ-ಧರ್ಮದ ವ್ಯಾಪಾರ!

1978ರ ಚುನಾವಣೆಯಲ್ಲಿ ಶಂಕರರಾವ್ ಪಕ್ಷೇತರ ಹುರಿಯಾಳಾಗಿ ಕಾಂಗೈನ ಬಿ.ಜಿ.ಬಣಕಾರ್‌ಗೆ ಮುಖಾಮುಖಿಯಾದರು. ಈ ನೇರ ಸ್ಪರ್ಧೆಯಲ್ಲಿ 32,103 ಮತ ಪಡೆದ ಶಂಕರರಾವ್ 23,695 ಮತ ಗಳಿಸಿದ್ದ ಬಣಕಾರ್‌ರನ್ನು 8,408 ಮತದಂತರದಿಂದ ಸೋಲಿಸಿ ಐದು ವರ್ಷದ ಹಿಂದಿನ ಸೇಡುತೀರಿಸಿಕೊಂಡರು. 1970ರ ದಶಕದ ಅಂತ್ಯದಲ್ಲಿ ಇಂದಿರಾ ಗಾಂಧಿ ಮೇಲೆ ಮುನಿದಿದ್ದ ಅರಸು ಕಾಂಗ್ರೆಸ್‌ನಿಂದ ಹೊರಬಂದು ತಮ್ಮದೆ ಕಾಂಗ್ರೆಸ್ (ಅರಸು) ಕಟ್ಟಿಕೊಂಡಿದ್ದರು. 1980ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಂದೇಒಂದು ಎಂಪಿ ಸೀಟು ಗೆಲ್ಲಲಾಗದ ಅರಸು ಸಿಎಂ ಸ್ಥಾನಕ್ಕೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರು. ಆಗ ಗುಂಡೂರಾವ್ ರಚಿಸಿದ್ದ ಕಾಂಗೈ ಸರಕಾರಕ್ಕೆ ಪಕ್ಷೇತರ ಎಮ್ಮೆಲ್ಲೆ ಶಂಕರರಾವ್ ಬೆಂಬಲ ವ್ಯಕ್ತಪಡಿಸಿ ಸಚಿವರಾದರು. 1983ರಲ್ಲಿ ಕಾಂಗ್ರೆಸ್‌ನಿಂದ ಅಖಾಡಕ್ಕಿಳಿದ ಮಂತ್ರಿ ಶಂಕರರಾವ್‌ಗೆ ತಮ್ಮ ಸಾಂಪ್ರದಾಯಿಕ ಎದುರಾಳಿ-ಪಕ್ಷೇತರ ಹುರಿಯಾಳು ಬಣಕಾರ್‌ರ ಮಣಿಸಲಾಗಲಿಲ್ಲ. 32,268 ಮತ ಪಡೆದ ಬಣಕಾರ್ 4,751 ಮತದಂತರದ ಜಯದೊಂದಿಗೆ ಎರಡನೆ ಬಾರಿ ಶಾಸಕರಾದರು.

ಬಣಕಾರ್ 1983ರಲ್ಲಿ ಅಧಿಕಾರಕ್ಕೆ ಬಂದಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಅಲ್ಪಮತದ ಸರಕಾರಕ್ಕೆ ಬೆಂಬಲ ಕೊಟ್ಟರು; 1985ರ ಚುನಾವಣೆಯಲ್ಲಿ ಜನತಾ ಪಾರ್ಟಿಯಿಂದ ಸ್ಪರ್ಧಿಸಿದರು. ಈ ಬಾರಿ ಶಂಕರರಾವ್ ಸ್ಪರ್ಧೆ ಮಾಡಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ಎಂ.ಸಾಲಿ (30,645) ಮತ್ತು ಬಣಕಾರ್ (36,164) ನಡುವೆ ತುರುಸಿನ ಹೋರಾಟ ನಡೆಯಿತು. 5,519 ಮತದಿಂದ ವಿಜಯಿಯಾದ ಬಣಕಾರ್ ವಿಧಾನಸಭೆಯ ಸ್ಪೀಕರ್ ಪೀಠಕ್ಕೇರಿದರು! 1989ರಲ್ಲಿ ಶಂಕರರಾವ್ ಕಾಂಗ್ರೆಸ್‌ನಿಂದ ಮತ್ತೆ ಅಖಾಡಕ್ಕೆ ಇಳಿದರು. ಲಿಂಗಾಯತರ ಪರಮೋಚ್ಚ ನಾಯಕ ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯಾಗಿದ್ದರೂ ಸ್ವಜಾತಿ ಸಾದರರನ್ನು ಒಲಿಸಿಕೊಳ್ಳಲು ಶಂಕರರಾವ್‌ಗೆ ಸಾಧ್ಯವಾಗಲಿಲ್ಲ. ಸಾದರರ ದೊಡ್ಡ ಸಂಖ್ಯೆಯ ಮತಬಾಚಿದ ಜನತಾದಳದ ಹುರಿಯಾಳು ಬಿ.ಎಚ್.ಬನ್ನಿಕೋಡ್ (34,93) ಶಂಕರರಾವ್‌ರನ್ನು 3,138 ಮತಗಳಿಂದ ಸೋಲಿಸಿದರು; ಕಾಂಗ್ರೆಸ್ ಟಿಕೆಟ್ ಸಿಗದ ಸಿಟ್ಟಿನಿಂದ ಬಂಡೆದ್ದು ಸ್ಪರ್ಧಿಸಿದ್ದ ಡಿ.ಎಂ.ಸಾಲಿ ಪಡೆದ 18,940 ಮತಗಳು ಶಂಕರರಾವ್ ಸೋಲಿಗೆ ಸಾಕಾಯಿತೆಂದು ರಾಜಕೀಯ ಪಂಡಿತರು ಹೇಳುತ್ತಾರೆ.

