Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ವಾಣಿಜ್ಯ ನಗರ ಚಿಂತಾಮಣಿಯ ಶಾಸಕರನ್ನು ನಿರ್ಧರಿಸುವ ’ಹಣಾ’ಹಣಿ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ವಾಣಿಜ್ಯ ನಗರ ಚಿಂತಾಮಣಿಯ ಶಾಸಕರನ್ನು ನಿರ್ಧರಿಸುವ ’ಹಣಾ’ಹಣಿ

- Advertisement -
- Advertisement -

ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗದ ಚಿಂತಾಮಣಿ ಸಾಮಾನ್ಯ ವಿಧಾನಸಭಾ ಕ್ಷೇತ್ರವು ಕೋಲಾರ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಚಿಕ್ಕಬಳ್ಳಾಪುರ-ಕೋಲಾರದ ಮಧ್ಯಭಾಗದಲ್ಲಿರುವ ಚಿಂತಾಮಣಿಯು ಅವಿಭಜಿತ ಕೋಲಾರ ಜಿಲ್ಲೆಯಾಗಿದ್ದಾಗಿನಿಂದಲೂ ಪ್ರಮುಖ ವ್ಯಾಪಾರ ವಹಿವಾಟಿನ ಕ್ಷೇತ್ರವಾಗಿದೆ. ಚಿನ್ನದ ವ್ಯವಹಾರ ಸೇರಿದಂತೆ ಆರ್ಥಿಕತೆಯಲ್ಲಿ ಉಳಿದ ತಾಲ್ಲೂಕುಗಳಿಗಿಂತ ಮುಂದಿರುವ ಚಿಂತಾಮಣಿಯು ಕಂಬಾಲಪಲ್ಲಿ ದಲಿತ ಹತ್ಯಾಕಾಂಡದ ಕುಖ್ಯಾತಿಗೂ ಒಳಗಾಗಿದೆ. ಇಂತಹ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಣದವರ ಕಾರುಬಾರು ಜೋರಾಗಿದೆ.

ಮೊದಲ ಚುನಾವಣೆ ಹೊರತುಪಡಿಸಿ ಕ್ಷೇತ್ರಕ್ಕೆ ಇದುವರೆಗೂ ನಡೆದಿರುವ 14 ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು 5 ಬಾರಿ ಗೆಲುವು ಕಂಡರೆ, 5 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 4 ಬಾರಿ ಜನತಾಪಕ್ಷ, ಜನತಾದಳ ಮತ್ತು ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾದರೆ, ಬಿಜೆಪಿ ಇಲ್ಲಿ ಖಾತೆ ತೆರೆಯಲು ವಿಫಲವಾಗಿದೆ.

ಚುನಾವಣಾ ಇತಿಹಾಸ

1957ರಿಂದ 2013ರವರೆಗೂ ಟಿ.ಕೆ ಗಂಗಿ ರೆಡ್ಡಿ ಮತ್ತು ಎಂ.ಸಿ ಆಂಜನೇಯ ರೆಡ್ಡಿ ಈ ಎರಡೂ ಕುಟುಂಬದವರೆ ಇಲ್ಲಿ ಶಾಸಕರಾಗಿದ್ದಾರೆ. ಆ ರೀತಿಯಲ್ಲಿ ಕುಟುಂಬ ರಾಜಕಾರಣಕ್ಕೆ ಹೆಸರಾದ ಕ್ಷೇತ್ರ ಚಿಂತಾಮಣಿ. ಟಿ.ಕೆ ಗಂಗಿ ರೆಡ್ಡಿ ಎರಡು ಬಾರಿ ಶಾಸಕರಾದರೆ ಅವರ ಅಳಿಯ ಕೆ.ಎಂ ಕೃಷ್ಣಾರೆಡ್ಡಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಇನ್ನು ಎಂ.ಸಿ ಆಂಜನೇಯ ರೆಡ್ಡಿಯವರು ಎರಡು ಬಾರಿ ಶಾಸಕರಾದರೆ ಅವರ ಮಗ ಚೌಡರೆಡ್ಡಿಯವರು 5 ಬಾರಿ ವಿಜಯ ಸಾಧಿಸಿದ್ದಾರೆ. ಚೌಡರೆಡ್ಡಿಯವರ ಮಗ ಡಾ.ಎಂ.ಸಿ ಸುಧಾಕರ್ ಸಹ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಮೂರನೇ ಬಾರಿಗೆ ಪ್ರಯತ್ನ ನಡೆಸಿದ್ದಾರೆ. ಕೆ.ಎಂ ಕೃಷ್ಣಾರೆಡ್ಡಿಯವರ ಮರಣ ನಂತರ ಅವರ ಪತ್ನಿ ವಾಣಿ ಕೃಷ್ಣಾರೆಡ್ಡಿ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

