Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ರಾಣೇಬೆನ್ನೂರು: ಸುಪ್ರಸಿದ್ಧ ಸರಕು ಮಾರುಕಟ್ಟೆಯಲ್ಲಿ ಜಾತಿ-ಧರ್ಮದ ವ್ಯಾಪಾರ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ರಾಣೇಬೆನ್ನೂರು: ಸುಪ್ರಸಿದ್ಧ ಸರಕು ಮಾರುಕಟ್ಟೆಯಲ್ಲಿ ಜಾತಿ-ಧರ್ಮದ ವ್ಯಾಪಾರ!

- Advertisement -
- Advertisement -

ಬೆಳವಲ ನಾಡಿನ ರಾಣೇಬೆನ್ನೂರು ಉತ್ತರ ಕರ್ನಾಟಕದ ಗೇಟ್‌ವೇ ಎಂದೇ ಪರಿಗಣಿತವಾಗಿದೆ; ತುಂಗಭದ್ರಾ ಮತ್ತು ಕುಮು ದ್ವತಿ ನದಿಗಳ ಸಂಗಮ ಪ್ರದೇಶ. ಹಿಂದಿನಿಂದಲೂ ವ್ಯಾಪಾರಕ್ಕೆ ಪ್ರಸಿದ್ಧವಾಗಿದ್ದ ರಾಣೇಬೆನ್ನೂರಿನ ಸರಕು ಮಾರುಕಟ್ಟೆ ಇವತ್ತಿಗೂ ಆ ಖ್ಯಾತಿ ಕಾಪಾಡಿಕೊಂಡಿದೆ. ಈ ವಾಣಿಜ್ಯ ನಗರಿ ವ್ಯಾಪಾರ-ವಹಿವಾಟಿನ ದಂಧೆದಾರರ ತಾಣವಾದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಯಕವೆ ಜೀವನಾಧಾರ. ಹಿಂದು-ಮುಸ್ಲಿಮ್-ಕ್ರಿಶ್ಚಿಯನ್-ಜೈನ್-ಬೌದ್ಧ ಧರ್ಮೀಯರು ಮತ್ತು ಗುಜರಾತಿ-ರಾಜಸ್ಥಾನಿಗಳಂಥ ವಲಸಿಗರ ನೆಲೆಯಾಗಿರುವ ರಾಣೇಬೆನ್ನೂರಿನ ಸಾಮಾಜಿಕ-ರಾಜಕೀಯ-ಶೈಕ್ಷಣಿಕ-ವಾಣಿಜ್ಯ ಸೇರಿದಂತೆ ಮುಂತಾದ ಆಯಕಟ್ಟಿನ ವಲಯಗಳನ್ನು ಬಹುಸಂಖ್ಯಾತ ಲಿಂಗಾಯತ ಸಮುದಾಯ ಏಕಸ್ವಾಮ್ಯಕ್ಕೆ ಒಳಪಡಿಸಿಕೊಂಡಿದೆ.

ಕಾಂಗ್ರೆಸ್-ಸೋಷಲಿಸ್ಟ್-ಜನತಾ ಪರಿವಾರದಂಥ ಜಾತ್ಯತೀತ ಬದ್ಧತೆಯ ಎದುರಾಳಿಗಳ ಹಣಾಹಣಿ ಕಣವಾಗಿದ್ದ ರಾಣೇಬೆನ್ನೂರು ಇತ್ತೀಚಿನ ದಶಕದಲ್ಲಿ ಧರ್ಮಮಿಶ್ರಿತ ಜಾತಿ ಪ್ರತಿಷ್ಠೆಯ ಆಖಾಡವಾಗಿದೆ; ಜಾತಿ ಮತ್ತು ಧರ್ಮದ ಜಿದ್ದಾಜಿದ್ದಿ ಗುಪ್ತಗಾಮಿಯಾಗಿದೆ. ಆಗಾಗ ಕೋಮು ದಂಗೆಗಳು ರಾಣೇಬೆನ್ನೂರನ್ನು ಬೆಚ್ಚಿ ಬೀಳಿಸುತ್ತಿವೆ. ಲಿಂಗಾಯತ-ಕುರುಬ ಮೇಲಾಟ ಕಂಡೂಕಾಣದಂತೆ ಆಗುತ್ತಿದೆ. ಯಡಿಯೂರಪ್ಪರಿಗೆ ಲಿಂಗಾಯತರ ಮೇಲಿರುವ ಪ್ರಭಾವ ಬಳಸಿಕೊಂಡು ಕಡು ಕೇಸರಿವಾದಿಗಳು ರಾಣೇಬೆನ್ನೂರಿನ ಉದ್ದಗಲಕ್ಕೆ ಬೇರೂರಲು ಸ್ಕೆಚ್ ಹಾಕಿಕೊಂಡು ಕಾರ್ಯಾಚರಣೆಗೆ ಇಳಿದಿರುವುದು ಆತಂಕಕಾರಿಯಾಗಿದೆ ಎಂದು ರಾಜಕೀಯ-ಸಾಮಾಜಿಕ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಇತಿಹಾಸ-ಸಂಸ್ಕೃತಿ

ಜೋಳದ ರೊಟ್ಟಿ-ಮುಳಗಾಯಿ (ಬದನೆ) ಎಣಗಾಯ್ ಪಲ್ಯದ ಊಟದ ರುಚಿಯ ರಾಣೇಬೆನ್ನೂರು ಉತ್ತರ ಕರ್ನಾಟಕದ ಜವಾರಿ ಕನ್ನಡ ಲಯದ ಸಾಂಸ್ಕೃತಿಕ ಪ್ರದೇಶ. ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ರಾಣೇಬೆನ್ನೂರು ರಾಣಿಯ ವಿಶ್ರಾಂತಿ ಸ್ಥಳವಾಗಿದ್ದರಿಂದ ಆ ಹೆಸರು ಬಂತೆಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಯಾವ ಆಧಾರವೂ ಇಲ್ಲ; ಹಿಂದೆ ಈ ಪ್ರದೇಶ “ಭಿನ್ನವೂರು ಹನ್ನೆರಡು” ಎಂದಾಗಿತ್ತು; ಆ ಬಳಿಕ ಐದಾರು ನಾಮಾಂತರಗೊಂಡು ಅಂತಿಮವಾಗಿ ರಾಣೇಬೆನ್ನೂರು ಎಂಬ ನಾಮಕರಣವಾಗಿದೆ. 1115ರ ಗುತ್ತಲಿನ ಜೂಮದೇವನ ಶಾಸನ ಮತ್ತು 1182ರ ಹುಲಿಹಳ್ಳಿಯ ಶಾಸನದಲ್ಲಿ “ಭಿನ್ನವೂರು ಹನ್ನೆರಡು” ಎಂಬ ಉಲ್ಲೇಖವಿದೆ. ರಾಣೇಬೆನ್ನೂರು ಹೆಸರಿನ ಮೂಲ ಸ್ಥಳೀಯ ಕೋಟೆ ಭಾಗದ “ಭಿನ್ನವೂರು”. ಆಗಿನ ಕಾಲಕ್ಕಿದು 12 ಗ್ರಾಮಗಳ ಆಡಳಿತದ ಕೇಂದ್ರವಾಗಿತ್ತು ಎಂದು ತರ್ಕಿಸಲಾಗುತ್ತಿದೆ.

ಭಿನ್ನವೂರು ಎಂದು ಹೆಸರಾಗಿದ್ದಕ್ಕೂ ಒಂದು ಐತಿಹ್ಯವಿದೆ. ಅರಸರ ಆಡಳಿತವಿದ್ದಾಗ ಕೃಷ್ಣ ಮತ್ತು ತುಂಗಭದ್ರಾ ನದಿಗಳ ನಡುವೆ ಅಪಾರ ಜಂಗಮರು ಹಾಗು ಪಾದಚಾರಿಗಳು ಪ್ರವಾಸ ಮಾಡುತ್ತಿದ್ದರು; ಅವರಿಗೆ ಪ್ರಸಾದದ (ಊಟ) ವ್ಯವಸ್ಥೆ ಮಾಡಲೆಂದು ರಾಜರು ಅಂದಿಗಿದ್ದ ಸುಮಾರು 440 ಮಠಗಳಿಗೆ ದಾನ ಕೊಡುತ್ತಿದ್ದರು. ಇದರಿಂದಾಗಿ ಭಿನ್ನವೂರು ಎಂದು ಹೆಸರು ಬಂತು ಎನ್ನಲಾಗಿದೆ. ಭಿನ್ನವೂರು ಕಾಲಕ್ರಮೇಣ ರೂಢಿಯಲ್ಲಿ “ಬೆನ್ನೂರು” ಆಯಿತು. ಮರಾಠರ ಆಳ್ವಿಕೆಯಲ್ಲಿ ಕೋಟೆಯ ಹೊರ ವಲಯದಲ್ಲಿ ಅರಣ್ಯವಾಸಿಗಳು ಬೀಡುಬಿಟ್ಟಿದ್ದರು; ಹಾಗಾಗಿ ಮರಾಠರು “ರಾಣವಾಸಿ ಬೆನ್ನೂರು” ಎಂದು ಕರೆಯತೊಡಗಿದರು. ಮರಾಠಿಯಲ್ಲಿ ರಾಣ ಎಂದರೆ ಅರಣ್ಯ. ದಿನಗಳೆದಂತೆ “ರಾಣೆದ್‌ಬೆನ್ನೂರು” ಎಂದು ಪರಿಚಿತವಾಯಿತು. ಟಿಪ್ಪು ಸುಲ್ತಾನ್ ಇಲ್ಲಿ ತನ್ನ ಗುರುಗಳು ವಾಸವಾಗಿದ್ದರಿಂದ “ಹಜರತ್ ರಾಣೆಬೆನ್ನೂರ್” ಎಂದು ನಾಮಕರಣ ಮಾಡಿದ. ಬ್ರಿಟಿಷರ ದಾಖಲೆಯಲ್ಲಿ ರಾಣಿಬೆನ್ನೂರ್ ಎಂದಾಯಿತು. ಈಗ ಮೂಲ ಹೆಸರು “ರಾಣೇಬೆನ್ನೂರು” ಜನಜನಿತವಾಗಿದೆ.