ಬಿ.ಎಚ್.ಬನ್ನೀಕೋಡ

1994ರ ಚುನಾವಣೆ ಎದುರಾಗುವುದಕ್ಕೂ ಮೊದಲೇ ಹಳೆ ತಲೆಮಾರಿನ ಶಂಕರರಾವ್ ಮತ್ತು ಬಿ.ಜಿ.ಬಣಕಾರ್ ರಾಜಕಾರಣದ ನೇಪಥ್ಯಕ್ಕೆ ಸರಿದಿದ್ದರು. ಬಣಕಾರ್ ಪುತ್ರ ಯು.ಬಿ.ಬಣಕಾರ್ ಯಡಿಯೂರಪ್ಪರ ಕೃಪಾಶ್ರಯದಲ್ಲಿ ಬಿಜೆಪಿ ರಾಜಕಾರಣ ಆರಂಭಿಸಿದ್ದರು. ಹತ್ತಿರದ ಶಿಕಾರಿಪುರದ ಯಡಿಯೂರಪ್ಪರ ಪ್ರಭಾವ ಹಿರೇಕೆರೂರಿನ ಲಿಂಗಾಯತರ ಮೇಲಾಗತೊಡಗಿತ್ತು. 1994ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದ ಯು.ಬಿ.ಬಣಕಾರ್ (32,248) ಮತ್ತು ಜನತಾ ದಳದ ಶಾಸಕ ಬನ್ನಿಕೋಡ್ (22,855) ನಡುವೆ ಹೋರಾಟವಾಯಿತು; ಬಂಗಾರಪ್ಪರ ಕೆಸಿಪಿಯಿಂದಾಗಿ ಕಾಂಗ್ರೆಸ್ ಬುಡ ಸಡಿಲವಾಗಿತ್ತು. ಬಿಜೆಪಿ-ಕಾಂಗ್ರೆಸ್-ಜನತಾ ದಳ-ಕೆಸಿಪಿ ನಡುವೆ ಮತ ಹರಿದು ಹಂಚಿಹೋಗಿ ಅಂತಿಮವಾಗಿ ಬಿಜೆಪಿಯ ಯು.ಬಿ.ಬಣಕಾರ್ 9,393 ಮತದಂತರದ ಗೆಲುವು ಸಾಧಿಸಿದರು.

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ್ 34,160 ಮತ ಪಡೆದು ಬಿಜೆಪಿ ಎದುರಾಳಿ ಶಾಸಕ ಯು.ಬಿ.ಬಣಕಾರ್‌ರನ್ನು 3,928 ಮತದಂತರದಿಂದ ಮಣಿಸಿದರು. 2004ರಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಗಾಳಿ ಬೀಸುತ್ತಿದ್ದರೂ ಯು.ಬಿ.ಬಣಕಾರ್‌ಗೆ ಗೆಲ್ಲಲಾಗಲಿಲ್ಲ; ಜೆಡಿಎಸ್ ಕ್ಯಾಂಡಿಡೇಟಾಗಿದ್ದ ಇಂದಿನ ಆಪರೇಷನ್ ಕಮಲ “ಖ್ಯಾತಿ”ಯ ಮಂತ್ರಿ ಬಿ.ಸಿ.ಪಾಟೀಲ್(39,237) ಬಣಕಾರ್‌ರನ್ನು 4,990 ಮತದಿಂದ ಸೋಲುಣಿಸಿ ಅಸೆಂಬ್ಲಿ ಪ್ರವೇಶಿಸಿದರು. ಹಿರೇಕೆರೂರು ತಾಲೂಕಿನ ಗಡಿಯಲ್ಲಿರುವ ಸೊರಬದ ಹಳ್ಳಿಯ ಬಿ.ಸಿ.ಪಾಟೀಲ್ ಪೊಲೀಸ್ ಚಾಕರಿಗೆ ರಾಜಿನಾಮೆ ಕೊಟ್ಟು ಇಲ್ಲಿ ರಾಜಕಾರಣ ಶುರುಹಚ್ಚಿಕೊಂಡಿದ್ದರು. ಜಾತಿ-ಹಣ ಹದವಾಗಿ ಪ್ರಯೋಗಿಸಿ ಪಾಟೀಲ್ ಗೆದ್ದರೆಂಬ ವಿಶ್ಲೇಷಣೆಗಳು ಕ್ಷೇತ್ರದಲ್ಲಿದೆ.

