Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಣ, ಜಾತಿ ರಾಜಕೀಯದ ಮೇಲಾಟದಲ್ಲಿ ಸೊರಗಿದ ಶಿಡ್ಲಘಟ್ಟ ಕ್ಷೇತ್ರ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಣ, ಜಾತಿ ರಾಜಕೀಯದ ಮೇಲಾಟದಲ್ಲಿ ಸೊರಗಿದ ಶಿಡ್ಲಘಟ್ಟ ಕ್ಷೇತ್ರ

- Advertisement -
- Advertisement -

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಆಂಧ್ರದ ಗಡಿಯ ಅಂಚಿನಲ್ಲಿದ್ದು ಅಭಿವೃದ್ಧಿಯಿಂದಲೂ ವಂಚಿತವಾಗಿದೆ. ಕ್ಷೇತ್ರದಿಂದ ಸತತವಾಗಿ ಗೆದ್ದವರು ತಾವು ಉದ್ಧಾರವಾದರೆ ಹೊರತು ಜನರ ಅಭ್ಯುದಯ ಕನಸಿನ ಮಾತಾಗಿದೆ. ರಸ್ತೆಗಳು ಹದಗೆಟ್ಟಿವೆ, ಕನಿಷ್ಠ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಸಮಾಜಸೇವಕರು ತಲೆ ಎತ್ತಿದ್ದು, ಕೋಟಿಕೋಟಿ ಬಂಡವಾಳ ಹೂಡಿಕೆ ಮಾಡಿ ಜನರನ್ನು ಒಲಿಸಿಕೊಳ್ಳಲು, ಅವರನ್ನು ಮತಗಳಾಗಿ ಪರಿವರ್ತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ದಲಿತರು ಮತ್ತು ಇತರ ಹಿಂದುಳಿದ ವರ್ಗದ ಜನಸಂಖ್ಯೆ ಹೆಚ್ಚಿದ್ದರೂ ಶಿಡ್ಲಘಟ್ಟದಲ್ಲಿ ಇದುವರೆಗೂ ಗೆದ್ದವರು, ಸೋತವರು, ಸದ್ಯ 2023ಕ್ಕೆ ಶಾಸಕರಾಗಲು ಯತ್ನಿಸುತ್ತಿರುವವರೆಲ್ಲರೂ ಬಹುತೇಕ ಒಕ್ಕಲಿಗರೇ ಆಗಿದ್ದಾರೆ. ಒಕ್ಕಲಿಗರ ಹೊರತಾಗಿ ಇತರ ಸಮುದಾಯದವರು ಇಲ್ಲಿ ರಾಜಕೀಯವಾಗಿ ಬೆಳೆಯಲು ಬಿಡುತ್ತಿಲ್ಲ ಎಂಬುದು ಆರೋಪವಾಗಿದೆ.

ಚುನಾವಣಾ ಇತಿಹಾಸ

ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಶಿಡ್ಲಘಟ್ಟ ಇತ್ತೀಚಿಗೆ ಜೆಡಿಎಸ್ ಪಕ್ಷವನ್ನು ಸಹ ಅಪ್ಪಿಕೊಂಡಿದೆ. ಆದರೆ ಇದುವರೆಗೆ ನಡೆದಿರುವ 14 ಚುನಾವಣೆಗಳಲ್ಲಿ ಕಾಂಗ್ರೆಸ್ 10 ಬಾರಿ ಗೆಲುವು ಸಾಧಿಸಿದರೆ, ಜೆಡಿಎಸ್ ಎರಡು ಬಾರಿ ಮತ್ತು ಜನತಾಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳು ತಲಾ ಒಮ್ಮೊಮ್ಮೆ ಜಯ ಕಂಡಿದ್ದಾರೆ. ಮಾಜಿ ಸಚಿವ, ಹಾಲಿ ಶಾಸಕ ವಿ.ಮುನಿಯಪ್ಪ ಕಾಂಗ್ರೆಸ್ ಪಕ್ಷದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