ಹಲವು ರಾಜಮನೆತನಗಳ, ಮರಾಠರ, ಟಿಪ್ಪು ಸುಲ್ತಾನ್ ಮತ್ತು ಸವಣೂರಿನ ನವಾಬರ ಕಾಲದಿಂದಲೂ ರಾಣೇಬೆನ್ನೂರು ಜಗತ್ಪ್ರಸಿದ್ಧ ವ್ಯಾಪಾರ-ವಹಿವಾಟಿನ ಕೇಂದ್ರವಾಗಿತ್ತು. ಈಗ ಬಿರುಸಿನ ವ್ಯಾಪಾರದಿಂದ ಗಿಜಿಗುಡುವ ದೊಡ್ಡಪೇಟೆ ಹಿಂದೆ ಕರೀಮ್‌ಪುರವಾಗಿತ್ತು. ಕರೀಮ್‌ಪುರದಲ್ಲಿ ರೇಷ್ಮೆ ಬಟ್ಟೆಗಳ ವ್ಯಾಪಾರ ದೊಡ್ಡ ಮಟ್ಟದಲ್ಲಾಗುತ್ತಿತ್ತು; ಇಲ್ಲಿಂದ ವಿದೇಶಕ್ಕೂ ಹೋಗುತಿತ್ತು. ಮೆಡ್ಲೇರಿ ಗ್ರಾಮದಲ್ಲಿ ನೇಯಲಾಗುವ ಕಂಬಳಿಗಳಿಗೆ ಕರೀಮ್‌ಪುರ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯಿತ್ತು. ಇರಾನ್‌ದಿಂದ ಬರುತ್ತಿದ್ದ ವಿದೇಶಿ ಬಟ್ಟೆ ವರ್ತಕರಿಗೆ ವ್ಯಾಪಾರ ಮಾಡಲು ಐರಣಿ ಗ್ರಾಮದಲ್ಲಿ ಸವಣೂರಿನ ನವಾಬರು ವ್ಯವಸ್ಥೆ ಮಾಡಿಕೊಟ್ಟಿದ್ದರು.

ಸಾಂಸ್ಕೃತಿ ಹಿರಿಮೆ-ಗರಿಮೆ, ಶಿಲ್ಪ ಕಲಾ ವೈಭವದ ರಾಣೇಬೆನ್ನೂರು ಖಾರಾ-ಮಂಡಕ್ಕಿ, ಮಿರ್ಚಿ ಭಜಿ ಸ್ವಾದಕ್ಕೆ ಹೆಸರುವಾಸಿ. ಒಂದು ವಾರ ನಡೆಯುವ ಚೌಡೇಶ್ವರಿ ಜಾತ್ರೆಯ ಪ್ರಮುಖ ಆಕರ್ಷಣೆ ಟಗರು ಕಾಳಗ. ವೀರಗಾಸೆ ಸಂಪ್ರದಾಯದ ರಾಣೇಬೆನ್ನೂರಿನ ಹೋಳಿಹಬ್ಬಕ್ಕೆ ವಿಶಿಷ್ಟ ಮೆರುಗಿದೆ. ಪ್ರತಿ ಭಾನುವಾರ ಕುರಿ, ದನ, ಎತ್ತು, ಎಮ್ಮೆಗಳ ಜಾನುವಾರು ಸಂತೆ ನಡೆಯುತ್ತದೆ. ಸರಿಸುಮಾರು 400 ವರ್ಷಗಳಷ್ಟು ಹಳೆಯದೆನ್ನಲಾದ ಏಳು ಸುತ್ತಿನ ಕೋಟೆಯೂ ಸೇರಿದಂತೆ ಎರಡು ಕೋಟೆಗಳು ರಾಣೇಬೆನ್ನೂರಿನಲ್ಲಿದೆ. ವಚನಕಾರ ಅಂಬಿಗರ ಚೌಡಯ್ಯರ ಕರ್ಮ ಭೂಮಿಯಾಗಿದ್ದ ಚೌಡಯ್ಯದಾನಪುರದ ತುಂಗಭದ್ರೆಯ ದಡದಲ್ಲಿರುವ ಮಂಟಪವನ್ನು ಚೌಡಯ್ಯನವರ ಗದ್ದುಗೆಯೆಂದೆ ಕರೆಯಲಾಗುತ್ತದೆ. ನಿಸರ್ಗ ರಮಣೀಯವಾದ ಚೌಡಯ್ಯದಾನಪುರದ ಮುಕ್ತೇಶ್ವರ ದೇವಾಲಯ ಅತ್ಯದ್ಭುತ ಶಿಲ್ಪ ಕಲಾವೈಭವಕ್ಕೆ ಸಾಕ್ಷಿಯಂತಿದೆ.

ತುಂಗಭದ್ರಾ-ಕುಮುದ್ವತಿ ನದಿಗಳ ಸಂಗಮ ಹೊಳೆ ಅನ್ವೇರಿಯ ಹೊಯ್ಸಳರ ಕಾಲದ ಸಂಗಮೇಶ್ವರ ದೇವಾಲಯ ಮತ್ತು ಹರಳಹಳ್ಳಿಯ ದೇವಾಲಯ ಕುಸುರಿ ಶಿಲ್ಪ ಕಲೆಯಿಂದ ಆಕರ್ಷಕವಾಗಿದೆ. ಮುಸಲ್ಮಾನರ ಶ್ರದ್ಧಾ ಕೇಂದ್ರ ಕಿಲಾ ಮಸೀದಿ-ಸಯ್ಯದ್ ಸದಾಶಾ ವಲಿ ದರ್ಗಾಕ್ಕೆ ದೀರ್ಘ ಇತಿಹಾಸವಿದೆ. ಪಾಳುಬಿದ್ದ ಕೋಟೆಯಿರುವ ಐರಣಿ ಗ್ರಾಮ ಹತ್ತಿ ಹಾಗು ಉಣ್ಣೆ ಜವಳಿ ತಯಾರಿಕಾ ಕೇಂದ್ರ; ಇಲ್ಲಿ ನೇಯುವ ಕಂಬಳಿಗಳು ವಿಶ್ವವಿಖ್ಯಾತ. ಏಷ್ಯಾ ಖಂಡದಲ್ಲೇ ಪ್ರಸಿದ್ಧವಾಗಿರುವ ವನ್ಯಜೀವಿ ಅಭಯಾರಣ್ಯ ರಾಣೇಬೆನ್ನೂರಿನಲ್ಲಿದೆ. ಪ್ರವಾಸಿ ತಾಣವಾದ ಇಲ್ಲಿ ಏಷ್ಯಾದಲ್ಲೇ ಅಪರೂಪವೆನ್ನಲಾದ ಬ್ಲಾಕ್ ಬಕ್ (ಕೃಷ್ಣ ಮೃಗ-ಕರಿ ಚಿಗರೆ) ಸಂತತಿಯಿದೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳಿವೆ. ಕವಿ ಸು.ರಂ.ಎಕ್ಕುಂಡಿ ರಾಣೇಬೆನ್ನೂರಿನವರು.

ವ್ಯಾಪಾರ-ಕೃಷಿಯ ಸಮ್ಮಿಶ್ರ ಆರ್ಥಿಕತೆ

ತುಂಗಭದ್ರೆ ರಾಣೇಬೆನ್ನೂರು ತಾಲೂಕಿನ ಅಥವಾ ವಿಧಾನಸಭಾ ಕ್ಷೇತ್ರದ ಜೀವನದಿ. ತಾಲೂಕಿನ ದಕ್ಷಿಣ ಗಡಿಯಲ್ಲಿ ಹರಿಯುವ ತುಂಗಭದ್ರೆಯನ್ನು ಹಿರೇಕೆರೂರು ತಾಲೂಕಿನಿಂದ ಬರುವ ಕುಮುದ್ವತಿ ನದಿ ಸೇರಿಕೊಳ್ಳುತ್ತದೆ. ನಗರದ ಆರ್ಥಿಕತೆ ಸಮೃದ್ಧ ಸರಕು ವಹಿವಾಟು ಮಾರುಕಟ್ಟೆಯನ್ನು ಅವಲಂಬಿಸಿದ್ದರೆ, ಹಳ್ಳಿಗಳಲ್ಲಿ ಕೃಷಿಯೇ ಕಾಸಿಗೆ ಮೂಲ. ಬಹುಪಾಲು ಕುಟುಂಬಗಳು ವ್ಯವಸಾಯ ಅಥವಾ ವ್ಯವಸಾಯಾಧಾರಿತ ಚಟುವಟಿಕೆಗಳನ್ನು ನೆಚ್ಚಿಕೊಂಡಿವೆ. ಅರೆ ಶುಷ್ಕ ಹವಾಮಾನದ ರಾಣೇಬೆನ್ನೂರಿನ ರೈತರ ಪ್ರಮುಖ ವಾಣಿಜ್ಯ ಬೆಳೆ ಹತ್ತಿ, ಜೋಳ ಮತ್ತು ಮೆಕ್ಕೆ ಜೋಳ; ರೇಷ್ಮೆ, ಬದನೆ, ಟೊಮ್ಯಾಟೋ, ವೀಳ್ಯದೆಲೆ ಬೆಳೆದು ಒಂದಿಷ್ಟು ರೈತರು ಬದುಕು ಕಟ್ಟಿಕೊಂಡಿದ್ದಾರೆ. ತಾಲೂಕಿನಲ್ಲಿ ತುಂಗಾ ಮೇಲ್ದಂಡೆ ಕಾಲುವೆ ಹಾದು ಹೋಗಿದೆಯಾದರೂ ರೈತರಿಗೆ ನೀರಾವರಿ ಯೋಜನೆಯ ಪೂರ್ಣ ಪ್ರಯೋಜನ ಸಿಗದಾಗಿದೆ.