2008ರ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸೇರಿದ ಪಾಟೀಲ್ ಆ ಪಾರ್ಟಿಯ ಟಿಕೆಟ್ ಗಳಿಸಿದರು. ಬಿಜೆಪಿಯಿಂದ ಸ್ಪರ್ಧಿಸುವುದಕ್ಕಿಂತ ಸ್ವತಂತ್ರವಾಗಿ ಹೋರಾಡಿದರೆ ಗೆಲ್ಲುವ ಅವಕಾಶ ಜಾಸ್ತಿಯೆಂದು ಬಣಕಾರ್ ಲೆಕ್ಕಹಾಕಿದರು. ಕೌರವ ಸಿನಿಮಾ ನಟನೆಯಿಂದ “ಕೌರವ” ಎಂದೇ ಜನಜನಿತರಾಗಿದ್ದ ಪಾಟೀಲ್ (35,322) ಮತ್ತು ಪಕ್ಷೇತರ ಬಣಕಾರ್ (31,132) ನಡುವಿನ ರಣರೋಚಕ ಜಿದ್ದಾಜಿದ್ದಿಯಲ್ಲಿ ಜೆಡಿಎಸ್‌ನ ಬನ್ನಿಕೋಡ್ ಮತ್ತು ಬಿಜೆಪಿಯ ಅಶೋಕ್ ಪಾಟೀಲ್ ಲೆಕ್ಕಕ್ಕಿಲ್ಲದಂತಾದರು; ಕೌರವ 4,190 ಮತದಂತರದಿಂದ ಗೆದ್ದು ಶಾಸಕರಾದರು. ಕಾಯಂ ಪ್ರತಿಸ್ಪಧಿಗಳಂತಾಗಿದ್ದ ಪಾಟೀಲ್-ಬಣಕಾರ್ 2013ರ ಚುನಾವಣೆಯಲ್ಲಿ ಮತ್ತೆ ಕಾದಾಟಕ್ಕೆ ನಿಂತರು. ಈ ಬಾರಿ ಯಡಿಯೂರಪ್ಪರ ಕೆಜೆಪಿ ಕ್ಯಾಂಡಿಡೇಟಾಗಿದ್ದ ಬಣಕಾರ್ ಕಾಂಗ್ರೆಸ್‌ನ ಪಾಟೀಲ್‌ರನ್ನು 2,606 ಮತದಿಂದ ಮಣಿಸಿ ನಿಟ್ಟುಸಿರುಬಿಟ್ಟರು ಎಂದು ಆ ಕದನ ಕುತೂಹಲ ಕಂಡವರು ವಿವರಿಸುತ್ತಾರೆ.

2018ರಲ್ಲಿ ಬಿಜೆಪಿಯ ಬಣಕಾರ್ (71,906) ಹಾಗು ಕಾಂಗ್ರೆಸ್‌ನ ಪಾಟೀಲ್ (72,461) ಮಧ್ಯೆ ಕತ್ತುಕತ್ತಿನ ಕದನ ಆಗಿಹೋಯಿತು. ಕೇವಲ 555 ಮತದಿಂದ ಪಾಟೀಲ್ ದಡ ಸೇರಿದರು. 2018ರಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸರಕಾರದಲ್ಲಿ ಸಚಿವನಾಗಲು ವಿಫಲ ಪ್ರಯತ್ನ ನಡೆಸಿದ ಪಾಟೀಲ್ ಬಿಜೆಪಿ “ವೈದ್ಯ”ರಿಂದ ಆಪರೇಷನ್ ಮಾಡಿಸಿಕೊಂಡರು. ಅಧಿಕಾರದ ಲಾಲಸೆಯಿಂದ ಬಾಂಬೈ ಎಮ್ಮೆಲ್ಲೇಸ್ ಟೀಮ್ ಸೇರಿದ ಪಾಟೀಲ್ ಶಾಸಕತ್ವದಿಂದ ಅನರ್ಹರಾಗಿ, ಕೋರ್ಟು-ಕಚೇರಿ ಅಲೆದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿ ಸರಕಾರದಲ್ಲಿ ಮಂತ್ರಿಯಾದರು; ಈ ಪ್ರಹಸನದಲ್ಲಿ ಹಿರೇಕೆರೂರು ಉಪಚುನಾವಣೆಯ ಸಂಕಟ ಎದುರಿಸಬೇಕಾಯಿತು ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ.