1957ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಜೆ.ವೆಂಕಟಪ್ಪನವರು ಕಾಂಗ್ರೆಸ್ ಅಭ್ಯರ್ಥಿ ಎಸ್.ಅವಲ ರೆಡ್ಡಿಯವರ ವಿರುದ್ಧ 5,260 ಮತಗಳ ಅಂತರದಿಂದ ಗೆದ್ದು ಶಾಸಕರಾಗಿದ್ದರು. ಆದರೆ 1962ರಲ್ಲಿ ಎಸ್.ಅವಲರೆಡ್ಡಿಯವರು ಜೆ.ವೆಂಕಟಪ್ಪನವರನ್ನು 5,707 ಮತಗಳ ಅಂತರದಲ್ಲಿ ಸೋಲಿಸಿದರು. 1967ರಲ್ಲಿ ಕಾಂಗ್ರೆಸ್ ಪಕ್ಷವು ಬಿ.ವೆಂಕಟರಾಯಪ್ಪನವರಿಗೆ ಟಿಕೆಟ್ ನೀಡಿತು. ಅವರು ಸ್ವತಂತ್ರ ಅಭ್ಯರ್ಥಿ ಜಿ.ಪಾಪಣ್ಣನವರ ವಿರುದ್ಧ 3,486 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಎಂ. ರಾಜಣ್ಣ

1972ರ ಚುನಾವಣೆ ವೇಳೆಗೆ ಜೆ.ವೆಂಕಟಪ್ಪನವರು ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡರು. ಟಿಕೆಟ್ ವಂಚಿತ ಬಿ.ವೆಂಕಟರಾಯಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಇಬ್ಬರ ನಡುವಿನ ಸ್ಪರ್ಧೆಯಲ್ಲಿ ಜೆ.ವೆಂಕಟಪ್ಪನವರು 14,434 ಮತಗಳ ಬೃಹತ್ ಅಂತರದಿಂದ ಗೆದ್ದು ಎರಡನೇ ಬಾರಿಗೆ ಶಾಸಕರಾದರು. 1978ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಎಸ್.ಮುನಿಶಾಮಪ್ಪನವರು ಜನತಾಪಕ್ಷದ ಇ.ವೆಂಕ ಟರಾಯಪ್ಪನವರನ್ನು 7,577 ಮತಗಳಿಂದ ಮಣಿಸಿದರು.

ವಿ.ಮುನಿಯಪ್ಪನವರ ಆಗಮನ

ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐನಲ್ಲಿ ಸಕ್ರಿಯರಾಗಿದ್ದ ವಿ.ಮುನಿಯಪ್ಪನವರು 1983ರ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯುವಲ್ಲಿ ಸಫಲರಾದರು. ಅಲ್ಲಿಂದ ಇಲ್ಲಿಯವರೆಗೂ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಆರು ಬಾರಿ ಶಾಸಕರು, ಎರಡು ಬಾರಿ ಕೆಪಿಸಿಸಿ ಕಾರ್ಯದರ್ಶಿಗಳು, ಒಮ್ಮೆ ಕೆಪಿಸಿಸಿ ಉಪಾಧ್ಯಕ್ಷರು, ಎಐಸಿಸಿ ಸದಸ್ಯರು, ಇಂಧನ, ರೇಷ್ಮೆ, ಗಣಿ ಮತ್ತು ಭೂವಿಜ್ಞಾನ ಸಚಿವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು- ಹೀಗೆ ಸುಧಿರ್ಘ ಕಾಲ ಅಧಿಕಾರದಲ್ಲಿದ್ದ ಖ್ಯಾತಿ ಅವರದು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬರ-ಬರಡು ಭೂಮಿಯ ಬಾಗೇಪಲ್ಲಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು

1983ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಕಣಕ್ಕಿಳಿದ ವಿ.ಮುನಿಯಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿದ್ದ ಎಸ್.ಮುನಿಶಾಮಪ್ಪನವರನ್ನು 2,513 ಮತಗಳಿಂದ ಸೋಲಿಸಿ ಶಾಸಕರಾದರು. ಆದರೆ ಎರಡೇ ವರ್ಷದಲ್ಲಿ 1985ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಕಣಕ್ಕಿಳಿದ ಎಸ್.ಮುನಿಶಾಮಪ್ಪನವರು ವಿ.ಮುನಿಯಪ್ಪನವರನ್ನು 10,201 ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿಗೆ ಶಾಸಕರೆನಿಸಿಕೊಂಡರು.