ಟಿ.ಕೆ ಗಂಗಿರೆಡ್ಡಿ

1951ರಲ್ಲಿ ಚಿಂತಾಮಣಿ ಎರಡು ವಿಧಾನಸಭಾ ಸ್ಥಾನಗಳನ್ನು ಹೊಂದಿತ್ತು. ಎಂ.ಸಿ ಆಂಜನೇಯ ರೆಡ್ಡಿ ಮತ್ತು ನಾರಾಯಣಪ್ಪನವರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದರು. 1957ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಟಿ.ಕೆ ಗಂಗಿ ರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ ಆಂಜನೇಯ ರೆಡ್ಡಿಯವರನ್ನು 3,816 ಮತಗಳಿಂದ ಮಣಿಸಿ ಶಾಸಕರಾಗಿ ಆಯ್ಕೆಯಾದರು. ಆದರೆ 1962ರಲ್ಲಿ ಎಂ.ಸಿ ಆಂಜನೇಯ ರೆಡ್ಡಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ವಿ.ಸೀತಪ್ಪನವರನ್ನು ಮಣಿಸಿ ಶಾಸಕರಾಗಿ ಆಯ್ಕೆಯಾದರು. 1967ರ ಚುನಾವಣೆಯಲ್ಲಿ ಟಿ.ಕೆ ಗಂಗಿ ರೆಡ್ಡಿಯವರು ಸ್ವತಂತ್ರವಾಗಿ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ಸಿ ಆಂಜನೇಯ ರೆಡ್ಡಿಯವರನ್ನು ಸೋಲಿಸಿದರು.

ಚೌಡರೆಡ್ಡಿಯವರ ಕಾಲ

1972ರ ಚುನಾವಣೆಗೆ ಎಂ.ಸಿ ಆಂಜನೇಯ ರೆಡ್ಡಿಯವರ ಮಗ ಚೌಡರೆಡ್ಡಿ ಧುಮುಕಿದರು. ಸ್ವತಂತ್ರ ಅಭ್ಯರ್ಥಿಯಾಗಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿ ವಿ.ಸೀತಪ್ಪನವರನ್ನು 7,875 ಮತಗಳಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. ಅಲ್ಲದೆ 1978 ಮತ್ತು 1983ರ ಚುನಾವಣೆಗಳಲ್ಲಿಯೂ ಸಹ ಗೆಲುವು ದಾಖಲಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಣ, ಜಾತಿ ರಾಜಕೀಯದ ಮೇಲಾಟದಲ್ಲಿ ಸೊರಗಿದ ಶಿಡ್ಲಘಟ್ಟ ಕ್ಷೇತ್ರ

1978ರ ಚುನಾವಣೆಯಲ್ಲಿ ಟಿ.ಕೆ ಗಂಗಿ ರೆಡ್ಡಿ ಮತ್ತು ಚೌಡರೆಡ್ಡಿಯ ನಡುವೆ ಫೈಟ್ ನಡೆಯಿತು. ಇಂದಿರಾ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಚೌಡರೆಡ್ಡಿಯವರು ಜನತಾಪಕ್ಷದಿಂದ ಕಣಕ್ಕಿಳಿದಿದ್ದ ಗಂಗಿ ರೆಡ್ಡಿಯವರನ್ನು 26,370 ಮತಗಳ ಬೃಹತ್ ಅಂತರದಿಂದ ಸೋಲಿಸಿ ಎರಡನೇ ಬಾರಿಗೆ ಶಾಸಕರಾದರು. 1983ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಚೌಡರೆಡ್ಡಿಯವರು ಗಂಗಿ ರೆಡ್ಡಿಯವರ ಅಳಿಯ ಜನತಾ ಪಕ್ಷದ ಕೆ.ಎಂ ಕೃಷ್ಣಾರೆಡ್ಡಿಯವರನ್ನು ಎದುರಿಸಿದರು. ಆ ಚುನಾವಣೆಯಲ್ಲಿಯೂ ಸಹ ಚೌಡರೆಡ್ಡಿ 10,570 ಮತಗಳಿಂದ ಗೆಲುವು ಸಾಧಿಸಿ ಸತತ ಮೂರನೇ ಬಾರಿಗೆ ಶಾಸಕರೆನಿಸಿಕೊಂಡರು. ಚೌಡರೆಡ್ಡಿಯವರು ನಗರಾಭಿವೃದ್ದಿ ಮತ್ತು ಗೃಹ ಸಚಿವರಾಗಿ ಕೆಲಸ ಮಾಡಿದ ಹಿರಿಮೆ ಹೊಂದಿದ್ದಾರೆ.