ಪಾಟೀಲರ ಸಾಂಪ್ರದಾಯಿಕ ವಿರೋಧಿ ಬಣಕಾರ್‌ಗೆ ಉಗ್ರಾಣ ನಿಗಮದ ಅಧ್ಯಕ್ಷತೆ ದಯಪಾಲಿಸಿದ ಯಡಿಯೂರಪ್ಪ ಬಂಡೇಳದಂತೆ ನೋಡಿಕೊಂಡರು. ಉಪ-ಸಮರದಲ್ಲಿ ಬಣಕಾರ್ ಬಿಜೆಪಿ ಹುರಿಯಾಳು ಪಾಟೀಲ್ ಪರ ಪ್ರಚಾರ ಮಾಡಿದರು. ಬಿಜೆಪಿಗೆ “ಡಬಲ್ ಪವರ್” ಸಿಕ್ಕರೂ ಕಾಂಗ್ರೆಸ್‌ನ ಬನ್ನಿಕೋಡ್ ಗೆಲ್ಲುವ ಎಲ್ಲ ಸೂಚನೆಗಳೂ ಕಾಣಿಸುತ್ತಿದ್ದವು; ಆದರೆ ಚುನಾವಣೆ ಮುಂಚಿನ ಒಂದು ಹಗಲು-ಎರಡು ರಾತ್ರಿ ಬಿಜೆಪಿ ಮಾಡಿದ “ಪ್ರಚಾರ”ದಿಂದ ಚಿತ್ರಣವೇ ಬೇರೆಯಾಯಿತು; ಹೀಗಾಗಿ ಪಾಟೀಲ್ ದೊಡ್ಡ ಅಂತರದಲ್ಲಿ (29,067)ದಲ್ಲಿ ಕಾಂಗ್ರೆಸ್‌ನ ಬನ್ನಿಕೋಡ್‌ರನ್ನು (56,495) ಸೋಲಿಸಿ ಮರು ಆಯ್ಕೆಯಾದರು ಎಂಬ ಚರ್ಚೆ ಹಿರೇಕೆರೂರು-ರಟ್ಟಿಹಳ್ಳಿಯ ರಾಜಕೀಯ ಕಟ್ಟೆಯಲ್ಲಿ ಇವತ್ತಿಗೂ ಇದೆ.

ಕ್ಷೇತ್ರದ ಸುಖ-ಸಂಕಟ!

ಹಿರೇಕೆರೂರು ಮತ್ತು ರಟ್ಟಿಹಳ್ಳಿ ಹಿಂದುಳಿದ ತಾಲೂಕುಗಳು. ವಿಪರ್‍ಯಾಸವೆಂದರೆ ಈ ಕ್ಷೇತ್ರದಿಂದ ಗೆದ್ದವರು ಮಂತ್ರಿ-ಸ್ಪೀಕರ್, ನಿಗಮ-ಮಂಡಳಿ ಯಜಮಾನಿಕೆಯಂಥ ಅಧಿಕಾರದ ಆಯಕಟ್ಟಿನ ಸ್ಥಾನಕ್ಕೇರಿ “ಅದ್ಭುತ” ಅಭಿವೃದ್ಧಿ ಕಂಡರೆ ಹೊರತು ಕ್ಷೇತ್ರವಾಸಿಗಳ ಬದುಕು ಹಸನಾಗಲಿಲ್ಲ; ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಸಾರಿಗೆ, ರಸ್ತೆ, ನೈರ್ಮಲ್ಯ, ವಸತಿಯಂಥ ಮೂಲ ಸೌಕರ್ಯಕ್ಕಾಗಿಯೇ ಜನ ಪರದಾಡುವ ಪರಿಸ್ಥಿತಿ ಅವಳಿ ತಾಲೂಕಲ್ಲಿದೆ. ಸೂರಿಲ್ಲದವರಿಗೆ ವಸತಿ ಯೋಜನೆಗಳು ಕೈಗೆಟುಕುತ್ತಿಲ್ಲ; ಹಳ್ಳಿಗಾಡಿನ ರಸ್ತೆಗಳು ಚಿಂದಿಯೆದ್ದುಹೋಗಿವೆ; ಇಂಥ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಓಡಿಸುಲು ಮುಂದಾಗುತ್ತಿಲ್ಲ. ಕೋವಿಡ್ ಹೆಮ್ಮಾರಿಯ ಕಾಲದಲ್ಲಿ ಅಸ್ತವ್ಯಸ್ತವಾದ ಬಸ್ ಓಡಾಟ ಇವತ್ತಿಗೂ ಹಳ್ಳಿಗಾಡಿನಲ್ಲಿ ಸರಿಯಾಗಿಲ್ಲ. ಸಾರಿಗೆ ಅವ್ಯವಸ್ಥೆ ಕ್ಷೇತ್ರದ ಆರ್ಥಿಕತೆಗೆ ದೊಡ್ಡ ಹೊಡೆತ ಕೊಟ್ಟಿದೆ. ಶಾಸಕರು ಗುತ್ತಿಗೆದಾರರ ಲಾಬಿ ಪೋಷಿಸುತ್ತಿರುವುದೆ ಕಳಪೆ ಕಾಮಗಾರಿಗೆ ಪ್ರಮುಖ ಕಾರಣ ಎಂಬ ಅರೋಪ ಸಾಮಾನ್ಯವಾಗಿದೆ. ಉತ್ತಮ ಆಸ್ಪತ್ರೆ-ಶಿಕ್ಷಣಕ್ಕೆ ದೂರದ ಹುಬ್ಬಳ್ಳಿ ಅಥವಾ ದಾವಣಗೆರೆಯೇ ಗತಿ. ಇಲ್ಲಿಯ ಆಸ್ಪತ್ರೆಗಳು ಇದ್ದೂ ಇಲ್ಲದಂತಾಗಿದೆ ಎಂಬ ಮಾತು ಕೇಳಿಬರುತ್ತದೆ.

