Homeಮುಖಪುಟಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ

ಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ

- Advertisement -
- Advertisement -

ಕೊರೊನ ನಿಯಂತ್ರಣ ಮಾಡಲು ಸರಕಾರ ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆಯ ಕ್ರಮವಾಗಿ ನಿನ್ನೆ ಉತ್ತರ ಪ್ರದೇಶದಲ್ಲಿ ವಿಧೇಯರಾಗಿ ಮೈಮೇಲೆ ರಾಸಾಯನಿಕ ಸಿಂಪಡಿಸಿಕೊಳ್ಳುತ್ತಿದ್ದ ಆ ಮಂದಿ ಇದ್ದಾರಲ್ಲ, ಅವರಲ್ಲಿ ಒಬ್ಬರಾಗಿ ನಮ್ಮನ್ನು ಊಹಿಸಿಕೊಳ್ಳೋಣ. ಅವರಲ್ಲಿ ಒಬ್ಬರಾಗಿ ನಮ್ಮ ಗಂಡ, ಹೆಂಡತಿ, ಮಗ, ಮಗಳು, ಅಣ್ಣ ತಮ್ಮ, ತಂಗಿ, ಅಕ್ಕ, ಇನ್ನಿತರ ಸಮೀಪದ ಕುಟುಂಬಸ್ಥರು, ಸ್ನೇಹಿತರು ಮುಂತಾದವರ ಪೈಕಿ ಯಾರನ್ನಾದರೂ ಊಹಿಸಿಕೊಳ್ಳೋಣ. ನಮಗೆ ಏನನಿಸುತಿತ್ತು? ಇನ್ನೊಮ್ಮೆ ನಮ್ಮನ್ನು ನಾವೇ ಕೇಳಿಕೊಳ್ಳೋಣ, ಏನನಿಸುತಿತ್ತು? ಅದೇ ಅನಿಸಿಕೆ ನಮಗೆ ‘ನಮ್ಮವರು’ ಅಂತ ನಾವು ಭಾವಿಸದ, ನಮ್ಮ ಹಾಗಿರುವ ಬಟ್ಟೆ ತೊಟ್ಟುಕೊಳ್ಳದ, ನಮ್ಮ ಹಾಗೆ ಅಧಿಕಾರಸ್ಥರ ಜತೆ ಮಾತನಾಡಲಾಗದ ಆ ಜನ ಅಕ್ಷರಶ ಪ್ರಾಣಿಗಳಂತೆ ಸರಕಾರದ ಮಂದಿಯ ಕೈಯ್ಯಲ್ಲಿ ಶಾರೀರಿಕ ಹಿಂಸೆಯನ್ನೂ, ಮಾನಸಿಕ ಅವಮಾನವನ್ನೂ ಅನುಭವಿಸುವಾಗ ಬಂತೇ? ಘಟನೆಯ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ ಅಲ್ಲಿನ ಜಿಲ್ಲಾಧಿಕಾರಿ ಹೇಳಿದ್ದಿಷ್ಟು: ‘ಆ ಜನರನ್ನು ಹೊತ್ತು ತಂದಿದ್ದ ವಾಹನದ ಮೇಲೆ ರಾಸಾಯನಿಕ ಸಿಂಪಡಿಸಿ ಅಂತ ನಿರ್ದೇಶನವಿತ್ತು. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಳ ಹಂತದಲ್ಲಿ ಕೆಲಸಮಾಡುವ ಸಿಬ್ಬಂದಿ ಅತ್ಯುತ್ಸಾಹ (over enthusiasm) ತೋರಿದ ಕಾರಣ ಈ ಘಟನೆ ನಡೆದಿದೆ. ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’.

ಹೌದು. ಅಚಾತುರ್ಯಗಳು ನಡೆಯುತ್ತವೆ. ಇದು ಸಂಕಷ್ಟದ ಕಾಲ. ಕೈಮೀರುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸುವುದು ಸರಕಾರಕ್ಕಾದರೂ ಕಷ್ಟವೇ. ಈಗ ಸಿಕ್ಕ ಸಿಕ್ಕಲ್ಲೆಲ್ಲಾ ಹುಳುಕು ಹುಡುಕುವುದು ಸರಿಯಲ್ಲ. ಈ ಘಟನೆ ಕೂಡಾ ಅಚಾತುರ್ಯದಿಂದಲೇ ನಡೆಯಿತು ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಕೆಲ ಪ್ರಶ್ನೆಗಳನ್ನು ಕೇಳದೆ ಹೋದರೆ ಚರಿತ್ರೆ ನಮ್ಮನ್ನು ಕ್ಷಮಿಸಲಾರದು.