ಹ್ಯಾಟ್ರಿಕ್ ಗೆಲುವು ಸಾಧಿಸಿದ ಮುನಿಯಪ್ಪ

1989, 1994 ಮತ್ತು 1999ರ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ವಿ.ಮುನಿಯಪ್ಪನವರು ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಅವರ ಎದುರು ಎಸ್ ಮುನಿಶಾಮಪ್ಪನವರು ಜನತಾದಳದಿಂದ ಎರಡು ಬಾರಿ ಮತ್ತು ಜೆಡಿಯುನಿಂದ ಒಮ್ಮೆ ಸ್ಪರ್ಧಿಸಿದರೂ, ಮೂರು ಬಾರಿಯೂ ಸೋಲು ಅನುಭವಿಸಿದರು.

ಮೂರು ಬಾರಿ ಸೋತರೂ ಛಲ ಬಿಡದ ಮುನಿಶಾಮಪ್ಪನವರು 2004ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಮುನಿಯಪ್ಪನವರ ವಿರುದ್ಧ ಸ್ಪರ್ಧಿಸಿ ಕೊನೆಗೂ ಜಯ ಕಂಡರು. ಆ ಚುನಾವಣೆಯಲ್ಲಿ 7,447ರ ಮತಗಳ ಅಂತರದಿಂದ ಗೆದ್ದು ಮೂರನೇ ಬಾರಿಗೆ ಶಾಸಕರಾದರು.

ಬಿ.ಎನ್ ರವಿಕುಮಾರ್

2008ರ ಚುನಾವಣೆಯಲ್ಲಿ ವಿ.ಮುನಿಯಪ್ಪನವರು ಮತ್ತೆ ಗೆದ್ದು 5ನೇ ಬಾರಿಗೆ ಶಾಸಕರಾದರು. ಅವರು 65,939 ಮತಗಳನ್ನು ಪಡೆದರೆ ಸಮೀಪದ ಅಭ್ಯರ್ಥಿ ಜೆಡಿಎಸ್‌ನ ಎಂ. ರಾಜಣ್ಣನವರು 59,437 ಮತಗಳನ್ನು ಪಡೆದರು. 6,502 ಮತಗಳಿಂದ ಮುನಿಯಪ್ಪ ಗೆಲುವಿನ ಓಟ ಮುಂದುವರಿಸಿದರು. ಆದರೆ 2013ರ ಚುನಾವಣೆಯಲ್ಲಿ ಜೆಡಿಎಸ್‌ನ ಎಂ. ರಾಜಣ್ಣ 77,931 ಮತಗಳನ್ನು ಪಡೆದರೆ ವಿ.ಮುನಿಯಪ್ಪ 62,452 ಮತಗಳನ್ನು ಪಡೆದು ಸೋಲು ಕಂಡರು. ಅದು ಅವರ ಮೂರನೇ ಸೋಲಾಗಿತ್ತು.

2018ರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ವಿ.ಮುನಿಯಪ್ಪನವರಿಗೆ ಟಿಕೆಟ್ ನೀಡಿತು. ಜೆಡಿಎಸ್ ಪಕ್ಷವು ಹಾಲಿ ಶಾಸಕ ಎಂ.ರಾಜಣ್ಣ ಮತ್ತು ಬಿ.ಎನ್ ರವಿಕುಮಾರ್ ಇಬ್ಬರಿಗೂ ಬಿ ಫಾರಂ ನೀಡಿತು. ಈ ಟಿಕೆಟ್ ಗೊಂದಲದಲ್ಲಿ ಸಿ ಫಾರಂ ಪಡೆದ ಬಿ.ಎನ್ ರವಿಕುಮಾರ್ ಕಣದಲ್ಲಿ ಉಳಿದುಕೊಂಡರೆ ಸಿಟ್ಟಿಗೆದ್ದ ಎಂ.ರಾಜಣ್ಣನವರು ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಸಮಾಜ ಸೇವಕ ಆಂಜಿನಪ್ಪ ಪುಟ್ಟು ಸಹ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ನಾಲ್ಕು ಜನರ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್‌ನ ವಿ.ಮುನಿಯಪ್ಪನವರು 9,709 ಮತಗಳಿಂದ ಗೆದ್ದು ಆರನೇ ಬಾರಿಗೆ ಶಾಸಕರೆನಿಸಿಕೊಂಡರು. ಅವರು 76,240 ಮತಗಳನ್ನು ಪಡೆದರು, ಬಿ.ಎನ್ ರವಿಕುಮಾರ್ 66,531 ಮತಗಳನ್ನು ಪಡೆದರೆ, ಸ್ವತಂತ್ರ ಅಭ್ಯರ್ಥಿ ಆಂಜಿನಪ್ಪ ಪುಟ್ಟು 10,986 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರೆ, ಎಂ.ರಾಜಣ್ಣ ಕೇವಲ 4,110 ಮತಗಳಿಗೆ ಸೀಮಿತಗೊಂಡು ನಾಲ್ಕನೇ ಸ್ಥಾನಕ್ಕೆ ಕುಸಿದರು.