ಯು.ಬಿ.ಬಣಕಾರ್

ಈ ಅವಳಿ ತಾಲೂಕಿನ ಅಸ್ತಿತ್ವವಿರುವುದೇ ರೈತಾಪಿ ವರ್ಗದ ಗೇಯ್ಮೆಯ ಮೇಲೆ! ಆದರೆ ರೈತರು ನೆಮ್ಮದಿಯಾಗಿಲ್ಲ. ಅವರ ಕೃಷಿ ಉತ್ಪನ್ನಕ್ಕೆ ಸರಿಯಾದ ಮಾರುಕಟ್ಟೆಯಿಲ್ಲ; ಸರಕಾರದ ಖರೀದಿ ಕೇಂದ್ರಗಳು ರೈತರಿಗೆ ಜರೂರಿದ್ದಾಗ ಶುರುವಾಗುವ ಬದಲು ಅಧಿಕಾರಸ್ಥರ ಪುರುಸೊತ್ತು-ಪ್ರಚಾರದ ಗೀಳಿಗೆ ತಕ್ಕಂತೆ ತೆರೆದುಕೊಳ್ಳುತ್ತವೆ ಎಂಬ ಆಕ್ರೋಶ-ಅಸಮಾಧಾನ ಕ್ಷೇತ್ರದಲ್ಲಿ ಮಡುಗಟ್ಟಿದೆ. ತುಂಗಭದ್ರಾ ಮೇಲ್ದಂಡೆ ಯೋಜನೆ ಕ್ಷೇತ್ರದಲ್ಲಿದೆಯಾದರೂ ಬಸಿ ಕಾಲುವೆಳಾಗದೆ (ಉಪ ಕಾಲವೆ) ರೈತರಿಗೆ ಪ್ರಯೋಜನವಾಗುತ್ತಿಲ್ಲ; ಯೋಜನೆಗೆ ಭೂಮಿ ಕಳಕೊಂಡವರಿಗೆ ಪರಿಹಾರ ಸಿಗದಾಗಿದೆ. ಅನಿಯಮಿತ ವಿದ್ಯುತ್ ಪೂರೈಕೆಯಿಂದ ಕೃಷಿಕರು ವ್ಯವಸಾಯ ಮಾಡುವುದೆ ಕಷ್ಟವಾಗಿದೆ. ತರಕಾರಿಗೆ ನ್ಯಾಯಯುತ ಬೆಲೆ-ಮಾರುಕಟ್ಟೆ ಇಲ್ಲದಾಗಿದೆ. ಈ ಭಾಗದ ಕೃಷಿಕರ ಬಹುದಿನದ ಬೇಡಿಕೆಯಾದ ಶೀತಲೀಕರಣ ಘಟಕವೂ ಸೇರಿದಂತೆ ಸುಮಾರು 1,000 ಕೋಟಿ ರೂ.ಗಳ ವಿವಿಧ ಯೋಜನೆ-ಕಾಮಗಾರಿಗೆ ಕ್ಷೇತ್ರದ ಶಾಸಕ-ಮಂತ್ರಿ ಬಿ.ಸಿ.ಪಾಟೀಲ್ ಗುದ್ದಲಿ ಪೂಜೆ ನೆರವೇರಿಸಿಟ್ಟಿದ್ದಾರೆ; ಆದರೆ ಇದೆಲ್ಲ ಸಾಕಾರವಾಗುವುದು ಅನುಮಾನ; ಇದು ಇಲೆಕ್ಷನ್ ಸ್ಟಂಟ್ ಎಂಬ ಮತುಗಳು ಕೇಳಿಬರುತ್ತಿದೆ!