ಕೆ.ಎಂ ಕೃಷ್ಣಾರೆಡ್ಡಿ ಗೆಲುವು

ಎರಡೇ ವರ್ಷಗಳಲ್ಲಿ 1985ರಲ್ಲಿ ಮತ್ತೆ ನಡೆದ ಚುನಾವಣೆಯಲ್ಲಿ ಚೌಡರೆಡ್ಡಿಯವರನ್ನು ಮಣಿಸಿದ ಕೆ.ಎಂ ಕೃಷ್ಣಾರೆಡ್ಡಿಯವರು ಕೊನೆಗೂ ಗೆಲುವಿನ ನಗೆ ಬೀರಿದರು. ಜನತಾಪಕ್ಷದಿಂದ ಕಣಕ್ಕಿಳಿದಿದ್ದ ಕೃಷ್ಣಾರೆಡ್ಡಿಯವರು ಕಾಂಗ್ರೆಸ್ ಪಕ್ಷದ ಚೌಡರೆಡ್ಡಿಯವರನ್ನು 7,300 ಮತಗಳಿಂದ ಮಣಿಸಿದರು. ಆದರೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಚೌಡರೆಡ್ಡಿಯವರು ಕೃಷ್ಣಾರೆಡ್ಡಿಯವರನ್ನು ಮಣಿಸಿ ನಾಲ್ಕನೇ ಬಾರಿಗೆ ಶಾಸಕರಾದರು. 1994ರ ಚುನಾವಣೆಯಲ್ಲಿ ಚೌಡರೆಡ್ಡಿಯವರನ್ನು ಮಣಿಸಿದ ಕೆ.ಎಂ ಕೃಷ್ಣಾರೆಡ್ಡಿಯವರು ಎರಡನೇ ಬಾರಿಗೆ ಶಾಸಕರಾದುದ್ದಲ್ಲದೆ ಸಮಾಜ ಕಲ್ಯಾಣ ಇಲಾಖೆ ಸಚಿವರೂ ಆಗಿದ್ದರು.

ಎಂ.ಸಿ ಆಂಜನೇಯ ರೆಡ್ಡಿ

1999ರಲ್ಲಿ ಚೌಡರೆಡ್ಡಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕೆ.ಎಂ ಕೃಷ್ಣಾರೆಡ್ಡಿಯವರು ಜೆಡಿಯು ಪಕ್ಷದಿಂದ ಸ್ಪರ್ಧಿಸಿದರು. 15,662 ಮತಗಳಿಂದ ಗೆದ್ದ ಚೌಡರೆಡ್ಡಿಯವರು 5ನೇ ಬಾರಿಗೆ ಕ್ಷೇತ್ರದ ಶಾಸಕರೆನಿಸಿಕೊಂಡರು. ಅದು ಅವರ ಕೊನೆಯ ಚುನಾವಣೆಯಾಗಿತ್ತು.

2004ರ ಚುನಾವಣೆಗೆ ಚೌಡರೆಡ್ಡಿಯವರ ಪುತ್ರ ಡಾ.ಎಂ.ಸಿ ಸುಧಾಕರ್ ಧುಮುಕಿದರು. ವೃತ್ತಿಯಲ್ಲಿ ದಂತ ವೈದ್ಯರಾಗಿದ್ದ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರು. ಕೆ.ಎಂ ಕೃಷ್ಣಾರೆಡ್ಡಿ ಬಿಜೆಪಿ ಟಿಕೆಟ್‌ನಡಿ ಸ್ಪರ್ಧಿಸಿದರು. 8,100 ಮತಗಳಿಂದ ಗೆದ್ದ ಸುಧಾಕರ್ ಮೊದಲ ಬಾರಿಗೆ ಶಾಸಕರಾದರು. 2008ರ ಚುನಾವಣೆಯಲ್ಲಿ ಸುಧಾಕರ್ ಕಾಂಗ್ರೆಸ್‌ನಿಂದ ಕಣಕ್ಕಿಳಿದರೆ, ಕೆ.ಎಂ ಕಷ್ಣಾರೆಡ್ಡಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದರು. ಆ ಬಾರಿಯೂ ಸುಧಾಕರ್ 1,246 ಮತಗಳ ಅಲ್ಪ ಅಂತರದಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಶಾಸಕರಾದರು.

ಜೆ.ಕೆ ಕೃಷ್ಣಾರೆಡ್ಡಿ ಎಂಟ್ರಿ

ಐದು ಬಾರಿ ಸೋತು, ಎರಡು ಬಾರಿ ಗೆದ್ದಿದ್ದ ಮಾಜಿ ಸಚಿವ ಕೆ.ಎಂ ಕೃಷ್ಣಾರೆಡ್ಡಿಯವರು ೨೦೧೨ರಲ್ಲಿ ನಿಧನ ಹೊಂದಿದ್ದರು. ಅವರ ಮಗಳಾದ ವಾಣಿ ಕೃಷ್ಣಾರೆಡ್ಡಿ ಜೆಡಿಎಸ್ ಟಿಕೆಟ್‌ಗಾಗಿ ಪ್ರಯತ್ನಿಸಿದರು. ಆದರೆ ಜೆಡಿಎಸ್ ಪಕ್ಷವು ಬೆಂಗಳೂರಿನ ಎಂ. ಕೃಷ್ಣಾರೆಡ್ಡಿಯವರಿಗೆ ಟಿಕೆಟ್ ನೀಡಿತು. ಜಯರಾಂ ಎಂಬುವವರ ಜೊತೆ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮ ನಡೆಸುತ್ತಿದ್ದ ಅವರು ಜೆ.ಕೆ ಕೃಷ್ಣಾರೆಡ್ಡಿ ಎಂದೇ ಇಂದಿಗೂ ಕರೆಸಿಕೊಳ್ಳುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಹಾಲಿ ಶಾಸಕ ಡಾ.ಎಂ.ಸಿ ಸುಧಾಕರ್ ಕಾಂಗ್ರೆಸ್ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷವು ವಾಣಿ ಕೃಷ್ಣರೆಡ್ಡಿಯವರಿಗೆ ಟಿಕೆಟ್ ಘೋಷಿಸಿತು. ಈ ಮೂರು ಜನರ ನಡುವಿನ ಜಿದ್ದಾಜಿದ್ದಿನ ಕಾಳಗದಲ್ಲಿ 1,696 ಮತಗಳ ಕೂದಲೆಳೆ ಅಂತರದಲ್ಲಿ ಜೆಡಿಎಸ್‌ನ ಜೆ.ಕೆ ಕೃಷ್ಣಾರೆಡ್ಡಿಯವರು ಗೆಲುವು ಸಾಧಿಸಿದರು.

ಜೆ.ಕೆ ಕೃಷ್ಣಾರೆಡ್ಡಿಯವರು 68,950 ಮತಗಳನ್ನು ಪಡೆದರೆ, ಸ್ವತಂತ್ರ ಅಭ್ಯರ್ಥಿ ಡಾ.ಎಂ.ಸಿ ಸುಧಾಕರ್ 67,254 ಮತಗಳನ್ನು ಪಡೆದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ವಾಣಿ ಕೃಷ್ಣಮೂರ್ತಿಯವರು ಕೇವಲ 12,665 ಮತಗಳಿಗೆ ಸೀಮಿತಗೊಂಡರು. ವಂಶಪಾರಂಪರ್ಯ ರಾಜಕಾರಣಕ್ಕೆ ಕೊನೆ ಹಾಡಿದ ಜೆ.ಕೆ ಕೃಷ್ಣಾರೆಡ್ಡಿ 2018ರಲ್ಲಿಯೂ ಸಹ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಚೌಡ ರೆಡ್ಡಿ

2018ರ ಚುನಾವಣೆಯಲ್ಲಿ ಡಾ.ಎಂ.ಸಿ ಸುಧಾಕರ್ ಭಾರತೀಯ ಪ್ರಜಾ ಪಕ್ಷ (ಬಿಪಿಜೆಪಿ) ಎಂಬ ಪಕ್ಷದಿಂದ ಕಣಕ್ಕಿಳಿದರು. ತಾವು ಮತ್ತು ತಮ್ಮ ತಂದೆಯವರು ಮಾಡಿದ ಸಾಧನೆಗಳನ್ನು ಆಧರಿಸಿ “ಎ ಪೊಲಿಟಿಕಲ್ ಡಾಕ್ಯುಮೆಂಟ್ರಿ ಆನ್ ಡಾ.ಎಂ.ಸಿ ಸುಧಾಕರ್” ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿ ಚುನಾವಣಾ ಪ್ರಚಾರ ಮಾಡಿದ್ದರು. ಆ ಸಂದರ್ಭದಲ್ಲಿ ಹಾಲಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಜೆಡಿಎಸ್‌ನಿಂದ ಕಣಕ್ಕಿಳಿದರು. ಇವರಿಬ್ಬರ ನಡುವೆಯೆ ನೇರಾನೇರ ಪೈಪೋಟಿ ನಡೆಯಿತು. ಕೊನೆಗೆ ಜೆ.ಕೆ ಕೃಷ್ಣಾರೆಡ್ಡಿಯವರು 87,753 ಮತಗಳನ್ನು ಪಡೆದರೆ, ಡಾ.ಎಂ.ಸಿ ಸುಧಾಕರ್ 82,080 ಮತಗಳನ್ನು ಪಡದರು. 5,673 ಮತಗಳಿಂದ ಗೆದ್ದ ಜೆ.ಕೆ ಕೃಷ್ಣಾರೆಡ್ಡಿ ಎರಡನೇ ಬಾರಿಗೆ ಶಾಸಕರೆನಿಸಿಕೊಂಡರು. ವಾಣಿ ಕೃಷ್ಣಾರೆಡ್ಡಿಯವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರೂ ಕೇವಲ 2,233 ಮತಗಳಿಗೆ ಕುಸಿದು ನಿರಾಶಾದಾಯಕ ಪೈಪೋಟಿ ನೀಡಿದರು.

ಜಾತಿವಾರು ಅಂದಾಜು ಮತಗಳು

ಚಿಂತಾಮಣಿಯಲ್ಲಿ ದಲಿತ ಮತಗಳೆ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೂ ಇದುವರೆಗೂ ಗೆದ್ದವರು ಮತ್ತು ಮುಂದೆ ಪ್ರಬಲ ಆಕಾಂಕ್ಷಿಗಳಾಗಿರುವವರೆಲ್ಲರೂ ಒಕ್ಕಲಿಗರೆ ಆಗಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2.25 ಲಕ್ಷದಷ್ಟು ಮತಗಳಿದ್ದು, ಎಸ್.ಸಿ 53,000, ಎಸ್.ಟಿ 25,000, ಒಕ್ಕಲಿಗರು 50,000, ಮುಸ್ಲಿಂ 38,000 ಮತ್ತು ಇತರೆ ಸಮುದಾಯಗಳ ಮತಗಳು 55,000 (ಮುಖ್ಯವಾಗಿ ಕುರುಬರು, ಗೊಲ್ಲರು, ಬಣಜಿಗರು) ದಷ್ಟಿವೆ ಎನ್ನಲಾಗಿದೆ.

ಕ್ಷೇತ್ರದ ಪ್ರಮುಖ ಸಮಸ್ಯೆಗಳು

ಜಿಲ್ಲೆಯ ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಕೃಷಿ ಆಧಾರಿತ ಕೈಗಾರಿಕೆಗಳಿಲ್ಲ. ಹಾಗಾಗಿ ಕೃಷಿ ಹೊರತಾದ ಉದ್ಯೋಗ ಸೃಷ್ಟಿಯಾಗದೆ ಯುವಕರ ವಲಸೆ ನಿರಂತರವಾಗಿದೆ. ಇನ್ನು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಆಗುತ್ತಿಲ್ಲ ಎನ್ನುವ ಕೊರಗು ರೈತರದು. ತಾಲ್ಲೂಕಿಗೆ ಮೆಡಿಕಲ್ ಕಾಲೇಜು ಬೇಕು, ಉತ್ತಮ ರಸ್ತೆಗಳು ಮತ್ತು ಇಂಡಸ್ಟ್ರಿಗಳು ಬೇಕು ಮತ್ತು ಉದ್ಯೋಗ ಸೃಷ್ಟಿಯಾಗಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.