ಕೋಳಿವಾಡ್

ಬಿಳಿ ಚಿನ್ನ-ಅಕ್ಕಿ ತಯಾರಿಕೆಯ ಉದ್ಯಮಕ್ಕೆ ಪ್ರಸಿದ್ಧಿ ಪಡೆದಿರುವ ರಾಣೇಬೆನ್ನೂರು ಬೀಜೋತ್ಪಾದನೆಯ ತೊಟ್ಟಿಲು ಎನ್ನಲಾಗುತ್ತಿದೆ. ಬೀಜ ಗುಣಾಕಾರ ಉದ್ಯಮವಿರುವ ರಾಣೇಬೆನ್ನೂರು ದೇಶದ ಅತಿ ದೊಡ್ಡ ಬೀಜೋತ್ಪದನಾ ಕೇಂದ್ರ. ಬೀಜ ಮಾರಾಟದ ಬಹುರಾಷ್ಟ್ರೀಯ ಕಂಪನಿಗಳಿಲ್ಲಿ ನೆಲೆಯೂರಿವೆ. ಜತೆಜತೆಯಲ್ಲೆ ರೈತರ ಬದುಕು ಬರ್ಬಾದ್ ಮಾಡುವ ನಕಲಿ ಬೀಜ ಮಾಫಿಯಾ ವ್ಯವಸ್ಥಿತವಾಗಿ ವ್ಯಾಪಿಸಿದೆ ಎಂಬದು ಬಹಿರಂಗ ರಹಸ್ಯ. ರಾಜ್ಯದ ದೊಡ್ಡ ಎಪಿಎಂಸಿಗಳಲ್ಲಿ ರಾಣೇಬೆನ್ನೂರಿನದು ಒಂದು; ಆದರೆ ರೈತರ ಶೋಷಣೆ ಮಾತ್ರ ತಪ್ಪಿಲ್ಲ. ದಲ್ಲಾಳಿಗಳ ಹಾವಳಿ ಮತ್ತು ಆಳುವವರ ವಿವೇಚನಾರಹಿತ ಧೋರಣೆಯಿಂದಾಗಿ ರೈತರು ಅದೆಷ್ಟೇ ಬೆವರು ಹರಿಸಿದರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಕೇಳಿಬರುತ್ತಿದೆ.

ರಾಣೇಬೆನ್ನೂರು ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರಮುಖ ವ್ಯಾಪಾರಿ ಕೇಂದ್ರ; ನಾನಾ ನಮೂನೆಯ ಸರಕು ಸಿಗುವ ಮಾರುಕಟ್ಟೆಯ ತವರು. ಈ ಮಾರುಕಟ್ಟೆಯ ವಹಿವಾಟಿನ ಸುತ್ತ ಅನೇಕಾನೇಕ ಕುಟುಂಬಗಳು ಬದುಕುಕಟ್ಟಿಕೊಂಡಿವೆ! ಹತ್ತಿ, ಹತ್ತಿ ನೂಲು, ಹತ್ತಿ ಬೀಜ, ತರತರದ ಎಣ್ಣೆ ಕಾಳುಗಳು, ಒಣ ಮೆಣಸಿನಕಾಯಿ, ಅಕ್ಕಿ, ಅಡಿಕೆ, ವೀಳ್ಯದೆಲೆ, ಹೀಗೆ ಮುಂತಾದ ಬಹುಬೇಡಿಕೆಯ ಸರಕುಗಳ ಕೋಟ್ಯಂತರ ರೂ. ವಹಿವಾಟು ಈ ಕಾಸ್ಮೋಪಾಲಿಟನ್ ನಗರಿಯಲ್ಲಿ ಪ್ರತಿ ದಿನವೂ ನಡೆಯುತ್ತದೆ! ಬಟ್ಟೆ ಮತ್ತಿತರ ಆಯ್ದ ವಸ್ತುಗಳ ಸಗಟು ವ್ಯಾಪಾರಕ್ಕೆ ರಾಣೇಬೆನ್ನೂರು ಅನ್ವರ್ಥ ನಾಮದಂತಾಗಿದೆ; ಸೀರೆ ಮಾರಾಟದ ವಿಸ್ತಾರವಾದ ಮಾರುಕಟ್ಟೆಯಿದು.

ರಾಣೇಬೆನ್ನೂರಲ್ಲಿ 80 ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿ ಶಿಷ್ಯ ಕರಿಯಪ್ಪ ಯರೇಶೀಮಿ ನೇತೃತ್ವದಲ್ಲಿ “ಕುರಿ ಉಣ್ಣೆ ಔದ್ಯೋಗಿಕ ಬೆಳವಣಿಗೆ ಸಹಕಾರ ಸಂಘ” ಸ್ಥಾಪನೆಯಾಗಿತ್ತು. ಕುರಿ ಸಾಕಾಣಿಕೆದಾರರಿಗೆ, ಉಣ್ಣೆ ನೇಯುವ ಹೆಂಗಸರಿಗೆ, ಕಂಬಳಿ ನೇಯುವ ಗಂಡಸರಿಗೆ ಉದ್ಯೋಗ ಒದಗಿಸಿ, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಧ್ಯೇಯೋದ್ದೇಶದ ಈ ಸಹಕಾರ ಸಂಘ ಸಾವಿರಾರು ಕುಟುಂಬಗಳಿಗೆ ಅನ್ನ ನೀಡಿದೆ. ತಾಲೂಕಿನಲ್ಲಿ ಗಾರ್ಮೆಂಟ್ಸ್ ಉದ್ಯಮ, ಸಹಕಾರಿ ಕೈಮಗ್ಗ ಮತ್ತು ಅಕ್ಕಿ ಮಿಲ್‌ಗಳಿವೆ; ಕುಮಾರಪಟ್ಟಣದ ಕಡೆಯಲ್ಲಿ ಜವಳಿ, ರಾಸಾಯನಿಕ, ಸಿಮೆಂಟ್, ಫೈಬರ್‌ನಂಥ ಕೈಗಾರಿಗಳಿವೆ. ಆದರೆ ಇಲ್ಲೆಲ್ಲ ಹೆಚ್ಚು ಉದ್ಯೋಗ ಸೃಷ್ಟಿಯೇನೂ ಆಗಿಲ್ಲ.

ಆಖಾಡದ ಹದ

ರಾಣೇಬೆನ್ನೂರು ರಾಜಕಾರಣದಲ್ಲಿ ಪಕ್ಷಕ್ಕಿಂತ ಜಾತಿ-ವ್ಯಕ್ತಿ ನಿಷ್ಠೆಯೇ ಪ್ರಧಾನ! ಪ್ರಥಮ ವಿಧಾನಸಭಾ ಚುನಾವಣೆ ವೇಳೆ ದ್ವಿಸದಸ್ಯ ಕ್ಷೇತ್ರವಾಗಿದ್ದ ರಾಣೇಬೆನ್ನೂರಲ್ಲಿ ಸಾಮಾನ್ಯ ಮತ್ತು ಪರಿಶಿಷ್ಟ ಜಾತಿಗೆ ಒಂದೊಂದು ಸ್ಥಾನ ಮೀಸಲಿತ್ತು. 1962ರಲ್ಲಿ ಪರಿಶಿಷ್ಟ ಜಾತಿ ಮೀಸಲಿನ ಏಕಸದಸ್ಯ ಕ್ಷೇತ್ರವಾಯಿತು. 1972ರಲ್ಲಿ ಸಾಮಾನ್ಯ ಕ್ಷೇತ್ರವಾದ ಬಳಿಕ ರಾಜಕಾರಣದ ಲೆಕ್ಕಾಚಾರ ಬದಲಾಯಿತು. ಜಾತಿ ನಿಷ್ಠೆಯ ಆಡಂಬೊಲವಾಯಿತು. ರಾಜ್ಯಮಟ್ಟದ ವರ್ಚಸ್ವಿ ಲಿಂಗಾಯತ ಮುಂದಾಳಿನ ಹಿಂದೆ ನಿಲ್ಲುವ ಸ್ಥಳೀಯ ಲಿಂಗಾಯತರು ಕ್ಷೇತ್ರವನ್ನು ಕಬ್ಜಾ ಮಾಡಿಕೊಳ್ಳತೊಡಗಿದರು ಎಂಬುದು ’ಕ್ಷೇತ್ರ ಮಹಿಮೆ’ಯಿಂದ ವೇದ್ಯವಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬ್ಯಾಡಗಿ: ಒಣ ಮೆಣಸಿನಕಾಯಿ ಸೀಮೆಯ ಕೈ-ಕಮಲ ಪಾಳೆಯಗಳಲ್ಲಿ ಬಣ ಬಡಿದಾಟ!!