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬ್ಯಾಡಗಿ: ಒಣ ಮೆಣಸಿನಕಾಯಿ ಸೀಮೆಯ ಕೈ-ಕಮಲ ಪಾಳೆಯಗಳಲ್ಲಿ ಬಣ ಬಡಿದಾಟ!!

ರಟ್ಟಿಹಳ್ಳಿ ತಾಲೂಕು ಘೋಷಣೆಯಾಗಿ ಐದು ವರ್ಷ ಕಳೆದರೂ ಅದಿನ್ನೂ ಪೂರ್ಣ ಪ್ರಮಾಣದ ತಾಲೂಕಾಗಿಲ್ಲ; ಜನರಿಗೆ ಅಗತ್ಯವಿರುವ ಸರಕಾರಿ ಕಚೇರಿಗಳು ಶುರುವಾಗದೆ ಜನರು ಸಂಕಟಪಡುತ್ತಿದ್ದಾರೆ. ಶಾಸಕ ಪಾಟೀಲ್‌ರ ಉದಾಸೀನದಿಂದಾಗಿ ಸ್ವತಂತ್ರ ತಾಲೂಕಿಗೆ ಬೇಕಾದ ಸೌಲತ್ತು-ಸೌಕರ್ಯ ದಕ್ಕುತ್ತಿಲ್ಲ ಎಂದು ಜನರು ಹೇಳುತ್ತಾರೆ. ಯುವಕರು ಕೆಲಸ ಅರಸುತ್ತ ಪುಣೆ, ಬೆಂಗಳೂರು ಮುಂತಾದ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ದಾವಣಗೆರೆ ಸಂಸದ ಸಿದ್ಧೇಶ್ವರ್ ತಾಲೂಕಿನಲ್ಲಿ ಸಕ್ಕರೆ ಫ್ಯಾಕ್ಟರಿ ಸ್ಥಾಪಿಸುತ್ತಾರೆಂದು ಆಗಾಗ ಸುದ್ದಿ ಆಗುತ್ತಿರುತ್ತದೆ; ಈ ಬಂಡವಾಳಶಾಹಿ ಹಿತಾಸಕ್ತಿಯ ಖಾಸಗಿ ಕಾರ್ಖಾನೆಯಿಂದ ರೈತರಿಗೆ ಅದೆಷ್ಟು ಲಾಭವೋ ಗೊತ್ತಿಲ್ಲ; ಆದರೆ ರೈತರ ನಿರೀಕ್ಷೆ ಮಾತ್ರ ಮರೀಚಿಕೆಯಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಯುವ ಸಮೂಹ ಕೈಗಾರಿಕೆ ಆಗಬೇಕೆನ್ನುತ್ತಿದೆ. ಕ್ಷೇತ್ರದ ಶಾಸಕ ಕಮ್ ಮಂತ್ರಿ ಬಿ.ಸಿ.ಪಾಟೀಲ್ ಗಾರ್ಮೆಂಟ್ಸ್ ಘಟಕ ತರುವುದಾಗಿ ಹೇಳುತ್ತಿದ್ದಾರೆ; ಈ ಒಂದು ಸಣ್ಣ ಗಾರ್ಮೆಂಟ್ಸ್‌ನಿಂದ ಅದೆಷ್ಟು ಉದ್ಯೋಗ ಸೃಷ್ಟಿ ಸಾಧ್ಯ? ದೊಡ್ಡ ಕೈಗಾರಿಕೆ ಸ್ಥಾಪನೆಗೆ ಶಾಸಕ-ಸಂಸದರು ಪ್ರಯತ್ನಿಸಲಿ ಎಂಬ ಆಗ್ರಹ ಕೇಳಿಬರುತ್ತಿದೆ.

ಹದಗೊಂಡ ಅಖಾಡ!!