ಮೊದಲನೆಯದಾಗಿ, ಕೆಳಹಂತದಲ್ಲಿ ಕೆಲಸ ಮಾಡುವ ಅಲ್ಲಿನ ಸರಕಾರೀ ಸಿಬ್ಬಂದಿಗೆ ತಮ್ಮಂತೆ ಇರುವ ಮನುಷ್ಯರನ್ನು ಹೀಗೆ ನಡೆಸಿಕೊಳ್ಳಬಹುದೆಂದು ಅನ್ನಿಸುತ್ತದೆ ಎನ್ನುವುದಿದೆಯಲ್ಲ, ಅದು ಕೊರೊನಕ್ಕಿಂತಲೂ ಅಪಾಯಕಾರಿಯಾದದ್ದಲ್ಲವೇ? ಅವರ ಮನಸ್ಸು ಎಂತಹದ್ದು? ಅವರ ಸಂವೇದನೆ ಎಂತಹದ್ದು? ಅವರ ಯೋಚನೆಯ ಮಟ್ಟ ಎಂತಹದ್ದು? ಕೊರೊನ ಹೇಗೋ ಇನ್ನೊಂದಷ್ಟು ಸಮಯದಲ್ಲಿ ನಾಶವಾಗುತ್ತದೆ ಅಥವಾ ರೂಪಾಂತರ ಹೊಂದುತ್ತದೆ. ಆದರೆ ಇಂತಹದ್ದೊಂದು ಅಮಾನುಷ ವ್ಯವಸ್ಥೆ ಇದು ನಮಗೆ ಶಾಶ್ವತ ಎನ್ನುವ ಸತ್ಯ ನಮ್ಮನ್ನು ಕಾಡದೆ ಹೋದರೆ ಹೇಗೆ?


ಇದನ್ನು ಓದಿ: ಮೂರನೇ ಒಂದು ಭಾಗದಷ್ಟು ವಲಸೆ ಕಾರ್ಮಿಕರು ಕೊರೊನಾ ಸೋಂಕಿಗೆ ಒಳಗಾಗಬಹುದು: ಸುಪ್ರೀಂಗೆ ಕೇಂದ್ರದ ಉತ್ತರ


ಇನ್ನೊಂದು ವಿಚಾರ. ಈ ಘಟನೆಗೆ ಅಲ್ಲಿನ ಅಧಿಕಾರಸ್ಥರು ಪ್ರತಿಕ್ರಿಯಿಸಿದ ರೀತಿ ನೋಡಿ. ಅಲ್ಲಿನ ಜಿಲ್ಲಾಧಿಕಾರಿ ನೀಡಿದ ಮೇಲಿನ ಪ್ರತಿಕ್ರಿಯೆ ಗಮನಿಸಿ. ಅದು ಯಾಂತ್ರಿಕ, ತಾಂತ್ರಿಕ ಪ್ರತಿಕ್ರಿಯೆ. ಅದರಲ್ಲಿ, ಒಂದಷ್ಟು ಮಾನವೀಯ ಸಂವೇದನೆಯ ಸೆಲೆ ಕಾಣಿಸುತ್ತದೆಯೇ? ವಾಸ್ತವದಲ್ಲಿ, ಆತನ ಪ್ರತಿಕ್ರಿಯೆ ಆತ ಆ ಕಷ್ಟಜೀವಿಗಳ ಕ್ಷಮೆ ಕೇಳುವುದರೊಂದಿಗೆ ಪ್ರಾರಂಭವಾಗಬೇಕಿತ್ತು. ಬಿಡಿ, ಆತ ಎಷ್ಟಾದರೂ ಅಧಿಕಾರಶಾಹಿಯ ಭಾಗ. ಅಲ್ಲಿನ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಯ ಮಂತ್ರಿ, ಅಲ್ಲಿನ ಶಾಸಕ, ಆ ಪ್ರದೇಶದ ಸಂಸದ ಯಾರ ಬಾಯಿಯಿಂದಾದರೂ ಒಂದು ಸಣ್ಣ ಪಶ್ಚಾತಾಪದ, ಮರುಕದ ಪ್ರತ್ರಿಕ್ರಿಯೆ ಬರಲಿಲ್ಲ.

ಇನ್ನೂ ಒಂದು ಗಮನಿಸಬೇಕಾದ ವಿಚಾರ ಅಂತ ಅಂದರೆ ಅಲ್ಲಿನ (ಬರೇಲಿ ಕ್ಷೇತ್ರ) ಸಂಸದ ಸಂತೋಷ್ ಗಂಗ್ವಾರ್ ಕೇಂದ್ರ ಸಚಿವ ಸಂಪುಟದಲ್ಲಿ ಕಾರ್ಮಿಕ ಖಾತೆಯ ಸಚಿವ. ಹಿಂಸೆ ಅನುಭವಿಸಿದ್ದು ಕಾರ್ಮಿಕರು ಎಂಬ ಕಾರಣಕ್ಕೋಸ್ಕರವಾದರೂ ಆ ವ್ಯಕ್ತಿಯ ಬಾಯಿಂದ ಒಂದು ಸಾಂತ್ವನದ ಮಾತು ಬರಬೇಕಿತ್ತಲ್ಲಾ. ಇಲ್ಲ, ಈ ತನಕ ಬಂದಿಲ್ಲ. ಅಂದರೆ ಈ ಘಟನೆ ನಮಗೆ ಎತ್ತಿ ತೋರಿಸಿದ್ದು ಎಲ್ಲಾ ಕಡೆ, ಎಲ್ಲಾ ಸಮಯದಲ್ಲೂ, ಎಲ್ಲಾ ಸ್ತರದ ಮಂದಿಯಿಂದಲೂ ಸಂಭವಿಸಬಹುದಾದ ಒಂದು ಅಚಾತುರ್ಯವನ್ನು ಮಾತ್ರವಲ್ಲ. ಅದು ಎತ್ತಿ ತೋರಿಸಿದ್ದು ಈ ದೇಶದಲ್ಲಿ ಉಳ್ಳವರಿಗೆ, ಪ್ರಬಲರಿಗೆ, ಅಧಿಕಾರಸ್ಥರಿಗೆ ಸಾಮಾನ್ಯ ಜನರ ಬಗ್ಗೆ ಇರುವ ಉಪೇಕ್ಷೆಯನ್ನು. ಇಂತಹದ್ದೊಂದು ಘಟನೆ ಯಾರದ್ದಾದರೂ ಅಚಾತುರ್ಯದಿಂದಲೇ ಆದರೂ ಈ ದೇಶದ ಯಾವುದಾದರೂ ಒಂದು ವಿಮಾನ ನಿಲ್ದಾಣದಲ್ಲಿ ನಡೆದಿದ್ದರೆ ಏನಾಗುತ್ತಿತ್ತು. ಇಷ್ಟೊತ್ತಿಗೆ ಅಲ್ಲಿನ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿತ್ತೇ? ಅಂದ ಹಾಗೆ ಈ ಕರೋನ ಎಂಬ ದುರಂತವನ್ನು ಹೊತ್ತು ತಂದದ್ದು ವಿಮಾನಗಳಲ್ಲಿ ಬಂದಿಳಿದವರು. ಈಗ ಅದರ ನಿರ್ನಾಮಕ್ಕಾಗಿ ರಾಸಾಯನಿಕದಲ್ಲಿ ಮುಳುಗೇಳುತ್ತಿರುವುದು ರಸ್ತೆಗಳಲ್ಲಿ ನಡೆದುಕೊಂಡು ಹೋಗಲೂ ಅವಕಾಶವಿಲ್ಲದ ಬಡವರು.

ಬರೇಲಿ ಕ್ಷೇತ್ರದ ಸಂಸದ ಸಂತೋಷ್ ಗಂಗ್ವಾರ್

ಕರೋನ ಲಾಕೌಟ್ ಜಾರಿಗೆ ಬಂದ ಕ್ಷಣದಿಂದ ನರಕ ಸದೃಶ ಬದುಕನ್ನು ಅನುಭವಿಸುತ್ತಿರುವವರು ಈ ದೇಶದ ವಲಸೆ ಕಾರ್ಮಿಕರು. ಅವರೇ ಈ ದೇಶವನ್ನು ನಿಜ ಅರ್ಥದಲ್ಲಿ ಕಟ್ಟುತ್ತಿರುವವರು. ಭಾರತದ ಬೆಳವಣಿಗೆಯ ಸಾಕಾರ ಸ್ವರೂಪವಾಗಿ ನಗರಗಳಲ್ಲಿ ಏಳುತ್ತಿರುವ ಬಹುಅಂತಸ್ತಿನ ಕಟ್ಟಡಗಳನ್ನು, ಅಗಲಗಲದ ಹೆದ್ದಾರಿಗಳನ್ನೂ, ಎತ್ತರೆತ್ತರದ ಮೇಲ್ಸೇತುವೆಗಳನ್ನು ಕೊರೆವ ಚಳಿಯಲ್ಲಿ, ಸುಡುವ ಬಿಸಿಲಲ್ಲಿ ನಿಂತು ಹಗಲಿರುಳು ಕಟ್ಟುತ್ತಿರುವುದು ಈ ಶ್ರಮಿಕ ವರ್ಗ. ನಗರಗಳಲ್ಲೇ ನಮ್ಮ ನಡುವೆ ನೆಲೆಸಿದ್ದರೂ ನಮ್ಮ ಕಣ್ಣುಗಳು ಅವರೆಡೆಗೆ ಎಷ್ಟು ಕುರುಡಾಗಿದೆ ಎಂದು ನಮಗೆ ಅರ್ಥ ಮಾಡಿಸಿದ್ದು ಕೊರೊನಾ ಎನ್ನುವ ಅದೃಶ್ಯ ಸೂಕ್ಷ್ಮ ಜೀವಿ. ಈ ಮಂದಿ ಸಾಲು ಸಾಲಾಗಿ ಬೀದಿಗಿಳಿದು ನಮ್ಮನ್ನು ನಮ್ಮ ನಮ್ಮ ಊರುಗಳಿಗೆ ಮರಳಿ ಹೋಗಲು ಬಿಡಿ ಎಂದು ಗೋಗರೆಯತೊಡಗಿದಾಗ ಇಷ್ಟೊಂದು ಸಂಖ್ಯೆಯಲ್ಲಿ ನಮ್ಮ ಥಳುಕಿನ ಬದುಕಿನ ನಡುವೆ ಇವರೆಲ್ಲಾ ಇದ್ದಾರೆ ಎನ್ನುವ ಸತ್ಯ ನಮಗೆ ಗೋಚರವಾದದ್ದು. ಲಕ್ಷ ಲಕ್ಷ ಸಂಖ್ಯೆಯಲ್ಲಿ ತಮ್ಮ ಇದ್ದ ಬದ್ದ ಸರಕುಗಳನ್ನೆಲ್ಲಾ ತಲೆಯಲ್ಲಿ, ಹೆಗಲಲ್ಲಿ ಹೊತ್ತುಕೊಂಡು, ಹಸಿದು ಅಳುವ ಕಂದಮ್ಮಗಳನ್ನು ಕಂಕುಳಲ್ಲಿ ತಗಲಿಸಿಕೊಂಡು ಸಾಲು ಸಾಲಾಗಿ ನಗರಗಳ ಬೀದಿಗಳಲ್ಲಿ ಇವರು ನಡೆದೇ ಸಾಗುತಿದ್ದ ದೃಶ್ಯ ಈ ದೇಶದ ಆತ್ಮಸಾಕ್ಷಿಯನ್ನು ಬಹುಕಾಲ ಕಾಡಲಿದೆ. ಆತ್ಮಸಾಕ್ಷಿ ಎನ್ನುವುದು ಇನ್ನೂ ಎಲ್ಲಾದರೂ ಉಳಿದಿದ್ದರೆ.


ಇದನ್ನು ಓದಿ: ಲಾಕ್‌ಡೌನ್‌ ಘೋಷಿದಂದಿನಿಂದ 22 ವಲಸೆ ಕಾರ್ಮಿಕರ ಸಾವು


ಕಾಣಿಸಿದಾಗಲೆಲ್ಲಾ ನಮ್ಮ ಆತ್ಮಸಾಕ್ಷಿಯನ್ನು ಇದುವರೆಗೆ ಕಲುಕುತಿದ್ದ ಚಿತ್ರ ಬೇರೊಂದಿತ್ತು. ಮಾಧ್ಯಮಗಳಲ್ಲಿ, ಪ್ರದರ್ಶನಾಲಯಗಳಲ್ಲಿ, ಪುಸ್ತಕಗಳಲ್ಲಿ, ಡಾಕ್ಯುಮೆಂಟರಿಗಳಲ್ಲಿ ನಾವು ನೋಡಿರಬಹುದಾದ ಆ ದೃಶ್ಯ 1947ರ ದೇಶ ವಿಭಜನೆಗೆ ಸಂಬಂದಿಸಿದ್ದು. ಅಂದಿನ ಜನ ಧರ್ಮದ್ವೇಷ ಎಂಬ ಇನ್ನೊಂದು ವೈರಸ್ಸಿನ ದಾಳಿಗೆ ತುತ್ತಾಗಿ ಭಾರತದಿಂದ ಪಾಕಿಸ್ತಾನದತ್ತ, ಪಾಕಿಸ್ತಾನದಿಂದ ಭಾರತದತ್ತ ಸಾಲುಸಾಲಾಗಿ ಸಾಗುತಿದ್ದ ಆ ಕಪ್ಪುಬಿಳುಪು ಚಿತ್ರ ಮನುಷ್ಯತ್ವ ಎನ್ನುವುದು ಲವಲೇಶವಾದರೂ ಉಳಿಸಿಕೊಂಡಿರುವ ಮನುಷ್ಯರನ್ನು ಬಹಳ ಹೊತ್ತು ಕಾಡುತ್ತದೆ.

ಅದನ್ನು ಊಹಿಸಿಕೊಂಡರೂ ಮನಸ್ಸಿನಲ್ಲಿ ತಳಮಳ ಉಂಟಾಗುತ್ತದೆ. ಅದು ಚಿತ್ರ. ಬಹಳ ಹಳೆಯ ಚಿತ್ರ. ಕಳೆದ ಒಂದು ವಾರದಿಂದ ನಾವು ಕಂಡದ್ದು ಈ ಚಿತ್ರವನ್ನೂ ಮೀರಿಸುವ ದುರಂತಮಯ ಜೀವಂತ ಚಿತ್ರಣವನ್ನು. ಇದಕ್ಕೆ ಸಂಬಂಧಿಸಿದ ಚಿತ್ರಗಳು, ವಿಡಿಯೋಗಳು ದೇಶ ವಿಭಜನೆಯ ಹಳೆಯ ದುರಂತಕ್ಕಿಂತಲೂ ಮಿಗಿಲಾದ ದುರಂತ ಒಂದನ್ನು ನಮ್ಮ ಮನದಲ್ಲಿ ಆಗಾಗ ಕುಣಿಸಲಿದೆ. ಇದೂ ಒಂದು ವಿಭಜನೆಯ ಕತೆಯೇ ಅಲ್ಲವೇ? ಅಂದಿನದ್ದು ಈ ದೇಶದ ಭೂಗೋಳ-ರಾಜಕೀಯ ವಿಭಜನೆಯ ಚಿತ್ರಣವಾದರೆ, ಇದು ಈ ದೇಶದ ಆರ್ಥಿಕ ಸಾಮಾಜಿಕ ವಿಭಜನೆಯ ಕತೆ.

ಲಾಕ್‌ಡೌನ್ ಅನಿವಾರ್ಯವಾಗಿರಬಹುದು. ಆದರೆ, ರಸ್ತೆಗಳಲ್ಲಿ ಯಾರೂ ಇಲ್ಲದ ಅಂದರೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಬದುಕುವ ದೇಶಗಳೂ ಕೂಡಾ ಒಂದೆರಡು ದಿವಸಗಳ ಅವಧಿ ನೀಡಿ ಲಾಕ್‌ಡೌನ್ ಘೋಷಿಸಿರುವಾಗ ಹೆಚ್ಚು ಕಡಿಮೆ ರಸ್ತೆಯಲ್ಲೇ ಬದುಕುವ ಇಷ್ಟೊಂದು ಮಂದಿ ನಮ್ಮ ನಡುವೆ ಇದ್ದಾರೆ ಎಂಬ ಸಣ್ಣ ಅರಿವಾದರು ಇದ್ದಿದ್ದರೆ ಇನ್ನೈದು ಘಂಟೆಗಳಲ್ಲಿ ಯಾರೂ ರಸ್ತೆಗಳಲ್ಲಿ ಕಾಣಿಸಿಕೊಳ್ಳಬಾರದು ಎನ್ನುವ ಆದೇಶ ಬರಲು ಸಾಧ್ಯವಿತ್ತೇ. ಏನು ಕೊರೊನ, ಏನು ಸಾಮಾಜಿಕ ಅಂತರ, ಏನು ಇಷ್ಟೆಲ್ಲಾ ಅವಾಂತರ ಎನ್ನುವ ಎನ್ನುವ ಯಾವ ಅರಿವು ಕೂಡಾ ಇಲ್ಲದೆ ದಿಗಿಲಿನಿಂದ, ಹಸಿವಿನಿಂದ, ಅವಮಾನದಿಂದ ಈ ಮಂದಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸೇರಿ ತಮ್ಮ ತಮ್ಮ ಊರುಗಳತ್ತ ನಡೆಯಲು ಪ್ರಾರಂಭಿಸಿದಾಗಲೇ ಏನೋ ಎಡವಟ್ಟಾಗಿದೆ ಅಂತ ನಮಗೆ ತಿಳಿದದ್ದು. ನಮಗೆ ಎಂದರೆ ನಮಗೆ. ಕೇವಲ ಆಳುವವರಿಗೆ ಮಾತ್ರವಲ್ಲ. ಆಳುವವರನ್ನು ಪೂಜಿಸುವ, ಟೀಕಿಸುವ ಎಲ್ಲರಿಗೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...