ಸದ್ಯದ ಸ್ಥಿತಿಗತಿ

ಹಾಲಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿಯವರು ಸತತ ಮೂರನೇ ಬಾರಿಗೆ ಗೆಲುವಿನ ಕನಸು ಕಾಣುತ್ತಿದ್ದಾರೆ. ಜೆಡಿಎಸ್ ಪಕ್ಷವು ಅವರಿಗೆ ಟಿಕೆಟ್ ಘೋಷಿಸಿದೆ. ಪಂಚರತ್ನ ಯಾತ್ರೆಯನ್ನು ಭರ್ಜರಿಯಾಗಿ ನಡೆಸುವ ಮೂಲಕ ಚುನಾವಣಾ ತಯಾರಿ ನಡೆಸಿದ್ದಾರೆ.

ಕಾಂಗ್ರೆಸ್

ಒಂದು ಕಾಲದಲ್ಲಿ ಸತತವಾಗಿ ಗೆಲ್ಲುತ್ತಿದ್ದ ಕಾಂಗ್ರೆಸ್ ಪಕ್ಷ ಕಳೆದ ಎರಡು ಚುನಾವಣೆಗಳಲ್ಲಿ ಸುಧಾಕರ್ ಸಹಾಯವಿಲ್ಲದ ಕಾರಣ ಸೊರಗಿದೆ. ಆದರೆ ಈಗ ಮತ್ತೆ ಡಾ.ಎಂ.ಸಿ ಸುಧಾಕರ್ ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ಬಲ ಬಂದಿದ್ದು ಅವರು ಈ ಬಾರಿ ಜೆ.ಕೆ ಕೃಷ್ಣಾರೆಡ್ಡಿಯವರಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಬಹುತೇಕ ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡುವುದು ಪಕ್ಕಾ ಆಗಿದೆ.

ಡಾ.ಎಂ.ಸಿ ಸುಧಾಕರ್

ಆದರೆ ಸುಧಾಕರ್ ಕಾಂಗ್ರೆಸ್ ಸೇರ್ಪಡೆಗೆ ಕೋಲಾರದ ಹಿರಿಯ ಕಾಂಗ್ರೆಸ್ ನಾಯಕರಾದ ಕೆ.ಎಚ್ ಮುನಿಯಪ್ಪನವರು ಅಸಮಾಧಾನ ವ್ಯಕ್ತಪಡಿಸಿದ್ದರು. ಏಕೆಂದರೆ ಸುಧಾಕರ್ ರಮೇಶ್ ಕುಮಾರ್ ಬಣವಹಿಸಿ ಕಳೆದ ಸಂಸತ್ ಚುನಾವಣೆಯಲ್ಲಿ ಮುನಿಯಪ್ಪನವರ ಸೋಲಿಗೆ ಕಾರಣವಾಗಿದ್ದರು ಎಂಬ ಆಕ್ರೋಶ ಅವರಿಗಿದೆ. ಆದರೆ ಡಾ.ಎಂ.ಸಿ ಸುಧಾಕರ್ ಮತ್ತು ಕೊತ್ತೂರು ಮಂಜುನಾಥ್‌ರವರು ಕಾಂಗ್ರೆಸ್ ಸೇರುವಾಗ ಬಣ ರಾಜಕೀಯ ಕೈಬಿಟ್ಟು ಮುನಿಯಪ್ಪನವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂಬ ಷರತ್ತನ್ನು ಹೈಕಮಾಂಡ್ ಹಾಕಿದೆ ಎನ್ನಲಾಗುತ್ತಿದೆ. ಅಲ್ಲದೆ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಮುನಿಯಪ್ಪನವರನ್ನು ಸಮಾಧಾನ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬರ-ಬರಡು ಭೂಮಿಯ ಬಾಗೇಪಲ್ಲಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು

ಬಿಜೆಪಿ

ಡಾ.ಎಂ.ಸಿ ಸುಧಾಕರ್ ಮತ್ತು ಬಿಜೆಪಿಯ ಸಚಿವ ಡಾ.ಕೆ ಸುಧಾಕರ್ ನಡುವೆ ವೈರತ್ವ ಹಿಂದಿನಿಂದಲೂ ಇದೆ. ಹಾಗಾಗಿ ಪರಸ್ಪರರು ವಾಗ್ದಾಳಿ ನಡೆಯುವುದು ಸಾಮಾನ್ಯ. ಪರಸ್ಪರ ಸೋಲಿಸುವ ಮಾತನಾಡುತ್ತಿರುತ್ತಾರೆ. ಇದುವರೆಗೂ ಚಿಂತಾಮಣಿಯಲ್ಲಿ ಡಾ.ಎಂ.ಸಿ ಸುಧಾಕರ್ ಅವರನ್ನು ಸೋಲಿಸಲು ಡಾ.ಕೆ ಸುಧಾಕರ್ ಪರೋಕ್ಷವಾಗಿ ಜೆ.ಕೆ ಕೃಷ್ಣಾರೆಡ್ಡಿಗೆ ಬೆಂಬಲ ನೀಡುತ್ತಿದ್ದರು ಎನ್ನುವ ಆರೋಪವಿದೆ. ಆದರೆ ಈ ಬಾರಿ ಅವರು ತಮ್ಮ ಭಾಮೈದ ಕೋನಪಲ್ಲಿ ಸತ್ಯನಾರಾಯಣ ರೆಡ್ಡಿ ಕೆ.ವಿಯವರನ್ನು ಬಿಜೆಪಿ ಪಕ್ಷದಿಂದ ಕಣಕ್ಕಿಳಿಸುತ್ತಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಎಂ.ಸಿ ಸುಧಾಕರ್ ಸೋಲಿಸುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ಸತ್ಯನಾರಾಯಣ್ ಮಹೇಶ್, ಅರುಣ್ ಬಾಬು ಮತ್ತು ಎಂ.ಆರ್ ಬಾಬು ಎಂಬ ರಿಯಲ್ ಎಸ್ಟೇಟ್ ಕುಳಗಳು ಸಹ ಬಿಜೆಪಿ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ. ಹಾಗಾಗಿ ಟಿಕೆಟ್‌ಗಾಗಿ ಪೈಪೋಟಿ ಇರುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ.

ದೇವನಹಳ್ಳಿ ವೇಣುಗೋಪಾಲ್

ಮಾಜಿ ಸಚಿವ ಕೆ.ಎಂ ಕೃಷ್ಣಾರೆಡ್ಡಿಯವರು ನಿಧನರಾದ ನಂತರ ಅವರ ಹೆಸರಿನಲ್ಲಿ ದೇವನಹಳ್ಳಿ ಮೂಲದ ವೇಣುಗೋಪಾಲ್ ಎಂಬುವವರು ಕೆ.ಎಂ.ಕೆ ಟ್ರಸ್ಟ್ ಸ್ಥಾಪಿಸಿ ಸಮಾಜಸೇವೆಯಲ್ಲಿ ನಿರತರಾಗಿದ್ದಾರೆ. ಆ ಮೂಲಕ ಪಕ್ಷೇತರವಾಗಿಯಾದರೂ 2023ರ ಚುನಾವಣೆಯಲ್ಲಿ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ.

ಯಾರು ಗೆಲ್ಲಬಹುದು?

2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಹಾಲಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಮತ್ತು ಸಚಿವ ಡಾ.ಕೆ ಸುಧಾಕರ್ ನೆರವು ಹಾಲಿ ಜೆಡಿಎಸ್ ಶಾಸಕರಿಗೆ ವರವಾಗಿ ಪರಿಣಮಿಸಿದರೆ, ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತಿರುವ ಸಿಂಪತಿ ಮತ್ತು ಕಾಂಗ್ರೆಸ್ ಪರವಾದ ಅಲೆ ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್‌ರವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಏನೇ ಆದರೂ ಇಬ್ಬರಲ್ಲಿ ಯಾರು ಹೆಚ್ಚು ಹಣ ಖರ್ಚು ಮಾಡುವರೊ ಅವರೇ ಗೆಲ್ಲುವುದು ಎನ್ನುವ ಮಾತು ಕೇಳಿಬರುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...