ಮಾಜಿ ಶಾಸಕ ಯು.ಬಿ.ಬಣಕಾರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಂತೆಯೆ ಹಿರೇಕೆರೂರು-ರಟ್ಟಿಹಳ್ಳಿ ರಣರಂಗದಲ್ಲಿ ಯುದ್ಧೋನ್ಮಾದ ಶುರುವಾಗಿಬಿಟ್ಟಿದೆ. ಹಳೆ ಎದುರಾಳಿಗಳೇ ಪಕ್ಷ ಬದಲಿಸಿಕೊಂಡು ಮತ್ತೆ ಕದನ ಸನ್ನದ್ಧರಾಗುತ್ತಿದ್ದಾರೆ. ಒಂದೂವರೆ ದಶಕದಿಂದ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡಿಕೊಂಡುಬಂದಿದ್ದ ಮಾಜಿ ಸ್ಪೀಕರ್ ಬಿ.ಜಿ.ಬಣಕಾರ್ ಪುತ್ರ ಯು.ಬಿ.ಬಣಕಾರ್ ಯಡಿಯೂರಪ್ಪರ ಶಿಷ್ಯತ್ವಕ್ಕೆ ತಿಲಾಂಜಲಿಯಿಟ್ಟು ಬಿಜೆಪಿಯಿಂದ ಹೊರಬಿದ್ದಿದ್ದಾರೆ. ಯಡಿಯೂರಪ್ಪ ಕರುಣಿಸಿದ್ದ ಉಗ್ರಾಣ ನಿಗಮದ ಅಧ್ಯಕ್ಷತೆಯೂ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ. ಬಿ.ಸಿ.ಪಾಟೀಲ್ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದಾಗ ಎದುರಾದ ಉಪಚುನಾವಣೆ ಹೊತ್ತಲ್ಲಿ ಬಣಕಾರ್ “ಗುರು” ಯಡಿಯೂರಪ್ಪರ ಮಾತಿಗೆ ಕಟ್ಟುಬಿದ್ದು ಸೀಟು ಬಿಟ್ಟುಕೊಟ್ಟಿದ್ದರು; 2023ರಲ್ಲಿ ತನಗೆ ಯಡಿಯೂರಪ್ಪ ಛಾನ್ಸ್ ಕೊಡಿಸುತ್ತಾರೆಂದೇ ಬಣಕಾರ್ ನಂಬಿದ್ದರು. ಆದರೆ ಪಾಟೀಲ್ ಬುಡ ಬಿಜೆಪಿಯಲ್ಲಿ ಭದ್ರವಾಗುತ್ತ ಹೋದಂತೆ ಯಡಿಯೂರಪ್ಪ ಬೇರುಗಳು ಒಣಗಲಾರಂಭಿಸಿತು. ಯಡಿಯೂರಪ್ಪನವರೂ ತನ್ನಿಂದ ಬಿಜೆಪಿ ಟಿಕೆಟ್ ಕೊಡಿಸಲು ಸಾಧ್ಯವಿಲ್ಲವೆಂದು ಬಣಕಾರ್‌ಗೆ ಹೇಳಿದರೆನ್ನಲಾಗಿದೆ.