ಅಂದಾಜು ಜಾತಿವಾರು ಮತಗಳು

ಸುಮಾರು 2,10,000 ಮತಗಳಿರುವ ಶಿಡ್ಲಘಟ್ಟದಲ್ಲಿ ಒಕ್ಕಲಿಗರು ಮತ್ತು ದಲಿತರು ಸಮಾನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. 60 ಸಾವಿರದಷ್ಟು ಒಕ್ಕಲಿಗ ಸಮುದಾಯದ ಮತಗಳಿದ್ದರೆ 40 ಸಾವಿರದಷ್ಟು ಎಸ್.ಸಿ ಸಮುದಾಯದ ಮತಗಳಿವೆ ಎನ್ನಲಾಗಿದೆ. 20 ಸಾವಿರ ಎಸ್‌ಟಿ ಸಮುದಾಯದ, 25 ಸಾವಿರ ಮುಸ್ಲಿಮ ಸಮುದಾಯದ ಮತಗಳಿವೆ. ಉಳಿದಂತೆ ಕುರುಬ, ಗೊಲ್ಲ, ಬಲಿಜಿಗ ಸಮುದಾಯಗಳು ಸೇರಿ 50 ಸಾವಿರದಷ್ಟು ಮತದಾರರಿದ್ದಾರೆ. ಇತರೆ ಸಮುದಾಯದ 15 ಸಾವಿರ ಮತಗಳಿವೆ ಎನ್ನಲಾಗಿದೆ.

ವಿ.ಮುನಿಯಪ್ಪನವರ ಸಾಧನೆಯೇನು?

6 ಬಾರಿ ಶಾಸಕರು ಮತ್ತು ಎರಡು ಬಾರಿ ಸಚಿವರಾಗಿರುವ ವಿ.ಮುನಿಯಪ್ಪನವರ ಸಾಧನೆಗಳೇನು ಎಂದು ನೋಡಿದರೆ, ಅವರ ಹಿಂದಿನ ಅವಧಿಗಳಲ್ಲಿ ಏನನ್ನಾದರೂ ಹುಡುಕಬಹುದೇ ಹೊರತು ಪ್ರಸ್ತುತದಲ್ಲಿ ಅವರ ಸಾಧನೆ ಕಳಪೆಯಾಗಿದೆ ಎನ್ನುತ್ತಾರೆ ಪ್ರಜ್ಞಾವಂತ ಮತದಾರರು. ಕೊರೊನಾ ಸಂದರ್ಭದಲ್ಲಿಯೂ ಅವರು ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ ಎಂದು ಜನ ದೂರುತ್ತಾರೆ.

ಆಂಜಿನಪ್ಪ ಪುಟ್ಟು

ಕ್ಷೇತ್ರದ ಸಮಸ್ಯೆಗಳು

ರಸ್ತೆಗಳು ಕಳಪೆ ಪರಿಸ್ಥಿತಿಯಲ್ಲಿವೆ. ಶಾಲಾ-ಕಾಲೇಜುಗಳು ಉನ್ನತೀಕರಣಗೊಂಡು ಅಭಿವೃದ್ಧಿಯಾಗುತ್ತಿಲ್ಲ. ಹೊಸ ಕೈಗಾರಿಕೆಗಳು ತಲೆ ಎತ್ತುತ್ತಿಲ್ಲ. ಉದ್ಯೋಗ ಅರಸಿ ಯುವಕ-ಯುವತಿಯರು ವಲಸೆ ಹೋಗುವುದು ಮುಂದುವರಿದಿದೆ. ಫ್ಲೋರೈಡ್ ನೀರು ಜನರನ್ನು ಬಾಧಿಸುತ್ತಿದೆ. ಎಚ್.ಎನ್ ವ್ಯಾಲಿ ನೀರನ್ನು ಮೂರು ಬಾರಿ ಸಂಸ್ಕರಿಸದಿರುವುದರಿಂದ ಅಂತರ್ಜಲ ಕಲುಷಿತವಾಗುತ್ತಿದೆ. ಹಾಲು-ತರಕಾರಿ ಬೆಳೆದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ.

ಹಾಲಿ ಪರಿಸ್ಥಿತಿ

ಜೆಡಿಎಸ್ ಪಕ್ಷವು ಬಿ.ಎನ್ ರವಿಕುಮಾರ್ ರವರಿಗೆ ಟಿಕೆಟ್ ಘೋಷಣೆ ಮಾಡಿದೆ. ಬಿ.ಎನ್ ರವಿಕುಮಾರ್ ಭರ್ಜರಿ ತಯಾರಿಯನ್ನೂ ನಡೆಸಿದ್ದಾರೆ. ಜೆಡಿಎಸ್‌ನ ಪಂಚರತ್ನ ಯಾತ್ರೆಯನ್ನು ಯಶಸ್ವಿಗೊಳಿಸಲು ಸಾಕಷ್ಟು ದುಡಿದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಿ ಗಮನ ಸೆಳೆದಿದ್ದರು. ಕಳೆದ ಬಾರಿ ಸೋತ ಅನುಕಂಪ, ಇತ್ತೀಚೆಗೆ ತಮ್ಮ ಮಗಳನ್ನು ಕಳೆದುಕೊಂಡಿರುವ ಅನುಕಂಪ ಎಲ್ಲಾ ಸೇರಿ ಈ ಬಾರಿ ಅವರು ಸುಲಭವಾಗಿ ಗೆಲ್ಲುತ್ತಾರೆ ಎನ್ನುವುದು ಹಲವರ ಅಭಿಪ್ರಾಯ.

ಬಿಜೆಪಿ

ಜೆಡಿಎಸ್‌ನಿಂದ 2013ರಲ್ಲಿ ಗೆದ್ದು, 2018ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹೀನಾಯ ಸೋಲು ಕಂಡಿರುವ ಎಂ. ರಾಜಣ್ಣನವರು ಈಗಾಗಲೇ ಅಧಿಕೃತವಾಗಿ ಬಿಜೆಪಿ ಸೇರಿ ಚುನಾವಣಾ ತಯಾರಿ ನಡೆಸಿದ್ದಾರೆ. ಆದರೆ ಶಿಡ್ಲಘಟ್ಟದಲ್ಲಿ ಬಿಜೆಪಿ ಇದುವರೆಗೂ 5 ಸಾವಿರದಷ್ಟು ಸಂಖ್ಯೆಯಲ್ಲಿ ವೋಟು ಪಡೆದ ಇತಿಹಾಸ ಹೊಂದಿಲ್ಲ. ಹಾಗಾಗಿ ಅವರು ಗೆಲುವು ಗಗನಕುಸುಮವೇ ಸರಿ ಎನ್ನುತ್ತಾರೆ ಜನ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗೌರಿಬಿದನೂರು: ಶಿವಶಂಕರ್‌ರೆಡ್ಡಿಯವರ ಸತತ 6ನೇ ಗೆಲುವಿಗೆ ಪುಟ್ಟಸ್ವಾಮಿಗೌಡರ ಅಡ್ಡಿ?

ಕಾಂಗ್ರೆಸ್‌ನಲ್ಲಿ ಹೆಚ್ಚಿನ ಆಕಾಂಕ್ಷಿಗಳು

ಟಿಕೆಟ್ ಆಕಾಂಕ್ಷಿಗಳು ಹೆಚ್ಚಿರುವ ಪಕ್ಷವೆಂದರೆ ಅದು ಕಾಂಗ್ರೆಸ್. ಹಾಲಿ ಶಾಸಕ ವಿ.ಮುನಿಯಪ್ಪನವರಿಗೆ 76 ವರ್ಷಗಳಾಗಿದ್ದು ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಸುಳಿವು ನೀಡಿದ್ದರು. ತಮ್ಮ ಮಗ ಶಶಿಧರ್‌ರನ್ನು ಬೆಳೆಸಬೇಕು ಎಂದುಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಅವರು ಮತ್ತೆ ಮಂತ್ರಿ ಆಗುವ ಕನಸಿನೊಂದಿಗೆ ಈ ಬಾರಿಯೂ ಟಿಕೆಟ್ ಕೇಳುತ್ತಿದ್ದಾರೆ ಎನ್ನಲಾಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು ಸರ್ಕಾರ ರಚಿಸುವ ಸಾಧ್ಯತೆಯಿದೆ ಎಂಬುದು ಮುನಿಯಪ್ಪನವರ ಲೆಕ್ಕಾಚಾರ ಎನ್ನಲಾಗುತ್ತಿದೆ.

ರಾಜೀವ್ ಗೌಡ

ಹಾಗಾಗಿ ವಿ.ಮುನಿಯಪ್ಪನವರು ಗೆದ್ದರೆ ಹಿರಿತನದ ಆಧಾರದಲ್ಲಿ ಮತ್ತೆ ಮಂತ್ರಿ ಸ್ಥಾನ ಸಿಗುತ್ತದೆ ಎಂದು ಬೆಂಬಲಿಗರು ಆಸೆ ಹುಟ್ಟಿಸಿದ್ದರಿಂದ ಅವರು ತಮ್ಮ ಮಗನಿಗೆ ಟಿಕೆಟ್ ಬಿಟ್ಟುಕೊಡದೆ ತಾವೇ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅವರ ಮಗ ಶಶಿಧರ್ ಕೂಡ ತನಗೇ ಟಿಕೆಟ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

ಆಂಜಿನಪ್ಪ ಪುಟ್ಟು

ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು 10 ಸಾವಿರಕ್ಕಿಂತಲೂ ಹೆಚ್ಚು ಮತ ಪಡೆದಿದ್ದ ಆಂಜಿನಪ್ಪ ಪುಟ್ಟು ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಟಿಕೆಟ್ ನೀಡಿದರೆ ತನ್ನ ಗೆಲುವು ಖಚಿತ ಎಂದು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರು ಬೆಂಗಳೂರಿನಿಂದ ಬಂದವರು ಎಂಬುದು ಅವರಿಗೆ ಮುಳುವಾಗುವ ಸಾಧ್ಯತೆಯಿದೆ.

ರಾಜೀವ್ ಗೌಡ

ತಾಲ್ಲೂಕಿನ ಹೊರಗಿನವರಾದ ಬೆಂಡಗಾನಹಳ್ಳಿಯ ರಾಜೀವ್ ಗೌಡರವರು ಕಳೆದ ಹಲವು ವರ್ಷಗಳಿಂದ ಶಿಡ್ಲಘಟ್ಟದಲ್ಲಿ ಎಬಿಡಿ ಟ್ರಸ್ಟ್ ಸ್ಥಾಪಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಡ್ಲಘಟ್ಟದಲ್ಲಿ ಎಲ್ಲೆಂದರಲ್ಲಿ ತಮ್ಮ ಚಿತ್ರ ಕಾಣುವಂತೆ ಫ್ಲೆಕ್ಸ್‌ಗಳನ್ನು ಹಾಕಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನಿಸಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಜೊತೆ ಸಂಪರ್ಕದಲ್ಲಿದ್ದು ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಎನ್.ಮುನಿಯಪ್ಪನವರಿಗಿರುವ ಆಡಳಿತ ವಿರೋಧಿ ಅಲೆ, ಬಿಜೆಪಿಗೆ ಇಲ್ಲದಿರುವ ನೆಲೆ, ಇತರರಿಗೆ ಟಿಕೆಟ್ ಖಾತ್ರಿಯಾಗದಿರುವುದದನ್ನು ಗಮನಿಸಿದರೆ ಈಗಾಗಲೇ ಟಿಕೆಟ್ ಘೋಷಣೆಯಾಗಿರುವ ಬಿ.ಎನ್ ರವಿಕುಮಾರ್‌ರವರು ಸದ್ಯಕ್ಕೆ ಶಿಡ್ಲಘಟ್ಟದ ಚುನಾವಣಾ ರೇಸ್‌ನಲ್ಲಿ ಮುಂದಿರುವಂತೆ ಭಾಸವಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...