ಚಿತ್ರಕೃಪೆ: ಬೂಮ್‌ಲೈವ್‌

ಕೊರೊನಾ ವೈರಸ್ ಹರಡಲು ಮುಸ್ಲಿಮರು ಪಾತ್ರೆಗಳನ್ನು ನೆಕ್ಕುತ್ತಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೊರೊನಾ ವೈರಸ್ ಮತ್ತು ಹೆಚ್ಚಿನ ಜನರಿಗೆ ಆ ಸೋಂಕು ತಗಲುವ ಉದ್ದೇಶದಿಂದ ಮಸೀದಿಗಳಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ದಾವೂಡಿ ಬೊಹ್ರಾ ಯುವಕರು ಬಳಸಿದ ಪಾತ್ರೆಗಳನ್ನು ನೆಕ್ಕುವ ಹಳೆಯ ವೀಡಿಯೊವನ್ನು ಸುಳ್ಳು ಕೋಮುವಾದಿ ತಲೆಬರಹ ನೀಡಿ ಹಂಚಿಕೊಳ್ಳಲಾಗುತ್ತಿದೆ.

ನೂರಾರು ಜನ ಹಂಚಿಕೊಂಡಿರುವ ಈ ವೀಡಿಯೊದ ಶೀರ್ಷಿಕೆ ಈ ಕೆಳಗಿನಂತಿದೆ. “ಮುಲ್ಲಾಗಳು ಮಸೀದಿಗಳಲ್ಲಿ ಖಾಲಿ ಪಾತ್ರೆಗಳನ್ನು ನೆಕ್ಕುತ್ತಾರೆ ಇದರಿಂದ ಈ ಸಾಂಕ್ರಾಮಿಕ ರೋಗಗಳು ಹೆಚ್ಚು ಹೆಚ್ಚು ಹರಡಬಹುದು. ಈ ಮುಲ್ಲಾಗಳು ಈಗಾಗಲೇ ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸರ್ಕಾರವು ಅವರನ್ನು ಹಿಡಿದು ಚಿಕಿತ್ಸೆ ನೀಡುತ್ತಿದೆ. ಇದುವರೆಗೂ ಕರೋನಾ ಭಾರತಕ್ಕೆ ಬಂದಿರಲಿಲ್ಲ. ಆದರೆ ಈಗ ಹರಡುತ್ತಿದೆ ಏಕೆ? ವೀಡಿಯೊದಲ್ಲಿ ನೋಡಿ” ಎಂದು ಬರೆಯಲಾಗಿದೆ.

ಈ ತಿಂಗಳ ಆರಂಭದಲ್ಲಿ ದೆಹಲಿಯ ನಿಜಾಮುದ್ದೀನ್ ಪಶ್ಚಿಮದಲ್ಲಿರುವ ತಬ್ಲೀಘಿ ಜಮಾಅತ್‌ನ ಮಾರ್ಕಾಜ್‌ನ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಹಲವಾರು ಜನರಿಗೆ ಕರೋನವೈರಸ್‌ಗೆ ಧೃಡಪಟ್ಟ ನಂತರ ಈ ವೀಡಿಯೊ ಮತ್ತೆ ಕಾಣಿಸಿಕೊಂಡಿದೆ. ಹಾಗಾಗಿ ಈ ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿಯಲು ಬೂಮ್‌ಲೈವ್‌ ಪ್ರಯತ್ನಿಸಿತು. ಆಗ ಇದೆಲ್ಲವೂ ಸಂಪೂರ್ಣ ಕಟ್ಟುಕಥೆಗಳು ಎಂದು ತಿಳಿದುಬಂದಿದೆ.

FACT-CHECK

ವಿಡಿಯೋಗಳ ಕೀಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ ಈ ವಿಡಿಯೋ 2018 ರ ಜುಲೈಗೆ ಕರೆದುಕೊಂಡು ಹೋಗುತ್ತದೆ.

ಈ ವೀಡಿಯೊವನ್ನು ಜುಲೈ 31, 2018 ರಂದು ಮೊದಲ ಬಾರಿಗೆ ಅಪ್‌ಲೋಡ್ ಮಾಡಲಾಗಿದೆ. ಆಹಾರದ ಒಂದು ಅಗುಳನ್ನು ಸಹ ವ್ಯರ್ಥ ಮಾಡಬಾರದು ಎಂಬ ಸಂದೇಶ ನೀಡಲು ಬೋಹ್ರಾ ಸಮುದಾಯವು ನಡೆಸುವ ಸಾಂಕೇತಿಕ ಅಭ್ಯಾಸವನ್ನು ವೀಡಿಯೊ ಮಾಡಲಾಗಿದೆ. ಈ ಕ್ಲಿಪ್ ಹಳೆಯದು ಮತ್ತು ಕೊರೊನಾ ವೈರಸ್‌ಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ.