ಬಿಜೆಪಿ ಟಿಕೆಟ್ ಬಿ.ಸಿ.ಪಾಟೀಲ್‌ಗೆ ಖಾತ್ರಿ ಎಂಬುದು ಪಕ್ಕಾ ಆಗುತ್ತಲೆ ಬಣಕಾರ್ ಕಾಂಗ್ರೆಸ್ ಯಜಮಾನರಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಸಂಧಿಸಿದರು; ಹಿರೇಕೆರೂರಲ್ಲಿ ದುರ್ಬಲಗೊಂಡಿದ್ದ ಕಾಂಗ್ರೆಸ್‌ಗೆ ಬಣಕಾರ್‌ರಂಥ ಗಟ್ಟಿ ಜಟ್ಟಿಯ ಅವಶ್ಯಕತೆಯೂ ಇತ್ತು. ಕಾಂಗ್ರೆಸ್ ಟಿಕೆಟ್ ಭರವಸೆ ಪಡೆದು ಬಿಜೆಪಿ ನಂಟು ಕಡಿದುಕೊಂಡ ಬಣಕಾರ್ ಕ್ಷೇತ್ರದ ಉದ್ದಗಲಕ್ಕೂ ಓಡಾಡುತ್ತ ಸಮರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೋತರು ಜನರ ನಡುವೆ ಬೇರುಮಟ್ಟದ ಸಂಪರ್ಕ ಉಳಿಸಿಕೊಂಡಿರುವ ಬಣಕಾರ್ ನಿರುಪದ್ರವಿ ಕೆಲಸಗಾರ ಎಂಬ ಭಾವನೆಯಿದೆ. 2018ರಲ್ಲಿ ಕೇವಲ 555 ಮತದಿಂದ ಪರಾಭವಗೊಂಡ ಸಿಂಪಥಿಯಿದೆ. ಬಿ.ಸಿ.ಪಾಟೀಲರಿಗೆ ಹೋಲಿಸಿದರೆ ಬಣಕಾರ್ ಬೆಟರ್ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಬಣಕಾರ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಗ್ಯಾರಂಟಿ ಎನ್ನಲಾಗುತ್ತಿದ್ದರೂ ಟಿಕೆಟ್‌ಗೆ ಅರ್ಧ ಡಜನ್ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ್ ತನಗೆ ತಪ್ಪಿದರೆ ತನ್ನ ಮಗ ಪ್ರಕಾಶ್ ಬನ್ನಿಕೋಡ್‌ಗೆ ಟಿಕೆಟ್ ಕೇಳುತ್ತಿದ್ದಾರೆ. ಜಿಪಂ ಮಾಜಿ ಅಧ್ಯಕ್ಷ ಕರಿಯಣ್ಣವರ್, ಡಿಕೆಶಿ ಆಪ್ತನೆನ್ನಲಾಗುತ್ತಿರುವ ಹಣವಂತ ಉದ್ಯಮಿ ದಿಗ್ವಿಜಯ್ ಕಾಂಗ್ರೆಸ್ ಉಮೇದುವಾರರಾಗುವ ಕಟಿಪಿಟಿಯಲ್ಲಿದ್ದಾರೆ ಎಂಬ ಬಾತ್ಮಿ ಹರಿದಾಡುತ್ತಿದೆ. ಬಿಜೆಪಿಯಲ್ಲಿ “ಕೌರವ” ಸಾಹೇಬರಿಗೆ ಟಿಕೆಟ್ ಪ್ರತಿಸ್ಪರ್ಧಿಗಳಿಲ್ಲ; ಹಾಗಂತ ಟಿಕೆಟ್ ಪಡೆದಷ್ಟೆ ಸುಲಭವಾಗಿ ಗೆಲ್ಲುತ್ತಾರೆನ್ನಲಾಗದು ಎಂದು ನಿಷ್ಠಾವಂತ ಬಿಜೆಪಿಗರು ಹೇಳುತ್ತಾರೆ. ಸಂಘ ಪರಿವಾರದವರಿಗೆ ವಲಸಿಗ ಪಾಟೀಲ್ ಎಂದರೆ ಅಷ್ಟಕ್ಕಷ್ಟೆ. ಆದರೆ ಈ ಸಂಘಿ ಶಕ್ತಿ ಹಿರೇಕೆರೂರು ಕ್ಷೇತ್ರದಲ್ಲಿ ಸೋಲಿಸುವ ಅಥವಾ ಗೆಲ್ಲಿಸುವಷ್ಟು ಬೆಳೆದಿಲ್ಲ. ಬಿಜೆಪಿಯೊಳಗಿನ ಪಾಟೀಲ್ ವಿರೋಧಿಗಳು ಬಣಕಾರ್ ಬೆನ್ನಿಗೆ ಹೋಗಿದ್ದಾರೆ.

ಮಂತ್ರಿ ಪಾಟೀಲ್ ಬಿಜೆಪಿಯಲ್ಲಿ ಏಕಮೇವಾದ್ವಿತೀಯ ಎಂಬಂತಾಗಿದ್ದಾರೆ; ಆದರೆ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಪಾಟೀಲ್‌ಗೆ ಎಂಟಿ ಇನ್‌ಕಂಬೆನ್ಸ್ ಸುತ್ತಿಕೊಂಡಿರುವಂತೆ ಭಾಸವಾಗುತ್ತದೆ. ಕೃಷಿ ಇಲಾಖೆಯಲ್ಲಾದ ಅವ್ಯವಹಾರದಲ್ಲಿ ಮಂತ್ರಿ ಹೆಸರು ಥಳಕು ಹಾಕಿಕೊಂಡು ರಾಜ್ಯ ಮಟ್ಟದಲ್ಲಿ ಸುದ್ದಿ ಎದ್ದಿದ್ದು ಹಿರೇಕೆರೂರಿಗರನ್ನು ಮುಜುಗರಕ್ಕೆ ಈಡುಮಾಡಿತು ಎಂಬಿತ್ಯಾದಿ ಆಕ್ಷೇಪ-ಆರೋಪದ ಚರ್ಚೆಗಳು ಕೇಳಿಬರುತ್ತವೆ.

ಕ್ಷೇತ್ರದಲ್ಲೀಗ ಹೆಣೆದುಕೊಳ್ಳುತ್ತಿರುವ ಜಾತಿ-ವ್ಯಕ್ತಿ ಪ್ರತಿಷ್ಠೆಯ ಸೂತ್ರ-ಸಮೀಕರಣಗಳು ಮತ್ತು ಶಾಸಕ ಪಾಟೀಲ್ ಬಗೆಗಿನ ಜನಾಭಿಪ್ರಾಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಂಗ್ರೆಸ್‌ನ ಬಣಕಾರ್ ಗೆಲ್ಲುವ ಸೂಚನೆಗಳು ಗೋಚರಿಸುತ್ತವೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಡುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...