ಯಡಿಯೂರಪ್ಪ ಹಿಂದುತ್ವ ಅಜೆಂಡಾ ಪ್ರಯೋಗಿಸಲಾರಂಭಿಸಿದಾಗ ರಾಣೇಬೆನ್ನೂರು ಕಟ್ಟರ್ ಲಿಂಗಾಯತ ಪ್ರಯೋಗ ಶಾಲೆಯಂತಾಯಿತು; ಈಗ ಯಡಿಯೂರಪ್ಪನವರ ಬಲಗುಂದಿರುವುದರಿಂದ ಸ್ಥಳೀಯ ಕಾಂಗ್ರೆಸ್‌ನ ಲಿಂಗಾಯತ ಲೀಡರ್‌ಗಳು ಕಳೆಗುಂದುತ್ತಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ. ಲಿಂಗಾಯತರ ಬಿಗಿಹಿಡಿತದ ರಾಣೇಬೆನ್ನೂರಲ್ಲಿ ಹಿಂದುಳಿದ ವರ್ಗದ ತಳವಾರ ಮತ್ತು ಕುರುಬ ಜಾತಿಯವರೂ ಗೆದ್ದು ಅಚ್ಚರಿ ಮೂಡಿಸಿದ್ದೂ ಇದೆ. ಒಟ್ಟು 2,33,137 ಮತದಾರರಿರುವ ಕ್ಷೇತ್ರದಲ್ಲಿ ಲಿಂಗಾಯತರು 85 ಸಾವಿರ, ಮುಸ್ಲಿಮರು 37 ಸಾವಿರ, ಕುರುಬರು 36 ಸಾವಿರ, ಎಸ್‌ಸಿ-ಎಸ್‌ಟಿ 30 ಸಾವಿರ ಮತ್ತು ಜೈನ್-ಕ್ರಿಶ್ಚಿಯನ್ ಧರ್ಮೀಯರ ಜತೆ ಸಣ್ಣ ಸಂಖ್ಯೆಯ ಜಾತಿ ಸಮುದಾಯದ ಮತದಾರರಿರುವ ಅಂದಾಜಿದೆ.

ಬಲಿತವರ ಮರ್ಜಿಯಲ್ಲಿ ದಲಿತ ಕ್ಷೇತ್ರ

1957ರಲ್ಲಿ ಸಾಮಾನ್ಯ ವರ್ಗದ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಕೆ.ಪಿ.ಪಾಟೀಲ್ (33,973) ಮತ್ತು ಪಕ್ಷೇತರ ಅಭ್ಯರ್ಥಿ ಪಿ.ಪಿ ಮಾದಾಪುರಮಠ್ (19,804) ಹೋರಾಟ ನಡೆಸಿದರೆ, ಪರಿಶಿಷ್ಟ ವರ್ಗದ ಪ್ರಾತಿನಿಧ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಯಲ್ಲವ್ವ ಸಾಂಬ್ರಾಣಿ (28,988) ಹಾಗು ಪಕ್ಷೇತರ ಉಮೇದುವಾರ ಎಂ.ಎಸ್.ಗಬ್ಬೂರ್ (12,624) ಕಾದಾಡಿದ್ದರು. ಕಾಂಗ್ರೆಸ್‌ನ ಸ್ಪರ್ಧಾಳುಗಳಿಬ್ಬರೂ ಶಾಸನಸಭೆಗೆ ಆಯ್ಕೆಯಾಗಿದ್ದರು. ಕೆ.ಪಿ.ಪಾಟೀಲ್ ಸಚಿವರೂ ಆಗಿದ್ದರು. ರಾಣೇಬೆನ್ನೂರು 1962ರಲ್ಲಿ ಏಕಸದಸ್ಯ ಎಸ್‌ಸಿ ಮೀಸಲು ಕ್ಷೇತ್ರವಾಗಿ ಬದಲಾದಾಗ 18,715 ಓಟು ಪಡೆದ ಕಾಂಗ್ರೆಸ್‌ನ ಯಲ್ಲವ್ವ ಸಾಂಬ್ರಾಣಿ ಪಿಎಸ್‌ಪಿ ಎದುರಾಳಿ ಯಲ್ಲಪ್ಪ ಜೋಗಣ್ಣವರ್‌ರನ್ನು (12,596) ಮಣಿಸಿ ಎರಡನೆ ಬಾರಿ ಶಾಸಕಿಯಾದರು. 1967ರಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿ ಜನಮನ್ನಣೆ ಗಳಿಸಿತು. ಪಿಎಸ್‌ಪಿಯ ಬಿ.ಎನ್ ಲಿಂಗಪ್ಪ ಕಾಂಗ್ರೆಸ್‌ನ ಎಂ.ಬಿ.ಉಲಿವೆಪ್ಪ (15,262)ರನ್ನು 10,288 ಮತದಂತರದಿಂದ ಸೋಲಿಸಿದರು.

ಸಾಮಾನ್ಯ ಕ್ಷೇತ್ರ

1972ರ ಚುನಾವಣೆ ಹೊತ್ತಲ್ಲಿ ರಾಣೇಬೆನ್ನೂರು ಸಾಮಾನ್ಯ ಕ್ಷೇತ್ರವಾಯಿತು; ಸಾಮಾಜಿಕ-ರಾಜಕೀಯವಾಗಿ ಬಲಾಢ್ಯರಾದ ಲಿಂಗಾಯತರ ಬಹಿರಂಗ ಲಾಬಿಯೂ ಶುರುವಾಯಿತು. 1970ರ ದಶಕದಲ್ಲಿ ಗದುಗಿನ ಕೆ.ಎಚ್.ಪಾಟೀಲ್ (ಮಾಜಿ ಮಂತ್ರಿ ಎಚ್.ಕೆ.ಪಾಟೀಲ್ ತಂದೆ) ಕಾಂಗ್ರೆಸ್ ಪಕ್ಷದಲ್ಲಿ ದೇವರಾಜ ಅರಸರಿಗೆ ಪ್ರತಿಸ್ಪರ್ಧಿ ಎನ್ನುವಷ್ಟರಮಟ್ಟಿಗೆ ಪ್ರಬಲರಾಗಿದ್ದರು. ಪಾಟೀಲರು 1972ರ ಚುನಾವಣೆಯಲ್ಲಿ ತಮ್ಮ ಹತ್ತಿರದ ಸಂಬಂಧಿ ಕೆ.ಬಿ.ಕೋಳಿವಾಡ್‌ಗೆ ಕಾಂಗೈ ಟಿಕೆಟ್ ಕೊಡಿಸಿದರು. ಕ್ಷೇತ್ರದಲ್ಲಿ ತೀರಾ ಅಲ್ಪಸಂಖ್ಯಾತ ರೆಡ್ಡಿ ಲಿಂಗಾಯತ ಬಣಕ್ಕೆ ಸೇರಿದ್ದ ಕೋಳಿವಾಡ್ ಸಂಸ್ಥಾ ಕಾಂಗ್ರೆಸ್‌ನ ಬಿ.ಸಿ.ಪಾಟೀಲ್‌ಗೆ ಮುಖಾಮುಖಿಯಾದರು. ಕಾಂಗ್ರೆಸ್ ಅಲೆಯಲ್ಲಿ 28,540 ಮತ ಪಡೆದ ಕೋಳಿವಾಡ್ ಎದುರಾಳಿಯನ್ನು 11,497 ಮತದಂತರದಿಂದ ಸೋಲಿಸಿ ಶಾಸಕನಾದರು. ತುರ್ತು ಪರಿಸ್ಥಿತಿ ನಂತರ ಕಾಂಗ್ರೆಸ್ ವಿಭಜನೆಯಾಯಿತು. ಕರ್ನಾಟಕದಲ್ಲಿ ಇಂದಿರಾ ವಿರೋಧಿ ಬಣದ (ರೆಡ್ಡಿ ಕಾಂಗ್ರೆಸ್) ಚುಕ್ಕಾಣಿ ಕೆ.ಎಚ್.ಪಾಟೀಲ್ ವಹಿಸಿಕೊಂಡರೆ, ದೇವರಾಜ್ ಅರಸು ಇಂದಿರಾರಿಗೆ ನಿಷ್ಠರಾಗುಳಿದರು. ಶಾಸಕ ಕೋಳಿವಾಡ್ ತಮ್ಮ ರಕ್ತ ಬಂಧು ಕಮ್ ದೇವಪಿತೃ ಕೆ.ಎಚ್.ಪಾಟಿಲ್ ಬೆನ್ನಿಗೆ ನಿಲ್ಲಬೇಕಾಗಿ ಬಂತು.

ಕೆ.ಎಚ್.ಪಾಟೀಲ್

ಕೋಳಿವಾಡ್ 1978ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ರೆಡ್ಡಿ ಕಾಂಗ್ರೆಸ್ ಅರ್ಥಾತ್ ಕೆ.ಎಚ್.ಪಾಟೀಲ್ ಕಾಂಗ್ರೆಸ್‌ನ ಹುರಿಯಾಳಾದರು. ಅರಸು ಸಾಮಾಜಿಕ ನ್ಯಾಯದ ಸೂತ್ರ ಬಳಸಿ ಲಿಂಗಾಯತರ ಪ್ರಬಲ ನೆಲೆ ಎಂದೇ ಅಂದು ಪರಿಗಣಿತವಾಗಿದ್ದ ರಾಣೇಬೆನ್ನೂರಲ್ಲಿ ತಳವಾರ ಸಮುದಾಯದ ಎಸ್.ಎಚ್.ನಲವಾಗಲ್‌ರನ್ನು ಕಾಂಗೈ ಅಭ್ಯರ್ಥಿ ಮಾಡಿದರು. ಬಹುಸಂಖ್ಯಾತ ಲಿಂಗಾಯತ ಕೋಮಿನ ಬಿ.ಜಿ.ಪಾಟೀಲ್‌ರನ್ನು ಜನತಾ ಪಕ್ಷ ಆಖಾಡಕ್ಕೆ ಇಳಿಸಿತು. ಕಾಂಗ್ರೆಸ್ (25,675) ಮತ್ತು ಜನತಾ ಪಕ್ಷದ (24,892) ನೇರಾನೇರ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್(ಆರ್)ನ ಕೋಳಿವಾಡ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾದರು! ಅಹಿಂದ ವರ್ಗದ ಮತ ಪಡೆದ ಕಾಂಗ್ರೆಸ್‌ನ ನಲವಾಗಲ್ 783 ಮತದಿಂದ ಅಂತೂ ಗೆದ್ದರು!

ಜನತಾ ಪರಿವಾರದ ಪ್ರಭಾವ

ದೇವರಾಜ ಅರಸು ಇಂದಿರಾ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ಬಿಟ್ಟು ತಮ್ಮದೇ ಕರ್ನಾಟಕ ಕ್ರಾಂತಿರಂಗ ಕಟ್ಟಿಕೊಂಡಾಗ ಕೆ.ಎಚ್.ಪಾಟೀಲ್ ಕಾಂಗ್ರೆಸ್ ಸೇರಿಕೊಂಡರು. ಆದರೆ ಪಾಟೀಲರಿಗೆ ತಮ್ಮ ಹಿಂಬಾಲಕ ಕೋಳಿವಾಡ್‌ಗೆ 1983ರಲ್ಲಿ ಟಿಕೆಟ್ ಕೊಡಿಸಲು ಆಗಲಿಲ್ಲ. 1980ರ ದಶಕದಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ರೈತ ಸಂಘದ ಪ್ರಭಾವ ಹೆಚ್ಚಾಗಿತ್ತು; ಆಡಳಿತಾರೂಢ ಕಾಂಗ್ರೆಸ್ ರೈತರ ಮೇಲೆ ಮಾಡಿದ ಗೋಲಿಬಾರ್ ಮತ್ತು ಅನುಸರಿಸಿದ ರೈತ ವಿರೋಧಿ ನೀತಿಯಿಂದ ದುರ್ಬಲವಾಗಿತ್ತು. ಇದರ ಲಾಭ ಹಲವೆಡೆ ಜನತಾ ಪಕ್ಷಕ್ಕಾಯಿತು. ಈ ಪರಿಣಾಮ 1983ರ ಚುನಾವಣೆಯಲ್ಲಿ ರಾಣೇಬೆನ್ನೂರಲ್ಲೂ ಕಂಡಿತು. ಜನತಾ ಪಕ್ಷದ ಅಭ್ಯರ್ಥಿ ಬಿ.ಜಿ.ಪಾಟೀಲ್ 36,395ರಷ್ಟು ದೊಡ್ಡ ಸಂಖ್ಯೆಯ ಮತ ಪಡೆದು ಆಯ್ಕೆಯಾದರು! ಅವರ ಹತ್ತಿರದ ಪಕ್ಷೇತರ ಪ್ರತಿಸ್ಪರ್ಧಿ ಎಂ.ಎಂ.ಕೆರೂರ್‌ಗೆ ಬಂದಿದ್ದು 13,302 ಮತಗಳಷ್ಟೆ.

1985ರ ಚುನಾವಣೆ ಹೊತ್ತಿಗೆ ಕೆ.ಎಚ್.ಪಾಟೀಲ್ ಕಾಂಗ್ರೆಸ್‌ನ ಮುಂಚೂಣಿಗೆ ಬಂದಿದ್ದರು. ಏಳು ವರ್ಷಗಳ ವನವಾಸದ ಬಳಿಕ ಕೆ.ಬಿ.ಕೋಳಿವಾಡರ ದೆಸೆ ಬದಲಾಯಿತು. ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧೆಗಿಳಿದ ಕೋಳಿವಾಡ್ (33,296) ಜನತಾ ಪಕ್ಷದ ಅಭ್ಯರ್ಥಿ ಶಾಸಕ ಬಿ.ಜಿ.ಪಾಟೀಲ್ (32,939) ಎದುರು ತಿಣುಕಾಡಿ 357 ಮತದಂತರದಿಂದ ಗೆದ್ದು ಶಾಸಕರಾದರು. 1989ರಲ್ಲಿ ಕಾಂಗ್ರೆಸ್‌ನ ಕೋಳಿವಾಡ್‌ಗೆ ಜನತಾದಳದ ವಿ.ಎಸ್.ಕರ್ಜಗಿ ಪ್ರಬಲ ಪೈಪೋಟಿ ಕೊಟ್ಟರೂ ಗೆಲ್ಲಲಾಗಲಿಲ್ಲ. ಲಿಂಗಾಯತರ ಪ್ರಭಾವಿ ಮುಖಂಡ ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಆಗಿದ್ದು ಕೋಳಿವಾಡ್‌ಗೆ ಆ ಸಮುದಾಯದ ಮತ ವಿಭಜಿಸಲು ಸಹಾಯವಾಯಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಈ ನಿಕಟ ಹೋರಾಟದಲ್ಲಿ ಕೋಳಿವಾಡ್ 2,878 ಮತದಿಂದ ಜನತಾ ದಳದ ಕರ್ಜಗಿಯವರನ್ನು (40,350) ಮಣಿಸಿ ಮೂರನೆ ಬಾರಿ ಶಾಸಕನಾದರು.

1994ರ ಇಲೆಕ್ಷನ್ ಹೊತ್ತಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್‌ಗೆ ತಿರುಗಿಬಿದ್ದಿತ್ತು. ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೈಕಮಾಂಡ್ ಅವಮಾನಕರವಾಗಿ ಮುಖ್ಯಮಂತ್ರಿ ಪೀಠದಿಂದ ಉಚ್ಛಾಟಿಸಿತೆಂಬ ಸಿಟ್ಟು ರಾಜ್ಯವ್ಯಾಪಿ ಲಿಂಗಾಯತರಲ್ಲಿ ಮೂಡಿತ್ತು. ಅದೇ ಹೊತ್ತಿಗೆ ಜನತಾ ದಳದ ದಾಯಾದಿಗಳಾದ ಹೆಗಡೆ ಮತ್ತು ದೇವೇಗೌಡ ಒಂದಾಗಿದ್ದು ಲಿಂಗಾಯತರನ್ನು ಸೆಳೆದಿತ್ತು. ಈ ರಾಜಕೀಯ ಸಮೀಕರಣದಲ್ಲಿ ಜನತಾ ದಳದ ಅಭ್ಯರ್ಥಿ ಕರ್ಜಗಿ (53,080) ಕಾಂಗ್ರೆಸ್‌ನ ಕೋಳೀವಾಡರನ್ನು ಭರ್ಜರಿ 24,538 ಮತದಂತರದಿಂದ ಸೋಲಿಸಿದರು. 1999ರಲ್ಲಿ ಕಾಂಗ್ರೆಸ್ ಮತ್ತು ಜೆಡಿಯು ನಡುವೆ ಕತ್ತುಕತ್ತಿನ ಕುಸ್ತಿಯೇ ಆಗಿಹೋಯಿತಾದರೂ ಜನತಾ ಪರಿವಾರ ದಾಯಾದಿ ಕಲಹದಿಂದ ಕಸುವು ಕಳೆದುಕೊಂಡಿದ್ದು ಕಾಂಗ್ರೆಸ್‌ಗೆ ಅನುಕೂವಾಯಿತು. 45,460 ಮತ ಗಳಿಸಿದ ಜೆಡಿಯು ಹುರಿಯಾಳು ಎಸ್.ಜಿ.ತಿಳವಳ್ಳಿಯವರನ್ನು ಕಾಂಗ್ರೆಸ್‌ನ ಕೋಳೀವಾಡ್ 5,498 ಮತದಿಂದ ಸೋಲಿಸಿ ಎಸ್.ಎಂ.ಕೃಷ್ಟ ಸರಕಾರದಲ್ಲಿ ಮಂತ್ರಿ ಕೂಡ ಆದರು.

ಯಡಿಯೂರಪ್ಪ ಸೆಳೆತ

ಯಡಿಯೂರಪ್ಪ 2004ರ ಇಲೆಕ್ಷನ್ ಚದುರಂಗದಾಟದಲ್ಲಿ ಲಿಂಗಾಯತರ ಒಲವಿನ ನಾಯಕನಾಗಿ ಅವತರಿಸಿದರು. ಪಕ್ಕದ ಶಿಕಾರಿಪುರದ ಯಡಿಯೂರಪ್ಪರ ಪ್ರಭಾವ ರಾಣೇಬೆನ್ನೂರಿನಲ್ಲಿ ಢಾಳಾಗಿತ್ತು. ಕಾಂಗ್ರೆಸ್ ಕ್ಯಾಂಡಿಡೇಟ್ ಕೋಳಿವಾಡ್‌ರನ್ನು ಎಂಟಿ ಇನ್‌ಕಂಬೆನ್ಸ್ ಸುತ್ತಿಕೊಂಡಿತ್ತು. ಹಿಂದುಳಿದ ವರ್ಗದ ನಾಯಕ ಬಂಗಾರಪ್ಪ ಕಾಂಗ್ರೆಸ್ ತೊರೆದು ಕಮಲ ಹಿಡಿದುಕೊಂಡಿದ್ದರು. ಹಿಂದುತ್ವದ ಸುಳಿಗಾಳಿಯೂ ಕ್ಷೇತ್ರದಲ್ಲಿ ಸುಳಿಯಲಾರಂಭಿಸಿತ್ತು. ಇದೆಲ್ಲದರ ಪರಿಣಾಮವಾಗಿ 57,123 ಮತ ಪಡೆದ ಬಿಜೆಪಿ ಹುರಿಯಾಳು ಜಿ.ಶಿವಣ್ಣ ಕಾಂಗ್ರೆಸ್‌ನ ಕೋಳಿವಾಡರನ್ನು 16,086 ಮತದಿಂದ ಸುಲಭವಾಗಿ ಸೋಲಿಸಿದರು. 2008ರಲ್ಲಿ 56,667 ಮತ ಪಡೆದ ಕಾಂಗ್ರೆಸ್‌ನ ಕೋಳಿವಾಡ್ ಪರಿಸ್ಥಿತಿ ಸುಧಾರಿಸಿತ್ತಾದರೂ ಗೆಲ್ಲಲಾಗಲಿಲ್ಲ. ಯಡಿಯೂರಪ್ಪರನ್ನು ಸಿಎಂ ಪೀಠದಲ್ಲಿ ನೋಡಬೇಕೆಂಬ ಪ್ರತಿಷ್ಠೆಯಿಂದ ಲಿಂಗಾಯತರು ಒಳ ಪಂಗಡ ಭೇದ ಮರೆತು ಒಂದಾಗಿ ಬಿಜೆಪಿ ಬೆನ್ನಿಗೆ ನಿಂತಿದ್ದರು. ಈ ಜಾತಿಕಾರಣದ ಮೇಲಾಟದಲ್ಲಿ ಬಿಜೆಪಿ ಅಭ್ಯರ್ಥಿ ಶಿವಣ್ಣ (59,399) ಸಣ್ಣ ಅಂತರದಲ್ಲಿ (2,732) ಬಚಾವಾಗಿ ನಿಟ್ಟುಸಿರುಬಿಟ್ಟರು ಎಂಬ ಮಾತು ರಾಣೇಬೆನ್ನೂರಿನ ರಾಜಕೀಯ ಪಡಸಾಲೆಯಲ್ಲಿದೆ.

ರಾಣೇಬೆನ್ನೂರಿನ ಚುನಾವಣಾ ತಂತ್ರಗಾರಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ದ್ವಿತೀಯ ಬಹುಸಂಖ್ಯಾತ ಕುರುಬರು. ಈ ಸ್ವಜಾತಿ ಕುರುಬರು, ಮುಸಲ್ಮಾನರು ಮತ್ತು ದಲಿತರನ್ನು ಸೆಳೆದು 2013ರ ಚುನಾವಣೆಯಲ್ಲಿ ಶಾಸಕನಾಗುವ ಕನಸು ಕಟ್ಟಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಾಜಿ ಮೇಯರ್ ಆರ್.ಶಂಕರ್ ಕ್ಷೇತ್ರದಲ್ಲಿ ’ಹಣಾ’ಹಣಿ ಶುರು ಹಚ್ಚಿಕೊಂಡಿದ್ದರು; ಅದೇ ಹೊತ್ತಿಗೆ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ವಿರುದ್ಧ ಬಂಡೆದ್ದು ಸ್ವಂತ ಕೆಜೆಪಿ ಎಂಬ ಪಾರ್ಟಿ ಕಟ್ಟಿದರು. ಯಡಿಯೂರಪ್ಪರನ್ನು ಶಾಸಕ ಬಿ.ಶಿವಣ್ಣ ಹಿಂಬಾಲಿಸಿದರು. ಕಾಂಗ್ರೆಸ್‌ನ ಮಾಜಿ ಮಂತ್ರಿ ಕೆ.ಬಿ.ಕೋಳಿವಾಡ್ (53,780), ಕೆಜೆಪಿಯ ಶಿವಣ್ಣ (26,570) ಮತ್ತು ಪಕ್ಷೇತರ ಹುರಿಯಾಳು ಆರ್.ಶಂಕರ್ (46,992) ನಡುವೆ ನಿಕಟ ತ್ರಿಕೋನ ಸ್ಪರ್ಧೆ ಏರ್‍ಪಟ್ಟಿತು. 6,788 ಮತದಿಂದ ಗೆಲುವು ಸಾಧಿಸಿದ ಕೋಳಿವಾಡ್ ವಿಧಾನಸಭೆಯ ಸ್ಪೀಕರ್ ಆದರು. ಈಗ ಬಿಜೆಪಿ ಎಮ್ಮೆಲ್ಲೆ ಆಗಿರುವ ಅರುಣಕುಮಾರ್ ಪೂಜಾರ್ (ಗುತ್ತೂರ್) ಆಗ ಕಮಲ ಚಿನ್ಹೆಯಲ್ಲಿ ದಕ್ಕಿಸಿಕೊಂಡಿದ್ದು ಕೇವಲ 9,476 ಮತಗಳಷ್ಟೇ.

2018ರ ಚುನಾವಣೆ ಬಂದಾಗ ಯಡಿಯೂರಪ್ಪರ ಕಟ್ಟಾ ಅನುಯಾಯಿ-ಮಾಜಿ ಶಾಸಕ ಶಿವಣ್ಣ ನಿಧನರಾಗಿದ್ದರಿಂದ ಬಿಜೆಪಿಗೆ ಸಮರ್ಥ ಅಭ್ಯರ್ಥಿ ಇಲ್ಲದಾಗಿತ್ತು. ಲಿಂಗಾಯತ ಸಮುದಾಯದ ಅರುಣಕುಮಾರ್ ಪೂಜಾರ್ ಮತ್ತು ದೇವಾಂಗ ಸಮುದಾಯದ ಡಾ.ಬಸವರಾಜ್ ಕೇಲಗಾರ ಟಿಕೆಟ್‌ಗೆ ಲಾಬಿಮಾಡಿದರು; ಮಹಾರಾಷ್ಟ್ರ ಬಿಜೆಪಿಯ ಶಕ್ತಿಶಾಲಿ ಮುಂದಾಳು ದೇವೇಂದ್ರ ಫಡ್ನವೀಸ್ ಕೃಪಾಶೀರ್ವಾದದಿಂದ ಕೇಲಗಾರ್ ಕಮಲ ಕಲಿಯಾದರು ಎಂದು ಬಿಜೆಪಿ ಮೂಲಗಳು ಪಿಸುಗುಡುತ್ತವೆ. ಕೆಪಿಜೆಪಿಯ (ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ) ಆರ್.ಶಂಕರ್ (63,910), ಕಾಂಗ್ರೆಸ್‌ನ ಕೋಳಿವಾಡ್ (59,572) ಹಾಗು ಬಿಜೆಪಿಯ ಡಾ.ಕೇಲಗಾರ್ (48,973) ಮಧ್ಯೆ ತ್ರಿಕೋನ ಸಮರವಾಯಿತು. 4,338 ಮತಗಳಂತರದ ಗೆಲುವು ಕಂಡ ಶಂಕರ್ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಅರಣ್ಯ ಮಂತ್ರಿಯಾಗುವ ಭಾಗ್ಯವನ್ನೂ ಪಡೆದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾವೇರಿ: ಪ್ರಗತಿಗೆ ಪರಿತಪಿಸುತ್ತಿರುವ ಮುಖ್ಯಮಂತ್ರಿಯವರ ’ಮರುಭೂಮಿ’ಯಲ್ಲಿ ಲಿಂಗಾಯತ ಪ್ರತಿಷ್ಠೆಯ ಪೈಪೋಟಿ!

2019ರಲ್ಲಿ ನಡೆದ ಅನೈತಿಕ ಆಪರೇಷನ್ ಕಮಲ, ಬಾಂಬೆ ಟೀಮ್ ಶಾಸಕರ ಅನರ್ಹತೆ-ಅರ್ಹತೆ, ಆ ಶಾಸಕರ ರಾಜಿನಾಮೆ ಮತ್ತು ಉಪಚುನಾವಣೆ ಪ್ರಹಸನದಲ್ಲಿ ರಾಣೇಬೆನ್ನೂರಿನ ಹೆಸರೂ ಕೇಳಿಬಂದು ಕ್ಷೇತ್ರದ ಜನರು ಮುಜುಗರ ಅನುಭವಿಸುವಂತಾಗಿತ್ತು ಎಂಬ ಮಾತು ಕ್ಷೇತ್ರದಲ್ಲಿದೆ. ಉಪಚುನಾವಣೆಯಲ್ಲಿ ಬಿಜೆಪಿ ಶಾಸಕನನ್ನಾಗಿಸಿ ಮಂತ್ರಿ ಮಾಡುವ ಮಾತು ಯಡಿಯೂರಪ್ಪರಿಂದ ಪಡೆದಿದ್ದರೆನ್ನಲಾದ ಶಂಕರ್ ಆಸೆ ಮಾತ್ರ ಈಡೇರಲೇ ಇಲ್ಲ! ಲಿಂಗಾಯತ ಬಾಹುಳ್ಯದ ರಾಣೇಬೆನ್ನೂರಿನಲ್ಲಿ ವಲಸಿಗ ಕುರುಬ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಡುವ ಧೈರ್ಯ ಯಡಿಯೂರಪ್ಪ ಮಾಡಲಿಲ್ಲ ಎನ್ನಲಾಗುತ್ತಿದೆ. ಸ್ವಜಾತಿಯ ಅರುಣಕುಮಾರ್ ಪೂಜಾರ್‌ಗೆ ಆಖಾಡಕ್ಕಿಳಿಸಿದ ಯಡಿಯೂರಪ್ಪ ಶಂಕರ್‌ಗೆ ಎಮ್ಮೆಲ್ಸಿ ಮಾಡಿ ಸಚಿವನಾಗಿಸುವ ಭರವಸೆ ಕೊಟ್ಟು ಸಮಾಧಾನ ಮಾಡಿದರು ಎಂಬುದು ಬಹಿರಂಗ ರಹಸ್ಯ. ಇತ್ತ ಬಿಜೆಪಿಯ ಅರುಣಕುಮಾರ್ ಪೂಜಾರ್ ಕಾಂಗ್ರೆಸ್‌ನ ಹಳೆ ಹುಲಿ ಕೋಳಿವಾಡರನ್ನು 23,222 ಮತದಿಂದ ಮಣಿಸಿ ಶಾಸಕನಾದರು; ಅತ್ತ ಯಡಿಯೂರಪ್ಪರಿಗಾಗಿ ಬಲಿದಾನ ಮಾಡಿದ ಶಂಕರ್ ಮಂತ್ರಿಗಿರಿಗಾಗಿ ಪರಿತಪಿಸುತ್ತಲೇ ಇದ್ದಾರೆ ಎಂಬ ರೋಚಕ ವಿಶ್ಲೇಷಣೆಗಳು ಕ್ಷೇತ್ರದಲ್ಲಿದೆ.

ಕ್ಷೇತ್ರದ ಕತೆ-ವ್ಯಥೆ!

ಸಮಸ್ಯೆ-ಸಂಕಟಗಳ ನಡುವೆಯೂ ರಾಣೇಬೆನ್ನೂರು ನಗರ ನಳನಳಿಸುತ್ತಿದೆಯಾದರೂ ಮೂಲಸೌಕರ್ಯಗಳಿಗೂ ಪರದಾಡುವ ಗ್ರಾಮೀಣ ಪ್ರದೇಶಗಳು ತಾಲೂಕಿನಲ್ಲಿವೆ. ಆಡಳಿತಗಾರರು ಕಳಪೆ ಕಂಟ್ರಾಕ್ಟರ್‌ಗಳ ಲಾಬಿ ಪೋಷಿಸುತ್ತಿರುವುದರಿಂದ ಹಳ್ಳಿಗಾಡಿನ ರಸ್ತೆಗಳು ಒಂದೇ ಮಳೆಗೆ ಚಿಂದಿಯೆದ್ದುಹೋಗುತ್ತಿವೆ; ಕುಡಿಯುವ ನೀರನ ಸಮಸ್ಯೆ ಬಾಧಿಸುವ ಹಳ್ಳಿಗಳೂ ಇವೆ. ಕೆರೆ ಹೂಳೆತ್ತಿದ್ದರೆ ನೀರಿನ ಬವಣೆ ಕಮ್ಮಿಯಾಗುತ್ತಿತ್ತು. ಕಂದಾಯ ಉಪವಿಭಾಗೀಯ ಕಚೇರಿ (ಎಸಿ ಕಚೇರಿ), ರಿಂಗ್ ರಸ್ತೆ, ಉನ್ನತ ಶಿಕ್ಷಣ ವಿಶ್ವವಿದ್ಯಾಲಯ ಅವಶ್ಯವಾಗಿದೆ. ಖಾಸಗಿ ಆಸ್ಪತ್ರೆಗಳ ಸುಲಿಗೆ ಮಿತಿಮೀರಿದೆ; ಬಡವರ ಕೈಗೆಟುಕುವ ಸುಸಜ್ಜಿತ ಆಸ್ಪತ್ರೆ ಜರೂರಿದೆ. ಮರಳು ಮತ್ತು ಕಲ್ಲು ಗಣಿಗಾರಿಕೆ ಮಾಫಿಯಾ ಅಧಿಕಾರಸ್ಥರ ಕೃಪಾಕಟಾಕ್ಷದಿಂದಲೆ ಲೂಟಿ ಹೊಡೆಯುತ್ತಿವೆ. ಮರಳು ಮಾಫಿಯಾ ಕ್ಷೇತ್ರದ ರಾಜಕಾರಣವನ್ನು ನಿಯಂತ್ರಿಸುವಷ್ಟು ಬಲಿಷ್ಠವಾಗಿದೆ. ಶಾಸಕ ಅರುಣಕುಮಾರ್ ಪೂಜಾರ್‌ಗೆ ಕ್ಷೇತ್ರದ ಉದ್ದಗಲವೇ ಸರಿಯಾಗಿ ಗೊತ್ತಿಲ್ಲ; ಜನ ಪ್ರತಿನಿಧಿಗಳಿಗೆ ಒಣ ರಾಜಕಾರಣದಲ್ಲಿರುವ ಆಸಕ್ತಿಯ ಕಾಲು ಭಾಗದಷ್ಟಾದರೂ ಹಳ್ಳಿಗಳತ್ತ ಹರಿಸಿದರೆ ಪ್ರಗತಿಯ ಪರಿವರ್ತನೆ ತಂತಾನೆ ಆಗುತಿತ್ತು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ’ನ್ಯಾಯಪಥ’ಕ್ಕೆ ಕ್ಷೇತ್ರದ ಸ್ಥಿತಿ-ಗತಿ ವಿವರಿಸುತ್ತಾ ಹೇಳಿದರು.

ಜಿ. ಶಿವಣ್ಣ

ಕೃಷಿ ಪ್ರಧಾನವಾದ ರಾಣೇಬೆನ್ನೂರಿನಲ್ಲಿ ರೈತರಿಗೆ ಅಗತ್ಯ ಸೇವೆ-ಸೌಕರ್ಯ ಸಿಗದಾಗಿದೆ. ನಕಲಿ ಬೀಜ ಮಾರಾಟದ ದಗಾಕೋರ ದಂಧೆದಾರರಿಗೆ ಅಮಾಯಕ ಕೃಷಿಕರು ಬಲಿಬೀಳುವಂತಾಗಿದೆ. ತುಂಗಭದ್ರಾ ಮೇಲ್ದಂಡೆ ಯೋಜನೆ ಇದೆಯಾದರೂ ಬಸಿ ಕಾಲುವೆಗಳ (ಉಪ ಕಾಲುವೆ) ನಿರ್ಮಾಣ ಆಗದಿರುವುದರಿಂದ ರೈತರ ಗೋಳು ಮುಂದುವರಿದಿದೆ. ಮತ್ತೊಂದೆಡೆ ತುಂಗಭದ್ರಾ ನೀರಾವರಿ ಪ್ರಾಜೆಕ್ಟ್‌ಗಾಗಿ ಜಮೀನು ಕಳೆದುಕೊಂಡ ಮಣ್ಣಿನ ಮಕ್ಕಳಿಗೆ ಎರಡು ದಶಕದಿಂದ ಪರಿಹಾರ ಕೊಡದೆ ಸತಾಯಿಸಲಾಗುತ್ತಿದೆ. ರೈತರ ಬಹುದಿನದ ಮೆಕ್ಕೆ ಜೋಳದ ಟೆಕ್ ಪಾರ್ಕ್ ಕನಸು ನನಸಾಗುತ್ತಿಲ್ಲ ಎಂದು ನೊಂದ ರೈತ ಮುಂದಾಳೊಬ್ಬರು ’ನ್ಯಾಯಪಥ’ಕ್ಕೆ ರೈತಾಪಿವರ್ಗದ ಸಂಕಟ ವಿವರಿಸಿದರು.

ಹತ್ತಿ ಕೃಷಿ ಪುನಶ್ಚೇತನ ಆಗಬೇಕಾಗಿದೆ. ಒಂದೂವರೆ ದಶಕದ ಹಿಂದೆ ರಾಣೇಬೆನ್ನೂರಿನ ಗ್ರಾಮೀಣ ಪ್ರದೇಶದಲ್ಲಿ ಬಿಟಿ ಹತ್ತಿ ಅತಿ ಹೆಚ್ಚು ಬೆಳೆಯಾಗುತ್ತಿತ್ತು. ರಾಣೇಬೆನ್ನೂರು ಪ್ರಮುಖ ಹತ್ತಿ ಮಾರುಕಟ್ಟೆ ಆಗುವಷ್ಟರಮಟ್ಟಿಗೆ ರೈತರು ಬಿಟಿ ಹತ್ತಿ ಬಂಪರ್ ಬೆಳೆ ಕೊಯ್ಲು ಮಾಡಿದ್ದರು. ಈಗ ಹತ್ತಿ ಉತ್ಪತ್ತಿ ಶೇ.70ಕ್ಕೆ ಕುಸಿದಿದೆ. ಕಡಿಮೆ ಇಳುವರಿ, ಕೀಟ ಬಾಧೆ, ಮರುಕಳಿಸುವ ಬರದಿಂದಾಗಿ ರೈತರಿಗೆ ಹತ್ತಿ ಬೆಳೆಯುವುದು ಹಾನಿಕಾರಕವೆನಿಸಿದೆ. ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸುವ ಆಳುವವರು ಕ್ಲುಪ್ತ ಕಾಲದಲ್ಲಿ ಖರೀದಿ ಕೇಂದ್ರ ತೆರೆಯುತ್ತಿಲ್ಲ. ಇದರಿಂದ ದಲ್ಲಾಳಿಗಳಿಗೆ ಅಮಾಯಕ ರೈತರ ಶೋಷಣೆಗೆ ಅನುಕೂವಾಗಿದೆ.

ಅರುಣ್ ಕುಮಾರ್ ಪೂಜಾರ್

ರೈತರು ಸಮಸ್ಯೆಯಲ್ಲಿದ್ದರೂ ಶಾಸಕ-ಸಂಸದರು ಕೃಷಿ ಉನ್ನತೀಕರಣದ ಖಬರೆ ಇಲ್ಲದಂತಿದ್ದಾರೆ. ಯುವ ಸಮೂಹದ ವಲಸೆ ತಪ್ಪಿಸಲು ರಾಣೇಬೆನ್ನೂರಲ್ಲಿ ಕೈಗಾರಿಗಳ ಸ್ಥಾಪನೆ ಆಗಬೇಕೆಂಬ ಬೇಡಿಕೆಯಿದೆ. ತಾಲೂಕಿನಲ್ಲಿ ಐತಿಹಾಸಿಕ-ಪ್ರಾಕೃತಿಕ ಮಹತ್ವ-ಸೌಂದರ್ಯದ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಸರಣಿ ಪ್ರವಾಸೋದ್ಯಮ ಬೆಳೆಸಿದರೆ ದುಡಿಯುವ ಕೈಗಳಿಗೆ ಒಂದಿಷ್ಟು ಕೆಲಸ ಸಿಗುತ್ತಿತ್ತು. ದೂರದರ್ಶಿತ್ವದ ನಾಯಕತ್ವದ ಕೊರತೆಯಿಂದ ರಾಣೇಬೆನ್ನೂರು ಪ್ರಗತಿಯ ಹಳಿಗೇರದೆ ಏದುಸಿರುಬಿಡುತ್ತಿದೆ ಎಂಬ ಮಾತು ಕ್ಷೇತ್ರದಲ್ಲಿ ವ್ಯಾಪಕವಾಗಿ ಕೇಳಿಬರುತ್ತದೆ.

ಟಿಕೆಟ್!ಟಿಕೆಟ್!!ಟಿಕೆಟ್!!!

ಪಂಚಮಸಾಲಿ ಲಿಂಗಾಯತ-ಸಾದರ ಲಿಂಗಾಯತ ಮತ್ತು ಕುರುಬರ ಮಠದಿಂದ ಚುನಾವಣೆ ಹೊತ್ತಲ್ಲಿ ಹೊರಬರುವ ರಹಸ್ಯ ಫರ್ಮಾನು ವರ್ಕ್‌ಔಟ್ ಆಗುವ ರಾಣೇಬೆನ್ನೂರು ಯುದ್ಧ ಭೂಮಿಯಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಸಮತೂಕದಲ್ಲಿದೆ. ಅಹಿಂದ ಮತದಾರರು ಹೆಚ್ಚಿರುವುದರಿಂದ ಕಾಂಗ್ರೆಸ್, ಹಾಗು ಲಿಂಗಾಯತರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಬಿಜೆಪಿ ಬಲಾಢ್ಯವಾಗಿವೆ. ಹಾಗಾಗಿ ದಿನಕಳೆದಂತೆ ಎರಡೂ ಪಾರ್ಟಿಯಲ್ಲಿ ಎಮ್ಮೆಲ್ಲೆ ಕನಸುಗಾರ ಪೈಪೋಟಿ ಬಿರುಸಾಗುತ್ತಿದೆ.

ಬಿಜೆಪಿಯಲ್ಲಿ ಬೇಗುದಿ ಜೋರಾಗಿದೆ; ಯಡಿಯೂರಪ್ಪ ಬಣ ಮತ್ತು ಪ್ರಹ್ಲಾದ್ ಜೋಶಿ-ಜಗದೀಶ್ ಶೆಟ್ಟರ್ ಬಳಗದ ಮೇಲಾಟದ ಅಡ್ಡ ಪರಿಣಾಮ ಸ್ಥಳೀಯ ಬಿಜೆಪಿ ಮೇಲಾಗುತ್ತಿದೆ. ಬಿಜೆಪಿಯ ಒಂದು ವರ್ಗಕ್ಕೆ ಯಡಿಯೂರಪ್ಪ ನಿಷ್ಠ ಶಾಸಕ ಅರುಣಕುಮಾರ್ ಪೂಜಾರ್ ಬಗ್ಗೆ ಸಮಾಧಾನವಿಲ್ಲ. ಲಿಂಗಾಯತರಲ್ಲೂ ಪೂಜಾರ್ ವಿರೋಧಿಸುವ ತಂಡವಿದೆ. ಶಾಸಕ ಪೂಜಾರ್‌ಗಿಂತ ಮಾಜಿ ಜಿಪಂ ಸದಸ್ಯ ಸಂತೋಷ್ ಪಾಟೀಲ್ ಸಮರ್ಥ ಕ್ಯಾಂಡಿಡೇಟ್ ಆಗಬಲ್ಲರೆಂಬ ವಾದ ಅವರ ಹಿಂದಿರುವ ಲಿಂಗಾಯತ ಲಾಬಿಯದೆನ್ನಲಾಗುತ್ತಿದೆ. 2018ರ ಚುನಾವಣೆ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಸ್ಪರ್ಧೆಗೆ ಅವಕಾಶ ಸಿಕ್ಕರೂ 49 ಸಾವಿರದಷ್ಟು ಮತ ಪಡೆದಿರುವ ತಾನೆ ಗಟ್ಟಿ ಜೆಟ್ಟಿ ಎಂಬ ತರ್ಕ ಡಾ.ಬಸವರಾಜ್ ಕೇಲಗಾರ್‌ರದು.

(2019 ಉಪ ಚುನಾವಣೆ)

ಕ್ಷೇತ್ರವನ್ನು ಆಳುತ್ತ ಬಂದಿದ್ದ ಪಟ್ಟಭದ್ರರನ್ನು 2018ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬೆಚ್ಚಿ ಬೀಳಿಸಿದ ಕುರುಬ ಸಮುದಾಯದ ಬೆಂಗಳೂರಿನ ವಲಸಿಗ ಆರ್.ಶಂಕರ್ ಸ್ವಯಂಕೃತ ಅಪರಾಧದಿಂದ ನೆಲೆ-ಬೆಲೆ ಕಳೆದುಕೊಂಡಿದ್ದಾರೆ; ಶಂಕರ್ ಬಿಜೆಪಿ ಹಾಗು ಕಾಂಗ್ರೆಸ್ ಎರಡೂ ಪಕ್ಷದ ಟಿಕೆಟ್‌ಗೆ ಲಾಗ ಹಾಕುತ್ತಿದ್ದಾರೆ. ಆದರೆ ಶಂಕರ್‌ಗೆ ಯಾವ ಪಕ್ಷವೂ ಅವಕಾಶ ಕೊಡಲಾರದು; ಕೊಟ್ಟರೂ ಗೆಲ್ಲಲಾರರು ಎಂಬ ಮಾತು ಕೇಳಿಬರುತ್ತಿದೆ. 2019ರ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೋಳಿವಾಡ್ ಇದು ತಮ್ಮ ಕೊನೆಯ ಇಲೆಕ್ಷನ್ ಎಂದು ಮತ ಬೇಡಿದ್ದರು. ಈಗವರು ತಮ್ಮ ಸುಪುತ್ರ ಉದ್ಯಮಿ ಪ್ರಕಾಶ್ ಕೋಳಿವಾಡ್‌ಗೆ ಕಾಂಗ್ರೆಸ್ ಅಭ್ಯರ್ಥಿ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ.

ಪ್ರಕಾಶ್ ಕೋಳಿವಾಡ್‌ಗೆ ಕಾಂಗ್ರೆಸ್ ಟಿಕೆಟ್ ಒಲಿಯುವ ಸಾಧ್ಯತೆಯೇ ಹೆಚ್ಚೆನ್ನಲಾಗಿದ್ದರೂ ಕುರುಬ ಸಮುದಾಯದ ಜನಪ್ರಿಯ ವೈದ್ಯ ಡಾ.ಪ್ರವೀಣ್ ಖನ್ನೂರ್ ಮತ್ತು ಸಾದರ ಜೆಟ್ಟಪ್ಪ ಕೆರೆಗೌಡರ್ ಅದೃಷ್ಟ ಖುಲಾಯಿಸುವ ಆಸೆಯಲ್ಲಿದ್ದಾರೆ. ಮಾಜಿ ಸ್ಪೀಕರ್ ಕೋಳಿವಾಡರ ಬಲಗೈ ಬಂಟನಂತಿದ್ದ ಕೆರೆಗೌಡರ್, “ಯಜಮಾನರು” ನಿವೃತ್ತಿಯಾಗುತ್ತಾರೆಂದಾದರೆ ತನಗೆ ಟಿಕೆಟ್ ಬೇಕೆನ್ನುತ್ತಿದ್ದಾರಂತೆ. ಕ್ಷೇತ್ರದ ಪೊಲಿಟಿಕಲ್ ಇಂಜಿನಿಯರಿಂಗ್‌ಅನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಂಗ್ರೆಸ್-ಬಿಜೆಪಿಯ ನೇರ ರಣ ರೋಚಕ ಕಾಳಗದಲ್ಲಿ ಕಾಂಗ್ರೆಸ್ ಗೆಲ್ಲುವ ಸೂಚನೆಗಳು ಗೋಚರಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...