ವೈರಲ್ ವೀಡಿಯೊದಲ್ಲಿ ನೋಡಿದ ಹುಡುಗರನ್ನು ತನಗೆ ತಿಳಿದಿದೆ ಎಂದ ದಾವೂಡಿ ಬೊಹ್ರಾ ಸಂಘಟನೆಯ ಡಾನಾ ಸಮಿತಿಯ ಆಡಳಿತಾಧಿಕಾರಿ ಜೊಹರ್ ಅಲಿಯನ್ನು ಬೂಮ್ ಸಂಪರ್ಕಿಸಿದ್ದಾರೆ. “ಇದು ಮುಂಬೈನ ಮರೋಲ್ನಿಂದ ಬಂದ 3 ವರ್ಷದ ವಿಡಿಯೋ, ಅಲ್ಲಿನ ಸದಸ್ಯರು ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವ ಸಲುವಾಗಿ ಆಹಾರದ ಎಂಜಲುಗಳನ್ನು ಸ್ವಚ್ಛಗೊಳಿಸುತ್ತಿದ್ದರು” ಎಂದು ಅಲಿ ಬೂಮ್‌ಗೆ ತಿಳಿಸಿದ್ದಾರೆ.

ಇದು ದಾವೂಡಿ ಬೊಹ್ರಾ ಸಮುದಾಯವು ಆಚರಿಸುವ ಸಾಂಕೇತಿಕ ಅಭ್ಯಾಸವಾಗಿದೆ ಮತ್ತು ಊಟ ಮುಗಿದ ನಂತರ ಮತ್ತು ಭಕ್ಷ್ಯಗಳನ್ನು ತೊಳೆಯುವ ಮೊದಲು ಇದನ್ನು ಮಾಡಲಾಗುತ್ತದೆ ಎಂದು ಅಲಿ ಬೂಮ್‌ಗೆ ತಿಳಿಸಿದ್ದಾರೆ. “ಈ ವೀಡಿಯೊ ಏನನ್ನು ತೋರಿಸುತ್ತದೆ ಎಂದರೆ ಯಾವುದೇ ಆಹಾರವನ್ನು ವ್ಯರ್ಥವಾಗದಂತೆ ನೋಡಿಕೊಳ್ಳಲು ಕಟ್ಲರಿ ಮತ್ತು ಡಿನ್ನರ್ ಪ್ಲೇಟ್‌ಗಳಿಂದ ಉಳಿದಿರುವ ಆಹಾರವನ್ನು ಸ್ವಚ್ಛಗೊಳಿಸುವ ಉಪಕ್ರಮಗಳಲ್ಲಿ ಒಂದಾಗಿದೆ. ಇದರ ಹಿಂದಿನ ಕಲ್ಪನೆಯು ಸರಳವಾಗಿದೆ ಜನರು ಆಹಾರದ ಮೌಲ್ಯವನ್ನು ಅರಿತುಕೊಳ್ಳಬೇಕು ಎಂದಿದ್ದಾರೆ.

ಡಾನಾ ಸಮಿತಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಯೂ ಸಹ ಇದಕ್ಕೆ ಸಂಬಂಧಿಸಿದ ಪೋಸ್ಟ್‌‌ಗಳು ಲಭ್ಯವಿದ್ದು ಪ್ರತಿಯೊಂದರಲ್ಲಿಯೂ ಸಹ ಆಹಾರ ವ್ಯರ್ಥ ಮಾಡಬಾರದು ಎಂದು ತಿಳಿಸಲಾಗಿದೆ. ಇಂತಹ ಉತ್ತಮ ಸಂದೇಶ ಸಾರಲು ಮಾಡಿದ ವಿಡಿಯೋ ಮತ್ತು ಫೋಟೊಗಳನ್ನು ಕೊರೊನಾ ಕುರಿತು ಸುಳ್ಳು ಹಬ್ಬಿಸಲು ಆ ಮೂಲಕ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ.

ಹಾಗಾಗಿ ಯಾವುದೇ ಸುದ್ದಿಯನ್ನು ನಂಬುವ ಅಥವಾ ಹಂಚುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ. ಸುಳ್ಳು ಸುದ್ದಿಗಳ ಪ್ರಪಾತಕ್ಕೆ ಬೀಳಬೇಡಿ ಎಂಬುದು ನಮ್ಮ ಆಶಯವಾಗಿದೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts